ಪ್ರಜಾವಾಣಿಯ ಅಂತರಂಗ-ಬಹಿರಂಗಗಳೆರಡೂ ಸ್ಪಷ್ಟವಾಗಿ ಹೊರಬಿದ್ದಿದೆ. ಶ್ರೀರಾಮಸೇನೆಯ ಗ್ಯಾಂಗು ಬಂಧನವಾದ ಸುದ್ದಿ ಪ್ರಜಾವಾಣಿಯಲ್ಲಿ ವರದಿಯಾಗಿದ್ದೇ ಬೇರೆ ರೀತಿ, ಕನ್ನಡಪ್ರಭದಲ್ಲಿ ವರದಿಯಾಗಿದ್ದೇ ಬೇರೆ ರೀತಿ.
ಪ್ರಜಾವಾಣಿಯಲ್ಲಿ ಸೋಮವಾರ (ಜನವರಿ೧೨) ಮುಖಪುಟದ ಮುಖ್ಯಸುದ್ದಿ ದುಷ್ಕೃತ್ಯಕ್ಕೆ ಭಾರಿ ಸಂಚು, ಬಯಲು: ಬಾಂಬ್ ವಶ ವರದಿ ಅನೇಕ ವಿಷಯಗಳನ್ನು ಬಯಲಿಗಿಟ್ಟಿದ್ದರೂ ಅನೇಕ ವಿಷಯಗಳನ್ನು ಸಹ ಮರೆ ಮಾಚಿದೆ. ಹಣಕ್ಕಾಗಿ ಪುಂಡಪೋಕರಿಗಳ ಒಂದು ಗುಂಪು ಭೂಗತ ಲೋಕದ ನಾಯಕತ್ವ ವಹಿಸಿಕೊಳ್ಳಲು ಯೋಜಿಸಿತ್ತು ಎನ್ನುವುದು ಪ್ರಜಾವಾಣಿ ವರದಿಯ ಒಟ್ಟು ಸಾರ.
ಈ ಗುಂಪು ಪ್ರಮೋದ್ ಮುತಾಲಿಕ್ನ ಶ್ರೀರಾಮಸೇನೆಯ ಕಟ್ಟಾಳುಗಳಾಗಿದ್ದರು. ಮಾಲೇಗಾಂವ್ ಸ್ಪೋಟಕ್ಕೂ ಇವರಿಗೂ ಸಂಬಂಧವಿದೆ. ಹಣವನ್ನು ಅದಕ್ಕಾಗಿಯೇ ಒಟ್ಟುಗೂಡಿಸುವ ಕೆಲಸ ಮಾಡಿದ್ದರು ಎನ್ನುವುದು ಈ ವರದಿಯಲ್ಲಿ ನಾಪತ್ತೆಯಾಗಿದೆ. ಈ ಸಂಘಟನೆಗೆ ಒಂದು ಐಡಿಯಾಲಾಜಿ ಇತ್ತು. ಅದೇ ಈ ಕ್ರಿಮಿನಲಾಜಿಯನ್ನು ರೂಪಿಸಿತ್ತು ಎನ್ನುವುದು ಕಾಣೆಯಾದ ಬಹು ಮುಖ್ಯ ಅಂಶ.
ಕನ್ನಡಪ್ರಭ ಹಾಗು ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಈ ಪ್ರಕರಣ ಕುರಿತು ಪ್ರಬುದ್ಧ ಸಂಪಾದಕೀಯಗಳು ಪ್ರಕಟಗೊಂಡವು. ಆದರೆ ಪ್ರಜಾವಾಣಿಯಲ್ಲಿ ಅದೂ ನಾಪತ್ತೆ. ದರೋಡೆಕೋರರೇಕೆ ಕೋರ್ಟ್ನಲ್ಲಿ ಬಾಂಬ್ ಹಾಕುತ್ತಾರೆ, ಸೇತುವೆ ಸ್ಫೋಟಿಸಲು ಯತ್ನಿಸುತ್ತಾರೆ ಎಂಬ ಪ್ರಶ್ನೆಗಳಿಗೆ ಪ್ರಜಾವಾಣಿಯಲ್ಲಿ ಉತ್ತರವೇ ಇಲ್ಲ! ಈ ವಿಷಯದಲ್ಲಿ ಕನ್ನಡಪ್ರಭ ವರದಿ ಸ್ಪಷ್ಟ ಹಾಗು ನಿಖರ. ವಿ.ಕ ವರದಿಯಲ್ಲಿ ಇದು ಮಿಸ್ಸಿಂಗ್ ಆಗಿದ್ದರೂ ಸಂಪಾದಕೀಯ ತಪ್ಪನ್ನು ಸರಿದೂಗಿಸಿದೆ. ವಿ.ಕ ಹಾಗು ಕನ್ನಡಪ್ರಭಗಳಿಗೆ ಗೊತ್ತಾಗಿದ್ದು ಪ್ರಜಾವಾಣಿಗೇಕೆ ಗೊತ್ತಾಗಲಿಲ್ಲ?
