Wednesday, March 25, 2009

ಒಳ್ಳೆಯ ಪ್ರಯತ್ನ, ಒಳ್ಳೆಯದಾಗಲಿ...

ದಿನಕ್ಕೆರಡು ಅಸೈನ್ಮೆಂಟ್, ಎರಡು ಪ್ರೆಸ್ ನೋಟ್ಸ್, ಅದರ ಮೇಲೆ ಪ್ರೆಸ್ ಕ್ಲಬ್ ನ ಬ್ಲಾಕ್ ಟೀ, ರಾತ್ರಿಯಾದರೆ ಮಂದಬೆಳಕಿನಲ್ಲಿ ಮತ್ತೇರಿಸುವ ಪಾನೀಯ... ಅದೆಷ್ಟೋ ಪತ್ರಕರ್ತರಿಗೆ ಇಷ್ಟೇ ಬದುಕು. ಒಂದೇ ಒಂದು ಕೆಲಸ ಹೆಚ್ಚಾದರೂ ಕಿರಿಕಿರಿ. ಇಷ್ಟೆಲ್ಲದರ ಮಧ್ಯೆ ಸಾಮಾಜಿಕ ಸಂಗತಿಗಳ ಬಗ್ಗೆ ಚಿಂತನೆ ಮಾಡಲು, ಚರ್ಚಿಸಲು ಪತ್ರಕರ್ತರಿಗೆ ಸಮಯ, ಸಂಯಮ ಇದೆ ಎನ್ನುವುದೇ ಅಚ್ಚರಿ.

ಮೇಲ್ನೋಟಕ್ಕೆ 'ಸಂವಹನ' ಎಂಬ ಸಂಘಟನೆ ಇದಕ್ಕೆ ಹೊರತಾದ್ದು ಎನಿಸುತ್ತಿದೆ. ಮೀಡಿಯಾದಲ್ಲಿ ತೊಡಗಿಸಿಕೊಂಡಿರುವ ಕೆಲ ಉತ್ಸಾಹಿ ಯುವಕರೇ ಸೇರಿಕೊಂಡು ಈ ಸಂಘಟನೆಗೆ ಚಾಲನೆ ನೀಡಿದ್ದಾರಂತೆ. ದಿನಕ್ಕೆ ಹತ್ತಾರು, ನೂರಾರು ಹೊಸ ಬ್ಲಾಗ್ ಗಳು ಕಣ್ತೆರೆಯುತ್ತವೆ. ಇಂತಹ ಬ್ಲಾಗ್ ಗಳ ಮಧ್ಯೆ ಸಂವಹನದ ಬ್ಲಾಗ್ ವಿಭಿನ್ನವಾಗಿ ಕಂಡುಬಂತು. ಸಮಾನತೆ, ಸಾಮಾಜಿಕ ನ್ಯಾಯ - ಎನ್ನುವ ಪದಗಳು ಆಧುನಿಕ ನಿಘಂಟುವಿನಿಂದ ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ, ಇದೇ ಆಶಯಗಳನ್ನು ಹೊತ್ತುಕೊಂಡು ಹೊಸದೊಂದು ಸಂಘಟನೆ ಹುಟ್ಟಿಕೊಂಡಿದೆ ಎಂದು ಬ್ಲಾಗರ್ಸ್ ಹೇಳಿಕೊಳ್ಳುತ್ತಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳು ಬ್ಲಾಗ್ ನಲ್ಲಿವೆ. ಸಂವಹನ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಕುರಿತಂತೆ ಏಪ್ರಿಲ್ 5ರಂದು ಒಂದು ವಿಚಾರಗೋಷ್ಠಿ ಹಮ್ಮಿಕೊಂಡಿದೆ. ಹಿರಿಯ ಲೇಖಕ ಯು.ಆರ್ ಅನಂತಮೂರ್ತಿ ಮತ್ತಿತರರು ಭಾಗವಹಿಸುತ್ತಿದ್ದಾರೆ. ಪತ್ರಕರ್ತರು ಇಂತಹ ಪ್ರಯತ್ನಕ್ಕೆ ಕೈ ಹಾಕಿರುವುದು ವಿಶೇಷ. ಆದರೆ, ಎಷ್ಟು ದಿನಗಳವರೆಗೆ ಇವರ ಉತ್ಸಾಹ, ಉಮ್ಮೇದಿ ಹಾಗೇ ಉಳಿದಿರುತ್ತೋ ನೋಡೋಣ.




No comments: