ಕೆಲ ವರ್ಷಗಳ ಹಿಂದಿನ ಘಟನೆ. ನೀನಾಸಂನ ಸಂಸ್ಕೃತಿ ಶಿಬಿರದಲ್ಲಿ ಸಮಕಾಲೀನ ಸಿನಿಮಾ ಕುರಿತು ಸಂವಾದ ಏರ್ಪಟ್ಟಿತ್ತು. ಕವಿತಾ ಲಂಕೇಶ್ ಮತ್ತು ಗಿರೀಶ್ ಕಾಸರವಳ್ಳಿ ಸಭೆಯಲ್ಲಿದ್ದರು. ಯುವಕನೊಬ್ಬ ಕೇಳಿದ ಪ್ರಶ್ನೆ ಹೀಗಿತ್ತು - 'ಸಾರ್ವಜನಿಕರು ತಮಗೆ ಯಾವುದೇ ವಸ್ತು ಕೊಂಡಾಗ ಮೋಸವಾದರೆ ಅದನ್ನು ಗ್ರಾಹಕರ ಹಕ್ಕು ಅಧಿನಿಯಮದ ಅಡಿ ಪ್ರಶ್ನಿಸಲು ಅವಕಾಶವಿದೆ. ಅದೇ ರೀತಿ, ಉತ್ತಮ ಚಿತ್ರ, ಮನೆಮಂದಿಯೆಲ್ಲ ಕೂತು ಸಂಭ್ರಮ ಪಟ್ಟು ನೋಡಬಹುದಾದ ಸಿನಿಮಾ ಎಂದೆಲ್ಲಾ ಪ್ರಚಾರ ಮಾಡಿ ಪ್ರೇಕ್ಷಕರನ್ನು ಥಿಯೇಟರಿಗೆ ಸೆಳೆದ ಚಿತ್ರವೊಂದು ಎಲ್ಲಾ ಭರವಸೆಗಳನ್ನು ಹುಸಿ ಮಾಡಿದರೆ, ಅದೇ ಗ್ರಾಹಕರ ಕಾಯ್ದೆ ಅಡಿ ಪರಿಹಾರ ಕೇಳಬಹುದೇ?'
ನಾಗ್ತಿಹಳ್ಳಿ ಚಂದ್ರಶೇಖರ್ ಅವರ ಲೇಟೆಸ್ಟ್ ಸಿನಿಮಾ 'ಒಲವೇ ಬದುಕಿನ ಲೆಕ್ಕಾಚಾರ' ನೋಡಿದಾಗಿನಿಂದ ಆ ಯುವಕನ ಪ್ರಶ್ನೆ ಮತ್ತೆ ಮತ್ತೆ ನೆನಪಾಗುತ್ತಿದೆ. ಹಾಗಂತ ನಾಗ್ತಿಹಳ್ಳಿ ಚಿತ್ರದ ಬಗ್ಗೆ ಭಾರೀ ಭರವಸೆ ಇಟ್ಟುಕೊಂಡು ಹೋಗಿದ್ದೆವು ಎಂದೆಲ್ಲ. ಮುಊಲತಃ ಕತೆಗಾರ, ಮಾಡಿದರೆ ವಿಭಿನ್ನ ಚಿತ್ರವನ್ನೇ ಮಾಡುತ್ತಾರೆ ಎಂಬ ಸಣ್ಣ ನಿರೀಕ್ಷೆ ಕೂಡಾ ಹುಸಿಯಾಯಿತು. ನಾಗ್ತಿಹಳ್ಳಿ ಮಾತಿನಲ್ಲಿಯೇ ಹೇಳುವುದಾದರೆ, ಅವರ ಸಿನಿಮಾದ ಬಗ್ಗೆ ನಮಗಿದ್ದ ಲೆಕ್ಕಾಚಾರ ತಪ್ಪಾಗಿತ್ತು.
