Sunday, November 30, 2008

ಮಾಧ್ಯಮದ ಸೆಳೆತವೇ ಅಂಥದ್ದು!

ಬುಧವಾರ ರಾತ್ರಿ ಬಂದೂಕಿನ ಸದ್ದು ಕೇಳುತ್ತಿದ್ದಂತೆಯೇ, ಮಾಧ್ಯಮಗಳು ಎಚ್ಚರಗೊಂಡವು. ನೋಡ ನೋಡುತ್ತಿದ್ದಂತೆಯೇ ಹಿರಿಯ ಪೊಲೀಸರು ಕಣ್ಣು ಮುಚ್ಚಿದರು. ಪತ್ರಕರ್ತರಿಗೆ 'ಇದು ಸದ್ಯಕ್ಕೆ ಮುಗಿಯುವ ಕತೆಯಲ್ಲ' ಎಂದು ತಿಳಿಯಿತು. ಬೆಳಗಿನ ಹೊತ್ತಿಗೆ ಎನ್ ಡಿಟಿವಿ ಬರ್ಕಾ ದತ್, ಸಿಎನ್ಎನ್ ಐಬಿಎನ್ ರಾಜದೀಪ್ ಸರದೇಸಾಯಿ..ಎಲ್ಲರೂ ದೆಹಲಿಯಿಂದ ಮುಂಬೈಗೆ ದೌಡಾಯಿಸಿದರು. ತಾಜ್ ಹೊಟೇಲ್, ಟ್ರೈಡೆಂಟ್ ಹೊಟೇಲ್ಗಳ ಮುಂದೆ ಮೈಕ್ ಹಿಡಿದು ನಿಂತರು.
ಮುಂಬೈಕರ್ ರಾಜದೀಪ್ ತುಸು ಭಾವುಕರಾದರು. ಎಂದಿನಂತೆ ಬರ್ಕಾ ತನ್ನ ಸುತ್ತಲ ಚಿತ್ರಣವನ್ನು ನೋಡುಗರಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾದರು. ಟೈಮ್ಸ್ ನೌ ಆರ್ನಾಬ್ ಗೋಸಾಮಿ ಬಿಡದೆ ಸ್ಟುಡಿಯೋದಲ್ಲಿಯೇ ಕೂತರು. ಸಣ್ಣಪುಟ್ಟ ಚಾನೆಲ್ ಗಳೂ ಇದಕ್ಕಿಂತ ಹೊರತಾಗಿರಲಿಲ್ಲ. ಕನ್ನಡದ ಟಿವಿ೯ ಬೆಂಗಳೂರಿನಿಂದ ಲಕ್ಷಣ ಹೂಗಾರ್ ಹಾಗೂ ದೆಹಲಿಯಿಂದ ಶಿವಪ್ರಸಾದರನ್ನು ಮುಂಬೈಗೆ ರವಾನಿಸಿತ್ತು. ಶಿವಪ್ರಸಾದ್ ಹರಸಾಹಸ ಪಟ್ಟು ವರದಿ ಮಾಡಿದ್ದು ಎಲ್ಲರಿಗೂ ಗೊತ್ತು. ಈ ಮಧ್ಯೆ ಕನ್ನಡದ್ದೇ ಇನ್ನೊಂದು ಚಾನೆಲ್ ಸುವರ್ಣ ಮುಂಬೈ ಸುದ್ದಿ ಕೊಡುವಲ್ಲಿ ತೀವ್ರವಾಗಿ ಹಿಂದುಳಿಯಿತು.
ಅದೇನೆ ಇರಲಿ, ಮುಂಬೈನಲ್ಲಿ ಹಟಕ್ಕೆ ಬಿದ್ದವರಂತೆ ಸಾವಿಗೂ ಅಂಜದೆ ವರದಿ ಮಾಡಿದರಲ್ಲ ಅವರಿಗೆ ಹ್ಯಾಟ್ಸ್ ಆಫ್. 'ಹೇಳಿದ್ದೇ ಹೇಳ್ತಾರೆ', 'ತಪ್ಪೇ ಹೇಳ್ತಾರೆ', 'ಅವನಿಗೆ ಭಾಷೆನೇ ಗೊತ್ತಿಲ್ಲ'..ಎಂದೆಲ್ಲಾ ಕಾಮೆಂಟ್ ಮಾಡುತ್ತಿದ ನೋಡುಗರು ವರದಿಗಾರರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಿದ್ರೆ ಇಲ್ಲದೆ, ನೀರಿಲ್ಲದೆ ಅವರು ಗುಂಡಿನ ಕಾಳಗ ವರದಿ ಮಾಡುವುದೆಂದರೆ ಸುಮ್ಮನೇನಾ?
ಬಹುತೇಕ ಚಾನೆಲ್ ಗಳು ಎರಡು ದಿನಗಳ ಕಾಲ ಜಾಹಿರಾತುಗಳಿಗೆ ಮೊರೆ ಹೋಗದೆ ಸುದ್ದಿ ನೀಡಿದವು.
ಒಂದಂತೂ ಸತ್ಯ. ಮುಊರು ದಿನಗಳ ಕಾಲ ಮುಂಬೈ ಘಟನೆಗಳನ್ನು ವರದಿ ಮಾಡಿದವರು ಮರೆಯಲಾಗದ ಅನುಭವಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮತ್ತಷ್ಟು ಕಾಲ ಆ ಅನುಭವ ಅವರನ್ನು ಪತ್ರಿಕೋದ್ಯಮದೆಡೆಗಿನ ಸೆಳೆತವನ್ನು ಕಾಯ್ದುಕೊಂಡಿರುತ್ತೆ ಎನ್ನುವುದು ಮಾತ್ರ ಸತ್ಯ.

ನೆಮ್ಮದಿಯ ನಾಳೆ ನಮ್ಮದಾಗುವುದೇ?

