Monday, October 6, 2008

ದೀಪದ ಕೆಳಗೆ ಕತ್ತಲೆ..

ದೃಶ್ಯ 1
ನಿಮಗೆ ನೆನಪಿರಬಹುದು. ಕೆಲವು ವರ್ಷಗಳ ಹಿಂದೆ ಮೈಸೂರು ಹತ್ತಿರ ಹಂಗರಹಳ್ಳಿಯಲ್ಲಿ ಕೆಲವರು ಜೀತಕ್ಕಿದ್ದರು. ರೈತ ಸಂಘ ಹಾಗೂ ಇನ್ನಿತರೆ ಪ್ರಗತಿಪರರು ಒಮ್ಮಲೆ ದಾಳಿ ಮಾಡಿ ಸುದ್ದಿ ಬಹಿರಂಗ ಮಾಡಿದರು. ಅಂದು ಎಲ್ಲಾ ಪತ್ರಿಕೆಗಳಲ್ಲಿ ಇದ್ದ ಚಿತ್ರ - ಕಾಲಿಗೆ ಸರಪಳಿ ಸುತ್ತಿಕೊಂಡು ಕೆಲಸ ಮಾಡುತ್ತಿದ್ದ ಬಡವರದು. ಅಮಾನುಷ ಕೃತ್ಯಕ್ಕೆ ಅಂದು ಜನಸಮುದಾಯ ನೊಂದಿತ್ತು. ಆಗಿನ್ನು 24x7 ಚಾನೆಲ್ ಗಳ ಭರಾಟೆ ಇರಲಿಲ್ಲ. ಇದ್ದಿದ್ದರೆ ನಮ್ಮ ಟಿವಿ 9 ರಂಗನಾಥ್ ಭಾರದ್ವಾಜ್ ರ ಸಂಜೆ ವಿಶೇಷಕ್ಕೆ ಫುಲ್ ಮೀಲ್ಸ್.
ದೃಶ್ಯ 2
ಮೈಸೂರಿನ ಸ್ಥಳೀಯ ಪತ್ರಿಕೆಯೊಂದು ಎಲ್ಲಾ ಪತ್ರಿಕೆಗಳಂತೆ ಆ ಸುದ್ದಿಯನ್ನೂ ಪ್ರಮುಖವಾಗಿ ಪ್ರಕಟಿಸಿತ್ತು. ಕೆಲ ದಿನಗಳು ಉರುಳಿದವು. ಅದೇ ಪತ್ರಿಕೆ ಕಚೇರಿಯ ಗೋಡೆಗಳ ಮೇಲೆ ಅಲ್ಲಲ್ಲಿ ಕೆಮರಾಗಳು ಕಣ್ತೆರೆದವು. ಆ ಎಲ್ಲಾ ಕೆಮರಾಗಳು ಸೆರೆಹಿಡಿವ ದೃಶ್ಯವನ್ನು ಸನ್ಮಾನ್ಯ ಮಾಲೀಕ-ಸಂಪಾದಕರು ತಮ್ಮ ಮನೆಯಲ್ಲೇ ಕೂತು ವೀಕ್ಷಿಸುವ ವ್ಯವಸ್ಥೆ ಕೂಡ ಜಾರಿಯಾಯಿತು. ಕಚೇರಿ ವೇಳೆ ಉದ್ಯೋಗಿಗಳು ಕೆಲಸ ಮಾಡ್ತಾರೋ ಇಲ್ಲವೋ ಎಂಬುದರ ಮೇಲೆ ಕಣ್ಣಿಡಲು ಸಂಪಾದಕರು ಇಂತಹ ಯೋಜನೆ ಕಾರ್ಯರೂಪಕ್ಕೆ ತಂದಿದ್ದರು.

