Thursday, February 26, 2009

ಬಳ್ಳಾರಿ ರೆಡ್ಡಿಗಳೂ, ವಿಮಾನ ನಿಲ್ದಾಣವೂ...

ಬಳ್ಳಾರಿ ಸಿರಿವಾರದ ಬಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವುದು ಸಚಿವ ಜನಾರ್ಧನ ರೆಡ್ಡಿಗೆ ಪ್ರತಿಷ್ಠೆಯ ವಿಷಯ ಯಾಕಾಗಿದೆ? ಒಂದು ಸಾವಿರ ಎಕರೆ ನೀರಾವರಿ ಕೃಷಿಭೂಮಿಯನ್ನು ಕಬಳಿಸಿ, ಈ ವಿಮಾನ ನಿಲ್ದಾಣ ನಿರ್ಮಿಸುವ ಅಗತ್ಯ ಏನಿದೆ?

ಪರಿಶೀಲನೆ ನಡೆಸುತ್ತಾ ಹೋದರೆ ಕರ್ನಾಟಕ ರಾಜ್ಯಕ್ಕಿಂತಲೂ ಆಂಧ್ರ ಪ್ರದೇಶಕ್ಕೆ ಈ ವಿಮಾನ ನಿಲ್ದಾಣದಿಂದ ಹೆಚ್ಚು ಲಾಭವಿದೆ ಎಂಬ ಅಂಶ ಬೆಳಕಿಗೆ ಬರುತ್ತದೆ. ಬಳ್ಳಾರಿ ಗಡಿಗೆ ಹೊಂದಿಕೊಂಡಿರುವ ಆಂಧ್ರ ಪ್ರದೇಶದಲ್ಲಿ ಬ್ರಹ್ಮಣಿ ಸ್ಟೀಲ್ ಉದ್ಯಮ ಸ್ಥಾಪಿಸಲು ಜನಾರ್ಧನ ರೆಡ್ಡಿ ಈಗಾಗಲೇ ನಿರ್ಧರಿಸಿದ್ದಾರೆ. ಕೋಟ್ಯಾಂತರ ರೂ. ಬಂಡವಾಳದ ಈ ಸ್ಟೀಲ್ ಉದ್ಯಮಕ್ಕೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರ ಪುತ್ರನೂ ಪಾಲುದಾರನೆಂಬ ವರ್ತಮಾನಗಳಿವೆ. ಈ ಉದ್ಯಮಕ್ಕೆ ಅನುಕೂಲವಾಗಲೆಂದು ಸಮೀಪದಲ್ಲಿರುವ ಸಿರಿವಾರದ ಬಳಿ ವಿಮಾನ ನಿಲ್ದಾಣ ಸ್ಥಾಪಿಸಲಾಗುತ್ತಿದೆ ಎಂಬ ಆರೋಪಗಳು ನಿಜ ಎನ್ನುವಂತೆ ರೈತರ ಹೋರಾಟವನ್ನು ವಿರೋಧಿಗಳ ಕುತಂತ್ರ ಎಂದು ಜನಾರ್ಧನ ರೆಡ್ಡಿ ಪರಿವಾರ ಬಣ್ಣಿಸುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸಹ ಅದೇ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದು ಶತಸಿದ್ಧ ಎಂದೇ ಹೇಳುತ್ತಿದ್ದಾರೆ.

ತುಂಗಾಭದ್ರಾ ನದಿಯಿಂದ ನೀರು ಪಡೆದು ಕೃಷಿ ಮಾಡುತ್ತಿರುವ ರೈತರು ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡರೆ ಹೆಚ್ಚುವರಿಯಾಗಿ ಉಳಿಯುವ ನೀರನ್ನು ಸಹ ಈ ಉದ್ಯಮಕ್ಕೆ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರವೂ ಇದೆ. ಎಲ್ಲಾ ಉದ್ಯಮಗಳೂ ಈಗಾಗಲೇ ತುಂಗಾಭದ್ರಾ ಜಲಾಶಯದ ನೀರನ್ನೇ ನೆಚ್ಚಿಕೊಂಡಿವೆ. ಇದಕ್ಕೆ ಜನಾರ್ಧನ ರೆಡ್ಡಿ ಅವರ ಉದ್ಯಮವೂ ಹೊರತಲ್ಲ. ಬಳ್ಳಾರಿಯಲ್ಲಿ ಈಗಾಗಲೇ ಒಂದು ವಿಮಾನ ನಿಲ್ದಾಣವಿದೆ. ತೋರಣಗಲ್ಲಿನಲ್ಲಿ ಜಿಂದಾಲ್ ಕಂಪನಿಯದೆ ಆದ ಖಾಸಗಿ ವಿಮಾನ ನಿಲ್ದಾಣವಿದೆ.

ಈ ಹಿಂದೆ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಗೂ ಜಿಂದಾಲ್, ಕಿರ್ಲೋಸ್ಕರ್, ಕಲ್ಯಾಣಿ ಬೃಹತ್ ಉಕ್ಕು ಉದ್ಯಮಗಳ ಸ್ಥಾಪನೆಯ ಹಿನ್ನೆಲೆಯಲ್ಲಿ ಸರ್ವೇಕಾರ್ಯ ನಡೆದು ಬಳ್ಳಾರಿ-ಹೊಸಪೇಟೆ ನಡುವೆ ಬರುವ ಪಾಪಿನಾಯಕನಹಳ್ಳಿ ಬಳಿ ಈ ವಿಮಾನ ನಿಲ್ದಾಣ ಸೂಕ್ತ ಪ್ರದೇಶವೆಂದು ಗುರುತಿಸಲಾಗಿತ್ತು.

ಆದರೆ ಇದನ್ನೆಲ್ಲಾ ಬದಿಗಿರಿಸಿ, ಆಂಧ್ರಪ್ರದೇಶಕ್ಕೆ ಅನುಕೂಲವಾಗಲೆಂದು ಕನ್ನಡ ನೆಲದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುತ್ತಿರುವ ಮುಖ್ಯಮಂತ್ರಿ, ಸಚಿವರ ವರ್ತನೆಯ ಬಗ್ಗೆ ನಮ್ಮ ಕನ್ನಡ ಸಂಘ, ಸಂಸ್ಥೆಗಳು ಯಾಕೋ ಏನೋ ಧ್ವನಿ ಎತ್ತುತ್ತಿಲ್ಲ. ಕನ್ನಡ ನೆಲ, ಜಲ ಈಗ ಯಾರ ಬಾಯಿಗೆ ಎನ್ನುವ ಪ್ರಶ್ನೆಯನ್ನು ಮಾಧ್ಯಮಗಳು ಕೇಳದಂತೆ ಅವರ ಬಾಯಿಗೆ ಲ್ಯಾಪ್‌ಟಾಪ್ ತುರುಕಲಾಗಿದೆ. ಕನ್ನಡ ಸಂಘಸಂಸ್ಥೆಗಳಾದರೂ ಬಾಯಿಬಿಡಬೇಕಲ್ಲವೆ?

Sunday, February 22, 2009

ಹಾಸ್ಯದ ಹೆಸರಲ್ಲಿ ಅಸಹ್ಯ!

