ಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದೆ. ಮುಖ್ಯಮಂತ್ರಿ ಸೋಮವಾರ (ದಿನಾಂಕ - ಸೆಪ್ಟಂಬರ್ ೨೨) ತುರ್ತು ಸಂಪುಟಸಭೆ ನಂತರ ಪತ್ರಿಕೆಗಳೊಂದಿಗೆ ಮಾತನಾಡುತ್ತಾ, ಸಂಸದ ಸಾಂಗ್ಲಿಯಾನ ಚಟುವಟಿಕೆಗಳ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಅನೇಕ ಚರ್ಚ್ಗಳು ದಾಳಿಗೊಳಗಾದವು. ಬಜರಂಗದಳ ಮುಖಂಡ ಮಹೇಂದ್ರ ಕುಮಾರ್ ದಾಳಿ ಹೊಣೆ ಹೊತ್ತ. ಆದರೂ ತಕ್ಷಣ ಆತನ ಬಂಧನವಾಗಲಿಲ್ಲ. ಇರಲಿ. ಈ ವಿಧ್ವಂಸಕ ಚಟುವಟಿಕೆ ನಡೆಸುತ್ತಿರುವ ಬಜರಂಗದಳ ಚಟುವಟಿಕೆಗಳ ಮೇಲೆ ನಿಗಾ ಇಡಬೇಕಾದ ಮುಖ್ಯಮಂತ್ರಿ, ಅಂತಹ ದಾಳಿಗಳನ್ನು ವಿರೋಧಿಸಿದ ಸಂಸದ ಸಾಂಗ್ಲಿಯಾನ ಚಟುವಟಿಕೆ ಮೇಲೆ ನಿಗಾ ಇಡುತ್ತಾರಂತೆ! ಇವರೂ ಒಬ್ಬ ಮುಖ್ಯಮಂತ್ರಿ, ಅವರದೂ ಒಂದು ಆಡಳಿತ..
ಕೊಡಗಿನಲ್ಲೂ ಚರ್ಚ್ ಮೇಲೆ ದಾಳಿ ಆಗಿದೆ ಸ್ವಾಮಿ ಎಂದರೆ, ಹೌದೌದು, ಅಲ್ಲಿಯೂ ಮತಾಂತರಕ್ಕೆ ಸಂಬಂಧ ಪಟ್ಟಂತೆ ಹಲವರನ್ನು ಬಂದಿಸಲಾಗಿದೆ ಎನ್ನುತ್ತಾರೆ ಮುಖ್ಯಮಂತ್ರಿ.
ಜೀಸಸ್ ನಮಗೆ ದೇವರು. ನಿಮ್ಮ ಗರ್ಭಗುಡಿಯನ್ನು ಯಾರಾದರೂ ಹಾನಿ ಮಾಡಿದರೆ ಏನು ಮಾಡುತ್ತೀರಿ ಎಂದು ಬಿಷಪ್ ದು:ಖದಿಂದ ಪ್ರಶ್ನಿಸುತ್ತಿದ್ದರೆ, ಈ ರಾಜ್ಯ ಮತಾಂತರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತದಂತೆ?
ಹೋಗಲಿ, ಸಾಂಗ್ಲಿಯಾನಾ ಮೇಲೆ ನಿಗಾ ಇಡಲು ಇರುವ ಕಾರಣಗಳಾದರೂ ಏನು?
