Tuesday, July 28, 2009

ರಿಯಾಕ್ಷನ್ ಪಾರ್ ರಿಯಾಕ್ಷನ್ ಜರ್ನಲಿಸಂ..!

ಎಲೆಕ್ಟ್ರಾನಿಕ್ ಮಾಧ್ಯಮಗಳ ಸುದ್ದಿಹಸಿವು, ಅದಕ್ಕಾಗಿ ಅವರು ಆಯ್ದುಕೊಳ್ಳುವ ಮಾರ್ಗಗಳ ಕುರಿತಂತೆ ಸ್ವತಃ ಎಲೆಕ್ಟ್ರಾನಿಕ್ ಮೀಡಿಯಾ ಒಂದರ ದೆಹಲಿ ಪ್ರತಿನಿಧಿಯಾಗಿರುವ ಶ್ರೀನಿವಾಸಗೌಡ ತಮ್ಮ ಖಾಸಗಿ ಡೈರಿಯಲ್ಲಿ ಬರೆದಿದ್ದಾರೆ.
ಸುದ್ದಿಯನ್ನು ಸೃಷ್ಟಿಸುವ ಚಾಳಿ ಇತ್ತೀಚಿಗೆ ಈ ಮಾಧ್ಯಮಗಳಲ್ಲಿ ವ್ಯಾಪಕವಾಗಿದೆ. ರಿಯಾಕ್ಷನ್ ಫಾರ್ ರಿಯಾಕ್ಷನ್ ಜರ್ನಲಿಸಂ ಹೊಸ ತಲೆಮಾರಿನ ಪತ್ರಕರ್ತರನ್ನು ಹೇಗೆ ದಿಕ್ಕುತಪ್ಪಿಸಿದೆ ಎಂಬುದಕ್ಕೆ ಈ ಲೇಖನದಲ್ಲಿ ಒಳನೋಟಗಳಿವೆ. ಸುದ್ದಿ ಮಾತು ಓದುಗರಿಗಾಗಿ ಶ್ರೀನಿವಾಸಗೌಡರು ಬರೆದ ಲೇಖನ ಇಲ್ಲಿದೆ.

ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದವು.ಡೆಲ್ಲಿ ಅನ್ನೊ ನಗರಿ ಚುನಾವಣಾ ಬಿಸಿಯಿಂದ ಕೊತ, ಕೊತ ಅಂತ ಕುದಿಯುತ್ತಿತ್ತು. ಅಧಿಕಾರ ಹಿಡಿಯುವ ಹಪಹಪಿಯಿಂದ ರಾಜಕೀಯ ನಾಯಕರು ಕೆಸರೆರಚಾಟ, ಮಾತಿನ ಧಾಳಿ (ಬೈಟ್ ದಾಳಿ) ಮಾಡುತ್ತಿದ್ದರು. ನಾರ್ಥ್ ಇಂಡಿಯಾದ (ನ್ಯಾಷನಲ್ ಮೀಡಿಯಾದವರು) ಮಾದ್ಯಮಗಳು ರಾಜಕೀಯ ನಾಯಕರ ಹೇಳಿಕೆಗಳನ್ನ ರಾಷ್ಟ್ರೀಯ ಸುದ್ದಿಮಾಡುತ್ತಿದ್ದರು. ತಮಗೆ ಸಿಕ್ಕಿದ್ದೆಲ್ಲವನ್ನು ಎಕ್ಸ್ಲೂಸಿವ್ ಅಂತ ತೋರಿಸೊರು. ನ್ಯಾಷನಲ್ ಮಿಡಿಯಾಗಳಲ್ಲಿ ಪಸ್ಟ್ ಇನ್ ಸಿಎನ್‌ಎನ್ ಐಬಿಎನ್, ಪಸ್ಟ್ ಇನ್ ಟೈಮ್ಸ್ ನೌ, ಪಸ್ಚ್ ಇನ್ ಆಜ್ ತಕ್ ,ಅಂತ ಪ್ರೋಮೋ ಹಾಕಿಕೊಂಡು ರಾಜಕೀಯ ನಾಯಕರ ಸಂದರ್ಶನಗಳು, ಸುದ್ದಿಗಳು ಬರುತ್ತಿದ್ದವು.

ರಾಜಕೀಯ ನಾಯಕರ ಸಂದರ್ಶನ ಸಿಕ್ಕಿದ್ದೆ ಜೀವಮಾನದ ಸಾಧನೆ ಅಂಥ ಟೆಲಿವಿಷನ್ ಪತ್ರಕರ್ತರು ರೋಮಾಂಚನಕ್ಕೆ ಒಳಗಾಗಿದ್ದರು. ದಿನ ಬೆಳಾಗಾದರೆ 'ಲಾಲೂ ಹೀಗೆ ಅಂದವ್ರೆ ನೀವು ಏನ್ ಹೇಳ್ತಿರಿ', 'ಅಮರ್ ಸಿಂಗ್ ಹಿಂಗೆ ಹೇಳವ್ರಲ್ಲಾ ನೀವು ಏನಂತೀರಿ', 'ವರುಣ್ ಗಾಂಧಿ ಹೇಳಿಕೆಗೆ ನಿಮ್ಮ ರಿಯಾಕ್ಷನ್ ಏನು', 'ಮಾಯಾವತಿ ಹಿಂಗೆ ಹೇಳವ್ರಲ್ಲಾ ಅದಕ್ಕೆ ನೀವೆಂಗೆ ಹೇಳ್ತೀರಿ', ಅಂತ ಬೈಟ್ ತೆಗೆದುಕೊಳ್ಳೊದು ಆಯಾ ಬೀಟ್ ನಲ್ಲಿರೋ ಕೆಲಸ. ಇದಕ್ಕೆ ರಾಜಕೀಯ ಪಕ್ಷಗಳ ಸಹಕಾರ ಹೇಗಿದೆಯಪ್ಪಾ ಅಂದರೆ, ದಿನಾ ಸಾಯಂಕಾಲ ಎಲ್ಲಾ ಪಕ್ಷಗಳ ಕಚೇರಿಯಲ್ಲೂ ಪ್ರೆಸ್ ಕಾನ್ಪರೆನ್ಸ್ ಕರೆಯುತ್ತಾರೆ. ಅವರು ಹೇಳಿದ್ದಕ್ಕೆ ಇವರು, ಇವರು ಹೇಳಿದ್ದಕ್ಕೆ ಅವರು ಉತ್ತರ ಕೊಡುತ್ತಾರೆ.

