Sunday, February 22, 2009

ಹಾಸ್ಯದ ಹೆಸರಲ್ಲಿ ಅಸಹ್ಯ!

ಈಗ್ಗೆ ಕೆಲವು ದಿನಗಳ ಹಿಂದಿನ ಮಾತು. ತಮ್ಮ ಗೆರೆಗಳ ಮೋಡಿಯಿಂದ ಖ್ಯಾತಿ ಗಳಿಸಿರುವ ಪ್ರಕಾಶ್ ಶೆಟ್ಟಿ ಮಾಸ ಪತ್ರಿಕೆಯೊಂದನ್ನು ಹೊರತಂದರು. ಹೆಸರು ವಾರೆಕೋರೆ. ಕಾರ್ಟೂನ್, ನಗೆ ಬರಹಗಳಿಗೆ ಸೀಮಿತವಾಗಿರುವ ಮಾಸಿಕ. ಬಿಡುಗಡೆ ಕಾರ್ಯಕ್ರಮ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮ ವಿಭಿನ್ನವಾಗಿರಬೇಕು ಎಂಬ ಕಾರಣಕ್ಕೆ ದೇವೇಗೌಡರ ಮುಖ ಹೋಲುವ ಮುಖವಾಡವೊಂದನ್ನು ವ್ಯಕ್ತಿಯೊಬ್ಬರ ಮುಖಕ್ಕೆ ಹಾಕಿ, ಅವರಿಂದ ಪತ್ರಿಕೆಯನ್ನು ಬಿಡುಗಡೆ ಮಾಡಿಸಿದರು. ಕಾರ್ಯಕ್ರಮದ ಉದ್ದಕ್ಕೂ ಆ ಮುಖವಾಡದ ವ್ಯಕ್ತಿಯನ್ನು ನಿದ್ರೇಗೌಡ, ಮುದ್ದೇಗೌಡ ಎಂದೇ ಕಾರ್ಯಕ್ರಮ ಸಂಯೋಜಕರು ಸಂಬೋಧಿಸಿದರು.
ಮುಖವಾಡದ ವ್ಯಕ್ತಿ ಸಭೆಯಲ್ಲಿ ಪದೇ ಪದೇ ನಿದ್ರೆಗೆ ಜಾರುತ್ತಿದ್ದರು. ಅವರನ್ನು ಎಚ್ಚರಗೊಳಿಸುವುದೇ ಬಹುದೊಡ್ಡ ಕೆಲಸವೆಂಬಂತೆ ಸಂಯೋಜಕರು ನಟಿಸಿದರು. ಆ ವ್ಯಕ್ತಿ ಪತ್ರಿಕೆಯನ್ನು ಬಿಡುಗಡೆ ಮಾಡಿದ ಮರುಕ್ಷಣವೇ ನಿದ್ರೆಗೆ ಜಾರಿದರು.
ಇಂತಹದೊಂದು ಪ್ರಯತ್ನ ಮೇಲ್ನೋಟಕ್ಕೆ ವಿಭಿನ್ನ, ಕ್ರಿಯೇಟೀವ್ ಎನ್ನಿಸಿಬಿಡಬಹುದು. ಆದರೆ ಇದು ನಿಜವಾಗಿಯುಊ ಸೃಜನಶೀಲವಾಗಿತ್ತೇ ಎಂಬುದು ಪ್ರಶ್ನೆ.
ದೇವೇಗೌಡರು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆದಾಗಿನಿಂದ ಅವರನ್ನು ನಿದ್ರೆಗೆ ಹಾಗೂ ಮುದ್ದೆಗೆ ಸಮೀಕರಿಸಿ ನೋಡುವ ಚಾಳಿ ಮಾಧ್ಯಮಗಳಿಗೆ ಅಂಟಿಕೊಂಡಿದೆ. ವಿಧಾನಸಭೆ, ಲೋಕಸಭೆ ಹಾಗೂ ಬಹಿರಂಗ ಸಭೆಗಳಲ್ಲಿ ದೇವೇಗೌಡರು ನಿದ್ರೆ ಮಾಡುತ್ತಾರೆ ಎಂಬರ್ಥದ ನೂರಾರು ಚಿತ್ರಗಳು, ವರದಿಗಳು, ಕಾರ್ಟೂನ್ ಗಳು ಮಾಧ್ಯಮದಲ್ಲಿ ಬಂದಿವೆ. ಪ್ರಕಾಶ್ ಶೆಟ್ಟಿಯೂ ಇದಕ್ಕೆ ಹೊರತಲ್ಲ. ತಮ್ಮ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾಡಿದ್ದು ಅದನ್ನೇ.
ಒಂದು ಕ್ಷಣ ಹೀಗೂ ಯೋಚನೆ ಮಾಡಿ ನೋಡಿ.
