Sunday, September 28, 2008

ಅವರದ್ದು ಮತಾಂತರ.. ಇವರದ್ದೇನು?

"ಗುಡ್ಡ ಗಾಡು ಜನರಿಗೆ, ದಲಿತರಿಗೆ ಬೇಕಾದ ಮೂಲ ಸೌಲಭ್ಯ ಕೊಟ್ಟು, ಅವರೊಳಗೆ ಧಾರ್ಮಿಕ ಸಂಸ್ಕಾರ ಬೆಳೆಸುತ್ತೇವೆ..."
ಹೀಗಂದರು ಪೇಜಾವರ ಶ್ರೀಗಳು. ಭಾನುವಾರ ಬೆಳಗ್ಗೆ ಸುವರ್ಣ ನ್ಯೂಸ್ ಚಾನೆಲ್‌ನಲ್ಲಿ ಬರುವ ವಾಕ್ಪಥದ ಈ ವಾರದ ಅತಿಥಿ ಅವರು. ಕ್ರೈಸ್ತ ಮತಸ್ಥರು ಆಮಿಷವೊಡ್ಡಿ ಮತಾಂತರ ನಡೆಸುತ್ತಿದ್ದಾರೆ ಎಂದು ಹುಯಿಲಿಡುತ್ತಿರುವ ಹಿಂದೂ ಸಂಘಟನೆಗಳ ಪರ ವಕಾಲತ್ತು ವಹಿಸಿದ ಶ್ರೀಗಳು ಕಡೆಗೂ ಮಾತನಾಡಿದ್ದು ಮತಾಂತರದ ಮಾತನ್ನೇ.
ಗುಡ್ಡಗಾಡುಗಳಲ್ಲಿ ಇರುವ ಶೂದ್ರರು, ಹಿಂದುಳಿದವರನ್ನು ಹಿಂದೂಗಳನ್ನಾಗಿ ಮತಾಂತರಿಸಲು ಹೊರಟಿರುವ ಇವರು ಹೇಳುತ್ತಿರುವುದು ಯಾವ ಸಂಸ್ಕಾರದ ಬಗ್ಗೆ? ಶೂದ್ರರಾಗಲಿ, ಹಿಂದುಳಿದವರಾಗಲಿ ಈಗ ಸಂಸ್ಕಾರವಂತರಾಗಿಲ್ಲವೆ? ಅಥವಾ ಶತಮಾನಗಳಿಂದ ಅವರು ನಂಬಿಕೊಂಡು ಬದುಕುತ್ತಿರುವ ಆಚಾರ-ವಿಚಾರಗಳು ಸಂಸ್ಕಾರಯುತವಾಗಿಲ್ಲವೆ? ಅಥವಾ ಪೇಜಾವರರ ಪ್ರಕಾರ ಅಬ್ರಾಹ್ಮಣವಾದ ಎಲ್ಲ ವಿಧಿಗಳು ಸಂಸ್ಕಾರದಿಂದ ಕೂಡಿರುವುದಿಲ್ಲವೆ? ಪೇಜಾವರರು ಹೇಳಬೇಕು.
ಆದರೆ ಅವರೇನು ಹೇಳುತ್ತಾರೆಂದು ಗೊತ್ತಿದ್ದು, ಅಂಥ ಉತ್ತರಗಳು, ಪ್ರತಿಕ್ರಿಯೆಗಳು ಹೊರಬರುವಂತೆ ಪ್ರಶ್ನೆ ಸಿದ್ಧ ಮಾಡಿಕೊಂಡು ಬಂದಿದ್ದವರು ವಾಕ್ಪಥದ ಆಂಕರ್ ವಿಜಯಕರ್ನಾಟಕ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್. ಮಾತಷ್ಟೇ ಅಲ, ಶ್ರೀಗಳು ಹೇಳುವ ಪ್ರತಿ ಮಾತಿಗೂ ಸಮ್ಮತಿ ಇದೆ ಎಂಬ ಹಾಗೆ ಶಲ್ಯಧಾರಿಯಾಗಿ ವಿನಮ್ರರಾಗಿ ಕಾಣಿಸಿಕೊಂಡರು.
ಪರಿಣಾಮವಾಗಿ ಕಳೆದ ಹದಿನೈದಿಪ್ಪತ್ತು ದಿನಗಳಲ್ಲಿ ಬಜರಂಗಿಗಳು, ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನೆ ನಡೆಸಿದ ದೌರ್ಜನ್ಯಮನ್ನು ಸಮರ್ಥಿಸಿಕೊಳ್ಳುವುದಕ್ಕೆ ಸುವರ್ಣ ನ್ಯೂಸ್ ಭಾನುವಾರ ವೇದಿಕೆಯಾಯಿತು.
