Showing posts with label ಸಂಪಾದಕೀಯ. Show all posts
Showing posts with label ಸಂಪಾದಕೀಯ. Show all posts

Saturday, November 1, 2008

ನಮ್ಮದು ಯಾವ ಪಕ್ಷ?

ನೀವು ಕಾಂಗ್ರೆಸ್ ನವರು. ಇಲ್ಲಾ ಜೆಡಿಎಸ್ ಇರಬೇಕು - ಹೀಗೆ ಕೆಲವರು ಲೆಕ್ಕ ಹಾಕಿದ್ದಾರೆ. ಮತ್ತೆ ಕೆಲವರು - ನಿಮ್ಮದು ಯಾವ ಪಕ್ಷ ಎಂದು ನೇರಾ ನೇರಾ ರಾಜಕೀಯದ ಮಾತಿಗಿಳಿದಿದ್ದಾರೆ. ಸಾಮಾಜಿಕ, ರಾಜಕೀಯ ವಿಚಾರಗಳಿಗೆ ಪ್ರತಿಕ್ರಿಯಿಸುವವರನ್ನು ಹೀಗೆ ಒಂದು ಪಕ್ಷದ ಚೌಕಟ್ಟಿಗೆ ಹಾಕಿ ಆ ಫ್ರೇಮ್ ನಡಿಯಲ್ಲೇ ನೋಡುವ ಗುಣ ಈ ನೆಲದ ಮಣ್ಣಿನಲ್ಲೇ ಇದೆ. ಯಾರನ್ನೂ ಹಾಗೇ ಸುಮ್ಮನೆ ಬಿಡುವುದಿಲ್ಲ. ಸುದ್ದಿಮಾತು ಬಳಗಕ್ಕೆ ಆದದ್ದೂ ಅದೇ.
ಇತ್ತೀಚೆಗೆ ಇಲ್ಲಿನ ಕೆಲ ಬರಹಗಳಿಗೆ ಪ್ರತಿಕ್ರಿಯಿಸಿದವರು - ಬ್ಲಾಗ್ ಅನ್ನು ಕಾಂಗ್ರೆಸ್ ಮುಖವಾಣಿ ಎಂದು ಟೀಕಿಸಿದ್ದಾರೆ. ಬಿಜೆಪಿ ನೇತೃತ್ವ ಸರಕಾರದ ಕೆಲವು ನಡೆಗಳನ್ನು ಟೀಕಿಸಿದಾಗ ನಮ್ಮನ್ನು 'ಬಿಜೆಪಿ ವಿರೋಧಿಗಳು' ಎಂದು ಹೇಳುವ ಉದ್ದೇಶ ಇಟ್ಟುಕೊಂಡು - 'ಕಾಂಗ್ರೆಸ್ ನವರು' ಎಂದು ದೂರಿದ್ದಾರೆ. ನಮ್ಮದೊಂದು ಪ್ರಶ್ನೆ - ಯಾವ ಪಕ್ಷಕ್ಕೆ ಸೇರದೆಯೂ, ಆಡಳಿತದಲ್ಲಿರುವವರ ಕೃತ್ಯಗಳನ್ನು ಟೀಕಿಸುವುದು ಸಾಧ್ಯವಿಲ್ಲವೇ? ಟೀಕಿಸುವ ಎಲ್ಲರಿಗೂ ಒಂದು ರಾಜಕೀಯ ನೆಲೆ ಇರಲೆಬೇಕೆ? ಒಂದು ಕ್ಷಣ ನಮ್ಮ ಓದುಗರು - ಸಾಮಾನ್ಯ ಪ್ರಜೆಗಳಾಗಿ ಇವರು ಟೀಕಿಸುತ್ತಿರಬಹುದಲ್ಲ - ಎಂದು ಯಾಕೆ ಯೋಚಿಸುವುದಿಲ್ಲ. ಯಾವ ರಾಜಕೀಯ ಪಕ್ಷಗಳೆಡೆಗೂ ಒಲವಿಲ್ಲದೆ, ಯಾವ ಪಕ್ಷಗಳ ಬಲವಿಲ್ಲದೆ ಕೋಟ್ಯಂತರ ಜನ ಈ ನಾಡಿನಲ್ಲಿದ್ದಾರೆ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ.
