Friday, October 31, 2008

ಯಾರಿಗೆ ಬೇಕು ಶಾಸ್ತ್ರೀಯ ಸ್ಥಾನಮಾನ?

ಕನ್ನಡ ಮೊದಲು ಜನಪದವಾಗಬೇಕು
ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ಸಿಕ್ಕಿದೆ. ನಿನ್ನೆ ರಾತ್ರಿ ಸುದ್ದಿವಾಹಿನಿಗಳಲ್ಲಿ, ಇಂದಿನ ಪತ್ರಿಕೆಗಳಲ್ಲಿ ಅದೇ ಸುದ್ದಿ. ಎಲ್ಲೆಲ್ಲೂ ಕನ್ನಡ ಡಿಂಡಿಮವಂತೆ! ಮುಗಿಲು ಮುಟ್ಟಿದ ಹರ್ಷೋದ್ಗಾರವಂತೆ!! "ಇಂದು ಕೇವಲ ರಾಜ್ಯೋತ್ಸವ ಅಲ್ಲ, ವಿಜಯೋತ್ಸವ" ಎಂದು ಯಡಿಯೂರಪ್ಪ ಫರ್ಮಾನು ಹೊರಡಿಸಿದ್ದಾರೆ. ಹಿರಿಯ ಸಾಹಿತಿ ಹಾಗೂ ಮಾಜಿ ಜಾತೀವಾದಿ-ಕುಲಪತಿ ದೇಜಗೌ ಸಿಕ್ಕಾಪಟ್ಟೆ ಖುಷಿಯಿಂದ ಕುಣಿದರಂತೆ. ಸುದ್ದಿ ವಾಹಿನಿಯೊಂದಕ್ಕೆ ಬೈಟ್ ಕೊಡುತ್ತಾ ಸನ್ಮಾನ್ಯರು ಹೇಳಿದ್ದು "ಹಳ್ಳಿಗಳಲ್ಲಿ ಕೂಡಾ ಶಾಸ್ತ್ರೀಯ ಸ್ಥಾನಮಾನದ ಬಗ್ಗೆ ಅರಿವು ಮೂಡಿತ್ತು. ನಾನು ಹಳ್ಳಿ ಕಡೆ ಹೋದಾಗೆಲ್ಲ ಅಲ್ಲಿಯ ಜನ ಶಾಸ್ತ್ರೀಯ ಸ್ಥಾನಮಾನ ಸಿಕ್ತಾ ಅಂತ ಪ್ರಶ್ನೆ ಮಾಡ್ತಾ ಇದ್ರು". ಕೆಲವು ಸುದ್ದಿವಾಹಿನಿಗಳಂತೂ ದಶಕಗಳ ಹೋರಾಟಕ್ಕೆ ಸಂದ ಜಯ ಎಂಬಂತೆ ಬಣ್ಣಿಸಿದ್ದಾರೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದಕ್ಕಿದ್ದಕ್ಕೆ ಇಷ್ಟೆಲ್ಲಾ ಸಂಭ್ರಮ ಪಡುತ್ತಿರುವುದನ್ನು ಕಂಡರೆ ನಗು ಬರುತ್ತಿದೆ. ಈ ಸ್ಥಾನದಿಂದ ಯಾರಿಗೆ ಲಾಭ ಎನ್ನುವುದನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ.

ಕನ್ನಡ ಭಾಷೆ ಮೂಲ ನೆಲೆ ಅಧ್ಯಯನಕ್ಕೆಂದು ಒಂದಿಷ್ಟು ಹಣ ಕೇಂದ್ರ ಸರಕಾರದಿಂದ ಬಿಡುಗಡೆಯಾಗುತ್ತದೆ. ಇಲ್ಲಿಯೇ ಒಂದು ಮಾತು ಸ್ಪಷ್ಟಪಡಿಸಬೇಕು - ಆಧುನಿಕ ಕನ್ನಡ ಭಾಷೆ ಬಳಕೆ, ಅದರ ಉಪಭಾಷೆಗಳು, ಸಾಹಿತ್ಯ ಅಧ್ಯಯನಕ್ಕೆ ಈ ಅನುದಾನದ ಅಡಿಯಲ್ಲಿ ಸಾಧ್ಯವಿಲ್ಲ. ಕನ್ನಡ ಭಾಷೆ ಅಧ್ಯಯನ ಕೇಂದ್ರಗಳು ಸ್ಥಾಪನೆಯಾಗುತ್ತವೆ. ಕನ್ನಡ ವಿದ್ವಾಂಸರಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಮನ್ನಣೆ ದೊರಕುತ್ತದೆ. ಕೆಲವು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಅಧ್ಯಯನ ಪೀಠಗಳು ಸ್ಥಾಪನೆಯಾಗುತ್ತವೆ.

ಈಗ ಹೇಳಿ ಹಳ್ಳಿ ರೈತ, ಕೂಲಿ ಕಾರ್ಮಿಕ, ಕನ್ನಡ ಪತ್ರಕರ್ತ ಸಂಭ್ರಮ ಪಡಲು, ಡಿಂಡಿಮ ಬಾರಿಸಲು ಇರುವ ಕಾರಣಗಳಾದರೂ ಏನು? ದೇಜಗೌ ಎದುರು ಪ್ರಶ್ನೆ ಕೇಳಿದ ಹಳ್ಳಿಗ ಮಾತನಾಡುವುದು ಶುದ್ಧ ಜಾನಪದ ಕನ್ನಡ. ಶಾಸ್ತ್ರೀಯ ಅನ್ನೋ ಪದವನ್ನು ಪಕ್ಕಾ ಹಳ್ಳಿಗರು ತಮ್ಮ ಮಾತುಗಳಲ್ಲಿ ಬಳಸುವುದನ್ನು ಯಾರೂ ಕೇಳಿರಲಾರರು. ಹಾಗಿರುವಾಗ ಕನ್ನಡ ಏಕದಂ ಶಾಸ್ತ್ರೀಯ ಭಾಷೆ ಆದರೆ ಅವರಿಗೆ ಅದರಿಂದ ಆಗುವ, ಲಾಭ ಒತ್ತಟ್ಟಿಗಿರಲಿ, ಪರಿಣಾಮವೇನು?

ಈ ಮೊದಲು ಯಡಿಯೂರಪ್ಪ ಯೋಜಿಸಿದಂತೆ, ದೆಹಲಿಗೆ 300 ಜನರ ನಿಯೋಗವನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದರೆ, ಕನಿಷ್ಠವೆಂದರೂ 3 ಕೋಟಿ ರೂ (ಒಬ್ಬರಿಗೆ ಕನಿಷ್ಠ ಒಂದು ಲಕ್ಷದಂತೆ) ಖರ್ಚಾಗುತ್ತಿತ್ತು. ಈ ಹಿಂದೆ ಕೆಲ ಸಾಹಿತಿಗಳ ನಿಯೋಗವನ್ನೂ ಕೊಂಡೊಯ್ದಿದ್ದರು. ಆ ಎಲ್ಲಾ ಖರ್ಚುಗಳನ್ನು ಗುಡ್ಡೆ ಹಾಕಿದರೆ, ಕೇಂದ್ರ ಸರಕಾರದಿಂದ ದೊರಕುವ ಅನುದಾನದ ಮೊತ್ತಕ್ಕೆ ಸರಿಸಮಾನಾಗುತ್ತಿತ್ತು!

ತಮಿಳಿಗೆ 2004ರ ಅಕ್ಟೋಬರ್ನಲ್ಲಿ ಕೇಂದ್ರ ಸರಕಾರ ಶಾಸ್ತ್ರೀಯ ಸ್ಥಾನಮಾನ ನೀಡಿತು. ಅಲ್ಲಿಂದಲೇ ಹೋರಾಟ ಶುರು. ತಮಿಳಿಗೆ ಕೊಟ್ಟಿದೀರಿ, ನಮಗೂ ಕೊಡಿ - ಇದು ಇದುವರೆಗಿನ ಹೋರಾಟದ ಕೇಂದ್ರ ಬಿಂದು. ತಮಿಳಿಗೆ ಕೊಡದೇ ಹೋಗಿದ್ದರೆ, ದೇಜಗೌ ಉಪವಾಸ ಕೂರುತ್ತಿರಲಿಲ್ಲ, ಅದ್ಯಾಕೆ ಯಡಿಯೂರಪ್ಪ ದೆಹಲಿಗೆ ನಿಯೋಗ ಕರೆದುಕೊಂಡು ಹೋಗೋ ಮಾತೂ ಆಡುತ್ತಿರಲಿಲ್ಲ. ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾದ ಒಂದು ಸಂಗತಿ ಎಂದರೆ, ಒಂದು ಭಾಷೆ ಶಾಸ್ತ್ರೀಯವಾದರೆ, ಅದು ಕೆಲವೇ ಕೆಲವು ವಿದ್ವಾಂಸರ ಭಾಷೆ ಆಗುತ್ತದೆ. ಅದು ಜನಪದವಾದಾಗ ಬಹಳ ಕಾಲ ಉಳಿಯುತ್ತದೆ.

ಸರಕಾರ, ಜನತೆ ಮುಂದಿರುವ ಸವಾಲು - ಕನ್ನಡವನ್ನು ಜನಪದವನ್ನಾಗಿ ಉಳಿಸುವುದು ಹೇಗೆ? ಕನ್ನಡ ಮಾತ್ರ ಗೊತ್ತಿರುವ ವ್ಯಕ್ತಿ ಬ್ಯಾಂಕ್ ಗೆ ಹೋದಾಗ ಹಣ ಹಿಂದಕ್ಕೆ ಪಡೆಯಲು ಸುಲಭವಾಗಿ ವ್ಯವಹರಿಸುವಂತಾಗಬೇಕು. ಯಾರದೋ ಹಿಕಮತ್ತಿಗೆ ಜಮೀನು ಕಳೆದುಕೊಂಡ ರೈತ ನ್ಯಾಯಾಲಯದಲ್ಲಿ ದಾವೆ ಹೂಡಿದರೆ, ಅಲ್ಲಿ ನಡೆಯುವ ವಾದ-ವಿವಾದ ಅವನಿಗೆ ಅರ್ಥವಾಗುವಂತಿರಬೇಕು. ರೋಗಿ ತನ್ನ ವೈದ್ಯ ಕೊಡುವ ಔಷಧಿ ಯಾವುದು ಎನ್ನುವುದನ್ನು ಓದುವಂತಿರಬೇಕು. ಕನ್ನಡ ಜನಪದವಾಗುವುದೆಂದರೆ ಹೀಗೆ. ಕನ್ನಡ ಜನಪದವಾಗಲೇ ಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ, ಕೆಲವೇ ದಿನಗಳಲ್ಲಿ ಭಾಷೆ ಸಾಯುತ್ತದೆ. ಇಂಗ್ಲಿಷ್ ಅನಿವಾರ್ಯ ಎಂಬ ಭಾವನೆ ಎಲ್ಲರಲ್ಲೂ ಹುಟ್ಟುತ್ತದೆ. ಆಗ ಕನ್ನಡ ವಿದ್ವಾಂಸರೆಲ್ಲ "ನಮ್ಮದು ಶಾಸ್ತ್ರೀಯ ಭಾಷೆ" ಎಂದು ಜಪಿಸುತ್ತಾ ವಿವಿಧೆಡೆಯಿಂದ ಬರುವ ಅನುದಾನಕ್ಕೆ ಬಾಯಿಬಿಟ್ಟುಕೊಂಡು ಕನ್ನಡದ ತಿಥಿಮಾಡಲಿ.

ಆಗ ಅದೇ ಹಳ್ಳಿಗ, ಇದೇ ದೇಜಗೌ ಅವರನ್ನು ಪ್ರಶ್ನಿಸುತ್ತಾನೆ - "ಶಾಸ್ತ್ರೀಯ ಭಾಷೆ ಅಂತ ನೀವು ಹೇಳಿದ್ದು, ಈಗ ಕನ್ನಡ ಮಾತಾಡೋರು ಯಾರೂ ಇಲ್ಲದಂಗೆ ಆಗೋಗದೆ ಅಲ್ವಾ ಗೌಡ್ರೆ?"

ಪ್ರಚಾರ ಕೊಟ್ಟರೆ ಪ್ರಶಸ್ತಿ!

ಕನರ್ಾಟಕ ಸರಕಾರ ಏಳು ಮಂದಿ ಪತ್ರಕರ್ತರನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ವಿವಿಧ ರೀತಿಯಲ್ಲಿ ಬಿಜೆಪಿ ಪಕ್ಷಕ್ಕೆ ಸಹಾಯ ಮಾಡಿದ ಅನೇಕರು ಈ ಪಟ್ಟಿಯಲ್ಲಿದ್ದಾರೆ. ಪಟ್ಟಿಯಲ್ಲಿ ಮೊದಲಿಗರು - ಪದ್ಮರಾಜ ದಂಡಾವತಿ. ಪ್ರಜಾವಾಣಿ ಸಹ ಸಂಪಾದಕರು. ಆರ್.ಪಿ ಜಗದೀಶ್ ನಂತರ ಪ್ರಜಾವಾಣಿಯನ್ನು ಬಿಜೆಪಿವಾಣಿಯನ್ನಾಗಿ ಪರಿವತರ್ಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಬಿಜೆಪಿ ತನ್ನ ಕಾರ್ಯಕರ್ತರಿಗಾಗಿ ನಡೆಸಿದ ವಿಶೇಷ ಪತ್ರಿಕಾ ಕಾರ್ಯಗಾರದಲ್ಲಿ "ರಾಜಕಾರಣಿಗಳು ಪತ್ರಿಕೆಗಳನ್ನು ಹೇಗೆ ಬಳಸಿಕೊಳ್ಳಬೇಕು" ಎಂಬುದರ ಬಗ್ಗೆ ಉಪನ್ಯಾಸ ಕೊಟ್ಟು ಬಂದವರು ಪದ್ಮರಾಜ ದಂಡಾವತಿ. ಅವರ ಉಪನ್ಯಾಸಕ್ಕೆ ಪುಟ್ಟ ಸಂಭಾವನೆ - ಒಂದು ಲಕ್ಷ ರೂ ನಗದು ಹಾಗೂ 20 ಗ್ರಾಂ ಚಿನ್ನ. ಅಥರ್ಾತ್ ರಾಜ್ಯೋತ್ಸವ ಪ್ರಶಸ್ತಿ!ಇನ್ನು ರವಿ ಬೆಳಗೆರೆ. ಬಳ್ಳಾರಿ ರೆಡ್ಡಿಪಟಾಲಂಗೆ ಆಪ್ತ. ತಾನು ಪತ್ರಕರ್ತ ಎನ್ನುವುದನ್ನೂ ಮರೆತು ಕೋಮುವಾದಿ ಪಕ್ಷ ಬಿಜೆಪಿಗೆ ಮತ ನೀಡಿ ಎಂದು ಬಳ್ಳಾರಿಯಲ್ಲಿ ಪ್ರಚಾರ ಮಾಡಿದವರು. ಗಣಿ ಮಾಫಿಯಾ ಹಿನ್ನೆಲೆ ರಾಜಕಾರಣಿಗಳು ತಮ್ಮ ಗೆಳೆಯನ ಋಣ ತೀರಿಸಲು ತೀರಾ ರಾಜ್ಯೋತ್ಸವವನ್ನೂ ಕೊಡಿಸದಿದ್ದರೆ ತಪ್ಪಾಗುವುದಿಲ್ಲವೆ?ಬೇಸುನ ಮಲ್ಯ - ಆರ್.ಎಸ್.ಎಸ್ ಮುಖವಾಣಿ ವಿಕ್ರಮ ಸಂಪಾದಕರಾಗಿದ್ದವರು. ಬಿಜೆಪಿ ಅಧಿಕಾರಕ್ಕೆ ಬಂದಾಗಲಾದರೂ ವಿಕ್ರಮ ಸಂಪಾದಕರಿಗೆ ಮಣೆ ಹಾಕದಿದ್ದರೆ ಕೇಶವ ಕೃಪ ಸುಮ್ಮನಿದ್ದೀತೆ?ಕೆ.ಬಿ. ಗಣಪತಿ - ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಸಂಪಾದಕರು ಹಾಗೂ ಮಾಲೀಕರು. ಮೈಸೂರು ಭಾಗದಲ್ಲಿ ಸಂಘ ಪರಿವಾರದವರು ತಮ್ಮ ವಿಕ್ರಮ, ಅಸೀಮಾ, ಹೊಸದಿಗಂತದಂತಹ ಪತ್ರಿಕೆಗಳನ್ನು ಪ್ರಸರಣ ಮಾಡುವ ಅಗತ್ಯವೇ ಇಲ್ಲ. ಕಾರಣ ಆ ಪತ್ರಿಕೆಗಳ ಹೊಣೆಯನ್ನು ಮೈಸೂರು ಮಿತ್ರ ಯಶಸ್ವಿಯಾಗಿ ನಿಭಾಯಿಸುತ್ತಿದೆ. ಆ ಕಾರಣ ಅವರಿಗೂ ಒಂದು ರಾಜ್ಯೋತ್ಸವ.ಉಳಿದಂತೆ ಇಮ್ರಾನ್ ಖುರೇಶಿ, ಧಾರವಾಡದ ಕೃಷ್ಣಮೂತರ್ಿ ಹೆಗಡೆ, ಶಿವಮೊಗ್ಗದ ಚಂದ್ರಕಾಂತ್ ಇವರಿಗೆ ಪ್ರಶಸ್ತಿ ಲಭಿಸಿದೆ. ಇವರಿಗೆ ಯಾವ್ಯಾವ ಲಾಬಿಗಳು ಪ್ರಶಸ್ತಿ ಗಿಟ್ಟಿಸಿತೋ? ಅಥವಾ ಅವರೆಲ್ಲಾ ನಿಜ ಅರ್ಥದಲ್ಲಿ ಅರ್ಹರಾಗಿದ್ದರೆ ಸುದ್ದಿಮಾತು ಅಭಿನಂದನೆಗಳು. ಮತ್ತೊಂದು ಸಂಗತಿ: 89 ಮಂದಿ ಪಟ್ಟಿ ಮೇಲೆ ಹಾಗೇ ಕಣ್ಣಾಡಿಸಿ, ನಿಮಗೆ ಒಂದೂ ಕ್ರಿಶ್ಚಿಯನ್ ಹೆಸರು ಕಾಣುವುದಿಲ್ಲ. ಪ್ರಶಸ್ತಿಗಾಗಿ ಪರಿಗಣಿಸಿದ 24 ಕ್ಷೇತ್ರಗಳಲ್ಲಿ ಒಬ್ಬೇ ಒಬ್ಬ ಕ್ರಿಶ್ಚಿಯನ್ ಸಾಧಕರು ಕಾಣಲಿಲ್ಲವೇ ಸರಕಾರಕ್ಕೆ? ಅಥವಾ ಯಡಿಯೂರಪ್ಪ ನೇತೃತ್ವ ಸರಕಾರದ ಅಲ್ಪಸಂಖ್ಯಾತ ವಿರೋಧಿ ನೀತಿ ಪ್ರಶಸ್ತಿ ಆಯ್ಕೆಗೂ ಅನ್ವಯವಾಯಿತೆ?ಇತ್ತೀಚೆಗೆ ನಡೆದ ಚಚರ್್ಮೇಲಿನ ದಾಳಿಗಳನ್ನು "ಮತಾಂತರ ವಿರುದ್ಧ ಜನತೆ ತೋರಿದ ಪ್ರತಿಕ್ರಿಯೆ" ಎಂದು ಸಮಥರ್ಿಸಿಕೊಂಡ ಯಡಿಯೂರಪ್ಪನವರಿಂದ ಜಾತ್ಯತೀತ, ಧರ್ಮ ಸಮನ್ವಯ ಆಡಳಿತ ನಿರೀಕ್ಷಿಸುವುದೂ ತರವಲ್ಲವೇನೋ..ಅಂದಹಾಗೆ ಈ ಬಾರಿಯಿಂದ ಪ್ರಶಸ್ತಿ ಮೌಲ್ಯ ಹೆಚ್ಚಾಗಿದೆ. ಹಿಂದಿನ ವರ್ಷಗಳಲ್ಲಿ ಕೇವಲ ಹಣ ಅಥವಾ ಚಿನ್ನದ ಪದಕ ನೀಡುತ್ತಿದ್ದರು. ಈ ಬಾರಿ ಒಂದು ಲಕ್ಷ ರೂ ನಗದಿನೊಂದಿಗೆ 20 ಗ್ರಾಂ ಚಿನ್ನ ಕೂಡಾ ಲಭ್ಯ. ಮುಂದಿನ ವರ್ಷ ನಿಮಗೆ ಪ್ರಶಸ್ತಿ ಬೇಕೆಂದರೆ, ಈಗಿನಿಂದಲೇ ಪ್ರಯತ್ನಿಸಲು ಶುರು ಮಾಡಿ. ಲಾಬಿ ಜೋರಾಗಲಿದೆ.