ಈಗ್ಗೆ ಕೆಲವು ದಿನಗಳ ಹಿಂದಿನ ಮಾತು. ತಮ್ಮ ಗೆರೆಗಳ ಮೋಡಿಯಿಂದ ಖ್ಯಾತಿ ಗಳಿಸಿರುವ ಪ್ರಕಾಶ್ ಶೆಟ್ಟಿ ಮಾಸ ಪತ್ರಿಕೆಯೊಂದನ್ನು ಹೊರತಂದರು. ಹೆಸರು ವಾರೆಕೋರೆ. ಕಾರ್ಟೂನ್, ನಗೆ ಬರಹಗಳಿಗೆ ಸೀಮಿತವಾಗಿರುವ ಮಾಸಿಕ. ಬಿಡುಗಡೆ ಕಾರ್ಯಕ್ರಮ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮ ವಿಭಿನ್ನವಾಗಿರಬೇಕು ಎಂಬ ಕಾರಣಕ್ಕೆ ದೇವೇಗೌಡರ ಮುಖ ಹೋಲುವ ಮುಖವಾಡವೊಂದನ್ನು ವ್ಯಕ್ತಿಯೊಬ್ಬರ ಮುಖಕ್ಕೆ ಹಾಕಿ, ಅವರಿಂದ ಪತ್ರಿಕೆಯನ್ನು ಬಿಡುಗಡೆ ಮಾಡಿಸಿದರು. ಕಾರ್ಯಕ್ರಮದ ಉದ್ದಕ್ಕೂ ಆ ಮುಖವಾಡದ ವ್ಯಕ್ತಿಯನ್ನು ನಿದ್ರೇಗೌಡ, ಮುದ್ದೇಗೌಡ ಎಂದೇ ಕಾರ್ಯಕ್ರಮ ಸಂಯೋಜಕರು ಸಂಬೋಧಿಸಿದರು.
ಮುಖವಾಡದ ವ್ಯಕ್ತಿ ಸಭೆಯಲ್ಲಿ ಪದೇ ಪದೇ ನಿದ್ರೆಗೆ ಜಾರುತ್ತಿದ್ದರು. ಅವರನ್ನು ಎಚ್ಚರಗೊಳಿಸುವುದೇ ಬಹುದೊಡ್ಡ ಕೆಲಸವೆಂಬಂತೆ ಸಂಯೋಜಕರು ನಟಿಸಿದರು. ಆ ವ್ಯಕ್ತಿ ಪತ್ರಿಕೆಯನ್ನು ಬಿಡುಗಡೆ ಮಾಡಿದ ಮರುಕ್ಷಣವೇ ನಿದ್ರೆಗೆ ಜಾರಿದರು.
ಇಂತಹದೊಂದು ಪ್ರಯತ್ನ ಮೇಲ್ನೋಟಕ್ಕೆ ವಿಭಿನ್ನ, ಕ್ರಿಯೇಟೀವ್ ಎನ್ನಿಸಿಬಿಡಬಹುದು. ಆದರೆ ಇದು ನಿಜವಾಗಿಯುಊ ಸೃಜನಶೀಲವಾಗಿತ್ತೇ ಎಂಬುದು ಪ್ರಶ್ನೆ.
ದೇವೇಗೌಡರು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆದಾಗಿನಿಂದ ಅವರನ್ನು ನಿದ್ರೆಗೆ ಹಾಗೂ ಮುದ್ದೆಗೆ ಸಮೀಕರಿಸಿ ನೋಡುವ ಚಾಳಿ ಮಾಧ್ಯಮಗಳಿಗೆ ಅಂಟಿಕೊಂಡಿದೆ. ವಿಧಾನಸಭೆ, ಲೋಕಸಭೆ ಹಾಗೂ ಬಹಿರಂಗ ಸಭೆಗಳಲ್ಲಿ ದೇವೇಗೌಡರು ನಿದ್ರೆ ಮಾಡುತ್ತಾರೆ ಎಂಬರ್ಥದ ನೂರಾರು ಚಿತ್ರಗಳು, ವರದಿಗಳು, ಕಾರ್ಟೂನ್ ಗಳು ಮಾಧ್ಯಮದಲ್ಲಿ ಬಂದಿವೆ. ಪ್ರಕಾಶ್ ಶೆಟ್ಟಿಯೂ ಇದಕ್ಕೆ ಹೊರತಲ್ಲ. ತಮ್ಮ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾಡಿದ್ದು ಅದನ್ನೇ.
ಒಂದು ಕ್ಷಣ ಹೀಗೂ ಯೋಚನೆ ಮಾಡಿ ನೋಡಿ.
ದೇವೇಗೌಡರಿಗೆ ಈಗ 75 ದಾಟಿದೆ. 1960 ರ ದಶಕದಿಂದ ರಾಜಕಾರಣದಲ್ಲಿದ್ದಾರೆ. ಅನೇಕ ಬಾರಿ ಚುನಾವಣೆ ಗೆದ್ದಿದ್ದಾರೆ, ಹಾಗೆ ಸೋತಿದ್ದಾರೆ ಕೂಡಾ. ಮುಂದೆಯುಊ ಚುನಾವಣೆಗೆ ನಿಲ್ಲುವವರಿದ್ದಾರೆ. ಒಂದು ದಿನ ಬೆಂಗಳೂರಿನಲ್ಲಿದ್ದರೆ, ನಾಲ್ಕು ದಿನ ರಾಜ್ಯದ ವಿವಿಧ ಊರುಗಳಲ್ಲಿ ಅಲೆಯುತ್ತಿರುತ್ತಾರೆ. ಎರಡು ದಿನಗಳ ಹಿಂದೆ ಅವರು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರು. ಒಂದು ವಾರದ ಹಿಂದೆ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಸಿದರು. ತೃತೀಯ ರಂಗ ಸ್ಥಾಪಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಚರ್ಚೆ ನಡೆಸಿದರು.
ಕಳೆದ ಉಪ ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಿದರು. ಪ್ರಚಾರ ಮುಗಿಸಿ ರಾತ್ರಿ 1 ಗಂಟೆಗೆ ಮನೆಗೆ ಮರಳಿದರೆ, ಮಾರನೆ ದಿನ 8 ಗಂಟೆಗೆ ಪತ್ರಿಕಾ ಗೋಷ್ಠಿ! ಅವರ ದಿನಚರಿ ಆರಂಭವಾಗುವುದು ಬೆಳಗ್ಗೆ ಐದು ಗಂಟೆಗೆ. ಪೂಜೆ ಮುಗಿಸಿಕೊಂಡು, ಒಂದು ರಾಶಿ ಮಾತ್ರೆಗಳನ್ನು ಗಂಟಲಿಗಿಳಿಸಿ ಕಾರು ಹತ್ತಿ ಹೊರಟುಬಿಡುತ್ತಾರೆ. ಈಗ ಹೇಳಿ ಅವರು ನಿಜ ನಿದ್ರೇಗೌಡರೆ?
'ಅವರು ರಾಜಕೀಯವನ್ನೇ ಊಟ ಮಾಡುತ್ತಾರೆ, ಉಸಿರಾಡುತ್ತಾರೆ. ಅವರು 24-ಗಂಟೆ ರಾಜಕಾರಣಿ' ಎಂದು ಮಾಧ್ಯಮದವರು ಕರೆಯುತ್ತಾರೆ. ಆದರೆ ಇದೇ ಮಾಧ್ಯಮ ಅವರನ್ನು ನಿದ್ರೇಗೌಡ ಎಂದೂ ಪದವಿ ನೀಡುತ್ತಾರೆ! 24-ಗಂಟೆ ರಾಜಕಾರಣಿ ನಿದ್ರಿಸುವುದುಂಟೆ?
ಆದರೆ ಇದೇ ಜನ, ವಾಜಪೇಯಿ ಅಥವಾ ಅಡ್ವಾನಿ ಸಭೆಗಳಲ್ಲಿ ಕಣ್ಣು ಮುಚ್ಚಿ ಕುಳಿತಿದ್ದರೆ, ಅದನ್ನು ಧ್ಯಾನ, ಆಲೋಚನೆ ಎಂದು ಬಿಂಬಿಸುತ್ತಾರೆ. ಮಾಧ್ಯಮ ಕೇಂದ್ರಗಳಲ್ಲಿ ಬಹಳ ಕಾಲದಿಂದ ಆಯಕಟ್ಟಿನ ತಾಣಗಳಲ್ಲಿ ಕುಳಿತಿರುವ ಒಂದು ವರ್ಗಕ್ಕೆ ಸೇರಿದ ಕೆಲವರು ಇಂತಹ ಸುಳ್ಳು ಧೋರಣೆಗಳನ್ನು ಸಾಮಾನ್ಯರ ಮನಸ್ಸಿನಲ್ಲಿ ಬಿತ್ತಲು ಕಾರಣವಾದರು.
ನಗೆ ಚಟಾಕಿ(?)
ಕೆಲವು ನಗೆ ಬರಹಗಾರರು ಪ್ರತಿ ವರ್ಷ ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ಹಾಸ್ಯ ಕಾರ್ಯಕ್ರಮ ನಡೆಸುತ್ತಾರೆ. ಅಲ್ಲಿ ಕೇಳಿ ಬರುವ ಸಾಕಷ್ಟು ನಗೆ ಚಟಾಕಿಗಳು ಪೂರ್ವಗ್ರಹದಿಂದ ತುಂಬಿಕೊಂಡಂತಹವೆ. ಒಂದು ಉದಾಹರಣೆ ಇಲ್ಲಿದೆ: (ಮಾಸ್ಟರ್ ಹಿರಣ್ಣಯ್ಯ ನಿರೂಪಿಸಿದ್ದು) "ಸೋನಿಯಾ ಗಾಂಧಿ ಗಂಡ ಸತ್ತ ಎಷ್ಟೋ ವರ್ಷಗಳ ನಂತರ ಬಳ್ಳಾರಿಗೆ ಬಂದು ಚುನಾವಣೆಗೆ ನಿಂತರು. ಪ್ರಚಾರ ಸಭೆಯಲ್ಲಿ ಹರಕು ಮುರುಕು ಕನ್ನಡದಲ್ಲಿ ಮಾತನಾಡುತ್ತ, 'ದೇಶಕ್ಕಾಗಿ ನನ್ನ ಅತ್ತೆಯನ್ನು ಕಳೆದುಕೊಂಡೆ. ಗಂಡನನ್ನೂ ಕಳೆದುಕೊಂಡೆ...ಈಗ ನೀವೇ ಗತಿ' ಎಂದು ನೆರೆದಿದ್ದ ಸಾವಿರಾರು ಗಂಡಸರನ್ನು ಕೋರಿಕೊಂಡರು. ಒಂದು ಹೆಣ್ಣು ಒಂದು ಗಂಡನನ್ನು ಸಂಭಾಳಿಸುವುದೇ ಕಷ್ಟ. ಹೀಗಿರುವಾಗ ಸಾವಿರಾರು ಗಂಡಸರನ್ನು...? ನಂತರ ಮಗಳು ಪ್ರಿಯಾಂಕ ಗಾಂಧಿ ಮಾತನಾಡಲು ಬಂದರು. ಅವರು 'ದೇಶಕ್ಕಾಗಿ ನಮ್ಮಜ್ಚಿ ಪ್ರಾಣ ತ್ಯಾಗ ಮಾಡಿದರು. ಅಪ್ಪ ಕೂಡ ಶತ್ರುಗಳಿಗೆ ಬಲಿಯಾದರು. ಈಗ ನಮ್ಮಮ್ಮನನ್ನು ಕರೆತಂದು ನಿಮ್ಮ ಮುಂದೆ ನಿಲ್ಲಿಸಿದ್ದೇನೆ. ಈಗ ನೀವೇ ಗತಿ.."
ಇದು ತುಂಬಿದ ಸಭೆಯಲ್ಲಿ ಹಿರಣ್ಣಯ್ಯ ಹೇಳಿದ ನಗೆ ಚಟಾಕಿ (?). ಇದನ್ನು ಅಶ್ಲೀಲ ಅನ್ನಬೇಕೋ, ವಿಕೃತ ಮನಸ್ಸಿನ ಅಭಿವ್ಯಕ್ತಿ ಎನ್ನಬೇಕೋ?
ಅದು ಕೇವಲ ನಗೆಹನಿ, ಅದಕ್ಕೆ ಅಷ್ಟು ಮಹತ್ವ ನೀಡುವ ಅಗತ್ಯವಿಲ್ಲ ಎಂದು ಮುಊದಲಿಸುವವರು ಅನೇಕರಿದ್ದಾರೆ.
ಇದೇ ಹಿರಣ್ಣಯ್ಯನ ಇನ್ನೊಂದು ಉದಾಹರಣೆ ನೋಡಿ - "ಈ ದೇಶದಲ್ಲಿ ಸರಕಾರ ಎಲ್ಲಿದೆ? ಪಾರ್ಲಿಮೆಂಟ್ ಭವನದ ಮೇಲೆ ದಾಳಿ ನಡೆಸಿದವನನ್ನ ಗಲ್ಲಿಗೇರಿಸಿ ಅಂತ ಸುಪ್ರಿಂಕೋರ್ಟ್ ಹೇಳಿದರೂ, ಒಬ್ಬನನ್ನ ಗಲ್ಲಿಗೇರಿಸೋಕೆ ಆಗಿಲ್ಲ. ಇನ್ನು ಸರಕಾರ ಎಲ್ಲಿದೆ. ಈಗ ಇಲ್ಲಿ ಮಾಲೆಗಾಂವ್ ಗೆ ಬಂದವ್ರೆ. ಪಾಪ ಆ ಸಾಧ್ವಿಯನ್ನ ಹಿಡಿಯೋಕೆ!"
ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದವನನ್ನು ಗಲ್ಲಿಗೇರಿಸಿಲ್ಲ ಎಂದು ಆರೋಪಿಸುವ ಹಿರಣ್ಣಯ್ಯ, ಮಾಲೆಗಾಂವ್ ಪ್ರಕರಣದಲ್ಲಿ ಸಾಧ್ವಿಯನ್ನು ಪಾಪ, ಅಮಾಯಕಿ ಎನ್ನುವ ಫರ್ಮಾನು ಹೊರಡಿಸುತ್ತಾರೆ. ಈಗ ಹೇಳಿ ಇವರೆಲ್ಲ ಪೂರ್ವಗ್ರಹ ಪೀಡಿತರಲ್ಲವೆ?