ಲೋಪದೋಷಗಳನ್ನು ಪಟ್ಟಿ ಮಾಡುತ್ತಾ ಕೂತರೆ ದೊಡ್ಡ ಪಟ್ಟಿಯೇ ಆಗಿಬಿಡುತ್ತದೆ. ಅದು ಒತ್ತಟ್ಟಿಗಿರಲಿ. ನಾಗ್ತಿಹಳ್ಳಿ ಈ ಸಿನಿಮಾ ಮುಊಲಕ ಹೇಳಲು ಹೊರಟಿರುವುದು ಏನನ್ನು ಎನ್ನುವುದು ಮುಖ್ಯ ಪ್ರಶ್ನೆ. ಜುಬ್ಬಾಧಾರಿಗಳು ಅಲಿಯಾಸ್ ಬುದ್ಧಿಜೀವಿಗಳು ಢೋಂಗಿಗಳು, ಮಾರ್ಕ್ಸ್, ಲೆನಿನ್, ಚೆ, ಫಿಡೆಲ್ ಕಾಸ್ಟ್ರೋ ಎಂದೆಲ್ಲಾ ಮಾತನಾಡುವವರು ಮುಊಲತಃ ಲಂಪಟರು, ಹೊಟೇಲ್ ನಲ್ಲಿ ಚಮಚ ಕದಿಯುವ ಸಣ್ಣ ಮನುಷ್ಯರು, ಹೆಣ್ಣನ್ನು ಕೀಳಾಗಿ ಕಾಣುವವರು ಎಂದು ಬಿಂಬಿಸುವುದರ ಹಿಂದಿನ ಉದ್ದೇಶ ಏನು?
ಇತ್ತೀಚಿನ ದಿನಗಳಲ್ಲಿ ಬುದ್ಧಿಜೀವಿ ಎನ್ನುವ ಪದ ತೀವ್ರ ಅಪಮಾನಕ್ಕೆ ಈಡಾಗುತ್ತಿದೆ. ಒಂದು ಪಟ್ಟಭದ್ರರ ಗುಂಪು ಇಂತಹದೊಂದು ಪ್ರಪಾಗಾಂಡದಲ್ಲಿ ತೊಡಗಿದೆ. ಅವರ ಪ್ರಕಾರ ಜಗತ್ತಿನ ಎಲ್ಲಾ ಬುದ್ಧಿಜೀವಿಗಳು 'ಹುಸಿ ಜಾತ್ಯತೀತವಾದಿಗಳು'. ಕೆಲ ದಿನಗಳ ಹಿಂದೆ ಲೇಖಕ, ಪತ್ರಕರ್ತ ಜೋಗಿ ಒಂದು ಕಾದಂಬರಿ ಬರೆದು ಬಿಡುಗಡೆ ಮಾಡಿದರು. ಅದರ ಮುಖ್ಯ ಪಾತ್ರ ಇಂತಹದೇ ಒಂದು ಬುದ್ಧಿಜೀವಿ. ಆ ಜೀವಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸುತ್ತದೆ. ಪ್ರಶಸ್ತಿಗೆ ನಾನಾ ರೀತಿಯ ಲಾಬಿ ನಡೆಸಿರುತ್ತಾರೆ. ಅವರ ಸುತ್ತಲೇ ಆ ಕಾದಂಬರಿ ಸುತ್ತುತ್ತದೆ, ಆ ಮುಊಲಕ ಒಂದು ವಿಚಾರವಾದಿ ಸಮುಊಹ ಮತ್ತು ಬುದ್ಧಿಜೀವಿ ಗುಂಪನ್ನು ಅದು ವ್ಯಂಗ್ಯದಿಂದಲೇ ಕಾಣುತ್ತದೆ.