Tuesday, October 28, 2008

ಸಾಹಿತ್ಯಕ ಮೌಲ್ಯ ಅಳೆಯಲು ಒಂದು ಕೋಷ್ಟಕ!

'ಮಯೂರ' ದಿಂದ ಇಂತಹದೊಂದು ಪ್ರಯೋಗ!

ನಮ್ಮ ಲಿಟೆರರಿ ಬ್ಯುರೋದಿಂದ

ಕತೆ, ಕಾದಂಬರಿ, ಕವಿತೆ - ಸೃಜನಶೀಲ ಮಾಧ್ಯಮ ಪ್ರಕಾರಗಳು. ತನ್ನ ಅನುಭವಕ್ಕೆ ದಕ್ಕಿದ್ದನ್ನು ಹೇಳಿಕೊಳ್ಳಲು ಮಾನವ ಕಂಡುಕೊಂಡ ಮಾಧ್ಯಮಗಳಿವು. ಬರವಣಿಗೆಯನ್ನು ಬದ್ಧತೆಯಾಗಿ ಸ್ವೀಕರಿಸಿಕೊಂಡವರು 'ಶ್ರೇಷ್ಠ' ಅಥವಾ 'ಕನಿಷ್ಟ' ಎಂಬ ವ್ಯಸನಗಳಿಗೆ ತುತ್ತಾಗುವುದಿಲ್ಲ. 'ಅಭಿವ್ಯಕ್ತಿ'ಯೇ ಮೂಲ ಉದ್ದೇಶವಾಗಿರುತ್ತೆ. ಓದುಗರು ತಮ್ಮ ಜ್ಞಾನದ ಹರವು, ಸಾಮಾಜಿಕ ಹಿನ್ನೆಲೆ ಹಾಗೂ ಇನ್ನಿತರೆ ಪ್ರೇರಣೆಗಳಿಂದ ಒಂದು ಕೃತಿಯನ್ನು ಗ್ರಹಿಸುತ್ತಾರೆ. ಅಂತೆಯೇ ವಿಮರ್ಶಿಸುತ್ತಾರೆ. ಗ್ರಹಿಕೆ ಸಾಪೇಕ್ಷ. ಆ ಕಾರಣ ಪ್ರತಿ ಓದು ಕೂಡ ಒಂದು ವಿಮರ್ಶೆ.
ಇಷ್ಟೆಲ್ಲಾ ಪೀಠಿಕೆ ಹಾಕಲು ಒಂದು ಕಾರಣವಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ನವೆಂಬರ್ ತಿಂಗಳ ಮಯೂರದಲ್ಲಿ ರಂಗಕರ್ಮಿ ಪ್ರಸನ್ನರ ಇತ್ತೀಚಿನ ಕಾದಂಬರಿ ಬಾಲಗೋಪಾಲ ವಿಮರ್ಶೆ ಪ್ರಕಟವಾಗಿದೆ. ಅಶೋಕ ಹೆಗಡೆ ವಿಮರ್ಶಕ. ಇದು ಒಂದು ಅತಿ ಸಾಧಾರಣ ಕೃತಿ ಎಂದು ಪರಿಗಣಿಸಿದ ವಿಮರ್ಶಕರು ಕಾದಂಬರಿಯ ಪ್ರಾಮುಖ್ಯವನ್ನು 0.39 ಎಂದು ನಮೂದಿಸಿದ್ದಾರೆ. ವಿಮರ್ಶಾ ಲೇಖನ ಜತೆ ಒಂದು ಕೋಷ್ಟಕವನ್ನೂ ನೀಡಿದ್ದಾರೆ. ಹತ್ತು ಗುಣಾತ್ಮಕ ಹಾಗೂ ಹತ್ತು ಋಣಾತ್ಮಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಮಾಡಿ ಕಾದಂಬರಿಯನ್ನು ಲೇಖಕರು ಡಿಸೆಕ್ಟ್ ಮಾಡಿದ್ದಾರೆ. (ಕೋಷ್ಟಕವನ್ನು ಕೆಳಗೆ ನೀಡಲಾಗಿದೆ). ಪ್ರತಿ ಅಂಶಕ್ಕೂ ಗರಿಷ್ಟ ಹತ್ತು ಅಂಕಗಳು. ಕಾದಂಬರಿಯಲ್ಲಿನ ಗುಣಾತ್ಮಕ ಅಂಶಗಳ ಒಟ್ಟು ಮೊತ್ತ 29 (100ಕ್ಕೆ). ಋಣಾತ್ಮಕ ಅಂಶಗಳು 74 (100ಕ್ಕೆ). ಕಾದಂಬರಿಯ ಪ್ರಾಮುಖ್ಯ - 29/74 = 0.39! ಅದರರ್ಥ ಈ ಕಾದಂಬರಿಯ ಮೌಲ್ಯ ಅರ್ಧಕ್ಕಿಂತ ಕಡಿಮೆ. ಈ ರೀತಿ ಸೃಜನಶೀಲ ಕೃತಿಯನ್ನು ಅಳೆಯುವುದು ಒಂದು ಪ್ರಯೋಗವಾಗಿಯೂ ಸ್ವೀಕರಿಸುವುದು ಆಗದ ಮಾತು. ಮಾರುಕಟ್ಟೆಯ ಸರಕಿನಂತೆ ಕಾದಂಬರಿಯನ್ನು ನೋಡುವ ಪ್ರಕ್ರಿಯೆಗೆ ಮಯೂರ ನಾಂದಿ ಹಾಡುತ್ತಿದೆ.
ಹೀಗೆ ಒಂದು ಕೃತಿ ಅಳೆಯಲು ಕೋಷ್ಟಕ ಸಿದ್ಧಪಡಿಸಿಬಿಟ್ಟರೆ, ಅದೇ ಕೋಷ್ಟಕ ಇಟ್ಟುಕೊಂಡು ಕಾದಂಬರಿಯನ್ನೂ ರಚಿಸಿಬಿಡಬಹುದಲ್ಲ! ಒಂದು ಉತ್ತಮ ಕಾದಂಬರಿಗೆ ಇಂತಿಷ್ಟೇ ವೈಚಾರಿಕತೆ, ಹೀಗೀಗೇ ಸಂವಹನ ಎಂದು ವಿಮರ್ಶಕರು ಹಾಗೂ ಮಯೂರದ ಸಂಪಾದಕರು ಹೇಳುವುದಾದರೆ ಒಳಿತು. ಕಾದಂಬರಿ ಬರೆಯುವ ಆಸಕ್ತಿ ಇಟ್ಟುಕೊಂಡಿರುವ ತರುಣರಿಗೆ ಮಾರ್ಗದರ್ಶನವಾದೀತು!
ಅದಿರಲಿ. ಹತ್ತಕ್ಕೆ ಹತ್ತು ಅಂಕ ಗಳಿಸುವುದೆಂದರೆ ಹೇಗೆ? ಪ್ರಸನ್ನರ ಕಾದಂಬರಿಯ ಸಂವಹನಕ್ಕೆ ಕೋಷ್ಟಕದಲ್ಲಿ ನೀಡಿರುವ ಅಂಕ ಶೂನ್ಯ! ಹಾಗಾದರೆ, ಇಲ್ಲಿ ಭಾಷೆಯೇ ಇಲ್ಲವೇ? ರಂಗಭೂಮಿ ಸಂವಹನದಲ್ಲಿ ಯಶಸ್ವಿಯಾದ ಪ್ರಸನ್ನ ಕಾದಂಬರಿ ಮೂಲಕ ಏನನ್ನೂ ಸಂವಹಿಸಲಾಗದೆ ಸಂಪೂರ್ಣವಾಗಿ ಸೋತು ಹೋದರೆ?
ಈ ಕಾದಂಬರಿಯಲ್ಲಿ ಯಶಸ್ವಿ ಸಂವಹನ ಸಾಧಿಸುವಲ್ಲಿ ಸೋತ್ತಿರುವ ಪ್ರಸನ್ನ ಮುಂದಿನ ಕಾದಂಬರಿ ಬರೆಯೋ ಹೊತ್ತಿಗೆ ಹೆಚ್ಚು ಅಂಕ ಪಡೆಯಲು ಏನು ಮಾಡಬೇಕೆಂಬುದನ್ನು ಮಯೂರದ ಸಂಪಾದಕರು ಹೇಳಿದರೆ ಒಳಿತು. ಸಾಧ್ಯವಾದರೆ ಪ್ರಸನ್ನರಿಗೆ ಸಂಪಾದಕರು ಸ್ಪೆಷಲ್ ಕ್ಲಾಸ್ ತಗೊಂಡು ಕಾದಂಬರಿ ಬರೆಯೋದನ್ನ, ವಿಮರ್ಶಾ ಕೋಷ್ಟಕದಲ್ಲಿ ಹೆಚ್ಚಿನ ಅಂಕಗಳಿಸೋ ಕಲೆಯನ್ನು ಹೇಳಿಕೊಡಬಹುದಲ್ಲ? ಜಿ.ಪಿ ಬಸವರಾಜು ಮಯೂರ ಉಸ್ತುವಾರಿ ನೋಡಿಕೊಳ್ಳುತ್ತಿರುವವರೆಗೆ ಇಂತಹ ಅಸಂಬದ್ಧ ಪ್ರಯೋಗಗಳಿಗೆ ಅವಕಾಶ ಇರಲಿಲ್ಲ. ಇತ್ತೀಚೆಗೆ ಬಸವರಾಜು ನಿವೃತ್ತಿ ಪಡೆದರು. ಮಯೂರದ ಜವಾಬ್ದಾರಿಯನ್ನು ಚ. ಹ ರಘುನಾಥ್ ಎಂಬ ಬರಹಗಾರನ ಹೆಗಲ ಮೇಲೆ ಹೊರಿಸಿದ ನಂತರವೇ ಇಂತಹ ಬರಹಗಳು ವಿಮರ್ಶೆಯಾಗಿ ಪ್ರಕಟವಾಗುತ್ತಿವೆ.
---

ಕನ್ನಡ ಕಾದಂಬರಿ ವಿಮರ್ಶಾ ಕೋಷ್ಟಕ
ಕೃತಿ: ಬಾಲಗೋಪಾಲ


ಗುಣಾತ್ಮಕ ಅಂಶ
ಕಥಾವಸ್ತು - 3; ಭಾಷೆ - 4; ಪಾತ್ರಪೋಷಣೆ - 6; ತಾರ್ಕಿಕತೆ - 5; ಚಿತ್ರಣ/ಪ್ರತಿರೂಪಗಳು - 2; ಭಾವಲೋಕ - 1; ಸಂವಹನ - 0; ಜೀವನದೃಷ್ಟಿ/ಒಳನೋಟ - 2; ಲೋಕದೃಷ್ಟಿ - 5; ತೆರೆದ ಸಾಧ್ಯತೆ/ಮುಕ್ತಾಯ - 1; ಒಟ್ಟು - 29.
ಋಣಾತ್ಮಕ ಅಂಶ
ನಿರೂಪಕನ ಮಾತುಗಳು - 8; ಗೊಂದಲ/ತದ್ವಿರುದ್ಧತೆ - 8; ವಿಕ್ಷಿಪ್ತತೆ - 9; ಅಪ್ರಸ್ತುತೆ - 7; ಅತಿಮಾತು/ವಾಚ್ಯತೆ - 10; ಉಪಮೇಯಗಳ ಕ್ಲೀಷೆ - 6; ಪೂರ್ವಗ್ರಹ - 4; ಸ್ವಮಗ್ನತೆ - 8; ಅತಿ ವೈಚಾರಿಕತೆ - 8; ಉದ್ದೇಶರಹಿತ ಪಾತ್ರಗಳ ಬಳಕೆ - 6; ಒಟ್ಟು - 74.
ಕಾದಂಬರಿಯ ಪ್ರಾಮುಖ್ಯ - 29/74 = 0.39.

Monday, October 27, 2008

ಅಧಿಕಾರ ಕೊಂಡರೆ ಅಹಂಕಾರ ಫ್ರೀ

ನಮ್ಮ ಬೆಳಗಾವಿ ಪ್ರತಿನಿಧಿಯಿಂದ
ಕಿತ್ತೂರು ಉತ್ಸವದಲ್ಲಿ ನಮ್ಮ ಜನಪ್ರತಿನಿಧಿಗಳು ಕಿತ್ತಾಡಿದ್ದು ನಿಮಗೆ ಗೊತ್ತೇ ಇದೆ. ವಿಧಾನ ಪರಿಷತ್ತು ವಿರೋಧ ಪಕ್ಷ ನಾಯಕ ಉಗ್ರಪ್ಪ ಮಾತಿಗೆ ಗಣಿ ರಾಜಕಾರಣಿ ಜನಾರ್ಧನ ರೆಡ್ಡಿ ಹಾಗೂ ಅವರ ಭಂಟ ಯುವ ಶಾಸಕ ಸುರೇಶ್ ಬಾಬು ತಿರುಗಿ ಬಿದ್ದಿದ್ದಾರೆ. ನಾಡಿನ ಜನತೆ ದೂರದರ್ಶನದಲ್ಲಿ ವೀಕ್ಷಿಸಿದಂತೆ, ಉಗ್ರಪ್ಪ ಮುಖ್ಯಮಂತ್ರಿ ವಿರುದ್ಧ ಮಾತನಾಡಿದರು. ಕಿತ್ತೂರು ಉತ್ಸವಕ್ಕೆ ತೋರಿದ ನಿರ್ಲಕ್ಷ್ಯ ಕುರಿತು ಮಾತನಾಡಿದರು. ಅಷ್ಟಕ್ಕೆ ರೆಡ್ಡಿ ಎದ್ದು ನಿಂತುಬಿಟ್ಟರು. ಇದು ರಾಜಕೀಯ ಸಮಾರಂಭವಲ್ಲ. ಹೀಗೆಲ್ಲಾ ಮಾತನಾಡುವುದು ತರವಲ್ಲ ಎಂದು ಕೂಗಾಡಿದರು. ತಕ್ಷಣವೇ ಸುರೇಶ್ ಬಾಬು ಕೂಡಾ ಎದ್ದುನಿಂತು ಅವರಿಗೆ ದನಿ ಸೇರಿಸಿದ. ಗಣಿ ಹಣದ ದೌಲತ್ತು ಆ ಹುಡುಗನನ್ನು ಹಾಗೆ ಮಾಡಿಸಿತ್ತು.
ಇಂಥದೇ ಇನ್ನೊಂದು ಘಟನೆ ಕಳೆದ ವಾರ ಬೆಂಗಳೂರಿನಲ್ಲಿ ನಡೆಯಿತು. ಮಂಡ್ಯ ನಗರಸಭಾ ಸದಸ್ಯರ ದಂಡು ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದರು. ದುಡ್ಡು ಕೊಟ್ಟು ಕೊಂಡ ಸದಸ್ಯರು ಪಕ್ಷ ಸೇರುವ ಸಮಾರಂಭಕ್ಕೆ ಪತ್ರಿಕಾ ಮಾಧ್ಯಮದವರನ್ನು ನಿರ್ಲಕ್ಷಿಸಲಾಯಿತು. ಕೇವಲ ವಿದ್ಯುನ್ಮಾನ ಮಾಧ್ಯಮ ಮಿತ್ರರನ್ನು ಆಹ್ವಾನಿಸಿದ್ದರು. ಪರಿಣಾಮ ಪತ್ರಿಕೆಗಳ ಸಿಬ್ಬಂದಿ ಬಿಜೆಪಿ ನಾಯಕರಿಗೆ ಫೋನಾಯಿಸಿ ತರಾಟೆಗೆ ತೆಗೆದುಕೊಂಡರು. ಆಪರೇಷನ್ ಕಮಲ ರೂವಾರಿ ಕರುಣಾಕರರೆಡ್ಡಿ ಆಣತಿ ಮೇರೆಗೆ ಕೇವಲ ಟಿವಿಯವರನ್ನು ಕರೆಸಲಾಗಿತ್ತು.
ಇತ್ತೀಚೆಗೆ ತಾನೆ ಬಿಜೆಪಿ ಕಾರ್ಯಕರ್ತರಿಗೆ ಮಾಧ್ಯಮ ಕಾರ್ಯಗಾರ ಏರ್ಪಡಿಸಿತ್ತು. ಪ್ರತಿಷ್ಠಿತ ಪತ್ರಿಕೆಗಳಲ್ಲಿ ಉನ್ನತ ಸ್ಥಾನದಲ್ಲಿರುವವರು ಕಾರ್ಯಕರ್ತರಿಗೆ ಪಾಠ ಮಾಡಿದರು. ಇವರು ಪಾಠ ಮಾಡಿದ್ದು ಪತ್ರಿಕಾ ಮಾಧ್ಯಮ ನಿರ್ಲಕ್ಷಿಸಲೆಂದೆ?
ಕನ್ನಡಪ್ರಭ ಬಿಜೆಪಿ ನಾಯಕರ ವರ್ತನೆ ಖಂಡಿಸಿ ವರದಿ ಮಾಡಿದೆ. ಪತ್ರಿಕೆ ತೀರಾ ಖಾರವಾಗಿಯೇ ಬಿಜೆಪಿಯನ್ನು ಟೀಕಿಸಿದೆ. ಅಧಿಕಾರ ಇಲ್ಲದಾಗ ಮಾಧ್ಯಮದವರ ಬೆನ್ನು ಬಿದ್ದಿದ್ದ ಬಿಜೆಪಿಯವರು ಅಧಿಕಾರಕ್ಕೆ ಬಂದಮೇಲೆ ಟಿವಿ ಮಾಧ್ಯಮದವರು ಮಾತ್ರ ಬಂದರೆ ಸಾಕು ಎಂಬ ಧೋರಣೆ ತಳೆದಿದ್ದಾರೆ. ಟೀವೀಲಿ ಬಂದರೆ ಪತ್ರಿಕೆಯವರೂ ನೋಡಿ ಬರ್‍ಕೋತಾರೆ ಎಂಬ ಉಡಾಫೆ ಇವರದು.
ಒಂದು ಓಟಿಗೆ ಇಂತಿಷ್ಟು ನೋಟುಗಳೆಂದು ಹಂಚಿ ಅಧಿಕಾರ ಕೊಂಡು ಈ ಜನರಿಗೆ, ಅಧಿಕಾರದೊಂದಿಗೆ ಅಹಂಕಾರ ಫ್ರೀ ದೊರಕಿದೆ!
(pic courtesy: The hindu)

