Wednesday, December 31, 2008

ಡಿಸೆಂಬರ್ 31ರ 'ಮದ್ಯ'ರಾತ್ರಿ!

ಇಗ್ನಿಷನ್ ಆನ್ ಮಾಡಿ, ಮುವತ್ತು ಬಾರಿ ಗೇರ್ ಬದಲಿಸಿ ಸರಿಸುಮಾರು ಎಂಟು ಕಿಮೀ ಪ್ರಯಾಣಿಸುವ ಹೊತ್ತಿಗೆ ನಮ್ಮ ಕಾರು ಜೆ.ಸಿ. ರೋಡ್ ತಲುಪುವುದರಲ್ಲಿತ್ತು. ಪಯಣ ಪ್ರೆಸ್ ಕ್ಲಬ್ ನತ್ತ. ಡಿಸೆಂಬರ್ 31ರ ರಾತ್ರಿಗೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ವಿಶೇಷ ಅರ್ಥವಿದೆ. ಪತ್ರಕರ್ತರಿಗೆ ಅದು 'ಮದ್ಯ'ರಾತ್ರಿ. ಪ್ರತಿವರ್ಷದಂತೆ ನಮ್ಮ ಹೊಸ ವರ್ಷಾಚರಣೆ ಅಲ್ಲಿಯೇ ಎಂದು ನಿರ್ಧಾರವಾಗಿತ್ತು. ಸದ್ಯ ಪತ್ರಕರ್ತರಲ್ಲದಿದ್ದರೂ, ಕ್ಲಬ್ ನ ಬಾಂಧವ್ಯ ಹಳೆಯದು.
ದಾರಿ ಮಧ್ಯೆ ಕಣ್ಣಿಗೆ ಬಿದ್ದದ್ದು ಟೈಮ್ಸ್ ಆಫ್ ಇಂಡಿಯಾ ಕನ್ನಡ ಪತ್ರಿಕೆ ಕಚೇರಿ. ಕನ್ನಡ ಪತ್ರಿಕಾ ಜಗತ್ತಿಗೆ ತೀರಾ ಇತ್ತೀಚಿನ ಸೇರ್ಪಡೆ. ಅನೇಕ ಉತ್ತಮ ಪತ್ರಕರ್ತರಿದ್ದಾರೆ; ಒಳ್ಳೆಯ ಪ್ರಸರಣ ಇದೆ ಎಂದು ಹೇಳುವವರಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ಕನ್ನಡ ನಕಲು ಎಂಬ ಆರೋಪದೊಂದಿಗೆ ಆರಂಭವಾದ ಪತ್ರಿಕೆ ನಿಧಾನವಾಗಿ ತನ್ನದೇ ಛಾಪು ಮೈಗೂಡಿಸಿಕೊಳ್ಳುತ್ತಿದೆ. ಸಂಪಾದಕೀಯ ಪುಟದ ಬರಹಗಳಲ್ಲಿ ಇನ್ನೂ ಸ್ವಂತಿಕೆ ಕಾಣುತ್ತಿಲ್ಲ. ಬೆಂಗಳೂರು ಟೈಮ್ಸ್, ಇಂಗ್ಲಿಷ್ ಆವೃತ್ತಿಗಿಂತ ಭಿನ್ನವಾಗಿದೆ. ಕನ್ನಡದ ಮಟ್ಟಿಗೆ ಅದು ಬಹುಮುಖ್ಯ ಪತ್ರಿಕೆಯಾಗಿ ರೂಪುಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಆದರೆ ಇಂದಿನ ಬಹುತೇಕ ಪತ್ರಿಕೆಗಳಿಗೆ ಹಿಡಿದಿರುವ 'ರಂಜನೆ ಪ್ರೇತ' ಇದರಲ್ಲೂ ಢಾಳಾಗಿ ಕಾಣುತ್ತದೆ. ಕೇವಲ ಮನರಂಜನೆಯೇ ಮುಖ್ಯವಾದರೆ ಪತ್ರಿಕೆಗಳು ಕೆಲವೇ ವರ್ಷಗಳಲ್ಲಿ ಇಲ್ಲದೇ ಹೋಗುವ ಅಪಾಯ ಇದೆ. ಯೋಚನೆಗೆ ಹಚ್ಚುವ ಕೆಲಸ ಆಗಬೇಕಿದೆ.
ಹೀಗೆ ಚರ್ಚೆ ನಡೆಯುತ್ತಿರುವಾಗಲೇ ನಮ್ಮ ಗಾಡಿ ಪಂಪ ಮಹಾಕವಿ ರಸ್ತೆಗೆ ಬಂದು ನಿಂತಿತ್ತು. ಅಲ್ಲಿ ಒಬ್ಬ ಸ್ನೇಹಿತರನ್ನು ಗಾಡಿಗೆ ತುಂಬಿಸಿಕೊಳ್ಳಬೇಕಿತ್ತು. ಪಂಪ ಮಹಾಕವಿ ರಸ್ತೆ ಅಂದರೆ ಗೊತ್ತಲ್ಲ, ಅದು ಆಧುನಿಕ ಪತ್ರಿಕೋದ್ಯಮ ಪದಕೋಶದಲ್ಲಿ ವಿಕೆ ವೀಧಿ. ಆ ರಸ್ತೆಯಲ್ಲಿ ಓಡಾಡುವಾಗಲೆಲ್ಲ ವಿಜಯ ಕರ್ನಾಟಕದ ಬಗ್ಗೆ ಮಾತನಾಡದೆ ಹೋದರೆ ಅಪಚಾರ ಎಸಗಿದಂತೆ. ಅದು ವಿಶ್ವದಲ್ಲಿಯೇ ನಂಬರ್ 1 ಕನ್ನಡ ದಿನಪತ್ರಿಕೆ. ಓದುಗರನ್ನು ಯೋಚನೆಗೆ ಹಚ್ಚುವುದಕ್ಕಿಂತ, ಬ್ರೈನ್ ವಾಶ್ ಮಾಡುವುದರಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ. 'ಇದು ಹೀಗೆ', 'ಇದು ಇಷ್ಟೆ ಮತ್ತೇನೂ ಇಲ್ಲ' ಎನ್ನುವ ಧಾಟಿಯಲ್ಲಿರುವ ಬರಹಗಳು ಓದುಗರ ಮೇಲೆ ಅಭಿಪ್ರಾಯ ಹೇರುತ್ತವೆ.
2008 ವಿ.ಕ ಪಾಲಿಗೆ ಮುಖ್ಯವರ್ಷ. ಮತಾಂತರ ಕುರಿತಂತೆ ಸಂವಾದ ಮಾಡಿದ್ದು ಇದೇ ವರ್ಷ. ನಂಬರ್ 1 ಪಟ್ಟ ಹಾಗೇ ಉಳಿಸಿಕೊಂಡಿತು. ಅಂತೆಯೇ ವರ್ಷದ ಕೊನೇ ಹೊತ್ತಿಗೆ ಮುಚ್ಚಿಹೋಗುತ್ತದಂತೆ ಎಂಬ ಸುದ್ದಿಗೂ ಆಹಾರವಾಯಿತು. ಮುಂದಿನ ಹೊಸ ವರ್ಷಾಚರಣೆ ಹೊತ್ತಿಗೆ ವಿ.ಕ ಬ್ರಾಡ್ ಶೀಟ್ ಆಗಿ ಉಳಿದಿರುತ್ತೋ ಇಲ್ಲವೋ..
ಅದೇ ಹೊತ್ತಿಗೆ ನಮ್ಮಲೊಬ್ಬ "ಹ್ಯಾಪಿ ನ್ಯೂ ಇಯರ್ ಭಟ್ಟರೇ...ಲಾಂಗ್ ಲೀವ್ ವಿಜಯ ಕರ್ನಾಟಕ" ಎಂದು ಪತ್ರಿಕಾ ಕಚೇರಿ ಕಡೆ ಮುಖ ಮಾಡಿ ಜೋರಾಗಿ ಕೂಗಿದ. ಆ ಹೊತ್ತಿಗಾಗಲೇ ಅವನೊಳಗೆ 90 ಮಿಲಿ ನಷ್ಟು ಪರಮಾತ್ಮ ಒಳಗೆ ಸೇರಿದ್ದ ಎನ್ನುವುದು ಸಾಬೀತಾಯಿತು.
ಟೌನ್ ಹಾಲ್ ಸರ್ಕಲ್ ದಾಟಿ ಕಾರ್ಪೋರೇಶನ್ ಮುಂದೆ ಹೋಗಿ ಕಬ್ಬನ್ ಪಾರ್ಕ್ ಸೇರಬೇಕು ಎನ್ನುವ ಹೊತ್ತಿಗೆ ಬಂತಲ್ಲಪ್ಪ ಫೋನು. "ನಾನು ಬರ್ತೀನಿ ಕಣ್ರೋ. ಇಲ್ಲೇ ಸಂಯುಕ್ತ ಕರ್ನಾಟಕ ಆಫೀಸ್ ಹತ್ರ ಇದೀನಿ. ಬಂದು ಪಿಕ್ ಅಪ್ ಮಾಡ್ರೋ ಅಂದ" ಅವನು ಇನ್ನೊಬ್ಬ ಗೆಳೆಯ. ಹೆಸರಿಗೆ ಐಟಿ ಉದ್ಯೋಗಿ. ಎಕಾನಾಮಿಕ್ ರಿಸೆಶನ್ ನೆಪ ಒಡ್ಡಿ ಹೊಸ ವರ್ಷಾಚರಣೆಗೆ ಕಂಪನಿ ಎಳ್ಳು ನೀರು ಬಿಟ್ಟ ಕಾರಣ ಅವನೂ ನಮ್ಮ ಜೊತೆ ಸೇರಬೇಕಾಯಿತು. ಇನ್ನೇನು ಮಾಡೋದು ಹಳೇ ಗೆಳೆಯ. ಕಾರು ಸಂಯುಕ್ತ ಕರ್ನಾಟಕ ಕಚೇರಿಯತ್ತ...
2008 - was one more uneventful year for SK. ಮಹತ್ತರ ಬದಲಾವಣೆಗಳಿಲ್ಲ. ಪತ್ರಿಕೆ ಪ್ರಸರಣ ಹೆಚ್ಚಲೂ ಇಲ್ಲ. ಬಿಜೆಪಿ ಮನಸ್ಸಿನ ಕಾಂಗ್ರೆಸ್ ರಾಜಕಾರಣಿ ಹಾರ್ನಹಳ್ಳಿ ರಾಮಸ್ವಾಮಿ ಬಯಸಿದಂತೆ ಸುದ್ದಿ ಪ್ರಕಟಗೊಳ್ಳುತ್ತೆ. ಕಡಿಮೆಯಾದರೂ ಸಂಬಳ ನಿಯತ್ತಾಗಿ ಏಳನೇ ತಾರೀಖು ನೌಕರರ ಖಾತೆಗೆ ಜಮಾ ಆಗುತ್ತೆ. ಪ್ರತಿನಿತ್ಯ ಪತ್ರಿಕೆಯೂ ಹೊರಬರುತ್ತೆ. ರಾಜಕೀಯ ವಿಶ್ಲೇಷಣೆ ಸಂಬಂಧಪಟ್ಟಂತೆ ಇಂದಿಗೂ ಪತ್ರಿಕೆ ಇತರೆ ಪತ್ರಿಕೆಗಳಿಗಿಂತ ಮೇಲೆ ನಿಲ್ಲುತ್ತೆ. ಆದರೆ ನವರತ್ನ ರಾಜರಾವ್ ಎಂಬ ಆರ್ಎಸ್ಎಸ್ ಚಿಂತಕ ಪದೇ ಪದೇ ಲೇಖನ ಬರೆದು, ಓದುಗರ ಮನಸ್ಸನ್ನು ಹಾಳು ಮಾಡುತ್ತಿರುವುದಂತೂ ಸತ್ಯ. ಸನ್ಮಾನ್ಯರು ಜನಪ್ರಿಯ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರ ಪ್ರಮುಖ ಆಕರ.
ಹಾಗೆ ಮುಂದೆ ಸಾಗಿದರೆ ಮಹಾತ್ಮ ಗಾಂಧಿ ರಸ್ತೆ. ಹೊಸವರ್ಷಾಚರಣೆಗೆ ಜನದಟ್ಟಣೆಯಾಗುತ್ತೆ ಎಂದು ಮಹಾತ್ಮ ಗಾಂಧಿ ರಸ್ತೆಗೆ ವಾಹನ ನಿಷೇಧವಿತ್ತು. ಕಬ್ಬನ್ ರಸ್ತೆಯೇ ಗತಿ. ಮಣಿಪಾಲ್ ಸೆಂಟರ್ ಮುಂದೆ ಸಾಗಿ ಕಬ್ಬನ್ ರೋಡ್ ಸೇರಿದ್ದಾಯಿತು. ಆ ಹೊತ್ತಿಗೆ ಕಣ್ಣಿಗೆ ಬಿದ್ದದ್ದು ಮಣಿಪಾಲ್ ಸೆಂಟರ್ ಕಾಂಪೌಂಡ್ ನಲ್ಲಿಯೇ ಇರುವ ಗಣೇಶನ ದೇವಸ್ಥಾನ. ಅಂದು ಅಲ್ಲಿ ವಿಶೇಷ ಪೂಜೆಯೂ ನಡೆದಿತ್ತು. ಗಣೇಶನಿಗೆ ಬೇರೆಲ್ಲೂ ಜಾಗ ಸಿಗಲಿಲ್ಲವೇ? ಇಲ್ಲಿಯೇ ಅದೂ ಕಾಂಪೌಂಡನಲ್ಲಿಯೇ ಇರಬೇಕೆ? ಆಗ ನಮ್ಮಲ್ಲೊಬ್ಬ ಹೇಳಿದ ಮಾತು, ಅದು ಮಣಿಪಾಲ ಬ್ರೈನ್. ಮುಂದೊಂದು ದಿನ ರಸ್ತೆ ಅಗಲಿಸುವ ನೆಪದಲ್ಲಿ ಕಾಂಪೌಂಡ್ ಒಡೆಯಲು ಈಗಿನಿಂದಲೇ ಪ್ರತಿರೋಧ ಒಡ್ಡಲು ಒಬ್ಬ ಗಣೇಶನನ್ನು ತಂದು ಕೂರಿಸಿದ್ದಾರೆ. ಇದೇ ಮಂದಿ ಹಿಂದೆ ತಮ್ಮ ವ್ಯವಹಾರಗಳಿಗೆ ರಕ್ಷಣೆಗೆಂದು 'ಉದಯವಾಣಿ' ಎಂಬ ಪತ್ರಿಕೆ ಆರಂಭಿಸಿದವರು. ಇಂದಿಗೂ ದಕ್ಷಿಣ ಕನ್ನಡ ದಾಟಿ ಬೇರೆಡೆ ನೆಲೆಯೂರಲು ಸಾಧ್ಯವಾಗಿಲ್ಲ. ಕರಾವಳಿ ಮಂದಿ ಹೊರತುಪಡಿಸಿ ಇತರರು ಅದನ್ನು 'ತಮ್ಮ ಪತ್ರಿಕೆ' ಎಂದು ಹೇಳಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿಲ್ಲ.
ಇನ್ನು ಒಂದೇ ದಾರಿ. ನೇರ ಪ್ರೆಸ್ ಕ್ಲಬ್ ಅಂಗಳದಲ್ಲಿ ನಮ್ಮ ಕಾರು ನಿಂತಿತು. ಆ ಹೊತ್ತಿಗೆ ಒಂದಿಷ್ಟು ಗಾಯಕರು ಕೀರಲು ದನಿಯಲ್ಲಿ ಕನ್ನಡದ ಅದ್ಭುತ ಹಾಡುಗಳನ್ನು ಹಾಡುವ ತಿಣಕಾಡುತ್ತಿದ್ದರು. ಇತ್ತ ಅದಾವುದರ ಪರಿವೆಯೇ ಇಲ್ಲದಂತೆ ಪತ್ರಕರ್ತರು 'ಮದ್ಯ'ರಾತ್ರಿಗೆ ಸಜ್ಜಾಗುತ್ತಿದ್ದರು.

