Wednesday, April 1, 2009

ಕಟ್ಟಾ ಜಗದೀಶುಡು ತೋರಿದ ರಾಯಲಸೀಮಾ ಪರಾಕ್ರಮಮು..








ನಿನ್ನೆ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ತೆಲುಗರ ಸಮಾವೇಶ ನಡೆಸುತ್ತಿದ್ದ ವೆಂಕಯ್ಯ ನಾಯ್ಡು ಮತ್ತು ಬಳಗದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪೊಲೀಸರಿಂದ-ಬಿಜೆಪಿ ಕಾರ್ಯಕರ್ತರಿಂದ ಏಟು ತಿಂದ ಪ್ರಕರಣದ ವರದಿಯನ್ನು ಪತ್ರಿಕೆಗಳಲ್ಲಿ ನೀವು ಗಮನಿಸಿರಬಹುದು. ಆದರೆ ಪತ್ರಿಕೆಗಳಲ್ಲಿ ಪ್ರಕಟವಾಗದ ಒಂದೆರಡು ಫೋಟೋಗಳು ಸುದ್ದಿಮಾತು ಕೈಗೆ ಸಿಕ್ಕಿವೆ.
ಇಲ್ಲಿ ಕರವೇ ಕಾರ್ಯಕರ್ತನೋರ್ವನನ್ನು ಜಾಡಿಸಿ ಒದೆಯುತ್ತಿರುವಾತ ಬೇರೆ ಯಾರೂ ಅಲ್ಲ. ವಾರ್ತಾ, ಅಬಕಾರಿ, ಐಟಿಬಿಟಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಸುಪುತ್ರ, ರಾಜಕೀಯ ಉತ್ತರಾಧಿಕಾರಿ ಕಟ್ಟಾ ಜಗದೀಶ್. ಈ ಕಟ್ಟಾ ಜಗದೀಶ್‌ನ ಗೂಂಡಾಗಿರಿಯನ್ನು ತಡೆಯಲು ಯತ್ನಿಸಲು ಅದೆಷ್ಟು ಮಂದಿ ಹರಸಾಹಸ ಮಾಡುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಜಗದೀಶ್ ತೋರಿದ ರಾಯಲಸೀಮಾ ಪರಾಕ್ರಮವನ್ನು ತಣ್ಣಗಾಗಿಸಲು ಆರ್.ವಿ.ಹರೀಶ್ ಆದಿಯಾಗಿ ಎಲ್ಲರೂ ಯತ್ನಿಸುತ್ತಿದ್ದಾರೆ.
ಮತ್ತೊಂದು ಚಿತ್ರದಲ್ಲಿ ಅರಿಭಯಂಕರ ಕಟ್ಟಾ ಜಗದೀಶ್‌ರನ್ನು ಡಿಸಿಪಿ ರಮೇಶ್, ಮಫ್ತಿಯಲ್ಲಿರುವ ಪೊಲೀಸರು ದೂರಕ್ಕೆ ಕೊಂಡೊಯ್ದಿದ್ದಾರೆ. ಆದರೂ ಆತನ ಆವೇಶ ತಣ್ಣಗಾದಂತೆ ಕಾಣುತ್ತಿಲ್ಲ.
ಕರ್ನಾಟಕದ ತೆಲುಗರು ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ತೆಲುಗರು ತಮ್ಮನ್ನು ತಾವು ಕನ್ನಡಿಗರೆಂದೇ ಹೇಳಿಕೊಳ್ಳುತ್ತಾರೆ. ಕನ್ನಡಿಗರ ಜತೆ ಯಾವತ್ತೂ ಸಂಘರ್ಷಕ್ಕೆ ಬಿದ್ದವರಲ್ಲ. ತಮಾಶೆಯೆಂದರೆ ಸಾಕಷ್ಟು ಮಂದಿ ಕನ್ನಡ ಹೋರಾಟಗಾರರ ಮಾತೃಭಾಷೆಯೂ ತೆಲುಗು.
