Sunday, November 30, 2008

ನೆಮ್ಮದಿಯ ನಾಳೆ ನಮ್ಮದಾಗುವುದೇ?

ಮುಂಬೈ ನಿಧಾನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ನಮ್ಮ ಮಾಧ್ಯಮಗಳು ಆಪರೇಶನ್ ಸೈಕ್ಲೋನ್ ಯಶಸ್ವಿ ಎಂದೇ ಬಿಂಬಿಸಿದವು. ನಿಜ ಹೇಳಬೇಕೆಂದರೆ, ಭಾರತ ಸೋತಿತು. ಸಮುದ್ರದ ಹಾದಿಗುಂಟ ಬಂದ ಭಯೋತ್ಪಾದಕರ ಉದ್ದೇಶ ನೂರೋ, ಇನ್ನೂರೋ ಜನರನ್ನು ಕೊಲ್ಲುವುದಕ್ಕಿಂತ ಮುಖ್ಯವಾಗಿ ಜನರಲ್ಲಿ ಭಯ ಹುಟ್ಟಿಸಬೇಕಿತ್ತು. ಜನರನ್ನೂ ಕೊಂದರು. ತೀವ್ರವಾಗಿ ಕಾಡುವ ಭಯವನ್ನೂ ಸೃಷ್ಟಿಸಿದರು. ಆ ಕಾರಣಕ್ಕಾಗಿ ಅವರು ಯಶಸ್ವಿಯಾದರು. ಸೋತವರು - ನಾವು, ನಮ್ಮ ವ್ಯವಸ್ಥೆ. ಹಿರಿಯ ಉದ್ಯಮಿಗಳನ್ನು, ನಿಪುಣ ಪೊಲೀಸರನ್ನ, ಅಮಾಯಕರನ್ನು ಕಳೆದುಕೊಂಡವರು ನಾವು.
ಭಯೋತ್ಪಾದಕರು ತಾವು ಕೆಲವರನ್ನು ಕೊಂದು, ಮತ್ತೆ ಬದುಕಿ ಹಿಂದಕ್ಕೆ ಹೋಗತ್ತೇವೆಂದೇನು ಬಂದಿರಲಿಲ್ಲ. ಅವರ ಗುರಿ ಸ್ಪಷ್ಟವಿತ್ತು.
ವೀರಯೋಧ ಸಂದೀಪ್ ಅಪ್ಪ ಉನ್ನಿಕೃಷ್ಣ ಕೇರಳದ ಮುಖ್ಯಮಂತ್ರಿ ಅಚ್ಯುತಾನಂದರನ್ನು ಭೇಟಿ ಮಾಡಲು ಒಪ್ಪಲಿಲ್ಲ. ದೆಹಲಿಯಿಂದ ರಕ್ಷಣಾ ಮಂತ್ರಿ ಎ.ಕೆ ಅಂಟನಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಆಡಳಿತ ಚುಕ್ಕಾಣಿ ಹಿಡಿದವರೆಡೆಗೆ ಇದ್ದ ಆಕ್ರೋಶವನ್ನು, ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಅಪ್ಪ ತೀವ್ರವಾಗಿ ವ್ಯಕ್ತಪಡಿಸಿದರು.