ನೇರವಾಗಿ ಯಾರೂ ಕಚ್ಚಾಡಲ್ಲಾ, ಮೀಡಿಯಾ ರಾಜಕೀಯ ಪಕ್ಷಗಳಿಗೆ ಮೀಡಿಯೇಟರ್ ಇದ್ದ ಹಾಗೆ. ಚಾನಲ್ ಗಳಿಗೆ ಬೇಕಾಗಿದ್ದು ಏನು ಅಂತ ಅವರಿಗೊ ಅರ್ಥ ಆಗಿಹೊಗಿದೆ. ಅದಕ್ಕಾಗಿಯೇ ರಾಜಕೀಯ ಪಕ್ಷಗಳೂ ವರ್ಣರಂಜಿತವಾಗಿ ಮಾತಾಡೋರನ್ನ ಪಕ್ಷದ ವಕ್ತಾರರನ್ನಾಗಿ ನೇಮಿಸಿದ್ದಾರೆ.ಅವರಲ್ಲಿ ಬಹುತೇಕರು ಸುಪ್ರಿಂ ಕೋರ್ಟ್ ಲಾಯರ್ ಗಳು, ಇಲ್ಲಾ ಹಳೇ ಜರ್ನಲಿಸ್ಟ್ ಗಳು. ಪಾಟಿ ಸವಾಲಿಗೆ ಉತ್ತರಿಸಲು ಇವರಿಗೇ ಅಲ್ಲ ಗೊತ್ತಿರೋದು. ಅವರ ಕೆಲಸ ಏನಪ್ಪಾ ಅಂದರೆ ದಿನಪೂರ್ತಿ ಚಾನಲ್ ಗಳಿಗೆ ಬೈಟ್ ಕೋಡೋದು. ಪತ್ರಿಕೆಗಳಿಗೆ ಮಾತಾಡೋದು. ರಿಯಾಕ್ಷನ್ ಪಾರ್ ರಿಯಾಕ್ಷನ್ ಅದು ಅವರ ಕೆಲಸ ಯಾವ ಪಕ್ಷವೂ ಇದರಲ್ಲಿ ಹಿಂದೆ ಬಿದ್ದಿಲ್ಲ ಬಿಡಿ.

ಅವತ್ತು ಏನಾಯ್ತು ಅಂದರೆ ಬಿಜೆಪಿ ಕಚೇರಿಯಲ್ಲಿದ್ದೆವು. ಯಾರೋ ಎಲಕ್ಟ್ರಾನಿಕ್ ಮೀಡಿಯಾದ ವರದಿಗಾರ್ತಿ ಯೊಬ್ಬಳಿಗೆ ಅರುಣ್ ಶೌರಿ ಸಿಕ್ಕಾಪಟ್ಟೆ ರೇಗ್ತಾ ಇದ್ದರು. ನಾನು ಕುತೂಹಲಕ್ಕೆ ಅಂತ ಹತ್ತಿರ ಹೋದೆ.
'ಡೋಂಟ್ ಡೂ ದಿಸ್ ಬ್ಲಡಿ ಜರ್ನಲಿಸಂ, ದಿಸ್ ಈಸ್ ಕಾಲ್ಡ್ ಬೈಟ್ ಜರ್ನಲಿಜಂ. ವೈ ಶುಡ್ ಐ ರಿಯಾಕ್ಟ್ ಪಾರ್ ಸಂ ಒನ್ಸ್ ಸ್ಟೇಟ್ ಮೆಂಟ್. ಗೋ ಗೋ, ಲರ್ನ್ ವಾಟ್ ಈಸ್ ಜರ್ನಲಿಜಂ' ಅಂದರು .
ಒಂದು ರಿಯಾಕ್ಷನ್ ಬೈಟ್ ಕೇಳಿದ ಕಾರಣಕ್ಕೆ ಆ ರಿಪೋರ್ಟರ್ ಸಿಕ್ಕಾಪಟ್ಟೆ ಬೈಸಿಕೊಂಡು ಹ್ಯಾಪ ಮೊರೆ ಹಾಕಿಕೊಂಡು ಕಣ್ಣೀರಾಗುತ್ತಿದ್ದಳು. ಅಷ್ಟೇನು ಅನುಭವಿ ಅಲ್ಲದ ಆಕೆ ಸಿಎನ್‌ಇಬಿ ಎಂಬ ಹಿಂದಿ ಚಾನಲ್ಲಿನ ವರದಿಗಾರ್ತಿ, ಆಕೆ ಮಾಡಿದ ತಪ್ಪೇನಪ್ಪಾ ಅಂದರೆ, ಲಾಲೂ ಪ್ರಸಾದ್ ಯಾದವ್ ಅರುಣ್ ಗಾಂಧಿ ಕುರಿತು ಕೊಟ್ಟಿದ್ದ ಹೇಳಿಕೆಗೆ ಅರುಣ್ ಶೌರಿ ರಿಯಾಕ್ಷನ್ ಕೇಳಿ ಮೈಕ್ ಮುಂದಿಟ್ಟುಕೊಂಡಿದ್ದಳು. ಮೊದಲೇ ಪೈರ್ ಬ್ರಾಂಡ್ ಅರುಣ್ ಶೌರಿ, ಅವಳು ಚಿಕ್ಕ ಹುಡುಗಿ ಅನ್ನೊದನ್ನ ಮರೆತು ಝಾಡಿಸಿಬಿಟ್ಟಿದ್ದಾರೆ, ಹಿಂದೊಮ್ಮೆ ಪರ್ತಕರ್ತನಾಗಿದ್ದ ಶೌರಿ ಅವರಿಗೆ ಈಗಿನ ಎಲೆಕ್ಟ್ರಾನಿಕ್ ಮಾದ್ಯಮಗಳ ಕಾರ್ಯವೈಖರಿ ಬಗ್ಗೆ ಸಿಕ್ಕಾಪಟ್ಟೆ ಅಸಹನೆ ಇದ್ದ ಹಾಗೆ ಕಾಣುತ್ತಿತ್ತು. ಪಾಪ ಆ ಹುಡುಗಿ ದಿನಾ ಮಾಡೋದನ್ನೆ ಶೌರಿ ಮುಂದೆ ಮಾಡಿದಾಳೆ ಅವಳದೇನು ತಪ್ಪು....!