Saturday, October 25, 2008

ಪ್ರೆಸ್ ಕ್ಲಬ್‌ನಲ್ಲಿ ಹನ್ನೆರಡು ದಿನಗಳ ಸೂತಕ

ಬೆಂಗಳೂರು ಪ್ರೆಸ್ ಕ್ಲಬ್ ನೌಕರ ವೀರೇಶ್ ಆತ್ಮಹತ್ಯೆ ಮಾಡಿಕೊಂಡರು. ವಿಶೇಷವೆಂದರೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದೂ ಪ್ರೆಸ್‌ಕ್ಲಬ್‌ನ ಕೊಠಡಿಯೊಂದರಲ್ಲಿ. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ಚಕ್ರವ್ಯೂಹದಲ್ಲಿ ವೀರೇಶ್ ಸಿಕ್ಕಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡರೆ ಮನೆಯವರಿಗೆ ಆಸ್ತಿಯಾದರೂ ಉಳಿಯುತ್ತದೆ ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾದರು. ಇದಾದ ಎರಡೇ ದಿನಕ್ಕೆ ಪ್ರೆಸ್‌ಕ್ಲಬ್‌ನ ಮತ್ತೊಬ್ಬ ನೌಕರ ಹೃದಯಾಘಾತದಿಂದ ಮರಣ ಹೊಂದಿದರು. ತೀರಿಕೊಂಡ ಇಬ್ಬರೂ ಸಂಭಾವಿತರು. ಕ್ಲಬ್ ಒಡನಾಟವಿರುವ ಎಲ್ಲರಿಗೂ ಇದು ಗೊತ್ತಿರುವ ವಿಷಯ. ಇಬ್ಬರ ಸಾವಿಗೂ ಸುದ್ದಿಮಾತು ಸಂತಾಪ ವ್ಯಕ್ತಪಡಿಸುತ್ತದೆ.
ಇಲ್ಲಿ ಹೇಳಲು ಹೊರಟ ವಿಷಯ ಅದಲ್ಲ. ವೀರೇಶ್ ಸತ್ತ ನಂತರ ಕ್ಲಬ್ ಕ್ಯಾಂಟೀನ್ ಆದಾಯವೇ ಕಡಿಮೆಯಾಗಿದೆಯಂತೆ. ಯಾಕೆಂದರೆ ಕ್ಲಬ್ ಸದಸ್ಯರಲ್ಲಿ ಅನೇಕರು ಅಲ್ಲಿ ತಿಂಡಿ-ಊಟ ಮಾಡುತ್ತಿಲ್ಲ. ಕಾರಣವೇನು ಗೊತ್ತೆ? ಸೂತಕ!
ಹನ್ನೆರಡು ದಿನ ನಾವೇನೂ ತಿನ್ನೋದಿಲ್ಲ ಅಂತ ಕೆಲ ಸದಸ್ಯರು ನೇರವಾಗಿಯೇ ಹೇಳಿದ್ದಾರಂತೆ. ಮತ್ತೆ ಕೆಲವರು ಬಿಜಿ ಕಣ್ರೀ ಅಂತ ಕ್ಲಬ್ ಕಡೆ ತಲೆ ಹಾಕಿಯೂ ನೋಡುತ್ತಿಲ್ಲವಂತೆ. ಕೆಲವರು ಬಂದರೂ ಜಾಣತನದಿಂದ ಕ್ಲಬ್‌ನಲ್ಲಿ ಅಡುಗೆ ಸರಿಯಿಲ್ಲಾರೀ ಎಂದು ಪಕ್ಕದ ಕ್ಯಾಂಟೀನ್‌ನಲ್ಲಿ ಹೊಟ್ಟೆ ತಣಿಸಿಕೊಳ್ಳುತ್ತಿದ್ದಾರಂತೆ.
ಪ್ರೆಸ್ ಕ್ಲಬ್ ಸದಸ್ಯರೆಂದರೆ ಬೇರೆ ಹೇಳಬೇಕಿಲ್ಲ ತಾನೆ? ಎಲ್ಲರೂ ಪತ್ರಕರ್ತರೇ. ಜಗತ್ತಿನ ಆಗುಹೋಗುಗಳನ್ನೆಲ್ಲ ಭಿತ್ತರಿಸುವ ಪತ್ರಕರ್ತರಿಗೆ ಸೂತಕ ಬಡಿದರೆ ಕಥೆ ಏನು?
ಸೋ ಕಾಲ್ಡ್ ಜ್ಞಾನವಂತರು, ಸಕಲ ವಿದ್ಯಾ ಪರಿಣತರು, ಆಧುನಿಕ ಮನಸ್ಥಿತಿಯವರೂ ಆದ ಪತ್ರಕರ್ತರು ಹೀಗೆ ಸೂತಕ, ಜಾತಕ, ಶಕುನ, ಮಾಟ, ಮಂತ್ರ ಅಂತೆಲ್ಲ ಮೌಢ್ಯಕ್ಕೆ ಬಲಿಯಾದರೆ ಅವರು ಪ್ರತಿನಿಧಿಸುವ ಪತ್ರಿಕೆಗಳಲ್ಲಿ ಸಾವಿನ ವಾಸನೆ ಹೊಡೆಯದೆ ಇನ್ನೇನಾಗುತ್ತದೆ?
ರಾಜಕಾರಣಿಗಳ ಮೌಢ್ಯವನ್ನು ಟೀಕಿಸುವ ಪತ್ರಕರ್ತರು ತಾವೇ ಮೌಢ್ಯಕ್ಕೆ ಶರಣಾದರೆ ಅದಕ್ಕೇನು ಅರ್ಥ?
ವೀರೇಶ್ ತೀರಿಕೊಂಡ ೧೧ನೇ ದಿನಕ್ಕೆ ಪ್ರೆಸ್‌ಕ್ಲಬ್‌ನಲ್ಲ ಪೂಜೆ ಮಾಡಿಸಿ ಸೂತಕ ತೆಗೆಯಲಾಗುತ್ತದೆಯಂತೆ!
ನಮ್ಮದೊಂದು ಸಲಹೆ, ಮನೆಯಲ್ಲಿ ಯಾರಾದರೂ ಸತ್ತರೆ ಒಂದು ವರ್ಷ ಯಾವುದೇ ಶುಭಕಾರ್ಯ ಮಾಡಬಾರದು ಎಂದು ಪುರೋಹಿತರು ಹೇಳುತ್ತಾರೆ. ಪ್ರೆಸ್ ಕ್ಲಬ್ ದಯಮಾಡಿ ಇನ್ನೊಂದು ವರ್ಷ ಯಾವುದೇ ಕಾರ್ಯಕ್ರಮ ನಡೆಸದಿರಲಿ!

'ದಂಡ'ವತೆ

ಪ್ರಜಾವಾಣಿ ನೋಡಿಕೊಳ್ಳಲು ಒಬ್ಬ ಘನ ಸಂಪಾದಕರು ಬೇಡ ಎಂದು ಪ್ರಜಾವಾಣಿ ಯಾವತ್ತೋತೀರ್ಮಾನಿಸಿ ಆಗಿದೆ. ಈಗ ಪದ್ಮರಾಜ 'ದಂಡ'ವತೆ ಎಂಬುವರ ತಲೆಗೆ ಸಿಕ್ಕಿದ್ದೆಲ್ಲಾಕಟ್ಟಿ ಸುಮ್ಮನಾಗಿಬಿಟ್ಟಿದೆ . ಆ ಕಾರಣಕ್ಕೆ ಪ್ರಜಾವಾಣಿ ದಿನ ದಿನವೂಮುಖೆಡಿಯಾಗುತ್ತಿದೆ.
ದೆಹಲಿಯಿಂದ ದಿನೇಶ್ ಅಮೀನ್ ಮಟ್ಟು ಬರೆದು ತನ್ನದೇ ಆದ ವಿಶ್ಲೇಷಣೆಯಿಂದ ಹೆಸರುಗಳಿಸಿದ್ದನ್ನು ಈ 'ದಂಡ'ಕ್ಕೆ ಸಹಿಸಲು ಸಾಧ್ಯವೇ ಆಗುತ್ತಿಲ್ಲ. ಆ ಕಾರಣದಿಂದಾಗಿ ಈಗಬೇಕೆಂದೇ ದಿನೇಶ್ ಬದಲು ಬ್ಯೂರೋದಲ್ಲಿರುವ ಡೆಕ್ಕನ್ ಹೆರಾಲ್ಡ್ ವರದಿಗಾರರ ಹೆಸರುಬರುವಂತೆ ನೋಡಿಕೊಳ್ಳುತ್ತಿದ್ದಾರೆ. ಪಿ ಮಹಮದ್ ಅವರ ಕಾರ್ಟೂನ್ ಒಳಪುಟಕ್ಕೆ ಆಗೀಗಎತ್ತಂಗಡಿಯಾಗುತ್ತಿದೆ. ಪ್ರಜಾವಾಣಿಯನ್ನು ಇನ್ನೂ ಕಾಪಾಡಿರುವ ಸಂಗತಿಗಳು ಏನೆಲ್ಲಾಇದ್ದಾವೋ ಅದನ್ನೆಲ್ಲಾ ಪಕ್ಕಕ್ಕೆ ಸರಿಸಿ ಅದಕ್ಕೆ ಇತಿಶ್ರೀ ಹಾಡಿಬಿಡಲು ಈ 'ದಂಡ'ನಿರ್ಧರಿಸಿದಂತಿದೆ.ಈ ಮಧ್ಯೆ ಸುಧಾ ನೇತೃತ್ವ ಬಿ ಎಂ ಹನೀಫ್ ಅವರ ಕೈಗೆ ಬಂದಿದ್ದು ೧೫ ವರ್ಷಗಳಿಂದಹಳಿತಪ್ಪಿಹೋಗಿದ್ದ ಅದನ್ನು ಈಗ ಸರಿ ದಾರಿಗೆ ಹಚ್ಚುತ್ತಿದ್ದಾರೆ. ಆದರೆ ಈ 'ದಂಡ'ದಅಸಹನೆ ಅವರ ಮೇಲೂ ಯಾವಾಗ ಹೆಚ್ಚುತ್ತದೋ ಗೊತ್ತಿಲ್ಲ.ಮೂಡಬಿದ್ರೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ಪತ್ರಕರ್ತರ ಮುಂದೆ ತಾನುಒಬ್ಬ ಹಿರಿಯ ಪತ್ರಕರ್ತ ಎಂಬುದನ್ನೂ ಮರೆತು ವೀರೇಂದ್ರ ಹೆಗ್ಗಡೆ ಅವರ ಕಾಲಿಗೆ ಡೈವ್ಹೊಡೆದದ್ದೂ ಇವರೇ. ಪ್ರಜಾವಾಣಿ ಯಾಕೆ ಹಳ್ಳಕ್ಕೆ ಬೀಳಲೆಂದೇ ಶ್ರಮಿಸುತ್ತಿದೆಯೋ ಅದೂತನ್ನ ೬೧ನೆಯ ವರ್ಷದಲ್ಲಿ.
-innobba.anonymous@gmail.com

Thursday, October 23, 2008

ಜೀ ಕನ್ನಡ ನ್ಯೂಸ್ ಹೀಗೇಕೆ?


ಜೀ ಕನ್ನಡ ವಾಹಿನಿ ಆರಂಭವಾದಾಗಿನಿಂದಲೂ ಅದು ಮನರಂಜನೆಗೆ ಆದ್ಯತೆ ನೀಡುತ್ತ ಸುದ್ದಿ ವಿಭಾಗವನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಮೊದಮೊದಲು ಸುದ್ದಿಯನ್ನು ವಿಚಿತ್ರವಾಗಿ, ಜಾಹೀರಾತಿನಂತೆ ಸೆಕೆಂಡುಗಳ ಲೆಕ್ಕದಲ್ಲಿ ತೋರಿಸಿ ಆಭಾಸ ಮಾಡಲಾಗುತ್ತಿತ್ತು. ಇದರಿಂದಾಗಿ ವೀಕ್ಷಕರ ಕಥೆ ಹಾಗಿರಲಿ, ವರದಿಗಾರರೇ ತಲೆತಲೆ ಚೆಚ್ಚಿಕೊಳ್ಳುವಂತಾಗಿತ್ತು.ಈಗ ಸಂಜೆ ಏಳುಗಂಟೆಗೆ ಅದರ ಪ್ರೈಮ್ ಸುದ್ದಿ ಪ್ರಸಾರವಾಗುತ್ತದೆ. ಈ ಟಿವಿ, ಕಸ್ತೂರಿ, ಉದಯ ಟಿವಿಗಳಲ್ಲಿ ೮ ಗಂಟೆಗೆ ಸುದ್ದಿ ಪ್ರಸಾರವಾದರೆ ಅದಕ್ಕೂ ಮುನ್ನ ಪ್ರಸಾರವಾಗುವ ಜೀ ಟಿವಿಯ ಸುದ್ದಿ ಹೆಚ್ಚು ಜನಪ್ರಿಯವಾಗಬೇಕಿತ್ತು. ಆದರೆ ಹಾಗಾಗುತ್ತಿಲ್ಲ.ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಜೀ ಟಿವಿಯಲ್ಲಿ ಇದ್ದಕ್ಕಿದ್ದಂತೆ ತಾರಾಮಣಿಗಳು ಸುದ್ದಿ ಓದಲು ಆರಂಭಿಸಿದರು. ಇದೊಂದು ಹೊಸ ಪ್ರಯೋಗ ನೋಡೋಣ ಎಂದರೆ ಈ ತಾರಾಮಣಿಗಳು ಸುದ್ದಿ ಓದಲು ಬಾರದೆ ಒದ್ದಾಡಿ ಸಾರ್ವಜನಿಕ ಮನರಂಜನೆ ನೀಡಿದರು. ಮನರಂಜನೆಗೇ ಆದ್ಯತೆ ನೀಡುವ ಜೀ ಟಿವಿ ಸುದ್ದಿ ನೀಡುವಲ್ಲೂ ಮನರಂಜನೆ ನೀಡುವ ಮೂಲಕ ಹಾಸ್ಯಾಸ್ಪದವಾಯಿತು.ತಾರಾಮಣಿಯರ ಸುದ್ದಿವಾಚನವೇನೋ ನಿಂತು ಹೋಯಿತು. ಆದರೆ ಸುದ್ದಿಯಲ್ಲಿನ ಗೊಂದಲಗಳು ಹಾಗೇ ಮುಂದುವರೆದಿವೆ.ತೀರಾ ತಕರಾರು ಮಾಡಲೇಬೇಕಾಗಿರುವುದು ಕ್ರೈಂ ಸುದ್ದಿಗಳ ವಾಚನದ ವಿಷಯ. ಥೇಟು ಕ್ರೈಂ ಧಾರಾವಾಹಿಗಳಲ್ಲಿ ಹಿನ್ನೆಲೆ ಧ್ವನಿ ನೀಡುವಂತೇ ಸುದ್ದಿಯಲ್ಲೂ ನೀಡಿದರೆ ಹೇಗೆ? ಕ್ರೈಂ ಧಾರಾವಾಹಿಗಳಿಗೆ ಆ ನಾಟಕೀಯ, ಲೌಡ್ ಆದ ಹಿನ್ನೆಲೆ ಧ್ವನಿ ಬೇಕೇನೋ? (ಟಿಆರ್‌ಪಿಗಾಗಿ) ಆದರೆ ಸುದ್ದಿ ಓದುವವರಿಗೂ ಈ ಕರ್ಕಷ, ಒರಟು ಧ್ವನಿಗಳನ್ನು ಕೇಳಿಸುವ ಅಗತ್ಯವೇನು? ರಾತ್ರಿ ಹತ್ತರ ನಂತರದ ಕ್ರೈಂ ಕಥಾನಕಗಳ ಯಶಸ್ಸನ್ನು ಸುದ್ದಿವಿಭಾಗಕ್ಕೂ ತರುವ ಐಡಿಯಾ ಕೊಟ್ಟವರಾದರೂ ಯಾರು?ಜೀ ಟಿವಿಯವರಿಗೆ ಗೊತ್ತಿಲ್ಲದೇ ಇರಬಹುದಾದ ವಿಷಯವೆಂದರೆ ಕ್ರೈಂ ಧಾರಾವಾಹಿಗಳನ್ನು ಅದರಲ್ಲಿ ಆಸಕ್ತಿ ಉಳ್ಳವರು ಮಾತ್ರ ನೋಡುತ್ತಾರೆ. ಆದರೆ ಸುದ್ದಿಯನ್ನು ಎಲ್ಲರೂ ನೋಡುತ್ತಾರೆ. ಎರಡನ್ನೂ ಮಿಕ್ಸ್ ಮಾಡುವ ಮೂಲಕ ಜೀ ಟಿವಿ ಸುದ್ದಿ ವಿಭಾಗದ ಗೆಳೆಯರು ಗೊಂದಲಕ್ಕೆ ಸಿಕ್ಕಿಬೀಳುವುದು ಬೇಡ.
(ಈ ಬರಹ ನಮ್ಮ ಆಹ್ವಾನಕ್ಕೆ ಬಂದ ಮೊದಲ ಈಮೇಲ್ ಪ್ರತಿಕ್ರಿಯೆ. ಯಥಾವತ್ ಇಲ್ಲಿ ಪ್ರಕಟಿಸಿದ್ದೇವೆ).

Wednesday, October 22, 2008

ತಿಂಗಳು ಕಳೆದಿದ್ದು ಗೊತ್ತಾಗಲೇ ಇಲ್ಲ...

ಇಂದು ಅಕ್ಟೋಬರ್ 23. ಸುದ್ದಿಮಾತು ಎಂಬ ಬ್ಲಾಗ್ ಬಾಗಿಲು ತೆರೆದು ಒಂದು ತಿಂಗಳಾಯ್ತು. ಅಂದ ಹಾಗೆ ಮೊದಲಿಗೆ ನಿಮ್ಮ ಕ್ಷಮೆ ಕೋರಬೇಕು. ಬುಧವಾರ ನಾವು ಯಾವ ಹೊಸ ಸುದ್ದಿಯನ್ನೂ ಪೋಸ್ಟ್ ಮಾಡಲಾಗಲಿಲ್ಲ. ಒಂದು ಸುದ್ದಿ ಸಿದ್ಧವಾಗಿದ್ದರೂ ತಾಂತ್ರಿಕ ಕಾರಣಗಳಿಂದ ಪೋಸ್ಟ್ ಮಾಡಲಿಲ್ಲ. ಕಳೆದ ಒಂದು ತಿಂಗಳಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ಸುದ್ದಿ ನೀಡುತ್ತಲೇ ಬಂದಿದ್ದೇವೆ. ದಿವವೂ ಏನಾದ್ರೂ ಹೊಸದು ಇರುತ್ತೆ ಎಂದು ಭೇಟಿ ಕೊಟ್ಟ ಮಿತ್ರರಿಗೆ ಬೇಸರವಾಗಿದೆ. ಕ್ಷಮೆ ಇರಲಿ. ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ತೇವೆ.
ಏನನ್ನೋ ಬರೆಯಲು ಕೂತು, ಮತ್ತೇನೋ ಮೂಡಿಬಂದಾಗ ಹುಟ್ಟಿಕೊಂಡದ್ದೇ ಸುದ್ದಿಮಾತು. ಸ್ಟಷ್ಟದನಿಯಲ್ಲಿ ಹೇಳುವುದಾದರೆ, ಯಾವುದೇ ಪೂರ್ವ ತಯಾರಿ ಇಲ್ಲದೆ ಆರಂಭಗೊಂಡದ್ದ ಈ ಬ್ಲಾಗ್. "ಅಂದಿನ ಪತ್ರಿಕೆಗಳನ್ನು ಓದಿ, ಅನ್ನಿಸಿದ್ದನ್ನು ಬರೆಯುವುದು" ಎಂಬ ಅಸ್ಪಷ್ಟ ಆಲೋಚನೆ ಹಿನ್ನೆಲೆಯಲ್ಲಿ ಮಾತು ಮುಂದುವರೆಯಿತು.
ಇದ್ಯಾವುದೋ ಹೊಸ ಬ್ಲಾಗ್ ಬಂತಲ್ಲ ಎಂದು ಕೆಲವರು ಇಣುಕಿದರು. ಪತ್ರಕರ್ತರು, ಪತ್ರಿಕೋದ್ಯಮ ಬಗ್ಗೆನೇ ತುಂಬಾ ಬರೀತಾರಲ್ಲ; ನಾವೂ ನೋಡೊಣ, ಏನ್ಮಾಡ್ತಾರೆ ಎಂಬ ಕುತೂಹಲದಿಂದ ಸಾಕಷ್ಟು ಮಂದಿ ಪತ್ರಕರ್ತರು ಬ್ಲಾಗ್ ಗೆ ಖಾಯಂ ಓದುಗರಾದರು. ಅಂತೆಯೇ ಪ್ರತಿಕ್ರಿಯೆಗಳೂ ಹೆಚ್ಚಾದವು. ಬ್ಲಾಗ್ ಬರಹಗಳಿಗೆ ಉತ್ತೇಜನ ನೀಡುವುದೇ ಪ್ರತಿಕ್ರಿಯೆಗಳು. ನಮ್ಮನ್ನು ಯಾರೋ ಸೂಕ್ಷ್ಮವಾಗಿ ಗಮನಸುತ್ತಿದ್ದಾರೆ ಎಂದರೆ; ನಾವು ಎಚ್ಚರಗೊಳ್ಳುತ್ತೇವೆ.
ನಾವು ನಮ್ಮ ಗುರುತನ್ನು ಬಹಿರಂಗ ಮಾಡದ ಕಾರಣ ಓದುಗರು ಅನೇಕರ ಮೇಲೆ ಅನುಮಾನ ಪಡುವಂತಾಗಿದೆ. ನಮ್ಮ ಉದ್ದೇಶ ಸ್ಪಷ್ಟ "ನಾವು ಯಾರು" ಎನ್ನುವ ಸಂಗತಿ ಮುಖ್ಯ ಆಗಲೇಬಾರದು. ಬರಹ ಮುಖ್ಯವಾಗಲಿ.
ಮತ್ತೊಂದು ವಿಚಾರ. ಈ ಬ್ಲಾಗ್ ಕಂಡದ್ದನ್ನೆಲ್ಲ ಟೀಕೆ ಮಾಡಲು ಹುಟ್ಟಿಕೊಂಡಿಲ್ಲ. ಸರಿಕಾಣದನ್ನು ಟೀಕೆ ಮಾಡಲೇಬೇಕಾಗುತ್ತದೆ. ಆದರೆ ಟೀಕೆ ಮಾಡಲೆಂದೇ ಟೀಕೆಯಲ್ಲ. ಹಾಗೆ, ಟೀಕೆಯನ್ನು ಎಲ್ಲರೂ ಒಪ್ಪಲೇಬೇಕೆಂದಲ್ಲ. ಉತ್ತಮವಾದದನ್ನು ಕಂಡಾಗ ಮೆಚ್ಚಿಕೊಂಡಿದ್ದೇವೆ. ಹಾಗಂತ ನಾವು ಕೇವಲ-ಟೀಕೆ ಮೆಚ್ಚುಗೆಗಳಿಗೆ ಸೀಮಿತವಾಗಿಲ್ಲ. ಬೆಳವಣಿಗೆಗಳನ್ನು ವಿಶ್ಲೇಷಿಸುತ್ತೇವೆ. ಆರೋಗ್ಯಕರ ಚರ್ಚೆ ನಮ್ಮ ಉದ್ದೇಶ.
ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಲಭ್ಯ ಇರುವ ಫೆಲೋಷಿಪ್, ಸ್ಕಾಲರ್ ಷಿಪ್ ಮಾಹಿತಿ ಒದಗಿಸುವ ಉದ್ದೇಶವೂ ಸುದ್ದಿಮಾತಿಗಿದೆ. ನಾವು ಐದು ಮಂದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಅವಧಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಎಲ್ಲರೂ ಒಂದೆಡೆ ಸೇರಿ ಚರ್ಚಿಸಿ ತೀರಾ ವ್ಯವಸ್ಥಿತವಾಗಿ ಮಾಡಲಾಗುತ್ತಿಲ್ಲ ಎಂಬ ಕೊರಗು ಇದ್ದೇ ಇದೆ. ಮುಂದಿನ ದಿನಗಳಲ್ಲಿ ಇದೆಲ್ಲವೂ ಸರಿ ಹೋಗಬಹುದು ಎಂಬ ನಿರೀಕ್ಷೆ ಇದೆ .
ನಮ್ಮ ಬ್ಲಾಗ್ ಮತ್ತಷ್ಟು ಸಮಗ್ರವಾಗಿ ಹೊರಬರಲು ನಿಮ್ಮದೂ ಸಹಕಾರ ಬೇಕು ನಮ್ಮೊಂದಿಗೆ ವಿಚಾರಗಳನ್ನು ಹಂಚಿಕೊಳ್ಳಲು ಸಂಪರ್ಕಿಸಿ: suddimaatu@gmail.com

Monday, October 20, 2008

ಹಾಗಾದ್ರೆ ಯಾರವರು?

ಇಂಥದೊಂದು ಅನುಮಾನ ಪತ್ರಕರ್ತರ ವಲಯದಲ್ಲಿ ಸುಳಿದಾಡುತ್ತಿದೆ. ಕಳೆದ ಗುರುವಾರ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಮತಾಂತರ ಕುರಿತಂತೆ ಅವರು "ಅಧ್ಯಯನ" ನಡೆಸಿ ಬರೆದ ಲೇಖನವನ್ನು ವಿಜಯ ಕರ್ನಾಟಕ ಪ್ರಕಟಿಸಿತು. ಗಮನಿಸಬೇಕಾದ ಸಂಗತಿ. ಲೇಖನದ ಜತೆ ಕಾದಂಬರಿಕಾರರ ಫೋಟೋ ಕೂಡ ಪ್ರಕಟವಾಯಿತು.
ಶುಕ್ರವಾರ ಜಾನ್ ಸಿಕ್ವೇರಾ ಎಂಬ "ಪ್ರಗತಿ ಪರ ಚಿಂತಕರು" ಸೋನಿಯಾ ಗಾಂಧಿಯನ್ನು ಎಗ್ಗಾ ಮುಗ್ಗಾ ಹೊಗಳಿ, ಭೈರಪ್ಪರನ್ನು ತೆಗಳಿ ಲೇಖನ ಬರೆದರು. ಆ ಲೇಖಕರ ಮೂಲ ಕಾಣಲಿಲ್ಲ.
ಭಾನುವಾರ ರವಿಬೆಳೆಗೆರೆ ಲೇಖನ ಪ್ರಕಟವಾಯ್ತು. Ofcourse, ಅವರ ಭಾವಚಿತ್ರದೊಂದಿಗೆ. ಒಂದೇ ದಿನದ ನಂತರ ರವಿ ಲೇಖನಕ್ಕೆ ಪ್ರತಿಕ್ರಿಯೆ- ರಾಮಚಂದ್ರಶೆಣೈಯವರಿಂದ - ಅವರದೂ ಭಾವಚಿತ್ರ ಇಲ್ಲ!
ಸದ್ಯದ ಪ್ರಶ್ನೆ- ಯಾರು ಈ ಜಾನ್ ಸಿಕ್ವೇರಾ ಹಾಗೂ ರಾಮಚಂದ್ರ ಶೆಣೈ? ಶೆಣೈ ಬರಹ ಓದಿದವರಿಗೆ ಅದನ್ನು ಬರೆದವರು ಪ್ರತಾಪಸಿಂಹ ಇರಬಹುದೇ ಎನ್ನುವ ಅನುಮಾನ ಬರದಿರಲಾಗದು. ಜಾನ್ ಸಿಕ್ವೇರಾ ಕೂಡ ವಿ.ಕ.ಸೃಷ್ಟಿ ಯಾಕಿರಬಾರದು! ಪ್ರತಾಪ ಸಿಂಹ ಬೇರೆಯವರ ಹೆಸರಲ್ಲಿ ಓದುಗರ ಪತ್ರ ಬರೆದು ತಾನೇ ಪ್ರಕಟಿಸುವುದು ವಿ.ಕ. ಬಳಗಕ್ಕೆ ಗೊತ್ತಿರುವ ಸಂಗತಿಯೇ. ಸಿಂಹ ತನ್ನ ಆಪ್ತ ಗೆಳೆಯರ ಬಳಿ ಈ ಬಗ್ಗೆ ಒಪ್ಪಿಕೊಂಡ ಉದಾಹರಣೆಗಳೂ ಇವೆ. ಸಂವಾದವನ್ನೂ ವಿಶ್ವೇಶ್ವರಭಟ್ಟರು ಪಕ್ಕಾ ಲೆಕ್ಕಾಚಾರದಿಂದಲೇ ಮುನ್ನಡೆಸುತ್ತಿದ್ದಾರೆ. ವ್ಹಾ ಭಟ್ಟರೆ! ಬಹುಪರಾರಕು ನಿಮಗೆ!

Sunday, October 19, 2008

ನಕ್ಕು ಹಗುರಾಗಿ... ಪ್ರಾಮಾಣಿಕರಾಗಿ...

ಶಶಿಧರ್ ಭಟ್ ಕನ್ನಡದ ಅತ್ಯುತ್ತಮ ಪತ್ರಕರ್ತರಲ್ಲಿ ಒಬ್ಬರು. ಅವರು ಅತ್ಯುತ್ತಮ ಎನ್ನಲು ಮುಖ್ಯ ಕಾರಣ ಅವರು ಹೋರಾಟದ ಹಿನ್ನೆಲೆಯಿಂದ ಪತ್ರಿಕೋದ್ಯಮಕ್ಕೆ ಬಂದವರು. ರೈತ ಪರ, ದಲಿತ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ನಿಜ. ಅವರ ತಲೆಮಾರಿನವರಿಗೆ ಪತ್ರಿಕೋದ್ಯಮಕ್ಕೆ ಪ್ರವೇಶ ಮಾಡುವಾಗ ಪತ್ರಕರ್ತ ಆಕ್ಟಿವಿಸ್ಟ್ ಆಗಿರಬೇಕೆ, ಬೇಡವೆ ಎಂಬ ಗೊಂದಲಗಳಿರಲಿಲ್ಲ. ಅವರಲ್ಲಿ ಅನೇಕರು ಪತ್ರಿಕೋದ್ಯಮ ಕ್ಷೇತ್ರ ಎಂದರೇನೆ, ಆಕ್ಟಿವಿಸಮ್ ಎಂದುಕೊಂಡವರು. ಹಾಗಾಗಿ ಹೋರಾಟಗಳಲ್ಲಿ ತೊಡಗಿಸಿಕೊಂಡರು. ಆದರೆ ಕಾಲ ಬದಲಾಯಿತು.
ಪತ್ರಿಕೋದ್ಯಮ ಇತರೆ ಎಲ್ಲಾ ಉದ್ಯೋಗಗಳಂತೆ ಅನ್ನಕ್ಕೊಂದು ಮಾರ್ಗ ಎಂದಾಯಿತು. ಪತ್ರಿಕಾ ಮಾಲೀಕರು ನಿಮ್ಮ ಹೊಟ್ಟೆ ತುಂಬ ಬೇಕಾದರೆ ಜಾಹೀರಾತುದಾರರ ಕಡೆ ಗಮನವಿರಲಿ ಎಂಬ ಮಾತುಗಳನ್ನು ಆಡಲು ಶುರುಮಾಡಿದರು. ಅಂತೆಯೇ ಇಂದಿನ ಬಹುತೇಕ ಪತ್ರಕರ್ತರು ಮಾಲೀಕರು ಆಡಿಸಿದಂತೆ ಆಡುತ್ತಿದ್ದಾರೆ. ಶಶಿಧರ್ ಭಟ್ ಕೂಡಾ ಇದಕ್ಕೆ ಹೊರತಲ್ಲ!!
ಇತ್ತೀಚೆಗೆ ಶಶಿಧರ್ ಭಟ್ ತಮ್ಮ ಬ್ಲಾಗ್ ಕುಮ್ರಿಯಲ್ಲಿ ಯಡಿಯೂರಪ್ಪನನ್ನು ಭೇಟಿ ಮಾಡಿದ್ದರ ಕುರಿತು ಬರೆದಿದ್ದರು. ಅದರ ಆಯ್ದ ಭಾಗ ಇಲ್ಲಿದೆ. ಪತ್ರಕರ್ತ ಶಶಿಧರ್ ಭಟ್‌ರ ಸೂಕ್ಷ್ಮ ಒಳನೋಟ, ಸಾಮಾಜಿಕ ಕಾಳಜಿ ಎಲ್ಲವೂ ಇಲ್ಲಿ ವ್ಯಕ್ತ.

ನಾನು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದಾಗ ಹೀಗೆ ಹೇಳಿದೆ; ಸಾರ್ ನನಗೆ ನಿಮ್ಮಿಂದ ಏನೂ ಆಗಬೇಕಿಲ್ಲ. ನೀವು ಇಚ್ಚೆ ಪಟ್ಟಿದ್ದರಿಂದ ನಿಮ್ಮನ್ನು ನೋಡುತ್ತಿದ್ದೇನೆ. ನೀವು ಕರ್ನಾಟಕದ ಮುಖ್ಯಮಂತ್ರಿ ಎಂಬುದನ್ನು ಯಾವ ಸಂದರ್ಭದಲ್ಲಿ ಮರೆಯಬೇಡಿ. ನೀವು ಬಿಜೆಪಿ, ಸಂಘ ಪರಿವಾರದ ಮುಖ್ಯಮಂತ್ರಿಯಲ್ಲ. ನಿಮ್ಮ ಮನಸ್ಸಿನಲ್ಲಿ ಎಲ್ಲಿಯವರೆಗೆ ಬಿಜೆಪಿ ಮುಖ್ಯಮಂತ್ರಿ ಎಂಬುದು ಇರುತ್ತದೆಯೋ ಅಲ್ಲಿಯವರೆಗೆ ನೀವು ಈ ನಾಡಿನ ಮುಖ್ಯಮಂತ್ರಿಯಾಗುವುದಿಲ್ಲ. ಆದರೆ ದುರ್ದೈವ ಎಂದರೆ ಇದುವರೆಗೆ ನೀವು ಕರ್ನಾಟಕದ ಮುಖ್ಯಮಂತ್ರಿಯಂತೆ ವರ್ತಿಸಿಲ್ಲ.ಒಬ್ಬ ಮುಖ್ಯಮಂತ್ರಿಯಾದವನು ರಾಜನೀತಿಜ್ಞನಾಗಿರಬೇಕು. ಆತ ಸ್ಟೇಟ್ಸ್ ಮನ್ ಆಗಿರಬೇಕು. ಆದರೆ ನೀವು ಪಂಚಾಯಿತಿ ಮಟ್ಟದ ರಾಜಕಾರಣಿಯಂತೆ ವರ್ತಿಸುತ್ತಿದ್ದೀರಿ ಎಂದು ಹೇಳಲು ಬೇಸರವಾಗುತ್ತಿದೆ.ನನಗೆ ನಿಮ್ಮ ಮುಖದಲ್ಲಿ ನಗುವನ್ನು ನೋಡುವುದು ಇಷ್ಟ. ನೀವು ನಗುತ್ತಿದ್ದರೆ ನಿಮ್ಮ ಮನಸ್ಸು ಹಗುರಾಗುತ್ತದೆ. ನಿಮ್ಮ ಮನಸ್ಸು ಹಗುರಾದರೆ ನೀವು ಪ್ರಾಮಾಣಿಕವಾಗಿ ಯೋಚಿಸಬಲ್ಲಿರಿ. ನೀವು ಪ್ರಾಮಾಣಿಕವಾಗಿ ಯೋಚಿಸಿದರೆ ನಾಡಿಗೆ ಒಳ್ಳೆಯದಾಗುತ್ತದೆ. ಯಡಿಯೂರಪ್ಪ ನಾನು ಹೇಳಿದ್ದನ್ನು ಕೇಳಿಸಿಕೊಂಡರು. ನಾನು ಹೇಳಿದ್ದು ಅವರಿಗೆ ಎಷ್ಟು ಅರ್ಥವಾಯಿತೋ ತಿಳಿಯಲಿಲ್ಲ.

Saturday, October 18, 2008

ಕನ್ನಡ ಪತ್ರಿಕೆಗಳಲ್ಲಿ ಏಕೆ ಹೀಗೆ?

ಮಹಿಳೆಯರನ್ನು ಸಹೋದ್ಯೋಗಿಯನ್ನಾಗಿಯೋ, ತಮ್ಮ ಸೀನಿಯರ್ ಎಂದಾಗಿಯೋ ಒಪ್ಪಿಕೊಳ್ಳುವ ಮನಸುಗಳು ಕನ್ನಡ ಪತ್ರಿಕೋದ್ಯಮದಲ್ಲಿ ಕಡಿಮೆ ಎನ್ನುವುದಂತೂ ಸತ್ಯ. ಆದರೆ, ಎಲ್ಲಾ ಕನ್ನಡ ಪತ್ರಿಕೆಗಳು ರಾಜಕಾರಣದಲ್ಲಿ ಮಹಿಳೆಯರಿಗೆ ಮೀಸಲಾತಿ ಎಂದಾಗ ಮಹಿಳಾ ಪರ ನಿಲ್ಲುತ್ತವೆ.