ಪ್ರಜಾವಾಣಿ ಹೀಗೇಕೆ ಮಾಡಿತು ಎಂಬ ಪ್ರಶ್ನೆ ಇಟ್ಟುಕೊಂಡು ಉತ್ತರ ಹುಡುಕುತ್ತ ಹೋದರೆ ಹುಬ್ಬಳ್ಳಿ ಆವೃತ್ತಿಯ ಸಿಬ್ದಂದಿಯ ಕೋಮುವಾದಿ ಮುಖಗಳು ಅನಾವರಣಗೊಳ್ಳುತ್ತವೆ. ಹುಬ್ಬಳ್ಳಿ ಆವೃತ್ತಿಯಲ್ಲಿ ಚೆಡ್ಡಿ ತೊಟ್ಟಕೊಂಡ ಪರಿವಾರವೇ ಬೇರು ಬಿಟ್ಟಿದೆ. ವಿಧಾನಸಭೆ ಚುನಾವಣೆ ವೇಳೆಯಲ್ಲಿ ಹುಬ್ಬಳ್ಳಿ ನ್ಯಾಯಾಲಯದಲ್ಲಿ ಬಾಂಬ್ ಸ್ಪೋಟದ ಘಟನೆಯ ಬಗ್ಗೆ ಮುಖ್ಯ ವರದಿಗಾರ ಉದಯಶಂಕರ್ ಭಟ್ (ಈತ ಗೋಪಾಲ ಹೆಗಡೆಯ ಮೆಚ್ಚಿನ ಶಿಷ್ಯ) ಲಷ್ಕರ್-ಇ-ತೊಯ್ಬಾ ಸಂಘಟನೆಯಿಂದ ಹಿಡಿದು ಸಿಮಿವರೆಗೆ ಸಂಪರ್ಕ ಜಾಲದ ಬಗ್ಗೆ ಮೂಲಗಳು ತಿಳಿಸಿವೆ ಎಂದು ಜಾಲಾಡಿಯೇ ಜಾಲಾಡಿ ಸರಣಿ ವರದಿಗಳನ್ನು ಬರೆದರು. ಸೇತುವೆ ಕೆಳಗೆ ಬಾಂಬ್ ಪತ್ತೆಯಾದಾಗಲಂತೂ ಇಡೀ ಹುಬ್ಬಳ್ಳಿ ನಗರವೇ ಸಿಮಿ ಕಾರ್ಯಕ್ಷೇತ್ರವಾಗಿದೆ ಎಂಬಂತೆ ವಿಶೇಷಣಗಳ ಮೇಲೆ ವಿಶೇಷಣಗಳನ್ನು ಸೇರಿಸಿ ಬಲ್ಲಮೂಲಗಳು ತಿಳಿಸಿವೆ ಎಂದೇ ಅಧಿಕೃತತೆಯ ಜವಾಬ್ದಾರಿಯಿಂದ ಬಚಾವಾದರು. ಈಗ ಅವರು ಈ ಸುದ್ದಿಗೆ ಏನು ಹೇಳುತ್ತಾರೆ?
ಪಾಪ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಪ್ರಜಾವಾಣಿಯನ್ನು ಹುಬ್ಬಳ್ಳಿ ಪರಿವಾರ ಎಷ್ಟು ತಿಣುಕಾಡಿತು ಎಂದರೆ ಆರೆಸೆಸ್ಸ್ ಶಿಸ್ತು: ಎದುರಾಳಿ ಸುಸ್ತು! ಎಂದು ಬಿಜೆಪಿ ಅಭ್ಯರ್ಥಿಯ ಪರ ಸಂಘ-ಪರಿವಾರದ ಪುಂಗಿಗಳೂ ಬರೆಯಲಾರರು ಅಂತಹ ಭಾಷೆಯಲ್ಲಿ ಪ್ರಚಾರವನ್ನೇ ಉದಯಶಂಕರ ಭಟ್ ತನ್ನ ಬೈಲೈನ್ನಲ್ಲಿಯೇ ಬರೆದರು. ಬಳ್ಳಾರಿ ಜಿಲ್ಲೆಗೆ ಎರಡು ಪುಟ ಮೀಸಲು ಇರುತ್ತದೆ. ಇಲ್ಲೂ ಇಂತಹ ಸುದ್ದಿಯನ್ನು ಹೇರಿದರು. ಜಿಲ್ಲೆಯ ಸುದ್ದಿಗಾರರು ಎಲ್ಲಾ ಪಕ್ಷದ ಅಭ್ಯರ್ಥಿಗಳ ಚುನಾವಣೆ ಪ್ರಚಾರವನ್ನು ಕಳಿಸಿಕೊಟ್ಟರೆ ಬಿಜೆಪಿಯ ಅಭ್ಯರ್ಥಿಗಳ ವರದಿಗಳನ್ನು, ಫೋಟೋಗಳನ್ನು ಮಾತ್ರ ಪ್ರಕಟಿಸಿದ್ದರ ಪರಿಣಾಮವಾಗಿ ಬಿಜೆಪಿ ಏಜೆಂಟ್ರಾಗಿದ್ದೀರಿ ಎಂದು ಕಾಂಗ್ರೆಸ್ಸಿನವರು ಸುದ್ದಿಗಾರರ ಮೇಲೆ ಹರಿಹಾಯುವಂತಾಯಿತು.
