Thursday, September 25, 2008

ಸೂತಕದ ಮನೆಯಲ್ಲಿ ನಗೆಯ ಸ್ವಾಗತ ಬಯಸುವುದು ತರವೆ?

ಪತ್ರಕರ್ತರ ಮೇಲೆ ಒಂದು ಆರೋಪ ಇದೆ. ಅವರು ಅನೇಕ ಸಾರಿ ತಮಗನಿಸಿದ್ದನ್ನ ಸಾರ್ವತ್ರಿಕಗೊಳಿಸಿ ಬರೆಯುತ್ತಾರೆ. ಮತ್ತು ತಾವು ಬರೆದದ್ದೇ ಸತ್ಯ ಎಂಬ ದಾರ್ಷ್ಟ್ಯದಿಂದಲೇ ಅವರ ಬರಹ ಕೂಡಿರುತ್ತದೆ. ಈ ಆರೋಪಕ್ಕೆ ತಕ್ಕ ಉದಾಹರಣೆ ದಿನಾಂಕ ಸೆ.೨೪ ರಂದು ಉದಯವಾಣಿ ಮುಖಪುಟದಲ್ಲಿ ಪ್ರಕಟವಾದ ಒಂದು ವರದಿ.

ಹಜವಾಗಿ ಬಿಷಪ್ ಡಾ. ಬರ್ನಾರ್ಡ್ ಮೊರಸ್ ಬೇಸತ್ತಿದ್ದರು. ಚರ್ಚ್ ಮೇಲಿನ ದಾಳಿಗಳು ಎಂಟು ದಿನಗಳಾದರೂ ನಿಲ್ಲಲೇ ಇಲ್ಲ. ಮಂಗಳೂರಿನ ಚರ್ಚ್‌ಗಳಲ್ಲಿ ಪ್ರಾರ್ಥನಾ ನಿರತ ನನ್‌ಗಳು ದಾಳಿಗೆ ತುತ್ತಾಗಿದ್ದರು. ಅವರ ದೈವ ಏಸು ಕೈ, ಕಾಲು ಮುರಿದುಕೊಂಡು ಅಂಗವಿಕಲನಾಗಿದ್ದ. ಒಂದರ ಹಿಂದೆ ಒಂದರಂತೆ ೨೮ ಚರ್ಚ್‌ಗಳ ಮೇಲೆ ದಾಳಿಯಾಗಿತ್ತು. ಅವರ ಬೇಸರಕ್ಕೆ ಬಲವಾದ ಮತ್ತೊಂದು ಕಾರಣ, ದಾಳಿ ಹೊಣೆ ಹೊತ್ತ ಬಜರಂಗ ದಳ ಆಡಳಿತದಲ್ಲಿರುವ ಬಿಜೆಪಿಗೆ ಆಪ್ತಮಿತ್ರ. ಸರಕಾರವೇ ಚರ್ಚ್‌ಗಳ ದಾಳಿಗೆ ನಿಂತುಬಿಟ್ಟರೆ, ನ್ಯಾಯ ಕೇಳುವುದು ಎಲ್ಲಿ ಎಂಬ ಆತಂಕ ಅವರಲ್ಲಿ ಮನೆಮಾಡಿತ್ತು. ಅದನ್ನು ಹೊರಹಾಕಲು ಸರಿಯಾದ ಸಮಯ ಸಿಕ್ಕಿರಲಿಲ್ಲ. ಕಳೆದ ಸೋಮವಾರ (ಸೆ.೨೨) ಮುಖ್ಯಮಂತ್ರಿ ಸಾಂತ್ವನ ಹೇಳಲು ಬಂದಾಗ ದು:ಖ, ಬೇಸರ ಕಟ್ಟೆ ಒಡೆಯಿತು. . “We are hurt. We are hurt. Jesus is god for us. What would you do if your garbha gudis are attacked” ಎಂದು ನೋವನ್ನು ತೋಡಿಕೊಂಡರು. ನೆರೆದಿದ್ದ ಛಾಯಾಗ್ರಾಹಕರಿಗೆ, ವಿದ್ಯುನ್ಮಾನ ಮಾಧ್ಯಮದವರಿಗೆ ಅದು ಅಪೂರ್ವ ಅವಕಾಶ. ಮಾರನೇ ದಿನ ಎಲ್ಲೆಡೆ ಪ್ರಚಾರವಾಯಿತು.ಇಷ್ಟನ್ನೇ ಇಟ್ಟುಕೊಂಡು ಉದಯವಾಣಿ ವರದಿಗಾರರೊಬ್ಬರು ಮುಖಪುಟ ಲೇಖನ ಸಿದ್ದಪಡಿಸಿದ್ದಾರೆ. ಅವರ ಐದು ಕಾಲಂ ಸುದ್ದಿಯ ಒಂದಂಶ ಎಂದರೆ - ನಾಡಿನ ಮುಖ್ಯಮಂತ್ರಿ ಜ್ವರದಿಂದ ಬಳಲುತ್ತಿದ್ದರೂ ತಮ್ಮನ್ನು ಭೇಟಿ ಮಾಡಲು ಬಂದಾಗ ಬಿಷಪ್ ಹೀಗೆ ನಡೆದುಕೊಳ್ಳಬಾರದಿತ್ತು. ಹಾಗೂ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಏರ್ಪಟ್ಟಿದ್ದು, ಬಿಷಪ್ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ರವಾಗಿದೆ.