ಕಾರ್ಯಕ್ರಮದ ಉದ್ದಕ್ಕೂ ಶಾಂತಿ, ಸಾಮರಸ್ಯ ಇರಬೇಕು ಎಂಬ ಮಾತುಗಳನ್ನು ಆಡುತ್ತಲೇ ಇದ್ದ ಶ್ರೀಗಳು, ಭಜರಂಗಿಗಳು ಅನುಸರಿಸಿದ ಹಿಂಸಾ ಮಾರ್ಗದ ಬಗ್ಗೆ ಸೊಲ್ಲೆತ್ತಲಿಲ್ಲ. ಬಜರಂಗಿಗಳ ಅತಾರ್ಕಿಕ, ಅನಾಗರಿಕವಾದ ನಡವಳಿಕೆ ಬಗ್ಗೆ ಸಂವೇದನೆಯುಳ್ಳ ಮನುಷ್ಯನಾಗಿ ಮಾತನಾಡಲೇ ಇಲ್ಲ. ಬದಲಿಗೆ ಅವರು ಹೇಳಿದ್ದು; ಚರ್ಚ್‌ಗಳು ಹೆಚ್ಚು ಸಂಘಟಿತವಾಗಿವೆ. ಹಿಂದೂ ದೇಗುಲಗಳು ಹಾಗಿಲ್ಲ. ಸಂಘಟಿಸಿ ಬೆಳೆಸುವುದಕ್ಕೆ ವಿಶ್ವ ಹಿಂದೂ ಪರಿಷತ್‌ನಂಥ ಸಂಘಟನೆಗಳು ಬೇಕು ಎಂಬಂಥ ಮಾತುಗಳನ್ನು.
ಕ್ರೈಸ್ತರು ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ ಎಂಬುದು ಹಿಂದೂ ಸಂಘಟನೆಗಳು, ಮಠಾಧೀಶರಗಳ ಕೂಗು. ಪೇಜಾವರರು ಘಂಟಾಘೋಷವಾಗಿ ನಾವು ಗುಡ್ಡಗಾಡುಗಳಲ್ಲಿ ಇರುವ ದಲಿತರು, ನಿರ್ಲಕ್ಷಿತರಿಗೆ ಮೂಲ ಸೌಲಭ್ಯಗಳು ಕೊಟ್ಟು ಉದ್ಧಾರ ಮಾಡುವ, ಅವರಲ್ಲಿ ಧಾರ್ಮಿಕ ಸಂಸ್ಕಾರ ಬೆಳೆಸುವ ಮಾತಾಡಿದರು.
ಹೀಗೆ ಪೇಜಾವರ ಶ್ರೀಗಳು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಹಾಗೆ ಮಾತಾಡುತ್ತಿದ್ದರೆ ಇದನ್ನೆಲ್ಲಾ ಮೂಕರಾಗಿ ಕೇಳುತ್ತಿದ್ದವರು ಸಂದರ್ಶಕ ವಿಶ್ವೇಶ್ವರ ಭಟ್. ಈ ಸಂದರ್ಭದಲ್ಲಿ ವಿಶ್ವೇಶ್ವರ ಭಟ್ ಸಂದರ್ಶಕರೋ ಅಥವಾ ವೀಕ್ಷಕರೋ ಎನ್ನುವ ಅನುಮಾನ ಕೂಡ ಎಡೆಯಾಡಿತು.
ಇದೇ ಹೊತ್ತಿನಲ್ಲಿ ರಾಷ್ಟ್ರೀಯ ವಾಹಿನಿ ಸಿಎನ್‌ಎನ್ ಐಬಿಎನ್‌ನಲ್ಲಿ ಮತ್ತೊಂದು ಕಾರ್ಯಕ್ರಮ ಪ್ರಸಾರವಾಯಿತು. ರಾಜ್ ದೀಪ್ ಸರದೇಸಾಯಿ ನಡೆಸಿಕೊಡುವ ವೀಕೆಂಡ್ ಎಡಿಷನ್‌ನ "ಟೆರರ್ ನೇಷನ್ ವಾಯ್ಸ್" ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಹಾನಗರಗಳಲ್ಲಿ ನಡೆದ ಬಾಂಬ್ ಸ್ಪೋಟ ಕುರಿತ ವಿವಿಧ ಆಯಾಮಗಳ ಚರ್ಚೆ ನಡೆಯಿತು. ಇದರಲ್ಲಿ ಮಧ್ಯಪ್ರದೇಶದ ಬಿಜೆಪಿ ಸಂಸದ ರಾಜ್ ಪ್ರತಾಪ್ ರೂಡಿ, ಕಾಂಗ್ರೆಸ್ ಸಂಸದೆ ಜಯಂತಿ ನಟರಾಜನ್ ಹಾಗೂ ಕವಿ ಜಾವೇದ್ ಅಖ್ತರ್ ಭಾಗವಹಿಸಿದ್ದರು.
ಬಿಜೆಪಿ ಸಂಸದ ರಾಜ್ ಪ್ರತಾಪ್ ಸಿಮಿ ಸಂಘಟನೆ ಕುರಿತು ಕೆಂಡಕಾರಿದರು. ಮುಸ್ಲಿಮರು ಸಿಮಿಯನ್ನು ಬೆಂಬಲಿಸುತ್ತಾರೆ ಎಂದು ಆರೋಪಿಸಿದರು. ಆದರೆ ಭಜರಂಗಿಗಳನ್ನು ಸಮರ್ಥಿಸಿಕೊಂಡರು. ಹಾಗೆಯೇ ಕೊಲೆಗೈದ ಧಾರಾಸಿಂಗ್‌ ಪರ ವಕಾಲತ್ತು ವಹಿಸಿದರು.
ಇದಕ್ಕೆ ಸ್ಪಷ್ಟನೆ ಕೊಟ್ಟ ಜಾವೇದ್ ಅಖ್ತರ್, "ನಾನು ಸಿಮಿ ಎಂಬ ಮೂಲಭೂತವಾದಿ ಸಂಘಟನೆಯನ್ನು ವಿರೋಧಿಸುತ್ತೇನೆ. ನಿಷೇಧಿಸಿದರೆ ಇನ್ನೂ ಸಂತೋಷ. ಆದರೆ ನೀವು ಹಿಂದೂ ಮೂಲಭೂತವಾದಿಗಳನ್ನು ಬೆಂಬಲಿಸುತ್ತೀರಿ, ಪರವಹಿಸುತ್ತೀರಿ" ಎಂದರು.