ಏಕೆ ಹೀಗೆ? ಕನ್ನಡ ಪತ್ರಿಕೆಗಳಲ್ಲಿ ದುಡಿಯುತ್ತಿರುವ ಮಹಿಳೆಯರನ್ನೆಲ್ಲ ಒಂದೆಡೆ ಸೇರಿಸಿದರೆ, ಅವರ ಸಂಖ್ಯೆ ೫೦ ದಾಟಲಾರದು. ಅದರಲ್ಲೂ ಪ್ರಜಾವಾಣಿಯರವರದೇ ಮೇಲುಗೈ. ಪ್ರಜಾವಾಣಿಯಲ್ಲಿ ಕನಿಷ್ಠ ೨೦ ಮಹಿಳೆಯರಿದ್ದಾರೆ. ವಿವಿಧ ಆವೃತ್ತಿಗಳಲ್ಲಿ ಇನ್ನಷ್ಟು ಮಂದಿ ಇರಬಹುದು.
ಆದರೆ ಇತರೆ ಕನ್ನಡ ಪತ್ರಿಕೆಗಳಲ್ಲಿ ಅವರ ಸಂಖ್ಯೆ ತೀರಾ ಕಡಿಮೆ. ಕನ್ನಡಪ್ರಭದಲ್ಲಿ ದುರ್ಬೀನು ಹಾಕಿ ಹುಡುಕಿದರೂ ಕಣ್ಣಿಗೆ ಬೀಳುವವರು ಇಬ್ಬರು ಮಾತ್ರ. ಒಬ್ಬರು ಯಶೋದಾ ಮತ್ತೊಬ್ಬರು ವಿದ್ಯಾರಶ್ಮಿ. ವಿಶೇಷ ಪುರವಣಿಗಳಲ್ಲಿ ಆಗಾಗ ಇವರ ಹೆಸರು ಕಾಣುವುದರಿಂದ ಇವರಿಬ್ಬರು ಆ ಪತ್ರಿಕೆಗೆ ದುಡಿಯುತ್ತಾರೆ ಎಂದು ತಿಳಿಯುತ್ತದೆ.
ಉದಯವಾಣಿ ಪತ್ರಿಕೆ ಸಂಪಾದಕರು ಡಾ. ಆರ್ ಪೂರ್ಣಿಮಾ. ಮಹಿಳಾ ಪರ ಆಲೋಚನೆಗಳಿರುವವರು. ಅವರ ಪತ್ರಿಕೆಯಲ್ಲಿ ಅವರನ್ನು ಹೊರತು ಪಡಿಸಿ ವರದಿಗಾರ್ತಿ ಯಶೋದಾ ಇದ್ದಾರೆ. ಅಲ್ಲದೆ ಒಬ್ಬರೇ ಒಬ್ಬರು ಉಪಸಂಪಾದಕರಿದ್ದಾರೆ ಎನ್ನುವ ಮಾಹಿತಿ ಇದೆ. ಇನ್ನು ವಿಜಯಕರ್ನಾಟಕ. ಇಲ್ಲಿ ವರದಿಗಾರರ ಪಟ್ಟಿಯಲ್ಲಿ ಕಾಣುವುದು ಇತ್ತೀಚೆಗೆ ಸೇರಿಕೊಂಡ ಸುಮನಾ ಲಕ್ಷ್ಮೀಶ್ ಮಾತ್ರ. ಕೆಲವರು ಉಪಸಂಪಾದಕರಿರಬಹುದು. ಆದರೆ ಅವರ ಸಂಖ್ಯೆ ಹತ್ತನ್ನು ದಾಟಲಾರದು ಎಂದು ಮುಲಾಜಿಲ್ಲದೆ ಹೇಳಬಹುದು.
ಸಂಯುಕ್ತ ಕರ್ನಾಟಕದಲ್ಲಿರುವಂತೆ ಕಾಣುವವರು ಕೇವಲ ಇಬ್ಬರು. ಒಬ್ಬರು ಕೆಲವು ದಿನಗಳ ಮಟ್ಟಿಗೆ ಮುಖ್ಯ ವರದಿಗಾರ್ತಿಯಾಗಿದ್ದ ಶಾಂತಲಾ ಧರ್ಮರಾಜ್ ಮತ್ತು ಸಿನಿಮಾ ಪತ್ರಕರ್ತೆ ಸಾವಿತ್ರಿ. ಮತ್ತೊಂದು ಹೆಸರು ನೆನಪಾಗುವುದಿಲ್ಲ. ಇವರೆಲ್ಲರಿಗೂ ಹೋಲಿಸಿದರೆ, ಪ್ರಜಾವಾಣಿಯೇ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಿದೆ ಎನ್ನಬಹುದು.
ಅನೇಕರಿಗೆ ಗೊತ್ತಿಲ್ಲದಿರಬಹುದು - ಮೊನ್ನೆ ಮೊನ್ನೆವರೆಗೆ ಸುಧಾ ವಾರಪತ್ರಿಕೆ ಸಹಾಯಕ ಸಂಪಾದಕರಾಗಿದ್ದ ಸಿ.ಜಿ ಮಂಜುಳಾ ಕರ್ನಾಟಕದ ಪ್ರಮುಖ ಪತ್ರಿಕೆಯೊಂದರ ಮೊದಲ ಜಿಲ್ಲಾ ವರದಿಗಾರ್ತಿ. ಪ್ರಜಾವಾಣಿ ಸಂಸ್ಥೆ ಅವರನ್ನು ಚಿಕ್ಕಮಗಳೂರಿನ ಜಿಲ್ಲಾ ವರದಿಗಾರರನ್ನಾಗಿ ನೇಮಿಸಿ ಇತಿಹಾಸ ಸೃಷ್ಟಿಸಿತ್ತು. ಆ ನಂತರ ಈ ನಿಟ್ಟಿನಲ್ಲಿ ಅಂತಹ ಪ್ರಗತಿ ಕಾಣಲಿಲ್ಲ. ನಂತರದ ದಿನಗಳಲ್ಲಿ ಹೀಗೆ ಜಿಲ್ಲಾ ವರದಿಗಾರರಾಗಿ ದುಡಿದ ಇನ್ನೊಬ್ಬ ಮಹಿಳೆ ನೀಲಾ ಗೌಡ. ಅವರೂ ಚಿಕ್ಕಮಗಳೂರು ಜಿಲ್ಲಾ ವರದಿಗಾರರಾಗಿದ್ದರು. ಆರ್. ಪೂರ್ಣಿಮಾ ಪ್ರಜಾವಾಣಿಯಲ್ಲಿದ್ದಾಗ ಮಂಗಳೂರು ಆವೃತ್ತಿ ಮುಖ್ಯಸ್ಥರಾಗಿದ್ದರು. ಇತರೆ ಪತ್ರಿಕೆಗಳು ಜಿಲ್ಲಾ ವರದಿಗಾರರನ್ನಾಗಿ ಮಹಿಳೆಯರನ್ನು ನೇಮಕ ಮಾಡಿದ ಉದಾಹರಣೆಗಳು ತಕ್ಷಣಕ್ಕೆ ನೆನಪಾಗುತ್ತಿಲ್ಲ. ೬೧ ವರ್ಷ ಇತಿಹಾಸ ಇರುವ ಪ್ರಜಾವಾಣಿ, ೭೫ರ ಅಂಚು ದಾಟಿರುವ ಸಂಯುಕ್ತ ಕರ್ನಾಟಕ, ೫೦ರ ಹತ್ತಿರಕ್ಕೆ ನಡೆಯುತ್ತಿರುವ ಕನ್ನಡ ಪ್ರಭ ಪತ್ರಿಕೆಗಳ ಸಂಪಾದಕರಾಗಿ ಇದುವರೆಗೂ ಯಾವೊಬ್ಬ ಮಹಿಳೆಯೂ ಕೆಲಸನಿರ್ವಹಿಸಿಲ್ಲ.
ಅದೇ ಆಂಗ್ಲ ದಿನಪತ್ರಿಕೆಗಳಲ್ಲಿ ಈ ಪರಿಸ್ಥಿತಿ ಇಲ್ಲ. ಪ್ರಮುಖ ಪತ್ರಿಕೆ ದಿ ಹಿಂದು ಕರ್ನಾಟಕ ಆವೃತ್ತಿ ಮುಖ್ಯಸ್ಥರು ಪಾರ್ವತಿ ಮೆನನ್. ಡೆಕ್ಕನ್ ಕ್ರಾನಿಕಲ್ ರೆಸಿಡೆಂಟ್ ಎಡಿಟರ್ (ಬೆಂಗಳೂರು) ನೀನಾ ಗೋಪಾಲ್. ಟೈಮ್ಸ್ ಆಫ್ ಇಂಡಿಯಾ ಚೀಫ್ ಆಫ್ ಪೊಲಿಟಿಕಲ್ ಬ್ಯೂರೋ ನಾಹಿದಾ ಅತಾವುಲ್ಲಾ. ಕುಶಾಲಾ ಮುಖ್ಯ ವರದಿಗಾರ್ತಿ. ಡೆಕ್ಕನ್ ಹೆರಾಲ್ಡ್ ಮುಖ್ಯ ವರದಿಗಾರ್ತಿ ಆಶಾ ಕೃಷ್ಣಸ್ವಾಮಿ. ಹೀಗೆ ಪಟ್ಟಿ ಬೆಳೆಯುತ್ತದೆ. ವರದಿಗಾರರಾಗಿ, ಉಪಸಂಪಾದಕರಾಗಿ ಅನೇಕ ಮಹಿಳೆಯರು ಆಂಗ್ಲ ಪತ್ರಿಕೆಗಳಲ್ಲಿದ್ದಾರೆ.
ಕನ್ನಡ ಪತ್ರಿಕೆಗಳು ಮಹಿಳೆಯರಿಗೆ ಸಾಕಷ್ಟು ಅವಕಾಶಗಳನ್ನು ನೀಡದಿರಲು ಕೆಲವು ಕಾರಣಗಳು ಅಲ್ಲಲ್ಲಿ ಕೇಳಿ ಬಂದವು. ಒಂದು ಕಾರಣವೆಂದರೆ, ರಾತ್ರಿ ಪಾಳಿ ನಂತರ ವಾಹನ ಸೌಲಭ್ಯ ಇಲ್ಲದಿರುವುದು. ಪುರುಷರಾದರೆ ಹೇಗೋ ಮನೆ ಸೇರಿಕೊಳ್ತಾರೆ. ಮಹಿಳೆಯರದೇ ಕಷ್ಟ. ಅಚ್ಚರಿ ಅಂದರೆ ಇದೇ. ಇಡೀ ಊರಿನ ಅವ್ಯವಸ್ಥೆ ಬಗ್ಗೆ ಮಾತನಾಡುವ ಪತ್ರಿಕೆಗಳು ತಮ್ಮ ಸಂಸ್ಥೆಗಾಗಿ ದುಡಿಯುವವರಿಗ ರಾತ್ರಿ ವಾಹನ ವ್ಯವಸ್ಥೆ ಮಾಡುವುದಿಲ್ಲ ಎಂದರೆ?
ಈ ಕಾರಣ ಕೇವಲ ನೆಪ. ಮಹಿಳೆಯರನ್ನು ಸಹೋದ್ಯೋಗಿಯನ್ನಾಗಿಯೋ, ತಮ್ಮ ಸೀನಿಯರ್ ಎಂದಾಗಿಯೋ ಒಪ್ಪಿಕೊಳ್ಳುವ ಮನಸುಗಳು ಕನ್ನಡ ಪತ್ರಿಕೋದ್ಯಮದಲ್ಲಿ ಕಡಿಮೆ ಎನ್ನುವುದಂತೂ ಸತ್ಯ. ಆದರೆ, ಎಲ್ಲಾ ಕನ್ನಡ ಪತ್ರಿಕೆಗಳು ರಾಜಕಾರಣದಲ್ಲಿ ಮಹಿಳೆಯರಿಗೆ ಮೀಸಲಾತಿ ಎಂದಾಗ ಮಹಿಳಾ ಪರ ನಿಲ್ಲುತ್ತವೆ. ಏಕೆ ಈ ದ್ವಂದ್ವ?

ಕೊಳೆತ ವಸ್ತು ನಾರದೇ ಇರುವುದೆ?

ಮೊನ್ನೆಯ ಒಂದು ಉದಾಹರಣೆ.
ಕನ್ನಡಿಗ ಅರವಿಂದ ಅಡಿಗ ಅವರಿಗೆ ಪ್ರತಿಷ್ಠಿತ ಬುಕರ್ ಪ್ರಶಸ್ತಿ ಪ್ರದಾನವಾಗಿತ್ತು. ಅದೇ ವೇಳೆಯಲ್ಲಿ ವಿಜಯಕರ್ನಾಟಕ ‘ಮತಾಂತರ- ಒಂದು ಸಂವಾದ’ ಎನ್ನುವ ಚರ್ಚೆ ಆರಂಭಿಸಿತು. ವಿಜಯ ಕರ್ನಾಟಕದ ಪಾಲಿಗೆ ಕನ್ನಡಿಗನೊಬ್ಬ ಬುಕರ್ ಪ್ರಶಸ್ತಿಗೆ ಭಾಜನವಾದದ್ದು ಮಹತ್ವ ಎನಿಸಲಿಲ್ಲ. ಆ ಸುದ್ದಿಯನ್ನು ಮುಖಪುಟದಲ್ಲಿ ಬಾಟಮ್‌ಗೆ ಹಾಕಿ ಕೈ ತೊಳೆದುಕೊಂಡಿತು. ಒಳಗಿನ ಪುಟಗಳಲ್ಲೂ ಅಷ್ಟೇನೂ ಮಹತ್ವ ನೀಡಿರಲಿಲ್ಲ. ಬದಲಿಗೆ ಮತಾಂತರ ಕುರಿತ ಎಸ್ಸೆಲ್ ಭೈರಪ್ಪ ಅವರ ಪ್ರತಿಕ್ರಿಯೆಯನ್ನು ಮುಖಪುಟದ ಮೇಲ್ಭಾಗದಲ್ಲಿ ಪ್ರಕಟಿಸಿ, ಅಲ್ಲದೇ ೯ನೇ ಪುಟವನ್ನು ಸಂಪೂರ್ಣವಾಗಿ ಅವರ ಲೇಖನಕ್ಕೆ ಮೀಸಲಿರಿಸಿತ್ತು.
ಇಂದು,
ಮೂರನೇ ದಿನಕ್ಕೇ ಸಂವಾದ ೧೫ ಪುಟಕ್ಕೆ ಎತ್ತಂಗಡಿಯಾಗಿದೆ. ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಮುಖಪುಟ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಸಚಿನ್ ಸಾಧನೆಗೆ ಅಷ್ಟು ಮಹತ್ವವಿದೆ. ಅದಕ್ಕೆ ತಕರಾರಿಲ್ಲ. ಆದರೆ ಅರವಿಂದ ಅಡಿಗರ ಸಾಧನೆಯನ್ನು ವಿಜಯ ಕರ್ನಾಟಕ ಕಡೆಗಣಿಸಿದ್ದು ಯಾಕೆ? ಸಂಪಾದಕ ವಿಶ್ವೇಶ್ವರ ಭಟ್ಟರು. ಈ ಪ್ರಶ್ನೆಗೆ ಉತ್ತರಿಸುವರಾ?
ಒಳಗಿನ ಪುಟದಲ್ಲಿ ಪ್ರಕಟವಾಗಿರುವ ಸಂವಾದವೂ ವಿಜಯ ಕರ್ನಾಟಕ ಕೋಮುವಾದವನ್ನೇ ಧ್ವನಿಸುವ ಹಾಗಿದೆ. ಎಚ್. ಮೋಹನ್‌ದಾಸ್ ನಾಯಕ್, ಪ್ರೊ. ವೀರೇಂದ್ರ ಸಿಂಪಿ, ಸಚ್ಚಿದಾನಂದ ಹೆಗಡೆ, ಮತ್ತಿತರರ ಅಭಿಪ್ರಾಯಗಳು ವ್ಯಕ್ತವಾಗಿವೆ. ಅವಷ್ಟೂ ಅಭಿಪ್ರಾಯಗಳು ಕೋಮುವಾದವನ್ನು ನೇರವಾಗಿಯೇ ಕಾರಿಕೊಂಡಿವೆ. ಇವರುಗಳ ಮತ್ತು ಎಸ್.ಎಲ್. ಭೈರಪ್ಪನವರ ತೀಕ್ಷ್ಣ ದಾಳಿಗೆ ಪ್ರತಿಯಾಗಿ ತಣ್ಣಗೆ ಉತ್ತರಿಸಿರುವ ಡಾ. ಲೋಕೇಶ್ ಅಗಸನಕಟ್ಟೆ, ರೆವೆರೆಂಡ್ ಫಾದರ್ ಪಿ.ಕೆ. ಅಬ್ರಹಾಂ, ಸತೀಶ್ ಕುಲಕರ್ಣಿ ಮತ್ತು ಡಾ. ವಿ.ಬಿ. ರಡ್ಡೇರ ಅವರ ಪ್ರತಿಕ್ರಿಯೆಗಳೂ ಇವೆ.
ಸಂವಾದದ ಆರಂಭದಲ್ಲಿ ಸಂಪಾದಕರು "ಈ ಸಂವಾದಕ್ಕೆ ವಿಜಯಕರ್ನಾಟಕ ವೇದಿಕೆಯೇ ಹೊರತು, ವಕ್ತಾರ ಅಲ್ಲ" ಎಂದು ಸ್ಪಷ್ಟೀಕರಣ ನೀಡಿದ್ದರು. ಆಗತಾನೆ ಆರಂಭವಾದ ಸಂವಾದಕ್ಕೆ ಈ ಸ್ಪಷ್ಟೀಕರಣದ ಅಗತ್ಯವಾದರೂ ಏನಿತ್ತು? ಅವರನ್ನು ಈಗಾಗಲೇ ಕೋಮುವಾದಿಗಳು ಎಂದು ಯಾರೂ ಜರೆದಿರಲಿಲ್ಲ. ಆದರೆ ಅವರ ಆತ್ಮಸಾಕ್ಷಿಯೇ ಹಾಗೆ ಚುಚ್ಚಿರಬೇಕು. ಅವರೊಳಗಿನ ಕೋಮುವಾದದ ಕೊಳಕನ್ನು ತೋರಿಸಿರಬೇಕು. ಮುಚ್ಚಿಕೊಳ್ಳಲು ನಾವು ವೇದಿಕೆ ಹೊರತು, ವಕ್ತಾರರಲ್ಲ ಎಂಬ ಸೆಂಟು ಸಿಂಪಡಿಸಿಕೊಂಡಿದ್ದರು. ಆದರೂ ಕೊಳೆತ ವಸ್ತು ನಾರದೇ ಇರುವುದೆ?

Thursday, October 16, 2008

ಹೊಲಸು ಕಾರಿಕೊಂಡ ಭೈರಪ್ಪ...

