Sunday, November 30, 2008

ಮಾಧ್ಯಮದ ಸೆಳೆತವೇ ಅಂಥದ್ದು!

ಬುಧವಾರ ರಾತ್ರಿ ಬಂದೂಕಿನ ಸದ್ದು ಕೇಳುತ್ತಿದ್ದಂತೆಯೇ, ಮಾಧ್ಯಮಗಳು ಎಚ್ಚರಗೊಂಡವು. ನೋಡ ನೋಡುತ್ತಿದ್ದಂತೆಯೇ ಹಿರಿಯ ಪೊಲೀಸರು ಕಣ್ಣು ಮುಚ್ಚಿದರು. ಪತ್ರಕರ್ತರಿಗೆ 'ಇದು ಸದ್ಯಕ್ಕೆ ಮುಗಿಯುವ ಕತೆಯಲ್ಲ' ಎಂದು ತಿಳಿಯಿತು. ಬೆಳಗಿನ ಹೊತ್ತಿಗೆ ಎನ್ ಡಿಟಿವಿ ಬರ್ಕಾ ದತ್, ಸಿಎನ್ಎನ್ ಐಬಿಎನ್ ರಾಜದೀಪ್ ಸರದೇಸಾಯಿ..ಎಲ್ಲರೂ ದೆಹಲಿಯಿಂದ ಮುಂಬೈಗೆ ದೌಡಾಯಿಸಿದರು. ತಾಜ್ ಹೊಟೇಲ್, ಟ್ರೈಡೆಂಟ್ ಹೊಟೇಲ್ಗಳ ಮುಂದೆ ಮೈಕ್ ಹಿಡಿದು ನಿಂತರು.
ಮುಂಬೈಕರ್ ರಾಜದೀಪ್ ತುಸು ಭಾವುಕರಾದರು. ಎಂದಿನಂತೆ ಬರ್ಕಾ ತನ್ನ ಸುತ್ತಲ ಚಿತ್ರಣವನ್ನು ನೋಡುಗರಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾದರು. ಟೈಮ್ಸ್ ನೌ ಆರ್ನಾಬ್ ಗೋಸಾಮಿ ಬಿಡದೆ ಸ್ಟುಡಿಯೋದಲ್ಲಿಯೇ ಕೂತರು. ಸಣ್ಣಪುಟ್ಟ ಚಾನೆಲ್ ಗಳೂ ಇದಕ್ಕಿಂತ ಹೊರತಾಗಿರಲಿಲ್ಲ. ಕನ್ನಡದ ಟಿವಿ೯ ಬೆಂಗಳೂರಿನಿಂದ ಲಕ್ಷಣ ಹೂಗಾರ್ ಹಾಗೂ ದೆಹಲಿಯಿಂದ ಶಿವಪ್ರಸಾದರನ್ನು ಮುಂಬೈಗೆ ರವಾನಿಸಿತ್ತು. ಶಿವಪ್ರಸಾದ್ ಹರಸಾಹಸ ಪಟ್ಟು ವರದಿ ಮಾಡಿದ್ದು ಎಲ್ಲರಿಗೂ ಗೊತ್ತು. ಈ ಮಧ್ಯೆ ಕನ್ನಡದ್ದೇ ಇನ್ನೊಂದು ಚಾನೆಲ್ ಸುವರ್ಣ ಮುಂಬೈ ಸುದ್ದಿ ಕೊಡುವಲ್ಲಿ ತೀವ್ರವಾಗಿ ಹಿಂದುಳಿಯಿತು.
ಅದೇನೆ ಇರಲಿ, ಮುಂಬೈನಲ್ಲಿ ಹಟಕ್ಕೆ ಬಿದ್ದವರಂತೆ ಸಾವಿಗೂ ಅಂಜದೆ ವರದಿ ಮಾಡಿದರಲ್ಲ ಅವರಿಗೆ ಹ್ಯಾಟ್ಸ್ ಆಫ್. 'ಹೇಳಿದ್ದೇ ಹೇಳ್ತಾರೆ', 'ತಪ್ಪೇ ಹೇಳ್ತಾರೆ', 'ಅವನಿಗೆ ಭಾಷೆನೇ ಗೊತ್ತಿಲ್ಲ'..ಎಂದೆಲ್ಲಾ ಕಾಮೆಂಟ್ ಮಾಡುತ್ತಿದ ನೋಡುಗರು ವರದಿಗಾರರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಿದ್ರೆ ಇಲ್ಲದೆ, ನೀರಿಲ್ಲದೆ ಅವರು ಗುಂಡಿನ ಕಾಳಗ ವರದಿ ಮಾಡುವುದೆಂದರೆ ಸುಮ್ಮನೇನಾ?
ಬಹುತೇಕ ಚಾನೆಲ್ ಗಳು ಎರಡು ದಿನಗಳ ಕಾಲ ಜಾಹಿರಾತುಗಳಿಗೆ ಮೊರೆ ಹೋಗದೆ ಸುದ್ದಿ ನೀಡಿದವು.
ಒಂದಂತೂ ಸತ್ಯ. ಮುಊರು ದಿನಗಳ ಕಾಲ ಮುಂಬೈ ಘಟನೆಗಳನ್ನು ವರದಿ ಮಾಡಿದವರು ಮರೆಯಲಾಗದ ಅನುಭವಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮತ್ತಷ್ಟು ಕಾಲ ಆ ಅನುಭವ ಅವರನ್ನು ಪತ್ರಿಕೋದ್ಯಮದೆಡೆಗಿನ ಸೆಳೆತವನ್ನು ಕಾಯ್ದುಕೊಂಡಿರುತ್ತೆ ಎನ್ನುವುದು ಮಾತ್ರ ಸತ್ಯ.

ನೆಮ್ಮದಿಯ ನಾಳೆ ನಮ್ಮದಾಗುವುದೇ?

ಮುಂಬೈ ನಿಧಾನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ನಮ್ಮ ಮಾಧ್ಯಮಗಳು ಆಪರೇಶನ್ ಸೈಕ್ಲೋನ್ ಯಶಸ್ವಿ ಎಂದೇ ಬಿಂಬಿಸಿದವು. ನಿಜ ಹೇಳಬೇಕೆಂದರೆ, ಭಾರತ ಸೋತಿತು. ಸಮುದ್ರದ ಹಾದಿಗುಂಟ ಬಂದ ಭಯೋತ್ಪಾದಕರ ಉದ್ದೇಶ ನೂರೋ, ಇನ್ನೂರೋ ಜನರನ್ನು ಕೊಲ್ಲುವುದಕ್ಕಿಂತ ಮುಖ್ಯವಾಗಿ ಜನರಲ್ಲಿ ಭಯ ಹುಟ್ಟಿಸಬೇಕಿತ್ತು. ಜನರನ್ನೂ ಕೊಂದರು. ತೀವ್ರವಾಗಿ ಕಾಡುವ ಭಯವನ್ನೂ ಸೃಷ್ಟಿಸಿದರು. ಆ ಕಾರಣಕ್ಕಾಗಿ ಅವರು ಯಶಸ್ವಿಯಾದರು. ಸೋತವರು - ನಾವು, ನಮ್ಮ ವ್ಯವಸ್ಥೆ. ಹಿರಿಯ ಉದ್ಯಮಿಗಳನ್ನು, ನಿಪುಣ ಪೊಲೀಸರನ್ನ, ಅಮಾಯಕರನ್ನು ಕಳೆದುಕೊಂಡವರು ನಾವು.
ಭಯೋತ್ಪಾದಕರು ತಾವು ಕೆಲವರನ್ನು ಕೊಂದು, ಮತ್ತೆ ಬದುಕಿ ಹಿಂದಕ್ಕೆ ಹೋಗತ್ತೇವೆಂದೇನು ಬಂದಿರಲಿಲ್ಲ. ಅವರ ಗುರಿ ಸ್ಪಷ್ಟವಿತ್ತು.
ವೀರಯೋಧ ಸಂದೀಪ್ ಅಪ್ಪ ಉನ್ನಿಕೃಷ್ಣ ಕೇರಳದ ಮುಖ್ಯಮಂತ್ರಿ ಅಚ್ಯುತಾನಂದರನ್ನು ಭೇಟಿ ಮಾಡಲು ಒಪ್ಪಲಿಲ್ಲ. ದೆಹಲಿಯಿಂದ ರಕ್ಷಣಾ ಮಂತ್ರಿ ಎ.ಕೆ ಅಂಟನಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಆಡಳಿತ ಚುಕ್ಕಾಣಿ ಹಿಡಿದವರೆಡೆಗೆ ಇದ್ದ ಆಕ್ರೋಶವನ್ನು, ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಅಪ್ಪ ತೀವ್ರವಾಗಿ ವ್ಯಕ್ತಪಡಿಸಿದರು.
'ನೈತಿಕ ಹೊಣೆ' ಹೊತ್ತು ಜವಾಬ್ದಾರಿಯಿಂದ ನುಣುಚಿಕೊಂಡಂತೆ ಕೈ ತೊಳೆದುಕೊಂಡು ಶಿವರಾಜ ಪಾಟೀಲರಂತೆ ಮನೆ ಸೇರಿಕೊಳ್ಳುವುದು ಸುಲಭ. ಆದರೆ ಹರೆಯದ ಮಗನ ದು:ಖವನ್ನು ಭರಿಸುವ ಕಷ್ಟ ಅವರಪ್ಪನಿಗೆ ಮಾತ್ರ ಗೊತ್ತು. ಯಾರ ರಾಜೀನಾಮೆಯುಊ ಅವರಿಗೆ ಸಮಾಧಾನ ತರುವುದಿಲ್ಲ.
ಇಂತಹ ಸಂದರ್ಭಗಳಲ್ಲಿ ಜನರಲ್ಲಿ ರಾಜಕಾರಣಿಗಳ ವಿರುದ್ಧ ಎಂದಿಲ್ಲದ ಆಕ್ರೋಶ ಉಕ್ಕಿ ಬರುತ್ತೆ. ಇದು ಸಹಜ. ಶನಿವಾರ ಸಂಜೆ ಸಿಎನ್ಎನ್ ಐಬಿಎನ್ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಶೋಭಾ ಡೇ ಮಾತು ಮಾತಿಗೆ ರಾಜಕಾರಣಿಗಳನ್ನು ಟೀಕಿಸುತ್ತಿದ್ದರು. ಅವರೊಬ್ಬರೇ ಅಲ್ಲ, ಪ್ಯಾನೆಲ್ ನಲ್ಲಿ ಇದ್ದ ಎಲ್ಲರೂ. ಮಿಲಿಂದ್ ದಿಯೋರಾ ಎಂಬ ತರುಣ ಸಂಸದ ನನ್ನಿಂದ ನಿಜವಾಗಿಯುಊ ಏನೋ ಘೋರ ಅನ್ಯಾಯವಾಗಿದೆಯೇನೋ ಎಂಬಂತೆ ಪಾಪಪ್ರಜ್ಞೆಗೆ ಒಳಗಾದವರಂತೆ ಕಂಡರು.
ಸದ್ಯ ನಮಗೆ ಬೇಕಿರುವುದು ಶಾಂತಿ. ರಾಜಕಾರಣಿಗಳನ್ನು ದೂರುವುದರಿಂದ ಆಗುವುದೇನೂ ಇಲ್ಲ. ರಾಜಕಾರಣಿಗಳನ್ನು ಟೀಕಿಸುವವರು ಚುನಾವಣೆಗೆ ನಿಂತು ಗೆಲ್ಲಲಾರರು. ಗೆದ್ದರೂ ಅವರು ಇತರೆ ರಾಜಕಾರಣಿಗಳಿಗಿಂತ ಭಿನ್ನವಾಗಿರಲಾರರು ಎಂಬುದಕ್ಕೆ ಖಾತ್ರಿ ಇರದು. ನಮ್ಮ ಈರ್ಷೆ, ದೌಲತ್ತು ಎಲ್ಲವನ್ನೂ ಬದಿಗಿಟ್ಟು ನಮ್ಮ ನೆಲದ, ಆಡಳಿತದ ತಿಕ್ಕಾಟಗಳಿಗೆ ಮಾತುಕತೆ ಮುಊಲಕ ಉತ್ತರ ಕಂಡುಕೊಳ್ಳಬೇಕಿದೆ. ಆ ಮುಊಲಕ ಶಾಂತಿ ಸ್ಥಾಪಿಸಬಹುದೇ ಎಂಬ ಬಗ್ಗೆ ಜನಾಭಿಪ್ರಾಯ ಮುಊಡಬೇಕಿದೆ. ಈಗ ನಮ್ಮ ಸಮಾಜ ವಿಜ್ಞಾನಿಗಳ, ಚಿಂತಕರ ಪಾತ್ರ ದೊಡ್ಡದಿದೆ.

Friday, November 28, 2008

ಧನ್ಯವಾದಗಳು

ಅಚಾತುರ್ಯದಿಂದ 'ಧಿಕ್ಕಾರ' ತಪ್ಪಾಗಿತ್ತು. ನಮ್ಮ ಓದುಗರು ಎಚ್ಚರಿಸಿದ್ದಾರೆ. ನಾವು ತಪ್ಪುಗಳಿಗೆ ಹೊರತಲ್ಲ. ಎಚ್ಚರಿಸಿದ್ದಕ್ಕೆ ಧನ್ಯವಾದಗಳು. ಮುಂದೆಯುಊ ಹೀಗೆ ತಪ್ಪುಗಳಾದರೆ, ಎಚ್ಚರಿಸುತ್ತಿರಿ. ತಿದ್ದಿಕೊಳ್ಳಲು ಸದಾ ಸಿದ್ಧ.
-ಸುದ್ದಿಮಾತು ತಂಡ

Thursday, November 27, 2008

ಹಿಂಸೆಯ ದಾರಿಗೆ ನಮ್ಮೊದೊಂದು ದಿಕ್ಕಾರ...


ಮುಂಬೈ ಮತ್ತೆ ಗುಂಡು, ಬಾಂಬುಗಳಿಗೆ ತತ್ತರಿಸಿದೆ. ನೆಮ್ಮದಿಯ ನಿದ್ರೆ ಜಾರುವ ಹೊತ್ತಲ್ಲಿ ಇಡೀ ಮುಂಬೈ ಸಾವಿನ ಆತಂಕದಲ್ಲಿ ನಡುಗಿ ಹೋಗಿದೆ. ಮುಂಬೈ ನಿರಂತರವಾಗಿ ಉಗ್ರ ಅಟ್ಟಹಾಸಕ್ಕೆ ಗುರಿಯಾಗುತ್ತಲೇ ಇದೆ. ಮೂಲಭೂತವಾದಿ ಮನಸ್ಸು ಹರಡುತ್ತಿರುವ ಈ ಹಿಂಸೆಯನ್ನು ನಾವು ಖಂಡಿಸಬೇಕು. ಉಗ್ರರು ಎಂದರೆ ಮುಸ್ಲಿಮರಷ್ಟೇ ಎಂಬುದು ಸುಳ್ಳು ಎಂಬುದನ್ನು ಮಾಲೇಗಾಂವ್ ಸ್ಫೋಟ ಪ್ರಕರಣ ಹೇಳಿದೆ. ಉಗ್ರವಾದ ಎನ್ನುವುದು ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎನ್ನುವುದು ಈ ಪ್ರಕರಣ ಸ್ಪಷ್ಟಪಡಿಸಿದೆ. ಉಗ್ರವಾದ ಎನ್ನುವುದು ಮೂಲಭೂತವಾದಿ ಮನಸ್ಸುಗಳ ಹಿಂಸಾವಿನೋದಿ ಮನಸ್ಥಿತಿಯ ಕೃತ್ಯಗಳು. ಇದನ್ನು ಎಲ್ಲರೂ ಖಂಡಿಸಬೇಕು. ಜನಸಾಮಾನ್ಯರ ನೆಮ್ಮದಿಗೆ, ಸಾಮರಸ್ಯದ ಸಮಾಜಕ್ಕೆ ಕೊಳ್ಳಿ ಇಡುವ ಇಂಥ ಕೃತ್ಯಗಳಿಗೆ ಕಡಿವಾಣ ಬೀಳಲಿ. ಹಿಂಸೆಯ ದಾರಿಗೆ ನಮ್ಮೊದೊಂದು ದಿಕ್ಕಾರ...

Tuesday, November 25, 2008

ಹೊಸ ವರಸೆಯಲ್ಲಿ ಭಯೋತ್ಪಾದನೆ ಸಮರ್ಥಕರು!

ನ.೨೬ರ ವಿಜಯಕರ್ನಾಟಕದಲ್ಲಿ ಘನತೆವೆತ್ತ ನ್ಯಾಯಮೂರ್ತಿಗಳಾದ ಎಂ. ರಾಮಾಜೋಯಿಸ್ ಅವರ ಭಯೋತ್ಪಾದನೆಯೋ, ಪ್ರತೀಕಾರವೋ? ಎಂಬ ಅಗ್ರಲೇಖನ ಪ್ರಕಟಗೊಂಡಿದೆ. ಇದನ್ನು ವರದಿಯೆನ್ನಬೇಕೋ, ವಿಶ್ಲೇಷಣೆಯೆನ್ನಬೇಕೋ, ಲೇಖನವೆನ್ನಬೇಕೋ ಎಂಬ ಗೊಂದಲದಲ್ಲಿಯೇ ಅಗ್ರಲೇಖನ ಎಂಬ ಪದ ಬಳಸಿದ್ದೇವೆ.
ಸಾಧಾರಣವಾಗಿ ಪತ್ರಿಕೆಗಳ ಮುಖಪುಟದಲ್ಲಿ ವರದಿಗಾರರು ತಮ್ಮ ಬೈಲೈನ್‌ನೊಂದಿಗೆ ಬರೆಯುತ್ತಾರೆ. ಆದರೆ ಎಸ್.ಎಲ್. ಭೈರಪ್ಪ, ರಾಮಾಜೋಯಿಸ್ ತರಹದವರು ಇದ್ದಕ್ಕಿದ್ದಂತೆ ವರದಿಗಾರರ ಹಾಗೆ ವಿಜಯಕರ್ನಾಟಕದ ಮುಖಪುಟದಲ್ಲಿ ಪ್ರತ್ಯಕ್ಷರಾಗುತ್ತಾರೆ. ಇದನ್ನೂ ಒಂದು ಪ್ರಯೋಗ ಎಂದು ಒಪ್ಪಿಕೊಳ್ಳೋಣ ಬಿಡಿ.
ವಿಷಯಕ್ಕೆ ಬರುವುದಾದರೆ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ, ರಾಜ್ಯಪಾಲರಾಗಿದ್ದ ಈಗ ಬಿಜೆಪಿ ಕೃಪೆಯಿಂದ ರಾಜ್ಯಸಭಾ ಸದಸ್ಯರಾಗಿರುವ ರಾಮಾಜೋಯಿಸ್ ಅವರು ನಿರ್ಲಜ್ಜೆಯಿಂದ ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಭಯೋತ್ಪಾದನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅದನ್ನು ವಿ.ಕ ಯಥಾವತ್ತಾಗಿ ಪ್ರಕಟಿಸುವ ಮೂಲಕ ತಾನೂ ಸಹ ಈ ಸಮರ್ಥನೆಯಲ್ಲಿ ಭಾಗವಾಗಿದೆ.
ಕೆಲವು ಸಾಲುಗಳನ್ನು ಗಮನಿಸಿ: ...ಇಂಥ ಘಟನೆಗಳಿಂದ ದೇಶಭಕ್ತ ಜನರು ಉದ್ರೇಕಗೊಳ್ಳದೇ ಇರಲು ಸಾಧ್ಯವೆ? ಸಾಮಾನ್ಯ ಜನರ ಮನಸ್ಸಿಗೆ ಅಪಾರ ನೋವುಂಟಾಗಿರಲಿಲ್ಲವೆ? ಅದರಲ್ಲಿ ಕೆಲವರು ಉದ್ರೇಕಗೊಂಡು ಪ್ರತೀಕಾರಕ್ಕೆ ಮುಂದಾದರೆ ಮತ್ತು ಅದೇ ಭಾವನೆಯಿಂದ ಭಯೋತ್ಪಾದನೆಯನ್ನು ತಮಗೆ ತಿಳಿದ ರೀತಿಯಲ್ಲಿ ಮಾಡಿದರೆ ಅದು ಭಯೋತ್ಪಾದನೆಗೆ ಪ್ರತೀಕಾರವೇ ವಿನಹ ಭಯೋತ್ಪಾದನೆಯಲ್ಲ. ಈ ರೀತಿ ಕೆಲವರು ಮಾಡಿರುವ ಭಯೋತ್ಪಾದಕ ಕೃತ್ಯವನ್ನು ಹಿಂದೂ ಭಯೋತ್ಪಾದನೆ ಎಂದು ಹೆಸರಿಸಿ ಸಮಗ್ರ ಹಿಂದೂ ಸಮಾಜಕ್ಕೆ ಮಸಿ ಬಳಿಯುವುದು ದೇಶದ್ರೋಹಿಗಳು ಮಾಡುವ ಭಯೋತ್ಪಾದನೆಯಿಂದುಂಟಾಗುವ ಹಾನಿಗಿಂತಲೂ ಭೀಕರ. ಅದರ ದುಷ್ಪರಿಣಾಮಗಳು ಭಯಾನಕಒಬ್ಬ ನ್ಯಾಯಮೂರ್ತಿ ಆಡಬಹುದಾದ ಮಾತುಗಳೇ ಇವು ಎಂದು ಗಂಭೀರವಾಗಿ ಚಿಂತಿಸಬೇಕಾಗಿದೆ.
ದೇಶದಲ್ಲಿ ಪಾಕ್ ಪ್ರೇರಿತ ಭಯೋತ್ಪಾದನೆ ಆರಂಭಗೊಂಡಾಗಿನಿಂದ ದೇಶಭಕ್ತರು ನೊಂದುಕೊಂಡಿದ್ದರು. ಈ ದೇಶಭಕ್ತರು ಸಿಟ್ಟಿನಿಂದ ಮಾಲೇಗಾಂವ್ ಸ್ಫೋಟದಂತಹ ಕೃತ್ಯಕ್ಕೆ ಇಳಿದಿದ್ದಾರೆ. ಹೀಗಾಗಿ ಇದು ಭಯೋತ್ಪಾದನೆಯಲ್ಲ, ಪ್ರತೀಕಾರ ಅಷ್ಟೆ.
ರಾಮಾಜೋಯಿಸ್‌ಗೆ ಒಂದು ಸರಳ ಪ್ರಶ್ನೆ ಕೇಳೋಣ:ಬಾಬರಿ ಮಸೀದಿ ವಿವಾದಕ್ಕೂ ಮುನ್ನ ಭಾರತದಲ್ಲಿ ಬಾಂಬ್ ಸ್ಫೋಟಗಳು ನಡೆದಿರಲಿಲ್ಲ. ಗುಜರಾತ್ ಹಿಂಸೆಗೂ ಮುನ್ನ ಇಷ್ಟು ತೀವ್ರ ಸ್ವರೂಪದಲ್ಲಿ ಭಯೋತ್ಪಾದಕ ಸಂಘಟನೆಗಳು ಚಟುವಟಿಕೆ ನಡೆಸುತ್ತಿರಲಿಲ್ಲ. ಅರ್ಥಾತ್ ಬಾಬರಿ ಮಸೀದಿ ಧ್ವಂಸ ಹಾಗು ಗುಜರಾತ್ ನರಮೇಧಗಳಿಂದ ರೊಚ್ಚಿಗೆದ್ದ ಕೆಲ ಮುಸ್ಲಿಮ್ ಯುವಕರು ಮಾಡುವ ಭಯೋತ್ಪಾದನೆಯನ್ನೂ ಪ್ರತೀಕಾರ ಅಥವಾ ಪ್ರತಿಕ್ರಿಯೆ ಎಂದು ಕರೆಯಬಹುದಲ್ಲವೆ?
ರಾಮಾಜೋಯಿಸ್ ತಮ್ಮ ಲೇಖನದಲ್ಲಿ ಮಾಲೇಗಾಂವ್ ಸ್ಪೋಟದ ರೂವಾರಿ ಎಂಬ ಆರೋಪ ಹೊತ್ತಿರುವ ಸಾಧ್ವಿ ಮತ್ತವಳ ಸಹಚರರನ್ನು ಭಗತ್ ಸಿಂಗ್, ಸುಖದೇವ್, ಮದನ್ ಲಾಲ್ ಧಿಂಗ್ರಾ, ಚಂದ್ರಶೇಖರ್ ಆಜಾದ್ ಮತ್ತಿತರರಿಗೆ ಹೋಲಿಸಿದ್ದಾರೆ! ಭಲೇ ಜೋಯಿಸರೇ, ಭಲೇ ವಿ.ಕ.
ರಾಮಾಜೋಯಿಸರ ಲೇಖನದ ಟೋನ್ ಹೇಗಿದೆಯೆಂದರೆ ಮಾಲೇಗಾಂವ್ ಸ್ಫೋಟದ ತನಿಖೆ ಮಾಡುತ್ತಿರುವ ಎಟಿಎಸ್, ಸ್ಫೋಟದಲ್ಲಿ ಹಿಂದೂಗಳು ಭಾಗಿಯಾಗಿದ್ದಾರೆ ಎಂಬುದು ಗೊತ್ತಾದ ತಕ್ಷಣ ತನಿಖೆಯನ್ನೇ ಮುಚ್ಚಿಹಾಕಬೇಕಿತ್ತು! ಸಾಧ್ವಿ ಮತ್ತಿತರರನ್ನು ಮೋಕಾದಡಿಯಲ್ಲಿ ಬಂಧಿಸಿದ್ದೇ ಸರಿಯಲ್ಲ ಎಂದು ವಾದಿಸಿರುವ ಜೋಯಿಸರ ಮಾತುಗಳನ್ನು ಗಮನಿಸಿದರೆ ಈ ದೇಶದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು ಮಾಡುವ ತಪ್ಪುಗಳಿಗೆ ಮಾತ್ರ ಶಿಕ್ಷೆಯಿರಬೇಕು, ಮೇಲ್ಜಾತಿಯ ಹಿಂದೂಗಳು ತಪ್ಪು ಮಾಡಿದರೆ ಅವರನ್ನು ಕ್ಷಮಿಸಿಬಿಡಬೇಕು ಎಂಬ ಅಪ್ಪಣೆಯ ಭಾವ ಕಂಡುಬರುತ್ತದೆ.
ಸಾಧ್ವಿ ನಿಜಕ್ಕೂ ತಪ್ಪು ಮಾಡಿದ್ದರೂ ಆಕೆ ದೇಶಭಕ್ತಿಯಿಂದ ಮಾಡಿದ್ದಾಳೆ ಎಂದು ಒಬ್ಬ ನಿವೃತ್ತ ನ್ಯಾಯಮೂರ್ತಿಯೇ ಸಮರ್ಥಿಸಿಕೊಂಡರೆ ನಿಜಕ್ಕೂ ಆಘಾತವಾಗಬೇಕಿರುವುದು ನ್ಯಾಯಾಂಗವ್ಯವಸ್ಥೆಯನ್ನು ನಂಬಿಕೊಂಡು ಕುಳಿತಿರುವ ದೇಶವಾಸಿಗಳಿಗೆ.
ಇಂಥ ಆತ್ಮಘಾತಕತನದ ಬರಹವನ್ನು ವಿ.ಕ. ಪ್ರಕಟಿಸಿರುವ ರೀತಿಯೇ ನಿಜಕ್ಕೂ ಅಸಹ್ಯಕರ. ಭಯೋತ್ಪಾದನೆ ಹಿಂದೂಗಳು ಮಾಡಲಿ, ಮುಸ್ಲಿಮರು ಮಾಡಲಿ ನ್ಯಾಯವ್ಯವಸ್ಥೆ ಒಂದೇ ಕ್ರಮದಲ್ಲಿ ಶಿಕ್ಷಿಸುವಂತಾಗಬೇಕು ಎಂದು ಹೇಳಲು ಸಾಧ್ಯವಿಲ್ಲದ ಇಂಥ ಮನಸ್ಸುಗಳು ದೇಶದ ಪಾಲಿಗೆ ಗಂಡಾಂತರಕಾರಿ.
ಮಾಲೇಂಗಾಂವ್ ಸ್ಫೋಟದಲ್ಲಿ ಹಿಂದೂಗಳು ಪಾಲ್ಗೊಂಡಿರುವುದು ಬಯಲಿಗೆ ಬರುತ್ತಿದ್ದಂತೆ ಫ್ಯಾಸಿಸ್ಟ್ ಶಕ್ತಿಗಳು ತಮ್ಮ ನಿಜಬಣ್ಣದೊಂದಿಗೆ ಪ್ರತ್ಯಕ್ಷವಾಗುತ್ತಿವೆ. ಆದರೆ ಈ ಪಟ್ಟಿಯಲ್ಲಿ ನ್ಯಾಯಪಾಲಕ ವ್ಯವಸ್ಥೆಯಲ್ಲಿ ಇದ್ದವರೇ ಕಾಣಿಸಿಕೊಂಡಿರುವುದು ಮಾತ್ರ ಆಘಾತಕರ.
ಇಂದಿರಾಗಾಂಧಿ ಹತ್ಯೆಯ ನಂತರ ನಡೆದ ಸಿಕ್ ನರಮೇಧವನ್ನು ರಾಜೀವ್‌ಗಾಂಧಿಯವರು ಹೀಗೇ ಸಮರ್ಥಿಸಿಕೊಂಡಿದ್ದರು. ಬಾಬರಿ ಮಸೀದಿ ಧ್ವಂಸವನ್ನು ಅಡ್ವಾನಿ ಸಮರ್ಥಿಸಿಕೊಂಡಿದ್ದೂ ಹೀಗೆ. ನಂತರ ಗುಜರಾತ್ ನರಮೇಧವನ್ನು ನರೇಂದ್ರ ಮೋದಿ ಕ್ರಿಯೆಗೆ ಪ್ರತಿಕ್ರಿಯೆ ಎಂದೇ ಸಮರ್ಥಿಸಿಕೊಂಡಿದ್ದರು. ಇದೀಗ ರಾಮಾಜೋಯಿಸ್ ಮತ್ತು ವಿಜಯ ಕರ್ನಾಟಕ ಮಾಲೇಗಾಂವ್ ಸ್ಫೋಟವನ್ನೂ ಸಮರ್ಥಿಸಿರುವುದೂ ಇದೇ ಧ್ವನಿಯಲ್ಲಿ.
ಗಲೀಜು, ಕೊಚ್ಚೆಯಲ್ಲಿ ಬಿದ್ದಿರುವ ಜನರು ಆ ವಾಸನೆಯನ್ನೇ ಆಘ್ರಾಣಿಸಿಕೊಂಡು ಸುಖ ಪಡುತ್ತಿದ್ದರೆ ಅದಕ್ಕೆ ಏನನ್ನುವುದು?

Monday, November 24, 2008

‘ಒಡ್ಡು ಒಡ್ಡಾಗಿ ಅಂದ್ರೆ ಏನು ರಂಗಣ್ಣಾ?

‘ಪವಾಡ ಸದೃಶ ಸಾಧನೆ ಎಂಬ ನ.೨೫ರ ಕನ್ನಡಪ್ರಭ ಸಂಪಾದಕೀಯ ಗಮನಿಸಿ:“ಕೆಲವೇ ವರ್ಷಗಳ ಹಿಂದೆ, ಒಡ್ಡು ಒಡ್ಡಾಗಿ ವರ್ತಿಸುತ್ತಾ ಮೈದಾನಕ್ಕಿಳಿದು ಒಂದು ರೀತಿಯಲ್ಲಿ ತಂಡದ ದೃಷ್ಟಿ ಬೊಟ್ಟಿನಂತೆ ಇದ್ದ ಮಹೇಂದ್ರ ಸಿಂಗ್ ಈಗ ತನ್ನ ವಿಚಿತ್ರ ಕೇಶಾಲಂಕಾರವನ್ನು ಬದಲಾಯಿಸಿಕೊಂಡು ಒಬ್ಬ ಸಂಭಾವಿತ-ಗಂಭೀರ ನಾಯಕರಾಗಿ ಬೆಳೆದು ನಿಂತಿದ್ದಾರೆ.ನೇರವಾಗಿ ಕನ್ನಡಪ್ರಭ ಸಂಪಾದಕರಿಗೆ ಪ್ರಶ್ನೆ ಕೇಳೋಣ: ಇಲ್ಲಿ ಬಳಸಿರುವ ‘ಒಡ್ಡು ಒಡ್ಡಾಗಿ ಅಂದ್ರೆ ಏನು ರಂಗಣ್ಣಾ?ಒಡ್ಡರು, ವಡ್ಡರು ಅಂದ್ರೆ ಅದೊಂದು ಜಾತಿ, ಸಾಧಾರಣವಾಗಿ ಕಲ್ಲು ಒಡೆಯುವ ಶ್ರಮಿಕ ಜನವರ್ಗ ಇದು. ಪರಿಶಿಷ್ಟಜಾತಿಗಳ ಪಟ್ಟಿಯಲ್ಲಿ ಈ ಜಾತಿಯ ಹೆಸರೂ ಇದೆ. ಈ ಸಮುದಾಯವನ್ನು ಬೋವಿ ಎಂದೂ ಸಹ ಕರೆಯುತ್ತಾರೆ. ಬಿರುಬಿಸಿಲಿನಲ್ಲಿ ಶ್ರಮದ ಕೆಲಸ ಮಾಡುವ ಜನ ಇವರಾದ್ದರಿಂದ ಸೂಟು, ಬೂಟು ಹಾಕಿಕೊಳ್ಳುವುದು ಸಾಧ್ಯವೆ? ಶಾಂಪೂವಿನಿಂದ ಕೂದಲು ತೊಳೆದುಕೊಂಡು ನೀಟಾಗಿ ಕ್ರಾಪ್ ಬಿಟ್ಟುಕೊಳ್ಳುವುದು ಸಾಧ್ಯವೆ? ಮುಖಕ್ಕೆ ಫೇರ್ ಅಂಡ್ ಲವ್ಲೀ, ಪಾಂಡ್ಸ್ ಪೌಡರ್ ಹಚ್ಚಿಕೊಂಡು ಕುಳಿತು ಕಲ್ಲು ಒಡೆಯುವುದು ಸಾಧ್ಯವೆ? ಇನ್ನು ಬಾಡಿ ಡಿಯೋಡರೆಂಟು, ಸೆಂಟು ಇತ್ಯಾದಿಗಳ ಕತೆ ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತೆ.ಯಾರಾದರೂ ಗಲೀಜಾಗಿ ಕಂಡ್ರೆ ನಮ್ಮ ಸೋಕಾಲ್ಡ್ ಸಭ್ಯ ಜನರು ವಡ್ರಂಗೆ ಇದ್ದಾನೆ ನೋಡು ಎನ್ನುತ್ತಾರೆ. ವಡ್ಡರು ಗಲೀಜು ಜನ ಅನ್ನೋದು ಇಂಥವರ ಅಭಿಪ್ರಾಯ. ಹೀಗೆ ಇಂಥ ಜನವರ್ಗಗಳು ಗಲೀಜು ಮಾಡಿಕೊಳ್ಳದೆ ಹೋಗಿದ್ದರೆ, ಕೆಲಸ ಮಾಡದೆ ಇದ್ದರೆ ಈ ಜಗತ್ತು ಹೇಗಿರುತ್ತಿತ್ತು ಎನ್ನುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂಬುದನ್ನು ಈ ಸಭ್ಯರು ಮರೆಯುತ್ತಾರೆ.ಆದರೆ ರಂಗಣ್ಣಾ ನಿಮ್ಮ ಪತ್ರಿಕೆಯ ಸಂಪಾದಕೀಯದಲ್ಲೇ ಯಾಕೆ ಈ ಪ್ರಯೋಗ ಬಂತು?ನೀವು ಮೇಲೆ ಹೇಳಿದ ಸಭ್ಯರ ಪೈಕಿ ಅಲ್ಲ ಅಂತ ನಮಗೆ ಗೊತ್ತು. ಗುಣ-ಅವಗುಣ ಹೇಳಲು ಜಾತಿಯ ಹೆಸರನ್ನು ಬಳಸಿಕೊಳ್ಳಲೇಬೇಕಾ? ಅದು ಅಮಾನವೀಯ ಅಲ್ಲವೆ? ಬಳಕೆಯಲ್ಲಿ ಬಂದಿದೆ ಕಣ್ರೀ ಅಂತ ಕೆಲವರು ಇಂಥದ್ದನ್ನು ಸಮರ್ಥಿಸಿಕೊಳ್ಳುತ್ತಾರೆ. ಇವತ್ತಿನ ಆಧುನಿಕ ಯುಗದಲ್ಲೂ ಬಳಕೆಯಲ್ಲಿ ಬಂದಿದೆ ಎಂಬ ಕಾರಣಕ್ಕೆ ಇಂಥ ಅಸಹ್ಯಗಳನ್ನೆಲ್ಲ ಮುಂದುವರೆಸಿಕೊಂಡು ಹೋಗಬೇಕಾ? ಇಂಥ ತಪ್ಪುಗಳನ್ನು ತಿದ್ದಿಕೊಳ್ಳುವಿರಾ ರಂಗಣ್ಣಾ?

Sunday, November 23, 2008

ಮೇಕಪ್ ಕಳಚಿದ ಹೀರೊಗಳು!

ಒಂಟಿ ಹಕ್ಕಿ ಬ್ಲಾಗಿನ ಒಡೆಯ ಕೆ.ಎಸ್.ಸುಪ್ರೀತ್ ಪತ್ರಕರ್ತರ ಕುರಿತ ಬರಹವೊಂದನ್ನು ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಾರೆ. ಅದನ್ನು ಇಲ್ಲಿ ಕೃತಜ್ಞತೆಯೊಂದಿಗೆ ಪ್ರಕಟಿಸುತ್ತಿದ್ದೇವೆ.