ಪತ್ರಿಕೆಗಳು ಖಾಯಂ ವಿರೋಧ ಪಕ್ಷ ಎಂಬ ಮಾತಿದೆ. ಹಾಗೆ ಸುದ್ದಿಮಾತಿಗೆ ಒಂದು ಪಕ್ಷದ ಹಣೆ ಪಟ್ಟಿ ಕಟ್ಟಲೇಬೇಕು ಎಂಬ ಉಮ್ಮೇದಿ ಇರುವವರಿಗೆ ಒಂದು ಮಾತು - ನಮ್ಮದು ಖಾಯಂ ವಿರೋಧ ಪಕ್ಷ. ಆಡಳಿತಕ್ಕೆ ಯಾರೇ ಬರಲಿ, ವಿರೋಧ ಪಕ್ಷಗಳ ಸಾಲಿನಲ್ಲಿ ನಾವೂ ಇರುತ್ತೇವೆ. ಅಂದಹಾಗೆ ವಿರೋಧ ಪಕ್ಷದ ಕೆಲಸ ಕೇವಲ ವಿರೋಧ ಮಾಡುವುದಲ್ಲ ಎಂಬ ಪ್ರಜ್ಞೆಗೆ ನಾವೂ ಬದ್ಧರು.
ಮತ್ತೆ ಕೆಲವರು ತಮ್ಮ ಅಸಹಾಯಕತೆಯನ್ನು ಅಸಂಬದ್ಧ ಪದಗಳಿಂದ ಟೀಕಿಸುವ ಪ್ರಯತ್ನ ಮಾಡಿದ್ದಾರೆ. ಅವರ 'ಅಕ್ಷರ ಜ್ಞಾನ'ಕ್ಕೆ ನಮ್ಮ ಬಹುಪರಾಕು ಎಂದಷ್ಟೇ ಹೇಳಲು ಬಯಸುತ್ತೇವೆ.
ಇತ್ತೀಚೆಗೆ ಕೆಲವರ ಪ್ರತಿಕ್ರಿಯೆಗಳು ಆರೋಗ್ಯಕರ ಚರ್ಚೆಗೆ ನಾಂದಿ ಹಾಡಿದ್ದವು. ನಮ್ಮ ಉದ್ದೇಶವೂ ಅದೇ. ಹೆಚ್ಚು ಚರ್ಚೆ ಆದರೆ, ನಮ್ಮೊಳಗಿನ ಗೊಂದಲಗಳು ಸ್ಷಷ್ಟವಾಗುತ್ತವೆ, ಯೋಚನಾ ಲಹರಿಗೆ ಒಂದು ದಿಕ್ಕು ದಕ್ಕುತ್ತದೆ. ಹೀಗೆ ಚರ್ಚೆ ನಡೆಸಿದವರಿಗೆಲ್ಲ ಸುದ್ದಿಮಾತು ಬಳಗದ ಅಭಿನಂದನೆಗಳು.

Wednesday, October 22, 2008

ತಿಂಗಳು ಕಳೆದಿದ್ದು ಗೊತ್ತಾಗಲೇ ಇಲ್ಲ...

ಇಂದು ಅಕ್ಟೋಬರ್ 23. ಸುದ್ದಿಮಾತು ಎಂಬ ಬ್ಲಾಗ್ ಬಾಗಿಲು ತೆರೆದು ಒಂದು ತಿಂಗಳಾಯ್ತು. ಅಂದ ಹಾಗೆ ಮೊದಲಿಗೆ ನಿಮ್ಮ ಕ್ಷಮೆ ಕೋರಬೇಕು. ಬುಧವಾರ ನಾವು ಯಾವ ಹೊಸ ಸುದ್ದಿಯನ್ನೂ ಪೋಸ್ಟ್ ಮಾಡಲಾಗಲಿಲ್ಲ. ಒಂದು ಸುದ್ದಿ ಸಿದ್ಧವಾಗಿದ್ದರೂ ತಾಂತ್ರಿಕ ಕಾರಣಗಳಿಂದ ಪೋಸ್ಟ್ ಮಾಡಲಿಲ್ಲ. ಕಳೆದ ಒಂದು ತಿಂಗಳಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ಸುದ್ದಿ ನೀಡುತ್ತಲೇ ಬಂದಿದ್ದೇವೆ. ದಿವವೂ ಏನಾದ್ರೂ ಹೊಸದು ಇರುತ್ತೆ ಎಂದು ಭೇಟಿ ಕೊಟ್ಟ ಮಿತ್ರರಿಗೆ ಬೇಸರವಾಗಿದೆ. ಕ್ಷಮೆ ಇರಲಿ. ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ತೇವೆ.