ಸಾಯುವ ಮೊದಲು ಜ್ಞಾನಪೀಠ ಗಿಟ್ಟಿಸಲೇಬೇಕೆಂದು ಹೆಣಗಾಡುತ್ತಿರುವ ಎಸ್.ಎಲ್.ಬೈರಪ್ಪನ ಭೈರಿಗೆ ಕೊರೆತ ಆರಂಭವಾಗಿದೆ. ವಿಜಯಕರ್ನಾಟಕದ ಅಕ್ಟೋಬರ್ ೧೬ರ ಸಂಚಿಕೆಯ ಒಂದೂವರೆ ಪುಟವನ್ನು ಭೈರಪ್ಪ ಸ್ವಾಹಾ ಮಾಡಿದ್ದಾನೆ. ಮತಾಂತರ ವಿಷಯ ಬೆಳೆಯುತ್ತಿದ್ದಾಗ ವಿ.ಕ. ಎಸ್‌ಎಂಎಸ್ ಪೋನ್ ಇತ್ಯಾದಿ ಮಣ್ಣು ಮುಸುಡಿ ಆರಂಭಿಸಬೇಕಿತ್ತು. ತಡವಾಗಿಯಾದರೂ ವಿ.ಕ ತನ್ನ ಟ್ರಾಕಿಗೆ ಬಂದಿದೆ. ಅಭಿನಂದನೆಗಳು ವಿ.ಭಟ್ಟರೇ.
ಭೈರಪ್ಪ ಕರ್ನಾಟಕದ ನರೇಂದ್ರ ಮೋದಿಯಾಗಲು ಹೊರಟಿದ್ದಾನೆ. ಹಾಗಾಗಿ ಅವರ ಸಂಶೋಧನಾ ಲೇಖನದಲ್ಲಿ ಮೋದಿ ಮಾತುಗಳೇ ಕೇಳಿಸುತ್ತವೆ. ಅವನ ದೃಷ್ಟಿಯಲ್ಲಿ ಸೋನಿಯಾಗಾಂಧಿಯ ಪಟ್ಟಾಭಿಷೇಕವಾದ ಮೇಲೆ ಭಾರತದಲ್ಲಿ ಕ್ರಿಸ್ತೀಕರಣವು ಅಗಾಧವಾದ ಪ್ರಮಾಣಕ್ಕೆ ಏರಿದೆ. ಈ ಅಗಾಧತೆಯಿಂದ ಎಚ್ಚೆತ್ತ ಒರಿಸ್ಸಾ, ಕರ್ನಾಟಕ ಮೊದಲಾದ ಕಡೆ ಅಲ್ಲಲ್ಲಿ ಪ್ರತಿಕ್ರಿಯೆಗಳಾಗುತ್ತಿವೆ ಅಷ್ಟೆ. ಗುಜರಾತ್‌ನಲ್ಲಿ ಸಾವಿರಾರು ಮುಸ್ಲಿಮರನ್ನು ಹಿಂದೂ ವೀರರು ಕೊಂದುಹಾಕಿದಾಗ ಮೋದಿ ಇದನ್ನೇ ಹೇಳಿದ್ದಲ್ಲವೆ? ಹಾಗಾಗಿ ಮೋದಿಗೂ ಭೈರಪ್ಪನಿಗೂ ಅಷ್ಟೇನು ವ್ಯತ್ಯಾಸ ಕಾಣದು.
ವಿಚಿತ್ರವೆಂದರೆ ಮೋದಿಗೆ ಭೈರಪ್ಪನನ್ನು ಹೋಲಿಸಿದರೆ ಆತ ಮುಜುಗರ ಪಟ್ಟುಕೊಳ್ಳುವುದರ ಬದಲು ಹೆಮ್ಮೆ ಪಟ್ಟುಕೊಂಡರೆ ಆಶ್ಚರ್ಯವೇನಿಲ್ಲ. ಭೈರಪ್ಪ ಲೇಖನದಲ್ಲಿ ಸಾದರಪಡಿಸಿರುವ ಕಥೆಗಳಿಗೆಲ್ಲ ಆಧಾರವಾಗಿ ಕಾಣಿಸಿರುವುದು ಅರುಣ್ ಶೌರಿ ಎಂಬ ಮೂರನೇ ದರ್ಜೆ ಪತ್ರಕರ್ತನ ಕೃತಿಯನ್ನು, ಜತೆಗೆ ಸಂಘ ಪರಿವಾರದ ಭಟ್ಟಂಗಿಗಳಾದ ಸೀತಾರಾಂ ಗೋಯೆಲ್, ನವರತ್ನ ಎಸ್. ರಾಜಾರಾಂ ಎಂಬ ಅನಾಮಿಕ ಲೇಖಕರನ್ನು.
ಹಾಗೆಯೇ ಫ್ರಾಂಕ್ಚಾ ಗೋತಿಯೆ ಎಂಬ ಕ್ರಿಶ್ಚಿಯನ್ ದ್ವೇಷಿ ಫ್ರೆಂಚ್ ಪತ್ರಕರ್ತ ಹೇಳಿದ್ದೆಲ್ಲ ಭೈರಪ್ಪನಿಗೆ ವೇದೋಪನಿಷತ್ ಆಗಿರುವುದು ಸಹಜವೇ ಆಗಿದೆ. ಭೈರಪ್ಪನ ಕಿವಿ ಎಷ್ಟು ಕಿವುಡಾಗಿದೆಯೆಂದರೆ ಆತನಿಗೆ ಕರ್ನಾಟಕದ ಚರ್ಚುಗಳ ಮೇಲೆ ದಾಳಿ ನಡೆಸಿದ್ದು ಬಜರಂಗದಳ ಎಂಬುದರ ಬಗ್ಗೆಯೇ ಅನುಮಾನ. ಜನಸಾಮಾನ್ಯರೇ ರೊಚ್ಚಿಗೆದ್ದು ಈ ದಾಳಿ ಸಂಘಟಿಸಿರಬಹುದು ಎಂಬುದು ಆತನ ಲೆಕ್ಕಾಚಾರ. ಸ್ವತಃ ಬಜರಂಗದಳದ ಸಂಚಾಲಕ ಮಹೇಂದ್ರ ಕುಮಾರನೇ ಟಿವಿ ಚಾನೆಲ್‌ಗಳ ಸ್ಟೂಡಿಯೋಗಳಲ್ಲಿ ನೇರಪ್ರಸಾರದ ಕಾರ್ಯಕ್ರಮಗಳಲ್ಲಿ ನಾವೇ ಇದನ್ನು ಮಾಡಿದ್ದು ಎಂದು ಬೊಗಳಿದ್ದು ಭೈರಪ್ಪನಿಗೆ ಕೇಳಿಸಿಲ್ಲವೆ?ಭೈರಪ್ಪನಿಗೆ ಗೊತ್ತಿಲ್ಲದ ಮತ್ತಷ್ಟು ವಿಷಯಗಳಿವೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವಹಿಸಿರುವುದು ಪೃಥ್ವಿರಾಜ್ ಚೌಹಾಣ್ ಅವರು; ಎ.ಕೆ.ಆಂಟನಿ ಅಲ್ಲ. ಮಾರ್ಗರೆಟ್ ಆಳ್ವಾ ಮಹಾರಾಷ್ಟ್ರದಲ್ಲಿ ಅದ್ಯಾವ ರೀತಿಯಲ್ಲಿ ಭಯೋತ್ಪಾದನೆ ಮಾಡುತ್ತಿದ್ದಾರೋ ಭೈರಪ್ಪನೇ ಬಲ್ಲ. ಕಾರ್ಮಿಕ ಖಾತೆಯಲ್ಲಿರುವ ಆಸ್ಕರ್ ಫರ್ನಾಂಡೀಸ್ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವ ಮಂತ್ರಿ ಎಂದು ಭೈರಪ್ಪನವರಿಗೆ ಯಾರು ಹೇಳಿದರೋ? ಭೈರಪ್ಪನವರಿಗೆ ರಾಜಕೀಯ ಅಜ್ಞಾನವಿದ್ದರೆ ಬಾಯಿ ಮುಚ್ಚಿಕೊಂಡಿರಬೇಕು. ಫ್ರಾಂಕ್ವಾಗೋತಿಯೆ ಎಂಬ ಮೂರ್ಖ ಬರೆದ ಎಂಬ ಒಂದೇ ಕಾರಣಕ್ಕೆ ಬರಿಗಣ್ಣಿಗೆ ಕಾಣುವ ಸುಳ್ಳುಗಳ ಸರಮಾಲೆ ಯಾಕೆ ಸೃಷ್ಟಿಸಬೇಕು?
ಭೈರಪ್ಪನ ಇಡೀ ಲೇಖನವೇ ಇಂಥ ಅಸಹಾಯಕ, ಔಟ್‌ಡೇಟ್ ಆದ, ಮೂಲಭೂತವಾದಿ ಮುದಿ ಬ್ರಾಹ್ಮಣನ ಬಡಬಡಿಕೆಯಂತೆ ಕೇಳುತ್ತದೆ. ಮೇಲೆ ಹೇಳಿದ ಕೆಲವೇ ಉದಾಹರಣೆ ಸಾಕು; ಇಡೀ ಲೇಖನ ತುಂಬಾ ಇಂಥ ಸುಳ್ಳುಗಳು ಕಣ್ಣಿಗೆ ರಾಚುತ್ತವೆ ಎಂದು ಹೇಳಲು. ಭೈರಪ್ಪ ಪ್ರವಾದಿ ಮಹಮದ್ ಬಗ್ಗೆ ಹೇಗೆ ಬರೆಯುತ್ತಾನೆ ನೋಡಿ: "ಯಹೂದಿ, ಕ್ರೈಸ್ತ ಹಾಗು ಮುಸ್ಲಿಂ ಮತಗಳಲ್ಲಿನ ಸಾಮಾನ್ಯ ಅಂಶವೆಂದರೆ ದೇವರು ನಿಮಗೆ ನೇರವಾಗಿ ಲಭ್ಯನಲ್ಲ. ನೀವು ಮೂಲತಃ ಪಾಪಿಗಳು. ದೇವರು ಮಹಾ ಭಯಂಕರ, ಮಹಾಕ್ರೂರ ಶಿಕ್ಷೆಯನ್ನು ಮುಲಾಜಿಲ್ಲದೆ ಕೊಡುವವನು. ಪ್ರವಾದಿಯಾದ ನನ್ನನ್ನು ನಂಬಿ ನನ್ನ ಬೋಧೆಯಂತೆ ನಡೆದರೆ ನಿನಗೆ ಸತ್ತ ನಂತರ ಘೋರ ನರಕಕ್ಕೆ ಬೀಳಿಸುವುದನ್ನು ತಪ್ಪಿಸಿಕೊಳ್ಳುವ ಅವಕಾಶವುಂಟು. ಇಲ್ಲದಿದ್ದರೆ ಕೊನೆ ಇಲ್ಲದ ನೋವಿನ ನರಕ ಕಟ್ಟಿಟ್ಟದ್ದು. ನೀನು ನಂಬಬೇಕು, ಇತರರನ್ನು ನಂಬಿಸಬೇಕು. ಎಲ್ಲೆಲ್ಲಿಯೂ ಹೋಗಿ ಬಲ ಪ್ರಯೋಗವನ್ನಾದರೂ ಮಾಡಿ ನಂಬುವವರನ್ನು ಹೆಚ್ಚಿಸಬೇಕು. ಅದೇ ಧರ್ಮ, ಅದೇ ನೀತಿ. ನಂಬದವರನ್ನು ಹಿಂಸಿಸಿ ಕೊಲ್ಲುವ, ಗುಲಾಮರಾಗಿ ತುಳಿದು ದುಡಿಸಿಕೊಳ್ಳುವ ವಿಧಾನವನ್ನು ಮಹಮದರು ಬೋಧಿಸಿದರು. ಹಾಗಿದ್ದರೆ ಹಿಂದೂ ಧರ್ಮದ ಒಳಗಿನ ಅವತಾರಗಳ ಕತೆ ಏನು? ಸಂಭವಾಮಿ ಯುಗೇ ಯುಗೇ ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದನ್ನು ಭೈರಪ್ಪ ಹೇಗೆ ಅರ್ಥೈಸುತ್ತಾನೆ?
ದೇವರು ನೇರವಾಗಿ ಲಭ್ಯನಲ್ಲ ಎಂದು ಇತರ ಧರ್ಮಗಳು ಹೇಳುವುದಾದರೆ ಹಿಂದೂ ಧರ್ಮದಲ್ಲಿ ನೇರವಾಗಿ ಲಭ್ಯನೇ? ಹಾಗಿದ್ದರೆ ಈ ದೇಶದಲ್ಲಿ ಕೋಟಿ ಕೋಟಿ ಪೂಜಾರಿ ಪುರೋಹಿತರಿದ್ದಾರಲ್ಲ, ಅವರಿಗೆ ದೇವರು ಮತ್ತು ಮನುಷ್ಯರ ನಡುವೆ ದಳ್ಳಾಳಿ ಕೆಲಸ ಮಾಡಲು ಹಚ್ಚಿದವರು ‍ಯಾರು?
ಭೈರಪ್ಪನ ಲೇಖನಕ್ಕೆ ಇಂಥ ನೂರು ಉತ್ತರಗಳನ್ನು ನೀಡಬಹುದು. ಆದರೆ ಅನ್ನ ಬೆಂದಿದಿಯೇ ಎಂದು ತಿಳಿಯಲು ಎಲ್ಲ ಅಗುಳನ್ನು ಹಿಚುಕಿ ನೋಡಬೇಕಾಗಿಲ್ಲ ಅಲ್ಲವೆ? ಹಿಂಸೆ, ಮತಾಂಧತೆಗಳಿಂದ ರಾಜ್ಯ ನಿಧಾನವಾಗಿ ತಣ್ಣಗಾಗುವ ಹೊತ್ತಿನಲ್ಲೇ ಭೈರಪ್ಪ ಮತ್ತೆ ಇಡೀ ರಾಜ್ಯಕ್ಕೆ ಕಿಚ್ಚು ಹಚ್ಚಲು ಹೊರಟಿದ್ದಾನೆ. ಕ್ಷಮಿಸಿ, ಈ ಕಾರಣದಿಂದಲೇ ಆತನಿಗೆ ಏಕವಚನ ಪ್ರಯೋಗ ಮಾಡಬೇಕಾಯಿತು.

Wednesday, October 15, 2008

ಸ್ಕೂಪ್, ಬ್ರೇಕಿಂಗ್ ನ್ಯೂಸ್, ಫ್ಲಾಶ್ ನ್ಯೂಸ್...!


"ಸುದ್ದಿಮಾತು ಸ್ಕೂಪ್..ನಾಳೆ ನೋಡಿ... "
- ಎಂದಾಕ್ಷಣ ಏನಿರಬಹುದು? ಎಂಬ ಕುತೂಹಲ ಓದುಗರಲ್ಲಿ ಮೂಡಿದ್ದು ಸಹಜ. ಸ್ಕೂಪ್, ಬ್ರೇಕಿಂಗ್ ನ್ಯೂಸ್, ಎಕ್ಸ್ಲೂಸಿವ್, ಫ್ಲಾಶ್ ನ್ಯೂಸ್..ಎಂಬ ಪದಗಳಿಗೆ ವೀಕ್ಷಕರನ್ನು ಹಿಡಿದಿಡುವ ಶಕ್ತಿ ಇದೆ. ಜನರು ಕಣ್ಣರಳಿಸಿ, ಬಾಯಿ ಬಿಟ್ಕೊಂಡು ಏನಪ್ಪಾ ಇದು ಅಂತ ನೋಡ್ತಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ಬ್ರೇಕಿಂಗ್ ನ್ಯೂಸ್ ಹಾಗೂ ಫ್ಲಾಶ್ ನ್ಯೂಸ್ ಎಂಬ ಪದಗಳು ಅದೆಷ್ಟು ಸವಕಲಾಗಿವೆ ಎಂದರೆ, ಯಾವುದೇ ರೆಗುಲರ್ ಸುದ್ದಿಯೂ ಬ್ರೇಕಿಂಗ್ ನ್ಯೂಸ್ ಆಗಿಬಿಡುತ್ತದೆ.
Breaking News ಎಂದು ಮೂರ್‍ನಾಲ್ಕು ಬಾರಿ ಸ್ಕ್ರೀನ್ ಮೇಲೆ ಫ್ಲಾಶ್ ಆದ ಮೇಲೆ ಸುದ್ದಿ ಬರುತ್ತೆ - ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಾಲ್ವರು ಜೂಜುಕೋರರ ಬಂಧನ. ಇಂತಹ ಸುದ್ದಿಗಳ ಬಂಧಿತರ ಕುಟುಂಬದವರ ಹೊರತಾಗಿ ಮತ್ತಾರಿಗೆ ಬ್ರೇಕಿಂಗ್ ನ್ಯೂಸ್ ಆಗಲು ಸಾಧ್ಯ. ಮೇಲಾಗಿ ನಾಲ್ಕೈದು ಬಾರಿ ಈಗಾಗಲೇ ಅವರು ಇದೇ ಆರೋಪದ ಮೇಲೆ ಬಂಧನವಾಗಿದ್ದರೆ, ಅದು ಅವರ ಮನೆಯವರಿಗೂ ಸವಕಲು ಸುದ್ದಿಯೇ.
ಆದರೂ ಟಿವಿ೯ ದೃಷ್ಟಿಯಲ್ಲಿ ಅದು ಬ್ರೇಕಿಂಗ್ ನ್ಯೂಸ್! ಇತ್ತೀಚಿನ ದಿನಗಳಲ್ಲಂತೂ ಬ್ರೇಕಿಂಗ್ ನ್ಯೂಸ್ ಎಂಬ ಸ್ಟ್ರಿಪ್ ಇರದೆ ಟಿವಿ೯ ನೋಡಲು ಸಾಧ್ಯವೇ ಇಲ್ಲವೇನೋ ಎಂಬಂತಾಗಿದೆ. ಮುಂಜಾವಿನಲ್ಲಿ ನಡೆದ ದರೋಡೆ ರಾತ್ರಿ ಎಂಟು ಗಂಟೆಯ ಈ ಟಿವಿ ವಾರ್ತೆಯಲ್ಲೂ ಫ್ಲಾಶ್ ನ್ಯೂಸ್!
ಮುದ್ರಣ ಮಾಧ್ಯಮವೂ ಈ ಚಾಳಿಯಿಂದ ಹೊರತಾಗಿಲ್ಲ. ಕಫೀಲ್, ಸಬೀಲ್ ಪ್ರಕರಣದಲ್ಲಿ ಟೈಮ್ಸ್ ಆಫ್ ಇಂಡಿಯಾ ವರದಿಗಾರರು ಬರಿದದ್ದೇ ಬ್ರೇಕಿಂಗ್ ನ್ಯೂಸ್, ಎಕ್ಸ್ಲೂಸಿವ್! ವಿಶೇಷ ವರದಿ ಹೆಸರಿನಲ್ಲಿ ಪತ್ರಿಕಾ ಹೇಳಿಕೆಗಳೂ ಅಚ್ಚಾಗುತ್ತವೆ. ಇಂತಹ ಸವಕಲು ಸುದ್ದಿಮಾಡಿ ಬೈ-ಲೈನ್ ಗಿಟ್ಟಿಸುವ ಜಾಣ ಪತ್ರಕರ್ತರಿಗೆ ಈ ಹೊತ್ತಿನ ಪತ್ರಿಕೋದ್ಯಮದಲ್ಲಿ ಹೆಚ್ಚಿನ ಮಾನ್ಯತೆ.
ಅದೊಂದು ಕಾಲವಿತ್ತು, ಪ್ರಜಾವಾಣಿ ಸೇರಿ ಒಂದು ವರ್ಷದ ತನಕ ಎಂತಹದೇ ಸುದ್ದಿ ನೀಡಿದರೂ ವರದಿಗಾರನಿಗೆ ಬೈ-ಲೈನ್ ಇಲ್ಲ. ನಂತರವಾದರೂ ಒಂದು ಬೈಲೈನ್ ಸುದ್ದಿ ಎಂದರೆ, ಅದು ಮೂರ್‍ನಾಲ್ಕು ಹಿರಿಯ ಸಹೋದ್ಯೋಗಿಗಳ ಮೆಚ್ಚುಗೆ ಗಳಿಸಬೇಕಿತ್ತು. ಈಗ ಅದೆಲ್ಲ ಇಲ್ಲ ಬಿಡಿ. ದಾಸರಹಳ್ಳಿಯಲ್ಲಿ ಮೂವರು ಕರೆವೆಣ್ಣುಗಳ ಬಂಧನವಾಗಿದೆ, ಅದು ಬೇರೆ ಯಾವ ಪತ್ರಿಕೆಗೂ ಸಿಕ್ಕಿಲ್ಲ ಎಂದು ಷರಾ ಬರೆದು ಬೈ-ಲೈನ್ ಹಾಕಿ ಕಳುಹಿಸಿದರೆ ಅದು ಎಕ್ಸ್ಲೂಸಿವ್ ಎಂಬ ತಲೆಬರಹದೊಂದಿಗೆ ಅಚ್ಚಾಗುತ್ತದೆ.
ನಿಮಗಿದು ಗೊತ್ತಿರಲಿ: ಪ್ರಜಾವಾಣಿ ಗ್ರೂಪ್ ಒಂದು ಚಾನೆಲ್ ಆರಂಭಿಸುವ ಆಲೋಚನೆಯಲ್ಲಿದೆ. ಹಾಗೆ ನೋಡಿದರೆ, ಕನ್ನಡ ಚಾನೆಲ್ ಸ್ಥಾಪನೆಗಾಗಿ ಕರ್ನಾಟಕದಲ್ಲಿ ಮೊದಲು ಅನುಮತಿ ಪಡೆದದ್ದು ಪ್ರಜಾವಾಣಿ. ಅಂದು ಅವರು ಸುಧಾ ಎಂಬ ಹೆಸರಿನ ಚಾನೆಲ್ ಆರಂಭಿಸುವ ಯೋಚನೆ ಮಾಡಿದ್ದರು. ಕೆ.ಎನ್ ಶಾಂತಕುಮಾರ್ ಈ ಪ್ರಯತ್ನದ ಹಿಂದಿದ್ದಾರೆ ಎಂಬ ಸುದ್ದಿ ಇದೆ. ಕನ್ನಡದಲ್ಲಿ ಈಗಾಗಲೇ ಬೇರೂರಿರುವ ಟಿವಿ೯, ಬೇರೂರುತ್ತಿರುವ ಸುವರ್ಣ ಸುದ್ದಿ ವಾಹಿನಿಗಳ ಎದುರು ಪೈಪೋಟಿ ನಡೆಸುವ ಛಾತಿ ಹೊಸ ಚಾನೆಲ್‌ಗೆ ಬೇಕು. ಆದರೆ ಅದು ಮತ್ತೊಂದು ನಿಸ್ತೇಜ ಪ್ರಜಾವಾಣಿಯಾದರೆ ಉಪಯೋಗವಿಲ್ಲ.
ಅಂದಹಾಗೆ ಈ ಮೇಲಿನ ಸುದ್ದಿಯನ್ನು ಸುದ್ದಿಮಾತು ಓದುಗರು ಬ್ರೇಕಿಂಗ್ ನ್ಯೂಸ್ ಎಂದು ಪರಿಗಣಿಸಿದರೆ ನಮ್ಮ ತಕರಾರೇನಿಲ್ಲ.

Tuesday, October 14, 2008

ಪ್ರಜಾವಾಣಿಗೆ ಈಗ ವಯಸ್ಸಾಗಿದೆ...!