ಅವಳನ್ನು ನಿಯಂತ್ರಿಸೋ ಡೆಸ್ಕ್ ಇಂಚಾರ್ಜ್ ಅದನ್ನೇ ಬೇಕು ಅಂತ ಕೇಳಿರ್ತಾನೆ. 'ಗೆಟ್ ಸಮ್ ರಿಯಾಕ್ಷನ್ ಪಾರ್ ವರುಣ್ ಲಾಲೂ ಸ್ಟೇಟ್ ಮೆಂಟ್ 'ಅಂತ. ಅದಕ್ಕಂತ ಆಯಮ್ಮ ಸ್ವಲ್ಪಾನು ಯೋಚಿಸದೇ ಎದುರು ಸಿಕ್ಕ ಬೆಜೆಪಿ ನಾಯಕ ಅರುಣ್ ಶೌರಿ ಬೈಟ್ ಕೇಳಿದ್ದಾಳೆ.
ಅದೇ ರವಿಶಂಕರ್ ಪ್ರಸಾದ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು, ಅನಂತ್ ಕುಮಾರ್ ಅಂತ ಮೀಡಿಯಾ ಸೇವಿ ನಾಯಕರ ಹತ್ತಿರ ಬೈಟ್ ಕೇಳಿದ್ರೆ ಬರೇ ಬೈಟ್ ಯಾಕೆ ಸಂದರ್ಶನವೇ ಸಿಕ್ಕಿರೋದು...!

ಆದರೆ ವಾಸ್ತವ ಏನಪ್ಪಾದನ್ನ ಅರುಣ್ ಶೌರಿ ಸಿಟ್ಟಿನಲ್ಲಿ ಗಂಬೀರವಾದ ಅರ್ಥ ಇದೆ. ಇಂಡಿಯಾದ ಎಲೆಕ್ಟ್ರಾನಿಕ್ ಮಾದ್ಯಮ ಪ್ರಾಕ್ಟೀಸ್ ಮಾಡ್ತಾ ಇರೋ ವರದಿಗಾರಿಕೆ ಸರೀನಾ ಅನ್ನೊದು. ಯಾಕಂದರೆ ಇವತ್ತು ಪೊಲಟಿಕಲ್ ವರದಿಗಾರಿಕೆ ಅಂದರೆ ಏನು..? ರಾಜಕೀಯ ನಾಯಕರಿಂದ ಬೈಟ್ ತೆಗೆದುಕೊಂಡು ಬರೋದು, ಅದು ಎಂತಾ ಬೈಟು ಬೇಕು ಅಂದರೆ, ಅದಕ್ಕೆ ವಿರೋಧಿಪಕ್ಷದವನು ಕೆರಳಿ ಪ್ರತಿಕ್ರಿಯೆ ನೀಡುವಸ್ಟು ಸ್ಟ್ರಾಂಗ್ ಆಗಿರಬೇಕು. ಇಲ್ಲಾ ಅಂದರೆ ಅದು ಉಪಯೋಗಕ್ಕೆ ಬರಲ್ಲ ಅನ್ನೊದು ಈಗಿನ ನ್ಯೂ ಜರ್ನಲಿಸಂ.

ಬೈಟ್ ನಲ್ಲಿ ಏನಿರಬೇಕು ಬೈಗುಳ ಬೇಕು, ಮತ್ತೊಬ್ಬರನ್ನ ಅವಮಾನಿಸಬೇಕು, ಕೆರಳಿಸಬೇಕು, ಇಲ್ಲಾ ತೆಗಳಬೇಕು, 'ಇಲ್ಲಾರಿ ನಾನು ಮತ್ತೊಬ್ಬರ ಬಗ್ಗೆ ಮಾತಾಡಲ್ಲಾ ರೀ ಅಂದರೆ' ಆ ನಾಯಕ ವೇಸ್ಟ್, ಟಿಆರ್ ಪಿ ತಂದುಕೊಡದ ಪುರಾಣ, ಹರಿಕತೆ. ಒಳ್ಳೇ ಯೋಚನೆ, ಅಭಿವೃದ್ದಿ ಕೆಲಸ ಯಾವುದೂ ಬೇಡ ಬೇಕಿರೋದು ಸ್ಪೈಸಿ ಬೈಟ್ .
.
ಬೈಟ್ ಯಾವಾಗಲೂ ಸಮ್ ಥಿಂಗ್ ಸ್ಪೈಸಿ ಇರಬೇಕು...

ಪತ್ರಕರ್ತರನ್ನ ಅರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಕಾಂಟ್ರೋವಸಿ ಬೈಟ್ ಕೊಡುವ ರಾಜಕೀಯ ವ್ಯಕ್ತಿ ಗಳು ಅಂದ್ರೆ ಜರ್ನಲಿಸ್ಟ್ ಗಳಿಗೂ ಖುಷಿ. ಅವರ ಹಿಂದೆ ದಿನಾಲೂ ಬೀಟ್, ಅವರು ಹೇಳಿದ್ದೆಲ್ಲಾ ನ್ಯೂಸ್.
ಅದೇ ಬೈಟ್ ಕೊಟ್ಟ ವ್ಯಕ್ತಿ, ನಾಳೆ ನಾನು ಹಾಗೆ ಹೇಳಿಲ್ಲಾ ಅದೆಲ್ಲಾ ಮಾದ್ಯಮದವರ ಸೃಷ್ಠಿ ಅಂದರೂ ಬೇಜಾರಿಲ್ಲಾ. ಹಳೇ ಬೈಟ್ ಮತ್ತು ಹೊಸ ಬೈಟ್ ಸೇರಿಸಿ ಮಾಸಾಲ ಅರೆದರೆ ಒಳ್ಳೇ ಟಿಆರ್ ಪಿ ಬರುತ್ತೆ ಚಾನಲ್ಲಿಗೆ. ಬೈಟ್ ಜರ್ನಲಿಸಂ ಅಂದ್ರೆ ಸುಳಿವು ಸಿಕ್ಕಿತಲ್ಲಾ.