'ನೈತಿಕ ಹೊಣೆ' ಹೊತ್ತು ಜವಾಬ್ದಾರಿಯಿಂದ ನುಣುಚಿಕೊಂಡಂತೆ ಕೈ ತೊಳೆದುಕೊಂಡು ಶಿವರಾಜ ಪಾಟೀಲರಂತೆ ಮನೆ ಸೇರಿಕೊಳ್ಳುವುದು ಸುಲಭ. ಆದರೆ ಹರೆಯದ ಮಗನ ದು:ಖವನ್ನು ಭರಿಸುವ ಕಷ್ಟ ಅವರಪ್ಪನಿಗೆ ಮಾತ್ರ ಗೊತ್ತು. ಯಾರ ರಾಜೀನಾಮೆಯುಊ ಅವರಿಗೆ ಸಮಾಧಾನ ತರುವುದಿಲ್ಲ.
ಇಂತಹ ಸಂದರ್ಭಗಳಲ್ಲಿ ಜನರಲ್ಲಿ ರಾಜಕಾರಣಿಗಳ ವಿರುದ್ಧ ಎಂದಿಲ್ಲದ ಆಕ್ರೋಶ ಉಕ್ಕಿ ಬರುತ್ತೆ. ಇದು ಸಹಜ. ಶನಿವಾರ ಸಂಜೆ ಸಿಎನ್ಎನ್ ಐಬಿಎನ್ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಶೋಭಾ ಡೇ ಮಾತು ಮಾತಿಗೆ ರಾಜಕಾರಣಿಗಳನ್ನು ಟೀಕಿಸುತ್ತಿದ್ದರು. ಅವರೊಬ್ಬರೇ ಅಲ್ಲ, ಪ್ಯಾನೆಲ್ ನಲ್ಲಿ ಇದ್ದ ಎಲ್ಲರೂ. ಮಿಲಿಂದ್ ದಿಯೋರಾ ಎಂಬ ತರುಣ ಸಂಸದ ನನ್ನಿಂದ ನಿಜವಾಗಿಯುಊ ಏನೋ ಘೋರ ಅನ್ಯಾಯವಾಗಿದೆಯೇನೋ ಎಂಬಂತೆ ಪಾಪಪ್ರಜ್ಞೆಗೆ ಒಳಗಾದವರಂತೆ ಕಂಡರು.
ಸದ್ಯ ನಮಗೆ ಬೇಕಿರುವುದು ಶಾಂತಿ. ರಾಜಕಾರಣಿಗಳನ್ನು ದೂರುವುದರಿಂದ ಆಗುವುದೇನೂ ಇಲ್ಲ. ರಾಜಕಾರಣಿಗಳನ್ನು ಟೀಕಿಸುವವರು ಚುನಾವಣೆಗೆ ನಿಂತು ಗೆಲ್ಲಲಾರರು. ಗೆದ್ದರೂ ಅವರು ಇತರೆ ರಾಜಕಾರಣಿಗಳಿಗಿಂತ ಭಿನ್ನವಾಗಿರಲಾರರು ಎಂಬುದಕ್ಕೆ ಖಾತ್ರಿ ಇರದು. ನಮ್ಮ ಈರ್ಷೆ, ದೌಲತ್ತು ಎಲ್ಲವನ್ನೂ ಬದಿಗಿಟ್ಟು ನಮ್ಮ ನೆಲದ, ಆಡಳಿತದ ತಿಕ್ಕಾಟಗಳಿಗೆ ಮಾತುಕತೆ ಮುಊಲಕ ಉತ್ತರ ಕಂಡುಕೊಳ್ಳಬೇಕಿದೆ. ಆ ಮುಊಲಕ ಶಾಂತಿ ಸ್ಥಾಪಿಸಬಹುದೇ ಎಂಬ ಬಗ್ಗೆ ಜನಾಭಿಪ್ರಾಯ ಮುಊಡಬೇಕಿದೆ. ಈಗ ನಮ್ಮ ಸಮಾಜ ವಿಜ್ಞಾನಿಗಳ, ಚಿಂತಕರ ಪಾತ್ರ ದೊಡ್ಡದಿದೆ.