ಆ ಕಾದಂಬರಿ ಸಾಧಿಸಲು ಹೊರಟಿದ್ದನ್ನೇ ನಾಗ್ತಿಹಳ್ಳಿ ತನ್ನ ಸಿನಿಮಾ ಮುಊಲಕ ನಿರೂಪಿಸಲು ಶ್ರಮಿಸಿದ್ದಾರೆ. ಅಂದಹಾಗೆ ಅವರ ಪ್ರಯತ್ನಕ್ಕೆ ಜೋಗಿಯವರ ಸಹಕಾರ ಕೂಡ ಇದೆ (ಚಿತ್ರಕತೆಯಲ್ಲಿ ಜೋಗಿಯದು ಮುಖ್ಯ ಪಾತ್ರ). ಉಪನ್ಯಾಸಕನ ಪಾತ್ರ ಶುರುವಾಗುವುದೇ ಕೆಂಪು ಕರವಸ್ತ್ರದಿಂದ ಮುಊಗನ್ನು ಒರೆಸಿಕೊಳ್ಳುವುದರ ಮುಊಲಕ. ಈ ಧೋರಣೆ ಚಿತ್ರದುದ್ದಕ್ಕೂ ಮುಂದುವರೆಯುತ್ತದೆ. ಕಾಲೇಜಿನಲ್ಲಿ ಅರ್ಥಶಾಸ್ತ್ರ ಬೋಧಿಸಬೇಕಾದ ಅವರು ಕ್ರಾಂತಿ ಮಾತನಾಡುತ್ತಾರೆ. ಮನೆಯಲ್ಲಿ ದಿನಕ್ಕೊಬ್ಬ ಹುಡುಗಿಯ ಸಂಗ, ರಾತ್ರಿಯಾದರೆ ಹುಡುಗರೊಟ್ಟಿಗೆ ಡಾಬಾ, ಲೈವ್ ಬ್ಯಾಂಡ್, ಬಿಲ್ ಕೊಡದೆ ಗಲಾಟೆ ಮತ್ತು ಚಮಚ ಕದಿಯುವುದು. ಮದುವೆ ಮತ್ತು ಹುಡುಗಿಯರ ಬಗ್ಗೆ ತೀರಾ ಅಹಸ್ಯ ಎನಿಸುವ ಹೇಳಿಕೆಗಳು ಆತನಿಂದ ಹೊರಬರುತ್ತವೆ. (ಈ ಕಾರಣಕ್ಕೆ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದ್ದು!)
ಮೇಷ್ಟ್ರು ತಮ್ಮ ಅಂಕಪಟ್ಟಿ ಸುಟ್ಟು ಹಾಕಿದ ಪ್ರಕರಣದಿಂದಲೇ ಅವರು ಢೋಂಗಿ ಎನ್ನುವುದು ಹುಡುಗರಿಗೆ ಸಾಬೀತಾಗಿರುತ್ತದೆ. ಆದರೂ ಬಾಲಚಂದ್ರ (ಕಿಟ್ಟಿ) ಅವರ ಕ್ರಾಂತಿಗೆ ಮರುಳಾಗುತ್ತಾನೆ? ಅವರು ಹೇಳಿದ್ದೆಲ್ಲಾ ವೇದವಾಕ್ಯ ಎಂದು ನಂಬುತ್ತಾನೆ. ಪ್ರೀತಿಸಿದ ಹುಡುಗಿಗೆ ಮೋಸ ಮಾಡುತ್ತಾನೆ. ಅವಳಿಂದ ಹಣ ತಂದು ಮೇಷ್ಟ್ರಿಗೆ ಹೆಂಡ ಕುಡಿಸುತ್ತಾನೆ. ಕೊನೆಗೆ ಓಡಿಹೋಗಿ ಇನ್ನೊಬ್ಬ ಢೋಂಗಿ ಜುಬ್ಬಾಧಾರಿ ಬುದ್ಧಿಜೀವಿಯಾಗುತ್ತಾನೆ.