ಅದು ಬಿಡಿ ಸದ್ಯಕ್ಕೆ ಚಾಲ್ತಿಯಲ್ಲಿರೊ ಇನ್ನೊಂದು ಜರ್ನಲಿಸಂ ಇದೆ ಅದು ಇನ್ವಸ್ಟಿಗೇಟೀವ್ ಜರ್ನಲಿಸಂ. ಹಾಗಂದ್ರೆ ಹೊಸ ಅರ್ಥನೇ ಇದೆ.
ಈಗ ಇನ್ವೆಸ್ಚಿಗೇಟೀವ್ ಜರ್ನಲಿಸಂ ಅಂದರೆ ಏನಪ್ಪಾ ಅಂದರೆ ರಾಜಕಾರಣಿಗಳು, ಉದ್ಯಮಿಗಳು, ಮತ್ತಿತರ ಒತ್ತಡ ಗುಂಪುಗಳು ತಮಗೆ ಆಗದವರ, ತಮ್ಮ ವಿರೋಧಿಗಳ ಬಗ್ಗೆ ಖುದ್ದು ಮಾಹಿತಿ, ಸಿಡಿ, ದಾಖಲೆ, ಕಡೆಗೆ ಒಂದು ಬೈಟು ಎಲ್ಲಾ ಅವರೇ ಒದಗಿಸಿದರೆ. ಅದು ಇನ್ವೆಸ್ಟಿಗೇಶನ್ ರಿಪೋರ್ಟ್.

ಬಹುಶ ಅರುಣ್ ಶೌರಿ ಆರ್ಕೋಶ ಎಲಕ್ಟಾನಿಕ್ ಮಾದ್ಯಮ ತೀರಾ ದಾರಿತಪ್ಪಿದ ಸ್ಥಿತಿಗೆ ತಲುಪಿದ್ದಕ್ಕೆ ಸಿಕ್ಕ ಪ್ರತಿರಕ್ರಿಯೆ . ಮಿಡಿಯಾಗಳು ದಾರಿತಪ್ಪಿವೆ ಅನ್ನೊದು ಗೋಚರಿಸ್ತಾ ಇದೆ, ಆದರೂ ಕೆಲವು ಚಾನಲ್ ಗಳು ಕಾಲನ ಹೊಡೆತಕ್ಕೆ ಸಿಕ್ಕಿಯೂ ಬದುಕಿವೆ. ಮಾದ್ಯಮ ಬೀಡುಬೀಸಾಗಿ ಬೆಳೆಯುತ್ತಿದೆ ಯಾರ್ಯಾರ ಕೈಲೋ ಸಿಕ್ಕಿ ನಲುಗುತ್ತಿವೆ. ಅದಕ್ಕೆ ಸದ್ಯಕ್ಕೆ ಅಂತ್ಯ ಇದ್ದಂತೆ ಕಾಣುತ್ತಾ ಇಲ್ಲ. ಕನ್ಟ್ರಕ್ಚೀವ್ ಮಾದ್ಯಮ ಅನ್ನೊ ಕಲ್ಪನೆ ಇಲ್ಲಿಗೆ ಇಲ್ಲಿಗೆ ಇನ್ನೂ ಬಂದಂತೆ ಕಾಣೊಲ್ಲ.
ಬೇರೆ ಬೇರೆ ದೇಶಗಳ ಮಾದ್ಯಮಗಳು ಈಗಾಗಲೇ ಆ ಸ್ಥಿತಿ ತಲುಪಿ ಆಚೆ ಬಂದಿವೆ ಈಗ ಬಿಬಿಸಿಯನ್ನಾಗಲಿ, ಸಿಎನ್‌ಎನ್ ಆಗಲಿ, ಆಸ್ಟ್ರೇಲಿಯಾ ನ್ಯೂಸ್ ಆಗಲಿ ನೋಡಿದರೆ ಅಲ್ಲಿ ನಮ್ಮಂತೆ ಇಲ್ಲ, ಅಲ್ಲಿ ಟೀವಿ ಅ?ಯಂಕರ್ ಗಳು ನಮ್ಮವರ ಹಾಗೆ ಕಿರುಚುವುದಿಲ್ಲ, ಸಂದರ್ಶನಗಳಲ್ಲಿ ಗಲಾಟೆ ಇರಲ್ಲ.

ಕಾರ್ಯಕ್ರಮಕ್ಕೆ ರೋಚಕತೆ ಬೇಕಿಲ್ಲ, ಸೀರಿಯಸ್ ನೆಸ್ ಬೇಕು ಅಲ್ಲಿನ ರಾಜಕೀಯ ನಾಯಕರೂ ಯಾರೂ ನಮ್ಮವರಂತೆ ಬೈಟ್ ಕೊಡಲ್ಲ. ನಾವೆಲ್ಲ ಈಗ ಅದನ್ನೆಲ್ಲಾ ಯೋಚಿಸಬೇಕಿದೆ, ಜನಕ್ಕೆ ಟಿವಿ ನ್ಯೂಸ್ ನಲ್ಲಿ ಸೆಕ್ಸ್ ಪಿಲ್ಂ ಬೇಕು ಅಂತ ಅನ್ನಿಸಿದರೆ ಕೊಡೋಕೆ ಸಾದ್ಯನಾ. ಅದರಿಂದ ಟಿಆರ್ ಪಿ ಬರುತ್ತಲ್ಲಾ.

ಜನಕ್ಕೆ ಏನು ಬೇಕೋ ಅದನ್ನ ಕೊಡ್ತಿವಿ ಅನ್ನೊ ವಾಧದಲ್ಲಿ ಹುರುಳಿಲ್ಲ, ಜನ ಅದನ್ನೇ ನೊಡ್ತಾರಲ್ರೀ ಅದಕ್ಕೆ ಬೆಲೆ ಇರೋದು ಅಂದ್ರೆ ತಪ್ಪಾಗುತ್ತೆ, ಜನಕ್ಕೂ ಒಂದು ದಿನ ಎಲ್ಲಾ ಅರ್ಥ ಆಗುತ್ತೆ. ಕಾಯಬೇಕು ಅಷ್ಟೇ...


Thursday, July 23, 2009

ಕೇಶಿರಾಜರು ಮತ್ತು ಕನ್ನಡ ಪತ್ರಿಕೋದ್ಯಮ!