ಪ್ರಜಾವಾಣಿಗೆ ಈಗ ವಯಸ್ಸಾಗಿದೆ. ಇಂದಿಗೆ ಪತ್ರಿಕೆ ಆರಂಭವಾಗಿ ೬೧ ವರ್ಷಗಳಾದವು ಎಂದು ಪತ್ರಿಕೆ ಮುಖಪುಟ ಸಂಪಾದಕೀಯ ಹೇಳುತ್ತದೆ. ಪತ್ರಿಕೆ ನಾಡಿನ ಜನತೆಯ ಹೆಮ್ಮೆಯ ಕೂಸಾಗಿ ಬೆಳೆಯುತ್ತ ಈಗ ಪ್ರಬುದ್ಧತೆಯ ಹಂತಕ್ಕೆ ತಲುಪಿದೆ ಎಂದು ಸನ್ಮಾನ್ಯ ಸಂಪಾದಕರು ಬರೆದಿದ್ದಾರೆ.
ಇಂದಿನ ಮುಖಪುಟ ಸಂಪಾದಕೀಯ ಬರಹವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪತ್ರಿಕೆ ನಿಜಕ್ಕೂ ಪ್ರಬುದ್ಧ ಹಂತಕ್ಕೆ ತಲುಪಿದೆಯೇ, ಎಂಬ ಸಂಶಯ ಕಾಡುತ್ತದೆ.
ಪತ್ರಿಕೆ ಭಾಷೆಯ ಮುಖ್ಯ ಉದ್ದೇಶ ಓದುಗರನ್ನು ಸುಲಭವಾಗಿ ತಲುಪುವುದು. ಅಂತೆಯೇ ಕಾಲಕಾಲಕ್ಕೆ ಪತ್ರಿಕೆ ತನ್ನ ಭಾಷೆ ಬಳಕೆ ಸುಧಾರಿಸಿಕೊಂಡು ಓದುಗರನ್ನು ತಲುಪಬೇಕು. ಆದರೆ ಪ್ರಜಾವಾಣಿ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದಂತಿಲ್ಲ. ಇದಕ್ಕೆ ತಾಜಾ ಉದಾಹರಣೆ ಇಂದಿನ ಮುಖಪುಟ ಸಂಪಾದಕೀಯ!
ಮೊದಲ ವಾಕ್ಯ ಗಮನಿಸಿ ಇವತ್ತಿಗೆ ಸರಿಯಾಗಿ ೬೧ ವರ್ಷಗಳ ಹಿಂದೆ ಕರ್ನಾಟಕವು (ಅಂದಿನ ಮೈಸೂರು ರಾಜ್ಯವು), ನಾಡಿನ ಜನತೆಯ ಶಕ್ತಿಯುತ ದನಿಯಾಗಿ ಪ್ರಜಾವಾಣಿ ದಿನಪತ್ರಿಕೆ ಜನ್ಮ ತಳೆಯಲು ಸಾಕ್ಷಿಯಾಯಿತು.
ಈ ವಾಕ್ಯದ ಹಿಂದಿನ ಉದ್ದೇಶ - ಪತ್ರಿಕೆ ಆರಂಭವಾಗಿ ೬೧ ವರ್ಷಗಳಾದವು ಎನ್ನುವುದನ್ನು ಓದುಗರಿಗೆ ತಿಳಿಸುವುದು. ಈ ಸಣ್ಣ ಸಂಗತಿ ಹೇಳಲು ಸಂಪಾದಕರು ಅದೆಷ್ಟು ಸರ್ಕಸ್ ಮಾಡಿದ್ದಾರೆ ನೋಡಿ. ಒಟ್ಟು ೧೯ ಪದಗಳು ಹಾಗೂ ಒಂದು ಕಂಸ (brackets) ಬಳಕೆಯಾಗಿವೆ. ಅದೇ ಮಾತನ್ನು ತೀರಾ ಸರಳವಾಗಿ ಇಂದಿಗೆ ಪ್ರಜಾವಾಣಿ ಪತ್ರಿಕೆ ಆರಂಭವಾಗಿ ೬೧ ವರ್ಷಗಳಾದವು... ಎಂದು ಹೇಳುತ್ತಾ ಸಂಪಾದಕೀಯ ಆರಂಭಿಸುತ್ತಿತ್ತಲ್ಲವೆ?
ಇನ್ನೊಂದು ವಾಕ್ಯ ಗಮನಿಸಿ ಪತ್ರಿಕೆಯ ಮೊದಲ ಸಂಪಾದಕ ಬಿ. ಪುಟ್ಟಸ್ವಾಮಯ್ಯ ಸಂಪಾದಕತ್ವದಿಂದ ಆರಂಭಗೊಂಡು ಪ್ರಜಾವಾಣಿಯು ಈಗ ದೊಡ್ಡ ಮಾಧ್ಯಮ ಸಮೂಹವಾಗಿ ಬೆಳೆದಿದೆ.
ಒಂದು ಪದ ಒಂದೇ ವಾಕ್ಯದಲ್ಲಿ ಎರಡು ಬಾರಿ ಬರುವುದು ಉತ್ತಮ ಬರವಣಿಗೆಯ ಲಕ್ಷಣವಲ್ಲ ಎಂಬುದು ಎಡಿಟಿಂಗ್‌ನ ಪ್ರಥಮ ಪಾಠಗಳಲ್ಲಿ ಒಂದು. ಪ್ರಜಾವಾಣಿ ಪತ್ರಿಕೆಗೆ ಇಂಟರ್ನ್‌ಷಿಪ್‌ಗೆಂದು ಬಂದ ವಿದ್ಯಾರ್ಥಿಯೊಬ್ಬ ಇಂತಹ ಬರಹ ಬರೆದಿದ್ದರೆ ಒಪ್ಪಿಕೊಳ್ಳಬಹುದಿತ್ತು. ಆದರೆ ಈ ವಾಕ್ಯ ಬರೆದಿರುವುದು ೬೧ ವರ್ಷ ಇತಿಹಾಸ ಇರುವ ಪತ್ರಿಕೆ ಸಂಪಾದಕರು!
ಮತ್ತೊಂದು ವಾಕ್ಯ ಗಮನಿಸಿ ತಾಲೂಕು, ಜಿಲ್ಲೆ ಸೇರಿದಂತೆ ದೇಶದ ಎಲ್ಲ ಭಾಗಗಳು ಮತ್ತು ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಯ ವರದಿಗಾರರು ಕೊಡುವ ಗ್ರಾಮೀಣ ಪ್ರದೇಶದ ತಳಮಟ್ಟದ ಸುದ್ದಿಗಳಿಂದ ಹಿಡಿದು ಅಂತರ್‌ರಾಷ್ಟ್ರೀಯ ಆಗು ಹೋಗುಗಳವರೆಗೆ ವೈವಿಧ್ಯಮಯ ಸುದ್ದಿಗಳನ್ನು ಪತ್ರಿಕೆ ಉಣಬಡಿಸುತ್ತಿದೆ.
ಈ ವಾಕ್ಯ ಓದಿ ಅರಗಿಸಿಕೊಳ್ಳುವುದೇ ಒಂದು ಪ್ರಯಾಸದ ಕೆಲಸ. ಎಡಿಟಿಂಗ್ ಎನ್ನುವುದರ ಕುರುಹೇ ಇಲ್ಲೇಲ್ಲೂ ಇಲ್ಲ. ಈ ವಾಕ್ಯವನ್ನು ಸರಳವಾಗಿ - ಸುತ್ತಲ ಜಗತ್ತಿನ ಎಲ್ಲ ಆಗುಹೋಗುಗಳನ್ನು ಪತ್ರಿಕೆ ಓದುಗರಿಗೆ ನೀಡುತ್ತಿದೆ ಹೇಳಬಹುದಿತ್ತಲ್ಲವೇ?
ಇನ್ನು ಬರಹದ ಕೊನೇ ವಾಕ್ಯ - ಪತ್ರಿಕೋದ್ಯಮದ ಉನ್ನತ ಮೌಲ್ಯಗಳನ್ನು ಎತ್ತಿ ಹಿಡಿಯಲು ನಾವು ಈ ವಿಶೇಷ ಸಂದರ್ಭದಲ್ಲಿ ಮತ್ತೊಮ್ಮೆ ಮರು ಸಮರ್ಪಣೆ ಮಾಡಿಕೊಳ್ಳುತ್ತೇವೆ. ಮತ್ತೊಮ್ಮೆ ಮರು ಸಮರ್ಪಣೆ ಅಂದರೆ!!
ಸಂಪಾದಕೀಯ ಬರದ ವಿನ್ಯಾಸವಂತೂ ದೇವರಿಗೇ ಪ್ರೀತಿ. ಕಲರ್ ಕೆಮಿಸ್ಟ್ರಿ ಪ್ರಜಾವಾಣಿಗೆ ಇಷ್ಟು ವಯಸ್ಸಾದರೂ ಅರ್ಥವಾದಂತಿಲ್ಲ. ಬರಹದ ಶೀರ್ಷಿಕೆ ೬೧ ಸಂವತ್ಸರಗಳ ಸಂಭ್ರಮದಲ್ಲಿ. ಜತೆಯಲ್ಲೇ ಇರುವ ಇಮೇಜ್‌ನಲ್ಲೂ ೬೧ - ಸಂಭ್ರಮ!. ಎರಡೂ ಕಡೆ ಒಂದೇ ಮಾತು. ಅಂತೆಯೇ ಬರಹದ ತುಂಬ ಪ್ರಜಾವಾಣಿ ಎನ್ನುವ ಪದ ಏಳು ಬಾರಿ ಬಳಕೆಯಾಗಿದೆ. ಮಾಸ್ಟ್ ಹೆಡ್ ಪ್ರಜಾವಾಣಿ ಆಗಿರುವಾಗ ಪತ್ರಿಕೆ ಹೆಸರು ಬರಹದಲ್ಲಿ ಅಷ್ಟು ಬಾರಿ ಬಳಕೆಯಾಗುವ ಅಗತ್ಯವಿತ್ತೆ?
ಕೊನೆಮಾತು:
ಇಂದು ಪ್ರಕಟಗೊಳ್ಳುತ್ತಿರುವ ಕನ್ನಡ ಪತ್ರಿಕೆಗಳಲ್ಲಿ ಸಮಷ್ಟಿಯನ್ನೂ ತನ್ನೊಂದಿಗೆ ತೆಗೆದುಕೊಂಡು ಹೋಗಬಲ್ಲ ಶಕ್ತಿಯಿರುವ ಪತ್ರಿಕೆ ಪ್ರಜಾವಾಣಿ ಮಾತ್ರ. ಪತ್ರಿಕೆ ಕಾಲಕಾಲಕ್ಕೆ ತನ್ನ ಬರಹಗಳ ಮೂಲಕ ಮತ್ತಷ್ಟು ಮೊನಚಾಗಿ ಓದುಗರಿಗೆ ಸದಾ ಹತ್ತಿರವಾಗಿಯೇ ಇರಬೇಕು ಎನ್ನುವುದು ನಮ್ಮ ಆಶಯ. ಈ ಕಾರಣಕ್ಕೆ ಇಂತಹದೊಂದು ಬರಹ ಬರೆಯಬೇಕಾಯ್ತು.

Monday, October 13, 2008

ನಕಲಿ ಪತ್ರಕರ್ತ ಬಂಧನ!

ಸೋಮವಾರ ವಿಕಾಸ ಸೌಧದಲ್ಲಿ ಒಬ್ಬ ನಕಲಿ ಪತ್ರಕರ್ತನ ಬಂಧನವಾಗಿದೆ. ಈ ಟಿವಿ ವರದಿಗಾರ ಸಂಜಯ್ ಎಂದು ಹೇಳಿಕೊಂಡು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರಿಂದ ಹಣ ಪಡೆಯಲು ಯತ್ನಿಸಿದ್ದ ಜಗದೀಶ್ ಬಂಧಿತ. ಒಂದು ವಾರದ ಹಿಂದೆಯೇ ಮಂತ್ರಿಯನ್ನು ಕಂಡು ತನ್ನ ತಾಯಿಗೆ ತೀವ್ರ ಅನಾರೋಗ್ಯ ಚಿಕಿತ್ಸೆಗೆ ಸಹಾಯ ಮಾಡಿ ಎಂದಿದ್ದಾನೆ. ಆಯ್ತು ನೋಡೋಣ ಸೋಮವಾರ ಬನ್ನಿ ಎಂದು ಹೇಳಿ ಕಳುಹಿಸಿದ್ದಾರೆ. ಮಂತ್ರಿ ತನ್ನ ಆಪ್ತ ಸಿಬ್ಬಂದಿಗೂ ಈ ಬಗ್ಗೆ ಮಾಹಿತಿ ನೀಡಿ, ಸಾಧ್ಯವಾದರೆ ಸರಕಾರಿ ಆಸ್ಪತ್ರೆಯಲ್ಲಿ ಅವರ ತಾಯಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಎಂದಿದ್ದಾರೆ.
ಮಂತ್ರಿಯ ಆಣತಿಯಂತೆ ಜಗದೀಶ್ ಸೋಮವಾರ ಮಂತ್ರಿಯನ್ನು ಕಾಣಲು ವಿಕಾಸ ಸೌಧಕ್ಕೆ ಬಂದಿದ್ದಾನೆ. ಬಂದವನೇ ತನ್ನ ಮೊಬೈಲ್ ಚಾರ್ಜ್ ಮಾಡಲು ಚಾರ್ಜರ್ ಕೊಡಿ ಎಂದು ಕೇಳಿದ್ದಾನೆ. ಅಲ್ಲಿಯ ನೌಕರರು ಚಾರ್ಜರ್ ಇಲ್ಲ ಎಂದಾಗ, ನಾನು ಈ-ಟಿವಿ ವರದಿಗಾರ ನನಗೆ ಚಾರ್ಜರ್ ಬೇಕೇ ಬೇಕು, ತರಿಸಿ ಕೊಡಿ ಎಂದೆಲ್ಲಾ ಕೂಗಾಡಿದ್ದಾನೆ. ಆತನ ವರ್ತನೆ ಸಹಜವಾಗಿಯೇ ಅನುಮಾನ ಹುಟ್ಟಿಸಿದೆ.
ಈ ಟಿವಿ ಕಚೇರಿಗೆ ಫೋನ್ ಮಾಡಿ ವಿಚಾರಿಸಿದರೆ, ಸಂಜಯ್ ಎಂಬ ಹೆಸರಿನವರ್ಯಾರೂ ಸುದ್ದಿ ವಿಭಾಗದಲ್ಲಿಲ್ಲ. ಮಂತ್ರಿ ಸಹಚರರು ಆತನನ್ನು ಅಲ್ಲಿಯೇ ಕೂರಿಸಿ, ನಂತರ ಈ ಟಿವಿ ಸುದ್ದಿ ವಾಹಿನಿ ಸಿಬ್ಬಂದಿ ಸಹಾಯದೊಂದಿಗೆ ವಿಧಾನಸಭಾ ಪೊಲೀಸ್ ಸುಪರ್ದಿಗೆ ನೀಡಿದರು.
ಪತ್ರಕರ್ತರೆಂದರೆ ಸುಲಿಗೆಕೋರರು, ಬ್ಲಾಕ್ ಮೇಲ್ ಪ್ರವೀಣರು ಎಂಬ ಟೀಕೆಗಳಿಗೆ ಇಂತಹ ನಕಲಿ ಪತ್ರಕರ್ತರು ಕಾರಣ. ಇಂತಹ ನಕಲಿ ಪತ್ರಕರ್ತರ ಹಾವಳಿಯಿಂದ ಪತ್ರಿಕೋದ್ಯಮದ ಹೆಸರು ಹಾಳು. ಬಂಧಿತ, ಸಂಜಯ್ ಎನ್ನುವ ಹೆಸರಿನಲ್ಲಿ ದಂಧೆ ಮಾಡ್ತಿದ್ದ. ಆದರೆ ಅದೇ ಹೆಸರಿನ ವರದಿಗಾರನೊಬ್ಬ ಈ ಟಿವಿಯ ಉದ್ಯೋಗಿಯಾಗಿದ್ದಿದ್ದರೆ? ಆತ ಅತ್ಯಂತ ಪ್ರಾಮಾಣಿಕನಾಗಿದ್ದರೂ, ಫೀಲ್ಡ್ ನಲ್ಲಿ ಭ್ರಷ್ಟ ಎನ್ನುವ ಮಾತು ಪ್ರಚಲಿತವಾಗಿರುತ್ತಿತ್ತು. ವ್ಯಕ್ತಿಯೊಬ್ಬನ ತೇಜೋವಧೆ ಮಾಡುವ ಕೆಲಸ ತೀರಾ ಕಷ್ಟವೇನಲ್ಲ.
ಕೊನೆ ಮಾತು:
ಒಬ್ಬ ನಕಲಿ ಪತ್ರಕರ್ತ ದುಡ್ಡು ಮಾಡಲು ಹೋಗಿ ಬಂಧನಕ್ಕೊಳಗಾಗಿದ್ದಾನೆ. ಆದರೆ ದುಡ್ಡು, ಸೈಟ್ ಮಾಡುತ್ತಲೇ ಇರುವ ಅಸಲಿ ಪತ್ರಕರ್ತರು ಬಹುಸಂಖ್ಯೆಯಲ್ಲಿ ಇನ್ನೂ ವಿಧಾನಸೌಧ, ವಿಕಾಸ ಸೌಧಗಳಲ್ಲಿ ತಿರುಗಾಡುತ್ತಿದ್ದಾರೆ. ಅವರ ಬಂಧನ... ಆಗದ ಮಾತು ಬಿಡಿ!

ಯಡಿಯೂರಪ್ಪ ಯಾರಿಗೆ ಮುಖ್ಯಮಂತ್ರಿ?

ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವುದು ಯಾರಿಗೆ? ಇಡೀ ರಾಜ್ಯಕ್ಕೊ? ಶಿವಮೊಗ್ಗ ಜಿಲ್ಲೆಗೊ? ಶಿಕಾರಿಪುರಕ್ಕೊ? ಈ ಪ್ರಶ್ನೆಗಳಿಗೆ ಉತ್ತರ ಇವತ್ತಿನ `ಕನ್ನಡ ಪ್ರಭ’ದಲ್ಲಿದೆ (ಇಲ್ಲಿದೆ). ಈ ಹಿಂದೆ ಮಾಜಿ ಪ್ರದಾನಿ ಎಚ್.ಡಿ. ದೇವೇಗೌಡ ಮತ್ತು ಅವರ ಮಗ ಎಚ್.ಡಿ. ರೇವಣ್ಣ ಅವರ ಬಗ್ಗೆಯೂ ಇಂತಹುದೆ ಆರೋಪಗಳು ಬಂದಿದ್ದವು. ಮಾಧ್ಯಮಗಳು ಎಂದಿನಂತೆ ಅವರ ಮೇಲೆ ಹೆಚ್ಚಾಗಿಯೇ ಹರಿಹಾಯ್ದಿದ್ದವು. ಯಡಿಯೂರಪ್ಪ ಅವರ ಪ್ರಕರಣದಲ್ಲಿ ಈಗತಾನೇ ಬಾಯಿ ಬಿಡುತ್ತಿವೆ ಎಂದುಕೊಂಡರು ಮುಂದೆ ತೀವ್ರವಾಗಿ ಖಂಡಿಸಬೇಕಾದ ಜವಾಬ್ದಾರಿ ಮಾಧ್ಯಮಗಳದ್ದು ಎನ್ನುವುದನ್ನು ಮರೆಯಬಾರದು.
ಬಿಜೆಪಿ ಸರ್ಕಾರ ನೂರುದಿನ ಪೂರೈಸಿದಾಗ ಯಡಿಯೂರಪ್ಪ ಪತ್ರಿಕೆಗಳಿಗೆ ನೀಡಿದ ಸಂದರ್ಶನಗಳಲ್ಲಿ `ಆಡಳಿತದಲ್ಲಿ ನನ್ನ ಕುಟುಂಬದವರ ಹಸ್ತಕ್ಷೇಪ ಇಲ್ಲ" ಎಂದು ಹೇಳಿಕೊಂಡಿದ್ದರು. ಅದರಲ್ಲೂ "ಅಗ್ನಿ" ವಾರಪತ್ರಿಕೆ ಸಂದರ್ಶನದಲ್ಲಿ "ನನ್ನ ಯಾವೊಬ್ಬ ಸಂಬಂಧಿಯೂ ಮೂಗು ತೂರಿಸುತ್ತಿಲ್ಲ" ಎನ್ನುವಂತೆ ಮಾತನ್ನಾಡಿದ್ದರು. ಆದರೆ ಬಹುತೇಕ ಮಾಧ್ಯಮಗಳಿಗೆ ಗೊತ್ತಿಲ್ಲದ (ಗೊತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿವೆ) ಸಂಗತಿ ಎಂದರೆ ಇದೇ ಯಡಿಯೂರಪ್ಪ ಅವರ ತಂಗಿಯ ಮಗ ಅರವಿಂದ್ ಈಗ ವಿಧಾನಸೌಧದಲ್ಲಿ ವಿಶೇಷ ಅಧಿಕಾರಿಯಾಗಿದ್ದಾರೆ. ಈ ಬೆಳವಣಿಗೆ ಆಗಿದ್ದು ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ.
ಮತ್ತೆ ಹಿಂದೆ ತಿರುಗಿ ನೋಡುವುದಾದರೆ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಅಳಿಯ ಸಿದ್ಧಾರ್ಥ ಪ್ರಭಾವಿಯಾಗಿದ್ದರು. ಆದರೆ ಎಸ್.ಎಂ.ಕೃಷ್ಣ ಯಾವತ್ತೂ ಮಂಡ್ಯ ಜಿಲ್ಲೆಗೆ ಮೀಸಲಾಗಿರಲಿಲ್ಲ. ಮದ್ದೂರಿಗೆ ಏನನ್ನೂ ಮಾಡಲಿಲ್ಲ. ಅದೇ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಮದ್ದೂರಿನಿಂದ ಬೆಂಗಳೂರಿನ ಚಾಮರಾಜಪೇಟೆಗೆ ಬಂದು ಬಿಟ್ಟರು. ರಾಜ್ಯದ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ದೇವರಾಜ ಅರಸು ಕೂಡ ತಮ್ಮ ಕ್ಷೇತ್ರ ಹುಣಸೂರಿಗೆ ಏನೇನೂ ಮಾಡಲಿಲ್ಲ. ಹಾಗೆಯೇ ನಿಜಲಿಂಗಪ್ಪ ಅವರ ಕಾಲದಲ್ಲಿ ಅವರ ತವರು ಜಿಲ್ಲೆ ಚಿತ್ರದುರ್ಗಕ್ಕೆ ಸಂದ ಕೊಡುಗೆಯೂ ಅಷ್ಟಕಷ್ಟೆ. ಹಾಗೇ ನಿಜಲಿಂಗಪ್ಪ ಅವರು ಮನಸ್ಸು ಮಾಡಿದ್ದರೆ ಅವತ್ತೇ ಭದ್ರ ಮೇಲ್ದಂಡೆ ಯೋಜನೆಗೆ ಹಸಿರು ನಿಶಾನೆ ತೋರಿಸಬಹುದಿತ್ತು. ಅವರೆಲ್ಲರ ದೃಷ್ಟಿಯಲ್ಲಿ "ಸಮಗ್ರ ಕರ್ನಾಟಕ" ಇದುದ್ದರಿಂದ ಅವರ್ಯಾರು ಅಂತಹ ತಪ್ಪುಗಳನ್ನು ಮಾಡಲಿಲ್ಲ.
ಈ ಇತಿಹಾಸ ಗೊತ್ತಿರದ ಯಡಿಯೂರಪ್ಪ ತಮ್ಮ ವ್ಯಾಪ್ತಿಯನ್ನು ಕಿರಿದಾಗಿಸಿಕೊಳ್ಳುತ್ತಿದ್ದಾರೆ. ಅತ್ಯಂತ ಹಿಂದುಳಿದ ಗಡಿ ಜಿಲ್ಲೆಯಾದ ಚಾಮರಾಜನಗರವನ್ನು ಮರೆತಿದ್ದಾರೆ. ಶಾಪಗ್ರಸ್ತ ಜಿಲ್ಲೆಯೆಂದೇ ಕರೆಯಲ್ಪಡುವ ಚಾಮರಾಜನಗರಕ್ಕೆ ಇವರು ಕಾಲಿಡದಿದ್ದರೂ ಅಭಿವೃದ್ಧಿಗೆ ಪೂರಕವಾದ ಅನುದಾನ ಬಿಡುಗಡೆ ಮಾಡಬಾರದೆ? ಭರಚುಕ್ಕಿ ಉತ್ಸವಕ್ಕೆ ಸಿದ್ಧತೆ ನಡೆಸಿಕೊಡಲು ಚಾಮರಾಜನಗರ ಜಿಲ್ಲಾಡಳಿತ ಕಾಯುತ್ತಾ ಕುಳಿತಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಬೇಕೆಂದೇ ಜಿಲ್ಲಾಡಳಿತ ಭರಚುಕ್ಕಿ ಉತ್ಸವವನ್ನು ಉಮ್ಮಿಕೊಂಡಿತು. ಅದೇ ದೃಷ್ಟಿಯಿಂದ ದಸರಾ ವೇಳೆಯಲ್ಲಿ ಈ ಉತ್ಸವ ನಡೆಸುವ ಚಿಂತನೆ ಇತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರ ಬಂದು ಅಗತ್ಯ ಅನುದಾನ ಬಿಡುಗಡೆ ಮಾಡಿಲ್ಲ. ಮೇಲಾಗಿ ಮುಖ್ಯಮಂತ್ರಿಗಳು ಬಂದು ಉದ್ಘಾಟನೆ ಮಾಡಲಿ ಎನ್ನುವ ಸ್ಥಳೀಯ ಶಾಸಕರ ಮಾತಿಗೂ ಮನ್ನಣೆ ಸಿಕ್ಕಿಲ್ಲ.
ಕನ್ನಡಪ್ರಭ ವರದಿ ಆಧರಿಸಿ ಹೇಳುವುದಾದರೆ ಶಿವಮೊಗ್ಗ ಜಿಲ್ಲೆಗೆ 4.25 ಕೋಟಿ ರು ಬಿಡುಗಡೆಯಾಗಿದೆ. ಯಡಿಯೂರಪ್ಪ ಕೇವಲ ಶಿವಮೊಗ್ಗಕ್ಕಷ್ಟೆ ಅಲ್ಲದೆ ಅಧಿಕಾರ ಅನುಭವಿಸಲು ಕಾರಣಕರ್ತರಾದ ಗಣಿಧಣಿಗಳಿಗೂ ಪಾಲು ನೀಡಿದ್ದಾರೆ. ಬಳ್ಳಾರಿ ಹೆಚ್ಚು ಅನುದಾನ ಪಡೆದ ಜಿಲ್ಲೆಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಆದರೆ ಹಾಸನ, ರಾಮನಗರ ಜಿಲ್ಲೆಗಳಿಗೆ ಒಂದುಪೈಸೆ ಸಹ ಬಿಡುಗಡೆಯಾಗಿಲ್ಲ. ಹಾಸನದಲ್ಲಿ ರೇವಣ್ಣ, ರಾಮನಗರದಲ್ಲಿ ಕುಮಾರಸ್ವಾಮಿ ಇದ್ದಾರೆ ಎಂಬುದು ಎಲ್ಲರಿಗೂ ವೇದ್ಯ. ಇನ್ನು ಮೈಸೂರಲ್ಲಿ ಕಾಂಗ್ರೆಸ್- ಜೆಡಿಎಸ್ ಪ್ರಾಬಲ್ಯವಿದೆ. ಅದಕ್ಕಾಗಿ ಆ ಜಿಲ್ಲೆಗಳಿಗೆ ಅನುದಾನ ನೀಡಲಾಗಿಲ್ಲ. ಹಾಗಾದರೆ ಯಾರಿಗೆ ಮುಖ್ಯಮಂತ್ರಿ?
ನಯಾಪೈಸೆಯೂ ಬಿಡುಗಡೆಯಾಗದ ಬೆಂಗಳೂರು ಗ್ರಾಮಾಂತರ, ಬಿಜಾಪುರ, ಚಾಮರಾಜನಗರ, ಮೈಸೂರು, ಹಾಸನ, ಉಡುಪಿ ಜಿಲ್ಲೆಗಳ ಜನರು ನಿಮ್ಮ ಯಾವ ಪುರುಷಾರ್ಥಕ್ಕೆ "ನಮ್ಮ ಮುಖ್ಯಮಂತ್ರಿ" ಎನ್ನಬೇಕು?