ಅವರು ಇತ್ತೀಚೆಗೆ ವಿವಾದಿತ ಪುಸ್ತಕ ಸತ್ಯದರ್ಶಿನಿವನ್ನು ಪ್ರಕಟಿಸಿದ್ದಾರೆ ಎಂದು ಆರೋಪ ಎದುರಿಸುತ್ತಿರುವ ನ್ಯೂಲೈಫ್ ಟ್ರಸ್ಟ್ನ ಸ್ಯಾಮುಎಲ್ ಜತೆ ಪತ್ರಿಕಾಗೋಷ್ಠಿ ನಡೆಸಿದರು. ಸ್ಯಾಮುಎಲ್ ಆ ಪುಸ್ತಕಕ್ಕೂ ತಮಗೂ ಸಂಬಂಧವಿಲ್ಲ, ನಮ್ಮಿಂದ ಬಲವಂತದ ಮತಾಂತರ ನಡೆಯುತ್ತಿದ್ದರೆ ತನಿಖೆಯಾಗಲಿ ಎಂದರು. ಸಾಂಗ್ಲಿಯಾನ ಮಾತನಾಡುತ್ತಾ ಅಲ್ಪಸಂಖ್ಯಾತರಿಗೆ ಕರ್ನಾಟಕದಲ್ಲಿ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದರು. ಅದು ತಪ್ಪೆ? ಅವರ ಮೇಲೆ ನಿಗಾ ಇಡಲು ಆದೇಶಿಸುವಷ್ಟು ಘೋರ ಅಪರಾಧವೇ?
ಸಾಂಗ್ಲಿಯಾನ ರಾಜ್ಯದ ಮತಾಂತರ ಚಟುವಟಿಕೆಗಳ ಬೆಂಬಲಕ್ಕಿದ್ದಾರೆ ಎನ್ನುವುದು ಇನ್ನೊಂದು ಆರೋಪ. ಹಿಂದೂ ಸಂಘಟನೆಗಳು ಮತಾಂತರ ಕುರಿತಂತೆ ಮಾತನಾಡಲು ನೈತಿಕವಾಗಿ ಹಕ್ಕಿಲ್ಲದವರು. ಇತಿಹಾಸ ಗಮನಿಸಿದರೆ ಹಿಂದೂ ಧರ್ಮ ಎಂದು ಹೆಸರು ಹುಟ್ಟುಹಾಕಿ, ಗುಡ್ಡಗಾಡುಗಳಲ್ಲಿ ಮಾರಮ್ಮ, ಮಲೆ ಮಹದೇಶ್ವರ, ವೀರಭದ್ರ, ಉಚ್ಚಂಗೆ ಎಲ್ಲಮ್ಮ, ಚೌಡಮ್ಮ.. ಹೀಗೆ ಅನೇಕ ಸ್ಥಳೀಯ ದೇವ-ದೇವತೆಗಳನ್ನು ಪೂಜಿಸುತ್ತಾ ತಮಗೊಂದು ಧರ್ಮದ ಅಗತ್ಯವೇ ಇಲ್ಲವೆಂಬಂತೆ ಬದುಕುತ್ತದ್ದ ಕೋಟಿ ಕೋಟಿ ಜನರಿಗೆ ನೀವು ಹಿಂದೂ ಎಂದು ಹಣೆಪಟ್ಟಿ ಕಟ್ಟಿ ಮತಾಂತರ ಮಾಡಿದವರು ಇದೇ ಜನ.
ಶಿಕ್ಷಣಕ್ಕೆ, ಉತ್ತಮ ವೈದ್ಯಕೀಯ ಸೇವೆಗೆ, ಅಸ್ಪೃಶ್ಯತೆ ಇಲ್ಲದ ಜೀವನ ನಡೆಸಲು ಮತಾಂತರ ಆಗುವುದಾದರೆ ಅಗಲಿ ಬಿಡಿ. ಅದರಿಂದ ಇವರಿಗೇನು ತೊಂದರೆ.
ಪತ್ರಿಕಗಳೂ, ಬಜರಂಗದಳಕ್ಕಿಂತ ಸಾಂಗ್ಲಿಯಾನ ಹೆಚ್ಚು ಅಪಾಯಕಾರಿ ಎಂಬಂತೆ ಬಿಂಬಿಸುತ್ತಿವೆ. ಕನ್ನಡಪ್ರಭ (ದಿನಾಂಕ ಸೆ.೨೩ ಆವೃತ್ತಿ) ವರದಿಯೊಂದು ಹೇಳುತ್ತೆ, ಸಾಂಗ್ಲಿಯಾನ ಭಾಗವಹಿಸಿದ್ದ ಸಭೆಯೊಂದರಲ್ಲಿ ಒಂದು ಗುಂಪು ರಾಷ್ಟ್ರಗೀತೆ ಹಾಡುವಾಗ ಎದ್ದುನಿಂತು ಗೌರವಿಸಲಿಲ್ಲ. ಸಾಂಗ್ಲಯಾನ ಸಭೆಯಲ್ಲಿ ಹಾಜರಿದ್ದರೂ ಅದನ್ನು ಪ್ರತಿಭಟಿಸಲಿಲ್ಲ ಎಂಬುದು ಪತ್ರಿಕೆ ದೂರು. ಉದ್ದೇಶಪೂರ್ವಕವಾಗಿ ಒಬ್ಬರನ್ನು ಟಾರ್ಗೆಟ್ ಮಾಡುವುದು ಎಂದರೆ ಇದೇ ಅಲ್ಲವೇ?