ಹೈಸ್ಕೂಲು ದಿನಗಳಿಂದಲೂ ಪತ್ರಕರ್ತರ ಬಗ್ಗೆ ನನಗೆ ವಿಲಕ್ಷಣವಾದ ಕುತೂಹಲ ಬೆಳೆದಿತ್ತು. ಯಾವ ಹಾಲಿವುಡ್ ಹೀರೋನ ಸಾಹಸಗಳಿಗೂ ಕಡಿಮೆಯಿರದ ‘ಹಾಯ್ ಬೆಂಗಳೂರ್’ ಸಂಪಾದಕರಾದ ರವಿ ಬೆಳಗೆರೆಯವರ ಚಿತ್ರ ವಿಚಿತ್ರ ಸಾಧನೆಗಳು, ಮೈಲುಗಲ್ಲುಗಳು ಹಾಗೂ ರೋಮಾಂಚನಕಾರಿ ಸಾಹಸಗಳು, ಅವುಗಳಷ್ಟೇ ಥ್ರಿಲ್ಲಿಂಗಾಗಿರುತ್ತಿದ್ದ ಅವರ ಬರವಣಿಗೆ ಪತ್ರಕರ್ತ ಎಂದರೆ ಸಿನೆಮಾದಲ್ಲಿ ಅಕರಾಳ-ವಿಕಾರಾಳವಾಗಿ ಮುಖಭಾವ ಪ್ರಕಟಿಸುತ್ತಾ ಆಕ್ರಮಣ ಮಾಡುವ ಹತ್ತಾರು ಮಂದಿ ದಾಂಢಿಗರಿಗೆ ಒದೆ ಕೊಟ್ಟು ಗರಿ ಮುರಿಯದ ಶರ್ಟನ್ನೊಮ್ಮೆ ಕೊಡವಿ ನಿಂತು ಕೈ ಬೀಸುವ ಸಣಕಲ ಹೀರೋನ ಹಾಗೆ ಎಂಬ ಭ್ರಮೆಯನ್ನು ಮೂಡಿಸುತ್ತಿದ್ದವು. ಪತ್ರಿಕೋದ್ಯಮವೆಂಬುದು ಅತ್ಯಂತ ತ್ಯಾಗಮಯವಾದ, ನಿಸ್ವಾರ್ಥದಿಂದ ಕೂಡಿದ ಉದ್ಯಮ ಎಂಬುದು ಆಗಿನ ಗ್ರಹಿಕೆಯಾಗಿತ್ತು. ಸತ್ಯದ ಉಪಾಸಕರನ್ನು ಪತ್ರಕರ್ತರು ಎಂಬ ಹೆಸರಿನಿಂದ ಕರೆಯುತ್ತಾರೆ, ಜಗತ್ತಿಗೆ ಎಂದಾದರೂ ಪ್ರಾಮಾಣಿಕತೆ, ನಿಷ್ಠುರತೆ, ವಸ್ತುನಿಷ್ಠತೆ, ಧೈರ್ಯಗಳ ಕೊರತೆ ಬಿದ್ದರೆ ಇವರಿಂದ ಕಡ ಪಡೆಯಬಹುದು ಎಂಬುದು ಮುಗ್ಧ ನಂಬಿಕೆಯಾಗಿತ್ತು. ಪತ್ರಿಕೆಗಳಲ್ಲಿ ಪ್ರಕಟವಾಗುವುದು ಗಾಸ್ಪೆಲ್ ಟ್ರುಥ್ ಎಂದು ಈಗಲೂ ಶ್ರದ್ಧೆಯಿಂದ ನಂಬುವ ‘ಭಕ್ತಾದಿ’ಗಳಲ್ಲಿ ನಾನೂ ಒಬ್ಬನಾಗಿದ್ದೆ. ಪತ್ರಿಕೆಗಳ ಬಗ್ಗೆ, ಪತ್ರಕರ್ತರ ಬಗ್ಗೆ ನನ್ನ ಕ್ರೇಜು ಅದೆಷ್ಟರ ಮಟ್ಟಿಗೆ ಹುಚ್ಚುತನದ ಪರಿಧಿಯನ್ನು ಮುಟ್ಟುತ್ತಿತ್ತೆಂದರೆ ನ್ಯೂಸ್ ಸ್ಟಾಂಡಿನಲ್ಲಿ ಕಣ್ಣಿಗೆ ಬೀಳುವ ಪ್ರತಿಯೊಂದು ಹೊಸ ಪತ್ರಿಕೆಯನ್ನೂ ತಂದಿಟ್ಟುಕೊಂಡು ಜೋಪಾನ ಮಾಡುತ್ತಿದ್ದೆ.
ಅಳಿಕೆಯಲ್ಲಿ ಕಾಲೇಜು ಓದುವುದಕ್ಕೆ ಸೇರಿದಾಗ ನನ್ನ ಅನೇಕ ಹುಚ್ಚಾಟಗಳಿಗೆ ಅನಿವಾರ್ಯವಾಗಿ ಕಡಿವಾಣ ಹಾಕಿಕೊಳ್ಳಬೇಕಿತ್ತು. ಕಾಲೇಜಿನ ಇನ್ನೂರು ಚಿಲ್ಲರೆ ಹುಡುಗರಿಗೆ ಸೇರಿ ಅಲ್ಲಿಗೆ ನಾಲ್ಕು ಪೇಪರುಗಳು ಬರುತ್ತಿದ್ದವು. ಎರಡು ಇಂಗ್ಲೀಷು, ಎರಡು ಕನ್ನಡ. ಜೊತೆಗೆ ಜಗತ್ತಿನಲ್ಲಿ ಇರಬಹುದಾದ ಅತ್ಯಂತ ಸಪ್ಪೆಯಾದ, ಎಂಥಾ ಸಾಹಸಿಗಾದರೂ ಬೋರು ಹೊಡೆಸುವ ಆಧ್ಯಾತ್ಮಿಕ ಮಾಸ ಪತ್ರಿಕೆಗಳು ಬಿಟ್ಟರೆ ಬೇರಾವ ಸರಕೂ ನಮ್ಮ ಕೈಗೆ ಸಿಕ್ಕುತ್ತಿರಲಿಲ್ಲ. ಇದ್ದುದರಲ್ಲಿ ಟೈಮ್ಸಾಫಿಂಡಿಯಾದ ಮನರಂಜನೆಯ ಪುಟಗಳು, ವಿಜಯಕರ್ನಾಟಕದ ಕೆಲವು ಜನಪ್ರಿಯ ಅಂಕಣಗಳು ನಮ್ಮ ಹಸಿವನ್ನು ತಣಿಸುತ್ತಾ ನಮ್ಮ ಪ್ರಾಣವನ್ನು ಉಳಿಸಿದ್ದವು ಎನ್ನಬಹುದು! ಬೆಳಗಿನ ತಿಂಡಿಯನ್ನು ಮುಗಿಸಿಕೊಂಡು ಒಲಂಪಿಕ್ಸಿನಲ್ಲಿ ಓಡಿದಂತೆ ನಾವು ರೀಡಿಂಗ್ ರೂಮಿಗೆ ಓಡುತ್ತಿದ್ದೆವು. ಸಾಮಾನ್ಯವಾಗಿ ಈ ರೇಸಿನಲ್ಲಿ ಭಾಗವಹಿಸುವವರ ಸಂಖ್ಯೆ ನಾಲ್ಕಕ್ಕಿಂತ ಹೆಚ್ಚು ಇರುತ್ತಿರಲಿಲ್ಲ. ಒಂದು ವೇಳೆ ಈ ಸಂಖ್ಯೆ ನಾಲ್ಕನ್ನು ದಾಟಿ ಹತ್ತು-ಹದಿನೈದರ ಗಡಿಯನ್ನು ಮುಟ್ಟಿತು ಎಂದರೆ ಹಿಂದಿನ ದಿನ ಯಾವುದೋ ಕ್ರಿಕೆಟ್ ಮ್ಯಾಚ್ ನಡೆದಿರಬೇಕು ಎಂತಲೇ ತಿಳಿಯಬೇಕು. ಪ್ರಪಂಚದ ಹೊಸ ಹೊಸ ಆವಿಷ್ಕಾರಗಳನ್ನು, ವಿದ್ಯಮಾನಗಳನ್ನು ಅರಗಿಸಿಕೊಂಡು ಗಟ್ಟಿಗರಾಗಲು ತಯಾರಾಗುತ್ತಿದ್ದ ನಮ್ಮಂತಹ ನೂರಾರು ವಿದ್ಯಾರ್ಥಿಗಳಿಗೆ ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಯಾರು ಗೆದ್ದರು ಎಂಬುದು ತಿಳಿಯುವುದಕ್ಕೆ ಸುಮಾರು ಹತ್ತು ಹನ್ನೆರಡು ತಾಸು ಬೇಕಾಗಿತ್ತು ಎಂಬುದನ್ನು ತಿಳಿದರೆ ಸಂಪರ್ಕ ಕ್ರಾಂತಿಯ ಪಿತಾಮಹ ಎದೆ ಒಡೆದು ಸಾಯುತ್ತಿದ್ದುದು ಖಂಡಿತ!
ಹೀಗೆ ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ಎಂಬ ಡಾರ್ವಿನನ್ನ ಸಿದ್ಧಾಂತವನ್ನು ಅತ್ಯಂತ ಸಮರ್ಕಪವಾಗಿ ಅನುಷ್ಠಾನಕ್ಕೆ ತಂದು ಸುದ್ದಿ ಸಮಾಚಾರಗಳನ್ನು ತಿಳಿದುಕೊಂಡು, ಜಗತ್ತಿನ ವಿದ್ಯಮಾನದ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಭವ್ಯ ಭಾರತದ ಜವಾಬ್ದಾರಿಯುತ ಪ್ರಜೆಯಾಗುವ ಹಾದಿಯಲ್ಲಿ ಸಮರ್ಪಕವಾಗಿ ನಡೆಯುತ್ತಿದ್ದೇವೆ ಎಂದು ನಮ್ಮನ್ನು ನಾವು ಸಂತೈಸಿಕೊಳ್ಳುತ್ತಿದ್ದೆವು. ಹೈಸ್ಕೂಲಿನಲ್ಲಿದ್ದಾಗ ಕಂಡಕಂಡ ಪತ್ರಿಕೆ, ಮ್ಯಾಗಜೀನುಗಳನ್ನು ಗುಡ್ಡೆ ಹಾಕಿಕೊಂಡು ಶೂನ್ಯ ಸಂಪಾದನೆ ಮಾಡುತ್ತಿದ್ದ ನನಗೆ ನಮ್ಮ ಕಾಲೇಜಿನ ರೀಡಿಂಗ್ ರೂಮೆಂಬುದು ಪ್ರತಿದಿನ ಮೃಷ್ಟಾನ್ನ ತಿಂದು ಹಾಲಿನಲ್ಲಿ ಕೈತೊಳೆಯುವವನಿಗೆ ಗಂಜಿ ಕುಡಿಸಿ ಕೈತೊಳೆಯಲು ಬೀದಿ ನಲ್ಲಿ ತೋರಿದ ಹಾಗಾಗಿತ್ತು. ಆದರೂ ಮರುಭೂಮಿಯಲ್ಲಿನ ಓಯಸ್ಸಿಸಿನ ಹಾಗೆ ನನ್ನ ಹಾಗೂ ನನ್ನಂಥ ತಿಕ್ಕಲರ ದಾಹವನ್ನು ತೀರಿಸುವುದಕ್ಕಾಗಿ ವಿಜಯ ಕರ್ನಾಟಕ, ಟೈಮ್ಸಾಫಿಂಡಿಯ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್‌ಗಳು ಕೈಲಾದ ಪ್ರಯತ್ನ ಮಾಡುತ್ತಿದ್ದವು. ವಿಜಯ ಕರ್ನಾಟಕವನ್ನು ಅದೆಷ್ಟು ಗಾಢವಾಗಿ ಓದುತ್ತಿದ್ದೆವೆಂದರೆ ಪತ್ರಿಕೆಯ ಮಧ್ಯದ ಸಂಪಾದಕೀಯ ಪುಟವನ್ನು ನೋಡಿಯೇ ಇವತ್ತು ಯಾವ ದಿನ ಎಂಬುದನ್ನು ಹೇಳಬಲ್ಲ ಕೌಶಲ್ಯವನ್ನು ಸಂಪಾದಿಸಿಕೊಂಡಿದ್ದೆವು. ಗುರುವಾರವೆಂದರೆ ವಿಶ್ವೇಶ್ವರ ಭಟ್ಟರ ನೂರೆಂಟು ಮಾತು, ಆ ಜಾಗದಲ್ಲಿ ಚೂಪು ನೋಟದ ಬೈತೆಲೆ ಕ್ರಾಪಿನ ಯುವಕನೊಬ್ಬನ ಫೋಟೊ ಪ್ರಕಟವಾಗಿದೆಯೆಂದರೆ ನಿಸ್ಸಂಶಯವಾಗಿ ಅದು ‘ಬೆತ್ತಲೆ ಜಗತ್ತು’ ಎಂದು ಹೇಳಿಬಿಡಬಹುದಿತ್ತು,ಜೊತೆಗೆ ಅಂದು ಶನಿವಾರ ಎಂಬುದನ್ನು ಯಾವ ಪಂಚಾಂಗದ ನೆರವಿಲ್ಲದೆ ಹೇಳಿಬಿಡುತ್ತಿದ್ದೆವು. ಭಾನುವಾರವೆಂಬ ‘ಸಬ್ಬತ್ ದಿನ’ವನ್ನು ನಾವು ಪರಮ ಶ್ರದ್ಧಾವಂತ ಯಹೂದಿಗಿಂತ ಶ್ರದ್ಧೆಯಿಂದ ಆಚರಿಸುತ್ತಿದ್ದೆವು. ಆ ದಿನ ಕೆಲಸಕ್ಕೆ ರಜೆ. ಯಾವ ಕೆಲಸವನ್ನೂ ಮಾಡಬಾರದು ಎಂಬುದು ಯಹೂದಿಗಳ ನಂಬಿಕೆ. ನಾವದನ್ನು ಅಕ್ಷರಶಃ ಪಾಲಿಸುತ್ತಿದ್ದೆವು. ಭಾನುವಾರ ನಮ್ಮ ಪಠ್ಯಪುಸ್ತಕಗಳ ಮುಖವನ್ನೂ ನೋಡುವ ಕಷ್ಟ ತೆಗೆದುಕೊಳ್ಳುತ್ತಿರಲಿಲ್ಲ. ರೆಕಾರ್ಡ್ ಬರೆಯುವುದಂತೆ, ನೋಟ್ಸ್ ಮಾಡಿಕೊಳ್ಳುವುದಂತೆ, ಸಿಇಟಿಗೆ ಓದಿಕೊಳ್ಳುವುದಂತೆ - ಹೀಗೆ ನಾನಾ ಕೆಲಸಗಳಲ್ಲಿ ಮುಳುಗಿ ಹೋಗಿರುತ್ತಿದ್ದ ಓರಗೆಯ ಗೆಳೆಯರನ್ನು ಅಧರ್ಮಿಯನ್ನು ಕನಿಕರದಿಂದ, ಸಹಾನುಭೂತಿಯಿಂದ ನೋಡುವ ಧರ್ಮಿಷ್ಟರ ಹಾಗೆ ನೋಡುತ್ತಿದ್ದೆವು. ಮೌನವಾಗಿ ‘ದೇವರೇ ತಾವೇನು ಮಾಡುತ್ತಿದ್ದೇವೆಂಬುದನ್ನು ಇವರರಿಯರು, ಇವರನ್ನು ಕ್ಷಮಿಸು’ ಎಂದು ಪ್ರಾರ್ಥಿಸಿ ನಮ್ಮ ‘ಸಬ್ಬತ್’ ಆಚರಣೆಯಲ್ಲಿ ಭಕ್ತಿಯಿಂದ ಮಗ್ನರಾಗುತ್ತಿದ್ದೆವು.
ನಮ್ಮ ಭಾನುವಾರದ ‘ಸಬ್ಬತ್’ ಆಚರಣೆಗೆ ಕೆಲವೊಂದು ಅನುಕೂಲ ಸಿಂಧುಗಳನ್ನು ಮಾಡಿಕೊಂಡಿದ್ದೆವೆಂಬುದನ್ನು ತಿಳಿಸಬೇಕು. ಆ ದಿನ ಯಾವ ಕೆಲಸವನ್ನೂ ಮಾಡಬಾರದು (ಉಳಿದ ದಿನಗಳಲ್ಲಿ ನಾವು ಮಾಡುತ್ತಿದ್ದದ್ದು ಅಷ್ಟರಲ್ಲೇ ಇತ್ತು!) ಎಂದು ನಾವು ನಿಯಮ ವಿಧಿಸಿಕೊಂಡಿದ್ದರೂ ಸಾಪ್ತಾಹಿಕ ಸಂಚಿಕೆಗಳನ್ನು ಓದುವುದಕ್ಕಾಗಿ ನಿಯಮವನ್ನು ಸಡಿಲಿಸಿಕೊಳ್ಳುತ್ತಿದ್ದೆವು. ಕೆಲವೊಮ್ಮೆ ನಾನಾ ಮೂಲಗಳಿಂದ ಅಕ್ರಮವಾಗಿ ಸಂಪಾದಿಸಿಕೊಂಡಿರುತ್ತಿದ್ದ ‘ಹಾಯ್ ಬೆಂಗಳೂರು’, ಮಾಂಡೋವಿ, ಹೇಳಿ ಹೋಗು ಕಾರಣ, ಪರಿಸರದ ಕಥೆ, ವಿಶ್ವ ವಿಸ್ಮಯದಂತಹ ಪುಸ್ತಕಗಳ ಓದಿಗಾಗಿ ನಮ್ಮ ಭಾನುವಾರವನ್ನು ಮೀಸಲಿಡುತ್ತಿದ್ದೆವು. ತರಗತಿಗೆ ಸಂಬಂಧ ಪಟ್ಟ ಪುಸ್ತಕ ಓದುವುದು ಬಿಟ್ಟು ಕೆಲಸಕ್ಕೆ ಬಾರದವುಗಳನ್ನು ಓದುತ್ತಿದ್ದ ನಮ್ಮನ್ನು ಕಂಡು ಅನೇಕ ಗೆಳೆಯರು ಪ್ರಾಮಾಣಿಕವಾಗಿ ಸಂತಾಪ ಸೂಚಿಸುತ್ತಿದ್ದರಾದರೂ ನಮ್ಮ ಸಾಂಕ್ರಾಮಿಕ ಖಾಯಿಲೆ ಅವರಿಗೂ ತಗುಲಿಕೊಂಡೀತೆಂದು ಹತ್ತಿರ ಬರಲು ಹೆದರುತ್ತಿದ್ದುದರಿಂದ ಭಾನುವಾರಗಳಲ್ಲಿ ನಾವು ಅವರ ‘ಧರ್ಮ ಬೋಧನೆ’ಯಿಂದ ಪಾರಾಗುತ್ತಿದ್ದೆವು!
Ignorance is bliss ಎಂದು *ತಿಳಿದವರು* ಹೇಳುತ್ತಾರೆ. ಅದರಂತೆ ಆ ತಿಳುವಳಿಕೆಯಿಲ್ಲದ ದಿನಗಳಲ್ಲೇ ನಮ್ಮ ಬದುಕು pause ಆಗಿಬಿಟ್ಟಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸುತ್ತದೆ. ತಿಳುವಳಿಕೆ ಬರುತ್ತಾ ನಾವು ಭಾವಿಸಿಕೊಂಡಿದ್ದ ದೇವ-ದೇವತೆಗಳ ನಿಜಬಣ್ಣ ಬಯಲಾಗತೊಡಗಿತು. ಪರದೆಯ ಮೇಲೆ ಕಂಡ ಬೆಳ್ಳಿ ಬಣ್ಣದ ಹೀರೋ ಮೇಕಪ್ ಕಳಚಿ ಎದುರು ಬಂದಾಗ ಆಗುವ ಆಘಾತ ಪತ್ರಕರ್ತರ ನಿಜಮುಖ ತಿಳಿದಾಗ ಆಗತೊಡಗಿತು. ಹಿಂದೆ ಭಾವಿಸಿದ್ದ ಹಾಗೆ ಪತ್ರಕರ್ತರು ಜಗತ್ತಿಗೆ ಪ್ರಾಮಾಣಿಕತೆ, ಅಕೌಂಟೆಬಿಲಿಟಿ, ದಕ್ಷತೆ ಮುಂತಾದ ಸದ್ಗುಣಗಳನ್ನು, ಆದರ್ಶದ ಸಗಟನ್ನು ಸಾಲ ಕೊಡಬಲ್ಲ ಧನಿಕರು ಅಲ್ಲ ಎಂಬುದು ತಿಳಿಯತೊಡಗಿತು. ಅಸಲಿಗೆ ಬಹುತೇಕರಲ್ಲಿ ಈ ದಾಸ್ತಾನಿನ ಕೊರತೆ ತೀವ್ರವಾಗಿರುತ್ತದೆ. ಹಲವು ಸಂದಭ್ರಗಳಲ್ಲಿ ನಮ್ಮಂತಹ ಸಾಮಾನ್ಯರು ಒಟ್ಟುಗೂಡಿ ಕೈಲಾದ ಸಹಾಯ ಮಾಡದ ಹೊರತು ಅವರು ಸಂಪೂರ್ಣ ದಿವಾಳಿಯೆದ್ದು ಹೋಗುತ್ತಾರೆ ಎಂಬ ಜ್ಞಾನೋದಯವಾಗುತ್ತಿದ್ದ ಹಾಗೆ ಕಟ್ಟಿಕೊಂಡಿದ್ದ ಆಶಾಗೋಪುರಗಳು ಕಣ್ಣ ಮುಂದೆ ಕುಸಿದು ಬೀಳಲು ಶುರುವಾದವು. ಇಡೀ ಕಟ್ಟಡವೇ ಕುಸಿದು ಬಿದ್ದ ನಂತರವೂ ಆಕಾಶದತ್ತ ಮುಖ ಮಾಡಿ ಅಪರಿಮಿತ ಆಶಾಭಾವದೊಂದಿಗೆ ಹಲ್ಲು ಕಚ್ಚಿ ಹಿಡಿದು ನಿಂತಿರುವ ಪಿಲ್ಲರುಗಳ ಹಾಗೆ ಅಲ್ಲಲ್ಲಿ ಕಂಡ ಕೆಲವು ಅಪವಾದಗಳು ನಿಂತಿವೆಯಾದರೂ ಮನಸ್ಸನ್ನೆಲ್ಲಾ ಕುಸಿದು ಬಿದ್ದ ಕಟ್ಟಡದ ಧೂಳು ಆಕ್ರಮಿಸಿಕೊಂಡಿದೆ.
………………ಏನನ್ನೋ ಬರೆಯಲು ಹೊರಟು ಅದು ಮತ್ತೇನೋ ಆಗಿಬಿಟ್ಟ ನನ್ನ ಹಲವು ಬರಹಗಳ ಸಾಲಿಗೆ ಇದೂ ಸೇರುತ್ತದೆ. ಅಸಲಿಗೆ ನಾನು ಬರೆಯಬೇಕೆಂದಿದ್ದದ್ದು ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ಟರು ಶಾರದಾ ಪ್ರಸಾದರು ನಿಧನರಾದಾಗ ಸಂಭಾವನೆಗೆ ಸಂಬಂಧಿಸಿದ ಹಾಗೆ ಬರೆದುಕೊಂಡಿದ್ದ ಹಸಿ ಹಸೀ ಸುಳ್ಳು ಹಾಗೂ ಇತ್ತೀಚಿಗಿನ ಮತಾಂತರ ಸಂವಾದದಲ್ಲಿ ಪ್ರಕಟವಾದ ತಾರಿಣಿಯವರ ಲೇಖನದ ಪ್ರಕರಣದ ಬಗ್ಗೆ. ಪ್ರತಿವಾರ ಪತ್ರಿಕೋದ್ಯಮದ ಆದರ್ಶಗಳ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಭಟ್ಟರು ಹೀಗೆ ಮಾಡಿರುವುದು ತಿಳಿದು ಅರಗಿಸಿಕೊಳ್ಳಲು ಕೊಂಚ ಕಷ್ಟವಾಯಿತು. ಹಿಂದೆ ಅವರ ಲೇಖನಗಳಲ್ಲಿನ ಎರರ್ಸ್ ಬಗ್ಗೆ ಓದಿದಾಗಲೂ ಹೀಗೇ ಅನ್ನಿಸಿತ್ತು. ಆ ಬಗ್ಗೆ ಬರೆಯೋಣ ಅಂತ ಹೊರಟು ಎಲ್ಲೆಲ್ಲೋ ತಲುಪಿ ಕಡೆಗೆ ಏನೋ ಆಗಿ ಹೋಯಿತು. ಮದುವೆ ಮುಗಿದ ಮೇಲೆ ನೋಡಿದರೆ ಮದುವೆ ಗಂಡೇ ಬದಲಾಗಿದ್ದಾನೆ ಎಂಬ ಪಾಡು!

Thursday, November 20, 2008

ಆರಂಭವೇ ಉಪಸಂಹಾರವೂ...

ನಿರೀಕ್ಷಿಸಿದಂತೆ ಭೈರಪ್ಪನಿಂದ ಮತಾಂತರ ಸಂವಾದಕ್ಕೆ ಉಪಸಂಹಾರವಾಗಿದೆ. ವಿಶ್ವೇಶ್ವರ ಭಟ್ಟರು ಎಂದಿನಂತೆ ತಮ್ಮ ಬುದ್ಧಿಯನ್ನು ತೋರಿಸಿದ್ದಾರೆ. ಭೈರಪ್ಪನ ಆರಂಭದ ಬರಹಕ್ಕೆ ಅನೇಕರು ಪ್ರತಿಕ್ರಿಯೆ ವ್ಯಕ್ತಪಡಿಸಿ ಸಂವಾದದಲ್ಲಿ ಭಾಗವಹಿಸಿದ್ದರು. ಅವರಲ್ಲಿ ಅನೇಕರ ಪ್ರಶ್ನೆಗಳನ್ನು, ಆಲೋಚನೆಗಳನ್ನು 'ದೂರು ದಾಖಲಿಸಿಕೊಳ್ಳುವ ಪೊಲೀಸರ ಮಾತಿಗೆ' ಹೋಲಿಸಿ ಎಂದಿನಂತೆ ತಮ್ಮ ವಿತಂಡವಾದವನ್ನು ಮುಂದುವರಿಸಿದ್ದಾರೆ. ಪ್ರಗತಿಪರ ಲೇಖಕರು ಸಂವಾದದ ಹಾದಿಯಲ್ಲಿ ಎತ್ತಿದ ಬಹುಮುಖ್ಯ ಪ್ರಶ್ನೆ - ದಲಿತರು ಹಿಂದೂ ಧರ್ಮದ ಭಾಗವೇ ಅಲ್ಲದಿರುವಾಗ, ಅವರು ಕ್ರೈಸ್ತ ಧರ್ಮ ಅಪ್ಪಿಕೊಂಡರೆ ಅದು ಮತಾಂತರವಾಗುವುದು ಹೇಗೆ? ಭೈರಪ್ಪನ ಸುದೀರ್ಘ ಉಪಸಂಹಾರದಲ್ಲಿ ಈ ಪ್ರಶ್ನೆಗೆ ಉತ್ತರವಿಲ್ಲ.
ಭೈರಪ್ಪನನ್ನೂ ಒಳಗೊಂಡು ಹಿಂದೂ ಧರ್ಮದ ಕಟ್ಟಾಳುಗಳು ಎಂಬಂತೆ ವರ್ತಿಸುತ್ತಿರುವ ಬಹುತೇಕರು - ಯಾರು ಮುಸಲ್ಮಾನರಲ್ಲವೋ, ಯಾರು ಕ್ರೈಸ್ತರಲ್ಲವೋ, - ಅವರನ್ನೆಲ್ಲ ಹಿಂದುಗಳೆಂದು ಸಾರುತ್ತಾರೆ. (ಜೈನ, ವೀರಶೈವ, ಬೌದ್ಧ ಧರ್ಮಗಳನ್ನೂ ಹಿಂದೂ ಧರ್ಮದ ಅಂಗಗಳೆಂದೇ ಇವರ ವಾದ. ಈ ಆಲೋಚನೆಯನ್ನು ಪ್ರಶ್ನಿಸುವುದು ಭೈರಪ್ಪನವರ ಪ್ರಕಾರ ಅನೈತಿಕ.)
ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಎಂದರೆ, ಇಂಡಿಯಾದಲ್ಲಿ ತಮ್ಮನ್ನು ಹಿಂದುಗಳೆಂದು ಒಪ್ಪಿಕೊಂಡವರು . ಅವರು ವರ್ಣಾಶ್ರಮ ಪದ್ಧತಿಯಲ್ಲಿ ನಂಬಿಕೆ ಇದ್ದವರು. ಈ ದೇಶದ ಬುಸಂಖ್ಯಾತ ಶೂದ್ರರ ಮೇಲೆ -
'ಹಿಂದೂ'ಗಳೆಂಬ ಆರೋಪವನ್ನು ವ್ಯವಸ್ಥಿತವಾಗಿ ಹೇರಲಾಗಿದೆ.
ಊರ ಮುಂದಿನ ಮಾರಮ್ಮ, ಗುಡ್ಡದ ಮೇಲಿನ ವೀರಭದ್ರ, ಮಲೆಯ ಮಹದೇಶ್ವರ..ಹೀಗೆ ಸ್ಥಳೀಯ ಆರಾಧ್ಯ ದೈವಗಳಿಗೆ ನಡೆದುಕೊಂಡು ಬರುತ್ತಿದ್ದ ಶೂದ್ರರನ್ನೆಲ್ಲ ಕಾಲಾನುಕ್ರಮದಲ್ಲಿ ಹಿಂದೂಗಳೆಂದು ಕರೆಯಲಾಯಿತು. ಅವರಿಗೆ ವರ್ಣಾಶ್ರಮ, ಅದರ ಹಿಂದಿನ ಹುನ್ನಾರಗಳು ಅರ್ಥವಾಗಲೇ ಇಲ್ಲ. ಅದೆಲ್ಲವೂ ಅರ್ಥವಾಗದಿರಲೆಂದು ಅಕ್ಷರ ಜ್ಞಾನವನ್ನು ನಿರಾಕರಿಸಿದರು. ಹಾಗಾಗಿ ಯಾವುದೇ ಶೂದ್ರ ಕ್ರೈಸ್ತ ಧರ್ಮ ಸ್ವೀಕರಿಸಿದರೆ, ಅದು ಮತಾಂತರವಾಗುವುದಿಲ್ಲ. ಹಾಗಾಗಿ ಭೈರಪ್ಪನ ವಾದದ ಮುಊಲ ಆಧಾರವೇ ಶಿಥಿಲಗೊಳ್ಳುತ್ತದೆ.
ಭೈರಪ್ಪ ತಮ್ಮ ಉಪಸಂಹಾರದಲ್ಲಿ ಅಸ್ಪೃಶ್ಯತೆ ಕುರಿತು ಮಾತನಾಡಿದ್ದಾರೆ. ಅನಿಷ್ಟ ಪದ್ಧತಿ ವಿರುದ್ಧ ಮೇಲ್ವರ್ಗದ ಜನತೆಯೇ ಬಹಳವಾಗಿ ಹೋರಾಡಿದ್ದಾರಂತೆ. ಸಂವಿಧಾನದಲ್ಲಿ ಅಸ್ಪೃಶ್ಯತೆ ವಿರುದ್ಧದ ಕಾನೂನಿಗೆ ಅಂಬೇಡ್ಕರ್ ಗಿಂತ ಮೇಲ್ವರ್ಗದವರ ಪಾತ್ರವೇ ದೊಡ್ಡದು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಮಾತು ಮುಂದುವರೆಸಿ, ಸದ್ಯ ಅಸ್ಪೃಶ್ಯತೆ ಕೇವಲ ಗ್ರಾಮೀಣ ಮಟ್ಟದಲ್ಲೆಲ್ಲೋ ಸಣ್ಣದಾಗಿ ಚಾಲ್ತಿಯಲ್ಲಿದ್ದು, ಅದನ್ನು ವಿದ್ಯಾವಂತ ದಲಿತರು ಉತ್ಪ್ರೇಕ್ಷೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಈ ಮಾತಿನಿಂದ ಸ್ಪಷ್ಞವಾಗುವ ಒಂದು ಅಂಶವೆಂದರೆ, ಭೈರಪ್ಪನಿಗೆ ವಾಸ್ತವ ಜ್ಞಾನ ಕಡಿಮೆ.
ಭೈರಪ್ಪನಿಗೆ ಅಸ್ಪೃಶ್ಯತೆ ಎಲ್ಲಿ ಹೆಚ್ಚು ಚಾಲ್ತಿಯಲ್ಲಿದೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ, ತಮ್ಮ ದೀರ್ಘ ಲೇಖನವನ್ನು ಪ್ರಕಟಮಾಡಿದ ವಿಜಯ ಕರ್ನಾಟಕ ಕಚೇರಿಯನ್ನೊಮ್ಮೆ ಭೇಟಿ ನೀಡಲಿ. ಅಲ್ಲಿ ಯಾವ ಜಾತಿಯವರಿಗೆ ಹೆಚ್ಚಿನ ಮಾನ್ಯತೆ ಇದೆ, ಅಲ್ಲಿರುವ ದಲಿತರ ಸಂಖ್ಯೆ ಎಷ್ಟು ಎಂಬ ಸಂಗತಿಗಳನ್ನು ಕೊಂಚ ವಿಚಾರಿಸಲಿ. ಹಾಗೆಯೇ ಎಲ್ಲಾ ಪತ್ರಿಕಾಲಯಗಳಿಗೆ ಹೋಗಿ ಬನ್ನಿ, ಆಯಕಟ್ಟಿನ ಜಾಗಗಳಲ್ಲಿರುವವರ್ಯಾರು? ಅವರ ಜಾತಿ ಯಾವುದು? ಸ್ವತಂತ್ರ ಬಂದು ಇಷ್ಟು ವರ್ಷವಾದರೂ, ಒಬ್ಬೇ ಒಬ್ಬ ದಲಿತ ಮುಖ್ಯವಾಹಿನಿ ಪತ್ರಿಕೆಯ ಸಂಪಾದಕ ಹುದ್ದೆಗೆ ಏರಲು ಏಕೆ ಸಾಧ್ಯವಾಗಿಲ್ಲ ಎಂಬುದರ ಬಗ್ಗೆ ಯೋಚಿಸಿ ನೋಡಿ, ಆಗ ಕ್ರೂರವಾಗಿ ಚಾಲ್ತಿಯಲ್ಲಿರುವ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಗೋಚರಿಸಬಹುದು.
ಮುಖ್ಯವಾಗಿ, ವಿಜಯ ಕರ್ನಾಟಕದಲ್ಲಿ ಚರ್ಚೆ ಎಲ್ಲಿ ಆರಂಭವಾಗಿತ್ತೋ ಅಲ್ಲಿಗೆ ಬಂತು ನಿಂತಂತಾಗಿದೆ. ಹಾಗೆ ನೋಡಿದರೆ, ಇಡೀ ಚರ್ಚೆಗೆ ಉಪಸಂಹಾರವಾಗಬಲ್ಲ ಲೇಖನ ಬರೆದದ್ದು ಚಂದ್ರಶೇಖರ ಪಾಟೀಲರು. ಎಲ್ಲಾ ಜಾತಿಯವರು ಸದ್ಯ ಮಾಡಬೇಕಿರುವುದೇನು ಎಂಬುದನ್ನು ಸೂಚಿಸಿ ತಮ್ಮ ಲೇಖನ ಮುಗಿಸಿದ್ದರು. ಅದರೊಂದಿಗೆ ಸಂವಾದವೂ ಕೊನೆಗೊಂಡಿದ್ದರೆ, ಒಂದು ಅರ್ಥ ಇರುತ್ತಿತ್ತು. ಈಗ ಭೈರಪ್ಪನವರ ಮೊದಲ ಲೇಖನಕ್ಕೆ ಪ್ರತಿಕ್ರಿಯೆ ನೀಡಿದವರನ್ನು ಟೀಕಿಸಲು ಭೈರಪ್ಪನಿಗೆ ಒಂದು ಅವಕಾಶ ದೊರಕಿತು. ಆದರೆ ಭೈರಪ್ಪನ ಉಪಸಂಹಾರದಲ್ಲಿ ಎತ್ತಿದ ಅಂಶಗಳಿಗೆ ಪ್ರತಿಕ್ರಿಯಿಸಲು ಸಂವಾದದಲ್ಲಿ ಪಾಲ್ಗೊಂಡ ಇತರರಿಗಿಲ್ಲ.

