Sunday, January 25, 2009

ಅವರ ಸಾವು ಸಾವೇ ಅಲ್ಲವೇ?

ಈ ದೇಶದಲ್ಲಿ ಸಾಮಾನ್ಯ ಜನರ ಸಾವಿಗೆ ಯಾವುದೇ ಬೆಲೆ ಇಲ್ಲವೇ? ಅಥವಾ ಅವರ ಸಾವು ಸಾವೇ ಅಲ್ಲವೇ? ೩೦ಕ್ಕೂ ಹೆಚ್ಚು ಜನ ಕಾರ್ಮಿಕರು ಜಲಸಮಾಧಿಯಾಗಿದ್ದರೂ ಸೇತುವೆ ಕುಸಿತವನ್ನು ’ವಂಡರ್’ ಎಂದೇ ಕರೆಯುವ ಅಧಿಕಾರಿವರ್ಗ, ಸಚಿವರುಗಳು ’ದೋಣಿ ವಿಹಾರ’ ನಡೆಸುವುದನ್ನು ಪರಿಶೀಲನೆ, ರಕ್ಷಣಾ ಕಾರ್ಯ ಎಂದು ವರ್ಣಿಸುವ ನಮ್ಮ ಮಾಧ್ಯಮಗಳು ಅಧಿಕಾರಿಗಳು ನೀಡುವ ಅಂಕೆ-ಸಂಖ್ಯೆಯನ್ನೇ ಉದ್ಧರಿಸಿ, ೭ಜನ ಕಾಣೆಯಾಗಿದ್ದಾರೆ ಎಂದೇ ಬರೆದು ಕೃತಾರ್ಥರಾಗುತ್ತಿದ್ದಾರಲ್ಲ. ಮನಸ್ಸು ವಿಹ್ವಲಗೊಳ್ಳುತ್ತಿದೆ, ಪಿಚ್ಚೆನಿಸುತ್ತಿದೆ. ನಮ್ಮ ಮಾಧ್ಯಮಗಳ ನಡುವಳಿಕೆಯ ಬಗ್ಗೆ ಅತ್ಯಂತ ಖೇದವಾಗುತ್ತಿದೆ. ವಿಷಯ ಇದು: ಹಂಪಿ ತಳವಾರ ಘಟ್ಟ-ಆನೆಗೊಂದಿ ಸೇತುವೆಯ ಉಳಿದ ಕಾಮಗಾರಿಯು ಗುರುವಾರ ಭರದಿಂದ ನಡೆಯುತ್ತಿರುವಾಗಲೇ ಕುಸಿಯಿತು. ಕುಸಿತದಲ್ಲಿ ನೋಡು ನೋಡುತ್ತಿದ್ದಂತೆ ಎಲ್ಲವನ್ನು ತಾಯಿ ತುಂಗಭದ್ರೆ ಅಪೋಶನ ತೆಗೆದುಕೊಂಡಳು. ಇರುವೆಯಂತೆ ಜನರು ನದಿಯೊಳಗೆ ಬಿದ್ದು ಸೇತುವೆಯಡಿ ಸಿಕ್ಕು ಜಲಸಮಾಧಿಗೊಂಡರು. ಪ್ರತ್ಯಕ್ಷದರ್ಶಿಗಳು, ಬದುಕಿ ಉಳಿದ ಗಾಯಾಳುಗಳು ಇದನ್ನು ಕಣ್ಣಿಗೆ ಕಟ್ಟುವಂತೆ ಹೇಳುವದನ್ನು ಕೇಳಿಕೊಳ್ಳದೇ ಅಧಿಕಾರಿಗಳು ಹೇಳಿದ್ದನ್ನು ಕೇಳಿ ಬರೆದುಕೊಳ್ಳುವ ಅದನ್ನೇ ’ಅಥೆಂಟಿಸಿಟಿ’ ಎನ್ನುವ ಪತ್ರಕರ್ತರು ಕನಿಷ್ಠ ಸತ್ಯಕ್ಕೆ ಹತ್ತಿರವಾದರೂ ಬರಬಾರದೇ? ಜನರ ಬಗ್ಗೆಯೂ ಬರೆದಿದ್ದಾರೆ ಪಾಪ, ಮುಗಿಲು ಮುಟ್ಟಿದ ರೋಧನ, ಹೃದಯ ವಿದ್ರಾವಕ ಇತ್ಯಾದಿ॒ಸೇತುವೆ ಯಾಕೇ ಕುಸಿಯಿತು? ತರಾತುರಿಯಲ್ಲಿ ಕಾಮಗಾರಿ ಯಾಕೇ ಕೈಗೊಂಡರು? ಮುಖ್ಯ ಕೆಲಸಗಾರರಾಗಿದ್ದ ಆಂಧ್ರ, ಬಿಹಾರದ ಕಾರ್ಮಿಕರು ಎಲ್ಲಿಗೆ ಹೋದರು? ಸೇತುವೆಯ ಒಂದು ಬದಿಗೆ ಕಬ್ಬಿಣ, ಮರಳು, ಸಿಮೆಂಟ್ ದಾಸ್ತಾನು ಸೇರಿದಂತೆ ಭಾರಿ ಯಂತ್ರಗಳು, ಒಂದು ಲಾರಿ, ಟಾಟಾಸುಮೋ ವಾಹನಗಳು ಸೇರಿದಂತೆ ೮೦ಕ್ಕೂ ಹೆಚ್ಚು ಜನ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ೮೦ಟನ್‌ಗಿಂತಲೂ ಅಧಿಕ ಭಾರ ಒಂದೆಡೆ ಶೇಖರಣೆಯಾಗಿದ್ದು ಅವೈಜ್ಞಾನಿಕವಾಗಿರಲಿಲ್ಲವೇ? ಎಲ್ಲವೋ ಮುಳುಗಿದಾಗ ಜನರು ಬದುಕಿ ಉಳಿಯುತ್ತಾರೆಯೇ ಕನಿಷ್ಠ ಇಷ್ಟು ಪ್ರಶ್ನೆಯನ್ನಾದರೂ ಹಾಕಿಕೊಂಡಿದ್ದರೆ ನಮ್ಮ ಮಾಧ್ಯಮಗಳು ಹೊಸ ಬಗೆಯಲ್ಲಿ ವರದಿ ಮಾಡಲು ಸಾಧ್ಯವಾಗುತ್ತಿತ್ತು. ಅಧಿಕೃತತೆಯನ್ನು ಬೆನ್ನತ್ತಿರುವ ಪತ್ರಕರ್ತರು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಮುತ್ತಿ ಪ್ರಶ್ನೆ ಕೇಳುವದನ್ನು ಅವರು ಹೇಳಿದ್ದೇನೆ ಬರೆಯುವದನ್ನು ರೂಢಿ ಮಾಡಿಕೊಂಡಿರುವಾಗ ಇಂತಹವರಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಜೈ ಎನ್ನೋಣವೇ?