ಬಡವರನ್ನು ಜೀತಕ್ಕಿಟ್ಟುಕೊಂಡಿದ್ದ ಜಮೀನ್ದಾರ, ಜೀತದಾಳುಗಳು ಕಣ್ತಪ್ಪಿಸಿ ಪರಾರಿಯಾಗಬಾರದೆಂದು ಸರಪಳಿ ಬಳಸಿದರೆ, ಉದ್ಯೋಗಿಗಳು ಕೆಲಸದ ವೇಳೆ ಕಳ್ಳಾಟ ಆಡಬಾರದೆಂದು ಸಂಪಾದಕ ಕೆಮರಾ ಬಳಸಿದ್ದ. ಜಮೀನ್ದಾರನಿಗೂ, ಸಂಪಾದಕನಿಗೂ ಏನು ವ್ಯತ್ಯಾಸ?
Of course - ಇದು ಯಾವ ಪತ್ರಿಕೆಯಲ್ಲೂ ವರದಿಯಾಗಲಿಲ್ಲ. ನಂತರದ ದಿನಗಳಲ್ಲಿ ಇಂತಹದೇ ವ್ಯವಸ್ಥೆ ಜಾರಿಗೆ ಬಂದದ್ದು ವಿಆರ್ಎಲ್ ಒಡೆತನದ ವಿಜಯ ಕರ್ನಾಟಕ, ವಿಜಯ ಟೈಮ್ಸ್ ದಿನಪತ್ರಿಕೆಗಳ ಬೆಂಗಳೂರು ಕಚೇರಿಗಳಲ್ಲಿ.
ಬಹುಶಃ ಎಲ್ಲಾ ಪತ್ರಕರ್ತನಿಗೂ ಒಂದು ಪ್ರಶ್ನೆ ಕಾಡಿರುತ್ತೆ. "ಊರಿನವರ ಸಂಕಟಾನೆಲ್ಲಾ ಬರೀತೀವಿ. ಆದರೆ ನಮ್ಮ ಕತೆ ಕೇಳೋರು ಯಾರು?"
24x7 ಸುದ್ದಿ ವಾಹಿನಿಗಳು ಬಂದಾಗಿನಿಂದ, ಟಿವಿ ಪತ್ರಕರ್ತರಿಗೆ 24 ಗಂಟೆ ಕೆಲಸ. ರಾತ್ರಿ 12 ಗಂಟೆಗೆ ಪುಟಪರ್ತಿ ದಾರಿ ತಪ್ಪಿದವನಂತೆ ಕೇಂದ್ರ ಗೃಹಮಂತ್ರಿ ಶಿವರಾಜ್ ಪಾಟೀಲ್ ಬೆಂಗಳೂರಿನ ರಾಜಭವನಕ್ಕೆ ಬಂದು ಬಿಡ್ತಾನೆ. ಬಂದವನೋ ಬೇಗ ಹೋಗ್ತಾನೋ. ಇಲ್ಲಿನ ಸಚಿವರನ್ನು ಕರೆಸ್ಕೊಂಡು ಮಾತು, ಮಾತು, ಮಾತು... ನಿದ್ರೆಗೆ ಜಾರಿದ್ದ ಲಕ್ಷ್ನಣ ಹೂಗಾರ್ ಎದ್ದು ಫೋನ್ ರಿಸೀವ್ ಮಾಡಬೇಕು. ಅತ್ತ ಕಡೆ ಪ್ರಶ್ನೆ ಕೇಳೋ ಸುದ್ದಿ ವಾಚಕಿಗೆ ಉತ್ತರ ಹೇಳಬೇಕು. ಅವ ಯಾಕೆ ಬಂದಾನೆ? ರಾಜ್ಯದ ಸಚಿವರನ್ನು ತರಾಟೆಗೆ ತೆಗೆದುಕೊಂಡನೇ? ಏನು ಸಲಹೆ ನೀಡಿರಬಹುದು?
ಅಲ್ಲಾರೀ... ಒಳಗೆ ಹೋದೋರು ಇನ್ನೂ ಹೊರಗೆ ಬಂದೇ ಇಲ್ಲ. ಹೊರಗಿರೋರನ್ನು ಒಳಗೆ ಹೋಗೋಕೆ ಬಿಟ್ಟಿಲ್ಲ. ಅಂದ್ರೂ ಇಷ್ಟೆಲ್ಲಾ ಪ್ರಶ್ನೆಗೆ ಉತ್ತರ ಕೊಡಬೇಕು. ಪಾಪ ಸುದ್ದಿ ವಾಚಕಿ ತಾನೆ ಏನು ಮಾಡಿಯಾಳು, ಆಕೆನೂ ತನ್ನ ಪಾಲಿನ ಅರ್ಧಗಂಟೆ ಮುಗಿಸಬೇಕಲ್ಲ. ಇನ್ನು ಪ್ರಿಂಟ್ ಪತ್ರಿಕೋದ್ಯಮದವರಿಗೂ ಈ ಸಂಕಟ ತಪ್ಪಿದ್ದಲ್ಲ. ಡೆಡ್ ಲೈನ್ ಒಳಗೆ ಏನೋ ಒಂದಿಷ್ಟು ಕೆದಕಿ ಕೊಡಬೇಕು. ಹೀಗೆ ಏನಾದ್ರು ಅವಸರಕ್ಕೆ ವರದಿ ಮಾಡುವಾಗಲೇ ಅವಘಡಗಳಾಗೋದು.
ಸಣ್ಣ ಪುಟ್ಟ ಪತ್ರಿಕಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಸರಿ ಸಮಯಕ್ಕೆ ಸಂಬಳಾನೂ ಸಿಗೋಲ್ಲ. ಸಿಕ್ಕರೂ ತೀರಾ ಅಗತ್ಯಗಳಿಗೆ ಬೇಕಾದಷ್ಟು ಇರೋಲ್ಲ. ಇದನ್ನೆಲ್ಲಾ ಕೇಳೋರ್ಯಾರು? ಆದರೆ ಪತ್ರಕರ್ತರು ಊರಾಗಿನ ಎಲ್ಲರ ಕತೆ ಕೇಳಬೇಕು. ಬರೀಬೇಕು. ಬರೆದದ್ದರಿಂದ ಒಂದಿಷ್ಟು ಬದಲಾದರೆ ವರದಿಯ impact ಎಂದೇ ಖುಷಿಪಡಬೇಕು. ಅದಕ್ಕೇ ಹೇಳೋದು - ದೀಪದ ಕೆಳಗೇ ಕತ್ತಲು.

ಅದೋ.. ಇದೋ..