Wednesday, November 19, 2008

ಪ್ರವಾಸದಲ್ಲಿದ್ದೆವು...

ಒಂದು ವಾರ ಕಾಲ ಸುದ್ದಿಮಾತು ತಣ್ಣಗಿತ್ತು. ಎಲ್ಲಿ ಹೋದರು, ಏನನ್ನೂ ಬರೆದಿಲ್ವಲ್ಲ ಈ ಜನ, ಎಂದು ಪ್ರತಿದಿನ ಬ್ಲಾಗ್ ಗೆ ಇಣುಕುವವರು ಅಂದುಕೊಂಡರು. ಮತ್ತೆ ಕೆಲವರು ಸದ್ಯ ಪೀಡೆಗಳ ಕಾಟವಿಲ್ಲ ಎಂದುಕೊಂಡಿರಬೇಕು.
ವಿಷಯ ಏನಪ್ಪಾ ಅಂದ್ರೆ, ನಾವು ಮಿತ್ರರೆಲ್ಲ ಉತ್ತರ ಭಾರತ ಪ್ರವಾಸ ಹೋಗಿದ್ದೆವು. ದೆಹಲಿಯಲ್ಲಿ ಎರಡು ದಿನಗಳ ಮಟ್ಟಿಗೆ ಇದ್ದು ಮೊನ್ನೆ ಸೋಮವಾರ, ಜೆಡಿಎಸ್ ಸಮಾವೇಶ ನಡೆಯುವ ಹೊತ್ತಿಗೆ ಹಿಂತಿರುಗಿದೆವು. ದೆಹಲಿಯಲ್ಲಿ ಕೆಲ ಪತ್ರಿಕಾಲಯಗಳಿಗೆ ಭೇಟಿ ನೀಡುವ ಅವಕಾಶ ನಮ್ಮದಾಗಿತ್ತು. ಅಂತೆಯೇ ಅಲ್ಲಿನ ಕರ್ನಾಟಕಕ್ಕೆ ಸಂಬಂಧಪಟ್ಟ ಬೆಳವಣಿಗೆಯೊಂದರ ಬಗ್ಗೆ ವರದಿ ಮಾಡಬೇಕಿದೆ. ಅದನ್ನು ಸಾಧ್ಯವಾದರೆ, ನಾಳೆ ಪ್ರಕಟಿಸುತ್ತೇವೆ. ಒಂದು ವಾರ ಕಾಲ ಬ್ಲಾಗ್ ಕದ ಬಡಿದುಕೊಂಡು ಸುಮ್ಮನಿದದ್ದಕ್ಕೆ ಕ್ಷಮೆ ಇರಲಿ. ಮುಂದೆಯುಊ ಹೀಗೆ ಪ್ರವಾಸ ಹೋದಾಗ ಏನನ್ನೂ ಬರೆಯದಿದ್ದರೆ, ಮನ್ನಿಸಿ.

Tuesday, November 18, 2008

ವಿಕದಲ್ಲಿ ತಾರಿಣಿ ಪತ್ರ, ಸಮಜಾಯಿಷಿ

ಯೆಸ್. ವಿಜಯ ಕರ್ನಾಟಕ ಸಂಪಾದಕರು ತಾರಿಣಿ ಚಿದಾನಂದ ಅವರ ಪತ್ರವನ್ನು ಪ್ರಕಟಿಸಿದ್ದಾರೆ. ಅದರೊಂದಿಗೆ ತಾವು ಲೇಖನವನ್ನು ಪ್ರಕಟಿಸಿದ್ದಕ್ಕೆ ಸಮಜಾಯಿಷಿ ನೀಡಿದ್ದಾರೆ. ಓದುಗರೊಬ್ಬರು ಗಮನಕ್ಕೆ ತಂದರು ಎಂಬ ಕಾರಣಕ್ಕೆ ಇವರು ಏಕಾಏಕಿ ಮುಊಲ ಲೇಖಕರ ಒಪ್ಪಿಗೆ ಇಲ್ಲದೆ ಪ್ರಕಟಿಸುವುದು ಎಷ್ಟು ಸರಿ? ಲೇಖನ ಒಂದು ಕೃತಿಯಿಂದ ಆಯ್ಕೆಮಾಡಿಕೊಂಡಿದ್ದು. ಇಡೀ ಕೃತಿಗೆ ಒಂದು ಬಂಧ ಇರುತ್ತೆ. ಅಲ್ಲಿಯ ಬರಹಗಳನ್ನು ಬಿಡಿಯಾಗಿ ಓದಿ, ಯಾವುದೋ ಒಂದು ವಿಚಾರದ ಬಗ್ಗೆ ಕುವೆಂಪು ಧೋರಣೆ ಇಂತಹದಿತ್ತು ಎಂದು ಒಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.
ಬ್ರಿಟಿಷರು ಈ ಭಾರತಕ್ಕೆ ಬರದೇ ಇದ್ದಿದ್ದರೆ ತಾವು ಯಾವುದೋ ಮನೆಯಲ್ಲಿ ಸಗಣಿ ಬಾಚುವ ಕೆಲಸಕ್ಕೆ ಸೀಮಿತಗೊಳ್ಳಬೇಕಿತ್ತು ಎಂಬುದನ್ನೂ ಕುವೆಂಪು ಮತ್ತೊಂದು ಸಂದರ್ಭದಲ್ಲಿ ಹೇಳುತ್ತಾರೆ. ಹಾಗಂತ ಅದೊಂದೆ ವಾಕ್ಯವನ್ನು ಹಿಡಿದುಕೊಂಡು, ಕುವೆಂಪು ವಸಾಹತುಶಾಹಿ ಪರವಾಗಿದ್ದರು ಎಂದು ಹೇಳಲಾಗುವುದಿಲ್ಲ.
ಇದೆಲ್ಲಕ್ಕಿಂತ ಮುಖ್ಯವಾಗಿ, ತಾರಿಣಿಯವರಿಗೆ ಮತಾಂತರ ಚರ್ಚೆಯಲ್ಲಿ ತಮ್ಮ ಬರಹ ಪ್ರಕಟವಾಗಿದ್ದರ ಬಗ್ಗೆಯೇ ಬೇಸರ ಇದೆ. ಅನೇಕರಿಗೆ, ಒಂದು ಪತ್ರಿಕೆ, ಒಂದು ಸಂವಾದದ ಜೊತೆ ಗುರುತಿಸಿಕೊಳ್ಳಲು ವಿರೋಧ ಇರುತ್ತದೆ. ಸಂಪಾದಕರಾದವರು ಅಂತಹ ಭಾವನೆಗಳಿಗೆ ಬೆಲೆ ಕೊಡಬೇಕಾಗುತ್ತದೆ. ಯಾರೋ ಓದುಗರು ಗಮನಕ್ಕೆ ತಂದರು ಎಂದು ಬರಹವನ್ನು ಪ್ರಕಟಿಸಿಬಿಟ್ಟರೆ? ತಾರಿಣಿಯವರೇನು ಯಾವುದೋ ದೂರದ ದೇಶದಲ್ಲಿದ್ದರೆ? ಮೈಸೂರಿನ ಉದಯರವಿಯಲ್ಲಿದ್ದಾರೆ. ಒಂದು ದೂರವಾಣಿ ಕರೆ ಮಾಡಿ ಒಪ್ಪಿಗೆ ಕೇಳಬಹುದಿತ್ತು. ಸಂಪಾದಕರಿಗೆ ಲೇಖಕರ ಬಗ್ಗೆ ಇರುವ ಈ taken- for -granted ವರ್ತನೆಯ ಬಗ್ಗೆಯೇ ಅನೇಕರಿಗೆ ಬೇಸರ ಇದೆ.

Wednesday, November 12, 2008

ಕುವೆಂಪುಗೂ ಜನಿವಾರ ತೊಡಿಸಲು ಹೊರಟ ವಿಕ

ಅನುಮತಿ ಇಲ್ಲದೆ ತಾರಿಣಿ ಬರಹ ಪ್ರಕಟ
ಎಲ್. ಕೊಡಸೆಯವರು ಎರಡು ದಿನಗಳ ಹಿಂದೆ ಒಂದು ಪ್ರತಿಕ್ರಿಯೆ ನೀಡಿ ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರು ಕುವೆಂಪು ಮಗಳು ತಾರಿಣಿಯವರ ಪುಸ್ತಕದಿಂದ ಒಂದು ಬರಹವನ್ನು ಮತಾಂತರ ಸಂವಾದಕ್ಕೆ ಬಳಸಿಕೊಂಡಿರುವುದರ ಬಗ್ಗೆ ಸುದ್ದಿಮಾತು ಗಮನ ಸೆಳೆದಿದ್ದರು. ಲೇಖನ ಪ್ರಕಟಿಸುವ ಮುನ್ನ ತಾರಿಣಿಯವರ ಅನುಮತಿ ಪಡೆದಿರಲಾರರು ಎಂದು ಸಂಶಯ ವ್ಯಕ್ತಪಡಿಸಿದ್ದರು. ಅವರ ಸಂಶಯ ನಿಜವಾಗಿದೆ.
ಅನುಮತಿ ಇಲ್ಲದೆ ತಮ್ಮ ಲೇಖನ ಪ್ರಕಟಿಸಿರುವ ಬಗ್ಗೆ ತಾರಿಣಿಯವರು ಗರಂ ಆಗಿದ್ದಾರೆ. ವಿಕ ಸಂಪಾದಕರಿಗೆ ಒಂದು ಪತ್ರ ಬರೆದು ತಮ್ಮ ಬೇಸರ ತೋಡಿಕೊಂಡಿದ್ದಾರೆ. ತಮ್ಮ ಪತ್ರವನ್ನು ಮತಾಂತರ ಸಂವಾದ ಪುಟದಲ್ಲಿಯೇ ಪ್ರಕಟಿಸ ಬೇಕೆಂದು ಒತ್ತಾಯಿಸಿದ್ದಾರೆ.
ಸಂಪಾದಕರು ಅನುಮತಿಯಿಲ್ಲದೆ ಬರಹವನ್ನು ಪ್ರಕಟಿಸಿದ್ದು ಮೊದಲನೆ ಪ್ರಮಾದ. ನಂತರ ತಾರಿಣಿಯವರ ಪತ್ರವನ್ನು ಪ್ರಕಟಿಸದೆ ಪತ್ರಿಕೋದ್ಯಮಕ್ಕೆ ಅಪಚಾರ ಎಸಗಿದ್ದಾರೆ. ಇದೇ ಸಂಪಾದಕರು ಕೆಲ ದಿನಗಳ ಕಾಲ ಪತ್ರಿಕೋದ್ಯಮ ಹೇಳಿಕೊಟ್ಟದ್ದೂ ಉಂಟು!!!
ತಾರಿಣಿಯವರ ಪತ್ರ ಪೂರ್ಣ ಪಾಠ ಇಲ್ಲಿದೆ...

ಸಂಪಾದಕರು
ವಿಜಯ ಕರ್ನಾಟಕ

ಸನ್ಮಾನ್ಯರೇ,

’ಮತಾಂತರ - ಒಂದು ಸಂವಾದ್’ ಕ್ಕೆ ಸಂಬಂಧಿಸಿದಂತೆ ಪರ-ವಿರೋಧಗಳು, ವಾದ ವಿವಾದಗಳನ್ನು ನೋಡುತ್ತಿದ್ದೇನೆ. ಆದರೆ ಇಂದು ಬೆಳಗ್ಗೆ ತಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಹೆಸರಿನ ಲೇಖನ ಕಂಡು ಆಶ್ಚರ್ಯ, ನೋವು, ಬೇಸರ ಒಟ್ಟಿಗೆ ಆಯಿತು.
ಮೊದಲನೆಯದಾಗಿ ನಾನು ವಯಕ್ತಿಕವಾಗಿ ಈ ಪ್ರತಿಕ್ರಿಯೆಯಲ್ಲಿ ಭಾಗಿಯಾಗಿಲ್ಲ. ತಮ್ಮ ಪತ್ರಿಕೆಯಲ್ಲಿ ಮೇಲಿನ ಶೀರ್ಷಿಕೆಯಲ್ಲಿ ಈ ಭಾಗವನ್ನು ಪ್ರಕಟಿಸಿ ಎಂದು ಬರೆದುಕೊಂಡದ್ದಂತೂ ಇಲ್ಲವೇ ಇಲ್ಲ. ಹೀಗಿರುವಾಗ ನನ್ನನ್ನು ಅನಾವಶ್ಯಕವಾಗಿ ಈ ಸಂವಾದದಲ್ಲಿ ಎಳೆದಿದ್ದೀರಿ.
ಪತ್ರಿಕೆಯಲ್ಲಿ ಪ್ರಕಟಿಸಿರುವ ಭಾಗವು ನನ್ನ ’ಮಗಳು ಕಂಡ ಕುವೆಂಪು’ ಕೃತಿಯಲ್ಲಿ ಬರೆದದ್ದು. ಆ ಭಾಗವನ್ನು ತಾವು ನನ್ನ ಕೃತಿಯಿಂದ ತೆಗೆದುಕೊಂಡಿದ್ದೀರಿ ಮತ್ತು ನಾನೇ ತಮಗೆ ಬರೆದು ಸದರಿ ಸಂವಾದಕ್ಕೆ ನನ್ನ ಲೇಖನ ಪ್ರಕಟಿಸಲು ಕೋರಿದೆನು ಎಂಬ ಭಾವನೆ ಸಾರ್ವಜನಿಕರಲ್ಲಿ ಉಂಟಾಗುವಂತೆ ಮಾಡಿದ್ದೀರಿ.
ತಾವು ಎಲ್ಲಿಂದಲೋ ತೆಗೆದ ಯಾವುದನ್ನೇ ಬೇಕಾದರೂ ಈ ಸಂವಾದದಲ್ಲಿ ಪ್ರಕಟಿಸಬಹುದೇ? ಇದು ಮುಊಲ ಲೇಖನದ ಬರವಣಿಗೆಯ ಆಶಯವನ್ನು ತಿರುಚಿದಂತಾಗುವುದಿಲ್ಲವೇ? ಮತ್ತು ಅಪಚಾರವಲ್ಲವೇ?
ಕುವೆಂಪು ಅವರ ಬಳಿಗೆ ಯಾವುದೇ ಧರ್ಮದ ಮತ ಪ್ರಚಾರಕರು ಬಂದಾಗಲೂ ಕೂಡಾ ಅವರು ಹೇಳಿ ಕಳುಹಿಸುತ್ತಿದ್ದುದು ಇದನ್ನೇ. ಅಂದು ಬಂದ ಮತ ಪ್ರಚಾರಕರ ನಡವಳಿಕೆ ಬಗೆಗೆ ಹೇಳದಿರುವುದು ಮತ್ತು ದೊಡ್ಡದು ಮಾಡದೇ ಇರುವುದು ಉತ್ತಮ.
ನೀವು ಉದ್ಧರಿಸಿರುವ ನನ್ನ ಬರವಣಿಗೆಯನ್ನು ಕೆಲವರು ವಾದದ ಪರವೆಂದೂ, ಕೆಲವರು ವಾದದ ವಿರೋಧವೆಂದೂ ಗ್ರಹಿಸಿ ನನಗೆ ಫೋನ್ ಮಾಡುತ್ತಿದ್ದಾರೆ. ಇವೆರಡೂ ಅಲ್ಲವೆಂದು ಕುವೆಂಪು ಅವರನ್ನು ಚೆನ್ನಾಗಿ ಬಲ್ಲವರು ಮತ್ತು ನನ್ನ ಪುಸ್ತಕದ ಕಿರು ಅಧ್ಯಾಯವನ್ನು ಓದಿದವರಿಗೆ ತಿಳಿಯುತ್ತದೆ.
ಏನೇ ಆದರೂ ಅನುಮತಿ ಇಲ್ಲದೆ ನನ್ನ ಪುಸ್ತಕದ ಈ ಭಾಗವನ್ನು ತಾವು ಈ ಸಂವಾದದಲ್ಲಿ ಬಳಸಿಕೊಂಡಿರುವುದು ವಯಕ್ತಿಕವಾಗಿ ನನಗೆ ನೋವು ಮತ್ತು ಬೇಸರ ತಂದಿದೆ. ಆದುದರಿಂದ ತಾವು ಪತ್ರಿಕೆಯ ಇದೇ ಕಲಮಿನಲ್ಲಿ ನನ್ನ ಈ ಪತ್ರವನ್ನು ಪ್ರಕಟಿಸಬೇಕೆಂದು ಕೋರುತ್ತೇನೆ.
- ತಾರಿಣಿ ಚಿದಾನಾಂದ

Tuesday, November 11, 2008

ಪತ್ರಿಕೆಗಳ ಪ್ರಸಾರ ಮತ್ತು ಓದುಗರು

ಇಂಡಿಯನ್ ರೀಡರ್ ಶಿಪ್ ಸಮೀಕ್ಷೆಯ ಎರಡನೇ ಸುತ್ತಿನ ವರದಿ ಇದು. ಒಂದು ವರ್ಷದ ಅವಧಿಯಲ್ಲಿ ಕನ್ನಡದ ಪತ್ರಿಕೆಗಳು ಸೇರಿದಂತೆ ದೇಶದ ವಿವಿಧ ಪತ್ರಿಕೆಗಳ ಓದುಗರ ಸಂಖೆಯಲ್ಲಿ ಆಗಿರುವ ವ್ಯತ್ಯಾಸ ಇಲ್ಲಿದೆ.



Sunday, November 9, 2008

'ಡೀಲ್ ಆಗುವ' ಪ್ರಶ್ನೆಯೇ ಇಲ್ಲ!