Tuesday, September 23, 2008
Subscribe to:
Post Comments (Atom)
3 comments:
ಸುದ್ದಿಮಾತು ಒಡೆಯರಿಗೆ ಹಾರ್ದಿಕ ಸ್ವಾಗತ.
ಮೊದಲನೇ ಬರೆಹವೇ ಪ್ರಖರವಾಗಿದೆ.
ಯಡಿಯೂರಪ್ಪನವರು ಯಾವುದೋ ದೇಶದ ಚಕ್ರವರ್ತಿ ಎಂದು ತನ್ನನ್ನ ತಾನು ಭಾವಿಸಿಕೊಂಡಂತಿದೆ. ಈ ಮುಖ್ಯಮಂತ್ರಿಯಿಂದ ನಮಗೆ ಉಳಿಗಾಲವಿಲ್ಲ ಎಂದು ಸಾಂಗ್ಲಿಯಾನಾ ಹೇಳಿದ್ದಾರಂತೆ. ಅದಕ್ಕಾಗಿ ಯಡಿಯೂರಪ್ಪನವರು ಸಾಂಗ್ಲಿಯಾನಾ ಮೇಲೆ ಒಂದು ಕಣ್ಣಿಡುತ್ತಾರಂತೆ.
ಸಾಂಗ್ಲಿಯಾನಾ ತಮ್ಮ ಹರುಕು ಮುರುಕ ಕನ್ನಡದಲ್ಲಿ, ಅಸ್ಪಷ್ಟ ಇಂಗ್ಲಿಷ್ನಲ್ಲಿ ಅದೇನು ಹೇಳಿದರೋ, ಯಡಿಯೂರಪ್ಪ ಅದೇನು ಕೇಳಿಸಿಕೊಂಡರೋ ಗೊತ್ತಿಲ್ಲ. ಅಷ್ಟಕ್ಕೂ ಸಾಂಗ್ಲಿಯಾನಾ ಆ ಮಾತು ಹೇಳಿದ್ದರೆ ಅದೇನು ಅಪರಾಧವೇ?
ಅವರು ನಿಜವನ್ನೇ ಹೇಳಿದ್ದಾರೆ. ಸತ್ಯ ಹೇಳುವವರ ಮೇಲೆ ಒಂದು ಕಣ್ಣಿಡಬೇಕು ಎಂದು ಯಡಿಯೂರಪ್ಪ ನಿರ್ಧರಿಸಿದರೆ ಅದಕ್ಕೆ ಯಾರು ಏನು ಮಾಡಲು ಸಾಧ್ಯ?