1 comment:

Anonymous said...

ಸ್ವಾಮಿ, ಪ್ರತೀ ಬಾರಿ ಪೂರ್ವಾಗ್ರಹ ಪೀಡಿತರಾಗಿ ಲೇಖನ ಬರೆಯುವಾಗ ಒಂದಿಷ್ಟು ಪತ್ರಿಕೆ, ವಾಹಿನಿ ವೀಕ್ಷಿಸುವ ಅಭ್ಯಾಸ ಮಾಡಿಕೊಳ್ಳಿ. ಕನ್ನಡದಲ್ಲಿ ಇತ್ತೀಚಿಗಷ್ಟೇ ಅಂಬೆಗಾಲಿಡುತ್ತಿರುವ ಸುವರ್ಣ ಸುದ್ದಿ ವಾಹಿನಿ ಈ ಕುರಿತು ವಿಶೇಷ ವರದಿ ಪ್ರಕಟಿಸಿ, ಎಲ್ಲರ ಬಣ್ಣ ಬಯಲು ಮಾಡಿತ್ತು. ಅದ್ಯಾವುದನ್ನು ಗಮನಿಸದೆ, ನಿಮ್ಮ ಅಭಿಪ್ರಾಯವನ್ನು ಹರಿಯಬಿಟ್ಟು ಇದ್ದವರಲ್ಲಿಯೂ ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ಅಥðವಿಲ್ಲ.