Saturday, February 21, 2009

ಬಜೆಟ್: ರೈತನನ್ನ ಕೇಳೋರಿಲ್ಲ!

ಬಜೆಟ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ಡಾಕುಮೆಂಟ್. ದುಡಿವ ವರ್ಗ, ಗ್ರಾಹಕ, ಉದ್ದಿಮೆದಾರ ತಾನು ಗಳಿಸಿದ್ದರಲ್ಲಿ ಒಂದಿಷ್ಟನ್ನು ತೆರಿಗೆ ರೂಪದಲ್ಲಿ ಸರಕಾರಕ್ಕೆ ಸಲ್ಲಿಸುತ್ತಾನೆ. ಆ ತೆರಿಗೆ ಜೊತೆ ರಾಜ್ಯ ಸರಕಾರ ನಡೆಸುವವರು ವಿವಿಧ ಮುಊಲಗಳಿಂದ ಹಣವನ್ನು ಸಾಲರೂಪದಲ್ಲಿ ಸಂಗ್ರಹಿಸಿ ರಾಜ್ಯಕ್ಕೆ ಇಂತಿಷ್ಟು ಯೋಜನಾ ವೆಚ್ಚ ನಿಗದಿ ಪಡಿಸುತ್ತಾರೆ.

ಈ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ 29,000 ಕೋಟಿ ರೂ ಗಳಷ್ಟು ಯೋಜನಾ ಗಾತ್ರ ಸಿದ್ಧಪಡಿಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ಬಾರಿಯ ಯೋಜನಾ ಗಾತ್ರ ಶೇಕಡ 33 ರಷ್ಟು ಹೆಚ್ಚು. ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಅನೇಕ ಹಳೆ ಯೋಜನೆಗಳು ಮುಂದುವರಿಯಲಿವೆ. ತೆರಿಗೆಗಳಲ್ಲಿ ಹೆಚ್ಚಿನ ಬದಲಾವಣೆಯನ್ನೂ ತಂದಿಲ್ಲ. ಮುದ್ರಾಂಕ ಶುಲ್ಕದಲ್ಲಿ ಒಂದಷ್ಟು ಕಡಿಮೆ ಮಾಡಿ, ಆರ್ಥಿಕ ದುಸ್ಥಿತಿಯಿಂದ ಕುಸಿದಿದ್ದ ರಿಯಲ್ ಎಸ್ಟೇಟ್ ವಲಯಕ್ಕೆ ಉತ್ತೇಜನ ನೀಡುವ ಯತ್ನ ಮಾಡಿದ್ದಾರೆ.

ಅದೆಲ್ಲಾ ಒತ್ತಟ್ಟಿಗಿರಲಿ.

ಮುಖ್ಯಮಂತ್ರಿ ಮತ್ತೆ ಮತ್ತೆ ಒತ್ತಿ ಹೇಳುತ್ತಿರುವ ಒಂದು ಕಾರ್ಯಕ್ರಮ ರೈತರಿಗೆ ವ್ಯವಹಾರಿಕ ಬ್ಯಾಂಕ್ ಗಳಲ್ಲೂ ಶೇ 3 ರ ಬಡ್ಡಿದರದಲ್ಲಿ ಬೆಳೆಸಾಲ ದೊರಕಿಸುವುದು. ತಾವು ರೈತಪರ ಎಂದು ಹೇಳಿಕೊಳ್ಳಲು ಬಿಜೆಪಿ ಪಕ್ಷಕ್ಕಿರುವ ಒಂದು ಕಾರ್ಯಕ್ರಮವಿದು. ಕಳೆದ ವರ್ಷ ಈ ಸೌಲಭ್ಯ ಸಹಕಾರಿ ಬ್ಯಾಂಕ್ ಗಳಲ್ಲಿ ಲಭ್ಯವಿತ್ತು. ಮುಖ್ಯಮಂತ್ರಿಯೇ ಹೇಳುವಂತೆ, 2,650 ಕೋಟಿ ರೂಗಳಷ್ಟು ಹಣವನ್ನು ರೈತರು ಬ್ಯಾಂಕ್ ಗಳಿಂದ ಕಳೆದ ವರ್ಷ ಪಡೆದರು. ಈ ಬಾರಿ ಈ ಸೌಲಭ್ಯಕ್ಕಾಗಿ ಸರಕಾರಿ ತನ್ನ ಆಯವ್ಯಯ ಅಂದಾಜಿನಲ್ಲಿ ತೆಗೆದಿರಿಸಿರುವ ಮೊತ್ತ ಕೇವಲ 400 ಕೋಟಿ ರೂ.

ಕಳೆದ ವರ್ಷದ ಆರ್ಥಿಕ ಸಮೀಕ್ಷೆ ಪ್ರಕಾರ ಕರ್ನಾಟಕದ ಒಟ್ಟು ಆಂತರಿಪ ಉತ್ಪನ್ನ ಶೇಕಡ 50 ರಷ್ಟು ಕುಸಿದಿದೆ. ಕೃಷಿ ಕ್ಷೇತ್ರದ ಹೀನಾಯ ಸ್ಥಿತಿಯೇ ಇದಕ್ಕೆ ಪ್ರಮುಖ ಕಾರಣ. ಹಿಂದಿನ ವರ್ಷ ಕೃಷಿ ಕ್ಷೇತ್ರದಲ್ಲಿ ರಾಜ್ಯ ಸಾಧಿಸಿದ್ದು ಋಣಾತ್ಮಕ ಪ್ರಗತಿ (-5)! ಮುಂಗಾರು ಕೈಕೊಟ್ಟಿದ್ದು ಇದಕ್ಕೆ ಕಾರಣ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ವರ್ಷದ ಬಜೆಟ್ ಮಂಡಿಸುವಾಗ ತುಂಬಾ ಎಚ್ಚರ ಆಸ್ಥೆವಹಿಸಬೇಕಾಗಿದ್ದ ಕ್ಷೇತ್ರ ಕೃಷಿ. ಮುಂಗಾರು ವೈಫಲ್ಯ ಜೊತೆಗೆ, ಸಾಮುಊಹಿಕ ವಲಸೆ ಕೂಡ ಕೃಷಿ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಿದೆ. ಕುಟುಂಬದ ಸದಸ್ಯರೆಲ್ಲರೂ ದುಡಿದರೂ ಹೊತ್ತಿಗೆ ಸರಿಯಾಗಿ ಅನ್ನ ಸಿಕ್ಕದ ಪರಿಸ್ಥಿತಿಯಲ್ಲಿ, ರೈತ ಕುಟುಂಬದ ಯುವಕರು ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. ವಾರಕ್ಕೆ ನಿಯಮಿತವಾಗಿ ಕೂಲಿ ದೊರಕುವ ಕೆಲಸಗಳನ್ನು ಆಯ್ಕೆ ಮಾಡಿಕೊಂಡು ಕೃಷಿ ಮರೆಯುತ್ತಾರೆ. ಅಂತಹವರು ಬ್ಯಾಂಕ್ ನಲ್ಲಿ ಶೇ 3 ರ ಬಡ್ಡಿದರದಲ್ಲಿ ಸಾಲ ದೊರಕುತ್ತೆ ಎಂಬ ಕಾರಣಕ್ಕೆ ಹಳ್ಳಿಗೆ ಹಿಂತಿರುಗಿ ಕೃಷಿ ಮಾಡಲು ಸಾಧ್ಯವೇ?

ಮುಖ್ಯವಾಗಿ ಆಗಬೇಕಾದ್ದು ರೈತನಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ. ತಾನು ಬಿತ್ತುವ ಬೀಜ ಫಲ ಕೊಡುವ ತನಕ ನೀರು ಲಭ್ಯವಾಗುತ್ತೆ ಎಂಬ ವಿಶ್ವಾಸ ಬಂದುಬಿಟ್ಟರೆ ಎಷ್ಟೋ ರೈತರು ಬದುಕಿಕೊಳ್ಳುತ್ತಾರೆ. ಆದರೆ ನಮ್ಮ ಸರಕಾರ ನೀರಾವರಿ ಮಹತ್ವವನ್ನೇ ಅರ್ಥಮಾಡಿಕೊಳ್ಳಲಿಲ್ಲವೇ. ಹಿಂದಿನ ಬಜೆಟ್ ಗಳನ್ನು ನೋಡುತ್ತಾ ಬನ್ನಿ. 2006-07ರಲ್ಲಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನೀರಾವರಿಗೆಂದು ಯೋಜವಾ ಗಾತ್ರದ ಶೇ 29.08 ರಷ್ಟು ಹಣ ಮೀಸಲಿಟ್ಟರು. ನಂತರ ಬಂದ ಯಡಿಯುಊರಪ್ಪ ತಮ್ಮ ಮೊದಲ ಬಜೆಟ್ (2006-07)ನಲ್ಲಿ ನೀರಾವರಿಗೆ ನಿಗದಿ ಮಾಡಿದ್ದು ಶೇ 26.48. ನಂತರದ ವರ್ಷ (2007-08) ಈ ಕ್ಷೇತ್ರಕ್ಕೆ ದಕ್ಕಿದ್ದು ಶೇ 17.69. ಕಳೆದ ವರ್ಷ ಯಡಿಯುಊರಪ್ಪ ಮುಖ್ಯಮಂತ್ರಿಯಾಗಿ ಮಂಡಿಸಿದ ಬಜೆಟ್ ನಲ್ಲಿ ನೀರಾವರಿಗೆ ಕೇವಲ ಶೇ 13.37 ರಷ್ಟು ಹಣ ತೆಗೆದಿಟ್ಟರು. ಈ ಬಾರಿ ಶೇ 13.5ಕ್ಕೆ ತಂದು ನಿಲ್ಲಿಸಿದ್ದಾರೆ.

ನೀರಾವರಿ ಕ್ಷೇತ್ರ ಕ್ರಮೇಣ ಆಡಳಿತದಲ್ಲಿರುವವರ ಅವಜ್ಞೆಗೆ ಒಳಗಾಗುತ್ತಿರುವುದು ಸ್ಪಷ್ಟ.

ನಮ್ಮ ರೈತರಿಗೆ ಬಚಾವತ್ ಎ ಮತ್ತು ಬಿ ಸ್ಕೀಮ್ ಗಳ ಅಡಿ ನ್ಯಾಯಯುತವಾಗಿ ದೊರಕಬೇಕಾದ ನೀರು ಇನ್ನೂ ಬಾಕಿ ಇದೆ. ಆದರೆ ಸರಕಾರ ಸೂಕ್ತ ನೀರಾವರಿ ಯೋಜನೆಗಳ ಮುಊಲಕ ನೀರಿನ ಸದುಪಯೋಗ ಪಡೆಯಲು ಸಿದ್ಧರಿಲ್ಲ. ಬರಪೀಡಿತ ರಾಯಚೂರು ಅಥವಾ ಹಿಂದುಳಿದ ಕೊಪ್ಪಳ ಜಿಲ್ಲೆಗಳಿಗೆ ಯಾವ ನದಿ ಮುಊಲದಿಂದಲಾದರೂ ನೀರು ಒದಗಿಸುತ್ತೇವೆ ಎಂಬ ಆಶ್ವಾಸನೆ ಸರಕಾರ ಕೊಟ್ಟರೆ, ಗಂಟು ಮುಊಟೆ ಕಟ್ಟಿ ವಲಸೆಗೆ ಹೊರಟವರು ತಮ್ಮ ನಿರ್ಧಾರವನ್ನು ಕೈಬಿಡುತ್ತಾರೆ. ಸರಕಾರ ಮಾಡಬೇಕಾದ್ದು ಅದನ್ನೆ.

ಇನ್ನು ರೈತರಿಗೆ ಬೇಕಾಗಿದ್ದು ತಾವು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಹಾಗೂ ವೈಜ್ಞಾನಿಕ ಬೆಲೆ. ಸರಕಾರ ತನ್ನ 77 ಪುಟಗಳ ಬಜೆಟ್ ನ ಯಾವ ಮುಊಲೆಯಲ್ಲೂ ವೈಜ್ಞಾನಿಕ ಬೆಲೆ ಬಗ್ಗೆ ಮಾತನಾಡುವುದಿಲ್ಲ. ರೈತ ಬೀಜ ಬಿತ್ತುವ ಹೊತ್ತಿಗೆ ತನ್ನ ಫಸಲಿಗೆ ಇಂತಿಷ್ಟು ಬೆಲೆ ಬರುತ್ತೆ ಅಂತ ಖಾತ್ರಿ ಆದರೆ ಅವನಿಗೂ ದುಡಿಯೋ ಹುಮ್ಮಸ್ಸು ಇರುತ್ತೆ. ಇದಾವುದನ್ನೂ ಮಾಡದ ಮೇಲೆ ಅದ್ಯಾವ ಹೆಚ್ಚುಗಾರಿಕೆಗೆ ಸರಕಾರ ಬಜೆಟ್ ಮಂಡಿಸಬೇಕು?

ಕೆಟ್ಟ ಸಂಪ್ರಾದಯ:

ಚುನಾವಣೆಯಲ್ಲಿ ಮತದಾರನಿಗೆ 500 ಅಥವಾ 1,000 ರೂ ದುಡ್ಡು ಕೊಟ್ಟು ಮತ ಕೇಳುವ ಚಾಳಿ ಇತ್ತೀಚೆಗೆ ಬೆಳೆದಿದೆ. ಯಡಿಯುಊರಪ್ಪ ಅದನ್ನು ಸ್ವಲ್ಪ ವಿಸ್ತರಿಸಿ ಆಯಾ ಜಾತಿಗಳ ಮಠಗಳಿಗೆ ಕೋಟಿಗಟ್ಟಲೆ ಹಣ ನೀಡಿ ಇಡೀ ಜನಾಂಗವನ್ನೇ ಓಲೈಸಿಕೊಳ್ಳೋ ಪ್ರಯತ್ನ ಮಾಡಿದ್ದಾರೆ.

ಯಡಿಯುಊರಪ್ಪ ವಿವಿಧ ಮಠಗಳಿಗೆ ಇಂತಿಷ್ಟು ಹಣ ಎಂದು ನಿಗದಿ ಮಾಡಿ ಸ್ವಾಮಿಗಳ ಆಶೀರ್ವಾದ ಪಡೆದಿರಬಹುದು. ಆದರೆ ಇಂತಹದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರಿಂದ ಈ ನಾಡಿನ ಜನ ಶಾಪ ಹಾಕುತ್ತಾರೆನ್ನುವುದನ್ನು ಆತ ಮರೆಯದಿರಲಿ. ಎಂದಿಗೂ ತೆರಿಗೆ ಕಟ್ಟದ, ಲೆಕ್ಕ ವ್ಯವಹಾರವನ್ನು ಸರಕಾರಕ್ಕೆ ಒಪ್ಪಿಸದ ಮಠಗಳಿಗೆ ಸರಕಾರದ ಹಣ ತಲುಪುವುದಾದರೆ ಈ ನಾಡಿನ ಜನತೆ ತೆರಿಗೆ ಯಾಕೆ ಕಟ್ಟಬೇಕು?

ಕೃಷ್ಣಯ್ಯ ಶೆಟ್ಟಿಯ ಲಾಡು ಮತ್ತು ಮಾಧ್ಯಮಗಳ ತೌಡು

ವೈಕುಂಠ ಏಕಾದಶಿಗೆ ಲಾಡು ನೀಡಿದ ಸಚಿವ ಕೃಷ್ಣಯ್ಯ ಶೆಟ್ಟಿ ಈ ಬಾರಿ ಶಿವರಾತ್ರಿಯಂದು ಗಂಗಾಜಲ ಕುಡಿಸಲು ತೀರ್ಮಾನಿಸಿದ್ದಾರೆ. ಸಚಿವರ ಮೌಢ್ಯತೆ ಬಗ್ಗೆ ಮಾತಾಡುವ ಮುಂಚೆ ಇಂತಹ ಮೌಢ್ಯತೆಯನ್ನೇ ನಮ್ಮ ಎಲೆಕ್ಟ್ರಾನಿಕ್ ಮಾಧ್ಯಮಗಳು ಆಶ್ರಯಿಸಿರುವುದು ಅತ್ಯಂತ ಖೇದದ ವಿಷಯವಾಗಿದೆ.ಮೂಢನಂಬಿಕೆಗಳನ್ನು ಅಗೋಚರ, ಹೀಗೂ ಉಂಟೆ ಎಂದು ಇನ್ನಿಷ್ಟು ಮೌಢ್ಯಕ್ಕೆ ಜನಸಾಮಾನ್ಯರನ್ನು ನೂಕಲು ಹಗಲಿರಳು ವಿವಿಧ ಚಾನೆಲ್‌ಗಳು ಪ್ರಯತ್ನ ನಡೆಸುತ್ತಲೆ ಬರುತ್ತಿವೆ. ಜ್ಯೋತಿಷ್ಯಗಳಂತೂ ವರ್ತಮಾನದ ಎಲ್ಲಾ ವಿಷಯಗಳಿಗೂ ಭವಿಷ್ಯ ಹೇಳಲಾರಂಭಿಸಿದ್ದಾರೆ.
ಇತ್ತೀಚಿನ ’ವಾಲ್ಯೆಂಟೈನ್ ಡೇ’ ಸಂದರ್ಭದಲ್ಲೂ ಜ್ಯೋತಿಷ್ಯಿಯೊಬ್ಬರು ಯಾವ ಯಾವ ನಕ್ಷತ್ರದಲ್ಲಿ ಜನಿಸಿದವರು ಪ್ರೀತಿಸಿ ಮದುವೆಯಾಗುತ್ತಾರೆ. ವಿಚ್ಛೇದನೆ ಪಡೆಯುತ್ತಾರೆ ಎಂಬ ಚರ್ಚೆ ನಡೆಸಿಕೊಟ್ಟಿದ್ದಂತೂ ಇದರ ಅತಿರೇಕ ಆಗಿತ್ತು. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದರೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ ಅವನ ಹೆಸರು, ಜನ್ಮದಿನಾಂಕ ಎಲ್ಲವನ್ನೂ ನೋಡಿ ಆತ್ಮಹತ್ಯೆಯ ಯೋಗ ಅವನಿಗಿತ್ತು ಎಂದು ವಾದಿಸಬಹುದು. ಅಥವಾ ಶಾಸಕ ಸಂಪಂಗಿ ಈ ಈ ಸಮಯದಲ್ಲಿ, ಈ ಮೂಹರ್ತದಲ್ಲಿ ಲಂಚ ಸ್ವೀಕರಿಸಿದ್ದರೆ ಸಿಕ್ಕು ಬೀಳುತ್ತಿರಲಿಲ್ಲ ಎನ್ನುವವರೆಗೆ ಹೋಗಬಹುದು. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸದೆ, ಹಬ್ಬ ಹರಿದಿನಗಳು ಹಾಗೂ ಮಠಾಧೀಶರ ಸಮಾರಂಭ, ಧಾರ್ಮಿಕ ಸಮಾರಂಭಗಳ ವರದಿಗಳಂತೂ ದಿನಂಪೂರ್ತಿ ಇಲ್ಲದ ವಿಶೇಷಣಗಳ ಜೊತೆ ಪಾಲಿಸಬೇಕಾದ ಆಚರಣೆಗಳು ಎನ್ನುವಂತೆ ಬಿಂಬಿಸಲಾಗುತ್ತಿದೆ.
ಈ ನಡುವೆ ರಾಜಕಾರಣಿ ಅಥವಾ ಸಿನಿಮಾ ನಟರು ಕಾಣಿಸಿಕೊಂಡರೆ ಅದಕ್ಕೊಂದು ರಂಗು ಕೊಡಲಾಗುತ್ತಿದೆ. ಈ ನಡುವೆ ಅಸ್ತಾ, ಸಂಸ್ಕಾರ, ಗಾಡ್ ಮತ್ತಿತರ ಚೆನಾಲ್‌ಗಳಂತೂ ಜನರನ್ನು ಎಲ್ಲಿಗೆ ಕರೆದೊಯ್ಯುತ್ತಿವೆಯೇ ನೋಡಬೇಕು. ದಿನ ಪತ್ರಿಕೆಯಲ್ಲಿ ದಿನ ಭವಿಷ್ಯ ಇರಬೇಕೆ ಬೇಡವೇ ಎಂಬ ಚರ್ಚೆಯೊಂದು ಈ ಹಿಂದೆ ನಡೆದಿತ್ತು. ಹೌದೇ? ಇಂತಹ ಚರ್ಚೆ ನಡೆಯಿತೇ? ಎಂಬ ಸ್ಥಿತಿಗೆ ಬಂದು ಮುಟ್ಟಿದ್ದೇವೆ. ಕನ್ನಡದ ಎಲ್ಲಾ ದಿನಪತ್ರಿಕೆಗಳು ದಿನ ಭವಿಷ್ಯ, ಅಣಿಮುತ್ತುಗಳು, ಆಶೀರ್ವಚನಗಳನ್ನು ಆಶ್ರಯಿಸಿವೆ. ಇನ್ನೂ ಕೃಷ್ಣಯ್ಯ ಶೆಟ್ಟಿ ’ಗಂಗಾಜಲ’ದ ಬಗ್ಗೆ ಮಾಧ್ಯಮಗಳಲ್ಲಿ ಯಾಕೇ ಚರ್ಚೆಯಾಗುವುದಿಲ್ಲ ಎನ್ನುವದಕ್ಕೆ ಇಷ್ಟೆಲ್ಲಾ ಹೇಳಬೇಕಾಯಿತು.

Sunday, February 15, 2009

ಶಾಂತಕುಮಾರ್ ಮತ್ತೆ ಪ್ರಜಾವಾಣಿ ನೇತಾರ

ಪ್ರಜಾವಾಣಿ ಸಂಪಾದಕರು ಬದಲಾಗಿದ್ದಾರೆ. ಎರಡು ವರ್ಷಗಳ ಹಿಂದೆ ಶಾಂತಕುಮಾರ್ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಸುಧಾ ಹಾಗೂ ಮಯುಊರ ಸಂಪಾದಕತ್ವವನ್ನು ತಮ್ಮ ಹಿರಿಯ ಸಹೋದರ ತಿಲಕ್ ಕುಮಾರ್ ಅವರಿಗೆ ವರ್ಗಾಯಿಸಿದ್ದರು. ಈಗ ಶಾಂತಕುಮಾರ್ 'ಪ್ರಜಾವಾಣಿ' ಮತ್ತು 'ಮಯುಊರ' ಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಡೆಕ್ಕನ್ ಹೆರಾಲ್ಡ್ ಮತ್ತು ಸುಧಾ ಸಂಪಾಕರಾಗಿ ತಿಲಕ್ ಕುಮಾರ್ ಮುಂದುವರಿಯಲಿದ್ದಾರೆ. ಇದೊಂದು ವಿಶಿಷ್ಟ ನಡೆ. ಇದುವರೆಗೆ ಇವರ ಕುಟುಂಬದಲ್ಲಿ ಸಂಪಾದಕತ್ವವನ್ನು ಹೀಗೆ ಹಂಚಿಕೊಂಡಿರಲಿಲ್ಲ.
ಅದಿರಲಿ, ಈ ಬದಲಾವಣೆ ಪತ್ರಿಕೆ ಸ್ವರೂಪ, ಪ್ರಸರಣಗಳ ಮೇಲೆ ಪ್ರಭಾವ ಬೀರುತ್ತದೆಯೇ?
ಕಾದು ನೋಡಬೇಕು. ಈ ಹಿಂದೆ ಶಾಂತಕುಮಾರ್ ಸ್ಥಾನಕ್ಕೆ ತಿಲಕ್ ಕುಮಾರ್ ಬಂದ ನಂತರ ಗಮನಾರ್ಹ ಬದಲಾವಣೆಗಳೇನೂ ಕಾಣಲಿಲ್ಲ. ಈಗ ಹೇಗಾಗುತ್ತೆ ನೋಡಬೇಕು.
ಒಂದಂತೂ ಸತ್ಯ. ಈ ಸಹೋದರರು ತಮ್ಮ ಹಿರಿಯರು ಸ್ಥಾಪಿಸಿದ ಪತ್ರಿಕೆಗಳ ಸಂಪಾದಕತ್ವಕ್ಕೆ ಹಗ್ಗ ಜಗ್ಗಾಟ ನಡೆಸುತ್ತಿದ್ದಾರೆಯೇ ಹೊರತು, ಹೊಸ ಸಾಧ್ಯತೆಗಳತ್ತ ದೃಷ್ಟಿ ಹರಿಸಿದ್ದು ಕಡಿಮೆ. ಆವೃತ್ತಿಗಳ ಸಂಖ್ಯೆ ಹೆಚ್ಚಿಸಿದರೇ ವಿನಃ, ಎದುರಾಗಬಹುದಾದ ಮಾರುಕಟ್ಟೆ ಸಂಬಂಧಿ ತೊಡಕುಗಳಿಗೆ ಸಿದ್ಧತೆ ನಡೆಸಲಿಲ್ಲ. 1948 ರಷ್ಟು ಹಿಂದೆಯೇ ಆರಂಭಗೊಂಡ ಡೆಕ್ಕನ್ ಹೆರಾಲ್ಡ್ ಈ ಹೊತ್ತಿಗೆ ದೇಶಾದ್ಯಂತ ಅಲ್ಲದಿದ್ದರೂ ದಕ್ಷಿಣ ಭಾರತ ರಾಜ್ಯಗಳನ್ನು ಆವರಿಸಿಕೊಳ್ಳಬಹುದಿತ್ತು. ಇಂದಿಗೂ ಹೊರರಾಜ್ಯದಲ್ಲಿ ಇವರ ಆವೃತ್ತಿ ಇಲ್ಲ. ಆ ಕಾರಣ, ಒಂದು ಕಾಲದಲ್ಲಿ ನಂ 1 ಪತ್ರಿಕೆಯಾಗಿದ್ದ ಡೆಕ್ಕನ್ ಹೆರಾಲ್ಡ್ ಈಗ ಕರ್ನಾಟಕದಲ್ಲಿಯೇ ಎರಡನೇ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಬೇಕಾದ ಪರಿಸ್ಥಿತಿ ಇದೆ.
ಜೊತೆಗೆ, ಈ ಹೊತ್ತಿಗೆ ಇವರು ಒಂದು ಸುದ್ದಿ ವಾಹಿನಿಯನ್ನು ಆರಂಭಿಸಿ ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ವಿಸ್ತರಿಸಿಕೊಳ್ಳಬಹುದಿತ್ತು. ಅದೂ ಆಗಲಿಲ್ಲ. ಆದರೆ ಒಂದಂತೂ ಸತ್ಯ ಇಂದಿಗೂ ಈ ಪತ್ರಿಕೆಗಳು ಕರ್ನಾಟಕ ಜನತೆ ದೃಷ್ಟಿಯಲ್ಲಿ ವಿಶ್ವಾಸಾರ್ಹ ಪತ್ರಿಕೆಗಳಾಗಿ ಉಳಿದಿವೆ. ಅದೇ ವಿಶ್ವಾಸ ಮತ್ತಷ್ಟು ವಿಸ್ತಾರಗೊಂಡಿದ್ದರೆ ಚೆಂದವಿತ್ತಲ್ಲವೆ?
ಅಂದಹಾಗೆ, ನಮ್ಮ ಮಿತ್ರರೊಬ್ಬರಿಂದ ಸುದ್ದಿಯೊಂದು ಬಂದಿದೆ. ಪ್ರಜಾವಾಣಿ ಸಂಪಾದಕೀಯ ವಿಭಾಗದಲ್ಲಿ ಅನೇಕರು ಒಮ್ಮೆಲೆ ಜ್ವರ, ನೆಗಡಿಯಿಂದ ಬಳಲುತ್ತಿದ್ದಾರಂತೆ. ಅನೇಕರು ಇದೇ ಕಾರಣಕ್ಕೆ ರಜೆ ಹೋಗಿದ್ದಾರಂತೆ. ಸಂಪಾದಕರ ಬದಲಾವಣೆಗೂ, ಈ ಜ್ವರಕ್ಕೂ ಏನಾದರೂ ಸಂಬಂಧ ಇರಬಹುದೆ?

Wednesday, February 11, 2009

ಅವ್ಯವಸ್ಥೆ ಮತ್ತು ರಣರಂಗದ ಸ್ವಾಮೀಜಿ!

ಚಿತ್ರದುರ್ಗ ಸಾಹಿತ್ಯ ಸಮ್ಮೇಳನ ಮುಗಿಯಿತು. ಪತ್ರಿಕೆಗಳಲ್ಲಿ ಸಮ್ಮೇಳನದ ವರದಿಗಳನ್ನಷ್ಟೇ ಓದಿದ ಜನತೆಗೆ, ಅಮೃತ ಮಹೋತ್ಸವ ಯಾವ ನೆನಪುಗಳನ್ನು ಕಟ್ಟಿಕೊಟ್ಟಿದೆ ಎಂಬುದರ ಪುಟ್ಟ ಪಟ್ಟಿಯೊಂದನ್ನು ಮಾಡೋಣ.
* ಧೂಳು!!!!
* ಊಟದಲ್ಲಿ ಅವ್ಯವಸ್ಥೆ
* ಕುಡಿಯಲು ನೀರಿಲ್ಲ
* ತಂಗಲು ತಾಣವಿಲ್ಲ
* ನೌಕರರಿಗೆ ಓಓಡಿ ಪತ್ರ ದೊರಕಲಿಲ್ಲ
* ಪುಸ್ತಕ ಮಳಿಗೆಗಳಲ್ಲಿ ತಿಂಡಿ ಅಂಗಡಿಗಳದೇ ಕಾರುಬಾರು
* ಸಭೆ ಮಧ್ಯೆದಲ್ಲಿಯೇ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ
* ಪೊಲೀಸ್ ಪಹರೆಯಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷ
* ನಿಲ್ಲದ ಪರದಾಟ
* ಸ್ವಾಗತ ಸಮಿತಿ ಮತ್ತು ಪರಿಷತ್ ಮಧ್ಯೆ ತಿಕ್ಕಾಟ
- ಇವುಗಳ ಮಧ್ಯೆ ಕಾಣಿಸಿದ್ದು - ಸಮ್ಮೇಳನಾಧ್ಯಕ್ಷರ ಭಾಷಣ ವರದಿ. ಅವರ ಭಾಷಣಕ್ಕಿಂತ ಹೆಚ್ಚಿನ ಮನ್ನಣೆ ಪಡೆದದ್ದು ಆ ಭಾಷಣಕ್ಕೆ ಸಿರಿಗೆರೆ ಸ್ವಾಮಿ ನೀಡಿದ ಪ್ರತಿಕ್ರಿಯೆ. ಜೊತೆಗೆ ಬರಗೂರು ರಾಮಚಂದ್ರಪ್ಪನವರ ಸಮಾರೋಪ ಭಾಷಣದ ಕಿರು ವರದಿ.
ಸಮ್ಮೇಳನಕ್ಕೆ ಒಂದೆರಡು ದಿನಗಳ ಮಟ್ಟಿಗೆ ಹೋಗಿ ಬಂದ ಮಿತ್ರರು ಹೇಳುವಂತೆ ಅಲ್ಲಿನ ಸ್ಥಳೀಯ ಆವೃತ್ತಿಗಳಲ್ಲೂ ಚಿತ್ರಣ ಇದಕ್ಕಿಂತ ಭಿನ್ನ ಇರಲಿಲ್ಲ.
ಯಾಕೆ ಹೀಗೆ? ಚಿತ್ರದುರ್ಗದ ಸಮ್ಮೇಳನ ಕೆಲ ಕಾರಣಗಳಿಗೆ ಐತಿಹಾಸಿಕ. ಇದುವರೆಗಿನ ಯಾವ ಸಮ್ಮೇಳನದ ಅಧ್ಯಕ್ಷರೂ ತಮ್ಮ ಭಾಷಣದಲ್ಲಿ ದಲಿತ ಹುಡುಗರಿಗೆ ಉತ್ತಮ ಶಿಕ್ಷಣ ಕೊಡಲು ವಸತಿ ಶಾಲೆಗಳನ್ನು ಸ್ಥಾಪಿಸಿ ಎಂದು ಮುಖ್ಯಮಂತ್ರಿಯನ್ನು ಆಗ್ರಹಿಸಿದ ಉದಾಹರಣೆ ಇಲ್ಲ. ಇದು ನಿಜ ಅರ್ಥದಲ್ಲಿ ಸಾಹಿತ್ಯ ಪರಿಷತ್ ಸಂಘಟಿಸಿದ 'ಪರ್ಯಾಯ ಸಮ್ಮೇಳನ'.
'ಅವ್ಯವಸ್ಥೆ' ವರದಿಗಾರಿಕೆಗೆ ಹಿತವಾಗಿ ಎಟುಕುತ್ತದೆ. ಆ ಹಿತಕ್ಕೆ ಮಾರುಹೋಗಿ ವರದಿಗಾರ ತನ್ನೊಳಗಿನ ಪತ್ರಕರ್ತನಿಗೆ ಸಾಯಲು ಬಿಡಬಾರದು. ಈ ಎಲ್ಲಾ ಹಿಂದಿನ ಸಮ್ಮೇಳನಕ್ಕಿಂತ ಇದು ಹೇಗೆ ಭಿನ್ನ ಎಂದು ನೋಡಬೇಕಲ್ಲ. ಊಟ ಕೊರತೆ, ವಸತಿ ಸಮಸ್ಯೆ ನಿಜಕ್ಕೂ ವರದಿಮಾಡಲೇ ಬೇಕಾದ ವಿಚಾರಗಳು. ಆದರೆ ಅದೇ ಮುಖ್ಯ ಅಲ್ಲ. ಸಮ್ಮೇಳನದ ನಾಲ್ಕೂ ದಿನ ಅದನ್ನೇ ಬರೆದರೆ ಓದುಗರ ಮನಸ್ಸಿನಲ್ಲಿ ಸಮ್ಮೇಳನಾಧ್ಯಕ್ಷರ ಆಶಯ, ಚಿತ್ರದುರ್ಗ ಜನತೆಯ ಪಾಲ್ಗೊಳುವಿಕೆಗಿಂತ ಅವ್ಯವಸ್ಥೆಯೇ ಉಳಿದುಬಿಡುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪತ್ರಿಕೆಗಳು ಬದಲಾಗಬೇಕಾದ ಅಗತ್ಯವಿದೆ.
ಡಾ.ಎಲ್ ಬಸವರಾಜು ಅವರು ಒಂದು ಹಂತದಲ್ಲಿ ಬೇಸತ್ತು ಸಮ್ಮೇಳನದಿಂದ ಹೊರನಡೆಯಬೇಕೆಂಬ ನಿರ್ಧಾರಕ್ಕೂ ಬಂದಿದ್ದರೆಂದು ಸುದ್ದಿ ಪ್ರಕಟವಾಗಿದೆ. ಅದು ನಿಜವೇ ಆಗಿದ್ದಲ್ಲಿ; ಆ ಹಿರಿಯ ಜೀವ ಅಸಮಾಧಾನಗೊಳ್ಳಲು ಸಾಕಷ್ಟು ಕಾರಣಗಳಿದ್ದವು ಎಂಬುದನ್ನು ಮಾತ್ರ ಒಪ್ಪಲೇಬೇಕು.
ಮಠದ ಸ್ವಾಮಿಗಳನ್ನು, ರಾಜಕಾರಣಿಗಳನ್ನು ಹೊರಗಿಟ್ಟು ಸಮ್ಮೇಳನ ಮಾಡಿ ಎಂದು ಬಸವರಾಜು ಅವರು ಕರೆ ಕೊಟ್ಟರು. ಅದರಲ್ಲಿ ತಪ್ಪೇನು. ಇದು ಸಾಹಿತ್ಯ ಪರಿಷತ್ ಮಾಡುತ್ತಿರುವ ಮೊದಲ ಸಮ್ಮೇಳನವಲ್ಲ. 75 ನೆಯದು. ಇಷ್ಟಾದರೂ ಸಾಹಿತ್ಯ ಪರಿಷತ್ ಸ್ವಂತ ಸಂಪನ್ಮೂಲದಿಂದ ಸಮ್ಮೇಳನ ನಡೆಸಲಿ ಎಂಬುದು ಅವರ ಮಾತಿನ ಉದ್ದೇಶ. ಮಠಗಳು ಏನೇ ಸಮಾಜ ಸುಧಾರಣೆ ಮಾಡಿದ್ದರೂ, ಅವು ಸುಧಾರಣೆಗೊಂಡಿಲ್ಲ. ಜಾತೀಯತೆಯಿಂದ ಮುಕ್ತಗೊಂಡಿಲ್ಲ. ಅವರೂ ಒಂದರ್ಥದಲ್ಲಿ ಶಕ್ತಿ ಕೇಂದ್ರ (power centres) ಆಗಿರುವ ಕಾರಣ ಹಣ ಹರಿದು ಬರುತ್ತದೆ. ಅದನ್ನೇ ಶಿಕ್ಷಣ ಕ್ಷೇತ್ರಕ್ಕೆ ಬಂಡವಾಳವಾಗಿ ವಿನಿಯೋಗಿಸುತ್ತಾರೆ, ಲಾಭದ ಬೆಳೆ ಬೆಳೆಯುತ್ತಾರೆ.
ಸಿರಿಗೆರೆ ಸ್ವಾಮೀಜಿ ಬಸವರಾಜು ಮಾತಿಗೆ ನೀಡಿದ ಪ್ರತಿಕ್ರಿಯೆಯಂತೂ ಒಬ್ಬ ಸುಸಂಸ್ಕೃತನ ಬಾಯಲ್ಲಿ ಬರುವ ಮಾತುಗಳಾಗಿರಲಿಲ್ಲ. "ಅಲ್ಲಿ ರಣರಂಗವೇ ಏರ್ಪಟ್ಟರೂ, ನಾವು ಅದರಲ್ಲಿ ಗೆದ್ದೇ ಬರುತ್ತೇವೆ" ಎನ್ನುವಾಗ, ಅವರು ಸ್ವಾಮೀಜಿಯೋ ಅಥವಾ ಅಂಡರ್ ವರ್ಲ್ಡ ಡಾನ್ ಇರಬಹುದೇ ಎಂಬ ಸಂಶಯ ಕಾಡುತ್ತದೆ. ಬರಗೂರು ತಮ್ಮ ಮಾತುಗಳಲ್ಲಿ ಹೇಳಿದಂತೆ (ಪತ್ರಿಕೆ ವರದಿಗಳು ಹೇಳುವಂತೆ) ಯಾರ ಮಾತೂ ಅಂತಿಮ ಸತ್ಯವಲ್ಲ. ಪರಸ್ಪರ ಚರ್ಚೆ, ಸಂವಾದಗಳ ಮುಊಲಕ ಸತ್ಯಗಳನ್ನು ಹುಡುಕಬೇಕಾಗುತ್ತದೆ. ಸಮಾಜಕ್ಕೆ ದಿಕ್ಕು ತೋರಿಸುವ ಸ್ಥಾನದಲ್ಲಿ ಕುಳಿತಿರುವವರು ರಣರಂಗದ ಮಾತನಾಡಿದರೆ ಹೇಗೆ?
ಒಬ್ಬ ಸ್ವಾಮೀಜಿ ಹೀಗೆ ಮಾತನಾಡಿದಾಗ ಸಮ್ಮೇಳನಾಧ್ಯಕ್ಷರು ಬೇಸರದಿಂದ ಹೊರ ನಡೆಯುವ ತೀರ್ಮಾನಕ್ಕೆ ಬಂದದ್ದೇ ಆಗಿದ್ದಲ್ಲಿ, ಅದು ಆ ಸ್ವಾಮೀಜಿಗೆ ಆದ ಅವಮಾನ!

Tuesday, February 10, 2009

ಆಚಾರ್ಯ ಅರ್ಥ ಮಾಡಿಕೊಳ್ಳಬೇಕು

ಗೃಹ ಮಂತ್ರಿ ಆಚಾರ್ಯ ಸಂಕಷ್ಟದಲ್ಲಿದ್ದಾರೆ. ಒಂಬುಡ್ಸಮನ್ ನೇಮಕ ಮಾಡ್ತೇವೆ ಎಂಬ ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅವರ ಮಂತ್ರಿಮಂಡಲ ಸಹೋದ್ಯೋಗಿಗಳಾದ ಕೆ.ಎಸ್ ಈಶ್ವರಪ್ಪ, ರಾಮಚಂದ್ರಗೌಡ ಹಾಗೂ ಸ್ವತಃ ಮುಖ್ಯಮಂತ್ರಿಯೇ ಆಚಾರ್ಯ ಅಭಿಪ್ರಾಯಕ್ಕೆ ಮಣೆ ಹಾಕಿಲ್ಲ. ಆದರೆ ಆಚಾರ್ಯ ತಮ್ಮ ರಾಗ ಬದಲಿಸಿಲ್ಲ. ತಮ್ಮ ಬ್ಲಾಗ್ ನಲ್ಲಿ ತಮ್ಮ ವಿಚಾರಧಾರೆ ಮುಂದುವರಿಸಿದ್ದಾರೆ.
ಈ ದಿನಗಳು ಮಂಗಳೂರಿಗರ ಪಾಲಿಗೆ ಅಶಾಂತಿಯ ದಿನಗಳು. ಪ್ರೊ. ಸೋಮಯಾಜಿ ಸರಕಾರವನ್ನು ಟೀಕಿಸಿದರೆ ತಪ್ಪು. ಖುದ್ದು ಜಿಲ್ಲಾ ಮಂತ್ರಿಯೇ ಕಾಲೇಜಿನ ಪ್ರಾಂಶುಪಾಲರಿಗೆ ದೂರವಾಣಿ ಕರೆ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸುತ್ತಾರೆ. ಅಂತೆಯೇ ಅವರಿಗೆ ಒಂದು ನೋಟಿಸ್ ಜಾರಿಯಾಗುತ್ತೆ. ಈ ಕುರಿತಂತೆ ಕನ್ನಡದ ಪ್ರಮುಖ ಪತ್ರಿಕೆಯ ಪ್ರಲಾಪಿಯೊಬ್ಬ ಓದುಗರ ಹೆಸರಿನಲ್ಲಿ ಒಂದು ಪತ್ರ ಬರೆದು ಸೋಮಯಾಜಿಯನ್ನು ಟೀಕಿಸುತ್ತಾನೆ. ಸರಕಾರ ಕೆಲಸ ಕೊಟ್ಟಿದೆ, ಸಂಬಳ ಕೊಡುತ್ತಿದೆ ಎಂಬ ಕಾರಣಕ್ಕೆ ಸರಕಾರದ ವಿರುದ್ಧ ಮಾತನಾಡಬಾರದು ಎಂದರೆ ಅದ್ಯಾವ ನ್ಯಾಯ.
ಒಂದು ಪತ್ರಿಕೆ ಫ್ಯಾಸಿಸ್ಟ್ ಆದರೆ, ಒಂದು ಸರಕಾರ ಫ್ಯಾಸಿಸ್ಟ್ ಧೋರಣೆ ತಳೆದರೆ ಏನೆಲ್ಲಾ ಆಗಬಹುದು ಎನ್ನುವುದಕ್ಕೆ ಮೇಲಿನ ಎರಡು ಘಟನೆಗಳು ಉದಾಹರಣೆ.
ಮಾಧ್ಯಮಗಳು ಅತಿರಂಜಿತ ವರದಿ ಬಿತ್ತರಿಸುತ್ತಿವೆ ಎಂದರೆ, ಓದುಗರು ಎಚ್ಚರಿಸುತ್ತಾರೆ. ಮಾಧ್ಯಮಗಳು ಎಚ್ಚೆತ್ತುಕೊಳ್ಳುತ್ತವೆ. ಸರಕಾರ ಒಂಬುಡ್ಸಮನ್ ನೇಮಿಸಿ ಎಚ್ಚರಿಸುವ ಅಗತ್ಯವೇನಿಲ್ಲ ಎಂಬುದನ್ನು ಆಚಾರ್ಯ ಅರ್ಥಮಾಡಿಕೊಳ್ಳಬೇಕು.

Sunday, February 8, 2009

ಮಾಧ್ಯಮಗಳಿಗೆ ಒಂಬುಡ್ಸಮನ್, ಆಚಾರ್ಯರ ಹೊಸ ವರಸೆ


ಮಂಗಳೂರು ಮತ್ತೆ ಮತ್ತೆ ಸುದ್ದಿಯಲ್ಲಿದೆ. ಕೆಲವೇ ದಿನಗಳ ಹಿಂದೆ ಪಬ್ ಮೇಲೆ ದಾಳಿ ಮಾಡಿ ಕೆಲ ಹುಡುಗಿಯರನ್ನು ಹೀನಾಯವಾಗಿ ಥಳಿಸಿತ್ತು ಶ್ರೀರಾಮಸೇನೆ ಹುಡುಗರ ದಂಡು. ಆ ಬೆಂಕಿ ತಣ್ಣಗಾಗುವ ಮುನ್ನವೇ ಕೇರಳ ಶಾಸಕರೊಬ್ಬರ ಪುತ್ರಿ ಮೇಲೆ ದಾಳಿ ನಡೆದಿದೆ. ಅನ್ಯ ಧರ್ಮದ ಹುಡುಗನೊಬ್ಬನ ಜೊತೆ ಬಸ್ ನಲ್ಲಿ ಪ್ರಯಾಣಿಸಿದ್ದೇ ಆ ಹುಡುಗಿಯ ಮೇಲಿನ ದಾಳಿಗೆ ಕಾರಣ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಹೊಸತರಲ್ಲಿ ಚರ್ಚ್ ಗಳ ಮೇಲೆ ಸರಣಿ ದಾಳಿ ನಡೆಯಿತು.

ಈ ಎಲ್ಲಾ ಘಟನೆಗಳಲ್ಲೂ ಬಹುಸಂಖ್ಯಾತ ಹಿಂದೂ ಧರ್ಮದ ಅನುಯಾಯಿಗಳ ಭಯೋತ್ಪಾದನ ಮನೋಭಾವ ಕ್ರಿಯಾಶೀಲವಾಗಿದೆ. ಅವರೆಲ್ಲರೂ ನಿಜ ಅರ್ಥದಲ್ಲಿ ಭಯೋತ್ಪಾದಕರು. ಹಾಗೆಯೇ ಆಡಳಿತದಲ್ಲಿರುವ ಬಿಜೆಪಿ ಜೊತೆ ಒಂದಲ್ಲ ಒಂದು ರೀತಿ ಸಂಪರ್ಕ ಇಟ್ಟುಕೊಂಡವರು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಿಂದೆ ಬಜರಂಗದಳದ ನೇತಾರ. ರಾಜಕೀಯ ಆಸೆ ಬೆಳೆಸಿಕೊಂಡಾಗ ಸಂಘ ಪರಿವಾರ ಹೊರಹಾಕಿತು. ಆದರೆ ಇಂದಿಗೂ ತಾತ್ವಿಕವಾಗಿ ಮುತಾಲಿಕ್ ಸಂಘ ಪರಿವಾರದ ಕಾರ್ಯಕರ್ತನೇ.

ಅಚ್ಚರಿ ಎಂದರೆ ಗೃಹ ಮಂತ್ರಿ, ತಾನು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲನಾದರೂ, ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಕೈಂಕರ್ಯದಲ್ಲಿದ್ದಾರೆ. ಮಾಧ್ಯಮಗಳು ಕ್ಷುಲ್ಲಕ ಸಂಗತಿಗಳನ್ನು ವಿಜೃಂಭಿಸುತ್ತಿವೆ ಎನ್ನುವುದು ಅವರ ಆರೋಪ. ಹಾಗೆಯೇ ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸಲು ಒಂಬುಡ್ಸಮನ್ ನೇಮಕ ಮಾಡುತ್ತಾರಂತೆ.

"ಕೈಲಾಗದವನು ಮೈ ಪರಚಿಕೊಂಡನಂತೆ..." - ಆಚಾರ್ಯ ಈ ಮಾತಿಗೆ ತಕ್ಕ ಉದಾಹರಣೆ. ಯುವತಿಯರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದನ್ನು ಮಾಧ್ಯಮ ಟೀಕಿಸಿದರೆ, ಇವರಿಗೆ ಆಗಿ ಬರುವುದಿಲ್ಲ. ಅವರ ಡಿಕ್ಷನರಿಯಲ್ಲಿ ಅದು ತೀರಾ ಸಣ್ಣ ಘಟನೆ. ಶಾಸಕರ ಪುತ್ರಿಗೇ ರಕ್ಷಣೆ ಇಲ್ಲದ್ದು ತೀರಾ ನಿರ್ಲಕ್ಷಿಸಬೇಕಾದ ಸಂಗತಿ!

ಸರಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಪಬ್ ಸಂಸ್ಕೃತಿ ವಿರೋಧಿಸುವ ಮಾತುಗಳನ್ನಾಡಿದ್ದಾರೆ. ಆಡಳಿತಕ್ಕೆ ಬಂದ ಹೊಸತರಲ್ಲಿ ನೂತನ ಅಬಕಾರಿ ನೀತಿಯನ್ನು ಜಾರಿಗೆ ತಂದು 5,000 ಕ್ಕೂ ಹೆಚ್ಚು ಪಬ್, ಬಾರ್ ಗಳಿಗೆ ಅನುಮತಿ ಕೊಡುವ ಸರಕಾರ, ಪಬ್ ಸಂಸ್ಕೃತಿ ವಿರೋಧ ಮಾಡುವ ಮಾತುಳನ್ನಾಡುತ್ತದೆ ಎಂದರೆ ಜನ ನಂಬಬೇಕೆ?

ಹೇಗೆ ವರದಿ ಮಾಡಬೇಕು, ಹೇಗೆ ಮಾಡಬಾರದು, ಯಾವುದು ಕ್ಷುಲ್ಲಕ, ಯಾವುದು ಗಂಭೀರ ಎನ್ನುವುದನ್ನು ಮಾಧ್ಯಮಗಳು ಈ ಕೋಮುವಾದಿ ಮನಸ್ಸುಗಳು ತುಂಬಿಕೊಂಡಿರುವ ಸರಕಾರದಿಂದ ತಿಳಿದುಕೊಳ್ಳಬೇಕೆ?

ಉಡುಪಿ ಶಾಸಕ ರಘುಪತಿ ಭಟ್ ಪತ್ನಿ ಅನುಮಾನಾಸ್ಪದ ಸಾವು ಸುದ್ದಿಯಾದಾಗಿನಿಂದ ಆಚಾರ್ಯರದು ಒಂದೇ ಮಾತು 'ಮಾಧ್ಯಮಗಳು ಮಿತಿ ಮೀರಿ ವರ್ತಿಸುತ್ತಿವೆ'. ಫ್ಯಾಸಿಸ್ಟ್ ಮನಸುಗಳಿಗೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇರುವುದಿಲ್ಲ. ಅಂತೆಯೇ ಟೀಕೆಗಳನ್ನು ಸಹಿಸುವುದಿಲ್ಲ. ಆಚಾರ್ಯ ಇದಕ್ಕಿಂತ ಹೊರತಲ್ಲ.

Friday, February 6, 2009

ಲ್ಯಾಪ್‌ಟಾಪ್ ಪತ್ರಕರ್ತರು



ಎಲ್ಲವೂ ಹಣದಿಂದ ಕೊಳ್ಳಬಹುದು ಎಂದೇ ತಿಳಿದಿರುವ ಗಣಿ ಜನಾರ್ಧನ ರೆಡ್ಡಿ ಗ್ಯಾಂಗ್ ರಾಜಕಾರಣವನ್ನು ಇದೇ ರೀತಿ ಭಾವಿಸಿ ತಮ್ಮ ಬೆಂಬಲಿಗ ಶಾಸಕರನ್ನು ಚುನಾಯಿಸಿ ಸಂಖ್ಯೆ ಹೆಚ್ಚು ಮಾಡಿಕೊಂಡು ರಾಜ್ಯಪ್ರಭುತ್ವವನ್ನೇ ಮುನ್ನಡೆಸುತ್ತಿರುವಾಗ ಪಾಪ ಯಡಿಯೂರಪ್ಪ ತಾಳಕ್ಕೆ ತಕ್ಕಂತೆ ಕುಣಿಯುವುದು ಬಿಟ್ಟು ಬೇರೇನೂ ಮಾಡಲು ಸಾಧ್ಯ? ಈ ನಡುವೆ ಪ್ರಜಾಪ್ರಭುತ್ವದ ೪ನೇಯ ಅಂಗ ಪತ್ರಿಕೆಗಳು ಯಾವ ಲೆಕ್ಕ?


ಪ್ರಜಾಪ್ರಭುತ್ವದ ಕಾವಲು ನಾಯಿಗಳನ್ನು ತನ್ನ ಸಾಕು ನಾಯಿ ಮಾಡಿಕೊಳ್ಳುವುದು ಎಷ್ಟು ಸುಲಭ ಎಂದು ಸ್ವತಃ ಒಂದು ದಿನ ಪತ್ರಿಕೆಯ ಸಂಪಾದಕರಾಗಿರುವ ಜನಾರ್ಧನ ರೆಡ್ಡಿಗೆ ಹೇಳಿಕೊಡಬೇಕಿಲ್ಲ. ಜನಾರ್ಧನ ರೆಡ್ಡಿ ಅವರನ್ನು ಗುಟ್ಟಾಗಿ ಕಂಡ ದೊಡ್ಡಗಂಟಲಿನ ದಿನ ಪತ್ರಿಕೆಯ ಸಂಪಾದಕರೊಬ್ಬರು ತಾವು ರೀನಿವಲ್ ಆಗಲು ಇರುವ ಕಷ್ಟ ನಿವೇದಿಸಿಕೊಂಡು ಕೃತಾರ್ಥರಾದ ವರ್ತಮಾನ ಬಂದಿದೆ.


ಆಂಧ್ರದಲ್ಲಿ ಗಣಿಗಾರಿಕೆ ನಡೆಸುವ ಪರವಾನಿಗೆ ಪಡೆದು ಕರ್ನಾಟಕದ ೩೫ ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಾ ಕನ್ನಡ ನೆಲವನ್ನು ಆಂಧ್ರಕ್ಕೆ ಸೇರಿಸಿ ಬಿಟ್ಟ ಜನಾರ್ಧನ ರೆಡ್ಡಿ ಪವಾಡವನ್ನು ಕನ್ನಡ ನೆಲ, ಜಲದ ಬಗ್ಗೆ ಮಾತನಾಡುವ ಕನ್ನಡಪರ ಸಂಘಟನೆಗಳು ಯಾಕೋ ಮೈ ಮರೆತಿವೆ. ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾಗದಂತೆ ನೋಡಿಕೊಳ್ಳಲು ಒಂದು ಕಡೆ ಶಿವಸೇನೆ ಮತ್ತೊಂದು ಕಡೆ ಸರ್ಕಾರ ಮುಗಿದು ಹೋಗಿರುವ ಬೆಳಗಾವಿ ಗಡಿ ಸಮಸ್ಯೆ ಎತ್ತುವ ಮೂಲಕ ಕನ್ನಡ ನೆಲ ಕದಿಯುತ್ತಿರುವುದನ್ನು ಮುಚ್ಚಿ ಹಾಕಲಾಯಿತು.


ಪಾಪ ವಿರೋಧ ಪಕ್ಷಗಳು ಕೂಡಾ ಇದನ್ನೇ ಮಾತನಾಡಿ ಅಧಿವೇಶನ ತುಂಬಾ ಗಲಾಟೆ ಮಾಡಿದವು. ಕನ್ನಡ ನೆಲದಲ್ಲಿದ್ದ ಐತಿಹಾಸಿಕ ಸುಂಕ್ಲಮ್ಮದೇವಿಯ ಗುಡಿಯು ಗಣಿಗಾರಿಕೆಯಿಂದ ಶಿಥಿಲವಾಗುತ್ತಿದೆ ಎಂದು ನಮ್ಮ ಎಲ್ಲಾ ಮಾಧ್ಯಮಗಳು ವರದಿ ಮಾಡಿದ್ದವು. ವಿದ್ಯುನ್ಮಾನ ಮಾಧ್ಯಮಗಳು ಶಿಥಿಲಗೊಳ್ಳುತ್ತಿರುವ ಗುಡಿಯ ದೃಶ್ಯಗಳನ್ನು ಸೆರೆ ಹಿಡಿದು ವಿಶೇಷ ವರದಿ ಮಾಡಿದ್ದವು. ನಂತರ ಗುಡಿಯ ರಿಪೇರಿ ನಡೆಸಿದ ಜನಾರ್ಧನ ರೆಡ್ಡಿ ಎಲ್ಲಾ ಮಾಧ್ಯಮದವರನ್ನು ಕರೆದುಕೊಂಡು ಗುಡಿಗೆ ಏನೋ ಆಗಿಲ್ಲ ಎಂದು ವರದಿ ಮಾಡಿಸಿದ್ದರು. ಈ ಗುಡಿಯು ಕನ್ನಡ ನೆಲದಲ್ಲಿದೆ ಎಂಬ ಅಂಶ ಗೊತ್ತಾಗುತ್ತಿದ್ದಂತೆ ಇಡೀ ಗುಡಿಯನ್ನು ಗುಡಿಸಿ ಹಾಕಿಯೇ ಬಿಟ್ಟರು. ಈಗ ಅಲ್ಲಿ ಗುಡಿ ಇತ್ತು ಎಂದರೆ ಯಾರು ನಂಬುವುದಿಲ್ಲ. ಈ ಬಗ್ಗೆ ನಮ್ಮ ಯಾವ ಮಾಧ್ಯಮಗಳು ತುಟಿ ಪಿಟ್ಟೆಂದಿಲ್ಲ.


ಗುರುವಾರದಂದು ರಾತ್ರಿ ಬಳ್ಳಾರಿಯ ಎಲ್ಲಾ ಮಾಧ್ಯಮದವರನ್ನು ಕರೆಸಿಕೊಂಡ ಜನಾರ್ಧನ ರೆಡ್ಡಿ ಒಂದು ಲಕ್ಷ ರೂ. ಮೌಲ್ಯದ ಲ್ಯಾಪ್‌ಟಾಪ್ ನೀಡಿದ್ದಾರೆ. ಅಲ್ಲದೆ ತಲಾ ವರದಿಗಾರರಿಗೆ ಒಂದು ಬೆಲೆ ಬಾಳುವ ಸೈಟ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ ಎಂಬ ಮಾಹಿತಿಗಳಿವೆ.ಕೃತಾರ್ಥಭಾವದಲ್ಲಿ ನರಳುತ್ತಿರುವ ಪತ್ರಕರ್ತರ ಪೆನ್ನಿನಲ್ಲಿ ರೆಡ್ಡಿ ವಿರುದ್ಧ ಬರೆಯುವ ಶಾಯಿ ಈಗ ಮುಗಿದು ಹೋಗಿದೆ.


ಮುದ್ರಣ, ದೃಶ್ಯ ಮಾಧ್ಯಮದ ಜಿಲ್ಲಾ ವರದಿಗಾರರಂತೂ ಇದರಿಂದ ಪುಳುಕಿತರಾಗಿ ರಾತ್ರಿ ರಂಗಾಗಿ ಪಾರ್ಟಿ ಆಚರಿಸಿದ ವರದಿಗಳು ಬಂದಿವೆ. ಈಗ ಬಳ್ಳಾರಿಯಲ್ಲಿರುವ ಪತ್ರಕರ್ತರನ್ನು ಲ್ಯಾಪ್‌ಟಾಪ್ ಪತ್ರಕರ್ತರೆಂದು ಕರೆಯಬಹುದು. ಪ್ರಜಾಪ್ರಭುತ್ವದ ಕಾವಲು ನಾಯಿ, ಗಣಿಧಣಿಗಳ ಸಾಕು ನಾಯಿಯಾದ ಕಥೆ ಎಂದು ಇದನ್ನು ಮರುನಾಮಕರಣ ಮಾಡಬಹುದೇ?