ಕೆಲವರಲ್ಲಿ ಒಂದು ಕಲ್ಪನೆ ಇದೆ. ಅದೇನೆಂದರೆ, ವ್ಯಾಕರಣ ದೋಷವಿಲ್ಲದೆ ಬರೆಯುವವರೆಲ್ಲಾ ಉತ್ತಮ ಪತ್ರಕರ್ತರಾಗಬಹುದು! ಮತ್ತು ಅದೇ ನಂಬಿಕೆಯ ಮುಂದುವರಿದ ಭಾಗ - ಭಾಷೆ, ವ್ಯಾಕರಣ ತಿಳಿಯದವನು ಪತ್ರಕರ್ತನಾಗಲಾರ ಮತ್ತು ಪತ್ರಕರ್ತನಾಗಕೂಡದು!
ಹೀಗೆ ಯೋಚಿಸುವವರು, ಮುಲಾಜೇ ಬೇಡ, ಅವರು ಬೇರಾರೂ ಅಲ್ಲ - ಭಾಷೆ, ವ್ಯಾಕರಣಗಳನ್ನು ಮಾತ್ರ ಕಲಿತು ಈ ಕ್ಷೇತ್ರಕ್ಕೆ ಬಂದವರು. ಪ್ರತಿಷ್ಠಿತ ಪತ್ರಿಕೆಗಳ ಆಯಕಟ್ಟಿನ ಜಾಗಗಳಲ್ಲಿ ಕುಳಿತಿರುವವರಿಗೆ ಪುಟದಲ್ಲಿ ಹೀಗೆ ತಪ್ಪುಗಳನ್ನು ಹೆಕ್ಕಿ ತೆಗೆಯುವುದೇ ಮುಖ್ಯವಾಗಿಬಿಟ್ಟಿದೆ. "ಅಯ್ಯೋ, ಇದು ಬ್ಲಂಡರ್. ಯಾವನ್ರೀ ಅವನು, 'ಚಳವಳಿ'ಯನ್ನು 'ಚಳುವಳಿ' ಅಂತ ಬರೆದವನು. ಕನ್ನಡ ಬರದವರೆಲ್ಲ ಪತ್ರಿಕೋದ್ಯಮಕ್ಕೆ ಬಂದರೆ ಹೀಗೆ ಆಗೋದು. ಅವನನ್ನು ಕರೆದು ಸ್ವಲ್ಪ ಬುದ್ಧಿ ಹೇಳಿ." - ಹೀಗೊಂದು ಫರ್ಮಾನು ಹೊರಡುತ್ತದೆ. ಅದರಂತೆ ಆ ವಿಭಾಗದ ಮುಖ್ಯಸ್ಥರು ಸಂಬಂಧಪಟ್ಟ ವರದಿಗಾರನನ್ನೊ, ಉಪಸಂಪಾದಕನನ್ನೋ ಝಾಡಿಸುತ್ತಾರೆ.
ವಿಭಾಗದ ಮುಖ್ಯಸ್ಥರು ಎನಿಸಿಕೊಂಡ ಅನೇಕರಿಗೆ ತಮ್ಮ ಕೆಳಗಿನವರ ವರದಿಗಳಲ್ಲಿ ಇಂತಹ ತಪ್ಪುಗಳನ್ನು ಹುಡುಕಿ 'ಸುದ್ದಿ ಮಾಡುವುದೇ' ಚಾಳಿ. ಹಾಗೆ ಸುದ್ದಿ ಮಾಡುವ ಮುಊಲಕ ತಾವು ಶಬ್ದಮಣಿದರ್ಪಣದ ಕೇಶಿರಾಜನೋ, ರಾಣಿಯೋ ಎಂಬಂತೆ ಪೋಸು ಕೊಡುತ್ತಾರೆ.
ಇತ್ತೀಚೆಗೆ ಇಂತಹ ಅನೇಕ ಕೇಶಿರಾಜರಲ್ಲಿ ಒಬ್ಬರು ಪ್ರಮುಖ ಕಾರ್ಯಕ್ರಮದ ವರದಿಗೆಂದು ಹೊರದೇಶಕ್ಕೆ ಹೋಗಿದ್ದರು. ಅಲ್ಲಿಂದ ಅವರು ಕಳುಹಿಸಿದ ವರದಿಗಳು ಇಂದು ಕಚೇರಿಯ ತುಂಬಾ, ಅಷ್ಟೇಕೆ ಅನೇಕ ಪತ್ರಿಕಾಲಯಗಳಲ್ಲಿ ಪ್ರಮುಖ ಸುದ್ದಿ. ಅವರ ವರದಿಗಳಲ್ಲಿ ಪದೇ ಪದೇ ಕಾಣಿಸಿಕೊಂಡ ಪದ 'ಪರಿಸರ ಮಾಲಿನ್ಯ ಸಂರಕ್ಷಣೆ'!!! ಅಂದಹಾಗೆ ಅವರು ಬರೆಯುತ್ತಿದ್ದುದು