1 comment:

Anonymous said...

ನಿಜ,
ಈ ರೀತಿ ಘಟನೆಗಳು ನಡೆದಾಗ ನಮಗೆ ಸಾಮಾನ್ಯವಾಗಿ ರಾಜಕಾರಣಿಗಳ ಮೇಲೆ ಆವೇಶ, ಕೋಪ ಉಕ್ಕಿ ಬರುತ್ತದೆ. ಏಕೆಂದರೆ ಅವರೇ ತಾನೇ ನಮ್ಮ ದೇಶವನ್ನು ಅಳುತ್ತಿರುವವರು. ಇಡೀ ದೇಶದಲ್ಲಿ ಯಾವುದೇ ಮೂಲೆಗೆ ಹೋದರೂ ರಾಜಕಾರಣಿಗಳಿಗೆ ಮಾತ್ರ Z category, Y Category ಸೆಕ್ಯುರಿಟಿ. ಆದರೆ ಒಬ್ಬ ಸಾಮಾನ್ಯ ಮನುಷ್ಯನಿಗೆ ಮತ್ತು ವ್ಯವಹಾರಸ್ಥರಿಗೆ ((Businessman) ಏನಿದೆ ಸೆಕ್ಯುರಿಟಿ? ಸಂದೀಪ್ ಉನ್ನೀಕೃಷ್ಣನ್ ಅವರ ತಂದೆಯಂತೆ ಒಬ್ಬರೇ ತಮ್ಮ ಅಕ್ರೋಶವನ್ನು ವ್ಯಕ್ತ ಪಡಿಸಿದರೆ ಸಾಲದು. ಉನ್ನೀಕೃಷ್ಣನ್ ಅಂತೆ ನೂರಾರು ಜನ ತಮ್ಮ ಹತ್ತಿರದ ಸಂಬಂಧಿಗಳನ್ನು ಕಳೆದ ಹಲವಾರು ದಾಳಿಗಳಲ್ಲಿ ಕಳೆದುಕೊಂಡಿದ್ದಾರೆ. ಅವರೆಲ್ಲರೂ ವ್ಯಕ್ತ ಪಡಿಸುವ೦ತಾಗಬೇಕು.

ಪ್ರತಿಯೊಂದು ಘಟನೆ ನದೆಡಾಗ ಎಲ್ಲಾ ರಾಜಕಾರಣಿಗಳು ಮತ್ತವರ ರಾಜಕೀಯ ಪಕ್ಷಗಳು ಹೇಳುವುದೆಂದರೆ 'ಈ ದಾಳಿಯು ಹೇಯ ಕೃತ್ಯ, ಈ ದಾಳಿಯನ್ನು ಖಂಡಿಸುತ್ತೇವೆ, ಸ್ಪೋಟದಲ್ಲಿ ಉಗ್ರಗಾಮಿ ಕೈವಾಡವಿದೆ, ..... ಮುಂದೆ ಆಗದಂತೆ ಎಚ್ಚರ ವಹಿಸುತ್ತೇವೆ.... ಎಂಬೆಲ್ಲಾ ಹೇಳುತ್ತಾರೆ. ಆದರೆ ಅಗುವುದೇನು? ಮತ್ತದೇ ದಾಳಿ, ಮತ್ತದೇ ಅಮಾಯಕರ ಹತ್ಯೆ, ನೂರಾರು ದಾಳಿಗಳಿ೦ದ ಪಾಠ ಕಲಿಯದ ರಾಜಕಾರಣಿಗಳು ಮತ್ತವರ ಸರ್ಕಾರಗಳು, ಕಠಿಣ ಉಗ್ರ ನಿಗ್ರಹ ಕಾನೂನು ನಿರ್ಮಿಸಲು ಹೆದರುವ ರಾಜಕೀಯ ಪಕ್ಷಗಳು, ಓಟಿಗಾಗಿ ಧರ್ಮ, ಜಾತಿ ಮತ ಓಲೈಸುವ ರಾಜಕೀಯ ಪಕ್ಷಗಳು, ಪ್ರತಿ ದಾಳಿಯಲ್ಲಿ ಮಡಿಯುವ ಅಮಾಯಕರು ಹಾಗೂ ಪೋಲಿಸ್ ಅಧಿಕಾರಿಗಳ ಬಗ್ಗೆ ನ್ಯಾಯಾಂಗ ತನಿಖೆ ವರ್ಷಾನು ಗಟ್ಟಲೆ ನಡೆಸುವ ಪ್ರಭಾವಿ ರಾಜಕಾರಣಿಗಳು.......

ಇದಕ್ಕೆ ಕೊನೆ ಎಲ್ಲಿ???

ಚಕ್ರವರ್ತಿ