ಸುದ್ದಿಮಾತಿನ ಬಹುಪರಾಕುಗಳಿಗೆ, ಅನೇಕ ಪ್ರತಿಕ್ರಿಯೆಗಳು ಬಂದಿವೆ. ಓದುಗರು ತಮ್ಮ ತಮ್ಮ ವೈಚಾರಿಕ ಮಟ್ಟಕ್ಕೆ ತಕ್ಕಂತೆ ಪ್ರತಿಕ್ರಿಯಿಸಿದ್ದಾರೆ. ಅವರ ಪದ ಬಳಕೆ, ವಿಚಾರ ಮಂಡನೆ ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ.
ಸುದ್ದಿಮಾತು ವಿಜಯ ಕರ್ನಾಟಕ ವನ್ನು ಹೊಗಳಿದಾಕ್ಷಣ ಇವರೂ ಡೀಲ್ ಆಗಿ ಹೋದರು, ಟ್ರಾಕ್ ಬದಲಾಯಿತು, ಯುಊ-ಟರ್ನ್ ತೆಗೆದುಕೊಂಡರು...ಹೀಗೆ ಅನೇಕ ಅಭಿಪ್ರಾಯಗಳಿವೆ.
ಇಲ್ಲಿ ನಮ್ಮ ಮಾತನ್ನು ಸ್ಪಷ್ಟಪಡಿಸುತ್ತೇವೆ. ವಿಜಯ ಕರ್ನಾಟಕವನ್ನು ಹೊಗಳಿದ್ದು - ವಿಷಯಾಧಾರಿತ. ಅದು ಚರ್ಚೆಯ ಹಾದಿಯಲ್ಲಿ ಅಗ್ನಿ ಶ್ರೀಧರ್, ಚಂಪಾ, ಬರಗೂರು ರಾಮಚಂದ್ರಪ್ಪನಂತಹವರಿಗೆ ಅವಕಾಶ ಮಾಡಿಕೊಟ್ಟದ್ದಕ್ಕಾಗಿ. ವಿಕ ಚರ್ಚೆ ಆರಂಭಿಸಿದ ಧಾಟಿ (ಭೈರಪ್ಪನ ಲೇಖನದಿಂದ), ಅದನ್ನು ಮುಂದುವರೆಸಲು ಪತ್ರಿಕೆಯಲ್ಲೇ ದುಡಿಯುವ ಕೆಲವರು ಬೇರೆ ಹೆಸರಲ್ಲಿ ಬರೆದದ್ದನ್ನಾಗಲಿ, ಶತಾವಧಾನಿ ಗಣೇಶ್ ಎನ್ನುವವರು ಮುಊರು ದಿನಗಳ ಕಾಲ ಬರೆದದ್ದನ್ನಾಗಲಿ, ಪ್ರಗತಿಪರರು ಬರೆದಿರುವುದನ್ನು ಟೀಕಿಸಲೆಂದೇ ಕೆಲ ಲೇಖನಗಳನ್ನು ಸೃಷ್ಟಿಸಿದ್ದನ್ನಾಗಲಿ ಸುದ್ದಿಮಾತು ಯಾವತ್ತಿಗೂ ಟೀಕಿಸುತ್ತದೆ. ಭೈರಪ್ಪನ ಲೇಖನಕ್ಕೆ ಸುದ್ದಿಮಾತು ಪ್ರಕಟಿಸಿದ ಲೇಖನ, ಅದರಲ್ಲಿ ಮಂಡನೆಯಾದ ವಿಚಾರಗಳಿಗೆ ಇಂದಿಗೂ ಬದ್ಧ, ಮುಂದೆಯುಊ.. ಆ ವಿಚಾರದಲ್ಲಿ 'ಡೀಲ್ ಆಗುವ' ಪ್ರಶ್ನೆಯೇ ಇಲ್ಲ!
ಈ ಹಿಂದೆ, ಅನಂತಮುಊರ್ತಿಯವರು ಭೈರಪ್ಪನ ಬರಹದ ಬಗ್ಗೆ ಪ್ರತಿಕ್ರಿಯಿಸಿದ್ದನ್ನು ವಿಜಯ ಕರ್ನಾಟಕ ಪ್ರಸ್ತುತ ಪಡಿಸಿದ ಪರಿ ಓದುಗರಿಗೆ ನೆನಪಿರಬಹುದು. ಎಸ್ಎಂಎಸ್ ಮುಊಲಕ ಅಭಿಪ್ರಾಯ ಸಂಗ್ರಹಿಸಿದರು. ಕೇವಲ ಒಂದು ತೆರನ ಅಭಿಪ್ರಾಯಗಳಿಗೆ ಮಣೆ ಹಾಕಿದರು. ಬೇಸತ್ತು ಮುಊರ್ತಿಯವರು ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುವುದೇ ಬೇಡ ಎಂಬ ನಿರ್ಧಾರಕ್ಕೆ ಬಂದುಬಿಟ್ಟರು. ಮತಾಂತರ ಚರ್ಚೆ ಸಂದರ್ಭದಲ್ಲೂ ವಿಕ ಹಾಗೆ ಮಾಡಲಿಲ್ಲ ಎಂಬುದೇ ಸಮಾಧಾನ. ಅಗ್ನಿ ಶ್ರೀಧರ್ ತಮ್ಮ ಬರಹದ ಕೊನೆಯಲ್ಲಿ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೇ ಇದ್ದರೂ, ವಿಕ ಸಂಪಾದಕರು ಚರ್ಚೆಗೆ ಅನುವು ಮಾಡಿಕೊಟ್ಟದ್ದಕ್ಕೆ ಅಭಿನಂದಿಸಿದ್ದಾರೆ. ಸುದ್ದಿಮಾತಿನ ಅಭಿನಂದನೆಗಳು ಕೂಡಾ ಅಷ್ಟಕ್ಕೇ.
ಚರ್ಚೆ ಹಾದಿಯಲ್ಲಿ, ಬೌದ್ಧ ಧರ್ಮ ಭಾರತದಲ್ಲಿ ಬಹಳ ಕಾಲ ಉಳಿಯದಿರಲು ಯಾರ ಹುನ್ನಾರ ಕಾರಣ, ಯಾರ ಹಿಕಮತ್ತಿನಿಂದ ದಲಿತರು ಸಾವಿರಾರು ವರ್ಷಗಳ ಕಾಲ ಶೋಷಣೆಗೆ ಒಳಗಾದರು; ದಲಿತರು ನಿಜವಾಗಿಯುಊ ಹಿಂದುಗಳೇ, ಅವರು ಮತಾಂತರಗೊಂಡರೆ, ಅದನ್ನು ಮತಾಂತರ ಎನ್ನುವುದು ಸರಿಯೇ..ಎನ್ನುವ ವಿಚಾರಗಳೆಲ್ಲ ಹೊರಬಂದಿವೆ. ಕೆಲ ಓದುಗರಿಗಾದರೂ, ಸತ್ಯ ತಿಳಿದಂತಾಯಿತು.
ಇನ್ನು ಚರ್ಚೆ ಅಂತ್ಯ ಕಂಡಿಲ್ಲ. ಆರಂಭದಂತೆ ಅಂತ್ಯವನ್ನೂ ಭೈರಪ್ಪನಿಂದಲೇ ಮಾಡಿಸುವುದಾದರೆ, ಚರ್ಚೆ ಎಲ್ಲಿ ಆರಂಭವಾಗಿತ್ತೋ ಅಲ್ಲಿಗೇ ಬಂದು ನಿಂತಂತಾಗುತ್ತದೆ. ಯಾವ ರೀತಿಯ ವೈಚಾರಿಕ ಪ್ರಗತಿಯುಊ ಸಾಧ್ಯವಾಗುವುದಿಲ್ಲ. ಚರ್ಚೆ ಹಾದಿಯಲ್ಲಿ ಬಂದ ಎಲ್ಲಾ ಬರಹಗಳನ್ನು ಭಟ್ಟರು ಸೂಕ್ಷ್ಮವಾಗಿ ಓದಿದ್ದೇ ಆದರೆ, ಸತ್ಯ, ಸಮಾನತೆ, ಸೌಹಾರ್ದ ಮನಸ್ಸು ಯಾವ ಬರಹದಲ್ಲಿದೆ ಎಂಬುದು ಅರ್ಥವಾಗಿರುತ್ತದೆ. ಆದರೆ ಅವೆಲ್ಲವನ್ನೂ ಒಪ್ಪಿಕೊಳ್ಳುವ ಮನಸ್ಸು ಭಟ್ಟರಲ್ಲಿ ಇಲ್ಲ ಎನ್ನುವುದು ಈಗಾಗಲೇ ಸಾಬೀತಾದ ಸಂಗತಿ. ಏನು ಮಾಡುತ್ತಾರೋ ಕಾದು ನೋಡೋಣ.

Friday, November 7, 2008

ವಿಜಯ ಕರ್ನಾಟಕಕ್ಕೆ ಬಹುಪರಾಕ್!

ವಿಜಯ ಕರ್ನಾಟಕ ಪ್ರಶಂಸೆಗೆ ಅರ್ಹ.
ಮತಾಂತರ ಸುದ್ದಿ ಭುಗಿಲೆದ್ದಾಗ ವಿಕ ವಸ್ತುನಿಷ್ಠವಾಗಿ ಕೆಲಸ ನಿರ್ವಹಿಸಿತು ಎಂದು ಹೇಳಲಾಗದು. ಆದರೆ ನಂತರದ ದಿನಗಳು ಹಾಗಾಗಲಿಲ್ಲ. ಮತಾಂತರ ಕುರಿತಂತೆ ಚರ್ಚೆಗೆ ವೇದಿಕೆ ಒದಗಿಸಿತು.
ಭೈರಪ್ಪನವರ ಲೇಖನ ತನ್ನ ಅನೇಕ ಅಸಂಬದ್ಧ, ಅಸಂಗತ ವಾದಗಳಿಂದ ಸಂವಾದಕ್ಕೆ ಸದೃಢ ನೆಲೆ ನೀಡಿತು. ಆ ಹೊತ್ತಿಗೆ ಪತ್ರಿಕೆ ಭೈರಪ್ಪರಂತಹ ಕೋಮುವಾದಿಗಳಿಗೆ ವೇದಿಕೆ ಆಗಿಬಿಡ್ತಾ ಎಂದು ಸಂದೇಹ ಓದುಗರಲ್ಲಿ ಮೂಡಿದ್ದು ಸಹಜ.
ತಕ್ಷಣ ಪತ್ರಿಕೆ ತಾನು ವೇದಿಕೆ ಮಾತ್ರ ಎಂದು ಸ್ಪಷ್ಟಪಡಿಸಿತು.
ಮುಕ್ತವಾಗಿ ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಸಂಗತಿ ಎಂದರೆ, ಆರಂಭದ ಕೆಲ ಲೇಖನಗಳನ್ನು ಹೊರತು ಪಡಿಸಿ, ಉಳಿದೆಲ್ಲ ಸಂದರ್ಭದಲ್ಲಿ ಪತ್ರಿಕೆ ವೇದಿಕೆಯಾಗಿಯೇ ಕಾರ್ಯನಿರ್ವಹಿಸಿದೆ.
ಧೋರಣೆಯಲ್ಲಿ ವಿಕದಿಂದ ಸದಾ ಮಾರು ದೂರದಲ್ಲಿ ನಿಲ್ಲುವ ಅಗ್ನಿ ಶ್ರೀಧರ್ ಗೂ ಅವಕಾಶ ಕೊಟ್ಟಿದ್ದು ಅಚ್ಚರಿ ಮೂಡಿಸಿತ್ತು.
ಶ್ರೀಧರ್ ತಮ್ಮ ಆಳವಾದ ಸಂಗ್ರಹಯೋಗ್ಯ ಲೇಖನದಿಂದ ಓದುಗರನ್ನು ಗೆದ್ದರು. ನಂತರದಲ್ಲಿ ಬರಗೂರು ರಾಮಚಂದ್ರಪ್ಪ, ಎನ್. ಎಸ್. ಶಂಕರ್, ಜಿ.ಕೆ. ಗೋವಿಂದರಾವ್, ಪೇಜಾವರ ಶ್ರೀ, ಎನ್.ಕೆ ಹನುಮಂತಯ್ಯ, ಬಿ.ಎಲ್ ವೇಣು, ಚಂಪಾ, ಜೆಡಿಎಸ್ ಶಾಸಕ ವೈ.ಎಸ್.ವಿ ದತ್ತ ಅನೇಕರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಸದ್ಯ ಮತಾಂತರದ ವಿಭಿನ್ನ ಮಜಲುಗಳು, ಜಾತಿ ಸಂಘರ್ಷ, ವರ್ಣಾಶ್ರಮ ಪದ್ಧತಿ ಎಲ್ಲವೂ ಚರ್ಚೆಗೆ ಒಳಪಟ್ಟಿವೆ. ಇಂತಹದೊಂದು ಚರ್ಚೆ ಅಗತ್ಯವಿತ್ತು.
ಇಂದಿನ ಸ್ಪರ್ಧಾತ್ಮಕ ಪತ್ರಿಕೋದ್ಯಮದಲ್ಲಿ ಒಂದು ಪುಟವನ್ನು ಚರ್ಚೆಗೆಂದೇ ಮೀಸಲಿಟ್ಟು, ಅದರ ಚರ್ಚೆಯ ಗಂಭೀರತೆಯನ್ನು ಕಾಪಾಡಿಕೊಂಡಿ ಬರುವುದು ಸಾಮಾನ್ಯ ಕೆಲಸವಲ್ಲ. ಈ ಕಾರಣಕ್ಕೆ ವಿಶ್ವೇಶ್ವರ ಭಟ್ ರಿಗೆ, ಅವರ ಉತ್ಸಾಹಿ ತಂಡಕ್ಕೆ ಅಭಿನಂದನೆಗಳು.

Thursday, November 6, 2008

Fellowships for dalits/adivasis

Navayana, award-winning publisher, on anticaste issues, is facilitating the training of five dalits/adivasis through the PG Certificate Course in Editing and Publishing conducted by the School of Cultural Texts and Records, Jadavpur University, Kolkata.

AVARNA is a pioneering initiative towards ensuring editorial diversity in the publishing industry in India. Dalit and adivasi graduates, below 35 years of age, must email their CVs to avarna.navayana@gmail.com by 28 Nov 2008.

Ten short-listed applicants will be paid return train fare to attend a screening test on 22 December 2008 in Kolkata.
Five selected candidates, will each receive a stipend of Rs 5,000 per month. Navayana will cover the course fees. Course period: January—April 2009.

For further details visit www.navayana.org or editpub.blogspot.com
Applications can also be posted to NavayanaE-92,2nd Floor, SaketNew Delhi-110017

Wednesday, November 5, 2008

ದೊಡ್ಡವರ ಸಣ್ಣತನ

ಮಂಗಳವಾರ ಬಿಜೆಪಿ ನಾಯಕ ಅಡ್ವಾನಿಯವರ ಆತ್ಮಕತೆ ಕನ್ನಡ ಅನುವಾದ ಬಿಡುಗಡೆಯಾಯಿತು. ಆತ್ಮಕತೆ ಕನ್ನಡ ಆವೃತಿ ಎಂದಾಕ್ಷಣ ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್ ರೇ ಈ ಅನುವಾದ ಮಾಡಿರಬೇಕು ಎಂದು ಸುದ್ದಿ ಹಬ್ಬಿತು. ಅದು ನಿಜವೆಂಬುದನ್ನು ಅರಿಯಲು ತಡವಾಗಲಿಲ್ಲ. ಆದರೆ ವಿಜಯ ಕರ್ನಾಟಕ ಪತ್ರಕರ್ತರ ಬಳಗಕ್ಕೆ ಗೊತ್ತಿರುವ ಸಂಗತಿ ಎಂದರೆ - ಇಡೀ ಪುಸ್ತಕವನ್ನು ಅನುವಾದ ಮಾಡಿದವರು ಭಟ್ಟರೊಬ್ಬರೇ ಅಲ್ಲ.
ಹಿಂದಿನ ಕೆಲವು ಉದಾಹರಣೆಗಳಂತೆ, ಈ ಬಾರಿಯೂ ಅವರು, ಮೂಲಕೃತಿಯನ್ನು ವಿವಿಧ ಭಾಗಗಳನ್ನಾಗಿ ಹಂಚಿ ತಮ್ಮ ಶಿಷ್ಯೋತ್ತಮರಿಗೆ ಹಂಚಿದರು. ಪ್ರತಿಯೊಬ್ಬರು ಇಂತಿಷ್ಟು ಪುಟ ಅನುವಾದ ಮಾಡಿ ತರುವಂತೆ ಆದೇಶಿಸಿದರು. ಕೆಲವೇ ದಿನಗಳಲ್ಲಿ ಅನುವಾದ ಸಿದ್ಧವಾಯಿತು.

ಆ ನಂತರ ಭಟ್ಟರು ಒಮ್ಮೆ ಎಲ್ಲಾ ಪುಟಗಳ ಮೇಲೆ ಕಣ್ಣಾಡಿಸಿದರು. ಕೃತಿ ಪ್ರಕಟಣೆಗೆ ಸಿದ್ಧವಾಯಿತು. ಬಿಡುಗಡೆಯೂ ಆಯಿತು. ಆದರೆ ಅನುವಾದಕರೆಂದು ಭಟ್ಟರು ಮಾತ್ರ ವಿರಾಜಮಾನರಾದರು.
ದೊಡ್ಡ ಮಂದಿಯ ಸಣ್ಣತನ ಅಂದರೆ ಇದೇ ಅಲ್ಲವೆ?
ಈ ಹಿಂದೆ ಕುಲದೀಪ್ ನಯ್ಯರ್ 'ಸ್ಕೂಪ್' ಅಂಕಣ ಬರಹಗಳನ್ನು ಪುಸ್ತಕ ರೂಪವಾಗಿ ಪ್ರಜಾವಾಣಿ ಸಂಸ್ಥೆ ಪ್ರಕಟಿಸಿತು. ನಯ್ಯರ್ ಬರಹಗಳನ್ನು ಮೂಲಕ್ಕೆ ಧಕ್ಕೆ ಬರದಂತೆ ಬರೆದವರು ನಾಲ್ಕೈದು ಉಪಸಂಪಾದಕರು. ಆ ಅಂಕಣ ಜನಮನ ಸೆಳೆಯಲು ಅವರ ಪಾತ್ರ, ಶ್ರಮ ದೊಡ್ಡದಿತ್ತು. ಪುಸ್ತಕ ಪ್ರಕಟವಾದಾಗ ಅವರ ಹೆಸರುಗಳು ಎಲ್ಲಿಯೂ ನಮೂದಾಗಲಿಲ್ಲ. ಆ ಬರಹಗಳನ್ನು ಸಂಪಾದಿಸದರೆಂದು ಎಸ್. ದಿವಾಕರ್ ರ ಹೆಸರು ಅಚ್ಚಾಯಿತು. ಯಾಕೆ ಹೀಗೆ? ಅನುವಾದ ಉಪಸಂಪಾದಕರ ಕೆಲಸದ ಒಂದು ಭಾಗವೇ ಇರಬಹುದು. ಆದರೆ, ಅಂಕಣಗಳ ಅನುವಾದ ಅಷ್ಟು ಸುಲಭದ ಕೆಲಸವಲ್ಲ. ಸುದ್ದಿಯಂತೆ ಸರಾಗವಾಗಿ ಅನುವಾದ ಮಾಡಲಾಗದು. ಅಂಕಣಗಳ ಅನುವಾದ ಹೆಚ್ಚಿನ ಭಾಷಾ ಪ್ರೌಢಿಮೆ, ಶ್ರಮ ಬೇಡುತ್ತದೆ.
ಅಂತಹ ಬರಹಗಳು ಪತ್ರಿಕೆಯಲ್ಲಿ ಪ್ರಕಟವಾದಾಗಲಂತೂ ಅನುವಾದಕರು ಹೆಸರು ಎಲ್ಲೂ ಕಾಣುವುದಿಲ್ಲ. ಕಡೇ ಪಕ್ಷ ಬರಹಗಳು ಪುಸ್ತಕ ರೂಪದಲ್ಲಿ ಬಂದಾಗಲಾದರೂ ಅವರ ಕೆಲಸಕ್ಕೆ ಒಂದು ಮನ್ನಣೆ ಬೇಡವೆ?

Tuesday, November 4, 2008

ಒಬಾಮಾ ಬ(ಹುಪ)ರಾಕ್!!

ಮೆರಿಕ ಬದಲಾಗಿದೆ.
"ಬದಲಾವಣೆ"ಯ ಧ್ಯೇಯದೊಂದಿಗೆ ಚುನಾವಣೆಗೆ ಇಳಿದ ಒಬಾಮಾ ಈಗ ಅಮೆರಿಕದ 44ನೇ ಅಧ್ಯಕ್ಷ. ಕರಿಯ ಬಿಳಿಯರ ತಾರತಮ್ಯವಿದ್ದ ರಾಷ್ಟ್ರವೊಂದರಲ್ಲಿ ಕರಿಯರ ಸಮುದಾಯದ ವ್ಯಕ್ತಿಯೊಬ್ಬ ರಾಷ್ಟ್ರದ ಉನ್ನತ ಸ್ಥಾನ ಅಲಂಕರಿಸುತ್ತಿರುವುದು ಬದಲಾವಣೆಯಲ್ಲದೆ ಮತ್ತೇನು?
ಶತಮಾನಗಳ ಹಿಂದೆ ಗುಲಾಮರಾಗಿದ್ದರು ಎಂಬ ಕಾರಣಕ್ಕೆ ಇಂದಿಗೂ ಚರ್ಮದ ಬಣ್ಣದಿಂದಲೇ ಅಳೆಯುವ ಬಿಳಿ ಅಮೆರಿಕನ್ನರೂ ಒಬಾಮನ ಶಕ್ತಿಗೆ ತಲೆಬಾಗಿದ್ದಾರೆ. ಆತನ ಕನಸುಗಳಿಗೆ ಸೈ ಎಂದಿದ್ದಾರೆ. ಪ್ರಜಾಪ್ರಭುತ್ವನ್ನು ಎತ್ತಿ ಹಿಡಿದಿದ್ದಾರೆ. ಇತಿಹಾಸ ನಿರ್ಮಿಸಿದ್ದಾರೆ. ಒಬಾಮಾ ತನ್ನ ವಿಜಯ ಭಾಷಣದಲ್ಲೇ ಹೇಳಿದಂತೆ ಇದು ಕೇವಲ ಆತನ ಜಯವಲ್ಲ. ಇಡೀ ಅಮೆರಿಕನ್ನರ ಜಯ.
ಇಲಿನಾಯ್ಸ್ ಸೆನೆಟರ್ ಆಗಿ ಕೇವಲ ಎರಡು ವರ್ಷಗಳ ಅನುಭವವಿರುವ ಒಬಾಮಾ ಅಮೆರಿಕದಲ್ಲಿ ಇವತ್ತೊಂದು ಪವಾಡವನ್ನೇ ಮಾಡಿದ್ದಾರೆ. ಕಳೆದ ಜುಲೈನಲ್ಲಿ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ್ದರು. ಆ ಭಾಷಣ ಇಡೀ ವಿಶ್ವಕ್ಕೆ ಬರಾಕ್ ಒಬಾಮಾನನ್ನು ಪರಿಚಯಿಸಿತು. ಅದೇ ಭಾಷಣದಲ್ಲಿ ಅಮೆರಿಕ ಸಣ್ಣ ಕನಸುಗಳಲ್ಲಿ ಪವಾಡಗಳಲ್ಲಿ ಹೇಗೆ ನಂಬಿಕೆ ಇಟ್ಟುಕೊಂಡಿದೆ ಎಂಬ ಮಾತನ್ನು ಹೇಳಿದ್ದರು. ಒಬಾಮಾ ತನ್ನ ಬಗ್ಗೆ, ತನ್ನ ತಂದೆಯ ಬಗ್ಗೆ, ಅಮೆರಿಕದ ಬಗ್ಗೆ ಅಭಿಮಾನದ ಮಾತುಗಳನ್ನು, ಕನಸುಗಳನ್ನು ಹಂಚಿಕೊಂಡಿದ್ದರು.
ಅದೆಲ್ಲಾ ಬರೀ ಕನಸುಗಳಾಗಿರಲಿಲ್ಲ. ಅಂಧ ಆತ್ಮವಿಶ್ವಾಸವೂ ಆಗಿರಲಿಲ್ಲ. ಅಮೆರಿಕದ ವಿಶ್ವಾಸವಾಗಿತ್ತು. ಆ ವಿಶ್ವಾಸದ ವಕ್ತಾರನಾಗಿ ಕಾಣಿಸಿಕೊಂಡಿದ್ದು ಒಬಾಮಾ

ಈ ಮಾತುಗಳನ್ನೇ ನೋಡಿ..
what this election is about. Do we participate in a politics of cynicism or a politics of hope? John Kerry calls on us to hope. John Edwards calls on us to hope. I'm not talking about blind optimism here -- the almost willful ignorance that thinks unemployment will go away if we just don't talk about it, or the health care crisis will solve itself if we just ignore it. No, I'm talking about something more substantial. It's the hope of slaves sitting around a fire singing freedom songs; the hope of immigrants setting out for distant shores; the hope of a young naval lieutenant bravely patrolling the Mekong Delta ; the hope of a mill worker's son who dares to defy the odds; the hope of a skinny kid with a funny name who believes that America has a place for him, too. The audacity of hope!
ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಅಮೆರಿಕವನ್ನು ಆ ಸಮಸ್ಯೆಗಳಿಗೆ ಸಮರ್ಥವಾಗಿ ಮುಖ ಮಾಡಿ ನಿಲ್ಲುವಂತೆ ಮಾಡುವುದಕ್ಕೆ ಈ ವಿಶ್ವಾಸ, ಭರವಸೆ ಬೇಕಿತ್ತು. ಇವುಗಳ ಸಂಕೇತವಾಗಿ, ಶಕ್ತಿಯಾಗಿ ಒಬಾಮಾ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಅಮೆರಿಕ ಒಬಾಮಾಗೆ ಪರಾಕ್ ಹೇಳಿದೆ.
ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಸಾರ್ವಜನಿಕ ಭಾಷಣವೊಂದರಲ್ಲಿ ಮಾತನಾಡುತ್ತಾ, "ನನ್ನದೊಂದು ಕನಸು. ಚರ್ಮದ ಬಣ್ಣ ನೋಡಿ ನಮ್ಮನ್ನು ಅಳೆಯದ ಅಮೆರಿಕದಲ್ಲಿ ನನ್ನ ನಾಲ್ಕು ಮಕ್ಕಳು ಜೀವಿಸುತ್ತಾರೆ " ಎಂದಿದ್ದರು.
ಅಮೆರಿಕದಲ್ಲಿ ಅಂಥ ದಿನಗಳು ಆರಂಭವಾಗುತ್ತಿವೆ...