ಮುಂಬೈ ನಿಧಾನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ನಮ್ಮ ಮಾಧ್ಯಮಗಳು ಆಪರೇಶನ್ ಸೈಕ್ಲೋನ್ ಯಶಸ್ವಿ ಎಂದೇ ಬಿಂಬಿಸಿದವು. ನಿಜ ಹೇಳಬೇಕೆಂದರೆ, ಭಾರತ ಸೋತಿತು. ಸಮುದ್ರದ ಹಾದಿಗುಂಟ ಬಂದ ಭಯೋತ್ಪಾದಕರ ಉದ್ದೇಶ ನೂರೋ, ಇನ್ನೂರೋ ಜನರನ್ನು ಕೊಲ್ಲುವುದಕ್ಕಿಂತ ಮುಖ್ಯವಾಗಿ ಜನರಲ್ಲಿ ಭಯ ಹುಟ್ಟಿಸಬೇಕಿತ್ತು. ಜನರನ್ನೂ ಕೊಂದರು. ತೀವ್ರವಾಗಿ ಕಾಡುವ ಭಯವನ್ನೂ ಸೃಷ್ಟಿಸಿದರು. ಆ ಕಾರಣಕ್ಕಾಗಿ ಅವರು ಯಶಸ್ವಿಯಾದರು. ಸೋತವರು - ನಾವು, ನಮ್ಮ ವ್ಯವಸ್ಥೆ. ಹಿರಿಯ ಉದ್ಯಮಿಗಳನ್ನು, ನಿಪುಣ ಪೊಲೀಸರನ್ನ, ಅಮಾಯಕರನ್ನು ಕಳೆದುಕೊಂಡವರು ನಾವು.
ಭಯೋತ್ಪಾದಕರು ತಾವು ಕೆಲವರನ್ನು ಕೊಂದು, ಮತ್ತೆ ಬದುಕಿ ಹಿಂದಕ್ಕೆ ಹೋಗತ್ತೇವೆಂದೇನು ಬಂದಿರಲಿಲ್ಲ. ಅವರ ಗುರಿ ಸ್ಪಷ್ಟವಿತ್ತು.
ವೀರಯೋಧ ಸಂದೀಪ್ ಅಪ್ಪ ಉನ್ನಿಕೃಷ್ಣ ಕೇರಳದ ಮುಖ್ಯಮಂತ್ರಿ ಅಚ್ಯುತಾನಂದರನ್ನು ಭೇಟಿ ಮಾಡಲು ಒಪ್ಪಲಿಲ್ಲ. ದೆಹಲಿಯಿಂದ ರಕ್ಷಣಾ ಮಂತ್ರಿ ಎ.ಕೆ ಅಂಟನಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಆಡಳಿತ ಚುಕ್ಕಾಣಿ ಹಿಡಿದವರೆಡೆಗೆ ಇದ್ದ ಆಕ್ರೋಶವನ್ನು, ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಅಪ್ಪ ತೀವ್ರವಾಗಿ ವ್ಯಕ್ತಪಡಿಸಿದರು.
'ನೈತಿಕ ಹೊಣೆ' ಹೊತ್ತು ಜವಾಬ್ದಾರಿಯಿಂದ ನುಣುಚಿಕೊಂಡಂತೆ ಕೈ ತೊಳೆದುಕೊಂಡು ಶಿವರಾಜ ಪಾಟೀಲರಂತೆ ಮನೆ ಸೇರಿಕೊಳ್ಳುವುದು ಸುಲಭ. ಆದರೆ ಹರೆಯದ ಮಗನ ದು:ಖವನ್ನು ಭರಿಸುವ ಕಷ್ಟ ಅವರಪ್ಪನಿಗೆ ಮಾತ್ರ ಗೊತ್ತು. ಯಾರ ರಾಜೀನಾಮೆಯುಊ ಅವರಿಗೆ ಸಮಾಧಾನ ತರುವುದಿಲ್ಲ.
ಇಂತಹ ಸಂದರ್ಭಗಳಲ್ಲಿ ಜನರಲ್ಲಿ ರಾಜಕಾರಣಿಗಳ ವಿರುದ್ಧ ಎಂದಿಲ್ಲದ ಆಕ್ರೋಶ ಉಕ್ಕಿ ಬರುತ್ತೆ. ಇದು ಸಹಜ. ಶನಿವಾರ ಸಂಜೆ ಸಿಎನ್ಎನ್ ಐಬಿಎನ್ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಶೋಭಾ ಡೇ ಮಾತು ಮಾತಿಗೆ ರಾಜಕಾರಣಿಗಳನ್ನು ಟೀಕಿಸುತ್ತಿದ್ದರು. ಅವರೊಬ್ಬರೇ ಅಲ್ಲ, ಪ್ಯಾನೆಲ್ ನಲ್ಲಿ ಇದ್ದ ಎಲ್ಲರೂ. ಮಿಲಿಂದ್ ದಿಯೋರಾ ಎಂಬ ತರುಣ ಸಂಸದ ನನ್ನಿಂದ ನಿಜವಾಗಿಯುಊ ಏನೋ ಘೋರ ಅನ್ಯಾಯವಾಗಿದೆಯೇನೋ ಎಂಬಂತೆ ಪಾಪಪ್ರಜ್ಞೆಗೆ ಒಳಗಾದವರಂತೆ ಕಂಡರು.
ಸದ್ಯ ನಮಗೆ ಬೇಕಿರುವುದು ಶಾಂತಿ. ರಾಜಕಾರಣಿಗಳನ್ನು ದೂರುವುದರಿಂದ ಆಗುವುದೇನೂ ಇಲ್ಲ. ರಾಜಕಾರಣಿಗಳನ್ನು ಟೀಕಿಸುವವರು ಚುನಾವಣೆಗೆ ನಿಂತು ಗೆಲ್ಲಲಾರರು. ಗೆದ್ದರೂ ಅವರು ಇತರೆ ರಾಜಕಾರಣಿಗಳಿಗಿಂತ ಭಿನ್ನವಾಗಿರಲಾರರು ಎಂಬುದಕ್ಕೆ ಖಾತ್ರಿ ಇರದು. ನಮ್ಮ ಈರ್ಷೆ, ದೌಲತ್ತು ಎಲ್ಲವನ್ನೂ ಬದಿಗಿಟ್ಟು ನಮ್ಮ ನೆಲದ, ಆಡಳಿತದ ತಿಕ್ಕಾಟಗಳಿಗೆ ಮಾತುಕತೆ ಮುಊಲಕ ಉತ್ತರ ಕಂಡುಕೊಳ್ಳಬೇಕಿದೆ. ಆ ಮುಊಲಕ ಶಾಂತಿ ಸ್ಥಾಪಿಸಬಹುದೇ ಎಂಬ ಬಗ್ಗೆ ಜನಾಭಿಪ್ರಾಯ ಮುಊಡಬೇಕಿದೆ. ಈಗ ನಮ್ಮ ಸಮಾಜ ವಿಜ್ಞಾನಿಗಳ, ಚಿಂತಕರ ಪಾತ್ರ ದೊಡ್ಡದಿದೆ.

Friday, November 28, 2008

ಧನ್ಯವಾದಗಳು

ಅಚಾತುರ್ಯದಿಂದ 'ಧಿಕ್ಕಾರ' ತಪ್ಪಾಗಿತ್ತು. ನಮ್ಮ ಓದುಗರು ಎಚ್ಚರಿಸಿದ್ದಾರೆ. ನಾವು ತಪ್ಪುಗಳಿಗೆ ಹೊರತಲ್ಲ. ಎಚ್ಚರಿಸಿದ್ದಕ್ಕೆ ಧನ್ಯವಾದಗಳು. ಮುಂದೆಯುಊ ಹೀಗೆ ತಪ್ಪುಗಳಾದರೆ, ಎಚ್ಚರಿಸುತ್ತಿರಿ. ತಿದ್ದಿಕೊಳ್ಳಲು ಸದಾ ಸಿದ್ಧ.
-ಸುದ್ದಿಮಾತು ತಂಡ

Thursday, November 27, 2008

ಹಿಂಸೆಯ ದಾರಿಗೆ ನಮ್ಮೊದೊಂದು ದಿಕ್ಕಾರ...


ಮುಂಬೈ ಮತ್ತೆ ಗುಂಡು, ಬಾಂಬುಗಳಿಗೆ ತತ್ತರಿಸಿದೆ. ನೆಮ್ಮದಿಯ ನಿದ್ರೆ ಜಾರುವ ಹೊತ್ತಲ್ಲಿ ಇಡೀ ಮುಂಬೈ ಸಾವಿನ ಆತಂಕದಲ್ಲಿ ನಡುಗಿ ಹೋಗಿದೆ. ಮುಂಬೈ ನಿರಂತರವಾಗಿ ಉಗ್ರ ಅಟ್ಟಹಾಸಕ್ಕೆ ಗುರಿಯಾಗುತ್ತಲೇ ಇದೆ. ಮೂಲಭೂತವಾದಿ ಮನಸ್ಸು ಹರಡುತ್ತಿರುವ ಈ ಹಿಂಸೆಯನ್ನು ನಾವು ಖಂಡಿಸಬೇಕು. ಉಗ್ರರು ಎಂದರೆ ಮುಸ್ಲಿಮರಷ್ಟೇ ಎಂಬುದು ಸುಳ್ಳು ಎಂಬುದನ್ನು ಮಾಲೇಗಾಂವ್ ಸ್ಫೋಟ ಪ್ರಕರಣ ಹೇಳಿದೆ. ಉಗ್ರವಾದ ಎನ್ನುವುದು ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎನ್ನುವುದು ಈ ಪ್ರಕರಣ ಸ್ಪಷ್ಟಪಡಿಸಿದೆ. ಉಗ್ರವಾದ ಎನ್ನುವುದು ಮೂಲಭೂತವಾದಿ ಮನಸ್ಸುಗಳ ಹಿಂಸಾವಿನೋದಿ ಮನಸ್ಥಿತಿಯ ಕೃತ್ಯಗಳು. ಇದನ್ನು ಎಲ್ಲರೂ ಖಂಡಿಸಬೇಕು. ಜನಸಾಮಾನ್ಯರ ನೆಮ್ಮದಿಗೆ, ಸಾಮರಸ್ಯದ ಸಮಾಜಕ್ಕೆ ಕೊಳ್ಳಿ ಇಡುವ ಇಂಥ ಕೃತ್ಯಗಳಿಗೆ ಕಡಿವಾಣ ಬೀಳಲಿ. ಹಿಂಸೆಯ ದಾರಿಗೆ ನಮ್ಮೊದೊಂದು ದಿಕ್ಕಾರ...