ಹೀಗಿರುವಾಗ ಬೆಂಗಳೂರಿನಲ್ಲಿ ತೆಲುಗು ಮಾಫಿಯಾವೊಂದನ್ನು ಕಟ್ಟುವ ಕೆಲಸ ಇತ್ತೀಚಿಗೆ ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ. ಆಂಧ್ರದಿಂದ ವಲಸೆ ಬಂದ ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ಕುಳಗಳು ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇವರಿಗೆಲ್ಲ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿರುವ ವೆಂಕಯ್ಯ ನಾಯ್ಡು ಕೃಪಾಶೀರ್ವಾದವಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ವೆಂಕಯ್ಯನವರ ಕಟ್ಟಾ ಬೆಂಬಲಿಗ ಎಂದು ಯಾರಿಗೂ ನೆನಪಿಸಬೇಕಾಗಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಎದೆಗೆ ಒದೆಯುವಷ್ಟು ಸಾಹಸವನ್ನು ಈ ಮಂದಿ ಪ್ರದರ್ಶಿಸುತ್ತಿದ್ದಾರೆ ಎಂದರೆ ಇದು ಅಷ್ಟು ಸಣ್ಣ ವಿಷಯವೇನೂ ಅಲ್ಲ. ಹಿಂದೆ ತಮಿಳು ಭಾಷಾಂಧರಿಂದ ಬೆಂಗಳೂರು ಸಾಕಷ್ಟು ನರಳಿದೆ. ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಎಂದು ಅಬ್ಬರಿಸುವಷ್ಟು ಅವರು ಮಿತಿಮೀರಿದ್ದರು. ಬೆಂಗಳೂರಿನ ಹೃದಯಭಾಗದಲ್ಲಿರುವ ಶ್ರೀರಾಮಪುರದಲ್ಲಿ ದಾರಿಯಲ್ಲಿ ಕನ್ನಡದಲ್ಲಿ ಮಾತನಾಡಿಕೊಂಡು ಹೋದರೆ, ಚಾಕು, ಬ್ಲೇಡಿನಲ್ಲಿ ಕುರ್ಪು (ಗಾಯ) ಬೀಳುತ್ತಿದ್ದ ಕಾಲವೂ ಇತ್ತು. ಕಾಲಾಂತರದಲ್ಲಿ ಇದೆಲ್ಲವೂ ಒಂದಷ್ಟು ನಿಯಂತ್ರಣಕ್ಕೆ ಬಂದಿವೆ.
ಈಗ ತಮ್ಮ ರಾಜಕೀಯ ತಿಕ್ಕಲು, ತೆವಲಿಗೆ ಬಿಜೆಪಿಯವರು ತೆಲುಗರನ್ನು ಕನ್ನಡಿಗರಿಂದ ಬೇರೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಬಿಜೆಪಿಯವರು ಯಾವತ್ತಿಗೂ ನಾಡಪ್ರೇಮಿಗಳಾಗಿರಲಿಲ್ಲ ಎಂಬುದಕ್ಕೆ ಇದು ಸಾಕ್ಷಿ.
ಕೊನೆ ಗುಟುಕು: ಕಟ್ಟಾ ಜಗದೀಶರ ಪರಾಕ್ರಮಗಳೆಲ್ಲ ಪತ್ರಿಕಾ ಛಾಯಾಗ್ರಾಹಕರ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಆದರೆ ಜಗದೀಶ ಕಾಡಿ ಬೇಡಿ, ತಮ್ಮ ಚಿತ್ರಗಳನ್ನು ಪ್ರಕಟಿಸದಂತೆ ತಡೆದಿದ್ದಾರೆ. ಆದರೆ ಸುದ್ದಿಮಾತುಗೆ ಈ ಚಿತ್ರಗಳು ಸಿಕ್ಕಿವೆ. ಪತ್ರಕರ್ತರಿಗೆ ಈ ಚಿತ್ರಗಳು ಮುಂದೆ ಬೇಕಾಗಬಹುದು. ಎಷ್ಟೇ ಆದರೂ ಭಾವಿ ಶಾಸಕರ ಚಿತ್ರಗಳಲ್ಲವೆ?

1 comment:

Jadi G said...

yakri suddine illa........?