ಅಂಡು ಸುಟ್ಟ ಬೆಕ್ಕಿನಂತೆ ಅಡ್ಡಾಡುತ್ತಿರುವ ಯಡಿಯೂರಪ್ಪ ಅವರನ್ನು ಕುರಿತು "ಸುದ್ದಿ ಮಾತು" ಬರೆಯಬೇಕೆನ್ನುವಷ್ಟರಲ್ಲಿ ಪ್ರಜಾವಾಣಿ ಪತ್ರಿಕೆಯ ದೆಹಲಿ ಪ್ರತಿನಿಧಿ ದಿನೇಶ್ ಅಮೀನಮಟ್ಟು ಈ ವಾರದ ತಮ್ಮ "ದೆಹಲಿನೋಟ" ಅಂಕಣದಲ್ಲಿ ನಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ.
ಸುದ್ದಿಮಾತಿನ ಮಿತಿ ಚಿಕ್ಕದು. ನಾವು, ಹೆಚ್ಚೆಂದರೆ ಏಳೆಂಟು ಪ್ಯಾರಾ ಬರೆಯುತ್ತಿದ್ದೆವು. ಕೇವಲ ಅದರಲ್ಲೂ ಕೇವಲ ಯಡಿಯೂರಪ್ಪ ಸುತ್ತಲೇ ಗಿರಕಿ ಹೊಡೆಯುತ್ತಿದ್ದೆವು. ಆದರೆ ದಿನೇಶ್ ಸಮಗ್ರವಾದ ಲೇಖನವೊಂದನ್ನು ಮುಂದಿಟ್ಟಿದ್ದಾರೆ.
ಹಾಗಾಗಿ ಇಂದಿನ ಸುದ್ದಿ ಮಾತು ದಿನೇಶ್ ಅಮೀನಮಟ್ಟು ಅವರ ಕುರಿತು. ಮಾತಿಗೆ ಮುನ್ನ ನೀವೊಮ್ಮೆ ದೆಹಲಿ ನೋಟದ ಇವತ್ತಿನ ಲೇಖನ "ಮುಖ್ಯಮಂತ್ರಿಗಳೇ, ಅಧಿಕಾರ ನಿಮ್ಮ ಕೈಯಲ್ಲೇ ಇರಲಿ' ಓದಿ.
ದಿನೇಶ್ ಅಮೀನ್ ಮಟ್ಟು ಬಲು ಅಪರೂಪದ ಪತ್ರಕರ್ತ. ಸದಾ ಸಮಾಜಮುಖಿ ಆಲೋಚನೆಯನ್ನೇ ಧ್ಯಾನಿಸುವ ಬರಹಗಾರ. ಕನ್ನಡ ಪತ್ರಿಕೆಗೆ ದೆಹಲಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಇಡೀ ರಾಷ್ಟ್ರದ ಸಮಗ್ರ ಪರಿಕಲ್ಪನೆಯನ್ನು, ಚಿತ್ರಣವನ್ನು ಸ್ಪಷ್ಟವಾಗಿ ಹೇಳುವ ಸಾಮರ್ಥ್ಯ ಇರುವ ಏಕೈಕ ಪತ್ರಕರ್ತ.
ದಿನೇಶ್ ತಮ್ಮ ಇಂದಿನ ಲೇಖನದಲ್ಲಿ ಯಡಿಯೂರಪ್ಪ ಯಾವ ಮಾದರಿಯನ್ನು ಅನುಸರಿಸಿ ರಾಜ್ಯವಾಳುತ್ತಿದ್ದಾರೆ ಎಂಬುದನ್ನು ಚರ್ಚಿಸಿದ್ದಾರೆ. ಈ ಮೊದಲು ಯಡಿಯೂರಪ್ಪ ಅವರೇ ಪಠಿಸಿದ "ಮೋದಿ ಮಾದರಿ", "ವಾಜಪೇಯಿ ಮಾದರಿ"ಗಳನ್ನು ತಿಳಿಸಿದ್ದಾರೆ. ಹಾಗೆಯೇ ಗಾಂಧೀ, ಬಸವಣ್ಣನ ಮಾದರಿಗಳ ಬಗ್ಗೆಯೂ ಮಾತನಾಡಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ಜನಪರ ಮಾದರಿಯಾದರೆ ಎಲ್ಲವನ್ನೂ ಸಾಧಿಸಬಹುದು ಎಂದಿದ್ದಾರೆ. ಈ ಮೂಲಕ ದಿನೇಶ್ ಅಮೀನಮಟ್ಟು ಅವರು ಯಡಿಯೂರಪ್ಪ ಅವರಿಗೆ ಜನಪರ ಮಾದರಿ ಹೇಳಿಕೊಟ್ಟಿದ್ದಾರೆ.
ಅದೇ ರೀತಿ ಅವರೂ ಕೂಡ ಇದನ್ನೇ ಪ್ರತಿಪಾದಿಸುವಂಥವರು. ಇತ್ತೀಚೆಗೆ ಜಮ್ಮು ಕಾಶ್ಮೀರ ವಿಚಾರವನ್ನು ಚರ್ಚಿಸಿದ್ದ ದಿನೇಶ್ ಆ ಲೇಖನದಲ್ಲೂ ಜಮ್ಮು-ಕಾಶ್ಮೀರದಲ್ಲಿ ಜನಮತ ಗಣನೆ ಆಗಲಿ ಎಂದು ಪ್ರತಿಪಾದಿಸಿದ್ದರು. ಹಾಗಾಗಿಯೇ ಅವರು ಜನಪರ ಮಾದರಿಯನ್ನು ಮುಂದಿಟ್ಟಿದ್ದಾರೆ. ಈಗಲಾದರೂ ಯಡಿಯೂರಪ್ಪನವರಿಗೆ ಜನಪರ ಮಾದರಿ ನೆನಪಾಗುವುದೆ?

Sunday, October 5, 2008

ನಗೆಯು ಬರುತಿದೆ ನಗೆಯು ಬರುತಿದೆ...

ಶನಿವಾರ ಕೆಲ ಸ್ವಾಮಿಗಳು ಪಾದಯಾತ್ರೆ ಮಾಡಿದರು. ಎಲ್ಲಾ ಪತ್ರಿಕೆಗಳು ಈ ಸುದ್ದಿಯನ್ನು ಪ್ರಮುಖವಾಗಿಯೇ ಬಿಂಬಿಸಿದರು.

ಸ್ವಾಮಿಗಳ ಯಾತ್ರೆ ಹಿಂದೆ ಇದ್ದ ಘನಘೋರ ಉದ್ದೇಶ ಬಲವಂತದ ಮತಾಂತರ ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನಿಗೆ ಒತ್ತಾಯ. ಯಾತ್ರೆ ಆರಂಭವಾದದ್ದು ಬಸವ ಸಮಿತಿ ಕಚೇರಿಯಿಂದ. ಅಂತ್ಯಗೊಂಡದ್ದು ಕೆಲವೇ ಹೆಜ್ಜೆಗಳ ದೂರದಲ್ಲಿರುವ ಬಸವೇಶ್ವರ ಸರ್ಕಲ್ ನಲ್ಲಿ. ಅಷ್ಟರಲ್ಲಿ, ಸ್ವಾಮಿಗಳು ಹೆಚ್ಚು ದೂರ ನಡೆಯಬಾರದು ಎಂದು ಸರಕಾರದ ಇಬ್ಬರು ಮಂತ್ರಿಗಳು ಮುಖ್ಯಮಂತ್ರಿ ಪರವಾಗಿ ಮನವಿ ಪತ್ರ ಸ್ವೀಕರಿಸಿದರು. ಅದಿರಲಿ ಒತ್ತಟ್ಟಿಗೆ.

ಪಾದಯಾತ್ರೆಯಲ್ಲಿ ಭಾಗವಹಿಸಿದವರಲ್ಲಿ ಒಬ್ಬ ಬ್ರಾಹ್ಮಣ ಸ್ವಾಮೀಜಿ - ಪೇಜಾವರ ವಿಶ್ವೇಶತೀರ್ಥ ಹಾಗೂ ಇತರರೆಲ್ಲ ವಿವಿಧ ವೀರಶೈವ ಮಠದವರು. ಒಕ್ಲಲಿಗರ ಸ್ವಾಮೀಜಿ ಮೊದಲು ಬರುತ್ತೇನೆ ಎಂದವರು ಡಯಾಲಿಸಿಸ್ ಕಾರಣ ಬರಲಿಲ್ಲವಂತೆ. ಅದೇ ರೀತಿ ಸಿದ್ಧಗಂಗಾ ಶ್ರೀಗಳಿಗೆ ಅನಾರೋಗ್ಯ. ಅವರ ಹಾಜರಿ ಇಲ್ಲದಿದ್ದರೂ, ಪಾದಯಾತ್ರೆಯ ಉದ್ದೇಶಕ್ಕೆ ಅವರ ಬೆಂಬಲ ಇದೆಯೆಂದು ಸಂಘಟಕರ ಸ್ಪಷ್ಟೋಕ್ತಿ.

ಪೇಜಾವರ ಶ್ರೀ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಮತಾಂತರ ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆ ಎಂದರು. ಪತ್ರಕರ್ತರೊಬ್ಬರು ದಲಿತರು ಸಹಸ್ರಾರು ಸಂಖ್ಯೆಯಲ್ಲಿ ಬೌದ್ಧಧರ್ಮಕ್ಕೆ ಮತಾಂತರ ಹೊಂದುವುದರ ಬಗ್ಗೆ ಸ್ವಾಮೀಜಿಯ ಅಭಿಪ್ರಾಯ ಕೇಳಿದರು. ಸ್ವಾಮೀಜಿ "ಬೌದ್ಧ ಧರ್ಮ ಹಿಂದೂ ಧರ್ಮದ ಅಂಗವೇ ಆದರೂ ಮತಾಂತರ ಸಲ್ಲ. ಕಾರಣ ಇಷ್ಟೆ. ಹಿಂದೂ ಧರ್ಮದಲ್ಲಿರುವ ದಲಿತರೆಲ್ಲಾ ಬೌದ್ಧಧರ್ಮ ಸ್ವೀಕರಿಸಿದರೆ ಹಿಂದೂ ಧರ್ಮದಲ್ಲಿ ದಲಿತರ ಸಂಖ್ಯೆ ಕಡಿಮೆಯಾಗಿ ಧರ್ಮಕ್ಕೆ ಅನ್ಯಾಯ ಆಗುತ್ತೆ", ಎಂದರು.

ಡಾ. ಅಂಬೇಡ್ಕರ್ ತಮ್ಮ ಜೀವಿತದ ಕೊನೆ ಹಂತದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು. "ಆಗಿನ್ನೂ ನಾನು ಚಿಕ್ಕವ. ಆಗಲೇ ಅಂಬೇಡ್ಕರರನ್ನು ಭೇಟಿಯಾಗಿ ಅವರ ಮನವೊಲಿಸಬೇಕು ಎಂಬ ಆಸೆ ನನ್ನಲ್ಲಿತ್ತು", ಎಂದು ಸ್ವಾಮೀಜಿ ಇತಿಹಾಸ ಜ್ಞಾಪಿಸಿಕೊಂಡರು.

ಸ್ವಾಮೀಜಿಯವರ ಮಾತಿನಿಂದ ಸ್ಪಷ್ಟವಾಗುವ ಒಂದಂಶವೆಂದರೆ, ಹಿಂದೂ ಧರ್ಮದಲ್ಲಿ ಸದಾ ಮೇಲ್ಜಾತಿಯವರಿಂದ ತುಳಿತಕ್ಕೆ ಒಳಪಡಲು, ಶೋಷಣೆಗೆ ಈಡಾಗಲು ದಲಿತರೆಂಬ ವರ್ಗ ಬಹುಸಂಖ್ಯೆಯಲ್ಲಿ ಇರಬೇಕು. ಇಲ್ಲವಾದರೆ ಹಿಂದೂ ಧರ್ಮಕ್ಕೆ ಅನ್ಯಾಯವಾಗುತ್ತೆ.

ಸ್ವಾಮೀಜಿ ಅರ್ಥಮಾಡಿಕೊಳ್ಳಬೇಕಾದ್ದು; ದಲಿತರ್ಯಾರೂ ಹಿಂದುಗಳಲ್ಲ. ಹಿಂದೂ ಧರ್ಮದ ಸೋಕಾಲ್ಡ್ ಶಾಸ್ತ್ರದ ಪ್ರಕಾರ ಹಿಂದೂಗಳಿಗೆ ಗೋಮಾಂಸ ವರ್ಜ್ಯ. ಆದರೆ ದಲಿತರು ಗೊಮಾಂಸ ಸ್ವೀಕರಿಸುತ್ತಾರೆ. ಹಾಗಾದರೆ ಅವರು ಹಿಂದೂಗಳು ಹೇಗಾದಾರು? ಅವರ ಏಳಿಗೆಗೆ, ಶೋಷಣೆ ಮುಕ್ತ ಬದುಕಿಗಾಗಿ ಅವರಿಷ್ಟದ ಧರ್ಮ ಅನುಸರಿಸಿದರೆ ಅದನ್ನು ಹಿಂದೂ ಧರ್ಮಕ್ಕಾದ ಅನ್ಯಾಯ ಎಂದು ಭಾವಿಸುವುದು ಎಷ್ಟು ಸರಿ?

ಇನ್ನೊಂದು ಪ್ರಶ್ನೆ. ಈ ಪಾದಯಾತ್ರೆಯಲ್ಲಿ ಭಾಗವಹಿಸಿದ ಅನೇಕರು ಬಸವಣ್ಣನ ಅನುಯಾಯಿಗಳು. ಬಸವ ಹೋರಾಡಿದ್ದೇ ಹಿಂದೂ ಧರ್ಮದ ಆಧಾರಗಳಾದ ಅಸ್ಪೃಶ್ಯತೆ, ಜಾತೀಯತೆ ವಿರುದ್ಧ. ಇವರ ಪೂರ್ವಜರು ಬಸವಣ್ಣನ ಹಾದಿ ಹಿಡಿದು ಹೊಸ ಕ್ರಾಂತಿಗೆ ಕಾರಣರಾಗಿದ್ದರು. ಆದರೆ ವಿಪರ್ಯಾಸ ನೋಡಿ. ಇದೇ ಮಂದಿ ಇಂದು ಕಟ್ಟಾ ಬ್ರಾಹ್ಮಣ ಮಠದ ಸ್ವಾಮೀಜಿ ಹಿಂದೆ ಬಾಲದಂತೆ ಮತಾಂತರದ ವಿರುದ್ಧ ಪಾದಯಾತ್ರೆ ಮಾಡ್ತಿದಾರೆ. ನಗೆಯು ಬರುತಿದೆ ನನಗೆ ನಗೆಯು ಬರುತಿದೆ. ಇವರ ಆಟ ನೋಡಲಾರದೆ ಘೋರಿಯಲ್ಲಿ ಬಸವಣ್ಣನ ದೇಹ ಮಗ್ಗಲು ಬದಲಿಸಿ

Friday, October 3, 2008

ಸುದ್ದಿಮಾತು ಸಂಪಾದಕೀಯ...

ಸುದ್ದಿಮಾತು ಮಾತನಾಡಲು ಆರಂಭಿಸಿ ವಾರಗಳೇ ಉರುಳಿ ಹೋದವು. ಓದುಗರಲ್ಲಿ ನೂರೆಂಟು ಅನುಮಾನಗಳು. ನಾವು ನಿರೀಕ್ಷಿಸಿದಂತೆ, ಪತ್ರಕರ್ತ ಸಮೂಹವೇ ಬ್ಲಾಗ್ ನ ಬಹುತೇಕ ಓದುಗರು. ಬ್ಲಾಗ್ ಗೆ ಭೇಟಿ ಕೊಟ್ಟವರೆಲ್ಲ, view my complete profile ಮೇಲೆ ಮರೆಯದೆ ಕ್ಲಿಕ್ ಮಾಡಿದರು. ಖಾಲಿ-ಖಾಲಿ ಇದ್ದದ್ದನು ಕಂಡು 'ಯಾರಿರಬಹುದು' ಎಂದು ಲೆಕ್ಕಾಚಾರಕ್ಕೆ ಶುರುಹಚ್ಚಿದರು.
'ಯಾರೋ ನಮ್ಮ ಮಧ್ಯೆ ಇರೋ ಪತ್ರಕರ್ತನೇ ಇಂತಹ ಕೆಲಸ ಮಾಡುತ್ತಿರಬೇಕು' ಎಂದು ಹಲವರು ಅಂದುಕೊಂಡದ್ದೂ ಬ್ಲಾಗ್ ಕಿವಿಗೆ ಕೇಳಿಸಿದೆ. ಬ್ಲಾಗ್ ಪ್ರತಿದಿನ update ಆಗುತ್ತೆ ಅಂದರೆ, 'ಯಾವನೋ ಕೆಲಸ ಇಲ್ಲದ ಆಸಾಮಿ ಇರಬೇಕು'; 'ಪದೇ ಪದೇ ಯಡಿಯೂರಪ್ಪನ್ನ ಬಯ್ಯೋದು ನೋಡಿದರೆ ಇವ ಕಾಂಗ್ರೆಸ್ ನವನೋ, ಎಡಪಂಥೀಯವನೋ ಇರಬೇಕು'; ಪತ್ರಿಕಾ ಭಾಷೆ ಬಗ್ಗೆ, ಪತ್ರಕರ್ತರ ಅವಾಂತರಗಳ ಬಗ್ಗೆ ಬರೆಯೋದು ನೋಡಿದ್ರೆ 'ಯಾರೋ ಪತ್ರಕರ್ತನೇ ಇರಬೇಕು...' ಹೀಗೆ ಹತ್ತಾರು ಊಹೆಗಳು ಓದುಗರಲ್ಲಿ ಎದ್ದಿರುವುವುದು ಸಹಜ.
ಈ ಎಲ್ಲಾ ಸಂಶಯಗಳಿಗೆ ಉತ್ತರ ನೀಡುವ ಸಮಯ ಈಗ ಬಂದಿದೆ. ಮೊದಲನೆಯದಾಗಿ ಇದು ಯಾರೋ ಒಬ್ಬ ಮಾಡುತ್ತಿರುವ ಬ್ಲಾಗ್ ಅಲ್ಲ. ಐದು ಮಂದಿ ಇದ್ದೇವೆ. ನಾವ್ಯಾರೂ ಪತ್ರಕರ್ತರಲ್ಲ. ಹಾಗಂತ ಪತ್ರಿಕೋದ್ಯಮ ಪರಿಚಯ ಇಲ್ಲ ಅಂತಲ್ಲ. ನಾವೆಲ್ಲರೂ ಬೇರೆ ಬೇರೆ ಪತ್ರಿಕೆಗಳಲ್ಲಿ 4-5 ವರ್ಷ ಕಾಲ ಕೆಲಸ ಮಾಡಿ ಈಗ ಬೇರೆಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಹಾಗಾಗಿ ಪತ್ರಿಕೋದ್ಯಮದೆಡೆಗೆ ಇಂಥ ಕಾಳಜಿ. ಪತ್ರಿಕೆ, ಪತ್ರಿಕೋದ್ಯಮ ಬಗ್ಗೆನೇ ಬರೆದರೆ ಹೇಗೆ ಅಂತ ನಾವೆಲ್ಲಾ ಕೂಡಿ ನಿರ್ಧಾರ ಮಾಡಿ ಬ್ಲಾಗ್ ಆರಂಭಿಸಿದೆವು.
ನಮ್ಮ ಹೆಸರು ಯಾಕೆ ಹೇಳ್ತಿಲ್ಲ ಅನ್ನೋದು ನಿಮ್ಮ ಪ್ರಶ್ನೆ ಇರಬಹುದು. ಆದರೆ ಹೆಸರಲ್ಲೇನಿದೆ? ಹೆಸರು ಹೇಳಿದ್ರೆ - ಇವ ಘಟ್ಟದ ಕೆಳಗಿನವನು, ಅವನು ಉತ್ತರ ಕರ್ನಾಟಕದವನು, ಮತ್ತೆ ಅವನೋ ಮಹಾನ್ ಚಡ್ಡಿ, ಇನ್ನೊಬ್ಬನೋ ಆ ಜಾತಿಯವನು.. ಹೀಗೆ ಏನೇನೋ ಕಾರಣ ಕೊಟ್ಟು ಬರಹಗಳನ್ನು ಓದೋ ಸನ್ನಿವೇಶ ಸೃಷ್ಟಿಯಾಗುತ್ತೆ. ಅದೆಲ್ಲಾ ಯಾಕೆ?
Ronald Bartes ಹೇಳೋ ಹಾಗೆ author is dead. ಬ್ಲಾಗ್ ನಲ್ಲೂ ಹಾಗೆ. ಬರಹಗಾರರಿಗೆ ಅಸ್ತಿತ್ವವಿಲ್ಲ. ಬರಹಗಳಿಗೆ ಮಾತ್ರ ಆಧಾರ ಇರುತ್ತೆ. ಬದ್ಧತೆ ಇರುತ್ತೆ. ನಿಮಗನ್ನಿಸಿದ್ದನ್ನ ನಮ್ಮೊಂದಿಗೆ ಹೇಳಿಕೊಳ್ಳಿ..
ಅಂದಹಾಗೆ ಯಾರನ್ನು ಬಯ್ಯುವ ಉದ್ದೇಶ ನಮ್ಮದಲ್ಲ. ತಪ್ಪು ಮಾಡಿದಾಗ ಸುದ್ದಿಮಾತು ಆಡಿಕೊಳ್ಳುತ್ತದೆ. ಸರಿ ಮಾಡಿದಾಗ ಮೆಚ್ಚಿಕೊಳ್ಳುತ್ತದೆ. ಹಾಗೆಯೇ ರಂಜನೆಯು ಇರಲಿ ಎಂದು ಇನ್ನುಮುಂದೆ ಪ್ರತಿ ಶುಕ್ರವಾರ "ಸಿನಿಮಾತು" ನಿಮ್ಮ ಬ್ಲಾಗ್ ಅಂಗಳದಲ್ಲಿ.

ನಮ್ಮ ನಡುವೆ ಹೀಗೊಬ್ಬ ರಾಜಕಾರಣಿ..




ಗಾಂಧಿ ಜನ್ಮದಿನದಂದು ರಾಜಸ್ಥಾನದ ಬಾರಾನ್ ಜಿಲ್ಲೆಯ ಪಿಂಜ್ರಾ ಹಳ್ಳಿಯಲ್ಲಿ ರಾಹುಲ್ ಗಾಂಧಿ ಶ್ರಮದಾನ ನಡೆಸಿದರು. ಅದರ ನಾಲ್ಕು ಚಿತ್ರಗಳು ಸುದ್ದಿ ಮಾತು ಓದುಗರಿಗೆ. ಈ ಕುರಿತು ಚುರುಮುರಿ ಕೂಡ ಬರೆದಿದೆ. ಅಲ್ಲಿಯೂ ಒಮ್ಮೆ ನೋಡಿ.
(ಚಿತ್ರಕೃಪೆ: ವಿವಿಧ ಪತ್ರಿಕೆಗಳಿಂದ.. )

Thursday, October 2, 2008

ಶಂಕಿತ ವ್ಯಕ್ತಿ ಬಂಧನ!

ನಿನ್ನೆ ರಾತ್ರಿ ಸುವರ್ಣ ಸುದ್ದಿ ವಾಹಿನಿಯಲ್ಲಿ ಸುದ್ದಿ. ವಾರ್ತಾವಾಚಕಿ 'ಸುಬ್ರಮಣ್ಯದಲ್ಲಿ ಶಂಕಿತ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ' ಎಂದರು. ಇದಪ್ಪಾ ಮಜಾ....
ಶಂಕಿತ ಉಗ್ರಗಾಮಿ, ಶಂಕಿತ ನಕ್ಸಲ, ಶಂಕಿತ ಕಳ್ಳ, ಶಂಕಿತ ದರೋಡೆಕೋರ, ಶಂಕಿತ ಕೊಲೆಗಾರ ಎನ್ನುವ ಪದಬಳಕೆ ಪರಿಚಿತ. ಆದರೆ ಇದೇನಿದು - ಶಂಕಿತ ವ್ಯಕ್ತಿ?
ಸುವರ್ಣ ಸುದ್ದಿವಾಹಿನಿ ಮಾತ್ರವಲ್ಲ. ಶುಕ್ರವಾರದ ಕನ್ನಡಪ್ರಭ ಮುಖಪುಟದಲ್ಲಿ ಇದೇ ತಲೆಬರಹದ ಸುದ್ದಿ ಪ್ರಕಟವಾಗಿದೆ. ಹಾಗಾದರೆ ಇವರಿಗೆಲ್ಲಾ, ಆತ 'ವ್ಯಕ್ತಿ' ಎಂಬುದರ ಬಗ್ಗೆಯೇ ಶಂಕೆಯೇ? ಅಥವಾ ಒಬ್ಬ ಮನುಷ್ಯ 'ವ್ಯಕ್ತಿ'ಯಾಗಿರುವುದೂ ಒಂದು ಸಂಶಯಾಸ್ಪದ ಸಂಗತಿಯೇ?
'ಶಂಕಿತ' ಎನ್ನುವ ಪದ ಬಳಕೆ ಪತ್ರಕರ್ತರಿಗೆ ಬಹುಪ್ರಿಯವಾಗಿರುವುದೇ ಇಂತಹ ತಪ್ಪುಗಳಿಗೆ ಕಾರಣ. ಸುಬ್ರಮಣ್ಯ ಘಟನೆಯಲ್ಲಿ ಬಂಧಿಯಾಗಿದ್ದು ಒಬ್ಬ ಹಿಂದೂ ಹೆಸರಿನವನಾದ ಕಾರಣ ಪತ್ರಕರ್ತರು ಶಂಕಿತ ಉಗ್ರ ಎನ್ನಲಿಲ್ಲ. ಆದರೆ ಅದೇ ಆತನ ಜಾಗದಲ್ಲಿ ಒಬ್ಬ ಮುಸಲ್ಮಾನ ಇದ್ದಿದ್ದರೆ ಆತನನ್ನು ಶಂಕಿತ ಉಗ್ರ ಎಂದು ಯಾವುದೇ ಮುಲಾಜಿಲ್ಲದೆ ಘೋಷಿಸಿಬಿಡುತ್ತಿದ್ದರು. ಏನ್ ಮಾಡೋದು? ಇವರು ಒಂಥರಾ ಶಂಕಿತ ಪತ್ರಕರ್ತರು!!!

ಏನು ಒಂದು... ವಿಷಯ ಇದೆ ಅಂದ್ರೆ...
ನಮ್ಮ ಟಿವಿ9 ಮತ್ತು ಸುವರ್ಣ ಸುದ್ದಿವಾಹಿನಿಗಳಲ್ಲಿ "ಏನ್ ಒಂದು" ಎನ್ನುವ ಪದಬಳಕೆ ಸಾಮಾನ್ಯ. ಅದರಲ್ಲೂ ಟಿವಿ9ನಲ್ಲಿ ಹೆಚ್ಚು. ಎಲ್ಲಾ ವರದಿಗಾರ, ವಾರ್ತಾವಾಚಕರು 'ಏನ್ ಒಂದು...' ಎನ್ನುವ ಪದದ ಮೂಲಕವೇ ಸುದ್ದಿ ಆರಂಭಿಸುತ್ತಾರೆ.


ಮತ್ತೆ ಒಂದು ಮನವಿ...


ಶಂಕಿತ ಪತ್ರಕರ್ತರೇ ತಿದ್ದಿಕೊಳ್ಳುವಿರಾ...

ಮರೆಯದಿರಿ ಈ ಗಾಂಧಿಯ...

"ಒಂದು ದಿನದ ಅವಧಿಗೆ ನಾನೊಬ್ಬ ಸರ್ವಾಧಿಕಾರಿಕಾರಿಯಾಗಿ ನೇಮಕಗೊಂಡಿದ್ದರೆ, ದೇಶದ ಎಲ್ಲ ಪತ್ರಿಕೆಗಳನ್ನು ನಿಷೇಧಿಸುತ್ತಿದ್ದೆ; ಹರಿಜನ ಪತ್ರಿಕೆಯೊಂದನ್ನು ಹೊರತು ಪಡಿಸಿ..."
ಇದು ಮಹಾತ್ಮ ಗಾಂಧಿ ಆಡಿದ ಮಾತು. ೧೯೪೬ ಜೂನ್ ೧೯ರಂದು ಪ್ರಾರ್ಥನಾ ಸಭೆಯಲ್ಲಿ ಪತ್ರಿಕೆಗಳ ಧೋರಣೆ ಕುರಿತು ನೊಂದು ಅವರು ಈ ರೀತಿ ಹೇಳಿದ್ದರು. ಅವತ್ತು ಪತ್ರಿಕೆಗಳು ಕಮರ್ಷಿಯಲ್ ಆಗಿದ್ದವು. ಸರ್ಕಾರದ ವಿರುದ್ಧ ನಿಭೀರ್ತಿಯಿಂದ ಬರೆಯುವುದಕ್ಕೆ ಹೆದರುತ್ತಿದ್ದವು. ಹರಿಜನ ಪತ್ರಿಕೆ ಮಾತ್ರ ಸಮಾಜ ಮುಖಿಯಾಗಿತ್ತು. ಅದಕ್ಕೆ ಅದನ್ನು ನಿಷೇಧಿಸುವ ಪತ್ರಿಕೆಗಳಿಂದ ಹೊರತಾಗಿಸಲಾಗಿತ್ತು.
ಗಾಂಧಿ ಮುತ್ಸದಿಯಾಗಿ, ಅಪ್ರತಿಮ ಹೋರಾಟಗಾರನಾಗಿ, ಅಹಿಂಸ ಪ್ರತಿಪಾದಕನಾಗಿ ನಮಗೆ ಚಿರಪರಿಚಿತ. ಹಾಗೇ ಅವರೊಬ್ಬ ಪತ್ರಕರ್ತರೂ ಆಗಿದ್ದರು. ಯಂಗ್ ಇಂಡಿಯಾ, ಹರಿಜನ, ನವಜೀವನ್ ಪತ್ರಿಕೆಗಳಿಗೆ ಸಂಪಾದಕರಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದುಡಿದವರು.
ಪತ್ರಿಕೆಯೊಂದರ ಹೊಣೆ ಏನು ಎಂಬುದನ್ನು ಒಬ್ಬ ಪತ್ರಕರ್ತನಾಗಿ ಈ ಪತ್ರಿಕೆಗಳ ಮೂಲಕ ಮಾಡಿ ತೋರಿಸಿದರು.
ಇಡೀ ದೇಶ ಗಾಂಧಿಯೊಬ್ಬರ ಮಾತು ಕೇಳಲು ಸಾಧ್ಯವಾಗಿದ್ದು ಈ ಪತ್ರಿಕೆಗಳಿಂದಲೇ. ದೇಶದ ಮೂಲೆ ಮೂಲೆಗೆ ತಮ್ಮ ದನಿ ತಲುಪಿಸುವುದಕ್ಕೆ ಗಾಂಧಿ ಪತ್ರಿಕೋದ್ಯಮವನ್ನು ಸಮರ್ಥವಾಗಿ ಬಳಸಿಕೊಂಡರು. ಸಮಾಜದ ಹುಳುಕುಗಳನ್ನು ಎತ್ತಿ ಹಿಡಿಯುತ್ತಾ, ಮಾರ್ಗದರ್ಶಿ ಎನಿಸುವ ಅನೇಕ ಹಿತನುಡಿಗಳನ್ನು ದೇಶಬಾಂಧವರಿಗೆ ಹಂಚಿದರು. ಗಾಂಧೀಜಿ ಪತ್ರಿಕೋದ್ಯಮಕ್ಕೆ ಅತ್ಯುತ್ತಮ ಮೌಲ್ಯಗಳನ್ನು ತಂದುಕೊಟ್ಟರು. ಕೆಟ್ಟ ಸ್ಥಿತಿಯಲ್ಲಿ ಧೈರ್ಯ ತುಂಬುವುದು, ಸತ್ಯದ ಬಗ್ಗೆ ಅಚಲ ನಂಬಿಕೆ ಇಡುವುದು, ವಸ್ತುನಿಷ್ಠತೆ ಉಳಿಸಿಕೊಳ್ಳುವುದು, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಟೊಂಕ ಕಟ್ಟುವುದನ್ನು ಅವರು ಹೇಳಿಕೊಟ್ಟರು. ಅವರಿಗೆ ಗೊತ್ತಿತ್ತು ಸಾರ್ವಜನಿಕ ಅಭಿಪ್ರಾಯ ಮೂಡಿಸುವುದಕ್ಕೆ ಮತ್ತು ಆಡಳಿತ ನಿರ್ಧಾರಗಳ ಮೇಲೆ ಪ್ರಭಾವ ಬೀರುವುದಕ್ಕೆ ಪತ್ರಿಕೆ ಅಸ್ತ್ರವಾಗಬಲ್ಲದು ಎಂದು.
ಹರಿಜನ ಮತ್ತು ಯಂಗ್ ಇಂಡಿಯಾ ಪತ್ರಿಕೆಗಳನ್ನು ಆರಂಭಿಸಿ ದೇಶದ ಯುವ ಮನಸ್ಸುಗಳನ್ನು ಸೆಳೆದರು. ಹರಿಜನ ಪತ್ರಿಕೆ ಅನುವಾದಿತ ಆವೃತಿಗಳಲ್ಲಿ ದೇಶದ ವಿವಿಧ ಭಾಷೆಗಳಲ್ಲಿ ಪ್ರಕಟವಾಗುವಷ್ಟು ಪ್ರಭಾವ ಬೀರಿತು. ಯಾಕೆಂದರೆ ಗಾಂಧಿ ವಿಚಾರಧಾರೆಗಳು ಅಷ್ಟು ಪ್ರಖರವಾಗಿದ್ದವು.
ಹರಿಜನ್ ಬಂಧು (ಗುಜರಾತಿ), ಹರಿಜನ ಸೇವಕ್ (ಹಿಂದಿ) ಪತ್ರಿಕೆಗಳು ದೇಶದ ಧ್ವನಿಯಾದವು.
ದೇಶದ ಪತ್ರಿಕೋದ್ಯಮ ಚಿಗುರುತ್ತಿರುವ ಹೊತ್ತಿನಲ್ಲಿ ಗಾಂಧಿ ಒಬ್ಬ ಪತ್ರಕರ್ತನಾಗಿ ಇಷ್ಟೆಲ್ಲಾ ಕೆಲಸ ಮಾಡಿದರು. ಒಂದೆಡೆ ಸ್ವತಂತ್ರ ಹೋರಾಟಕ್ಕೆ ಇಡೀ ದೇಶವನ್ನು ಒಗ್ಗೂಡಿಸುತ್ತಿದ್ದರು. ಮತ್ತೊಂದೆಡೆ ದೇಶವನ್ನು ಕಿತ್ತು ತಿನ್ನುವ ಜಾತೀಯತೆ, ಅಸ್ಪೃಶ್ಯತೆ ಹೊಡೆದೋಡಿಸಲು ಶ್ರಮಿಸುತ್ತಿದ್ದರು.
ಇಂಥ ಗಾಂಧೀಜಿಯನ್ನು ಇಂದು ಪತ್ರಿಕೆಗಳು ಹೇಗೆ ಸ್ಮರಿಸಿಕೊಂಡಿವೆ ಎನ್ನುವುದರತ್ತ ಇವತ್ತಿನ ಸುದ್ದಿಮಾತು.

ಕನ್ನಡಪ್ರಭದಲ್ಲಿ ಒಂದು ವಿಶೇಷ ಸುದ್ದಿ: ಹರಿಜನರ ಉದ್ಧಾರಕ್ಕಾಗಿ ಗಾಂಧಿ ಗಂಗಾಜಲ ಕುಡಿಯುತ್ತಿದ್ದ ಬೆಳ್ಳಿಲೋಟವನ್ನು ಹರಾಜಿಗಿಟ್ಟ ಬಗ್ಗೆ ಕೆ.ಪಿ. ನಾಗರಾಜ್ ಬರೆದಿದ್ದಾರೆ. ಇದು ನಡೆದಿದ್ದು ಕೋಲಾರ ಜಿಲ್ಲೆಯ ಬಂಗಾರ ಪೇಟೆಯಲ್ಲಿ, ೧೯೩೬ರ ಮೇ ೩೧ರಂದು. (ಪೂರ್ಣ ವರದಿ ಇಲ್ಲಿ ಓದಿಕೊಳ್ಳಬಹುದು). ಜತೆಗೆ ೧೫೦ ದೇಶಗಳಲ್ಲಿ ಗಾಂಧೀಜಿ ಅವರ ಅಂಚೆ ಚೀಟಿ ತಂದಿರುವ ಬಗ್ಗೆ ಒಂದು ವರದಿಯೂ ಇದೆ.
ವಿಜಯ ಕರ್ನಾಟಕ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಸಂಪಾದಕೀಯ ಪುಟದಲ್ಲಿ ಗಾಂಧಿ ಮತ್ತು ಲಾಲ್ ಬಹದ್ಧೂರ ಶಾಸ್ತ್ರಿಗಳಿಬ್ಬರನ್ನೂ ಸ್ಮರಿಸಿಕೊಂಡಿದೆ. ಸೋಕಾಲ್ಡ್ ಸಮಾಜಮುಖಿ ಪತ್ರಿಕೆ ಪ್ರಜಾವಾಣಿ ಬೆಂಗಳೂರಿನಲ್ಲಿ ಮಾತ್ರ ಪ್ರಸಾರವಾಗುವ ಮೆಟ್ರೋದಲ್ಲಿ ಗಾಂಧಿ ನಮ್ಮ ನಡುವೆ ಹೇಗಿದ್ದಾರೆಂಬ ಪುಟ್ಟ ಬರಹಕ್ಕೆ ಸೀಮಿತಗೊಳಿಸಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ಮುಖಪುಟದಲ್ಲಿ ಎರಡು ವಿಶೇಷ ವರದಿಗಳನ್ನು ಪ್ರಕಟಿಸಿದೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಗಾಂಧಿ ಬಗ್ಗೆ ಏನೂ ಇಲ್ಲ. ಆದರೆ ಒಬ್ಬ ಅಹಿಂಸಾವಾದಿ ಹುಟ್ಟಿದ ದಿನವಾದ ಇಂದು, ಟೈಮ್ಸ್ ಆಫ್ ಇಂಡಿಯಾ, ಅಹಿಂಸೆಯ ಪ್ರತಿಪಾದಕ ಬೌದ್ಧ ಸಂನ್ಯಾಸಿಯೊಬ್ಬರನ್ನು ಅತಿಥಿ ಸಂಪಾದರಕ್ಕನ್ನಾಗಿ ಕರೆಸಿ ಇಂದಿನ ಸಂಚಿಕೆ ರೂಪಿಸಿದೆ. ಇದು ಕೂಡ ಗಾಂಧಿ ತತ್ವಗಳಿಗೆ ಸಲ್ಲಿಸುವ ಗೌರವವೇ. ಗಾಂಧೀಜಿಯ ತತ್ವಾದರ್ಶಗಳನ್ನು ಮತ್ತೆ ಮತ್ತೆ ನೆನಪಿಸುವುದು ಪತ್ರಿಕೆಗಳ ಕರ್ತವ್ಯ. ಪತ್ರಿಕೆಗಳು ಈ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಪ್ರವೃತ್ತವಾಗಲಿ.