6 comments:

Anonymous said...

ಅವರೆಲ್ಲ ಬೇಕಾದ ಹಾಗೆ ಬರೀಲಿ ಬಿಡಿ. ನೀವಿದ್ದಿರಲ್ಲ ಹೆಸರಿಲ್ಲದ ಷಂಡರು communist, Congress ideology spread ಮಾಡೋಕೆ...

chanakya said...

ಅಣ್ಣಾ ಬರಹ ಚೆನ್ನಾಗಿದೆ. ಕೆಲವು ಕಡೆ ನೀನೂ ಒಂದು ಪೆಗ್ ಏರಿಸಿಯೇ ಬರೆದಿರೋ ಹಾಗಿದೆ. ಅದನ್ನ ಬಿಟ್ರೆ ಮದ್ಯರಾತ್ರಿಲೂ ನಿನ್ ತಲೆ ಇಶ್ಟೆಲ್ಲಾ ಯೋಚಿಸುತ್ತಾ ಅಬ್ಬಬ್ಬಾ..ಶಭಾಶ್.ನಾನೂ ಪ್ರೆಸ್ ಕ್ಲಬ್ ನಲ್ಲೇ ಇದ್ದೆ ಆದ್ರೆ ನಿಮ್ಮ ಟೀಂ ದರ್ಶನ ಮಾತ್ರ ಆಗ್ಲಿಲ್ಲ.ಬರೇ ಮತ್ತೊಬ್ಬರು ಏರಿಸಿದ ಗುಂಡಿನ ಸ್ಮೆಲ್ ಗೆ..ಕಾಣ್ಲಿಲ್ವೋ ಗೊತ್ತಿಲ್ಲ.ಏನೇ ಇರ್ಲಿ ೨೦೦೮ ಇನ್ನಿಲ್ಲ ಅನ್ನೋದು ಮಾತ್ರ ಸತ್ಯ.