ಸುದ್ದಿಮಾತು ಬ್ಲಾಗಿನಲ್ಲಿ ಪ್ರಜಾವಾಣಿಗೆ ೬೦ವರ್ಷ ತುಂಬಿದಾಗ ಪ್ರಜಾವಾಣಿಗೆ ವಯಸ್ಸಾಯಿತು ಎಂದು ಬರೆಯಿತು. ಆಗ ಹುಬ್ಬಳ್ಳಿ ಆವೃತ್ತಿಯಲ್ಲಿ ಪ್ರಜಾವಾಣಿಯ ಬಗ್ಗೆ ಗೋಪಾಲ ಹೆಗಡೆ ಬೇರೊಂದು ಬಗೆಯಲ್ಲಿ ಬರೆದು ಅದನ್ನು ಎಲ್ಲಾ ಜಿಲ್ಲಾ ಆವೃತ್ತಿಯಲ್ಲಿ ಬರುವಂತೆ ನೋಡಿಕೊಂಡರು. ಪ್ರಜಾವಾಣಿಯ ಬಗ್ಗೆ ಬೆಂಗಳೂರು ಸಂಪಾದಕರು ಬರೆದಿದ್ದನ್ನೂ ಓದಬೇಕು, ಹುಬ್ಬಳ್ಳಿ ಸಂಪಾದಕರು ಬರೆದಿದ್ದನ್ನೂ ಓದಬೇಕು, ಇದು ನಮ್ಮ ಕರ್ಮ. ಅದು ಒಂದೇ ದಿನ. ಎರಡೆರಡು ಒಂದಕ್ಕೊಂದು ಸಂಬಂಧವಿಲ್ಲದಂತಹ ಬರಹಗಳು. ಯಾವದನ್ನು ಪತ್ರಿಕಾ ಧೋರಣೆ ಎಂದು ನಂಬಬೇಕು?
ಈ ಹಿಂದೆ, ಬೆಳಗಾವಿ ಎಸ್ಪಿಯಾಗಿದ್ದ ಹೇಮಂತ್ ನಿಂಬಾಳಕರ್ ಅವರು ಪತ್ರಿಕಾ ಹೇಳಿಕೆಯಲ್ಲಿ ಶ್ರೀರಾಮಸೇನೆಯು ಗ್ಯಾಂಗ್ ರಚಿಸಿಕೊಂಡು ಭೂಗತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಮೂರು, ನಾಲ್ಕು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂಬ ಆಘಾತಕಾರಿ ಸುದ್ದಿಯಲ್ಲಿ ಬಯಲುಮಾಡಿದ್ದರು. ಆ ಹೊತ್ತಿಗಾಗಲೇ ಶ್ರೀರಾಮಸೇನೆಯು ಹಿಂದೂಗಳ ಹೆಸರಿನಲ್ಲಿ ಭೂಗತ ಮಿಲಿಟೆನ್ಸಿ ನಡೆಸುತ್ತಿರುವುದು ಸ್ಪಷ್ಟವಾಗಿತ್ತು.