ದೇವೇಗೌಡರಿಗೆ ಈಗ 75 ದಾಟಿದೆ. 1960 ರ ದಶಕದಿಂದ ರಾಜಕಾರಣದಲ್ಲಿದ್ದಾರೆ. ಅನೇಕ ಬಾರಿ ಚುನಾವಣೆ ಗೆದ್ದಿದ್ದಾರೆ, ಹಾಗೆ ಸೋತಿದ್ದಾರೆ ಕೂಡಾ. ಮುಂದೆಯುಊ ಚುನಾವಣೆಗೆ ನಿಲ್ಲುವವರಿದ್ದಾರೆ. ಒಂದು ದಿನ ಬೆಂಗಳೂರಿನಲ್ಲಿದ್ದರೆ, ನಾಲ್ಕು ದಿನ ರಾಜ್ಯದ ವಿವಿಧ ಊರುಗಳಲ್ಲಿ ಅಲೆಯುತ್ತಿರುತ್ತಾರೆ. ಎರಡು ದಿನಗಳ ಹಿಂದೆ ಅವರು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರು. ಒಂದು ವಾರದ ಹಿಂದೆ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಸಿದರು. ತೃತೀಯ ರಂಗ ಸ್ಥಾಪಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಚರ್ಚೆ ನಡೆಸಿದರು.
ಕಳೆದ ಉಪ ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಿದರು. ಪ್ರಚಾರ ಮುಗಿಸಿ ರಾತ್ರಿ 1 ಗಂಟೆಗೆ ಮನೆಗೆ ಮರಳಿದರೆ, ಮಾರನೆ ದಿನ 8 ಗಂಟೆಗೆ ಪತ್ರಿಕಾ ಗೋಷ್ಠಿ! ಅವರ ದಿನಚರಿ ಆರಂಭವಾಗುವುದು ಬೆಳಗ್ಗೆ ಐದು ಗಂಟೆಗೆ. ಪೂಜೆ ಮುಗಿಸಿಕೊಂಡು, ಒಂದು ರಾಶಿ ಮಾತ್ರೆಗಳನ್ನು ಗಂಟಲಿಗಿಳಿಸಿ ಕಾರು ಹತ್ತಿ ಹೊರಟುಬಿಡುತ್ತಾರೆ. ಈಗ ಹೇಳಿ ಅವರು ನಿಜ ನಿದ್ರೇಗೌಡರೆ?
'ಅವರು ರಾಜಕೀಯವನ್ನೇ ಊಟ ಮಾಡುತ್ತಾರೆ, ಉಸಿರಾಡುತ್ತಾರೆ. ಅವರು 24-ಗಂಟೆ ರಾಜಕಾರಣಿ' ಎಂದು ಮಾಧ್ಯಮದವರು ಕರೆಯುತ್ತಾರೆ. ಆದರೆ ಇದೇ ಮಾಧ್ಯಮ ಅವರನ್ನು ನಿದ್ರೇಗೌಡ ಎಂದೂ ಪದವಿ ನೀಡುತ್ತಾರೆ! 24-ಗಂಟೆ ರಾಜಕಾರಣಿ ನಿದ್ರಿಸುವುದುಂಟೆ?
ಆದರೆ ಇದೇ ಜನ, ವಾಜಪೇಯಿ ಅಥವಾ ಅಡ್ವಾನಿ ಸಭೆಗಳಲ್ಲಿ ಕಣ್ಣು ಮುಚ್ಚಿ ಕುಳಿತಿದ್ದರೆ, ಅದನ್ನು ಧ್ಯಾನ, ಆಲೋಚನೆ ಎಂದು ಬಿಂಬಿಸುತ್ತಾರೆ. ಮಾಧ್ಯಮ ಕೇಂದ್ರಗಳಲ್ಲಿ ಬಹಳ ಕಾಲದಿಂದ ಆಯಕಟ್ಟಿನ ತಾಣಗಳಲ್ಲಿ ಕುಳಿತಿರುವ ಒಂದು ವರ್ಗಕ್ಕೆ ಸೇರಿದ ಕೆಲವರು ಇಂತಹ ಸುಳ್ಳು ಧೋರಣೆಗಳನ್ನು ಸಾಮಾನ್ಯರ ಮನಸ್ಸಿನಲ್ಲಿ ಬಿತ್ತಲು ಕಾರಣವಾದರು.
ನಗೆ ಚಟಾಕಿ(?)