ಪೇಜಾವರ ಶ್ರೀಗಳ ಸಾರ್ವಜನಿಕ ಮನರಂಜನೆ!

ಪೇಜಾವರ ಶ್ರೀಗಳು ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಶ್ರೀಗಳು ಕರ್ನಾಟಕದ ಮಟ್ಟಿಗೆ ಹಿಂದೂ ಧರ್ಮದ ಅಘೋಷಿತ (ಸ್ವಘೋಷಿತವೂ ಹೌದು) ವಕ್ತಾರರು. ಹಿಂದೂ ಧರ್ಮಕ್ಕೆ ಸಂಬಂಧಿಸಿದ ಎಲ್ಲ ವಾದವಿವಾದಗಳ ಸಂದರ್ಭಗಳಲ್ಲೂ ಶ್ರೀಗಳು ಕ್ರಿಯಾತ್ಮಕವಾಗಿ ಪಾಲ್ಗೊಳ್ಳುತ್ತಾರೆ ಮತ್ತು ತಮ್ಮದೇ ಆದ ವಿಚಾರಧಾರೆಗಳಿಂದ ಹಿಂದುತ್ವವನ್ನು, ಇಡೀ ಸಂಘಪರಿವಾರವನ್ನು ಸಮರ್ಥಿಸಿಕೊಳ್ಳುತ್ತಾರೆ. ಅವರ ದುರದೃಷ್ಟವೆಂದರೆ ಹಿಂದೂಧರ್ಮದ ವಕ್ತಾರರ ಸ್ಥಾನವನ್ನು ಹೊಸದಾಗಿ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಕಸಿದುಕೊಂಡುಬಿಟ್ಟಿದ್ದಾರೆ. ಹೀಗಾಗಿ ಪೇಜಾವರರು ಗಲಿಬಿಲಿಗೊಂಡು ದಲಿತರ ಬೌದ್ಧಧರ್ಮ ಸ್ವೀಕಾರವನ್ನು ತಮ್ಮದೇ ಆದ ಭಾಷೆಯಲ್ಲಿ ಖಂಡಿಸಿ ಮಾತನಾಡಿದ್ದಾರೆ, ತನ್ಮೂಲಕ ಭೈರಪ್ಪನವರಿಂದ ಮತ್ತೆ ತಮ್ಮ ಸ್ಥಾನ ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ.ಪೇಜಾವರರು ನೀಡಿರುವ ಹೇಳಿಕೆ ನ.೩ರ ಎಲ್ಲ ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಿಜಯ ಕರ್ನಾಟಕದಲ್ಲಿ ಹೇಳಿಕೆಯ ಪೂರ್ಣಪಾಠ ಪ್ರಕಟವಾಗಿದೆ. ಪೇಜಾವರರ ಹೇಳಿಕೆಯಲ್ಲೇ ದ್ವಂದ್ವವಿದೆ. ಹೇಳಿಕೆಯ ಆರಂಭದಲ್ಲೇ ಬೌದ್ಧಧರ್ಮವೂ ಹಿಂದೂ ಧರ್ಮದ ಒಂದು ಭಾಗವೇ ಆಗಿದೆ ಎಂದು ಪೇಜಾವರರು ಹಸಿಹಸಿ ಸುಳ್ಳು ಹೇಳುತ್ತಾರೆ. ಒಂದು ವೇಳೆ ಇವರು ಹೇಳುವ ಸುಳ್ಳು ನಿಜವೇ ಆಗಿದೆ ಎಂದು ಒಪ್ಪಿಕೊಂಡರೂ ಬೌದ್ಧಧರ್ಮಕ್ಕೆ ಮತಾಂತರಗೊಳ್ಳಬೇಡಿ ಎಂದು ಹೇಳುವ ಅಗತ್ಯವಾದರೂ ಏನಿತ್ತು. ದಲಿತರು ಬೌದ್ಧಧರ್ಮಕ್ಕೆ ಹೋದರೂ ಪೇಜಾವರರ ಥಿಯರಿಯಂತೆ ಅವರು ಹಿಂದೂ ಧರ್ಮದಲ್ಲೇ ಉಳಿಯುತ್ತಾರಲ್ಲವೆ? ಹಾಗಿದ್ದ ಮೇಲೆ ಮತಾಂತರವಾಗಬೇಡಿ ಎಂದು ಹೇಳುವ ಅಗತ್ಯವಾದರೂ ಏನು?ಪ್ರತಿಯೊಬ್ಬರಿಗೂ ತಮಗೆ ಇಷ್ಟವಾದ ಧರ್ಮವನ್ನು ಸ್ವೀಕರಿಸುವ ಹಕ್ಕಿದೆ, ಆದುದರಿಂದ ಇಂತಹ ಮತಾಂತರವನ್ನು ನಾವು ವಿರೋಧಿಸಲಾರೆವು ಎಂದು ಪೇಜಾವರರು ಹೇಳುತ್ತಾರೆ. ಮುಂದುವರೆದು ಬೌದ್ಧಧರ್ಮದಲ್ಲೂ ಪರಲೋಕ, ಸ್ವರ್ಗ, ನರಕ, ಪುಣ್ಯ, ಪಾಪ, ಪುನರ್ಜನ್ಮ, ಮೂರ್ತಿಪೂಜೆಗಳು ಇರುವುದರಿಂದ ಅಲ್ಲಿಗೆ ಹೋಗುವುದರಿಂದ ಪ್ರಯೋಜನವಿಲ್ಲ ಎಂದು ಪರೋಕ್ಷ ವಿರೋಧ ವ್ಯಕ್ತಪಡಿಸುತ್ತಾರೆ. ಪೇಜಾವರರು ಎಷ್ಟು ಗೊಂದಲಗಳನ್ನು ಕೆಡವಿಕೊಂಡಿದ್ದಾರೆಂದರೆ ಒಂದು ವೇಳೆ ಮತಾಂತರಗೊಳ್ಳುವುದಾದರೆ ದಯಾನಂತ ಸರಸ್ವತಿಯವರ ಆರ್ಯ ಸಮಾಜಕ್ಕೆ ಸೇರುವುದು ಹೆಚ್ಚು ಉಚಿತ ಎಂದು ಅಪ್ಪಣೆ ಕೊಡುತ್ತಾರೆ. ಆರ್ಯ ಸಮಾಜವನ್ನು ಸೇರುವುದು ಉಚಿತ ಎಂದು ಹೇಳುವ ಪೇಜಾವರರೇ ಮೊದಲು ಆ ಕೆಲಸ ಮಾಡಲಿ, ಆಮೇಲೆ ಆ ಸಮಾಜವನ್ನು ಸೇರುವ ಕುರಿತು ಪರಿಶೀಲಿಸೋಣ ಎಂದು ದಲಿತರು ಹೇಳಿದರೆ ಅವರು ಏನನ್ನುತ್ತಾರೆ?ವಿವಿಧ ಧರ್ಮಗಳು ಜಗತ್ತನ್ನು ಕಂಡಿರುವ ಕುರಿತಾದ ವಿಶ್ಲೇಷಣೆಯನ್ನು ಪೇಜಾವರರು ಮಾಡುತ್ತಾರೆ. ಜಗತ್ತು ಸತ್ಯವೋ, ಮಿಥ್ಯೆಯೋ ಅಥವಾ ಇವರೆರಡರ ನಡುವಿನ ಮಧ್ಯದ ಸ್ಥಿತಿಯೋ ಇದೆಲ್ಲವೂ ಈ ಹೊತ್ತಿನಲ್ಲಿ ದಲಿತರಿಗೆ ಪ್ರಸ್ತುತವಾದ ವಿಷಯಗಳೇ ಅಲ್ಲ ಎಂಬುದು ಪೇಜಾವರರಿಗೆ ಹೊಳೆಯುವುದಿಲ್ಲ. ಹೊಳೆದರೂ ಅವರು ಸುಮ್ಮನೆ ಎಲ್ಲರನ್ನು ಕನ್‌ಫ್ಯೂಸ್ ಮಾಡಿ ತಮ್ಮ ವಿಚಾರಧಾರೆ ಹೇರಲು ಯತ್ನಿಸುತ್ತಾರೆ.ತಮ್ಮ ಹೇಳಿಕೆಯ ಕೊನೆಯ ಭಾಗದಲ್ಲಿ ಪೇಜಾವರರು ತಮ್ಮ ನಿಜವಾದ ಅಜೆಂಡಾವನ್ನು ಹಿಡಿದು ಮಾತನಾಡುತ್ತಾರೆ. 'ಇನ್ನೂ ಒಂದು ಹೆಜ್ಜೆ ಮುಂದುವರೆದು ಹೇಳುವುದೇನೆಂದರೆ ದಲಿತರು ಹಿಂದೂ ಧರ್ಮವನ್ನು ತೊರೆದು ಮತಾಂತರಗೊಳ್ಳುವುದರ ಬದಲು ಹಿಂದೂ ಧರ್ಮದಲ್ಲಿಯೇ ಇರುವುದು ಒಳ್ಳೆಯದು ಎಂದು ಅವರು ತಮ್ಮ ನಿಜಸ್ವರೂಪದೊಂದಿಗೆ ಪ್ರತ್ಯಕ್ಷರಾಗುತ್ತಾರೆ.ಪೇಜಾವರರು ತಮ್ಮ ಹೇಳಿಕೆಗೆ ಒಂದು ಬಗೆಯ ಬ್ಲಾಕ್‌ಮೇಲ್ ಸ್ಪರ್ಶವನ್ನೂ ನೀಡುತ್ತಾರೆ. ದಲಿತರು ಮತಾಂತರಗೊಳ್ಳುವುದರಿಂದ ಹಿಂದೂ ಧರ್ಮದಲ್ಲಿರುವ ದಲಿತರ ಸಂಖ್ಯೆಯೂ ಕಡಿಮೆಯಾಗಿ ಅವರು ಇನ್ನೂ ಅಲ್ಪಸಂಖ್ಯಾತರೇ ಆಗುತ್ತಾರೆ ಎಂದು ಹೇಳುವ ಮೂಲಕ ದಲಿತರಲ್ಲಿ ಭೀತಿ ಹುಟ್ಟಿಸಲು ಯತ್ನಿಸುತ್ತಾರೆ. ಪ್ರಗತಿಪರ ಹಿಂದೂ ಸಮಾಜದ ಸಹಕಾರದಿಂದ ಅನ್ಯಾಯದ ವಿರುದ್ಧವಾಗಿ ಸಂಘಟಿತವಾಗಿ ಹೋರಾಟ ಮಾಡುವುದೇ ಸರಿಯಾದ ಮಾರ್ಗ ಎನ್ನುವುದು ಪೇಜಾವರರು ಕಂಡುಕೊಂಡಿರುವ, ದಲಿತರಿಗೆ ನೀಡಿರುವ ಹೊಸಮಾರ್ಗ. ಆದರೆ ಪೇಜಾವರರು ಪ್ರಗತಿಪರ ಹಿಂದೂ ಸಮಾಜ ಯಾವುದು ಎಂಬುವುದನ್ನು ಸ್ಪಷ್ಟಪಡಿಸುವುದಿಲ್ಲ. ಪೇಜಾವರರು ಪ್ರತಿನಿಧಿಸುವ ಶೂದ್ರ ಸಮೂಹದ ಪ್ರತ್ಯಕ್ಷ ವಿರೋಧಿ, ಮನುಸ್ಮೃತಿಯ ಪ್ರತಿಪಾದಕ ವಿಶ್ವ ಹಿಂದೂ ಪರಿಷತ್ ಅಥವಾ ಆರ್‌ಎಸ್‌ಎಸ್ ಪ್ರಗತಿಪರ ಹಿಂದೂ ಸಮಾಜವೆ? ಅಥವಾ ಅಸ್ಪೃಶ್ಯತೆಯ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿರುವಂತೆ ನೋಡಿಕೊಂಡಿರುವ ಪೇಜಾವರರು ಕುಳಿತಿರುವ ಮಠಪೀಠಗಳೇ ಪ್ರಗತಿಪರ ಹಿಂದೂ ಸಮಾಜವೆ? ಅಥವಾ ಹಿಂದುಳಿದ-ದಲಿತರನ್ನೇ ಇತರ ಧರ್ಮೀಯರ ವಿರುದ್ಧ ಎತ್ತಿಕಟ್ಟಿ ಬಲಿಪಶುಗಳನ್ನಾಗಿ ಮಾಡಲಾಗುವ ಭಜರಂಗದಳ ಪ್ರಗತಿಪರ ಹಿಂದೂ ಸಮಾಜವೇ?ದಲಿತರು ಹೋರಾಟ ಮಾಡಿಕೊಂಡೇ ಇರಬೇಕು ಎಂದು ಹೇಳುವ ಮನಸ್ಥಿತಿಯಲ್ಲೇ ಅಸ್ಪೃಶ್ಯತೆ, ವರ್ಣಾಶ್ರಮ ವ್ಯವಸ್ಥೆ ಜೀವಂತವಾಗಿರಬೇಕು ಎಂಬ ಧ್ವನಿಯನ್ನು ಗುರುತಿಸಬಹುದು.ದಲಿತರಿಗೆ ಭಕ್ತಿದೀಕ್ಷೆ ಹಾಗು ಮಂತ್ರದೀಕ್ಷೆಗಳನ್ನು ನೀಡುತ್ತೇವೆ ಎಂದು ಪೇಜಾವರರು ಘೋಷಿಸಿದ್ದಾರೆ. ತಮ್ಮ ಮಠಕ್ಕೆ ಓರ್ವ ದಲಿತನನ್ನು ಉತ್ತರಾಧಿಕಾರಿಯನ್ನಾಗಿ ಮಾಡಿ ನೋಡೋಣ ಎಂದು ಪ್ರಗತಿಪರರು ಕೇಳುತ್ತಲೇ ಇದ್ದಾರೆ. ಇದಕ್ಕೆ ಮಾತ್ರ ಪೇಜಾವರರು ಜಾಣ ಮೌನ ಮುಂದುವರೆಸುತ್ತಾರೆ. ನಿಮ್ಮ ಎಲ್ಲ ಮಠಪೀಠಗಳನ್ನು ಅಸ್ಪೃಶ್ಯರಿಗೆ ಬಿಟ್ಟುಕೊಡಿ ಎಂದು ಒಡ್ಡಲಾಗಿರುವ ಸವಾಲನ್ನು ಸ್ವೀಕರಿಸಲು ಪೇಜಾವರರೂ ಸೇರಿದಂತೆ ಯಾವ ಮಠಾಧೀಶರೂ ತಯಾರಿಲ್ಲ.ಇನ್ನಷ್ಟು ಶತಮಾನಗಳ ಕಾಲ ದಲಿತರನ್ನು ಹಿಂದುಳಿದವರನ್ನು ತುಳಿಯುತ್ತಲೇ ಇರಬಹುದು, ತುಳಿಯುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂದುಕೊಂಡಿದ್ದ ಯಥಾಸ್ಥಿತಿವಾದಿಗಳೆಲ್ಲ ಈಗ ಭೀತಿಗೆ ಸಿಲುಕಿದ್ದಾರೆ. ದಲಿತರು, ಹಿಂದುಳಿದವರು ಬೇರೆ ಬೇರೆ ಧರ್ಮಗಳ ಕಡೆ ಕಣ್ಣು ಹರಿಸಿರುವುದು ಈ ಭೀತಿಗೆ ಕಾರಣ. ಹೀಗಾಗಿ ಇಷ್ಟು ವರ್ಷಗಳ ಕಾಲ ಇಲ್ಲದ ದಲಿತರ ಮೇಲಿನ ಪ್ರೀತಿ ಈಗ ಪೇಜಾವರರಂಥವರಿಗೆ ಹುಟ್ಟಿಕೊಂಡಿದೆ!ಹಿಂದೂ ಧರ್ಮದಲ್ಲೇ ಇರಿ, ಒಗ್ಗಟ್ಟಾಗಿ ನ್ಯಾಯಕ್ಕಾಗಿ ಹೋರಾಡೋಣ ಎಂಬಂಥ ಹಾಸ್ಯಾಸ್ಪದ ಮಾತುಗಳಿಂದ ಪೇಜಾವರರು ಕ್ರಾಂತಿಕಾರಿಯಾಗಲು ಹೊರಟಿದ್ದಾರೆ. ಕುರಿಯನ್ನು ಕಾಯಲು ತೋಳವನ್ನು ನಿಯೋಜಿಸುವುದೇ ಸೂಕ್ತ ಎಂಬಂತಿದೆ ಅವರ ಮಾತು.ಮಾಧ್ಯಮಗಳ ಮೂಲಕ ಪೇಜಾವರರು ಆಗಾಗ ಇಂಥ ಸಾರ್ವಜನಿಕ ಮನರಂಜನೆಯನ್ನು ನೀಡುತ್ತಿರುತ್ತಾರೆ. ಇಂಥವುಗಳನ್ನು ನಮ್ಮ ಮಾಧ್ಯಮಗಳು ಆದ್ಯತೆ ನೀಡಿ ಪ್ರಕಟಿಸುತ್ತಲೇ ಇರುತ್ತವೆ. ಈ ಆತ್ಮವಂಚನೆಯ ಪರಿಪಾಠಗಳಿಗೆ ಕೊನೆಯೇ ಇಲ್ಲವೇ ಎಂಬುದು ನಮ್ಮ ಪ್ರಶ್ನೆ.

Monday, November 3, 2008

ಪತ್ರಿಕೆಗಳ ಕ್ರೆಡಿಬಿಲಿಟಿ ಹರಾಜಿಗೆ...

"ಕಿಡ್ನಿ ಕದಿಯುವ ವೈದ್ಯನಿಗೂ, ವೃತ್ತಿಗೆ ದ್ರೋಹ ಬಗೆದು ಪತ್ರಿಕೆಯ ವಿಶ್ವಾಸಾರ್ಹತೆ (ಕ್ರೆಡಿಬಿಲಿಟಿ)ಯನ್ನೇ ಕದ್ದು ಕೆಲವು ಹಿತಾಸಕ್ತಿಗಳಿಗೆ ಮಾರುತ್ತಿರುವ ಪತ್ರಕರ್ತನಿಗೂ ಹೆಚ್ಚಿನ ವ್ಯತ್ಯಾಸವಿಲ್ಲ".