Anonymous said...

stop publishing such rubbish and silly posts in the blog.

Anonymous said...

ಕಾರ್ ಬಿಡ್ತಾ... ಬಿಡ್ತಾ... ಬಿಡ್ತಾ.... ನಿಮ್ಮ ಸುದ್ದಿ ಮಾತು ಬಳಗ, ಎಲ್ಲಾ ಪೇಪರ್ ಕಚೇರಿಗಳನ್ನ ಹಿಟ್ ಮಾಡಿಕೊಂತ.. ಟಚ್ ಮಾಡಿಕೊಂತ ಹೋಗಿದೆ ಅನ್ರಪ್ಪಾ... ಒಟ್ತ್ರಾಸಿ ಹಿಟ್ ಅಂಡ್ ರನ್ ಕೇಸ್ ಗಳು...
ನಿಮ್ಮನ್ನೆಲ್ಲ ನೋಡಿದರೆ ನೀವೆಲ್ಲ ವಿಜಯ ಕರ್ನಾಟಕ ಪತ್ರಿಕೆಯಲ್ಲೇ ಕೆಲಸ ಮಾಡ್ತಾ... ಬೇಕಂತಲೇ ನಿಮ್ಮನ್ನ ನೀವೇ ಚಾಲ್ತಿ ಯಲ್ಲಿ ಇರಸಿ ಕೊಳ್ಳೋಕೆ ಟ್ರೈ ಮಾಡ್ತಾ ಇದ್ದೀರಿ...ಅನಿಸುತ್ತೆ, ಭಟ್ರು ರವಿ ಬೆಳಗೆರೆ ಹೊಗಳೋದು ಬೆಳಗೆರೆ ಭಟ್ಟರನ್ನು ಹೊಗಳೋದು ಮೊದಲಿಂದ ಇತ್ತು..ಅವ್ರನ್ನ ಇವರು ಗ್ರೇಟ್ ಅನ್ನೋದು ಇವರನ್ನು ಅವರು ಗ್ರೇಟ್ ಅನ್ನೋದು, ಇಬ್ಬರು ಸೇರಿಕೊಂಡು ಟಿ ಏನ್ ಸೀತರಾಮರನ್ನು ಅವ್ರನ್ನ ಎತ್ಹೊದು, ರಾಮ ಜೋಯಿಸರನ್ನು ಸಡನ್ನಾಗಿ ಗ್ರೇಟ್ ಮಾಡೋದು ಅವರದನ್ನು ಇವರು, ಇವರದನ್ನು ಅವರು "ಲಿಫ್ಟ್ ಕರಾದೆ, ಲಿಫ್ಟ್ ಕರಾದೆ,..!
ಈಗ ಯಾರೋ ನೀವೇ ಸುದ್ದಿ ಮಾತು ಅಂತ ಹೊಸ ಐಡಿಯಾ ರೂಪಿಸಿ ಕಾರ್ಯ ರೂಪಕ್ಕೆ ತರ್ತಾ ಇದ್ದೀರಿ ಅಂತ ನನಗೆ ಅನುಮಾನ.
ಅದೆಲ್ಲದರ ನಡುವೆಯರು ಏನೇ ನಿಮ್ಮ ಬಗ್ಗೆ ಬಯ್ದರು, ಎಲ್ಲೋ ಒಂದು ಕಡೆ ನಿಮ್ಮ ಪೋಸ್ಟ್ ಬಂತಾ ಅಂತ ಹುಡುಕೋ ರೀತಿ ಬರಿತೆರಪ್ಪ...
ಹೊಸ ವರ್ಷದ ಶುಭಾಶಯಗಳು...
YESGOWDA

Anonymous said...

nodrappa higher education ministru adeno anti terrorism drive antha students gallannella ottumadi madtiddare........ chennagilve idea? ABVP rally ya innondu version idena?

Anonymous said...

ನಿಮಗೆ ಹೊಸ ವರ್ಷದ ಶುಭಾಶಯ...
ಹಾಗೇ ಸ್ವಲ್ಪ ಬ್ಯಾಲೆನ್ಸ್ ಮೈಂಡ್ ಬರಲಿ.. ಬರಿ ತೆಗಳೋದೇ ಆದ್ರೆ ನೀವು ಬಹಳ ಬೇಗ ಸ್ಟೇಲ್ ಆಗಿಬಿಡ್ತೀರಿ... ಎಚ್ಚರಿಕೆ ಇದ್ದರೆ ಒಳ್ಳೇದು..