ಕೆಲವು ನಗೆ ಬರಹಗಾರರು ಪ್ರತಿ ವರ್ಷ ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ಹಾಸ್ಯ ಕಾರ್ಯಕ್ರಮ ನಡೆಸುತ್ತಾರೆ. ಅಲ್ಲಿ ಕೇಳಿ ಬರುವ ಸಾಕಷ್ಟು ನಗೆ ಚಟಾಕಿಗಳು ಪೂರ್ವಗ್ರಹದಿಂದ ತುಂಬಿಕೊಂಡಂತಹವೆ. ಒಂದು ಉದಾಹರಣೆ ಇಲ್ಲಿದೆ: (ಮಾಸ್ಟರ್ ಹಿರಣ್ಣಯ್ಯ ನಿರೂಪಿಸಿದ್ದು) "ಸೋನಿಯಾ ಗಾಂಧಿ ಗಂಡ ಸತ್ತ ಎಷ್ಟೋ ವರ್ಷಗಳ ನಂತರ ಬಳ್ಳಾರಿಗೆ ಬಂದು ಚುನಾವಣೆಗೆ ನಿಂತರು. ಪ್ರಚಾರ ಸಭೆಯಲ್ಲಿ ಹರಕು ಮುರುಕು ಕನ್ನಡದಲ್ಲಿ ಮಾತನಾಡುತ್ತ, 'ದೇಶಕ್ಕಾಗಿ ನನ್ನ ಅತ್ತೆಯನ್ನು ಕಳೆದುಕೊಂಡೆ. ಗಂಡನನ್ನೂ ಕಳೆದುಕೊಂಡೆ...ಈಗ ನೀವೇ ಗತಿ' ಎಂದು ನೆರೆದಿದ್ದ ಸಾವಿರಾರು ಗಂಡಸರನ್ನು ಕೋರಿಕೊಂಡರು. ಒಂದು ಹೆಣ್ಣು ಒಂದು ಗಂಡನನ್ನು ಸಂಭಾಳಿಸುವುದೇ ಕಷ್ಟ. ಹೀಗಿರುವಾಗ ಸಾವಿರಾರು ಗಂಡಸರನ್ನು...? ನಂತರ ಮಗಳು ಪ್ರಿಯಾಂಕ ಗಾಂಧಿ ಮಾತನಾಡಲು ಬಂದರು. ಅವರು 'ದೇಶಕ್ಕಾಗಿ ನಮ್ಮಜ್ಚಿ ಪ್ರಾಣ ತ್ಯಾಗ ಮಾಡಿದರು. ಅಪ್ಪ ಕೂಡ ಶತ್ರುಗಳಿಗೆ ಬಲಿಯಾದರು. ಈಗ ನಮ್ಮಮ್ಮನನ್ನು ಕರೆತಂದು ನಿಮ್ಮ ಮುಂದೆ ನಿಲ್ಲಿಸಿದ್ದೇನೆ. ಈಗ ನೀವೇ ಗತಿ.."
ಇದು ತುಂಬಿದ ಸಭೆಯಲ್ಲಿ ಹಿರಣ್ಣಯ್ಯ ಹೇಳಿದ ನಗೆ ಚಟಾಕಿ (?). ಇದನ್ನು ಅಶ್ಲೀಲ ಅನ್ನಬೇಕೋ, ವಿಕೃತ ಮನಸ್ಸಿನ ಅಭಿವ್ಯಕ್ತಿ ಎನ್ನಬೇಕೋ?
ಅದು ಕೇವಲ ನಗೆಹನಿ, ಅದಕ್ಕೆ ಅಷ್ಟು ಮಹತ್ವ ನೀಡುವ ಅಗತ್ಯವಿಲ್ಲ ಎಂದು ಮುಊದಲಿಸುವವರು ಅನೇಕರಿದ್ದಾರೆ.
ಇದೇ ಹಿರಣ್ಣಯ್ಯನ ಇನ್ನೊಂದು ಉದಾಹರಣೆ ನೋಡಿ - "ಈ ದೇಶದಲ್ಲಿ ಸರಕಾರ ಎಲ್ಲಿದೆ? ಪಾರ್ಲಿಮೆಂಟ್ ಭವನದ ಮೇಲೆ ದಾಳಿ ನಡೆಸಿದವನನ್ನ ಗಲ್ಲಿಗೇರಿಸಿ ಅಂತ ಸುಪ್ರಿಂಕೋರ್ಟ್ ಹೇಳಿದರೂ, ಒಬ್ಬನನ್ನ ಗಲ್ಲಿಗೇರಿಸೋಕೆ ಆಗಿಲ್ಲ. ಇನ್ನು ಸರಕಾರ ಎಲ್ಲಿದೆ. ಈಗ ಇಲ್ಲಿ ಮಾಲೆಗಾಂವ್ ಗೆ ಬಂದವ್ರೆ. ಪಾಪ ಆ ಸಾಧ್ವಿಯನ್ನ ಹಿಡಿಯೋಕೆ!"
ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದವನನ್ನು ಗಲ್ಲಿಗೇರಿಸಿಲ್ಲ ಎಂದು ಆರೋಪಿಸುವ ಹಿರಣ್ಣಯ್ಯ, ಮಾಲೆಗಾಂವ್ ಪ್ರಕರಣದಲ್ಲಿ ಸಾಧ್ವಿಯನ್ನು ಪಾಪ, ಅಮಾಯಕಿ ಎನ್ನುವ ಫರ್ಮಾನು ಹೊರಡಿಸುತ್ತಾರೆ. ಈಗ ಹೇಳಿ ಇವರೆಲ್ಲ ಪೂರ್ವಗ್ರಹ ಪೀಡಿತರಲ್ಲವೆ?