- ಬಿ.ಎಂ.ಬಶೀರ್
ಪತ್ರಿಕೆಯ ಮು0ದಿರುವ ಸವಾಲುಗಳನ್ನು ಚರ್ಚಿಸುವುದು - ಸಮಾಜದ ಮು0ದಿರುವಸವಾಲುಗಳನ್ನು ಚರ್ಚಿಸುವುದು ಬೇರೆ ಬೇರೆಯಲ್ಲ. ಏಕೆ0ದರೆ ಸದ್ಯದ ದಿನಗಳಲ್ಲಿಪತ್ರಿಕೆಗಳೇ ಸಮಾಜಕ್ಕೆ ಸವಾಲಾಗಿ ನಿ0ತಿವೆ. ಸ0ವೇದನಾಹೀನ ಉದ್ಯಮಿ ಜೊತೆಗೆ ಪತ್ರಕರ್ತಪೈಪೋಟಿಗೆ ನಿ0ತಿದ್ದಾನೆ. ಸಣ್ಣ ಬೆರಳ ಸ್ಪರ್ಶಕ್ಕೂ ಮಿಡಿಯುತ್ತಿದ್ದ ಭಾಷೆ, ಶಬ್ದಗಳು ಇ0ತಹ ಪತ್ರಕರ್ತರ ದೆಸೆಯಿ0ದಾಗಿ ತನ್ನ ಸೂಕ್ಷ್ಮವನ್ನು, ಲಜ್ಜೆಯನ್ನು, ಸ0ವೇದನೆಯನ್ನು ಕಳೆದುಕೊಳ್ಳುತ್ತಿವೆ. ಭಾಷೆ, ಶಬ್ದಗಳೇ ಕುಲಗೆಟ್ಟ ಮೇಲೆ, ದೈನ0ದಿನವಾಸ್ತವಗಳನ್ನು ತೆರೆದಿಡುವುದಾದರೂ ಯಾವುದರ ಮೂಲಕ? ಈ ಕಾರಣದಿ0ದಲೇ, ಪತ್ರಿಕೆ ಒ0ದುಹೇಳಿದರೆ, ಇನ್ನೊ0ದು ಅರ್ಥದಲ್ಲಿ ಅದು ಧ್ವನಿಸುತ್ತದೆ. ಟಿ. ವಿ. 0ುಲ್ಲಿ "ಶ0ಕಿತಉಗ್ರ" ನ ಕುರಿತ0ತೆ ವಿವರ ನೀಡುತ್ತಿರುವ ವರದಿಗಾರ ತಾನು ಬಳಸುವ ಭಾಷೆಯ ಕಾರಣದಿ0ದಾಗಿ ನಿಧಾನಕ್ಕೆ ತಾನೇ ಘಟನೆಗಳ ಒಬ್ಬ ಪಾತ್ರಧಾರಿಯಾಗಿ ಬಿಡುತ್ತಿದ್ದಾನೆ. ಪತ್ರಿಕಾ ಭಾಷೆಯನ್ನು ಮರೆತು ರಾಜಕಾರಣಿಗಳ, ಸ0ಘ ಪರಿವಾರದ ನಾಯಕರ ಭಾಷೆಯಲ್ಲಿ ವರದಿಯನ್ನು ನೀಡುತ್ತಿದ್ದಾನೆ. ಮೂರನೆಯ ವ್ಯಕ್ತಿಯಾಗಿ ಒ0ದು ಘಟನೆಯನ್ನು ಕ0ಡುವರದಿ ಸ0ಗ್ರಹಿಸಬೇಕಾದ ಪತ್ರಕರ್ತ, ಸ0ಗ್ರಹಿಸಿವುದರ ಬದಲು ಸೃಷ್ಟಿಸುವುದರಲ್ಲಿಹೆಚ್ಚು ಆಸಕ್ತಿ ವಹಿಸುತ್ತಿದ್ದಾನೆ.ವರದಿಗಳು ಹೆಚ್ಚು ಆಕರ್ಷಣೀಯವಾಗಿರಬೇಕು, ಮನರ0ಜಿಸಬೇಕು. ರೋಚಕವಾಗಿರಬೇಕು.ಇವೆಲ್ಲದರ ನಡುವೆ ಆ ವರದಿ ಸತ್ಯಕ್ಕೆ ಹತ್ತಿರವಾಗಿರಬೇಕಾಗಿಯೇನೂ ಇಲ್ಲ. ಇದರ ಪರಿಣಾಮವಾಗಿಯೆ, ದಿನಪತ್ರಿಕೆಗಳು ಮನುಷ್ಯ ವಿರೋಧಿಗಳಾಗುತ್ತಿವೆ. ಕಿಡ್ನಿ ಕದಿಯುವ ವೈದ್ಯನಿಗೂ, ವೃತ್ತಿಗೆ ದ್ರೋಹ ಬಗೆದು ಪತ್ರಿಕೆಯ ವಿಶ್ವಾಸಾರ್ಹತೆ (ಕ್ರೆಡಿಬಿಲಿಟಿ)ಯನ್ನೇ ಕದ್ದು ಕೆಲವು ಹಿತಾಸಕ್ತಿಗಳಿಗೆ ಮಾರುತ್ತಿರುವ ಪತ್ರಕರ್ತನಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ದಿನಪತ್ರಿಕೆಗಳಲ್ಲಿ ವರದಿಗಾರರ ವೃತ್ತಿಪರತೆ0ು ಕೊರತೆ0ುನ್ನು "ಕನ್ನಡ ಪ್ರಭ" ದೈನಿಕದಒ0ದು ವರದಿಯನ್ನು ಮು0ದಿಟ್ಟು ನಾವು ಚರ್ಚಿಸಬಹುದಾಗಿದೆ. ಕಳೆದ ಒ0ದು ತಿ0ಗಳಿ0ದ ಉಗ್ರರ ಕುರಿತ0ತೆ ವರದಿ ಸ0ಗ್ರಹಿಸುವ ಹೆಸರಿನಲ್ಲಿ ತಾವೇ ವರದಿಯನ್ನು ಸೃಷ್ಟಿಸಿ,ತಾವೇ ಎಫ್. ಐ. ಆರ್. ದಾಖಲಿಸಿ ತಾವೇ ತೀರ್ಪು ನೀಡುತ್ತಿರುವ ಪತ್ರಿಕೆಗಳ ಕೃತ್ಯಗಳನ್ನು ನೋಡುತ್ತಿದ್ದೇವೆ. ಕಳೆದ ಫೆಬ್ರವರಿ 22 ರ0ದು "ಕನ್ನಡ ಪ್ರಭ" ದಲ್ಲಿ ಪ್ರಕಟವಾದ ಮುಖಪುಟಸುದ್ದಿಯೊಂದನ್ನು ಇದಕ್ಕೆ ಪೂರಕವಾಗಿ ತೆಗೆದುಕೊಳ್ಳೋಣ. ಹುಬ್ಬಳ್ಳಿಯಲ್ಲಿ ನಡೆದಪತ್ರಿಕಾಗೋಷ್ಠಿಯೊ0ದರಲ್ಲಿ ಪೋಲೀಸ್ ಮಹಾನಿರ್ದೇಶಕ ಶ0ಕರ ಬಿದರಿ, ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ "ಉಗ್ರ" ವರದಿಗಳನ್ನು ಸಾರಾಸಗಟಾಗಿ ಅಲ್ಲಗಳೆದರು. ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆ ಇಲ್ಲ ಎ0ದು ಸ್ಪಷ್ಟಪಡಿಸಿದರು. ಈ ಸ0ದರ್ಭದಲ್ಲಿ ಒಬ್ಬ ವರದಿಗಾರನ ಕೆಲಸ ಏನು? ಈವರೆಗೆ "ಮೂಲಗಳು ತಿಳಿಸಿವೆ" ಎ0ದು ಪತ್ರಿಕೆಗಳು ಮಾಡಿರುವ ವರದಿಗಳಿಗೆ ಅವರು ನೀಡಿದ ಅಧಿಕೃತ ಸ್ಪಷ್ಟೀಕರಣವಾಗಿತ್ತು ಅದು. ಈ ರಾಜ್ಯದಲ್ಲಿ ಉಗ್ರಗಾಮಿಗಳ ಕುರಿತ0ತೆ ಮಾಹಿತಿ ತಮ್ಮ ವಿಳಾಸವಿಲ್ಲದ "ಮೂಲ" ಗಳನ್ನು ಆಧರಿಸಿ ನೀಡಿದ ವರದಿಗಳ ಕುರಿತ0ತೆ ಒಬ್ಬ ಪೋಲೀಸ್ ವರಿಷ್ಠ ಅಧಿಕೃತ ಹೇಳಿಕೆ ನೀಡಿದರೆ ಅದನ್ನು ಪ್ರಕಟಿಸುವ ಎದೆಗಾರಿಕೆಯಾಗಲಿ, ವೃತ್ತಿಪರತೆಯಾಗಲಿ ಆ ಪತ್ರಿಕೆಗಿರಲಿಲ್ಲ. ಪರಿಣಾಮವಾಗಿ ಫೆಬ್ರವರಿ 22 ರ0ದು ಬಿದರಿಯ ಸ್ಪಷ್ಟೀಕರಣ "ಕನ್ನಡ ಪ್ರಭ" ದಲ್ಲಿಪ್ರಕಟವಾದ ರೀತಿ ಹೇಗಿತ್ತು ಗೊತ್ತೆ? "ರಾಜ್ಯದಲ್ಲಿ ಭ0ೋತ್ಪಾದನೆ ಇಲ್ಲ!" ಇದು ತಲೆಬರಹ. ಅದರ ಕೆಳಗೆ ಎರಡು ಕಿಕ್ಕರ್ಗಳು "ನ0ಬಿದರೆ ನ0ಬಿ ಬಿಟ್ಟರೆ ಬಿಡಿ ಹೀಗೆ ಹೇಳಿದ್ದು ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕ ಶ0ಕರ್ ಬಿದರಿ." "ಹಾಗಾದರೆ ಬೆ0ಗಳೂರು,ಮೈಸೂರು, ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಪೋಲೀಸರು ಬ0ಧಿಸಿದ್ದು ಸುಳ್ಳಾ?"ಒ0ದು ಸುದ್ದಿಗೂ ಸ0ಪಾದಕೀಯಕ್ಕೂ ಇರುವ ವ್ಯತ್ಯಾಸ ಗೊತ್ತಿಲ್ಲದ ಅವಿವೇಕಿ ವರದಿಗಾರಮಾತ್ರ ಈ ರೀತಿ ವರದಿ0ುನ್ನು ಬರೆಯಬಲ್ಲ. ಆ ಬಳಿಕ ಸುದ್ದಿಯ ರೂಪದಲ್ಲಿ ಬಿದರಿಯ ಹೇಳಿಕೆಗಳ ವಿಶ್ಲೇಷಣೆ ನಡೆಯುತ್ತದೆಯೆ ಹೊರತು, ಎಲ್ಲೂ "ವರದಿ" ಇಲ್ಲ. ಪತ್ರಿಕಾಗೋಷ್ಠಿ ಬಿದರಿಯದು, ಆದರೆ ಹೇಳಿಕೆಗಳೆಲ್ಲ ವರದಿಗಾರನದ್ದು. ಸರಿ,ರಾಜ್ಯದಲ್ಲಿ ಉಗ್ರರು ಇದ್ದಾರೆ. ಭಯಾನಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವುದನ್ನು ಬಿದರಿ ಯಾಕೆ ಒಪ್ಪಿಕೊಳ್ಳಬೇಕು ಎನ್ನುವುದಕ್ಕೂ ಈ ವರದಿಗಾರನಲ್ಲಿ ಕಾರಣಗಳಿಲ್ಲ. ಈತನ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಒಬ್ಬ ಪೋಲೀಸ್ ಮಹಾ ನಿರ್ದೇಶಕ "ಉಗ್ರರನ್ನು ಬ0ಧಿಸಿರುವುದು ನಿಜ, ಶಸ್ತ್ರಾಸ್ತ ದೊರಕಿರುವುದು ನಿಜ"ಎ0ದು ಒಪ್ಪಿಕೊಳ್ಳಲಾಗುತ್ತದೆಯೆ?
ಫೆಬ್ರವರಿ 28 ರ0ದು ಬೆ0ಗಳೂರಿನಲ್ಲಿ ಪೋಲೀಸ್ ಮಹಾನಿರ್ದೇಶಕ ಕೆ. ಆರ್. ಶ್ರೀನಿವಾಸನ್ ಈ ಕುರಿತ0ತೆ ಪತ್ರಕರ್ತರ ಮುಖಕ್ಕೆ ರಾಚುವ0ತೆ ಹೇಳಿದರು: "ಕೆಲ ಮಾಧ್ಯಮಗಳು ಪೋಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ ಎ0ದು ಮನಸೋ ಇಚ್ಛೆ ಪ್ರಕಟಿಸುವ ವರದಿಗಳು ಸತ್ಯಕ್ಕೆ ದೂರವಾದವು. ನೀವು ವರದಿ ಮಾಡಿದ0ತೆ ನಾವು ತನಿಖೆ ನಡೆಸಲು ಸಾಧ್ಯವಿಲ್ಲ." ಸಾಧಾರಣವಾಗಿ ಈ ಹಿ0ದೆ ಪತ್ರಿಕಾಗೋಷ್ಠಿಗಳಲ್ಲಿ ಪತ್ರಕರ್ತರು ಪೋಲೀಸರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಮೊದಲಬಾರಿಯೆಂಬ0ತೆ ಪೋಲಿಸರು ಪತ್ರಕರ್ತರನ್ನು ಯದ್ವಾತದ್ವಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ವೃತ್ತಿಪರತೆಯ ಕೊರತೆ, ವೃತ್ತಿಗೆಸಗಿದ ದ್ರೋಹದ ಫಲವಾಗಿ ಪತ್ರಿಕೋದ್ಯಮ ಈ ಅವಮಾನವನ್ನು ಎದುರಿಸಬೇಕಾಗಿದೆ.
ಅಭಿವ್ಯಕ್ತಿ ಸ್ವಾತ0ತ್ರ್ಯದ ಕುರಿತ0ತೆ ಮಾತನಾಡುವ ಹಕ್ಕನ್ನು ಪತ್ರಕರ್ತರು ಅವರಾಗಿಯೆ ಕಳೆದುಕೊಳ್ಳುತ್ತಿದ್ದಾರೆ. ಯಾಕೆ0ದರೆ ಅಭಿವ್ಯಕ್ತಿ ಸ್ವಾತ0ತ್ರ್ಯದ ದಮನ ಕೆಲಸವನ್ನು ಪತ್ರಕರ್ತರೇ ಅತ್ಯುತ್ಸಾಹದಿ0ದ ನಿರ್ವಹಿಸುತ್ತಿದ್ದಾರೆ. ಪತ್ರಕರ್ತರೆ0ದು ಕರೆಸಿಕೊಳ್ಳುವ ಜನರಿ0ದಲೇ ಕಳೆದ ಒ0ದು ತಿ0ಗಳಿ0ದ ಅಭಿವ್ಯಕ್ತಿ ಸ್ವಾತ0ತ್ರದ ಮೇಲೆನಡೆಯುತ್ತಿರುವ ದಾಳಿ ಸಣ್ಣದೇನಲ್ಲ. ಪೋಲೀಸರ ಅಭಿವ್ಯಕ್ತಿ ಸ್ವಾತ0ತ್ರ್ಯ, ಸ0ತ್ರಸ್ತರ ಅಭಿವ್ಯಕ್ತಿ ಸ್ವಾತ0ತ್ರ್ಯ, ಓದುಗರ ಅಭಿವ್ಯಕ್ತಿ ಸ್ವಾತ0ತ್ರ್ಯ ಎಲ್ಲದರ ಮೇಲು ಸಾರಾಸಗಟಾಗಿ ದಾಳಿ ನಡೆಯುತ್ತಿದೆ. ಇದು ಪತ್ರಿಕೆಗಳ ಪಾಲಿಗೆ ಅತ್ಯ0ತ ಅಪಾಯಕಾರಿ ಬೆಳವಣಿಗೆ. ಯಾಕೆ0ದರೆ, ಮು0ದಿನ ದಿನಗಳಲ್ಲಿ ಪತ್ರಕರ್ತರ ಅಭಿವ್ಯಕ್ತಿ ಸ್ವಾತ0ತ್ರ್ಯದ ಮೇಲೆ ಹಲ್ಲೆಯಾದಾಗ ಅದಕ್ಕೆ ಅನುಕ0ಪ ವ್ಯಕ್ತಪಡಿಸುವವರೇ ಇಲ್ಲದ0ತಹ ಸನ್ನಿವೇಶ ನಿರ್ಮಾಣವಾಗಲಿದೆ. ಒ0ದು ಕಡೆ ವ್ಯಾಪಾರೀಕರಣ, ಇನ್ನೊ0ದೆಡೆ ಕೋಮುವಾದೀಕರಣಗೊಳ್ಳುತ್ತಿರುವ ಪತ್ರಿಕೆಗಳು ಪತ್ರಕರ್ತರ ಆಯ್ಕೆಯ ಸ0ದರ್ಭದಲ್ಲೂ ತಮ್ಮ ಮಾನದ0ಡಗಳನ್ನು ಬದಲಿಸುತ್ತಿವೆ. ಒ0ದುಅ0ಗಡಿ0ು ಸೇಲ್ಸ್ಮ್ಯಾನ್ನ ಆಯ್ಕೆ ಮತ್ತು ವರದಿಗಾರರ ಆಯ್ಕೆ ನಡುವಿನ ಅ0ತರ ಕಡಿಮೆ0ಾಗುತ್ತಿದೆ.
"ಟಿ. ವಿ. ನೈನ್" ಎ0ಬ ಸುದ್ದಿ ವಾಹಿನಿ0ುಲ್ಲಿ ವರದಿಗಾರರನ್ನುಆಹ್ವಾನಿಸುತ್ತಿರುವ ರೀತಿ ಮತ್ತು ಅವರು ನೀಡುವ ಆದ್ಯತೆಗಳನ್ನು ಗಮನಿಸಿ."ನೀವು ವರದಿಗಾರರಾಗಲು ಆಸಕ್ತಿಯನ್ನು ಹೊ0ದಿದ್ದೀರಾದರೆ ನಿಮಗಿರುವ ಅರ್ಹತೆಗಳು ಇವು. ಮುಖ್ಯವಾಗಿ ನೀವು ಮಹಿಳೆಯಾಗಿರಬೇಕು. ಅದಕ್ಕಿ0ತಲೂ ಮುಖ್ಯವಾಗಿ ನಿಮ್ಮ ವ0ುಸ್ಸು 25 ರಒಳಗಿರಬೇಕು. ಅದಕ್ಕಿ0ತಲೂ ಮುಖ್ಯವಾಗಿ ನೋಡಲು ಆಕರ್ಷಕವಾಗಿರಬೇಕು." ಯಾವುದೇ ಅ0ಗಡಿಯ ಮಾಲಿಕನೊಬ್ಬ ತನ್ನ ಸೇಲ್ಸ್ಮ್ಯಾನನ್ನು ಆಯ್ಕೆ ಮಾಡುವುದು ಇದೇ ಅರ್ಹತೆಗಳ ಮೇಲೆ.
ಕನ್ನಡ ಪ್ರಭ ದೈನಿಕ ವರದಿಗಾರರ ಆಯ್ಕೆ ಸ0ದರ್ಭದಲ್ಲಿ ಇನ್ನೂ ಒ0ದು ಹೆಜ್ಜೆ ಮು0ದೆ ಹೋಗಿದೆ. ಅಭ್ಯರ್ಧಿಯ ಡೇಟ್ ಆಫ್ ಬರ್ತ್ ಸರ್ಟಿಫಿಕೇಟನ್ನು ಆ0ಧ್ರದ ಖ್ಯಾತಜ್ಯೋತಿಷಿಯೊಬ್ಬರಿಗೆ ತೋರಿಸಿ, ಅವರಿ0ದ ಓಕೆ ಆದ ಬಳಿಕವೇ ಅದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ.
ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ(ಎ0. ಸಿ. ಜೆ). ಪತ್ರಿಕೆಗಳಲ್ಲಿ ಕಾಲಿಡುವುದಕ್ಕೆ ವರದಿಗಾರನಾಗುವುದಕ್ಕೆ ಎ0. ಸಿ.ಜೆ. ಅ0ಕಗಳೇ ನಿಜವಾದ ಅರ್ಹತೆ ಎ0ದು ಬಲವಾಗಿ ನ0ಬಿರುವ ಇವರಲ್ಲಿ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊ0ಡಿರುವುದಕ್ಕೆ ಕಾರಣಗಳಿರುವುದಿಲ್ಲ. ಎ0. ಸಿ. ಜೆ. ಮಾಡಿದ ಹುಡುಗನಲ್ಲಿ ಸುಮ್ಮನೆ ಕನ್ನಡದ ಕೆಲಪು ಪತ್ರಕರ್ತರ ಕುರಿತ0ತೆ, ಅವರ ಬರಹಗಳ ಕುರಿತ0ತೆ ಕೇಳಿ. ಒಬ್ಬ ಹುಡುಗನಲ್ಲಿ ಹೀಗೆ ಮಾತನಾಡುತ್ತಿದ್ದೆ. "ಇತ್ತೀಚೆಗೆ ನೀನು ಓದಿದ ಪುಸ್ತಕ ಯಾವುದು?" ಆತನಿಗೆ ನೆನಪಿಲ್ಲ. "ಕನಿಷ್ಠ ಕಳೆದ ಒ0ದು ವರ್ಷದಲ್ಲಿ ಓದಿದ ಪುಸ್ತಕವಾದರೂ ನೆನಪಿದೆಯೆ?" ನನ್ನ ಪ್ರಶ್ನೆ ಆತನಿಗೆ ಬಾಲಿಶ ಅನಿಸಿರಬೇಕು. ನನ್ನನ್ನೇ ಪ್ರಶ್ನಾರ್ಥಕವಾಗಿ ನೋಡತೊಡಗಿದ. ಪಿ. ಲ0ಕೇಶ್ ಗೊತ್ತಾ? ಹೂ0. ಎ0ದ. ಟೀಕೆ ಟಿಪ್ಪಣಿ ಓದಿದ್ದೀಯ ಎ0ದರೆ ಇಲ್ಲ ಎ0ದ - ತೇಜಸ್ವಿಯ ಚಿದ0ಬರ ರಹಸ್ಯ ಓದಿಲ್ಲ. ಪಾ.ವೆ0. ಆಚಾರ್ಯ ಪದಾರ್ಥ ಚಿ0ತಾಮಣಿ ಕೃತಿಯನ್ನು ಬಿಡಿಸಿಲ್ಲ. ಆದರೆ ಆ ಕುರಿತ0ತೆಅವನಿಗೆ ಯಾವ ಖೇದವೂ ಇಲ್ಲ. ಯಾಕೆ0ದರೆ ಅದಕ್ಕೂ ಪತ್ರಿಕೋದ್ಯಮಕ್ಕೂ ಯಾವ ಸ0ಬ0ಧವೂ ಇಲ್ಲ. ಅಗತ್ಯ ಬಿದ್ದರೆ "ಗೂಗಲ್"ನಲ್ಲಿ "ಲ0ಕೇಶ್" ಒ0ದು ಹೊಡೆದರೆ ಆಯಿತಲ್ಲ!
ಮುಖ್ಯವಾಗಿ ಎ0. ಸಿ. ಜೆ. ಯಿ0ದ ಹೊರಬ0ದ ಹೆಚ್ಚಿನ ಅಭ್ಯರ್ಥಿಗಳಿಗೆ ಪತ್ರಿಕೋದ್ಯಮ ಅದರಲ್ಲೂ ಕನ್ನಡ ಪತ್ರಿಕೋದ್ಯಮ ಒ0ದು ಬಸ್ ಕೂಡ ಅಲ್ಲ. ಬರೆ "ಬಸ್ ಸ್ಟಾಪ್" ಅಷ್ಟೇ. ಬಸ್ ಬರುವವರೆಗೆ ಕಾಯಬೇಕಿರುವ ಒ0ದು ಸ್ಥಳ. ಅವರ ಗುರಿ ಯಾವುದೋ ಕ0ಪನಿಯ ಪಿ. ಆರ್.ಓ. ಅಥವಾ ಜಾಹೀರಾತು ಕ0ಪೆನಿಗಳಲ್ಲಿ ಕೆಲಸ ಮಾಡುವುದು. ಇ0ತಹ ಅಭ್ಯರ್ಥಿಗಳು ಬಸ್ ಮಿಸ್ಮಾಡಿಕೊ0ಡು ಶಾಶ್ವತವಾಗಿ ಆ ಬಸ್ ಸ್ಟಾಪ್ನಲ್ಲೇ ಉಳಿದುಬಿಟ್ಟರೆ ಆಗುವ ಪರಿಣಾಮಗಳ ಫಲಾನುಭವಿಗಳಾಗಿದ್ದಾರೆ ಓದುಗರು.
ಇನ್ನೊ0ದು ಉದಾಹರಣೆ. ನನ್ನೊಬ್ಬ ಗೆಳೆಯ ಹೇಳಿದ್ದು. ಪ್ರೆಸ್ ಕ್ಲಬ್ಗೆ ಅದಾವುದೋ ಸ0ದರ್ಭದಲ್ಲಿ ಕನ್ನಡದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಬ0ದಿದ್ದರ0ತೆ. ಅದೆಲ್ಲಿ0ದ ಪ್ರತ್ಯಕ್ಷಳಾದಳೋ, ಟಿ. ವಿ. ವರದಿಗಾರ್ತಿ ತನ್ನ ಕ್ಯಾಮರಾ ಜೊತೆ ಧುತ್ತೆ0ದು ಕಾಸರವಳ್ಳಿಯ ಮು0ದೆ ನಿ0ತಳು. ತನ್ನ ಕೈಯಲ್ಲಿದ್ದ ಮೈಕ್ ಹಿಡಿದು "ಮಾತನಾಡಿ ಸಾರ್" ಎ0ದಳು. ಕಾಸರವಳ್ಳಿಗೆ ಗಾಬರಿ. ಯಾವ ಪ್ರಶ್ನೆಯನ್ನೂ ಕೇಳದೆ "ಮಾತನಾಡಿ" ಎ0ದರೆ ಏನನ್ನು ಮಾತನಾಡುವುದು? "ಏನನ್ನು ಮಾತನಾಡಲಿ?" ಕಾಸರವಳ್ಳಿ ಕೇಳಿದರ0ತೆ. "ಯಾವುದರ ಬಗ್ಗೆಯಾದರೂ ಮಾತನಾಡಿ" ಎ0ದಳಾಕೆ. ಕಾಸರವಳ್ಳಿ ಗೊ0ದಲಕ್ಕೊಳಗಾದರು. "ಸಾರ್ ನಿಮ್ಮ ದ್ವೀಪಕ್ಕೆ ಅವಾರ್ಡ್ ಸಿಕ್ಕಿತಲ್ಲ. ಆ ಚಿತ್ರದ ಬಗ್ಗೆ ಮಾತನಾಡಿ" ಎ0ದಳು.
"ಅದಕ್ಕೆ ಅವಾರ್ಡ್ ಸಿಕ್ಕಿ ವರ್ಷ ಆಯಿತಲ್ಲಮ್ಮ......"ಎ0ದವರು, ಅನಿವಾರ್ಯ ಕಾರಣದಿ0ದ ತಾವೇ ತಮ್ಮನ್ನು ಪ್ರಶ್ನಿಸಿ, ಉತ್ತರ ಹೇಳಿದರ0ತೆ.ಈ ನಾಡಿನ ಬರಹಗಾರರ ಕುರಿತ0ತೆ, ಚಿ0ತಕರ ಕುರಿತ0ತೆ, ಅತ್ಯುತ್ತಮ ಕೃತಿಗಳ ಕುರಿತ0ತೆ, ನಾಯಕರ ಕುರಿತ0ತೆ, ಸಿನಿಮಾಗಳ ಕುರಿತ0ತೆ ಸಾಮಾನ್ಯ ಜ್ಞಾನವೂ ಇಲ್ಲದ ಇ0ತಹ ಕೆಲವು ಪತ್ರಕರ್ತರ ಕೈಯಲ್ಲಿ ಈ ನಾಡು, ನುಡಿ, ಜನಸಾಮಾನ್ಯರ ಬದುಕು ಸಿಕ್ಕಿದರೆ ಅದು "ದುರ0ತ" ವನ್ನಲ್ಲದೆ, ಇನ್ಯಾವ ಫಲಿತಾ0ಶವನ್ನು ನೀಡಲು ಸಾಧ್ಯ?
ಬಳಸುವ ಪ್ರತಿ ಶಬ್ದಗಳಿಗೂ ಸ0ವೇದನಗಳಿವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದ ಈ ಪತ್ರಕರ್ತರ ಕೈಯಲ್ಲಿ "ಉಗ್ರ" ಎನ್ನುವ ಶಬ್ದ ತನ್ನ ಲಜ್ಜೆಯನ್ನು ಕಳೆದುಕೊ0ಡ ರೀತಿ0ುನ್ನೇ ಉದಾಹರಣೆ0ಾಗಿ ತೆಗೆದುಕೊಳ್ಳೋಣ. ಕ0ಡವರಿಗೆಲ್ಲ ಉಗ್ರ, ಭಯೋತ್ಪಾದಕ ಎ0ದು ಬಳಸುತ್ತಾ ಹೋದ ಈ ವರದಿಗಾರರ ದೆಸೆಯಿ0ದ ಇ0ದು ಆ ಶಬ್ದ ಯಾರನ್ನೂ ಬೆಚ್ಚಿಬೀಳಿಸುತ್ತಿಲ್ಲ. ಅದು ತನ್ನ ಸ0ಕೋಚ ಮತ್ತು ಗಾ0ಭೀರ್ಯವನ್ನು ಕಳೆದುಕೊ0ಡಿದೆ. ಒಬ್ಬಬೈಕ್ ಕಳ್ಳನಿಗೂ ಉಗ್ರನಿಗೂ ವ್ಯತ್ಯಾಸವೇ ಇಲ್ಲದ0ತೆ ಮಾಡಿದ ಹೆಗ್ಗಳಿಕೆ ಈ ಪತ್ರಕರ್ತರಿಗೆ ಸಲ್ಲಬೇಕು. ಈ ಪತ್ರಕರ್ತರ "ನಕಲಿ ಉಗ್ರ" ರ ಮರೆಯಲ್ಲಿ ನಿಜವಾದ ಉಗ್ರರು ಆರಾಮವಾಗಿ ಬದುಕುವ ದಿನಗಳು ದೂರವಿಲ್ಲ. ಒ0ದು ಪತ್ರಿಕೆಯ ಬೆಲೆ 2. 50. ರೂ. ಆದರೆ ಅದರ ಅಸಲು ದರ ಸುಮಾರು 5. 00 ರೂ. ಪ್ರಸಾರ ಸ0ಖ್ಯೆ ಹೆಚ್ಚುತ್ತಾ ಹೋದ ಹಾಗೆಯೆ ಪತ್ರಿಕೆಯ ನಷ್ಟವೂ ಹೆಚ್ಚುತ್ತಾ ಹೋಗುತ್ತದೆ.
ಪತ್ರಿಕೆಗಳಿಗೆ ಪ್ರಸಾರ ಸ0ಖ್ಯೆ ಬೇಕಾಗಿರುವುದು ಜಾಹೀರಾತುದಾರರಿಗೆ ತೋರಿಸುವುದಕ್ಕೆಮಾತ್ರ. ದರ ಸಮರ ಹೆಚ್ಚಿದ ಪರಿಣಾಮವಾಗಿ ಪತ್ರಿಕೆಗಳು ಓದುಗರಿಗೇನೊ ಸುಲಭವಾಗಿ ದೊರಕತೊಡಗಿದವು. ಆದರೆ ಓದುಗರ ಸಾರ್ವಭೌಮತೆಗೆ ಭಾರೀ ಧಕ್ಕೆಯುಂಟಾಯಿತು. ತಾವು ಏನನ್ನು ಕಳೆದುಕೊ0ಡಿದ್ದೇವೆ ಎನ್ನುವುದು ಅವರಿಗೆ ಹೊಳೆಯುವ ಮೊದಲೇ ಅವರು ಎಲ್ಲವನ್ನೂ ಕಳೆದುಕೊ0ಡಿದ್ದರು. ಅವರ ಕೈಯಲ್ಲಿ ಒ0ದು ರೂಪಾಯಿಗೆ ಆಕರ್ಷಕ ಪುರವಣಿಗಳುಳ್ಳ 20ಪುಟಗಳ ಪತ್ರಿಕೆಯಿತ್ತು. ಆದರೆ ಅದಕ್ಕೆ ಪ್ರತಿಯಾಗಿ ಆತ ತೆತ್ತದ್ದು ತನ್ನಸಾರ್ವಭೌಮತೆಯನ್ನು. ಇ0ದು ಆ ಸಾರ್ವಭೌಮತೆಯನ್ನು ಜಾಹೀರಾತುದಾರರು, ಬೃಹತ್ಕ0ಪನಿಗಳು ತಮ್ಮದಾಗಿಸಿಕೊ0ಡಿವೆ. ಒ0ದು ರೀತಿಯಲ್ಲಿ ಓದುಗನಿಗೆ ಚಿನ್ನದ ಚೂರಿಯಿ0ದ ಇರಿಯಲಾಗಿದೆ. ಹಾಗೆ ಇರಿತಕ್ಕೊಳಗಾದ ಓದುಗ ಚೂರಿ ಚಿನ್ನದ್ದು ಎನ್ನುವ ಸೌಭಾಗ್ಯಕ್ಕಾಗಿ ಸ0ಭ್ರಮಿಸಬೇಕು. ಒ0ದು ದಿನಪತ್ರಿಕೆಯ ನಿಜವಾದ ಬ0ಡವಾಳ ಅವರ "ಕ್ರೆಡಿಬಿಲಿಟಿ". ಸದ್ಯಕ್ಕೆ ಪತ್ರಿಕೆಯೋದ್ಯಮಿಗಳು ತಮ್ಮ ಲಾಭಕ್ಕಾಗಿ ಬಿಕರಿಗಿಟ್ಟಿರುವುದು ದಿನಪತ್ರಿಕೆಗಳನ್ನಲ್ಲ. ತಮ್ಮಪತ್ರಿಕೆಗಳ "ಕ್ರೆಡಿಬಿಲಿಟಿ" ಯನ್ನು.
ಪ್ರಜಾವಾಣಿಯಂತಹ ಹಿರಿಯ ಪತ್ರಿಕೆಯೂ ಈ ಕ್ರೆಡಿಬಿಲಿಟಿಯ ಹರಾಜಿನಲ್ಲಿ ಭಾಗವಹಿಸಿರುವುದು ಖೇದಕರ ಸ0ಗತಿ. ಈ ಹರಾಜಿನಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಸ0ಘ ಪರಿವಾರ ಎಲ್ಲರೂ ಭಾಗಹಿಸಿ, ಬೆಲೆ ಕೂಗುತ್ತಿದ್ದಾರೆ. "ವಿಶ್ವಾಸಾರ್ಹತೆ" ಎನ್ನುವುದು ಸ0ಪೂರ್ಣವಾಗಿ ಹರಾಜಾದ ದಿನ ಅಥವಾ ಪತ್ರಿಕೆಗಳು ಸ0ಪೂರ್ಣ ನ0ಬಿಕೆಗೆ ಅನರ್ಹವಾದ ದಿನ, ಈ ಸಮಾಜದ ಪಾಲಿಗೆ, ಈ ನಾಡಿನಪಾಲಿಗೆ ಕಪ್ಪು ದಿನ. ಆಗ ಈ ದೇಶದಲ್ಲಿ ನೂರಾರು ಪತ್ರಿಕೆಗಳು ಕಡಿಮೆ ದರದಲ್ಲಿ ಹೆಚ್ಚುಪುಟಗಳಲ್ಲಿ ಆಕರ್ಷಕವಾಗಿ ಅ0ಗಡಿ ಅ0ಗಡಿಗಳಲ್ಲಿ ಸೂಳೆ0ುರ0ತೆ ತುಟಿಗೆ ನಗುವನ್ನುಅ0ಟಿಸಿ ಬಳುಕುತ್ತಿರುತ್ತವೆ. ಆದರೆ ತಮ್ಮದೆನ್ನುವ ಒ0ದೇ ಒ0ದು ಪತ್ರಿಕೆಯೂ ಜನಸಾಮಾನ್ಯರ ಬಳಿಯಿರುವುದಿಲ್ಲ.