Tuesday, November 25, 2008

ಹೊಸ ವರಸೆಯಲ್ಲಿ ಭಯೋತ್ಪಾದನೆ ಸಮರ್ಥಕರು!

ನ.೨೬ರ ವಿಜಯಕರ್ನಾಟಕದಲ್ಲಿ ಘನತೆವೆತ್ತ ನ್ಯಾಯಮೂರ್ತಿಗಳಾದ ಎಂ. ರಾಮಾಜೋಯಿಸ್ ಅವರ ಭಯೋತ್ಪಾದನೆಯೋ, ಪ್ರತೀಕಾರವೋ? ಎಂಬ ಅಗ್ರಲೇಖನ ಪ್ರಕಟಗೊಂಡಿದೆ. ಇದನ್ನು ವರದಿಯೆನ್ನಬೇಕೋ, ವಿಶ್ಲೇಷಣೆಯೆನ್ನಬೇಕೋ, ಲೇಖನವೆನ್ನಬೇಕೋ ಎಂಬ ಗೊಂದಲದಲ್ಲಿಯೇ ಅಗ್ರಲೇಖನ ಎಂಬ ಪದ ಬಳಸಿದ್ದೇವೆ.
ಸಾಧಾರಣವಾಗಿ ಪತ್ರಿಕೆಗಳ ಮುಖಪುಟದಲ್ಲಿ ವರದಿಗಾರರು ತಮ್ಮ ಬೈಲೈನ್‌ನೊಂದಿಗೆ ಬರೆಯುತ್ತಾರೆ. ಆದರೆ ಎಸ್.ಎಲ್. ಭೈರಪ್ಪ, ರಾಮಾಜೋಯಿಸ್ ತರಹದವರು ಇದ್ದಕ್ಕಿದ್ದಂತೆ ವರದಿಗಾರರ ಹಾಗೆ ವಿಜಯಕರ್ನಾಟಕದ ಮುಖಪುಟದಲ್ಲಿ ಪ್ರತ್ಯಕ್ಷರಾಗುತ್ತಾರೆ. ಇದನ್ನೂ ಒಂದು ಪ್ರಯೋಗ ಎಂದು ಒಪ್ಪಿಕೊಳ್ಳೋಣ ಬಿಡಿ.
ವಿಷಯಕ್ಕೆ ಬರುವುದಾದರೆ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ, ರಾಜ್ಯಪಾಲರಾಗಿದ್ದ ಈಗ ಬಿಜೆಪಿ ಕೃಪೆಯಿಂದ ರಾಜ್ಯಸಭಾ ಸದಸ್ಯರಾಗಿರುವ ರಾಮಾಜೋಯಿಸ್ ಅವರು ನಿರ್ಲಜ್ಜೆಯಿಂದ ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಭಯೋತ್ಪಾದನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅದನ್ನು ವಿ.ಕ ಯಥಾವತ್ತಾಗಿ ಪ್ರಕಟಿಸುವ ಮೂಲಕ ತಾನೂ ಸಹ ಈ ಸಮರ್ಥನೆಯಲ್ಲಿ ಭಾಗವಾಗಿದೆ.
ಕೆಲವು ಸಾಲುಗಳನ್ನು ಗಮನಿಸಿ: ...ಇಂಥ ಘಟನೆಗಳಿಂದ ದೇಶಭಕ್ತ ಜನರು ಉದ್ರೇಕಗೊಳ್ಳದೇ ಇರಲು ಸಾಧ್ಯವೆ? ಸಾಮಾನ್ಯ ಜನರ ಮನಸ್ಸಿಗೆ ಅಪಾರ ನೋವುಂಟಾಗಿರಲಿಲ್ಲವೆ? ಅದರಲ್ಲಿ ಕೆಲವರು ಉದ್ರೇಕಗೊಂಡು ಪ್ರತೀಕಾರಕ್ಕೆ ಮುಂದಾದರೆ ಮತ್ತು ಅದೇ ಭಾವನೆಯಿಂದ ಭಯೋತ್ಪಾದನೆಯನ್ನು ತಮಗೆ ತಿಳಿದ ರೀತಿಯಲ್ಲಿ ಮಾಡಿದರೆ ಅದು ಭಯೋತ್ಪಾದನೆಗೆ ಪ್ರತೀಕಾರವೇ ವಿನಹ ಭಯೋತ್ಪಾದನೆಯಲ್ಲ. ಈ ರೀತಿ ಕೆಲವರು ಮಾಡಿರುವ ಭಯೋತ್ಪಾದಕ ಕೃತ್ಯವನ್ನು ಹಿಂದೂ ಭಯೋತ್ಪಾದನೆ ಎಂದು ಹೆಸರಿಸಿ ಸಮಗ್ರ ಹಿಂದೂ ಸಮಾಜಕ್ಕೆ ಮಸಿ ಬಳಿಯುವುದು ದೇಶದ್ರೋಹಿಗಳು ಮಾಡುವ ಭಯೋತ್ಪಾದನೆಯಿಂದುಂಟಾಗುವ ಹಾನಿಗಿಂತಲೂ ಭೀಕರ. ಅದರ ದುಷ್ಪರಿಣಾಮಗಳು ಭಯಾನಕಒಬ್ಬ ನ್ಯಾಯಮೂರ್ತಿ ಆಡಬಹುದಾದ ಮಾತುಗಳೇ ಇವು ಎಂದು ಗಂಭೀರವಾಗಿ ಚಿಂತಿಸಬೇಕಾಗಿದೆ.
ದೇಶದಲ್ಲಿ ಪಾಕ್ ಪ್ರೇರಿತ ಭಯೋತ್ಪಾದನೆ ಆರಂಭಗೊಂಡಾಗಿನಿಂದ ದೇಶಭಕ್ತರು ನೊಂದುಕೊಂಡಿದ್ದರು. ಈ ದೇಶಭಕ್ತರು ಸಿಟ್ಟಿನಿಂದ ಮಾಲೇಗಾಂವ್ ಸ್ಫೋಟದಂತಹ ಕೃತ್ಯಕ್ಕೆ ಇಳಿದಿದ್ದಾರೆ. ಹೀಗಾಗಿ ಇದು ಭಯೋತ್ಪಾದನೆಯಲ್ಲ, ಪ್ರತೀಕಾರ ಅಷ್ಟೆ.
ರಾಮಾಜೋಯಿಸ್‌ಗೆ ಒಂದು ಸರಳ ಪ್ರಶ್ನೆ ಕೇಳೋಣ:ಬಾಬರಿ ಮಸೀದಿ ವಿವಾದಕ್ಕೂ ಮುನ್ನ ಭಾರತದಲ್ಲಿ ಬಾಂಬ್ ಸ್ಫೋಟಗಳು ನಡೆದಿರಲಿಲ್ಲ. ಗುಜರಾತ್ ಹಿಂಸೆಗೂ ಮುನ್ನ ಇಷ್ಟು ತೀವ್ರ ಸ್ವರೂಪದಲ್ಲಿ ಭಯೋತ್ಪಾದಕ ಸಂಘಟನೆಗಳು ಚಟುವಟಿಕೆ ನಡೆಸುತ್ತಿರಲಿಲ್ಲ. ಅರ್ಥಾತ್ ಬಾಬರಿ ಮಸೀದಿ ಧ್ವಂಸ ಹಾಗು ಗುಜರಾತ್ ನರಮೇಧಗಳಿಂದ ರೊಚ್ಚಿಗೆದ್ದ ಕೆಲ ಮುಸ್ಲಿಮ್ ಯುವಕರು ಮಾಡುವ ಭಯೋತ್ಪಾದನೆಯನ್ನೂ ಪ್ರತೀಕಾರ ಅಥವಾ ಪ್ರತಿಕ್ರಿಯೆ ಎಂದು ಕರೆಯಬಹುದಲ್ಲವೆ?
ರಾಮಾಜೋಯಿಸ್ ತಮ್ಮ ಲೇಖನದಲ್ಲಿ ಮಾಲೇಗಾಂವ್ ಸ್ಪೋಟದ ರೂವಾರಿ ಎಂಬ ಆರೋಪ ಹೊತ್ತಿರುವ ಸಾಧ್ವಿ ಮತ್ತವಳ ಸಹಚರರನ್ನು ಭಗತ್ ಸಿಂಗ್, ಸುಖದೇವ್, ಮದನ್ ಲಾಲ್ ಧಿಂಗ್ರಾ, ಚಂದ್ರಶೇಖರ್ ಆಜಾದ್ ಮತ್ತಿತರರಿಗೆ ಹೋಲಿಸಿದ್ದಾರೆ! ಭಲೇ ಜೋಯಿಸರೇ, ಭಲೇ ವಿ.ಕ.
ರಾಮಾಜೋಯಿಸರ ಲೇಖನದ ಟೋನ್ ಹೇಗಿದೆಯೆಂದರೆ ಮಾಲೇಗಾಂವ್ ಸ್ಫೋಟದ ತನಿಖೆ ಮಾಡುತ್ತಿರುವ ಎಟಿಎಸ್, ಸ್ಫೋಟದಲ್ಲಿ ಹಿಂದೂಗಳು ಭಾಗಿಯಾಗಿದ್ದಾರೆ ಎಂಬುದು ಗೊತ್ತಾದ ತಕ್ಷಣ ತನಿಖೆಯನ್ನೇ ಮುಚ್ಚಿಹಾಕಬೇಕಿತ್ತು! ಸಾಧ್ವಿ ಮತ್ತಿತರರನ್ನು ಮೋಕಾದಡಿಯಲ್ಲಿ ಬಂಧಿಸಿದ್ದೇ ಸರಿಯಲ್ಲ ಎಂದು ವಾದಿಸಿರುವ ಜೋಯಿಸರ ಮಾತುಗಳನ್ನು ಗಮನಿಸಿದರೆ ಈ ದೇಶದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು ಮಾಡುವ ತಪ್ಪುಗಳಿಗೆ ಮಾತ್ರ ಶಿಕ್ಷೆಯಿರಬೇಕು, ಮೇಲ್ಜಾತಿಯ ಹಿಂದೂಗಳು ತಪ್ಪು ಮಾಡಿದರೆ ಅವರನ್ನು ಕ್ಷಮಿಸಿಬಿಡಬೇಕು ಎಂಬ ಅಪ್ಪಣೆಯ ಭಾವ ಕಂಡುಬರುತ್ತದೆ.
ಸಾಧ್ವಿ ನಿಜಕ್ಕೂ ತಪ್ಪು ಮಾಡಿದ್ದರೂ ಆಕೆ ದೇಶಭಕ್ತಿಯಿಂದ ಮಾಡಿದ್ದಾಳೆ ಎಂದು ಒಬ್ಬ ನಿವೃತ್ತ ನ್ಯಾಯಮೂರ್ತಿಯೇ ಸಮರ್ಥಿಸಿಕೊಂಡರೆ ನಿಜಕ್ಕೂ ಆಘಾತವಾಗಬೇಕಿರುವುದು ನ್ಯಾಯಾಂಗವ್ಯವಸ್ಥೆಯನ್ನು ನಂಬಿಕೊಂಡು ಕುಳಿತಿರುವ ದೇಶವಾಸಿಗಳಿಗೆ.
ಇಂಥ ಆತ್ಮಘಾತಕತನದ ಬರಹವನ್ನು ವಿ.ಕ. ಪ್ರಕಟಿಸಿರುವ ರೀತಿಯೇ ನಿಜಕ್ಕೂ ಅಸಹ್ಯಕರ. ಭಯೋತ್ಪಾದನೆ ಹಿಂದೂಗಳು ಮಾಡಲಿ, ಮುಸ್ಲಿಮರು ಮಾಡಲಿ ನ್ಯಾಯವ್ಯವಸ್ಥೆ ಒಂದೇ ಕ್ರಮದಲ್ಲಿ ಶಿಕ್ಷಿಸುವಂತಾಗಬೇಕು ಎಂದು ಹೇಳಲು ಸಾಧ್ಯವಿಲ್ಲದ ಇಂಥ ಮನಸ್ಸುಗಳು ದೇಶದ ಪಾಲಿಗೆ ಗಂಡಾಂತರಕಾರಿ.
ಮಾಲೇಂಗಾಂವ್ ಸ್ಫೋಟದಲ್ಲಿ ಹಿಂದೂಗಳು ಪಾಲ್ಗೊಂಡಿರುವುದು ಬಯಲಿಗೆ ಬರುತ್ತಿದ್ದಂತೆ ಫ್ಯಾಸಿಸ್ಟ್ ಶಕ್ತಿಗಳು ತಮ್ಮ ನಿಜಬಣ್ಣದೊಂದಿಗೆ ಪ್ರತ್ಯಕ್ಷವಾಗುತ್ತಿವೆ. ಆದರೆ ಈ ಪಟ್ಟಿಯಲ್ಲಿ ನ್ಯಾಯಪಾಲಕ ವ್ಯವಸ್ಥೆಯಲ್ಲಿ ಇದ್ದವರೇ ಕಾಣಿಸಿಕೊಂಡಿರುವುದು ಮಾತ್ರ ಆಘಾತಕರ.
ಇಂದಿರಾಗಾಂಧಿ ಹತ್ಯೆಯ ನಂತರ ನಡೆದ ಸಿಕ್ ನರಮೇಧವನ್ನು ರಾಜೀವ್‌ಗಾಂಧಿಯವರು ಹೀಗೇ ಸಮರ್ಥಿಸಿಕೊಂಡಿದ್ದರು. ಬಾಬರಿ ಮಸೀದಿ ಧ್ವಂಸವನ್ನು ಅಡ್ವಾನಿ ಸಮರ್ಥಿಸಿಕೊಂಡಿದ್ದೂ ಹೀಗೆ. ನಂತರ ಗುಜರಾತ್ ನರಮೇಧವನ್ನು ನರೇಂದ್ರ ಮೋದಿ ಕ್ರಿಯೆಗೆ ಪ್ರತಿಕ್ರಿಯೆ ಎಂದೇ ಸಮರ್ಥಿಸಿಕೊಂಡಿದ್ದರು. ಇದೀಗ ರಾಮಾಜೋಯಿಸ್ ಮತ್ತು ವಿಜಯ ಕರ್ನಾಟಕ ಮಾಲೇಗಾಂವ್ ಸ್ಫೋಟವನ್ನೂ ಸಮರ್ಥಿಸಿರುವುದೂ ಇದೇ ಧ್ವನಿಯಲ್ಲಿ.
ಗಲೀಜು, ಕೊಚ್ಚೆಯಲ್ಲಿ ಬಿದ್ದಿರುವ ಜನರು ಆ ವಾಸನೆಯನ್ನೇ ಆಘ್ರಾಣಿಸಿಕೊಂಡು ಸುಖ ಪಡುತ್ತಿದ್ದರೆ ಅದಕ್ಕೆ ಏನನ್ನುವುದು?