ಕರ್ನಾಟಕದ ಬಹುದೊಡ್ಡ ಬುದ್ಧಿಜೀವಿ ಸಮುದಾಯಕ್ಕೆ ಆಶ್ರಯ ಕೊಟ್ಟ ಮಹಾರಾಜ ಕಾಲೇಜಿನಲ್ಲಿ ಈ ಚಿತ್ರದ ಕಾಲೇಜು ಸನ್ನಿವೇಶಗಳು ಚಿತ್ರೀಕರಣಗೊಂಡಿವೆ. ನಾಗ್ತಿಹಳ್ಳಿಗೆ ಗೊತ್ತಿರಬಹುದು, ಆ ಕಾಲೇಜಿನಲ್ಲಿ ಪಾಠ ಮಾಡಿದ ಕುವೆಂಪು ಇಂದಿನ ಅದೆಷ್ಟೋ ವಿಚಾರವಾದಿಗಳಿಗೆ ಮುಊಲ ಬೇರು. ವಿಚಾರಕ್ರಾಂತಿಗೆ ಕರೆ ನೀಡಿದವರು ಅವರು
. ಕನ್ನಡ ಸಾಹಿತ್ಯ ಚಳವಳಿಗಳು ಹುಟ್ಟಿಕೊಂಡದ್ದು ಅಲ್ಲಿಯೇ. ಈಗ್ಗೆ ಕೆಲ ವರ್ಷಗಳ ಹಿಂದಿನ ತನಕ ಅಲ್ಲಿಯೇ ಪಾಠ ಮಾಡುತ್ತಿದ್ದ ಪ್ರೊ.ಕೆ. ಎಸ್. ಭಗವಾನ್, ಕೆ. ರಾಮದಾಸ್ ಚ. ಸರ್ವಮಂಗಳ ಇರತರು 'ಯಾವುದನ್ನೂ ಪ್ರಶ್ನೆ ಮಾಡದೆ ಒಪ್ಪಬೇಡಿ' ಎಂಬ ಪರಂಪರೆಯನ್ನು ಬಹುಕಾಲ ಮುಂದುವರೆಸಿದವರು. ಒಂದಂತೂ ಸತ್ಯ ಪ್ರೊ. ಕೆ. ರಾಮದಾಸ್ ಮಾತು ಕೇಳಿದವನು ಜಾತಿವಾದಿಯಾಗಿರುತ್ತಿರಲಿಲ್ಲ, ಕೋಮುವಾದಿಯಾಗಿರುತ್ತಿರಲಿಲ್ಲ. ಇಂತಹದೊಂದು ಪರಂಪರೆ ಕನ್ನಡದ ಸಂದರ್ಭದಲ್ಲಿ ಸದಾ ಜಾಗೃತವಾಗಿದೆ. ಇದೆಲ್ಲದರ ಸ್ಪಷ್ಟ ಅರಿವು ನಾಗ್ತಿಹಳ್ಳಿಗೂ ಇದೆ. ಆದರೆ ಅವರ ಚಿತ್ರದಲ್ಲಿ ಅದಾವುದೂ ಇಲ್ಲ. ಯಾವ ವಿಚಾರದಲ್ಲೂ ಸಭ್ಯನಲ್ಲದ ಒಂದು ಪಾತ್ರ ಸೃಷ್ಟಿಸಿ ಅದನ್ನು ಬುದ್ಧಿಜೀವಿ, ವಿಚಾರವಾದಿ, ಮಾರ್ಕ್ಸ್ ವಾದಿಗಳಿಗೆ ಸಮೀಕರಿಸುವ ಪ್ರಯತ್ನ ಮಾಡಿದ್ದು ದುರಂತ.