ಏನನ್ನೋ ಬರೆಯಲು ಕೂತು, ಮತ್ತೇನೋ ಮೂಡಿಬಂದಾಗ ಹುಟ್ಟಿಕೊಂಡದ್ದೇ ಸುದ್ದಿಮಾತು. ಸ್ಟಷ್ಟದನಿಯಲ್ಲಿ ಹೇಳುವುದಾದರೆ, ಯಾವುದೇ ಪೂರ್ವ ತಯಾರಿ ಇಲ್ಲದೆ ಆರಂಭಗೊಂಡದ್ದ ಈ ಬ್ಲಾಗ್. "ಅಂದಿನ ಪತ್ರಿಕೆಗಳನ್ನು ಓದಿ, ಅನ್ನಿಸಿದ್ದನ್ನು ಬರೆಯುವುದು" ಎಂಬ ಅಸ್ಪಷ್ಟ ಆಲೋಚನೆ ಹಿನ್ನೆಲೆಯಲ್ಲಿ ಮಾತು ಮುಂದುವರೆಯಿತು.
ಇದ್ಯಾವುದೋ ಹೊಸ ಬ್ಲಾಗ್ ಬಂತಲ್ಲ ಎಂದು ಕೆಲವರು ಇಣುಕಿದರು. ಪತ್ರಕರ್ತರು, ಪತ್ರಿಕೋದ್ಯಮ ಬಗ್ಗೆನೇ ತುಂಬಾ ಬರೀತಾರಲ್ಲ; ನಾವೂ ನೋಡೊಣ, ಏನ್ಮಾಡ್ತಾರೆ ಎಂಬ ಕುತೂಹಲದಿಂದ ಸಾಕಷ್ಟು ಮಂದಿ ಪತ್ರಕರ್ತರು ಬ್ಲಾಗ್ ಗೆ ಖಾಯಂ ಓದುಗರಾದರು. ಅಂತೆಯೇ ಪ್ರತಿಕ್ರಿಯೆಗಳೂ ಹೆಚ್ಚಾದವು. ಬ್ಲಾಗ್ ಬರಹಗಳಿಗೆ ಉತ್ತೇಜನ ನೀಡುವುದೇ ಪ್ರತಿಕ್ರಿಯೆಗಳು. ನಮ್ಮನ್ನು ಯಾರೋ ಸೂಕ್ಷ್ಮವಾಗಿ ಗಮನಸುತ್ತಿದ್ದಾರೆ ಎಂದರೆ; ನಾವು ಎಚ್ಚರಗೊಳ್ಳುತ್ತೇವೆ.
ನಾವು ನಮ್ಮ ಗುರುತನ್ನು ಬಹಿರಂಗ ಮಾಡದ ಕಾರಣ ಓದುಗರು ಅನೇಕರ ಮೇಲೆ ಅನುಮಾನ ಪಡುವಂತಾಗಿದೆ. ನಮ್ಮ ಉದ್ದೇಶ ಸ್ಪಷ್ಟ "ನಾವು ಯಾರು" ಎನ್ನುವ ಸಂಗತಿ ಮುಖ್ಯ ಆಗಲೇಬಾರದು. ಬರಹ ಮುಖ್ಯವಾಗಲಿ.
ಮತ್ತೊಂದು ವಿಚಾರ. ಈ ಬ್ಲಾಗ್ ಕಂಡದ್ದನ್ನೆಲ್ಲ ಟೀಕೆ ಮಾಡಲು ಹುಟ್ಟಿಕೊಂಡಿಲ್ಲ. ಸರಿಕಾಣದನ್ನು ಟೀಕೆ ಮಾಡಲೇಬೇಕಾಗುತ್ತದೆ. ಆದರೆ ಟೀಕೆ ಮಾಡಲೆಂದೇ ಟೀಕೆಯಲ್ಲ. ಹಾಗೆ, ಟೀಕೆಯನ್ನು ಎಲ್ಲರೂ ಒಪ್ಪಲೇಬೇಕೆಂದಲ್ಲ. ಉತ್ತಮವಾದದನ್ನು ಕಂಡಾಗ ಮೆಚ್ಚಿಕೊಂಡಿದ್ದೇವೆ. ಹಾಗಂತ ನಾವು ಕೇವಲ-ಟೀಕೆ ಮೆಚ್ಚುಗೆಗಳಿಗೆ ಸೀಮಿತವಾಗಿಲ್ಲ. ಬೆಳವಣಿಗೆಗಳನ್ನು ವಿಶ್ಲೇಷಿಸುತ್ತೇವೆ. ಆರೋಗ್ಯಕರ ಚರ್ಚೆ ನಮ್ಮ ಉದ್ದೇಶ.
ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಲಭ್ಯ ಇರುವ ಫೆಲೋಷಿಪ್, ಸ್ಕಾಲರ್ ಷಿಪ್ ಮಾಹಿತಿ ಒದಗಿಸುವ ಉದ್ದೇಶವೂ ಸುದ್ದಿಮಾತಿಗಿದೆ. ನಾವು ಐದು ಮಂದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಅವಧಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಎಲ್ಲರೂ ಒಂದೆಡೆ ಸೇರಿ ಚರ್ಚಿಸಿ ತೀರಾ ವ್ಯವಸ್ಥಿತವಾಗಿ ಮಾಡಲಾಗುತ್ತಿಲ್ಲ ಎಂಬ ಕೊರಗು ಇದ್ದೇ ಇದೆ. ಮುಂದಿನ ದಿನಗಳಲ್ಲಿ ಇದೆಲ್ಲವೂ ಸರಿ ಹೋಗಬಹುದು ಎಂಬ ನಿರೀಕ್ಷೆ ಇದೆ .
ನಮ್ಮ ಬ್ಲಾಗ್ ಮತ್ತಷ್ಟು ಸಮಗ್ರವಾಗಿ ಹೊರಬರಲು ನಿಮ್ಮದೂ ಸಹಕಾರ ಬೇಕು ನಮ್ಮೊಂದಿಗೆ ವಿಚಾರಗಳನ್ನು ಹಂಚಿಕೊಳ್ಳಲು ಸಂಪರ್ಕಿಸಿ: suddimaatu@gmail.com

Friday, October 10, 2008

ಯಾರನ್ನೂ ಬದಲಾಯಿಸುವ ಉಮೇದಿಯಿಲ್ಲ...

ಕಳೆದ ಒಂದು ವಾರದಿಂದ ಇಲ್ಲಿಯ ಬರಹಗಳಿಗೆ ಬಹುಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ನಮ್ಮ ಪ್ರಯತ್ನ ಮೆಚ್ಚಿಕೊಂಡಿದ್ದರೆ, ಮತ್ತೆ ಕೆಲವರು ಹಿಗ್ಗಾ ಮುಗ್ಗಾ ಟೀಕಿಸಿದ್ದಾರೆ. ಎಲ್ಲಿರಗೂ ಸ್ವಾಗತ. ರಾಹುಲ್ ಗಾಂಧಿ ಚಿತ್ರಗಳಿಗೆ ಸ್ವಲ್ಪ ಹೆಚ್ಚೇ ಎನ್ನುವಷ್ಟು ಪ್ರತಿಕ್ರಿಯೆಗಳು ಬಂದಿವೆ. ಕುಕೂಊ ಎಂಬ ಬ್ಲಾಗಿ "ಯಾವ ಗಂಡಸು ತನಕ್ಕೆ ಈ ರಾ'ಗಾಂದಿ ಬೆವರು ಸುರಿಸಿದ್ದು? ಅದೂ ಗನ್ ಮ್ಯಾನ್ಗಳ ನಡುವೆ..!ನಿನಗೆ ಅಶ್ಟು ತಿಳುವಳಿಕೆ ಇಲ್ಲವೆ? ಯಾಕೆ ಈ ತಿಳಿಗೇಡಿ ತನ ನಿಮಗೆ?ನಿಮಗೂ ಆ ಟೈಮ್ಸ್ ಆಫ್ ಇಂಡಿಯ, NDTV, ಆಜತಕ್ ನವರಿಗೂ ಇರುವ ಗೇಂಟೇನು?"