12 comments:

parasurama kalal said...

’ಹಾಸ್ಯದ ಹೆಸರಲ್ಲಿ ಅಸಹ್ಯ’ ಬರಹ ಚೆನ್ನಾಗಿದೆ. ದೇವೇಗೌಡರನ್ನು, ಸೋನಿಯಾಗಾಂಧಿಯನ್ನು ಗುರಿಯಾಗಿಸಿಕೊಂಡು ಕಳೆದ ಚುನಾವಣೆಯಲ್ಲಿ ನೂರಾರು ಎಸ್.ಎಂ.ಎಸ್.ಗಳು ಹಾಸ್ಯದ ಹೆಸರಲ್ಲಿ ಅತ್ಯಂತ ಅಸಹ್ಯಕರವಾಗಿ ಕಾಣಿಸಿಕೊಂಡವು. ಒಂದು ವರ್ಗ ಚುನಾವಣೆಯ ತಂತ್ರವಾಗಿ ಇದನ್ನು ಬಳಿಸಿತು.
ಭಾರತೀಯ ರೈಲ್ವೇಯನ್ನು ಒಂದು ಹಳಿಯ ಮೇಲೆ ತಂದು ಗರೀಬ್ ರಥವನ್ನಾಗಿಸಿದ ಲಾಲೂ ಇವರ ಪಾಲಿಗೆ ಯಾವಾಗಲೂ ಬಫೂನ್
ಸೋನಿಯಾಗಾಂಧಿಯಂತೂ ತಪ್ಪು ತಪ್ಪಾಗಿ ಮಾತನಾಡುವ ಬೆಪ್ಪೆ.
ಇವರು ಕುಳಿತರೂ, ನಿಂತರೂ ಎಲ್ಲವೂ ತಪ್ಪೇ ತಪ್ಪು.
ಸರ್ದಾಜಿಯವರಿಗಿಂತಲೂ ಅತಿ ಹೆಚ್ಚು ಇಂತಹ ಅಸಹ್ಯಕರ ಹಾಸ್ಯಕ್ಕೆ ಇವರು ತುತ್ತಾಗಿದ್ದಾರೆ. ಬೇರೆಯವರು ಕಣ್ಣು ಮುಚ್ಚಿದರೆ ಧ್ಯಾನ, ಇವರು ಕಣ್ಣುಮುಚ್ಚಿದರೆ ನಿದ್ರೆ ಎನ್ನುವ ಒಂದು ಜನಾಂಗದ ಕಣ್ಣಿಗೆ ಮಣ್ಣು ತೂರುವ ಸ್ಥಾಪಿತ ಹಿತಾಶಕ್ತಿಗಳ ಹಾಸ್ಯ ಪ್ರಜ್ಞೆಯನ್ನು ಸಂಸ್ಕೃತಿಹೀನರ ಅಸಹ್ಯ ಪ್ರಜ್ಞೆ ಎಂದು ಛೀ ಛೀ ಎಂದು ಅಸಹ್ಯಪಟ್ಟುಕೊಳ್ಳುವ ಮೂಲಕವೇ ಇವರಿಗೆ ಛೀಮಾರಿ ಹಾಕಬೇಕು.
- ಪರುಶುರಾಮ ಕಲಾಲ್

Anonymous said...