ಈ ಸಿನಿಮಾ ಜಡ (inert). ಅದು ಬೆಳೆಯುವುದೇ ಇಲ್ಲ. ಮೊದಲಾರ್ಧದಲ್ಲಿ ಹುಡುಗರಿಗೆ ಸುಳ್ಳುಹೇಳಿ, ಯಾರದೋ ದುಡ್ಡಲ್ಲಿ ಹೆಂಡ ಕುಡ್ಕೊಂಡು, ಹೆಣ್ಣಿನ ಸಂಗ ಮಾಡ್ಕೊಂಡು ಜೀವನ ಮಾಡ್ತಿದ್ದ ಮೇಷ್ಟ್ರು, ದ್ವಿತೀಯಾರ್ಧ್ಲದಲ್ಲಿ ಜನರಿಗೆ ಸುಳ್ಳುಗಳ 'ಬ್ರಹ್ಮಾಂಡ' ಸೃಷ್ಟಿಸಿ ಮೋಸ ಮಾಡಿ, ವರದಕ್ಷಿಣೆ ಹಣದಲ್ಲಿ ಮಜಾ ಮಾಡುತ್ತಾ ಜೀವನ ಮಾಡ್ತಾರೆ.
ಆ ಪಾತ್ರ ಬದಲಾಗುವುದೇ ಇಲ್ಲ. ಆದರೆ ಚಿತ್ರಕತೆ ಮಾತ್ರ ಮೇಷ್ಟ್ರು ಬದಲಾದರು ಎನ್ನುವಂತೆ ಬಿಂಬಿಸುವ ಪ್ರಯತ್ನ ಮಾಡುತ್ತದೆ. ಮಗು ಮತ್ತು ಪತ್ನಿಯೊಂದಿಗೆ ದೇವಸ್ಥಾನದಿಂದ ಹೊರ ಬರುವ ಮೇಷ್ಟ್ರನ್ನು ನೋಡಿದಾಗ ಬಾಲಚಂದ್ರನ ಪ್ರತಿಕ್ರಿಯೆಯಲ್ಲಿ ಇದನ್ನು ಕಾಣಬಹುದು. ಬಾಲಚಂದ್ರನ ಪ್ರಕಾರ ಮೇಷ್ಟ್ರು 'ನಮಗೆಲ್ಲ ಕ್ರಾಂತಿ ಕ್ರಾಂತಿ ಅಂತ ಬೋಧಿಸಿ, ಈಗ ಮದುವೆ ಮಾಡ್ಕೊಂಡು ಸುಖವಾಗಿದ್ದಾರೆ' ಎಂದು ಭಾವಿಸುತ್ತಾನೆ. ಆ ಮುಊಲಕ ತನ್ನ ಪ್ರೇಯಸಿಯನ್ನು ಹುಡುಕಲು ಮುಂದಾಗುತ್ತಾನೆ. ಇದೇ ವಿಚಿತ್ರ. ಮೇಷ್ಟ್ರು ಮೊದಲು ಹೇಗಿದ್ದರೋ, ಈಗಲೂ ಹಾಗೇ ಇದ್ದಾರೆ. ಹಾಗಿರುವಾಗ ಅವರಲ್ಲಿನ ಯಾವ ಬದಲಾವಣೆ ಅವನನ್ನು ಪ್ರಭಾವಿಸಲು ಸಾಧ್ಯ?