Monday, November 24, 2008

‘ಒಡ್ಡು ಒಡ್ಡಾಗಿ ಅಂದ್ರೆ ಏನು ರಂಗಣ್ಣಾ?

‘ಪವಾಡ ಸದೃಶ ಸಾಧನೆ ಎಂಬ ನ.೨೫ರ ಕನ್ನಡಪ್ರಭ ಸಂಪಾದಕೀಯ ಗಮನಿಸಿ:“ಕೆಲವೇ ವರ್ಷಗಳ ಹಿಂದೆ, ಒಡ್ಡು ಒಡ್ಡಾಗಿ ವರ್ತಿಸುತ್ತಾ ಮೈದಾನಕ್ಕಿಳಿದು ಒಂದು ರೀತಿಯಲ್ಲಿ ತಂಡದ ದೃಷ್ಟಿ ಬೊಟ್ಟಿನಂತೆ ಇದ್ದ ಮಹೇಂದ್ರ ಸಿಂಗ್ ಈಗ ತನ್ನ ವಿಚಿತ್ರ ಕೇಶಾಲಂಕಾರವನ್ನು ಬದಲಾಯಿಸಿಕೊಂಡು ಒಬ್ಬ ಸಂಭಾವಿತ-ಗಂಭೀರ ನಾಯಕರಾಗಿ ಬೆಳೆದು ನಿಂತಿದ್ದಾರೆ.ನೇರವಾಗಿ ಕನ್ನಡಪ್ರಭ ಸಂಪಾದಕರಿಗೆ ಪ್ರಶ್ನೆ ಕೇಳೋಣ: ಇಲ್ಲಿ ಬಳಸಿರುವ ‘ಒಡ್ಡು ಒಡ್ಡಾಗಿ ಅಂದ್ರೆ ಏನು ರಂಗಣ್ಣಾ?ಒಡ್ಡರು, ವಡ್ಡರು ಅಂದ್ರೆ ಅದೊಂದು ಜಾತಿ, ಸಾಧಾರಣವಾಗಿ ಕಲ್ಲು ಒಡೆಯುವ ಶ್ರಮಿಕ ಜನವರ್ಗ ಇದು. ಪರಿಶಿಷ್ಟಜಾತಿಗಳ ಪಟ್ಟಿಯಲ್ಲಿ ಈ ಜಾತಿಯ ಹೆಸರೂ ಇದೆ. ಈ ಸಮುದಾಯವನ್ನು ಬೋವಿ ಎಂದೂ ಸಹ ಕರೆಯುತ್ತಾರೆ. ಬಿರುಬಿಸಿಲಿನಲ್ಲಿ ಶ್ರಮದ ಕೆಲಸ ಮಾಡುವ ಜನ ಇವರಾದ್ದರಿಂದ ಸೂಟು, ಬೂಟು ಹಾಕಿಕೊಳ್ಳುವುದು ಸಾಧ್ಯವೆ? ಶಾಂಪೂವಿನಿಂದ ಕೂದಲು ತೊಳೆದುಕೊಂಡು ನೀಟಾಗಿ ಕ್ರಾಪ್ ಬಿಟ್ಟುಕೊಳ್ಳುವುದು ಸಾಧ್ಯವೆ? ಮುಖಕ್ಕೆ ಫೇರ್ ಅಂಡ್ ಲವ್ಲೀ, ಪಾಂಡ್ಸ್ ಪೌಡರ್ ಹಚ್ಚಿಕೊಂಡು ಕುಳಿತು ಕಲ್ಲು ಒಡೆಯುವುದು ಸಾಧ್ಯವೆ? ಇನ್ನು ಬಾಡಿ ಡಿಯೋಡರೆಂಟು, ಸೆಂಟು ಇತ್ಯಾದಿಗಳ ಕತೆ ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತೆ.ಯಾರಾದರೂ ಗಲೀಜಾಗಿ ಕಂಡ್ರೆ ನಮ್ಮ ಸೋಕಾಲ್ಡ್ ಸಭ್ಯ ಜನರು ವಡ್ರಂಗೆ ಇದ್ದಾನೆ ನೋಡು ಎನ್ನುತ್ತಾರೆ. ವಡ್ಡರು ಗಲೀಜು ಜನ ಅನ್ನೋದು ಇಂಥವರ ಅಭಿಪ್ರಾಯ. ಹೀಗೆ ಇಂಥ ಜನವರ್ಗಗಳು ಗಲೀಜು ಮಾಡಿಕೊಳ್ಳದೆ ಹೋಗಿದ್ದರೆ, ಕೆಲಸ ಮಾಡದೆ ಇದ್ದರೆ ಈ ಜಗತ್ತು ಹೇಗಿರುತ್ತಿತ್ತು ಎನ್ನುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂಬುದನ್ನು ಈ ಸಭ್ಯರು ಮರೆಯುತ್ತಾರೆ.ಆದರೆ ರಂಗಣ್ಣಾ ನಿಮ್ಮ ಪತ್ರಿಕೆಯ ಸಂಪಾದಕೀಯದಲ್ಲೇ ಯಾಕೆ ಈ ಪ್ರಯೋಗ ಬಂತು?ನೀವು ಮೇಲೆ ಹೇಳಿದ ಸಭ್ಯರ ಪೈಕಿ ಅಲ್ಲ ಅಂತ ನಮಗೆ ಗೊತ್ತು. ಗುಣ-ಅವಗುಣ ಹೇಳಲು ಜಾತಿಯ ಹೆಸರನ್ನು ಬಳಸಿಕೊಳ್ಳಲೇಬೇಕಾ? ಅದು ಅಮಾನವೀಯ ಅಲ್ಲವೆ? ಬಳಕೆಯಲ್ಲಿ ಬಂದಿದೆ ಕಣ್ರೀ ಅಂತ ಕೆಲವರು ಇಂಥದ್ದನ್ನು ಸಮರ್ಥಿಸಿಕೊಳ್ಳುತ್ತಾರೆ. ಇವತ್ತಿನ ಆಧುನಿಕ ಯುಗದಲ್ಲೂ ಬಳಕೆಯಲ್ಲಿ ಬಂದಿದೆ ಎಂಬ ಕಾರಣಕ್ಕೆ ಇಂಥ ಅಸಹ್ಯಗಳನ್ನೆಲ್ಲ ಮುಂದುವರೆಸಿಕೊಂಡು ಹೋಗಬೇಕಾ? ಇಂಥ ತಪ್ಪುಗಳನ್ನು ತಿದ್ದಿಕೊಳ್ಳುವಿರಾ ರಂಗಣ್ಣಾ?

Sunday, November 23, 2008

ಮೇಕಪ್ ಕಳಚಿದ ಹೀರೊಗಳು!

ಒಂಟಿ ಹಕ್ಕಿ ಬ್ಲಾಗಿನ ಒಡೆಯ ಕೆ.ಎಸ್.ಸುಪ್ರೀತ್ ಪತ್ರಕರ್ತರ ಕುರಿತ ಬರಹವೊಂದನ್ನು ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಾರೆ. ಅದನ್ನು ಇಲ್ಲಿ ಕೃತಜ್ಞತೆಯೊಂದಿಗೆ ಪ್ರಕಟಿಸುತ್ತಿದ್ದೇವೆ.