ದೇವೇಗೌಡರನ್ನು ಖಳನಾಯಕರೆಂದು ಬಿಂಬಿಸುವುದು ಒಂದು ವರ್ಗಕ್ಕೆ ಅಗತ್ಯವಾಗಿದೆ. ಅದು ಅಶೋಕ್ ಖೇಣಿಯಂಥವರಿಂದ ಪ್ರಸಾದ ಸ್ವೀಕರಿಸುವ, ಯಡಿಯೂರಪ್ಪನವರಿಂದ ಸೈಟ್ ಗಿಟ್ಟಿಸಿಕೊಳ್ಳುವ ವರ್ಗ. ಇದರಲ್ಲಿ ಮಾಧ್ಯಮದವರೂ ರಾಜಕಾರಣಿಗಳೂ ಇದ್ದಾರೆ. ಅಂದು ಗೌಡರ ವಿರುದ್ಧ ವಿಜಯಕರ್ನಾಟಕ ಎಸ್ಸೆಮ್ಮೆಸ್ ಕ್ಯಾಂಪೇನ್ ನಡೆಸಿದ್ದು ನೆನಪಿದೆಯೆ ?
- ಸಂಗೀತ

Srinidhi said...

ಎಲ್ಲರಿಗಿಂತ ದೊಡ್ಡ ಪೂರ್ವಾಗ್ರಹ ಪೀಡಿತರು ನೀವು! ನಿಮಗೆ ಹಿಂದೂಗಳನ್ನು, ಆರ್ ಎಸ್ ಎಸ್ ನವರನ್ನು, ವಿಜಯ ಕರ್ನಾಟಕ ಪತ್ರಿಕೆಯನ್ನು, ಕೆಲ ಪತ್ರಕರ್ತರನ್ನು, ಬಿಜೆಪಿ ಸರಕಾರಗಳನ್ನು, ಮಠ ಮಂದಿರಗಳನ್ನು, ಯಡಿಯೂರಪ್ಪನವರನ್ನು, ಭೈರಪ್ಪನವರನ್ನು ಟೀಕಿಸುವುದೇ ಕೆಲಸ! ನಿಮ್ಮ ಇಷ್ಟು ದಿನಗಳ ಬರಹದಲ್ಲಿ ಇಂತಹ ಒನ್ ಸೈಡೆಡ್ ಟೀಕೆ ಮಾಡಿದ್ದು ಬಿಟ್ಟರೆ ಬೇರೇನು ಕಿಸಿದಿದ್ದಿರಿ?? ಎಲ್ಲರಿಗಿಂತ ದೊಡ್ಡ ಪೂರ್ವಾಗ್ರಹ ಪೀಡಿತರು ನೀವು!! ನಿಮಗಿಂತ ಹಿಪೊಕ್ರೆಟ್ಸ್ ಬೇಕೇ?? ಶೇಮ್ ಶೇಮ್!! ಇನ್ನಾದರೂ ವಸ್ತುನಿಷ್ಠವಾಗಿ ಬರೆಯೋದು ಕಲಿಯಿರಿ.

Anonymous said...