ಸಂಯುಕ್ತ ಕರ್ನಾಟಕ ತನ್ನ ಜ.೧೨ರ ಸಂಚಿಕೆಯಲ್ಲಿ ಬಾಂಗ್ಲಾದೇಶಿಗರನ್ನು ಹೊರ ಹಾಕಲು ತಿಂಗಳ ಗಡುವು ಶೀರ್ಷಿಕೆಯಲ್ಲಿ ವರದಿಯೊಂದು ಪ್ರಕಟಿಸಿದೆ. ಶ್ರೀರಾಮಸೇನೆಯು ತನ್ನ ಅಂಗಸಂಸ್ಥೆಯಾದ ರಾಷ್ಟ್ರ ರಕ್ಷಾಸೇನೆ ಹೆಸರಿನಲ್ಲಿ ರಚಿಸಿರುವ ಕಪ್ಪು ಸಮವಸ್ತ್ರಧಾರಿ ಸೇನಾಪಡೆಯ ಚಿತ್ರವೂ ಈ ವರದಿಯೊಂದಿಗೆ ಪ್ರಕಟವಾಗಿದೆ. ಈ ಸೈನ್ಯಕ್ಕೆ ತರಬೇತಿಯನ್ನು ನಿವೃತ್ತ ಸೇನಾಧಿಕಾರಿಗಳು ನೀಡಿದ ಆತಂಕಕಾರಿ ವಿದ್ಯಮಾನವು ಈ ವರದಿಯಲ್ಲಿ ಬಯಲಾಗಿದೆ. ಇದು ಯಾರಿಗೂ ಆತಂಕಕಾರಿ ಸುದ್ದಿಯಾಗಿ ಕಂಡಿಯೇ ಇಲ್ಲ ಎನ್ನುವುದಕ್ಕೆ ವರದಿಗಾರಿಕೆಯೂ ಅತ್ಯಂತ ನಯನಾಜೂಕಿನಿಂದ ಕೂಡಿ ಸಮರ್ಥಿಸುವಂತಿದೆ.
ಸಂಯುಕ್ತ ಕರ್ನಾಟಕದ ಕಥೆ ಹಾಗಿರಲಿ, ಪ್ರಜಾವಾಣಿಗೆ ಇಂಥ ದುರ್ಗತಿ ಏಕೆ ಬಂತು?
Wednesday, January 14, 2009
Subscribe to:
Post Comments (Atom)
1 comment:
ಒಂದು ಕಾಲದಲ್ಲಿ ಪ್ರಜಾವಾಣಿ ಓದಲು ಆರಂಭಿಸಿದವರು ಈಗಲೂ ಅದೇ ಪತ್ರಿಕೆಯ ಚಂದಾದಾರರಾಗಿಯೇ ಇದ್ದಾರೆ. ಒಂದು ಇತಿಹಾಸ ಆ ಪತ್ರಿಕೆಗಿತ್ತು. ಪ್ರಸ್ತುತ ಕನ್ನಡ ಪ್ರಭ ಬಿಟ್ಟು ಬೇರೆಲ್ಲ ಪತ್ರಿಕೆಗಳು ತಮ್ಮದೇ ವಯಕ್ತಿಕ ಬೇಳೆ ಬೇಯಿಸಿಕೊಳ್ಳುತ್ತಿವೆ. ಹಾಗಂದ ಮಾತ್ರಕ್ಕೆ kp ಒಳ್ಳೆಯದೆಂದಲ್ಲ. ಸಕಾರದ ಪ್ರಮುಖ ನಿಧಾರಗಳು ರಂಗನಾಥನ ಕೃಪೆಯಿಂದಲೇ ನಡೆಯುತ್ತಿವೆ ಎಂಬ ಮಾತುಗಳೂ ಇವೆ. ಆದರೆ ವರದಿ ವಿಷಯದಲ್ಲಿ (ಆಚಾಯಾ ಪ್ರಕರಣ ಬಿಟ್ಟು)KP ನಿಜಕ್ಕೂ ನೈಜತೆ ಉಳಿಸಿಕೊಂಡಿದೆ.
ಈ ಪ್ರಜಾವಾಣಿ ಯ ಕತೆಯಂತು ತೀರಾ ಚಿಂತಾಜನಕವೆನಿಸುತ್ತಿದೆ. ಹುಬ್ಬಳ್ಳಿ ಆವೃತ್ತಿಯ ಬೆಂಬಲದಿಂದಾಗಿ ಬೆಂಗಳೂರಿನ ವಾಣಿಜ್ಯ ಸುದ್ದಿ ವಿಭಾಗಕ್ಕೆ ಕಸ್ತೂರಿಯವರು ತೆಗೆದ ಮಹೇಶ್ಚೆಂದ್ರ ಎಂಬ ಮೈಸೂರು ಪ್ರಜಾನುಡಿಯಲ್ಲಿ proof reader ಹಾಗಿದ್ದವನು ಬಂದು ಜಂಡಾ ಹೊಡೆದಿದ್ದಾನೆ. ಈ ಪತ್ರಿಕೇನಾ ಇನ್ನು ಆ ಭಗವಂತನೇ ಕಾಪಾಡಬೇಕೇನೋ...?
Post a Comment