ಇವರು ಲೇಖನದಲ್ಲಿ ಪದೇ ಪದೇ ಉಲ್ಲೇಖಿಸುವ ಸಾರ್ವಜನಿಕ ವಲಯ ಯಾವುದು? ವಿಧಾನ ಸೌಧದ ಮೂರನೇ ಮಹಡಿಯೇ? ಬಿಜೆಪಿ ವಲಯವೇ? ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣ ಅಂಗಳವೇ ಅಥವಾ ಉದಯವಾಣಿ ಕಚೇರಿ ಪ್ರಾಂಗಣವೇ? ವರದಿಗಾರರು ನಾಲ್ಕು ಮಂದಿ ಓದುಗರನ್ನಾದರೂ ಮಾತನಾಡಿಸಿ ಬರೆಯುವ ಪ್ರಯತ್ನ ಮಾಡಬಹುದಿತ್ತು. ಅದಾವುದೂ ಇಲ್ಲದೆ ತಮಗನಿಸಿದ್ದನ್ನ ಸಾರ್ವತ್ರಿಕ ಮಾಡಿ ಬರೆದು ಬಿಡಬಹುದೆ?ಇದೇ ಧಾಟಿಯಲ್ಲಿ ವಿಜಯ ಕರ್ನಾಟಕ ಓದುಗರ ಅಂಕಣದಲ್ಲಿ ಒಂದು ಪತ್ರ ಪ್ರಕಟವಾಗಿದೆ (ಸೆ.೨೪) ಅದರಂತೆ ಬಿಷಪ್ ವರ್ತನೆ ಮುಖ್ಯಮಂತ್ರಿಗೆ ಮಾಡಿದ ಅವಮಾನವಂತೆ. ಮುಖ್ಯಮಂತ್ರಿಗೆ ಅವಮಾನ ಮಾಡಿದರೆ ಅದು ನಾಡಿಗೇ ಅವಮಾನ ಮಾಡಿದಂತೆ ಎಂದು ತಮ್ಮಯ್ಯ ಎಂಬ ಓದುಗ (?) ಅಭಿಪ್ರಾಯಪಟ್ಟಿದ್ದಾರೆ.ಒಂದು ಕ್ಷಣ ಹಾವೇರಿಯಲ್ಲಿ ಗೋಲಿಬಾರ್‌ನಿಂದ ಸತ್ತ ರೈತನನ್ನು ಜ್ಙಾಪಿಸಿಕೊಳ್ಳಿ. ದು:ಖತಪ್ತ ಕುಟುಂಬಕ್ಕೆ ಮುಖ್ಯಮಂತ್ರಿಯೂ ಭೇಟಿ ನೀಡಿದ್ದರು. ರೈತನ ತಾಯಿ ದು:ಖಿಸುತ್ತ ನನ್ನ ಮಗನ್ನ ನಿಮ್ಮ ಪೊಲೀಸರು ಕೊಂದರು. ನೀವೆಷ್ಟೇ ದುಡ್ಡ ಕೊಟ್ಟರೂ ಮಗ ಬರ್ತಾನೇನಪ್ಪಾ.. ಎಂದು ಪ್ರಶ್ನೆ ಮಾಡಿದರು. ನಾಡಿನ ಮುಖ್ಯಮಂತ್ರಿ ಮನೆಗೆ ಭೇಟಿ ನೀಡಿದಾಗ ಆ ಮುದುಕಿ ಅಳುತ್ತಾ ಸ್ವಾಗತ ನೀಡಬಾರದಿತ್ತು. ಅದು ನಾಡಿನ ದೊರೆಗೆ ಮಾಡಿದ ಅವಮಾನ. ಹಾಗಾಗಿ ಇಡೀ ನಾಡಿಗೇ ಮಾಡಿದ ಅವಮಾನ ಎಂದು ಯಾರಾದರೂ ಮಾತನಾಡುವುದು ತರವೇ? ಅಂತೆಯೇ ಬಿಷಪ್ ಮನೆ. ಅದೂ ಸೂತಕದ ಮನೆ. ಇಲ್ಲಿ ದು:ಖಕ್ಕೆ ನೇರವಾಗಿ ಕಾರಣಾರದವರು ಬಿಜೆಪಿ ಮಿಲಿಟೆಂಟ್ ವಿಂಗ್ - ಬಜರಂಗ ದಳ. ತನ್ನ ಪಕ್ಷದ ಹುಡುಗರಿಂದ ದಾಳಿ ಮಾಡಿಸಿ, ಇಡೀ ಸಮುದಾಯವನ್ನು ಆತಂಕಕ್ಕೆ ನೂಕಿದ ಮುಖ್ಯಮಂತ್ರಿಗೆ ಸೂತಕದ ಮನೆಯಲ್ಲಿ ನಗೆಯ ಸ್ವಾಗತ ಬಯಸುವುದು ತರವೇ?
(ಚಿತ್ರಕೃಪೆ: ಕನ್ನಡಪ್ರಭ)