ಸುದ್ದಿ ಮಾತು ತಂಡಕ್ಕೆ ನಮಸ್ಕಾರ..
ಪ್ರಕಾಶ್ ಶೆಟ್ಟಿ ಅವರ ಪ್ರತಿಭೆಯ ಎದುರು ನಿಮ್ಮದೊಂದು ವ್ಯರ್ಥ ಪ್ರಲಾಪ..
ಸ್ವಾಮೀ ನೀವೊಮ್ಮೆ ಕೇರಳದ ಚಾನಲ್ಲುಗಳನ್ನು ಗಮನಿಸಿ ನಿಮ್ಮದೇ ಎಡಪಂಥೀಯ ವಿಚಾರ ದಾರೆಯುಳ್ಳ ಸರಕಾರದ ಮುಖ್ಯಮಂತ್ರಿಯನ್ನು ಎದುರು ಕೂರಿಸಿ ಅವರದ್ದೇ ರೂಪ ಸದೃಶ್ಯ ಉಳ್ಳ ಹತ್ತರಿಂದ ಹನ್ನೆರಡು ಜನ ಮಿಮಿಕ್ರಿ ಮಾಡಿದರೆ ನೆರೆದಿರುವ ಲಕ್ಷಾಂತರ ಜನ ಮುಖ್ಯಮಂತ್ರಿಯನ್ನೂ ಒಳಗೂಡಿ ನಕ್ಕು ಹಗುರಾಗುತ್ತಾರೆ.. ಕರ್ನಾಟಕದಲಿಇ ಮಾತ್ರ ನಿಮ್ಮಂತವರಿಗೆ ಇದು ಅಪಹಾಸ್ಯ ಅನ್ನಿಸುತ್ತದೆ..
ನಿಮ್ಮನ್ನು ನೋಡಿ ನಗಬೇಕೆನಿಸುತ್ತದೆ.. ಆದ್ರೆ ಅದನ್ನೂ ನೀವು ಅಪಹಾಸ್ಯ ಅಂತಿರೇನೋ.. ಹಾಗಾಗಿ ಅಳುತ್ತಿದ್ದೇನೆ..
ಪ್ರೀತಿಯಿಂದ
ಶೈಲೇಶ್ ಉಜಿರೆ.

Anonymous said...

ದೇವೇಗೌಡರನ್ನು ಖಳನಾಯಕನಾಗಿ ಬಿಂಬಿಸಲು ಮಾಧ್ಯಮ ಮತ್ತು ಅದರಲ್ಲಿನ ಕಂತ್ರಿಗಳು ಯಾವಾಗಲೋ ಯಶಸ್ವಿಯಾಗಿದ್ದಾರೆ, ಪದ್ಮನಾಭ ನಗರದ ವೃದ್ದ ಮಾಂತ್ರಿಕ ಅಂತ ಹೆಡ್ಡಿಂಗು ಕೊಟ್ಟು ಎದ್ದು ಹೋದವರಿದ್ದಾರೆ, ದೇವೇಗೌಡರು ಏನು ಹೇಳಿದರು, ಅದಕ್ಕೇನು ಮಾಡಬೇಕು ಅನ್ನೋ ಐಡಿಯಾ ಕೊಡಲಿಕ್ಕೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಲು ಕ್ಯಾಬಿನೆಟ್ ದರ್ಜೆ ಮಾದ್ಯಮ ಸಲಹೆಗಾರರಿದ್ದಾರೆ, ಮತ್ತೆ ಮತ್ತೆ ದೇವೇಗೌಡರನ್ನು ಕೆರಳಿಸುವ ಯಾ ದೇವೇಗೌಡರನ್ನು ಬೈಯುವ ಸೌಂಡ್ ಬೈಟ್ ತೆಗೆದು ಲೈವ್ ಮಾಡುವ "ಕಿನ್ನರ" ವರದಿಗಾರರಿದ್ದಾರೆ, ದೇವೇಗೌಡರಿಗೆ ಛೀಮಾರಿ, ಚಪ್ಪಲಿ ಸೇವೆ ಅಂತೆಲ್ಲ ಬರೆದು
"ಆತ್ಮ ರತಿ" ಯಲ್ಲಿ ಬೀಗಿದವರಿದ್ದಾರೆ, ದೇವೇಗೌಡ ಅವ್ರ ಮಕ್ಕಳಿಗೆ ಪಿಂಡ ಹಾಕ್ದ ನೋಡ್ರೋ........... ಅಂಥ ಪಿಟಿಂಗು ಇಟ್ಟವರು ಅವ್ರೆ... ಹೀಗೆ ನೂರು ಮಂದಿ ನೂರು ಮಾತು ಆಡಿದವರಿದ್ದಾರೆ, ಆದ್ರೆ ದೇವೇಗೌಡ ಹಾಸನದಿಂದ, ಕನಕಪುರದಿಂದ, ಕೊಪ್ಪಳದಿಂದ ಕಡೆಗೆ ಬಳ್ಳಾರಿಯಿಂದ ಎಲ್ಲಿಂದಲೋ ಎದ್ದು ಬರುತ್ತಲೇ ಇರ್ತಾರೆ... NO BODY CAN STOP HIM....!
ಪ್ರಕಾಶ ಶೆಟ್ಟಿ ಗೆರೆಗಳನ್ನು ಇಂಥಹ ವಿಕೃತಿಗೆ ಬಳಸಿಕೊಂಡರೆ ಅತ ಅಥವಾ ಅತನಂತವರು ಬೇರೆ ಬೇರೆ ಅಂಗಗಳಲ್ಲಿ, ಮಾರ್ಗಗಳಲ್ಲಿ ನಗಬೇಕು ಅಷ್ಟೆ ಬೋಳು ತಲೆಯ ಮೇಲೆ ಕೂದಲು ಬಿಡಿಸೋ ಕೆಲಸ "ಎರಡಕ್ಕೆ ಹೋಗೂ ಮಗು ಮಾಡುತ್ತೆ..." ಅದಕ್ಕೆ ಪ್ರಕಾಶ್ ಶೆಟ್ಟಿ ಬೇಕಿಲ್ಲ.
ಕಾರ್ಟೂನ್ ಮಾಂತ್ರಿಕ ಪ್ರಜಾವಾಣಿಯ ಪಿ ಮಹಮ್ಮದ್ ಕಾಲ ಬುಡಕ್ಕು ತಾಗದ ತರ್ಲೆಗಳು ಹೀಗೆಲ್ಲ ಮಾಡೋದು ಅನೆ ನಡೆವ ಹಾದಿಯಲ್ಲಿ ಡಾಬರ್ ಮ್ಯಾನ್ ನಾಯಿಗಳು ಬೊಗಳಿದ ಹಾಗೆ ಕಾಣುತ್ತೆ ಅಲ್ಲವಾ... RAW. ಗೌಡ

