ಪಾರ್ಲಿಮೆಂಟ್ ಮೇಲೆ ಭಗವಾಧ್ವಜ ಹಾರಿಸಲು ಹೊರಟವರು ಈಗ ಕ್ಷಮೆಯ ಮಾತನಾಡುತ್ತಿದ್ದಾರೆ. ಭಗವಾಧ್ವಜವನ್ನು ಹಿಂದೂ ರಾಷ್ಟ್ರ ಸಂಕೇತ ಎಂದು ಭಾವಿಸಿ ಹಾಗೆ ಹೇಳಿಕೆ ಕೊಟ್ಟಿದ್ದೆವು. ನಾಡಿನ ಹಿರಿಯರು, ಅದರಲ್ಲೂ ಮುಖ್ಯವಾಗಿ ಚಿದಾನಂದ ಮೂರ್ತಿಯಂತಹವರು ಬೇಸರ ವ್ಯಕ್ತಪಡಿಸಿದ್ದರಿಂದ ಕ್ಷಮೆ ಕೇಳಿದರಂತೆ.
ಈ 'ಕ್ಷಮೆ' ನಾಟಕದಿಂದ ಅವರಿಗೇನೂ ಲಾಭವಿಲ್ಲ. ಪಕ್ಷದ ಇತರರ ಒತ್ತಡಕ್ಕೆ ಮಣಿದು ಕ್ಷಮೆಯ ಮಾತನಾಡಿದ್ದಾರೆ. ಅವರು ಆಳದಲ್ಲಿ ಈ ಹೊತ್ತಿಗೂ ಅವರ ಹೇಳಿಕೆಗೆ ಬದ್ಧರು. ಮೇಲಾಗಿ ಪತ್ರಕರ್ತರ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸದೆ, ಜಾರಿಕೊಂಡ ಕಾರಣ ಇದು ಕೇವಲ 'ನಾಟಕ' ಎಂಬ ಸಂದೇಶವನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಆ ಮೂಲಕ ಮರಾಠಿ ಭಾಷಿಕರಿಗೆ ರವಾನಿಸಿದ್ದಾರೆ.
ನಾಡಿನ ಮುಖ್ಯಮಂತ್ರಿ ಮೊದಲು ಬೆಳಗಾವಿ ಘಟನೆ ಬಗ್ಗೆ ತನಗೆ ಮಾಹಿತಿಯೇ ಇಲ್ಲ. ಮಾಹಿತಿ ತರಿಸಿಕೊಂಡು ಪ್ರತಿಕ್ರಿಯಿಸುತ್ತೇನೆ ಎಂದರು. ನಂತರ ಪಕ್ಷದ ಅಧ್ಯಕ್ಷರು ಉತ್ತರಿಸುತ್ತಾರೆ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದರು. ಕನ್ನಡ ಪರ ಸಂಘಟನೆಗಳು ಸುರೇಶ್ ಅಂಗಡಿಗೆ ಟಿಕೆಟ್ ಕೊಡಬೇಡಿ ಎಂದಾಗ, 'ಅದು ನಮ್ಮ ಪಕ್ಷದ ವಿಚಾರ. ಅದನ್ನು ಕೇಳೋಕೆ ಅವರ್ಯಾರು?' ಎಂದು ಪ್ರಶ್ನೆ ಹಾಕಿದರು.
"ಆಯ್ತು ಸ್ವಾಮಿ. ಆತ ನಿಮ್ಮ ಪಕ್ಷದ ನಾಯಕ. ನೀವು ಟಿಕೆಟ್ ಕೊಟ್ಟಿದೀರಿ. ನೀವೇ ಓಟು ಹಾಕಿ ಗೆಲ್ಲಿಸಿ. ಈ ನಾಡಿನ ಜನತೆಯನ್ನು ಓಟಿಗಾಗಿ ಅಂಗಲಾಚಬೇಡಿ'' ಎನ್ನಬೇಕಾಗುತ್ತದೆ. ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ಇಲ್ಲದ ಮುಖ್ಯಮಂತ್ರಿ ಮಾತ್ರ ಹೀಗೆ ಮಾತನಾಡಬಲ್ಲ. ಕನ್ನಡ ಪರ ಸಂಘಟನೆಗಳು ಸುರೇಶ್ ಅಂಗಡಿಯನ್ನು ಅಭ್ಯರ್ಥಿ ಕಣದಿಂದ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿವೆ. ಇಲ್ಲವಾದಲ್ಲಿ ನಾಡಿನ ಎಲ್ಲೆಡೆ ಬಿಜೆಪಿ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕೆಗಳು:
ಈ ಸಂದರ್ಭದಲ್ಲಿ ಪತ್ರಿಕೆಗಳು ವಹಿಸಿದ ಪಾತ್ರವನ್ನು ನೆನಸಿಕೊಳ್ಳಲೇಬೇಕು. ಅಂಗಡಿ ಕ್ಷಮೆ (ನಾಟಕವಾದರೂ) ಕೇಳುವಂತೆ ಮಾಡುವಲ್ಲಿ ಕನ್ನಡ ಪ್ರಭ, ವಿಜಯ ಕರ್ನಾಟಕ, ಉದಯವಾಣಿ ಉತ್ತಮ ಪಾತ್ರ ನಿರ್ವಹಿಸಿದವು. ಸತತ ನಾಲ್ಕುದಿನಗಳ ಕಾಲ ಕನ್ನಡ ಪ್ರಭ, ಸುರೇಶ್ ಅಂಗಡಿ ಹಾಗೂ ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸಿತು.
ಆದರೆ ವಿಚಿತ್ರ ನೋಡಿ, ಭಗವಾಧ್ವಜ ಹಾರಿಸಬೇಕು ಎಂದು ಹೇಳಿಕೆ ನೀಡಿ ಅಪರಾಧ ಎಸಗಿದ್ದನ್ನು ನಾಲ್ಕನೇ ಪುಟದಲ್ಲಿ ಯಾವುದೋ ಸಾಮಾನ್ಯ ಘಟನೆ ಎಂಬಂತೆ ನಿರ್ಲಕ್ಷಿಸಿದ್ದ ಪ್ರಜಾವಾಣಿ, ಆತ ಕ್ಷಮೆ ಕೇಳಿದ್ದನ್ನು ಮಾತ್ರ ಮುಖಪುಟದಲ್ಲಿ ಪ್ರಕಟಿಸಿದೆ! ಇದೂ ಪತ್ರಿಕೋದ್ಯಮ!?
2 comments:
ಇನ್ನೊಂದು ವಿಷಯವನ್ನು ನೀವು ಗಮನಿಸಿಲ್ಲ ಎನಿಸುತ್ತದೆ.
ಪ್ರಜಾವಾಣಿಯೊಂದೇ ಸರಿಯಾಗಿ ವರದಿ ಮಾಡುತ್ತಿದೆ ಎಂದು ಸನ್ಮಾನ್ಯ ಸುರೇಶ್ ಅಂಗಡಿಯವರು ಹೇಳಿರುವುದನ್ನು ಆ ಪತ್ರಿಕೆಯವರು ಎಗ್ಗುಸಿಗ್ಗಿಲ್ಲದೆ ಪ್ರಕಟಿಸಿಕೊಂಡಿದ್ದಾರೆ.
ಪ್ರಜಾವಾಣಿಗೆ ಒಬ್ಬ ನಾಡದ್ರೋಹಿಯ ಸರ್ಟಿಫಿಕೇಟು ಬೇಕಿತ್ತಾ?
yaake nimma gamana vk dinda 'pv'ge shift aagideylla ?
Post a Comment