ನಾಗ್ತಿಹಳ್ಳಿಯನ್ನು ತೀವ್ರ ಟೀಕೆಗೆ ಗುರಿಪಡಿಸಬೇಕಾಗಿರುವುದು ಅವರು ಮಹಿಳೆಯರ ಬಗ್ಗೆ ಹೊರಹೊಮ್ಮಿಸುವ ಅಭಿಪ್ರಾಯಗಳಿಗಾಗಿ. ಉದಾಹರಣೆಗೆ ಬಾಲಚಂದ್ರ ತನ್ನ ಕಾಲೇಜಿನ ಮಹಿಳಾ ಸಹೋದ್ಯೋಗಿಗಳನ್ನು ಪರಿಚಯಿಸುವ ಪರಿಯನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. ಜಿಯೋಗ್ರಾಫಿ ಲೆಕ್ಚರರ್ ಭೂಗೋಳವೇ ಸರಿ ಇಲ್ವಂತೆ. ಇಂಗ್ಲಿಷ್ ಉಪನ್ಯಾಸಕಿ ಮುಖ ಕರೆದ ಬೋಂಡವಂತೆ! ಜಗತ್ತಿನಲ್ಲಿ ಇರುವವರು ಎರಡೇ ಜಾತಿಯ ಹುಡುಗಿಯರು - ಕೆಟ್ಟ ಹುಡುಗಿಯರು, ಅತೀ ಕೆಟ್ಟ ಹುಡುಗಿಯರು! ಅದೇ, ಜೋಗಿ/ನಾಗ್ತಿಹಳ್ಳಿ ಚಿತ್ರಕತೆಯಲ್ಲಿ ಯಾವುದೇ ಗಂಡಸಿನ ಬಗ್ಗೆ ಇಂತಹದೊಂದು ಕಾಮೆಂಟ್ ಪಾಸ್ ಮಾಡುವುದಿಲ್ಲ.
ಈ ಚಿತ್ರದಲ್ಲಿ ಬಂದು ಹೋಗುವ ಹೆಣ್ಣಿನ ಪಾತ್ರಗಳ ಮೇಲೆ ಒಂದು ಕಣ್ಣು ಹಾಯಿಸಿ - ಅಪ್ಪನಿಂದ ಹಿಂಸೆಗೆ ಒಳಪಟ್ಟು, ಪ್ರೀತಿಸಿದ ಹುಡುಗನಿಂದ ಮೋಸ ಹೋದ ರುಕ್ಮಿಣಿ; ತಮ್ಮನ ಒಳಿತಿಗಾಗಿ ತನ್ನ ದೇಹವನ್ನು ಅರ್ಪಿಸಲು ಸಿದ್ಧವಿರುವ 'ಅವಳು'; ಮಗನಿಗಾಗಿ ಒಮ್ಮೆ ತಡಕಾಡಿ ಹಳ್ಳಿಗೆ ಹಿಂತಿರುಗುವ ಅಮ್ಮ ಮತ್ತು ಗಡಿಯಲ್ಲಿರುವ ಗಂಡ ಹಾಗೂ ಆತನ ಸಹಚರರ ಒಳಿತಿಗಾಗಿ ಒಂದು ದಿನ ಉಪವಾಸ ಮಾಡುವ ಕಂಪೂಟರ್ ಸೈನ್ಸ್ ಉಪನ್ಯಾಸಕಿ! ಚಿತ್ರದಲ್ಲಿ ಯಾವ ಹೆಣ್ಣು ಪಾತ್ರವೂ ಗಟ್ಟಿಯಾಗಿ ನಿಲ್ಲುವುದಿಲ್ಲ. ಡೈಸಿ ಬೋಪಣ್ಣನ ಪಾತ್ರ ಸವಕಲು. ಆ ಪಾತ್ರ ಬಾಲಚಂದ್ರನಲ್ಲಿ ಬದಲಾವಣೆಗೆ ಕಾರಣವಾಯಿತು ಎಂದು ಹೇಳಲು ಒಂದು ಸನ್ನಿವೇಶ ಸೃಷ್ಟಿಯಾಗಿದೆ. ಆದರೆ ಅದರಲ್ಲಿ ಹೊಸತನ, ಗಟ್ಟಿತನ ಇಲ್ಲ.