ಹೈಸ್ಕೂಲು ದಿನಗಳಿಂದಲೂ ಪತ್ರಕರ್ತರ ಬಗ್ಗೆ ನನಗೆ ವಿಲಕ್ಷಣವಾದ ಕುತೂಹಲ ಬೆಳೆದಿತ್ತು. ಯಾವ ಹಾಲಿವುಡ್ ಹೀರೋನ ಸಾಹಸಗಳಿಗೂ ಕಡಿಮೆಯಿರದ ‘ಹಾಯ್ ಬೆಂಗಳೂರ್’ ಸಂಪಾದಕರಾದ ರವಿ ಬೆಳಗೆರೆಯವರ ಚಿತ್ರ ವಿಚಿತ್ರ ಸಾಧನೆಗಳು, ಮೈಲುಗಲ್ಲುಗಳು ಹಾಗೂ ರೋಮಾಂಚನಕಾರಿ ಸಾಹಸಗಳು, ಅವುಗಳಷ್ಟೇ ಥ್ರಿಲ್ಲಿಂಗಾಗಿರುತ್ತಿದ್ದ ಅವರ ಬರವಣಿಗೆ ಪತ್ರಕರ್ತ ಎಂದರೆ ಸಿನೆಮಾದಲ್ಲಿ ಅಕರಾಳ-ವಿಕಾರಾಳವಾಗಿ ಮುಖಭಾವ ಪ್ರಕಟಿಸುತ್ತಾ ಆಕ್ರಮಣ ಮಾಡುವ ಹತ್ತಾರು ಮಂದಿ ದಾಂಢಿಗರಿಗೆ ಒದೆ ಕೊಟ್ಟು ಗರಿ ಮುರಿಯದ ಶರ್ಟನ್ನೊಮ್ಮೆ ಕೊಡವಿ ನಿಂತು ಕೈ ಬೀಸುವ ಸಣಕಲ ಹೀರೋನ ಹಾಗೆ ಎಂಬ ಭ್ರಮೆಯನ್ನು ಮೂಡಿಸುತ್ತಿದ್ದವು. ಪತ್ರಿಕೋದ್ಯಮವೆಂಬುದು ಅತ್ಯಂತ ತ್ಯಾಗಮಯವಾದ, ನಿಸ್ವಾರ್ಥದಿಂದ ಕೂಡಿದ ಉದ್ಯಮ ಎಂಬುದು ಆಗಿನ ಗ್ರಹಿಕೆಯಾಗಿತ್ತು. ಸತ್ಯದ ಉಪಾಸಕರನ್ನು ಪತ್ರಕರ್ತರು ಎಂಬ ಹೆಸರಿನಿಂದ ಕರೆಯುತ್ತಾರೆ, ಜಗತ್ತಿಗೆ ಎಂದಾದರೂ ಪ್ರಾಮಾಣಿಕತೆ, ನಿಷ್ಠುರತೆ, ವಸ್ತುನಿಷ್ಠತೆ, ಧೈರ್ಯಗಳ ಕೊರತೆ ಬಿದ್ದರೆ ಇವರಿಂದ ಕಡ ಪಡೆಯಬಹುದು ಎಂಬುದು ಮುಗ್ಧ ನಂಬಿಕೆಯಾಗಿತ್ತು. ಪತ್ರಿಕೆಗಳಲ್ಲಿ ಪ್ರಕಟವಾಗುವುದು ಗಾಸ್ಪೆಲ್ ಟ್ರುಥ್ ಎಂದು ಈಗಲೂ ಶ್ರದ್ಧೆಯಿಂದ ನಂಬುವ ‘ಭಕ್ತಾದಿ’ಗಳಲ್ಲಿ ನಾನೂ ಒಬ್ಬನಾಗಿದ್ದೆ. ಪತ್ರಿಕೆಗಳ ಬಗ್ಗೆ, ಪತ್ರಕರ್ತರ ಬಗ್ಗೆ ನನ್ನ ಕ್ರೇಜು ಅದೆಷ್ಟರ ಮಟ್ಟಿಗೆ ಹುಚ್ಚುತನದ ಪರಿಧಿಯನ್ನು ಮುಟ್ಟುತ್ತಿತ್ತೆಂದರೆ ನ್ಯೂಸ್ ಸ್ಟಾಂಡಿನಲ್ಲಿ ಕಣ್ಣಿಗೆ ಬೀಳುವ ಪ್ರತಿಯೊಂದು ಹೊಸ ಪತ್ರಿಕೆಯನ್ನೂ ತಂದಿಟ್ಟುಕೊಂಡು ಜೋಪಾನ ಮಾಡುತ್ತಿದ್ದೆ.
ಅಳಿಕೆಯಲ್ಲಿ ಕಾಲೇಜು ಓದುವುದಕ್ಕೆ ಸೇರಿದಾಗ ನನ್ನ ಅನೇಕ ಹುಚ್ಚಾಟಗಳಿಗೆ ಅನಿವಾರ್ಯವಾಗಿ ಕಡಿವಾಣ ಹಾಕಿಕೊಳ್ಳಬೇಕಿತ್ತು. ಕಾಲೇಜಿನ ಇನ್ನೂರು ಚಿಲ್ಲರೆ ಹುಡುಗರಿಗೆ ಸೇರಿ ಅಲ್ಲಿಗೆ ನಾಲ್ಕು ಪೇಪರುಗಳು ಬರುತ್ತಿದ್ದವು. ಎರಡು ಇಂಗ್ಲೀಷು, ಎರಡು ಕನ್ನಡ. ಜೊತೆಗೆ ಜಗತ್ತಿನಲ್ಲಿ ಇರಬಹುದಾದ ಅತ್ಯಂತ ಸಪ್ಪೆಯಾದ, ಎಂಥಾ ಸಾಹಸಿಗಾದರೂ ಬೋರು ಹೊಡೆಸುವ ಆಧ್ಯಾತ್ಮಿಕ ಮಾಸ ಪತ್ರಿಕೆಗಳು ಬಿಟ್ಟರೆ ಬೇರಾವ ಸರಕೂ ನಮ್ಮ ಕೈಗೆ ಸಿಕ್ಕುತ್ತಿರಲಿಲ್ಲ. ಇದ್ದುದರಲ್ಲಿ ಟೈಮ್ಸಾಫಿಂಡಿಯಾದ ಮನರಂಜನೆಯ ಪುಟಗಳು, ವಿಜಯಕರ್ನಾಟಕದ ಕೆಲವು ಜನಪ್ರಿಯ ಅಂಕಣಗಳು ನಮ್ಮ ಹಸಿವನ್ನು ತಣಿಸುತ್ತಾ ನಮ್ಮ ಪ್ರಾಣವನ್ನು ಉಳಿಸಿದ್ದವು ಎನ್ನಬಹುದು! ಬೆಳಗಿನ ತಿಂಡಿಯನ್ನು ಮುಗಿಸಿಕೊಂಡು ಒಲಂಪಿಕ್ಸಿನಲ್ಲಿ ಓಡಿದಂತೆ ನಾವು ರೀಡಿಂಗ್ ರೂಮಿಗೆ ಓಡುತ್ತಿದ್ದೆವು. ಸಾಮಾನ್ಯವಾಗಿ ಈ ರೇಸಿನಲ್ಲಿ ಭಾಗವಹಿಸುವವರ ಸಂಖ್ಯೆ ನಾಲ್ಕಕ್ಕಿಂತ ಹೆಚ್ಚು ಇರುತ್ತಿರಲಿಲ್ಲ. ಒಂದು ವೇಳೆ ಈ ಸಂಖ್ಯೆ ನಾಲ್ಕನ್ನು ದಾಟಿ ಹತ್ತು-ಹದಿನೈದರ ಗಡಿಯನ್ನು ಮುಟ್ಟಿತು ಎಂದರೆ ಹಿಂದಿನ ದಿನ ಯಾವುದೋ ಕ್ರಿಕೆಟ್ ಮ್ಯಾಚ್ ನಡೆದಿರಬೇಕು ಎಂತಲೇ ತಿಳಿಯಬೇಕು. ಪ್ರಪಂಚದ ಹೊಸ ಹೊಸ ಆವಿಷ್ಕಾರಗಳನ್ನು, ವಿದ್ಯಮಾನಗಳನ್ನು ಅರಗಿಸಿಕೊಂಡು ಗಟ್ಟಿಗರಾಗಲು ತಯಾರಾಗುತ್ತಿದ್ದ ನಮ್ಮಂತಹ ನೂರಾರು ವಿದ್ಯಾರ್ಥಿಗಳಿಗೆ ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಯಾರು ಗೆದ್ದರು ಎಂಬುದು ತಿಳಿಯುವುದಕ್ಕೆ ಸುಮಾರು ಹತ್ತು ಹನ್ನೆರಡು ತಾಸು ಬೇಕಾಗಿತ್ತು ಎಂಬುದನ್ನು ತಿಳಿದರೆ ಸಂಪರ್ಕ ಕ್ರಾಂತಿಯ ಪಿತಾಮಹ ಎದೆ ಒಡೆದು ಸಾಯುತ್ತಿದ್ದುದು ಖಂಡಿತ!