ಅಲ್ಲಿ ಉತ್ತರ ಭಾರತದಲ್ಲಿ ರಾಜ್ ಪ್ರತಾಪ್ ರೂಡಿ ಮಾಡುತ್ತಿರುವುದನ್ನೇ ಇಲ್ಲಿ ಪೇಜಾವರರು ಮಾಡುತ್ತಿದ್ದರು. ಆದರೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ಜತೆಗೆ ಸಿಎನ್‌ಎನ್ ಐಬಿಎನ್ ವಾಹಿನಿ ನಡೆಸಿದ ಅಭಿಮತ ಸಂಗ್ರಹದಲ್ಲಿ ಶೇ. ೧೭ ರಷ್ಟು ಮಂದಿ "ಭಜರಂಗದಳ ಕೂಡ ಒಂದು ಉಗ್ರವಾದಿ ಸಂಘಟನೆ" ಎಂದಿದ್ದಾರೆ!! ಇದೇ ಅಭಿಮತ ಭಯೋತ್ಪಾದನೆಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಎತ್ತಿ ಹಿಡಿದಿದೆ. ಶೇ. ೬೦ಕ್ಕೂ ಹೆಚ್ಚು ಮಂದಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಗಮನಿಸಿ, ಇಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಮಠಾಧೀಶರ ಮುಂದೆ ನಿಂತು ನೀವು ಹೇಳಿದ್ದೇ ಸರಿ ಎಂದು ತಲೆ ಅಲ್ಲಾಡಿಸುತ್ತಿದ್ದರೆ, ಅಲ್ಲಿ ಮತ್ತೊಬ್ಬ ಪತ್ರಕರ್ತ ರಾಜ್ ದೀಪ್ ಸರದೇಸಾಯಿ ಜವಾಬ್ದಾರಿಯುತ ವ್ಯಕ್ತಿಗಳ ಜತೆಗೆ ಬದಲಾಗುವ ಪರಿಸ್ಥಿತಿಗೆ ಯಾರು ಹೊಣೆ? ಮಂದೇನು ಮಾಡಬೇಕು? ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದರು.

1 comment:

JANADANI said...

geleyare,
Neevu ondu mahatvada prshne ettiddiri. Adare adakke aste sulabhavada uttara kuda alle ide. ekenadare Rajdeep avara prathi mathina hinde niswartha, appata journalistic, nirbheetha alochane iruttade. adare mata mandiragalnnu hokku belliya thatteya udugore mudigerisikolluva V Bhattarantha Vyaktitvagalu hage Varthisalu Sadhyave?
Sadaa Kala Direct And Indirect agi Manusmruthiyannu Saruva ivarelle Pejavarara Mattondu Peeligeye allave. allade halavu karanagaligagi suttkondiruva 'swaministe'yannu biduvudu ivarind adeethe?
-VA.SU.