1 comment:

ದಿನೇಶ್ ಕುಮಾರ್ ಎಸ್.ಸಿ. said...

ಸೂತಕದ ಮನೆಯಲ್ಲಿ ನಗೆಯ ಸ್ವಾಗತ ಬಯಸುವುದು ತರವೆ? ಎಂಬ ಶೀರ್ಷಿಕೆಯೇ ಎಲ್ಲವನ್ನೂ ಹೇಳುತ್ತಿದೆ.
ಬಿಷಪ್ ನಿವಾಸದ ಎದುರಿನ ಘಟನೆ ಇಡೀ ಕ್ರಿಶ್ಚಿಯನ್ ಸಮುದಾಯ ಕಳೆದ ಒಂದು ತಿಂಗಳಿನಲ್ಲಿ ಎದುರಿಸಿದ ನೋವು-ಸಂಕಟಗಳ ಅಭಿವ್ಯಕ್ತಿ. ಕ್ರಿಶ್ಚಿಯನ್ನರ ಅಸಹಾಯಕತೆಗೆ ಹಿಡಿದ ಕನ್ನಡಿ.
ಈ ನೋವಿನ ಅಭಿವ್ಯಕ್ತಿಯನ್ನು ರಾಜ್ಯದ ಮುಖ್ಯಮಂತ್ರಿಗೆ ಆದ ಅವಮಾನ ಎಂದು ಭಾವಿಸುವುದು ನಮ್ಮ ಸಮಾಜ ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿ.
ಒಬ್ಬ ಮುಖ್ಯಮಂತ್ರಿಯ ಬಳಿ ಒಬ್ಬ ನಾಗರಿಕ ತನಗೆ ನೋವಾಗಿದೆ ಎಂದು ಹೇಳಿಕೊಳ್ಳುವುದು ಅಪರಾಧವಲ್ಲ, ಬದಲಾಗಿ ಪ್ರಜಾಪ್ರಭುತ್ವದ ಸಹಜಕ್ರಿಯೆ ಎಂದು ಭಾವಿಸುವ, ಗುರುತಿಸುವ ಸ್ವಭಾವ ನಮ್ಮದಾಗಬೇಕು. ನೀವು ಇದೆಲ್ಲವನ್ನೂ ಸರಿಯಾಗೇ ಗ್ರಹಿಸಿದ್ದೀರಿ.