ಹೀಗೆ ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ಎಂಬ ಡಾರ್ವಿನನ್ನ ಸಿದ್ಧಾಂತವನ್ನು ಅತ್ಯಂತ ಸಮರ್ಕಪವಾಗಿ ಅನುಷ್ಠಾನಕ್ಕೆ ತಂದು ಸುದ್ದಿ ಸಮಾಚಾರಗಳನ್ನು ತಿಳಿದುಕೊಂಡು, ಜಗತ್ತಿನ ವಿದ್ಯಮಾನದ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಭವ್ಯ ಭಾರತದ ಜವಾಬ್ದಾರಿಯುತ ಪ್ರಜೆಯಾಗುವ ಹಾದಿಯಲ್ಲಿ ಸಮರ್ಪಕವಾಗಿ ನಡೆಯುತ್ತಿದ್ದೇವೆ ಎಂದು ನಮ್ಮನ್ನು ನಾವು ಸಂತೈಸಿಕೊಳ್ಳುತ್ತಿದ್ದೆವು. ಹೈಸ್ಕೂಲಿನಲ್ಲಿದ್ದಾಗ ಕಂಡಕಂಡ ಪತ್ರಿಕೆ, ಮ್ಯಾಗಜೀನುಗಳನ್ನು ಗುಡ್ಡೆ ಹಾಕಿಕೊಂಡು ಶೂನ್ಯ ಸಂಪಾದನೆ ಮಾಡುತ್ತಿದ್ದ ನನಗೆ ನಮ್ಮ ಕಾಲೇಜಿನ ರೀಡಿಂಗ್ ರೂಮೆಂಬುದು ಪ್ರತಿದಿನ ಮೃಷ್ಟಾನ್ನ ತಿಂದು ಹಾಲಿನಲ್ಲಿ ಕೈತೊಳೆಯುವವನಿಗೆ ಗಂಜಿ ಕುಡಿಸಿ ಕೈತೊಳೆಯಲು ಬೀದಿ ನಲ್ಲಿ ತೋರಿದ ಹಾಗಾಗಿತ್ತು. ಆದರೂ ಮರುಭೂಮಿಯಲ್ಲಿನ ಓಯಸ್ಸಿಸಿನ ಹಾಗೆ ನನ್ನ ಹಾಗೂ ನನ್ನಂಥ ತಿಕ್ಕಲರ ದಾಹವನ್ನು ತೀರಿಸುವುದಕ್ಕಾಗಿ ವಿಜಯ ಕರ್ನಾಟಕ, ಟೈಮ್ಸಾಫಿಂಡಿಯ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್‌ಗಳು ಕೈಲಾದ ಪ್ರಯತ್ನ ಮಾಡುತ್ತಿದ್ದವು. ವಿಜಯ ಕರ್ನಾಟಕವನ್ನು ಅದೆಷ್ಟು ಗಾಢವಾಗಿ ಓದುತ್ತಿದ್ದೆವೆಂದರೆ ಪತ್ರಿಕೆಯ ಮಧ್ಯದ ಸಂಪಾದಕೀಯ ಪುಟವನ್ನು ನೋಡಿಯೇ ಇವತ್ತು ಯಾವ ದಿನ ಎಂಬುದನ್ನು ಹೇಳಬಲ್ಲ ಕೌಶಲ್ಯವನ್ನು ಸಂಪಾದಿಸಿಕೊಂಡಿದ್ದೆವು. ಗುರುವಾರವೆಂದರೆ ವಿಶ್ವೇಶ್ವರ ಭಟ್ಟರ ನೂರೆಂಟು ಮಾತು, ಆ ಜಾಗದಲ್ಲಿ ಚೂಪು ನೋಟದ ಬೈತೆಲೆ ಕ್ರಾಪಿನ ಯುವಕನೊಬ್ಬನ ಫೋಟೊ ಪ್ರಕಟವಾಗಿದೆಯೆಂದರೆ ನಿಸ್ಸಂಶಯವಾಗಿ ಅದು ‘ಬೆತ್ತಲೆ ಜಗತ್ತು’ ಎಂದು ಹೇಳಿಬಿಡಬಹುದಿತ್ತು,ಜೊತೆಗೆ ಅಂದು ಶನಿವಾರ ಎಂಬುದನ್ನು ಯಾವ ಪಂಚಾಂಗದ ನೆರವಿಲ್ಲದೆ ಹೇಳಿಬಿಡುತ್ತಿದ್ದೆವು. ಭಾನುವಾರವೆಂಬ ‘ಸಬ್ಬತ್ ದಿನ’ವನ್ನು ನಾವು ಪರಮ ಶ್ರದ್ಧಾವಂತ ಯಹೂದಿಗಿಂತ ಶ್ರದ್ಧೆಯಿಂದ ಆಚರಿಸುತ್ತಿದ್ದೆವು. ಆ ದಿನ ಕೆಲಸಕ್ಕೆ ರಜೆ. ಯಾವ ಕೆಲಸವನ್ನೂ ಮಾಡಬಾರದು ಎಂಬುದು ಯಹೂದಿಗಳ ನಂಬಿಕೆ. ನಾವದನ್ನು ಅಕ್ಷರಶಃ ಪಾಲಿಸುತ್ತಿದ್ದೆವು. ಭಾನುವಾರ ನಮ್ಮ ಪಠ್ಯಪುಸ್ತಕಗಳ ಮುಖವನ್ನೂ ನೋಡುವ ಕಷ್ಟ ತೆಗೆದುಕೊಳ್ಳುತ್ತಿರಲಿಲ್ಲ. ರೆಕಾರ್ಡ್ ಬರೆಯುವುದಂತೆ, ನೋಟ್ಸ್ ಮಾಡಿಕೊಳ್ಳುವುದಂತೆ, ಸಿಇಟಿಗೆ ಓದಿಕೊಳ್ಳುವುದಂತೆ - ಹೀಗೆ ನಾನಾ ಕೆಲಸಗಳಲ್ಲಿ ಮುಳುಗಿ ಹೋಗಿರುತ್ತಿದ್ದ ಓರಗೆಯ ಗೆಳೆಯರನ್ನು ಅಧರ್ಮಿಯನ್ನು ಕನಿಕರದಿಂದ, ಸಹಾನುಭೂತಿಯಿಂದ ನೋಡುವ ಧರ್ಮಿಷ್ಟರ ಹಾಗೆ ನೋಡುತ್ತಿದ್ದೆವು. ಮೌನವಾಗಿ ‘ದೇವರೇ ತಾವೇನು ಮಾಡುತ್ತಿದ್ದೇವೆಂಬುದನ್ನು ಇವರರಿಯರು, ಇವರನ್ನು ಕ್ಷಮಿಸು’ ಎಂದು ಪ್ರಾರ್ಥಿಸಿ ನಮ್ಮ ‘ಸಬ್ಬತ್’ ಆಚರಣೆಯಲ್ಲಿ ಭಕ್ತಿಯಿಂದ ಮಗ್ನರಾಗುತ್ತಿದ್ದೆವು.