ಹವಾಮಾನ ವೈಪರೀತ್ಯದ ಬಗ್ಗೆ. Climate Change ಎಂದರೆ ಪರಿಸರ ಮಾಲಿನ್ಯ ಎಂದುಕೊಂಡೇ ಅವರು ಮೊದಲ ಎರಡು ದಿನ ವರದಿ ಮಾಡಿದ್ದರು! ವಿಶಿಷ್ಟ ಅಂದರೆ ಆ ವರದಿಗಳನ್ನು ಪತ್ರಿಕಾಲಯದ ನೊಟೀಸ್ ಬೋರ್ಡ್ ನಲ್ಲಿ ಅಂಟಿಸಿ, ಅಲ್ಲಿದ್ದ ತಪ್ಪುಗಳನ್ನು ಕೆಂಪು ಶಾಯಿಯಲ್ಲಿ ಗುರುತಿಸಲಾಗಿತ್ತು ಎಂಬ ಸುದ್ದಿಯುಊ ಹೊರಬಿದ್ದಿದೆ.
ಅದು ಒತ್ತಟ್ಟಿಗಿರಿಲಿ..
ಭಾಷೆಗೆ ಮಹತ್ವ ಕೊಡಲಿ. ಆದರೆ ಭಾಷೆಗಿಂತ ವಿಚಾರ, ಆಲೋಚನೆ, ಹೊಸ ದೃಷ್ಟಿಕೋನ ಮುಖ್ಯ ಅಲ್ಲವೆ?
ಅದೆಷ್ಟೋ ದಶಕಗಳ ಕಾಲ ಕನ್ನಡ ಪತ್ರಿಕೋದ್ಯಮ ಒಂದು ವರ್ಗಕ್ಕಷ್ಟೇ ಸೀಮಿತವಾಗಿದ್ದು ಇದೇ ಕಾರಣಕ್ಕೆ. 'ಅವರ' ಹೊರತಾಗಿ ಇತರರಿಗೆ ಭಾಷೆ ಜ್ಞಾನ ಅಷ್ಟಾಗಿ ಇರೋಲ್ಲ ಎಂಬ ಕುರುಡು ನಂಬಿಕೆಗೆ ಕನ್ನಡ ಪತ್ರಿಕೋದ್ಯಮ ಬಲಿಯಾಯಿತು.
ಹಾಗೆ ಸುಮ್ಮನೆ ಕನ್ನಡ ಪತ್ರಿಕೋದ್ಯಮದ ಇತಿಹಾಸ ಗಮನಿಸಿದರೆ, ಪ್ರಜಾವಾಣಿ ಹೊರತಾಗಿ ಬೇರೆ ಪ್ರಮುಖ ಪತ್ರಿಕೆಗಳು ನಮ್ಮ ನಾಡಿನ ಸಾಹಿತ್ಯಕ, ಸಾಂಸ್ಕೃತಿಕ ಬದಲಾವಣೆಗಳಿಗೆ ತೆರೆದುಕೊಳ್ಳಲಿಲ್ಲ. ಕಾರಣ ಇಷ್ಟೆ - ಆ ಪತ್ರಿಕೆಗಳಲ್ಲಿ ವಿಭಿನ್ನ ದೃಷ್ಟಿಕೋನ, ಬಹುಮುಖಿ ಆಲೋಚನೆಯ ಮನಸ್ಸುಗಳಿಗೆ ಕೊರತೆ ಇತ್ತು. ಅವುಗಳಲ್ಲಿ ಕೆಲಸ ಮಾಡುವ ಬಹುತೇಕರು ಒಂದೇ ವರ್ಗಕ್ಕೆ ಸೀಮಿತವಾಗಿದ್ದರು. ಪ್ರಜಾವಾಣಿಯಲ್ಲಿಯುಊ ಆಯಕಟ್ಟಿನ ತಾಣಗಳಲ್ಲಿ ಅವರೇ ಇದ್ದರೂ, ಸಾಂಸ್ಥಿಕವಾಗಿ ಪತ್ರಿಕೆಗೆ ಬೇರೆಯದೇ ಚೌಕಟ್ಟು, ಶಿಸ್ತು ಸಿದ್ಧಿಸಿತ್ತು. ಆ ಕಾರಣ 'ದಲಿತರು ಬಂದರು ದಾರಿಬಿಡಿ' ಎಂಬಂತಹ ತಲೆಬರಹ ಮುಖಪುಟದಲ್ಲಿ ಕಾಣಲು ಸಾಧ್ಯವಾಯಿತು. ಕರ್ನಾಟಕ ಪತ್ರಿಕೋದ್ಯಮಕ್ಕೆ ಪ್ರಜಾವಾಣಿ ಸೇರ್ಪಡೆಗೊಳ್ಳದೇ ಹೋಗಿದ್ದರೆ, ಇಲ್ಲಿನ ಪತ್ರಿಕೋದ್ಯಮ ಇಂದಿಗೂ ಅಗ್ರಹಾರದ ಆಚೆಗೆ ಹಬ್ಬುತ್ತಿರಲಿಲ್ಲ.