ಸಾಂಗ್ಲಿಯಾನಾ ಮೇಲೆ ಕಣ್ಣಿಡುವುದೂ ಸಹ ಮೊನ್ನೆಯ ಕ್ಯಾಬಿನೆಟ್ ಸಭೆಯ ನಿರ್ಧಾರಗಳಲ್ಲಿ ಒಂದು. ಹಿಂದೆ ಅಧಿಕಾರ ಮಾಡಿದವರೂ ಸಹ ತಮಗಾಗದವರ ಮೇಲೆ ಕಣ್ಣಿಡುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ ಹೀಗೆ ಕಣ್ಣಿಡುವುದನ್ನು ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ, ಅದನ್ನು ಸ್ವತಃ ಮುಖ್ಯಮಂತ್ರಿಯೇ ಪತ್ರಕರ್ತರಿಗೆ ಬ್ರೀಫ್ ಮಾಡಿದ್ದು ಇತಿಹಾಸದಲ್ಲಿ ಮೊದಲು. ಹೊಸ ಇತಿಹಾಸ ಸೃಷ್ಟಿಸಿದ ಯಡಿಯೂರಪ್ಪನವರಿಗೆ ಜಯವಾಗಲಿ! ಅವರು ಇಟ್ಟ ಕಣ್ಣಿಗೆ ಸಿಕ್ಕಿಬಿದ್ದವರೆಲ್ಲ ಭಸ್ಮವಾಗಲಿ!
'ನಾನು ಯಾವ ಪಾಪ ಮಾಡಿಲ್ಲ,ಹಾಗಾಗಿ ರಾಜ್ಯದಲ್ಲಿ ಮಳೆ- ಬೆಳೆ ಸಮೃದ್ಧವಾಗಿ ಆಗಲಿದೆ' ಎಂದು ತೀರಾ ಬುದ್ಧು ರೀತಿ ಮಾತನಾಡಿ ನಗೆಪಾಟಲಿಗೀಡಾಗಿದ್ದ ಇದೇ ಯಡಿಯೂರಪ್ಪ ಇದೀಗ, ಕ್ರೈಸ್ತರ ಮೇಲೆ ದಾಳಿ ನಡೆದಾಗ ತಮ್ಮ ಅಸಲೀ ಮುಖವಾಡ ತೋರಿದ್ದಾರೆ. ಚರ್ಚಗಳ ಮೇಲಿನ ದಾಳಿಯನ್ನು ನಾವೇ ನಡೆಸಿದ್ದು ಎಂದು ಬಜರಂಗದ ದಳದ ಮುಖ್ಯಸ್ಥರೇ ಸಾರ್ವಜನಿಕವಾಗೇ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಬ್ಬರೂ ಅವರನ್ನು ಸಮರ್ಥಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡಿದರು. ಕೊನೆಗೆ ಕೇಂದ್ರದ ಒತ್ತಡಕ್ಕೆ ಮಣಿದು ತಿಪ್ಪೆಸಾರಿಸಿದ್ದಾರೆ. ಅದರ ಬಗ್ಗೆಯೆಲ್ಲಾ ಮಾತನಾಡದ ಈ ಪತ್ರಿಕೆ, ಕೇಂದ್ರ ಸರ್ಕಾರದ ಕ್ರಮವನ್ನೇ ಟೀಕಿಸಿ, ಅದರ ಮೇಲೆ ಗೂಬೆ ಕೂರಿಸುವಂತೆ ವರದಿ ಮಾಡುತ್ತಿದೆ. ಆ ಪತ್ರಿಕೆಯ ಸಂಪಾದಕರು ಚುನಾವಣೆ ಸಂದರ್ಭದಲ್ಲಿ ಮತ್ತೊಂದು ಟಿವಿ ವಾಹಿನಿಯೊಂದಿಗೆ ನಡೆಸಿಕೊಟ್ಟ ಸಮೀಕ್ಷೆಗಳು ಎಷ್ಟರಮಟ್ಟಿಗೆ ಪಾರದರ್ಶಕವಾಗಿದ್ದವು ಮತ್ತು ಅಂತಹ 'ಸೇವೆ'ಗಾಗಿ ಅವರಿಗೆ ಸಿಕ್ಕ ಕಾಣಿಕೆ ಏನು ಎಂಬುದು ಪತ್ರಿಕಾವಲಯದಲ್ಲಿ ಗುಟ್ಟಾಗೇನೂ ಉಳಿದಿಲ್ಲ. ಹಾಗಾಗಿ ಕನ್ನಡದಲ್ಲಿ ಈಗ ಇರುವುದು ಪಾರದರ್ಶಕ, ಪ್ರಾಮಾಣಿಕ ಪತ್ರಿಕೋದ್ಯಮವಲ್ಲ, ಬದಲಾಗಿ ಆಡಳಿತದಲ್ಲಿರುವವರನ್ನು ಓಲೈಸುವಲ್ಲಿ ಯಾರು ಹೆಚ್ಚು ನಿಪುಣರು, ಅದರಲ್ಲೂ ಸಂಘ-ಪರಿವಾರ, ಬಿಜೆಪಿಯ ಸೇವೆಯಲ್ಲಿ ಯಾರು ಹೆಚ್ಚು ನಿಷ್ಠರು ಎಂಬುದನ್ನು ತೋರಿಸಿಕೊಳ್ಳುವ ಪೈಪೋಟಿಯ ಪತ್ರಿಕೋದ್ಯಮ. ಹಾಗಾಗೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮಾಧ್ಯಮದವರಿಗೆ ನೀಡಿದ ಕಾಣಿಕೆಯೇ ಬರೋಬ್ಬರಿ 60 ಕೋಟಿ ರೂಪಾಯಿಗೂ ಅಧಿಕ!!