ನಮ್ಮ ಭಾನುವಾರದ ‘ಸಬ್ಬತ್’ ಆಚರಣೆಗೆ ಕೆಲವೊಂದು ಅನುಕೂಲ ಸಿಂಧುಗಳನ್ನು ಮಾಡಿಕೊಂಡಿದ್ದೆವೆಂಬುದನ್ನು ತಿಳಿಸಬೇಕು. ಆ ದಿನ ಯಾವ ಕೆಲಸವನ್ನೂ ಮಾಡಬಾರದು (ಉಳಿದ ದಿನಗಳಲ್ಲಿ ನಾವು ಮಾಡುತ್ತಿದ್ದದ್ದು ಅಷ್ಟರಲ್ಲೇ ಇತ್ತು!) ಎಂದು ನಾವು ನಿಯಮ ವಿಧಿಸಿಕೊಂಡಿದ್ದರೂ ಸಾಪ್ತಾಹಿಕ ಸಂಚಿಕೆಗಳನ್ನು ಓದುವುದಕ್ಕಾಗಿ ನಿಯಮವನ್ನು ಸಡಿಲಿಸಿಕೊಳ್ಳುತ್ತಿದ್ದೆವು. ಕೆಲವೊಮ್ಮೆ ನಾನಾ ಮೂಲಗಳಿಂದ ಅಕ್ರಮವಾಗಿ ಸಂಪಾದಿಸಿಕೊಂಡಿರುತ್ತಿದ್ದ ‘ಹಾಯ್ ಬೆಂಗಳೂರು’, ಮಾಂಡೋವಿ, ಹೇಳಿ ಹೋಗು ಕಾರಣ, ಪರಿಸರದ ಕಥೆ, ವಿಶ್ವ ವಿಸ್ಮಯದಂತಹ ಪುಸ್ತಕಗಳ ಓದಿಗಾಗಿ ನಮ್ಮ ಭಾನುವಾರವನ್ನು ಮೀಸಲಿಡುತ್ತಿದ್ದೆವು. ತರಗತಿಗೆ ಸಂಬಂಧ ಪಟ್ಟ ಪುಸ್ತಕ ಓದುವುದು ಬಿಟ್ಟು ಕೆಲಸಕ್ಕೆ ಬಾರದವುಗಳನ್ನು ಓದುತ್ತಿದ್ದ ನಮ್ಮನ್ನು ಕಂಡು ಅನೇಕ ಗೆಳೆಯರು ಪ್ರಾಮಾಣಿಕವಾಗಿ ಸಂತಾಪ ಸೂಚಿಸುತ್ತಿದ್ದರಾದರೂ ನಮ್ಮ ಸಾಂಕ್ರಾಮಿಕ ಖಾಯಿಲೆ ಅವರಿಗೂ ತಗುಲಿಕೊಂಡೀತೆಂದು ಹತ್ತಿರ ಬರಲು ಹೆದರುತ್ತಿದ್ದುದರಿಂದ ಭಾನುವಾರಗಳಲ್ಲಿ ನಾವು ಅವರ ‘ಧರ್ಮ ಬೋಧನೆ’ಯಿಂದ ಪಾರಾಗುತ್ತಿದ್ದೆವು!
Ignorance is bliss ಎಂದು *ತಿಳಿದವರು* ಹೇಳುತ್ತಾರೆ. ಅದರಂತೆ ಆ ತಿಳುವಳಿಕೆಯಿಲ್ಲದ ದಿನಗಳಲ್ಲೇ ನಮ್ಮ ಬದುಕು pause ಆಗಿಬಿಟ್ಟಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸುತ್ತದೆ. ತಿಳುವಳಿಕೆ ಬರುತ್ತಾ ನಾವು ಭಾವಿಸಿಕೊಂಡಿದ್ದ ದೇವ-ದೇವತೆಗಳ ನಿಜಬಣ್ಣ ಬಯಲಾಗತೊಡಗಿತು. ಪರದೆಯ ಮೇಲೆ ಕಂಡ ಬೆಳ್ಳಿ ಬಣ್ಣದ ಹೀರೋ ಮೇಕಪ್ ಕಳಚಿ ಎದುರು ಬಂದಾಗ ಆಗುವ ಆಘಾತ ಪತ್ರಕರ್ತರ ನಿಜಮುಖ ತಿಳಿದಾಗ ಆಗತೊಡಗಿತು. ಹಿಂದೆ ಭಾವಿಸಿದ್ದ ಹಾಗೆ ಪತ್ರಕರ್ತರು ಜಗತ್ತಿಗೆ ಪ್ರಾಮಾಣಿಕತೆ, ಅಕೌಂಟೆಬಿಲಿಟಿ, ದಕ್ಷತೆ ಮುಂತಾದ ಸದ್ಗುಣಗಳನ್ನು, ಆದರ್ಶದ ಸಗಟನ್ನು ಸಾಲ ಕೊಡಬಲ್ಲ ಧನಿಕರು ಅಲ್ಲ ಎಂಬುದು ತಿಳಿಯತೊಡಗಿತು. ಅಸಲಿಗೆ ಬಹುತೇಕರಲ್ಲಿ ಈ ದಾಸ್ತಾನಿನ ಕೊರತೆ ತೀವ್ರವಾಗಿರುತ್ತದೆ. ಹಲವು ಸಂದಭ್ರಗಳಲ್ಲಿ ನಮ್ಮಂತಹ ಸಾಮಾನ್ಯರು ಒಟ್ಟುಗೂಡಿ ಕೈಲಾದ ಸಹಾಯ ಮಾಡದ ಹೊರತು ಅವರು ಸಂಪೂರ್ಣ ದಿವಾಳಿಯೆದ್ದು ಹೋಗುತ್ತಾರೆ ಎಂಬ ಜ್ಞಾನೋದಯವಾಗುತ್ತಿದ್ದ ಹಾಗೆ ಕಟ್ಟಿಕೊಂಡಿದ್ದ ಆಶಾಗೋಪುರಗಳು ಕಣ್ಣ ಮುಂದೆ ಕುಸಿದು ಬೀಳಲು ಶುರುವಾದವು. ಇಡೀ ಕಟ್ಟಡವೇ ಕುಸಿದು ಬಿದ್ದ ನಂತರವೂ ಆಕಾಶದತ್ತ ಮುಖ ಮಾಡಿ ಅಪರಿಮಿತ ಆಶಾಭಾವದೊಂದಿಗೆ ಹಲ್ಲು ಕಚ್ಚಿ ಹಿಡಿದು ನಿಂತಿರುವ ಪಿಲ್ಲರುಗಳ ಹಾಗೆ ಅಲ್ಲಲ್ಲಿ ಕಂಡ ಕೆಲವು ಅಪವಾದಗಳು ನಿಂತಿವೆಯಾದರೂ ಮನಸ್ಸನ್ನೆಲ್ಲಾ ಕುಸಿದು ಬಿದ್ದ ಕಟ್ಟಡದ ಧೂಳು ಆಕ್ರಮಿಸಿಕೊಂಡಿದೆ.
………………ಏನನ್ನೋ ಬರೆಯಲು ಹೊರಟು ಅದು ಮತ್ತೇನೋ ಆಗಿಬಿಟ್ಟ ನನ್ನ ಹಲವು ಬರಹಗಳ ಸಾಲಿಗೆ ಇದೂ ಸೇರುತ್ತದೆ. ಅಸಲಿಗೆ ನಾನು ಬರೆಯಬೇಕೆಂದಿದ್ದದ್ದು ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ಟರು ಶಾರದಾ ಪ್ರಸಾದರು ನಿಧನರಾದಾಗ ಸಂಭಾವನೆಗೆ ಸಂಬಂಧಿಸಿದ ಹಾಗೆ ಬರೆದುಕೊಂಡಿದ್ದ ಹಸಿ ಹಸೀ ಸುಳ್ಳು ಹಾಗೂ ಇತ್ತೀಚಿಗಿನ ಮತಾಂತರ ಸಂವಾದದಲ್ಲಿ ಪ್ರಕಟವಾದ ತಾರಿಣಿಯವರ ಲೇಖನದ ಪ್ರಕರಣದ ಬಗ್ಗೆ. ಪ್ರತಿವಾರ ಪತ್ರಿಕೋದ್ಯಮದ ಆದರ್ಶಗಳ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಭಟ್ಟರು ಹೀಗೆ ಮಾಡಿರುವುದು ತಿಳಿದು ಅರಗಿಸಿಕೊಳ್ಳಲು ಕೊಂಚ ಕಷ್ಟವಾಯಿತು. ಹಿಂದೆ ಅವರ ಲೇಖನಗಳಲ್ಲಿನ ಎರರ್ಸ್ ಬಗ್ಗೆ ಓದಿದಾಗಲೂ ಹೀಗೇ ಅನ್ನಿಸಿತ್ತು. ಆ ಬಗ್ಗೆ ಬರೆಯೋಣ ಅಂತ ಹೊರಟು ಎಲ್ಲೆಲ್ಲೋ ತಲುಪಿ ಕಡೆಗೆ ಏನೋ ಆಗಿ ಹೋಯಿತು. ಮದುವೆ ಮುಗಿದ ಮೇಲೆ ನೋಡಿದರೆ ಮದುವೆ ಗಂಡೇ ಬದಲಾಗಿದ್ದಾನೆ ಎಂಬ ಪಾಡು!