Friday, July 17, 2009

ಪ್ರಶ್ನೆಗಳಿರುವುದು ಜಿ.ಎನ್ ಮೋಹನ್ ಗೆ!!

ಇದು ಸಂತಸದ ಸಂಗತಿ. ಪತ್ರಿಕೋದ್ಯಮದ ಗಿರಣಿಯಲ್ಲಿ ಹಲವು ವರ್ಷಗಳಿಂದ, ನಾನಾ ರೂಪಗಳಲ್ಲಿ ತೊಡಗಿಸಿಕೊಂಡಿರುವ ಜಿ.ಎನ್ ಮೋಹನ್ ಈಗ ಮಿಡಿಯಾ ಮೆಣಸಿನಕಾಯಿ (ಮಿಡಿಯಾ ಮಿರ್ಚಿ) ಕಿವುಚಲು ಅಣಿಯಾಗಿದ್ದಾರೆ. ವಿಜಯ ಕರ್ನಾಟಕದ ಶನಿವಾರದ ಆವೃತ್ತಿಯಲ್ಲಿ ಪ್ರತಾಪ ಸಿಂಹನ ಅಂಕಣದೊಂದಿಗೆ ಮೋಹನ್ ಅಂಕಣ ಪ್ರಕಟವಾಗುವುದು ವಿಶೇಷ.
ಒಂದು ಪತ್ರಿಕೆ ಹೀಗೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಕುರಿತು ಚರ್ಚೆಗೆ ವೇದಿಕೆ ಒದಗಿಸುವುದು ವಿಶಿಷ್ಟ ಬೆಳವಣಿಗೆ. ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್ ಇಂತಹದೊಂದು ತೀರ್ಮಾನಕ್ಕೆ ಬರಲು ಏನೆಲ್ಲಾ ಕಾರಣಗಳು, ಒತ್ತಡಗಳಿದ್ದವು ಎಂಬುದು ನಿಗೂಢ. ಅದೇನೇ ಇದ್ದರೂ ಇದು ಒಂದು ಉತ್ತಮ ಪ್ರಯೋಗವೇ.
ಒಂದು ವಾರದ ಹಿಂದೆ ಸನ್ಮಾನ್ಯ ಭಟ್ಟರು ಇಂತಹದೊಂದು ಅಂಕಣದ ಬಗ್ಗೆ ಕ್ಲೂ ಕೊಟ್ಟಾಗ, ಬರೆಯುವವರ್ಯಾರು ಎಂಬ ಸಂಗತಿಯನ್ನು ಬಚ್ಚಿಟ್ಟಿದ್ದರು. ಅದು ಈಗ ಬಹಿರಂಗವಾಗಿದೆ. ಮೋಹನ್ ಈ ಕೆಲಸಕ್ಕೆ ಸಮರ್ಥರು ಎಂದು ಒಪ್ಪಿಕೊಳ್ಳುವ ಅನೇಕ ಮಂದಿ, ವಿಜಯ ಕರ್ನಾಟಕದ ಆಯ್ಕೆ ಇವರು ಆಗಿರಲಿಕ್ಕಿಲ್ಲ ಎಂದೇ ಭಾವಿಸಿದ್ದರು.
ಕಾರಣ ಇಷ್ಟೆ. ಮೋಹನ್ ಒಂದು ಭಜರಂಗಿಗಳ ಅಡ್ಡೆಯಲ್ಲಿ ಅಂಕಣಕಾರರಾಗುತ್ತಾರ? ನಾಡಿನ ಬಹಳಷ್ಟು ಮಂದಿ ಇಂದಿಗೂ ಮೋಹನ್ ರನ್ನು ಗುರುತಿಸುವುದು 'ನನ್ನೊಳಗಿನ ಹಾಡು ಕ್ಯೂಬಾ' ಎಂಬ ಪ್ರವಾಸ ಕಥನದಿಂದ, ಡೆಂಕಲ್ ಪ್ರಸ್ತಾವನೆ ಕುರಿತಂತೆ ಬರೆದ ಕಿರು ಹೊತ್ತಗೆಯಿಂದ. ಆ ಮುಊಲಕ ಅವರ ಎಡ ಪಂಥೀಯ ಧೋರಣೆಯ ಮನುಷ್ಯ ಎಂಬುದು ಅನೇಕರ ಲೆಕ್ಕಾಚಾರ. ಇತ್ತೀಚೆಗೆ ಅವರು ಈಟಿವಿ ಮೂಲಕ, ಅವಧಿ ಮುಊಲಕ, ಮೇಫ್ಲವರ್ ಮಿಡಿಯಾ ಹೌಸ್ ಮುಊಲಕ ಕಾಣಿಸಿಕೊಳ್ಳುತ್ತಿದ್ದಾರೆ. ಅದರಂತೆ ಅವರನ್ನು ಗ್ರಹಿಸುವ ರೀತಿಗಳೂ ಬದಲಾಗಿವೆ. ಅವರ ಸುತ್ತ ಒಂದಿಷ್ಟು ಬ್ಲಾಗ್ ಹುಡುಗರು ಆಗಾಗ ಕಾಣಿಸಿಕೊಳ್ಳುತ್ತಾರೆ. ಅವರು ಬರೆದದ್ದನ್ನು ಇವರು ಗಂಭೀರವಾಗಿ ಓದಿ, ಪ್ರತಿಕ್ರಿಯಿಸುವವರಂತೆ ನಟಿಸುತ್ತಾರೆ. ಸಿಕ್ಕ ಸಿಕ್ಕವರಿಗೆಲ್ಲಾ ಬ್ಲಾಗ್ ಮಾಡ್ರಿ ಅಂತ ಬ್ಲಾಗ್ ಹುಚ್ಚು ಹಿಡಿಸುತ್ತಾರೆ. ಇವೆಲ್ಲದರ ಮಧ್ಯೆ, ಎಡಪಂಧೀಯ ಹೋರಾಟದಿಂದ ರೂಪುಗೊಂಡ ದೇಶದ ಕತೆಯನ್ನೇ ತನ್ನೊಳಗಿನ ಹಾಡನ್ನಾಗಿಸಿಕೊಂಡ ಮೋಹನ್ ಮರೆಯಾಗಿದ್ದಾರೆ, ಅಥವಾ ಮಸುಕಾಗಿದ್ದಾರೆ.
ಹಾಗಂತ, ಅವರು ಅದೆಲ್ಲಕ್ಕೂ ತಿಲಾಂಜಲಿ ಇಟ್ಟಿದ್ದಾರೆ ಎಂದಲ್ಲ. ಹೊಸ ಓದುಗ ಸಮುಊಹ, ಭಿನ್ನ ಆಲೋಚನೆಯ ಗುಂಪನ್ನು ತನ್ನ ಪರಿಧಿಯೊಳಗೆ ತಂದುಕೊಳ್ಳುವ ಪ್ರಯತ್ನ ಇರಬಹುದು. ಈಗ ವಿಜಯಕರ್ನಾಟಕ ಪತ್ರಿಕೆಗೆ ಅಂಕಣ ಬರೆಯಲು ಒಪ್ಪಿಕೊಂಡಿರುವುದು ಅಂತಹದೇ ಒಂದು ಹೆಜ್ಜೆಯಾ?
ಕಾದು ನೋಡಬೇಕು...
ಇನ್ನು ವಿಜಯ ಕರ್ನಾಟಕ. ಓದುಗರನ್ನು ದಿಕ್ಕುತಪ್ಪಿಸುವ ಕಾರ್ಯದಲ್ಲಿ ಸದಾ ಮುಂದು. ಮತಾಂತರ ಕುರಿತಂತೆ ಚರ್ಚೆ ಆರಂಭಿಸಿ, ಎಲ್ಲರಿಗೂ ಬರೆಯಲು ಅವಕಾಶ ನೀಡಿ, ತಾವೇನೋ ಉದಾರವಾದಿಗಳು ಎಂಬಂತೆ ಪೋಸು ಕೊಟ್ಟವರು ಆ ಪತ್ರಿಕೆಯ ಮುಖ್ಯಸ್ಥರು. ಆದರೆ ಆ ಎಲ್ಲಾ ಚರ್ಚೆಗೆ ಭೈರಪ್ಪನಿಂದಲೇ ಉತ್ತರ ಕೊಡಿಸಿ, ಎಲ್ಲರಿಗೂ ಟೋಪಿ ಇಟ್ಟರು. ಪ್ರತಾಪ ಸಿಂಹ ತನಗೆ ಗೂಗಲ್ ನಲ್ಲಿ ಸಿಕ್ಕಿದ್ದನೆಲ್ಲಾ ಅಧಿಕೃತ ಮಾಹಿತಿ ಎಂದು ಬರೆದು ಒಂದು ವರ್ಗವನ್ನು ದಿಕ್ಕುತಪ್ಪಿಸಿದ್ದು ಸುಳ್ಳಲ್ಲ. ಅಡ್ವಾನಿ ಇನ್ನುಮುಂದೆ ಪ್ರಧಾನಿ ಆಗುವುದೇ ಎಲ್ಲ ಎಂಬ ಸತ್ಯ ಅರಿವಾದಾಗ ಭಟ್ಟರು ತಮ್ಮ ಅಂಕಣದ ತುಂಬಾ ಕಣ್ಣೀರು ಹರಸಿದ್ದು ಇನ್ನೂ ಹಸಿರಾಗಿಯೇ ಇದೆ. ಓದುಗರ ಪತ್ರ ನೋಡಿಕೊಳ್ಳುವ ಸಿಂಹ, ಆಗಾಗ ತಾನೇ ಕಾಪು, ಸುಳ್ಯ, ಕರ್ಜೆ ಎಂಬ ಕೆಲ ಊರುಗಳಲ್ಲಿರುವ ಓದುಗನಾಗಿ ಪತ್ರ ಬರೆದುಕೊಂಡದ್ದೂ ಜಗಜ್ಜಾಹೀರು. ಅನಂತಮುಊರ್ತಿ ಭೈರಪ್ಪನನ್ನು 'ಒಬ್ಬ ಚರ್ಚಾಪಟು' ಎಂದು ಮುಊದಲಿಸಿದ್ದಕ್ಕೆ ಎಸ್ ಎಂ ಎಸ್ ಚಳವಳಿ ಮಾಡಿದ ಭೂಪರಲ್ಲವೇ ಇವರು.
ಮೊನ್ನೆ ಮೊನ್ನೆ ತಾನೆ ವಿಜಯಾ ಕಾಲೇಜಿನ ಕೆಮಿಸ್ಟ್ರಿ ಉಪನ್ಯಾಸಕರೊಬ್ಬರ ಟ್ರಿಕ್ ಗೆ ಬಲಿಯಾದದ್ದು ಇದೇ ಪತ್ರಿಕೆ. ತಾನೂ ಒಬ್ಬ ಪ್ರಖ್ಯಾತ ಜ್ಯೋತಿಷ್ಯ ಶಾಸ್ತ್ರಜ್ಞ ತನ್ನದೂ ಒಂದು ಬರಹ ಪ್ರಕಟಿಸಿ ಎಂದು ಅವರು ಪತ್ರಿಕೆಗೆ ಸುಮ್ಮನೇ ಒಂದು ಲೇಖನ ಕಳುಹಿಸಿದರಂತೆ. ನೋಡು, ಈ ಪತ್ರಿಕೆ ಮಂದಿಗೆ ತಲೆಯೇ ಇರೋಲ್ಲ ಯಾವನು ಏನು ಬರೆದರೂ ಹಾಕ್ತಾರೆ ಎಂದು ಸ್ನೇಹಿತರೊಬ್ಬರ ಜೊತೆ ಬೆಟ್ ಕಟ್ಟಿ ಹಾಗೆ ಲೇಖನ ಕಳುಹಿಸಿದರು. ಆ ಲೇಖನವೂ ಪ್ರಕಟವಾಯಿತು.
ಈ ಪತ್ರಿಕೆಗೆ ಬರೆಯುವ ಕೆಲವು ಅಂಕಣಕಾರರು ಈ ನೆಲದ ಬಹುಜನರಿಗೆ ಮಾಡಿರುವ ದ್ರೋಹ ಅಷ್ಟಿಷ್ಟಲ್ಲ. ಪ್ರತಿ ಅಕ್ಷರದಲ್ಲೂ ಕೋಮುವಾದವನ್ನೇ ಉಸುರುವ ಬರಹಗಳು ಇಲ್ಲಿ ಮಾತ್ರ ಬರಲು ಸಾಧ್ಯ.
- ಇದೆಲ್ಲವೂ ಜಿ.ಎನ್ ಮೋಹನ್ ಗೆ ಚೆನ್ನಾಗಿ ಗೊತ್ತು. ಹಾಗಾದರೆ, ಇನ್ನು ಮುಂದೆ ಅವರ ಅಂಕಣ ಬರಹಗಳು ಹೇಗಿರುತ್ತವೆ? ಅವರು ಟೀಕೆಗೆ ನಿಲ್ಲುವುದಾದರೆ, ಮೊದಲು ಟೀಕಿಸಬೇಕಾದ್ದು ಆ ಪತ್ರಿಕೆಯ ಧೋರಣೆಗಳನ್ನೇ. ಮೋಹನ್ ನೇರವಾಗಿ ಅನ್ನಿಸಿದ್ದನ್ನು ಹೇಳಬಲ್ಲರು. ಇತ್ತೀಚೆಗೆ ಜೋಗಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಿಖರವಾಗಿ ಮಾತನಾಡಿದ್ದು ಅವರು ಮಾತ್ರ. ಜೋಗಿ ಮಾರುಕಟ್ಟೆಗಾಗಿ ಬರೆಯುತ್ತಾರೆ. ಅವರ ಕಥಾವಸ್ತುವಿಗೂ, ಟಿ.ಎನ್ ಸೀತಾರಂ ಅವರ ಜನಪ್ರಿಯ ಧಾರಾವಾಹಿಗೂ ವ್ಯತ್ಯಾಸಗಳಿಲ್ಲ ಎಂದು ಹೇಳಿದರು. ಅಂತಹದೊಂದು ಛಾತಿ ಅವರಿಗಿದೆ. ಆದರೆ, ಅದೇ ಧಾಟಿಯ ಮಾತುಗಳನ್ನು ಸಹಿಸಿಕೊಳ್ಳುವ ತಾಳ್ಮೆ ವಿಜಯ ಕರ್ನಾಟಕಕ್ಕೆ ಇದೆಯಾ?
ಅಂಥಹದೊಂದು ಸಂಘರ್ಷಕ್ಕೆ ಅನುವು ಮಾಡಿಕೊಡದಂತೆ ಬರೆಯುವ ಕೆಲಯುಊ ಮೋಹನ್ ಗೆ ಗೊತ್ತು. ಹಾಗಾದಲ್ಲಿ ಅವರು ರಾಜಿ ಆಗುತ್ತಾರ? ಬಹಳ ಕಾಲ ಅಂಕಣ ಉಳಿಯಲೆಂದು ವಿಜಯ ಕರ್ನಾಟಕದ ಬಗ್ಗೆ ಮಾತನಾಡದೇ ಸುಮ್ಮನಿರುತ್ತಾರಾ? ಧೋರಣೆ, ನಂಬಿ ಬಂದಿದ್ದ ಸಿದ್ಧಾಂತ ಎಲ್ಲವನ್ನು ಬದಿಗಿಟ್ಟು ಪಕ್ಕಾ ಅಕಡೆಮಿಕ್ ಶೈಲಿಗೆ ಒಗ್ಗಿಕೊಳ್ಳುತ್ತಾರ?
- ಈ ಪ್ರಶ್ನೆಗಳಿರುವು ಜಿ.ಎನ್ ಮೋಹನ್ ಗೆ!