eshakumar h n said...

ಪ್ರಕಾಶ್ ಶೆಟ್ಟಿ ಅವರ ಹುಚ್ಚಾಟದಲ್ಲಿ ಕಲೆಯ ಶ್ರೆಸ್ತ್ತಥೆಯನು ಗುರುತಿಸಿರುವ ಸಹೃದಯ ಪೂರ್ವಗ್ರಹ ಪೀಡಿತರು ನೀಜಕ್ಕು ನಿವು ಶ್ರೀನಿಧಿಯವರೇ . ತಾವು ಮಾಡುವ ಅಣಕವನ್ನೇ ಸೃಜನ ಶೀಲತೆ ಎಂದು ತಿಳಿದು ಅದನ್ನು ಹೆಮ್ಮೆಯಿಂದ ಜಗತ್ತಿಗೆ ತೋರಿಸಲು ಹೊರಟಿರುವ ಶೆಟ್ಟಿಯವರ ಮಾನಸಿಕ ಸ್ಥಿತಿಯ ಬಗ್ಗೆ ನನಗೆ ಕಳವಳ.ಮಾದ್ಯಮದಲಿ ಇವೆಲ್ಲ ಮಾಮೂಲು ಎನುವಂತೆ ಅವರು ತಮ್ಮ ತಿಕ್ಕಲುತನವನು ಕ್ರಿಯಾತ್ಮಕವಾಗಿ ತೋರಿಸಿದ್ದಾರೆ.ಗೌಡರ ನಿದ್ದೆ ಮುದ್ದೆಗಳು ಮಾತ್ರ ಇಂಥವರ ಕಣ್ಣಿಗೆ ಕಾಣೋದು ಪಾಪ!ಅವರ ಜಾಗರೂಕತೆಗೆ ನನ್ನ ಅಭಿನಂದನೆಗಳು.

Sudhi said...