ತಾಂತ್ರಿಕ ಅಂಶಗಳಲ್ಲೂ ಚಿತ್ರ ಗಟ್ಟಿಯಾಗಿ ನಿಲ್ಲುವುದಿಲ್ಲ. ಮೊದಲಾರ್ಧದ ಸನ್ನಿವೇಶ ನಡೆಯುವುದು ಹಳ್ಳಿಯಲ್ಲೋ, ಪಟ್ಟಣದಲ್ಲೋ ಗೊತ್ತಾಗುವುದೇ ಇಲ್ಲ. ಅಲ್ಲಿ ಪದವಿ ಕಾಲೇಜಿದೆ, ಲೈವ್ ಬ್ಯಾಂಡ್ ಇರುವ ಬಾರ್ ಇದೆ. ರಿಲಯನ್ಸ್ ಫ್ರೆಶ್ ನೆನಪಿಸುವ ಅಂಗಡಿ ಇದೆ. ಅದೇ ಊರಲ್ಲಿ ಒಂದು ಹಳ್ಳಿಯಲ್ಲಿ ಇರಬಹುದಾದ ಒಂದು ಸಾಮಾನ್ಯ ರೈಲ್ವೇ ನಿಲ್ದಾಣ ಇದೆ ಮತ್ತು ಥಟ್ಟನೆ ಹಳ್ಳಿಯನ್ನು ನೆನಪಿಸುವ 'ರಾತ್ರಿಯಾದರೆ ಬೇಟೆಗೆಂದು ರೈಫಲ್ ಹಿಡಿದು ಹೊರಡುವ' ಅಪ್ಪನ ಸನ್ನಿವೇಶಗಳಿವೆ. ಹಾಗಾದರೆ ಆ ಪ್ರದೇಶ ಯಾವುದು?
ಇನ್ನು ಕ್ಲೈಮಾಕ್ಸ್. ಅದೊಂದು ಸರ್ಕಸ್. ಎರಡು ಕನಸು ಮತ್ತು ಒಂದು ನಿಜ - ಹೀಗೆ ಮುಊರು ಕ್ಲೈಮಾಕ್ಸ್ ಗಳಿವೆ. ರುಕ್ಮಣಿ, ಬಾಲಚಂದ್ರನ ಗೆಳೆಯನನ್ನೇ ಮದುವೆಯಾಗಿರುತ್ತಾಳೆ. ಇದು ಅಚ್ಚರಿ. ಬಾಲಚಂದ್ರ ಮೋಸ ಮಾಡಿ ಅವಳನ್ನು ರೈಲು ನಿಲ್ದಾಣದಲ್ಲಿ ಏಕಾಂಗಿಯಾಗಿ ಬಿಟ್ಟು ಹೋದಾಗ, ಅವಳ ಅಪ್ಪ ಮತ್ತು ಅವಳನ್ನು ಮದುವೆಯಾಗುವ ಕನಸು ಕಾಣುತ್ತಿರುವ (ನೀನಾಸಂ ಅಶ್ವತ್ಧ್) ಅವಳನ್ನು ಹಿಡಿದುಕೊಳ್ಳುತ್ತಾರೆ. ಅಲ್ಲಿಂದ ಅವಳ ಕತೆ ಏನಾಯ್ತು ಗೊತ್ತಿಲ್ಲ. ಆದರೆ ಅಂತ್ಯದ ಹೊತ್ತಿಗೆ, ಬಾಲಚಂದ್ರನ ಗೆಳೆಯನನ್ನೇ ಮದುವೆಯಾಗಿ ಒಂದು ಮಗುವನ್ನು ಹೆತ್ತಿರುತ್ತಾಳೆ. ಇದೆಲ್ಲಾ ಹೇಗಾಯ್ತು ಸ್ವಾಮಿ?
ಅದಕ್ಕೇ ಕೇಳಿದ್ದು ನಾಗ್ತಿಹಳ್ಳಿ ಲೆಕ್ಕಾಚಾರದಲ್ಲಿ ಪ್ರೇಕ್ಷಕನಿಗೆ ಮೋಸವಾಗಿದೆ, ಗ್ರಾಹಕರ ಕಾಯಿದೆ ಅಡಿ ಪರಿಹಾರಕ್ಕೆ ಅರ್ಜಿ ಹಾಕಬಹುದೆ?