(ಬಿ.ಎಂ.ಬಷೀರ್ ಸೂಕ್ಷ್ಮ ಸಂವೇದನಗಳಿರುವ ಪತ್ರಕರ್ತ. ಬದ್ಧತೆಯುಳ್ಳ ಬರಹಗಾರ. ಅವರ ಸೂಕ್ಷ್ಮ ಸಂವೇದನೆ ಹಾಗೂ ಬದ್ಧತೆಗಳಿಗೆ ಇಲ್ಲಿನ ಲೇಖನ ಸಾಕ್ಷಿ. ಅವರು ಮಂಗಳೂರು ಮೂಲದ ವಾರ್ತಾ ಭಾರತಿ ದೈನಿಕದ ಸುದ್ದಿ ಸಂಪಾದಕರು. ಕೆಲವು ದಿನಗಳ ಹಿಂದೆ ಈ ಲೇಖನ ಗೌರಿ ಲಂಕೇಶ್ ರ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇಂದಿನ ಪತ್ರಿಕೋದ್ಯಮ, ಪತ್ರಕರ್ತರ ಧೋರಣೆಗಳನ್ನು ಈ ಲೇಖನ ಸೂಕ್ಷ್ಮವಾಗಿ ಅವಲೋಕಿಸುತ್ತದೆ. ಸುದ್ದಿಮಾತಿನ ಓದುಗ 'ಇನ್ನೊಬ್ಬ ಅನಾಮಿಕ' ಈ ಬ್ಲಾಗ್ ಗೆಂದು ಈ ಲೇಖನವನ್ನು ಕಳುಹಿಸಿದ್ದಾರೆ. ಓದಿ ಪ್ರತಿಕ್ರಿಯಿಸಿ.)

Sunday, November 2, 2008

ಸೂತಕದ ಬೀದಿಯಲ್ಲಿ ಅದ್ಧೂರಿ ಮೆರವಣಿಗೆ!

ಇದು ಬೇಕಿತ್ತಾ? - ಇಂತಹದೊಂದು ಪ್ರಶ್ನೆ ಎದ್ದು ಕುಣಿಯುತ್ತಿದೆ.
ಕಬ್ಬಿಣ ಅದಿರಿಗೆ ಚೀನಾದ ಬೇಡಿಕೆ ನಿಲ್ಲುತ್ತಿದ್ದಂತೆಯೇ, ಇಷ್ಟುದಿನ ಬಂದರಿಗೆ ಅದಿರು ಸಾಗಿಸುತ್ತಿದ್ದ ಲಾರಿಗಳು ಸಾಲು ಸಾಲು ಮಾರಾಟಕ್ಕೆ ನಿಂತಿವೆ (ಪ್ರಜಾವಾಣಿಯಲ್ಲಿ ವರದಿಯಾಗಿದೆ). ಕೊಳ್ಳುವುದಿರಲಿ, ಕೇಳುವವರೇ ಇಲ್ಲ ಆ ಊರಲ್ಲಿ. ಸಾಲ ಕೊಟ್ಟವರು ಲಾರಿಗಳ ಹರಾಜು ಹಾಕಿ ಸಾಲ ಹಿಂದಕ್ಕೆ ಪಡೆಯುವ ಸ್ಥಿತಿಯಲ್ಲಿಲ್ಲ. ಚಾಲಕ ವೃತ್ತಿ ಮಾಡಿಕೊಂಡಿದ್ದ ಸೋಮಪ್ಪ, ಜಮೀನಿನಲ್ಲಿ ಅದಿರು ಆಯ್ದುಕೊಂಡು ಅನ್ನ ಕಾಣುತ್ತಿದ್ದ ನಿಶಾನಿ ಗುಳ್ಳಪ್ಪ, ಆತನ ಮಕ್ಕಳು.. ಕಂಗಾಲಾಗಿದ್ದಾರೆ.
ಹೊಸಪೇಟೆ ಹಾಗೂ ಬಳ್ಳಾರಿ ನಡುವಿನ ರಾಷ್ಟ್ರೀಯ ಹೆದ್ದಾರಿ ಕುಲಗೆಟ್ಟು ಹೋಗಿದೆ. ಅದು ಕುಲಗೆಟ್ಟು ಹೋಗಲು ಒಂದು ಸಕಾರಣವಿದೆ. ಅಲ್ಲಿಯ ಜನ ಆ ರಸ್ತೆ ಸರಿಯಾಗಲು ಒಪ್ಪುವುದಿಲ್ಲ. ರಸ್ತೆ ತುಂಬಾ ಉಬ್ಬು-ತಗ್ಗು, ಗುಂಡಿಗಳಿದ್ದರೆ ಅದಿರು ತುಂಬಿದ ಲಾರಿಗಳಿಂದ ಒಂದಿಷ್ಟು ಅದಿರು ರಸ್ತೆ ತುಂಬಾ ಬೀಳುತ್ತದೆ. ಅದನ್ನು ಆಯ್ಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಜನರಿದ್ದರು. ಈಗ ಅವರ ಪಾಡೇನು? ಚಿತ್ರದುರ್ಗದ ಲಾರಿ ಮಾಲೀಕನೊಬ್ಬ ತಾನು ಕೊಂಡ ಲಾರಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಳ್ಳಾರಿ ಜನ ತಕ್ಷಣಕ್ಕೆ ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ದೊಡ್ಡ ಮಟ್ಟದಲ್ಲಿ ಅದಿರು ತುಂಬಿಕೊಂಡು ಚೀನಾಕ್ಕೆ ಸಾಗಿಸಿದವರು ಇಂದು ನೂರಾರು ಕೋಟಿಗೆ ಒಡೆಯರು. ಅವರ ಹಾರಾಟ ಆಕಾಶದಲ್ಲೆ. ಅವರನ್ನು ಬೆಲೆ ಕುಸಿತ, ಇಲ್ಲದ ಬೇಡಿಕೆ ಅಷ್ಟಾಗಿ ಬಾಧಿಸುವುದಿಲ್ಲ. ಹಿಂದಿನ ವೈಭೋಗದ ದಿನಗಳು ಮತ್ತೆ ಬರಲಾರವೇನೋ, ಆದರೆ ಅವರ ಅನ್ನಕ್ಕಂತೂ ದೋಕಾ ಇಲ್ಲ. ಆದರೆ ಕೂಲಿ ಕಾರ್ಮಿಕರ ಪಾಡೇನು?
ವ್ಯವಸಾಯ ಮರೆತು ಭೂಮಿ ಮೇಲ್ಪದರದಲ್ಲಿ ದೊರಕುವ ಅದಿರನ್ನೆಲ್ಲಾ ಮಾರಿಕೊಂಡ ಜನ ಈಗ ವ್ಯವಸಾಯಕ್ಕೆ ಮರಳಬೇಕಿದೆ. ಅದು ಅಷ್ಟು ಸುಲಭದ ಮಾತಲ್ಲ. ಅದಿರಿನೊಂದಿಗೆ ಭೂಮಿಯ ಸತ್ವವೆಲ್ಲ ಚೀನಾ ಸೇರಿದೆ. ಬಿತ್ತಿದರೆ ಬೆಳೆ ಬರುವುದಾದರೂ ಹೇಗೆ?
ಅಂದಹಾಗೆ, ಕರ್ನಾಟಕ ರಾಜಕೀಯದ ಮೇಲೂ ಇದರ ಪ್ರಭಾವ ಇಲ್ಲದಿಲ್ಲ. ಒಂದು ಓಟಿಗೆ ಸಾವಿರದ ನೋಟು ಕೊಟ್ಟು ಅಧಿಕಾರಕ್ಕೆ ಬಂದ ಜನ, ಹಿಂದಿನಂತೆ ಹಣ ಹರಿಯ ಬಿಡಲಾರರು. ದುಡ್ಡು ಎಷ್ಟೇ ಇದ್ದರೂ, ಮುಂದಿನ ದಿನಗಳಿಗೆ ಬೇಕಾಗುತ್ತೆ ಎಂದು ಕೂಡಿಡುವ ಮನೋಭಾವ ಸಹಜವಾಗಿಯೇ ಮೂಡುತ್ತದೆ.
ಇದೇ ಸಂದರ್ಭದಲ್ಲಿ ಇಂದು ಹಂಪಿ ಉತ್ಸವ ಉದ್ಘಾಟನೆಗೊಳ್ಳುತ್ತಿದೆ. ಉತ್ಸವಕ್ಕೆ ಅದ್ಧೂರಿಯಾಗಿ ನಡೆಸಬೇಕೆಂದು ಗಣಿ ರೆಡ್ಡಿಗಳು ತೀರ್ಮಾನಿಸಿದ್ದಾರೆ. ರಥ ಬೀದಿ, ಹಿಂದೆ ಇತ್ತು ಎನ್ನಲಾದ ವೈಭವವನ್ನು, ನೆನಪಿಸುತ್ತಿದೆ. ಈ ವೈಭವಕ್ಕಾಗಿ ಆ ಬೀದಿಯ ವ್ಯಾಪಾರಿಗಳನ್ನೆಲ್ಲ ಮನೆಗೆ ಕಳುಹಿಸಲಾಗಿದೆ. ಅವರ ಪಾಲಿಗೆ ಅದು ಉತ್ಸವ ಹೇಗಾಗಲು ಸಾಧ್ಯ?
ಒಂದೆಡೆ ಅನ್ನ ಕಳೆದುಕೊಂಡ ಸಾಮಾನ್ಯ ಜನ, ಮತ್ತೊಂದೆಡೆ ಸರಕಾರದ ವೆಚ್ಚದಲ್ಲಿ ಉಳ್ಳವರ ದೌಲತ್ತು. ಈಗ ಹೇಳಿ ಇದೆಲ್ಲಾ ಬೇಕಿತ್ತಾ?

Saturday, November 1, 2008

ನಮ್ಮದು ಯಾವ ಪಕ್ಷ?

ನೀವು ಕಾಂಗ್ರೆಸ್ ನವರು. ಇಲ್ಲಾ ಜೆಡಿಎಸ್ ಇರಬೇಕು - ಹೀಗೆ ಕೆಲವರು ಲೆಕ್ಕ ಹಾಕಿದ್ದಾರೆ. ಮತ್ತೆ ಕೆಲವರು - ನಿಮ್ಮದು ಯಾವ ಪಕ್ಷ ಎಂದು ನೇರಾ ನೇರಾ ರಾಜಕೀಯದ ಮಾತಿಗಿಳಿದಿದ್ದಾರೆ. ಸಾಮಾಜಿಕ, ರಾಜಕೀಯ ವಿಚಾರಗಳಿಗೆ ಪ್ರತಿಕ್ರಿಯಿಸುವವರನ್ನು ಹೀಗೆ ಒಂದು ಪಕ್ಷದ ಚೌಕಟ್ಟಿಗೆ ಹಾಕಿ ಆ ಫ್ರೇಮ್ ನಡಿಯಲ್ಲೇ ನೋಡುವ ಗುಣ ಈ ನೆಲದ ಮಣ್ಣಿನಲ್ಲೇ ಇದೆ. ಯಾರನ್ನೂ ಹಾಗೇ ಸುಮ್ಮನೆ ಬಿಡುವುದಿಲ್ಲ. ಸುದ್ದಿಮಾತು ಬಳಗಕ್ಕೆ ಆದದ್ದೂ ಅದೇ.
ಇತ್ತೀಚೆಗೆ ಇಲ್ಲಿನ ಕೆಲ ಬರಹಗಳಿಗೆ ಪ್ರತಿಕ್ರಿಯಿಸಿದವರು - ಬ್ಲಾಗ್ ಅನ್ನು ಕಾಂಗ್ರೆಸ್ ಮುಖವಾಣಿ ಎಂದು ಟೀಕಿಸಿದ್ದಾರೆ. ಬಿಜೆಪಿ ನೇತೃತ್ವ ಸರಕಾರದ ಕೆಲವು ನಡೆಗಳನ್ನು ಟೀಕಿಸಿದಾಗ ನಮ್ಮನ್ನು 'ಬಿಜೆಪಿ ವಿರೋಧಿಗಳು' ಎಂದು ಹೇಳುವ ಉದ್ದೇಶ ಇಟ್ಟುಕೊಂಡು - 'ಕಾಂಗ್ರೆಸ್ ನವರು' ಎಂದು ದೂರಿದ್ದಾರೆ. ನಮ್ಮದೊಂದು ಪ್ರಶ್ನೆ - ಯಾವ ಪಕ್ಷಕ್ಕೆ ಸೇರದೆಯೂ, ಆಡಳಿತದಲ್ಲಿರುವವರ ಕೃತ್ಯಗಳನ್ನು ಟೀಕಿಸುವುದು ಸಾಧ್ಯವಿಲ್ಲವೇ? ಟೀಕಿಸುವ ಎಲ್ಲರಿಗೂ ಒಂದು ರಾಜಕೀಯ ನೆಲೆ ಇರಲೆಬೇಕೆ? ಒಂದು ಕ್ಷಣ ನಮ್ಮ ಓದುಗರು - ಸಾಮಾನ್ಯ ಪ್ರಜೆಗಳಾಗಿ ಇವರು ಟೀಕಿಸುತ್ತಿರಬಹುದಲ್ಲ - ಎಂದು ಯಾಕೆ ಯೋಚಿಸುವುದಿಲ್ಲ. ಯಾವ ರಾಜಕೀಯ ಪಕ್ಷಗಳೆಡೆಗೂ ಒಲವಿಲ್ಲದೆ, ಯಾವ ಪಕ್ಷಗಳ ಬಲವಿಲ್ಲದೆ ಕೋಟ್ಯಂತರ ಜನ ಈ ನಾಡಿನಲ್ಲಿದ್ದಾರೆ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ.
ಪತ್ರಿಕೆಗಳು ಖಾಯಂ ವಿರೋಧ ಪಕ್ಷ ಎಂಬ ಮಾತಿದೆ. ಹಾಗೆ ಸುದ್ದಿಮಾತಿಗೆ ಒಂದು ಪಕ್ಷದ ಹಣೆ ಪಟ್ಟಿ ಕಟ್ಟಲೇಬೇಕು ಎಂಬ ಉಮ್ಮೇದಿ ಇರುವವರಿಗೆ ಒಂದು ಮಾತು - ನಮ್ಮದು ಖಾಯಂ ವಿರೋಧ ಪಕ್ಷ. ಆಡಳಿತಕ್ಕೆ ಯಾರೇ ಬರಲಿ, ವಿರೋಧ ಪಕ್ಷಗಳ ಸಾಲಿನಲ್ಲಿ ನಾವೂ ಇರುತ್ತೇವೆ. ಅಂದಹಾಗೆ ವಿರೋಧ ಪಕ್ಷದ ಕೆಲಸ ಕೇವಲ ವಿರೋಧ ಮಾಡುವುದಲ್ಲ ಎಂಬ ಪ್ರಜ್ಞೆಗೆ ನಾವೂ ಬದ್ಧರು.
ಮತ್ತೆ ಕೆಲವರು ತಮ್ಮ ಅಸಹಾಯಕತೆಯನ್ನು ಅಸಂಬದ್ಧ ಪದಗಳಿಂದ ಟೀಕಿಸುವ ಪ್ರಯತ್ನ ಮಾಡಿದ್ದಾರೆ. ಅವರ 'ಅಕ್ಷರ ಜ್ಞಾನ'ಕ್ಕೆ ನಮ್ಮ ಬಹುಪರಾಕು ಎಂದಷ್ಟೇ ಹೇಳಲು ಬಯಸುತ್ತೇವೆ.
ಇತ್ತೀಚೆಗೆ ಕೆಲವರ ಪ್ರತಿಕ್ರಿಯೆಗಳು ಆರೋಗ್ಯಕರ ಚರ್ಚೆಗೆ ನಾಂದಿ ಹಾಡಿದ್ದವು. ನಮ್ಮ ಉದ್ದೇಶವೂ ಅದೇ. ಹೆಚ್ಚು ಚರ್ಚೆ ಆದರೆ, ನಮ್ಮೊಳಗಿನ ಗೊಂದಲಗಳು ಸ್ಷಷ್ಟವಾಗುತ್ತವೆ, ಯೋಚನಾ ಲಹರಿಗೆ ಒಂದು ದಿಕ್ಕು ದಕ್ಕುತ್ತದೆ. ಹೀಗೆ ಚರ್ಚೆ ನಡೆಸಿದವರಿಗೆಲ್ಲ ಸುದ್ದಿಮಾತು ಬಳಗದ ಅಭಿನಂದನೆಗಳು.