ನಮಸ್ಕಾರ ಸುದ್ದಿಮನೆಯವರಿಗೆ,
ನಿಮ್ಮ ಮೊದಲನೆ ಬರಹ, ಚೆನ್ನಾಗಿದೆ.
ಆದರೆ, ಹಿಂದುಗಳ ಮೇಲೆ ಆಗ್ತಿರೊ ಶೊಷಣೆನ ಏತ್ತಿಹಿಡಿಯೊ ಬದಲು, ಅದಕ್ಕೆ ತದ್ವಿರುದ್ದವಾಗಿದೆ ನಿಮ್ಮ ಈ ಲೇಖನ.
ಮತಾಂತರ ಆಗ್ತಿರೊದು ಯಾರು ಮತ್ತು ಯಾವ ವಿಷಯಕ್ಕೆ ಅನ್ನೊದನ್ನ ಮೊದ್ಲು ನೀವು ತಿಳ್ಕೊಂಡಿದ್ರೆ ಒಳ್ಳೆದಿರ್ತಿತ್ತು ಅಂತ ನನ್ನ ಅಭಿಪ್ರಾಯ. ದುಡ್ಡಿನ ಆಸೆಗೆ ಮತಾಂತರ ಆಗಿದಾರೆ ಅನ್ನೊದನ್ನ ಬಿದಿಸಿ ಹೇಳೊ ಅವಶ್ಯಕತೆ ಇಲ್ಲ. ನೀವು "ಸತ್ಯ ದರ್ಶಿನಿ" ಓದಿದಿರ??? ಇಲ್ಲ ಅಂದ್ರೆ ದಯವಿಟ್ಟು ಓದಿ. ಆನಂತರ ಹಿಂದು ದೇವತೆಗಳನ್ನ ಅಷ್ಟು ಕೆಟ್ಟದಾಗಿ ಹೇಳಲು ಕ್ರಿಶ್ನನ್ನರು ಕಾರಣ ಅಲ್ಲ ಅಂತ ನೀವು ಹೇಳ್ತಿರ?
ಪತ್ರಿಕೊದ್ಯಮದಲ್ಲೆ ಇದ್ದಂತಹ ಸನ್ಮನ್ಯ ದಿನೇಶ್ ಅವರು ನಿಮ್ಮ ಲೇಖನಕ್ಕೆ ಭೇಷ ಅಂತಾರೆ.!!!!!
ಏಳಿ ಸ್ವಾಮಿ ಏಳಿ, ಹಿಂದು ಧರ್ಮ ನಶಿಸೊ ಮೊದ್ಲು ಏಳಿ.
ನಿಮ್ಗೆ ಗೊತ್ತಿಲ್ಲ ಅಂದ್ರೆ ಬರಿಬೇಡಿ. ಆದ್ರೆ ಇಂತ ಸೂಕ್ಶ್ಮ ವಿಷಯಗಳನ್ನ ಓದುಗರಿಗೆ ಸರಿಯದ ಮಾಹಿತಿ ನೀಡಿ ಸ್ವಾಮಿ.
Post a Comment