ಇವರ ಪ್ರತಿಕ್ರಿಯೆ ಅಷ್ಟಾಗಿ ಅರ್ಥವಾಗಲಿಲ್ಲ. 'ಗಂಡಸುತನ' ಪ್ರದರ್ಶನಕ್ಕಾಗಿ ಮಾತ್ರ ಯಾರಾದರೂ ಬೆವರು ಸುರಿಸುತ್ತಾರೋ? ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪ್ರಚುರ ಪಡಿಸಲು ರಾಹುಲ್ ಗಾಂಧಿ, ಗಾಂಧಿ ಜಯಂತಿಯಂದು ಆ ಕೆಲಸ ಮಾಡಿದ್ದು. ಅದು ಯುಪಿಎ ಸರಕಾರದ ಯೋಜನೆ. ಪಕ್ಷದ ಕಾರ್ಯಕರ್ತನಾಗಿ ಆ ಯೋಜನೆಯನ್ನು ಪ್ರಚಾರ ಮಾಡುವುದು ಕೆಲಸವಾಗಿತ್ತು. ಈ ದೇಶದಲ್ಲಿ ತುಟಿಗೆ ಹಚ್ಚುವ ಕ್ರೀಮ್, ತೊಡುವ ಅಂಡರ್ ವೇರ್ ನಿಂದ ಹಿಡಿದು, ಅತ್ಯಾಧುನಿಕ ಕಾರುಗಳನ್ನು ಪ್ರಚಾರ ಮಾಡಲು ತಾರೆಗಳು ಮುಗಿಬಿಳುತ್ತಾರೆ ಹಾಗೂ ಆ ಮೂಲಕ ಕೋಟಿಗಟ್ಟಲೆ ಹಣ ಗಳಿಸುತ್ತಾರೆ. ಆದರೆ ಜನರಿಂದ ಆಯ್ಕೆಯಾದವನೊಬ್ಬ ಉದ್ಯೋಗ ನೀಡುವ ಯೋಜನೆಯೊಂದರ ಪ್ರಚಾರಕ್ಕಿಳಿದರೆ, ಅವನ ಗಂಡಸುತನ, ಬೆವರು..ಎಂದೆಲ್ಲಾ ಕಾಮೆಂಟ್ ಗಳು ಕೇಳಿಬರುತ್ತವೆ. ನಾವು ತೀರಾ ಈ ಮಟ್ಟಿಗೆ ಸಿನಿಕರಾಗುವುದು ಬೇಡ.
ಇನ್ನು ಕೆಲವರು ನಾವು ಹಿಂದೂ ವಿರೋಧಿಗಳು ಎಂದು ಫರ್ಮಾನು ಹೊರಡಿಸಿದ್ದಾರೆ. ಗೊಡ್ಡು ಸಂಪ್ರದಾಯಗಳನ್ನು, ಇಂದಿಗೂ ನಿಲ್ಲದ ಅಸ್ಪೃಶ್ಯತೆಯನ್ನು, ಢಾಳಾಗಿ ಕಾಣುವ ಅಸಮಾನತೆಯನ್ನು ಟೀಕಿಸಿದರೆ ಅದನ್ನು ಹಿಂದೂ ವಿರೋಧಿ ಧೋರಣೆ ಎಂದು ಮೂದಲಿಸುವುದು ಇಂದು ಸರ್ವೇಸಾಮಾನ್ಯವಾಗಿದೆ.
ಅಮೆರಿಕಾದಿಂದ ರವಿ ತಮ್ಮ ಇತ್ತೀಚಿನ ಬರಹವೊಂದರಲ್ಲಿ ಕೋಮುವಾದ, ಮೂಲಭೂತವಾದ ವಿರುದ್ಧದ ದನಿಗಳು ಇಂಟರ್ ನೆಟ್, ಬ್ಲಾಗ್ ಗಳಲ್ಲಿ ಕಾಣುತ್ತಿರುವುದು ತೀರಾ ಇತ್ತೀಚೆಗೆ. ಈ ಮೊದಲು 'ನಿಜ ಕನ್ನಡ ನಾಡು' ಇಂಟರ್ ನಟ್ ನಲ್ಲಿ ಪ್ರತಿಬಿಂಬಿತವಾಗುತ್ತಿರಲಿಲ್ಲ ಎಂದಿದ್ದಾರೆ. ತಳ ಸಮುದಾಯದ ಕಾಳಜಿ ಬಗ್ಗೆ ಚಿಂತಿಸುವ ಅನೇಕರು ಇಂಟರ್ ನೆಟ್, ಬ್ಲಾಗ್ ಗಳು ಪರಿಚಯ ಇಲ್ಲದಿರುವುದನ್ನೇ ಹೆಮ್ಮೆಯ ಸಂಗತಿ ಎಂದು ಬೀಗುವ ಕಾಲವಿತ್ತು. ಈಗ ಬದಲಾಗುತ್ತಿದೆ ಎಂದು ಬರೆಯುತ್ತಾ ಸುದ್ದಿಮಾತು ಹಾಗೂ ಮತ್ತಿತರೆ ಬ್ಲಾಗ್ ಗಳನ್ನು ಉದಾಹರಿಸಿದ್ದಾರೆ (ಪೂರ್ಣ ಲೇಖನ ಇಲ್ಲಿದೆ, ಓದಿ). ನಮ್ಮ ಬರಹಗಳನ್ನು ಟೀಕಿಸುವವರು ಈ ಬೆಳವಣಿಗೆಯನ್ನು ಅಷ್ಟಾಗಿ ಸಹಿಸುವವರಲ್ಲ ಎಂದೆನಿಸುತ್ತದೆ.
ಒಂದಂತೂ ಸ್ಪಷ್ಟ. ನಮ್ಮ ಬರಹಗಳಿಂದ ಯಾರನ್ನೇ ಆಗಲಿ ತಿದ್ದುತ್ತೇವೆ ಎನ್ನುವ ಉಮೇದಿ ನಮ್ಮದೇನಲ್ಲ.

Friday, October 3, 2008

ಸುದ್ದಿಮಾತು ಸಂಪಾದಕೀಯ...

ಸುದ್ದಿಮಾತು ಮಾತನಾಡಲು ಆರಂಭಿಸಿ ವಾರಗಳೇ ಉರುಳಿ ಹೋದವು. ಓದುಗರಲ್ಲಿ ನೂರೆಂಟು ಅನುಮಾನಗಳು. ನಾವು ನಿರೀಕ್ಷಿಸಿದಂತೆ, ಪತ್ರಕರ್ತ ಸಮೂಹವೇ ಬ್ಲಾಗ್ ನ ಬಹುತೇಕ ಓದುಗರು. ಬ್ಲಾಗ್ ಗೆ ಭೇಟಿ ಕೊಟ್ಟವರೆಲ್ಲ, view my complete profile ಮೇಲೆ ಮರೆಯದೆ ಕ್ಲಿಕ್ ಮಾಡಿದರು. ಖಾಲಿ-ಖಾಲಿ ಇದ್ದದ್ದನು ಕಂಡು 'ಯಾರಿರಬಹುದು' ಎಂದು ಲೆಕ್ಕಾಚಾರಕ್ಕೆ ಶುರುಹಚ್ಚಿದರು.
'ಯಾರೋ ನಮ್ಮ ಮಧ್ಯೆ ಇರೋ ಪತ್ರಕರ್ತನೇ ಇಂತಹ ಕೆಲಸ ಮಾಡುತ್ತಿರಬೇಕು' ಎಂದು ಹಲವರು ಅಂದುಕೊಂಡದ್ದೂ ಬ್ಲಾಗ್ ಕಿವಿಗೆ ಕೇಳಿಸಿದೆ. ಬ್ಲಾಗ್ ಪ್ರತಿದಿನ update ಆಗುತ್ತೆ ಅಂದರೆ, 'ಯಾವನೋ ಕೆಲಸ ಇಲ್ಲದ ಆಸಾಮಿ ಇರಬೇಕು'; 'ಪದೇ ಪದೇ ಯಡಿಯೂರಪ್ಪನ್ನ ಬಯ್ಯೋದು ನೋಡಿದರೆ ಇವ ಕಾಂಗ್ರೆಸ್ ನವನೋ, ಎಡಪಂಥೀಯವನೋ ಇರಬೇಕು'; ಪತ್ರಿಕಾ ಭಾಷೆ ಬಗ್ಗೆ, ಪತ್ರಕರ್ತರ ಅವಾಂತರಗಳ ಬಗ್ಗೆ ಬರೆಯೋದು ನೋಡಿದ್ರೆ 'ಯಾರೋ ಪತ್ರಕರ್ತನೇ ಇರಬೇಕು...' ಹೀಗೆ ಹತ್ತಾರು ಊಹೆಗಳು ಓದುಗರಲ್ಲಿ ಎದ್ದಿರುವುವುದು ಸಹಜ.