(---ಎಲ್ಲಿಂದಲೋ ಎದ್ದು ಬರುತ್ತಲೇ ಇರ್ತಾರೆ... NO BODY CAN STOP HIM....----)
ಹ್. ಎದ್ದು ಬ೦ದು ಮಾಡಿದ್ದು ಏನು?.. ನೋಡಿ ಯಾರ್ ಬಗ್ಗೆ ಮಾತಾಡ್ತಾರೆ....ಲಾಲು ಅ೦ತೆ...ಎಲ್ಲಾ ಹಗರಣಗಳನ್ನು ಮರೆತೆ ಬಿಟ್ರಾ....ನಿಮ್ಮ೦ಥವರು ನಾಳೆ ದಿನ ಮು೦ಬೈನಲ್ಲಿ ಶೂಟ್ ಮಾಡಿ ಬಾ೦ಬ್ ಹಾಕಿರೋ ಆ ಹೇಡಿ ’ಕಸಬ್’ ಸ್ವಲ್ಪ ಒಳ್ಳೆ ಕೆಲ್ಸ ಮಾಡಿದ್ರು ಹೊಗಿ ಎ೦ಜಲು ನೆಕ್ತೀರಾ...ಎಚ್ಚೆತ್ತು ಕೊಳ್ಳಿ.... ನಾನೆನು ಯೆಡ್ಡಿ..ಚೆಡ್ಡಿ...ರೆಡ್ಡಿ ಕಡೆಯವನು ಅಲ್ಲಾ....ಈ commentಗೆ ಬಣ್ಣ ಹಚ್ ಬೇಡಿ!

Strightforward said...

ವ್ಯಂಗ್ಯ ಚಿತ್ರಗಾರರಿಗೆ ಎಲ್ಲವೂ ವ್ಯಂಗ್ಯ ವಾಗಿ ಕಾಣುತ್ತದೆ. ನಿಮಗ್ಯಾಕೆ ತಲೆ ಬಿಸಿ. ಶ್ರೀ ಮಾನ ದೇವೇ ಗೌಡರೇ ತಲೆ ಕೆಡಿಸಿ ಕೊಂಡಿಲ್ಲ ನಿಮಗ್ಯಾಕೆ ಬೇಜಾರು.
ಧನ್ಯವಾದ.

parasurama kalal said...

ಸುಧಿಯವರೆ ಸ್ವಲ್ಪ ನಿಧಾನವಾಗಿ ಯೋಚಿಸಿ, ಯಾಕೇ ಅಷ್ಟು ಅವಸರ.
ಯಾವ ಹಗರಣವನ್ನು ನಾವು ಮರೆತಿಲ್ಲ ಹಾಗೂ ಅವುಗಳನ್ನು ಇಲ್ಲಿ ಯಾರು ಸಮರ್ಥಿಸಿಲ್ಲ.
’ಕಸಬ್ ನಾಳೇ ಸ್ವಲ್ಪ ಒಳ್ಳೇ ಕೆಲಸ ಮಾಡಿದರೂ ಹೋಗಿ ಎಂಜಲು ನೆಕ್ಕುತ್ತೀರಿ..’ ಯಾವದಕ್ಕೂ ಸಂಬಂಧವಿಲ್ಲದ ಇಂತಹ ಹೇಳಿಕೆಗಳೇ ಅಸಹ್ಯ ಹಾಗೂ ಹಾಸ್ಯಸ್ಪದ ಎನಿಸಿಕೊಳ್ಳುತ್ತವೆ. ನೀವು ಯಡ್ಡಿ, ಚೆಡ್ಡಿ, ರೆಡ್ಡಿ ಕಡೆ ಅಲ್ಲ ಎಂದೇಕೆ ಅಂದು ಕೊಳ್ಳುತ್ತೀರಿ. ಬಣ್ಣ ಹಚ್ಚಿಕೊಂಡೆ ಬಣ್ಣ ಹಚ್ಚಬೇಡಿ ಎನ್ನುತ್ತೀರಿ?
ನಿಮ್ಮ ಬರಹವನ್ನು ನೀವೇ ಇನ್ನೊಮ್ಮೆ ಓದಿ...
- ಪರಶುರಾಮ ಕಲಾಲ್

Anonymous said...

mr.parashuram, plz do your own business. ur comment on every sudimaatu blog itself shows ur a paper dog. plz do good journalism, make people oriented news, expose ministers, mla's scandals. ur not doing like above mentioned works only critising and writing some comment is not good for society and u can not forgot your responsibilities flowting comments in blog. plz it is a request

Anonymous said...

parasu yenri nimm avasthe obba lecturer agi nimma vadha adbutha

Anonymous said...

ಸುದ್ದಿ ಮಾತಿನ ಬುದ್ದಿಗೇಡಿಗಳೇ,
ನಿಮಗಿಂತ ಪೂರ್ವಗ್ರಹ ಪೀಡಿತರು ಇರಲು ಸಾಧ್ಯವೆ? ಪೂರ್ವಗ್ರಹ ಪೀಡಿತರಲ್ಲೆಲ್ಲ ನೀವೇ ಚಕ್ರವರ್ತಿಗಳು