ಈ ಎಲ್ಲಾ ಸಂಶಯಗಳಿಗೆ ಉತ್ತರ ನೀಡುವ ಸಮಯ ಈಗ ಬಂದಿದೆ. ಮೊದಲನೆಯದಾಗಿ ಇದು ಯಾರೋ ಒಬ್ಬ ಮಾಡುತ್ತಿರುವ ಬ್ಲಾಗ್ ಅಲ್ಲ. ಐದು ಮಂದಿ ಇದ್ದೇವೆ. ನಾವ್ಯಾರೂ ಪತ್ರಕರ್ತರಲ್ಲ. ಹಾಗಂತ ಪತ್ರಿಕೋದ್ಯಮ ಪರಿಚಯ ಇಲ್ಲ ಅಂತಲ್ಲ. ನಾವೆಲ್ಲರೂ ಬೇರೆ ಬೇರೆ ಪತ್ರಿಕೆಗಳಲ್ಲಿ 4-5 ವರ್ಷ ಕಾಲ ಕೆಲಸ ಮಾಡಿ ಈಗ ಬೇರೆಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಹಾಗಾಗಿ ಪತ್ರಿಕೋದ್ಯಮದೆಡೆಗೆ ಇಂಥ ಕಾಳಜಿ. ಪತ್ರಿಕೆ, ಪತ್ರಿಕೋದ್ಯಮ ಬಗ್ಗೆನೇ ಬರೆದರೆ ಹೇಗೆ ಅಂತ ನಾವೆಲ್ಲಾ ಕೂಡಿ ನಿರ್ಧಾರ ಮಾಡಿ ಬ್ಲಾಗ್ ಆರಂಭಿಸಿದೆವು.
ನಮ್ಮ ಹೆಸರು ಯಾಕೆ ಹೇಳ್ತಿಲ್ಲ ಅನ್ನೋದು ನಿಮ್ಮ ಪ್ರಶ್ನೆ ಇರಬಹುದು. ಆದರೆ ಹೆಸರಲ್ಲೇನಿದೆ? ಹೆಸರು ಹೇಳಿದ್ರೆ - ಇವ ಘಟ್ಟದ ಕೆಳಗಿನವನು, ಅವನು ಉತ್ತರ ಕರ್ನಾಟಕದವನು, ಮತ್ತೆ ಅವನೋ ಮಹಾನ್ ಚಡ್ಡಿ, ಇನ್ನೊಬ್ಬನೋ ಆ ಜಾತಿಯವನು.. ಹೀಗೆ ಏನೇನೋ ಕಾರಣ ಕೊಟ್ಟು ಬರಹಗಳನ್ನು ಓದೋ ಸನ್ನಿವೇಶ ಸೃಷ್ಟಿಯಾಗುತ್ತೆ. ಅದೆಲ್ಲಾ ಯಾಕೆ?
Ronald Bartes ಹೇಳೋ ಹಾಗೆ author is dead. ಬ್ಲಾಗ್ ನಲ್ಲೂ ಹಾಗೆ. ಬರಹಗಾರರಿಗೆ ಅಸ್ತಿತ್ವವಿಲ್ಲ. ಬರಹಗಳಿಗೆ ಮಾತ್ರ ಆಧಾರ ಇರುತ್ತೆ. ಬದ್ಧತೆ ಇರುತ್ತೆ. ನಿಮಗನ್ನಿಸಿದ್ದನ್ನ ನಮ್ಮೊಂದಿಗೆ ಹೇಳಿಕೊಳ್ಳಿ..
ಅಂದಹಾಗೆ ಯಾರನ್ನು ಬಯ್ಯುವ ಉದ್ದೇಶ ನಮ್ಮದಲ್ಲ. ತಪ್ಪು ಮಾಡಿದಾಗ ಸುದ್ದಿಮಾತು ಆಡಿಕೊಳ್ಳುತ್ತದೆ. ಸರಿ ಮಾಡಿದಾಗ ಮೆಚ್ಚಿಕೊಳ್ಳುತ್ತದೆ. ಹಾಗೆಯೇ ರಂಜನೆಯು ಇರಲಿ ಎಂದು ಇನ್ನುಮುಂದೆ ಪ್ರತಿ ಶುಕ್ರವಾರ "ಸಿನಿಮಾತು" ನಿಮ್ಮ ಬ್ಲಾಗ್ ಅಂಗಳದಲ್ಲಿ.