Sunday, October 12, 2008

ಕ್ರೈಸ್ತರ ಮೇಲಿನ ದಾಳಿ, ರಾಜಕಾರಣಿಗಳು ಹಾಗೂ ಸಾಹಿತಿಗಳ ಪತ್ರ..

ಕನ್ನಡದ ನಾಟಕಕಾರ ಗಿರೀಶ್ ಕಾರ್ನಾಡ್, ಸಲ್ಮಾನ್ ರಶ್ದಿ, ವಿಕ್ರಮ್ ಸೇಠ್, ರಾಮಚಂದ್ರ ಗುಹಾ ಸೇರಿದಂತೆ 15 ಮಂದಿ ಚಿಂತಕರು, ಸಾಹಿತಿಗಳು ಇಂದು ದಿ ಹಿಂದು ಪತ್ರಿಕೆಯ 'ಲೆಟರ್ಸ್ ಟು ಎಡಿರ್' ಅಂಕಣಕ್ಕೆ ಬರೆದ ಪತ್ರವಿದು.
Act decisively
We write to express our anguish and outrage at the continuing brutalities visited upon Christian communities and places of worship in Orissa and Karnataka, and elsewhere in India, as well as at the pusillanimous attitude of our political leaders towards the perpetrators of these atrocities.
While the police have stood by and watched churches being desecrated and acts of assault and rape carried out, the Central Government has reacted vigorously only after representatives of the European Union expressed their concern. The perceived damage to India’s international image should not be a greater concern than the actual damage that such violence causes to the inclusive, multi-religious and multi-ethnic character of Indian society.
This violence is a failure of our political institutions and of civil society. It is a consequence of our failure to uphold the principles of the rule of law, mutual understanding, and civil dialogue. Eventually, such violence does not remain confined to a few clearly targeted victims. Rather, it spreads to engulf and destroy the entire society that spawns it, as is evident in neighbouring Pakistan and Sri Lanka, for instance.
The worst contributors to this scenario are politicians who dream of electoral victory at the cost of social catastrophe. The powerful ideal of ’unity in diversity’, which has held this country together for six decades, has been seriously imperilled by the use of religious and ethnic prejudice as a political weapon. Intolerance of those different from ourselves, and the abandoning of reasoned discussion to deal with differences, spells the end of the India for which the freedom struggle was waged.
More and more of us must come out and say clearly that we do not share the dreams of these cynical opportunists. Their India is not the India we dream of. The India we dream of is a just society, not an aggressive power.
We call upon the Indian Government to ensure that hate speech is outlawed from the domain of public discourse. We also call upon the Indian Government to outlaw those political parties which, directly or through their cohorts, promote communal discord and encourage violence. The rule of law implies that every citizen’s life is sacred. Let the law act decisively to punish those who perpetrate the appalling crimes of pogrom and murder.
-
Girish Karnad, Salman Rushdie, Amitav Ghosh, Vikram Seth, Ramachandra Guha, Kiran Nagarkar, Amit Chaudhuri, Mukul Kesavan, Suketu Mehta, Ranjit Hoskote, Arundhathi Subramaniam, Sampurna Chattarji, Nancy Adajania, Shobhana Bhattacharji and Romesh Bhattacharji.

Saturday, October 11, 2008

ಯದ್ವಾ-ತದ್ವಾ ಈಶ್ವರಪ್ಪ !!

ನಮ್ಮ ಉಡುಪಿ ಪ್ರತಿನಿಧಿಯಿಂದ:
ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಯದ್ವಾತದ್ವಾ ಮಾತನಾಡಿದ್ದಾರೆ. (ವರದಿ ಇಲ್ಲಿದೆ) ಕನಕಗೋಪುರ ವಿವಾದಕ್ಕೆ ಸಂಬಂಧಿಸಿದಂತೆ ಪೇಜಾವರ ಶ್ರೀಗಳು ವಿಶ್ವನಾಥ್, ಸಿದ್ರಾಮಯ್ಯ, ಹಾಗೂ ಅನಂತಮೂರ್ತಿಗೆ ಶಾಪ ಕೊಟ್ರಂತೆ. ಹಾಗಾಗಿ ಅವರೆಲ್ಲಾ ಇಂದು ಬೀದಿ ಪಾಲಾಗಿದ್ದಾರಂತೆ.
ಇನ್ನೂ ಮುಂದೆ ಹೋಗಿ, ಅನಂತಮೂರ್ತಿಗೆ ಬೇರೆ ಧರ್ಮದವರನ್ನು ಮದುವೆಯಾಗಿ ಧರ್ಮ ಬಿಟ್ಟರಂತೆ, ಅವರಂತೆಯೇ ಎಲ್ಲರೂ ಮಾಡಲಿ ಎಂದು ಪ್ರಭಾವ ಬೀರುತ್ತಾ ಗೊಡ್ಡು ಸಂಪ್ರದಾಯ ಹಾಕಿದ್ದಾರಂತೆ.
ಇಷ್ಟೆಲ್ಲಾ ಮಾತನಾಡಿ ತಾನು ಅಪ್ರಬುದ್ಧ ಎಂದು ತೋರಿಸಿಕೊಟ್ಟ ಈಶ್ವರಪ್ಪನವರು " ತಾನು ಹುಟ್ಟಿರುವ ಜಾತಿಗೆ ತಕ್ಕಂತೆ, ಅದೇ ಜಾತಿಯ ಭಾಷೆಯಲ್ಲಿ ಮಾತನಾಡಿದ್ದೇನೆ " ಎಂದಿದ್ದಾರೆ.
ಈಶ್ವರಪ್ಪ ಅರ್ಥ ಮಾಡಿಕೊಳ್ಳಬೇಕಿರುವ ಸಂಗತಿ ಏನೆಂದರೆ: ಸ್ವಭಾವತಃ ಕುರುಬನಾಗಿಯೇ ಉಳಿದಿದ್ದರೆ, ಅವರು ಇಂದು ಇಂತಹ ಮಾತನಾಡುತ್ತಿರಲಿಲ್ಲ.
ಚಿಕ್ಕಂದಿನಲ್ಲೇ ಆರ್.ಎಸ್.ಎಸ್ ಚಡ್ಡಿ ಹಾಕುವುದನ್ನೂ ಕಲಿತು ಸಂಘ ಪರಿವಾರದ ಜಾತಿಗೆ ಸೇರಿ ತನ್ನ ಶೂದ್ರ ನೆಲೆಯನ್ನು ಕಳೆದುಕೊಂಡಿದ್ದರಿಂದ ಹೀಗಾಯಿತು. ನಿಜ ಅರ್ಥದಲ್ಲಿ ಧರ್ಮ, ಸಂಸ್ಕಾರ, ಬಿಟ್ಟವರು ಈಶ್ವರಪ್ಪ, ಅನಂತಮೂರ್ತಿ ಅಲ್ಲ.
ಕೆಲ ದಿನಗಳ ಹಿಂದೆ ಅನಂತಮೂರ್ತಿ ಒಂದು ಮಾತು ಹೇಳಿದ್ರು, "ಎಡಪಂಥಿಯರು ಸಾಮಾನ್ಯವಾಗಿ ಒಂದಿಷ್ಟು ಓದಿ ಕೊಂಡು, ಹೋರಾಟದ ಅನುಭವದಿಂದ ಬುದ್ಧಿವಂತರಾಗಿರುತ್ತಾರೆ. ಆದರೆ ಅದೇ ಬಲಪಂಥಿಯರಲ್ಲಿ ಪ್ರಖಾಂಡ ವಿಚಾರವಾದಿಗಳು, ಪ್ರಗತಿಪರ ಚಿಂತಕರು ಕಾಣುವುದೇ ಇಲ್ಲ".
ನಾವು ಎಂದಾದರೂ ಈ ಯಡ್ಯೂರಪ್ಪ, ಈಶ್ವರಪ್ಪ ಅವರೊಟ್ಟಿಗೆ ಇತ್ತೀಚಿನ ಸಾಹಿತ್ಯಕ ಚಳವಳಿ, ಹೊಸ ಸಿದ್ಧಾಂತಗಳು, ನೂತನ ಸಾಹಿತ್ಯ ಸ್ವೀಕಾರ, ಇಂದಿನ ಸಮಾಜಶಾಸ್ತ್ರೀಯ ಚಿಂತನಗಳು, ಸಮಾಜವಾದ.. ಹೀಗೆ ಯಾವ ಒಂದು ವಿಷಯ ಕುರಿತಾದರೂ ಮಾತನಾಡಲು ಸಾಧ್ಯವೇ?
ಮುಖ್ಯವಾಗಿ ಇವರ್ಯಾರಿಗೂ ಓದುವ ಸಂಪ್ರದಾಯವೇ ಇಲ್ಲ. ಚಡ್ಡಿ ಹಾಕ್ಕೊಂಡು ವ್ಯಾಯಾಮ ಮಾಡೋದು ಬಿಟ್ಟು ಮತ್ತೊಂದನ್ನು ಅವರ ಸಂಘ ಅವರಿಗೆ ಕಲಿಸಲೇ ಇಲ್ಲ. ಅದರ ಪರಿಣಾಮವಾಗಿ ಹೀಗೆ ತಲೆ ಬುಡ ಗೊತ್ತಿಲ್ಲದೆ, ಯದ್ವಾತದ್ವಾ ಮಾತನಾಡುವ ಈಶ್ವರಪ್ಪ!
(Photo courtesy: The Hindu)

Friday, October 10, 2008

ಯಾರನ್ನೂ ಬದಲಾಯಿಸುವ ಉಮೇದಿಯಿಲ್ಲ...

ಕಳೆದ ಒಂದು ವಾರದಿಂದ ಇಲ್ಲಿಯ ಬರಹಗಳಿಗೆ ಬಹುಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ನಮ್ಮ ಪ್ರಯತ್ನ ಮೆಚ್ಚಿಕೊಂಡಿದ್ದರೆ, ಮತ್ತೆ ಕೆಲವರು ಹಿಗ್ಗಾ ಮುಗ್ಗಾ ಟೀಕಿಸಿದ್ದಾರೆ. ಎಲ್ಲಿರಗೂ ಸ್ವಾಗತ. ರಾಹುಲ್ ಗಾಂಧಿ ಚಿತ್ರಗಳಿಗೆ ಸ್ವಲ್ಪ ಹೆಚ್ಚೇ ಎನ್ನುವಷ್ಟು ಪ್ರತಿಕ್ರಿಯೆಗಳು ಬಂದಿವೆ. ಕುಕೂಊ ಎಂಬ ಬ್ಲಾಗಿ "ಯಾವ ಗಂಡಸು ತನಕ್ಕೆ ಈ ರಾ'ಗಾಂದಿ ಬೆವರು ಸುರಿಸಿದ್ದು? ಅದೂ ಗನ್ ಮ್ಯಾನ್ಗಳ ನಡುವೆ..!ನಿನಗೆ ಅಶ್ಟು ತಿಳುವಳಿಕೆ ಇಲ್ಲವೆ? ಯಾಕೆ ಈ ತಿಳಿಗೇಡಿ ತನ ನಿಮಗೆ?ನಿಮಗೂ ಆ ಟೈಮ್ಸ್ ಆಫ್ ಇಂಡಿಯ, NDTV, ಆಜತಕ್ ನವರಿಗೂ ಇರುವ ಗೇಂಟೇನು?"
ಇವರ ಪ್ರತಿಕ್ರಿಯೆ ಅಷ್ಟಾಗಿ ಅರ್ಥವಾಗಲಿಲ್ಲ. 'ಗಂಡಸುತನ' ಪ್ರದರ್ಶನಕ್ಕಾಗಿ ಮಾತ್ರ ಯಾರಾದರೂ ಬೆವರು ಸುರಿಸುತ್ತಾರೋ? ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪ್ರಚುರ ಪಡಿಸಲು ರಾಹುಲ್ ಗಾಂಧಿ, ಗಾಂಧಿ ಜಯಂತಿಯಂದು ಆ ಕೆಲಸ ಮಾಡಿದ್ದು. ಅದು ಯುಪಿಎ ಸರಕಾರದ ಯೋಜನೆ. ಪಕ್ಷದ ಕಾರ್ಯಕರ್ತನಾಗಿ ಆ ಯೋಜನೆಯನ್ನು ಪ್ರಚಾರ ಮಾಡುವುದು ಕೆಲಸವಾಗಿತ್ತು. ಈ ದೇಶದಲ್ಲಿ ತುಟಿಗೆ ಹಚ್ಚುವ ಕ್ರೀಮ್, ತೊಡುವ ಅಂಡರ್ ವೇರ್ ನಿಂದ ಹಿಡಿದು, ಅತ್ಯಾಧುನಿಕ ಕಾರುಗಳನ್ನು ಪ್ರಚಾರ ಮಾಡಲು ತಾರೆಗಳು ಮುಗಿಬಿಳುತ್ತಾರೆ ಹಾಗೂ ಆ ಮೂಲಕ ಕೋಟಿಗಟ್ಟಲೆ ಹಣ ಗಳಿಸುತ್ತಾರೆ. ಆದರೆ ಜನರಿಂದ ಆಯ್ಕೆಯಾದವನೊಬ್ಬ ಉದ್ಯೋಗ ನೀಡುವ ಯೋಜನೆಯೊಂದರ ಪ್ರಚಾರಕ್ಕಿಳಿದರೆ, ಅವನ ಗಂಡಸುತನ, ಬೆವರು..ಎಂದೆಲ್ಲಾ ಕಾಮೆಂಟ್ ಗಳು ಕೇಳಿಬರುತ್ತವೆ. ನಾವು ತೀರಾ ಈ ಮಟ್ಟಿಗೆ ಸಿನಿಕರಾಗುವುದು ಬೇಡ.
ಇನ್ನು ಕೆಲವರು ನಾವು ಹಿಂದೂ ವಿರೋಧಿಗಳು ಎಂದು ಫರ್ಮಾನು ಹೊರಡಿಸಿದ್ದಾರೆ. ಗೊಡ್ಡು ಸಂಪ್ರದಾಯಗಳನ್ನು, ಇಂದಿಗೂ ನಿಲ್ಲದ ಅಸ್ಪೃಶ್ಯತೆಯನ್ನು, ಢಾಳಾಗಿ ಕಾಣುವ ಅಸಮಾನತೆಯನ್ನು ಟೀಕಿಸಿದರೆ ಅದನ್ನು ಹಿಂದೂ ವಿರೋಧಿ ಧೋರಣೆ ಎಂದು ಮೂದಲಿಸುವುದು ಇಂದು ಸರ್ವೇಸಾಮಾನ್ಯವಾಗಿದೆ.
ಅಮೆರಿಕಾದಿಂದ ರವಿ ತಮ್ಮ ಇತ್ತೀಚಿನ ಬರಹವೊಂದರಲ್ಲಿ ಕೋಮುವಾದ, ಮೂಲಭೂತವಾದ ವಿರುದ್ಧದ ದನಿಗಳು ಇಂಟರ್ ನೆಟ್, ಬ್ಲಾಗ್ ಗಳಲ್ಲಿ ಕಾಣುತ್ತಿರುವುದು ತೀರಾ ಇತ್ತೀಚೆಗೆ. ಈ ಮೊದಲು 'ನಿಜ ಕನ್ನಡ ನಾಡು' ಇಂಟರ್ ನಟ್ ನಲ್ಲಿ ಪ್ರತಿಬಿಂಬಿತವಾಗುತ್ತಿರಲಿಲ್ಲ ಎಂದಿದ್ದಾರೆ. ತಳ ಸಮುದಾಯದ ಕಾಳಜಿ ಬಗ್ಗೆ ಚಿಂತಿಸುವ ಅನೇಕರು ಇಂಟರ್ ನೆಟ್, ಬ್ಲಾಗ್ ಗಳು ಪರಿಚಯ ಇಲ್ಲದಿರುವುದನ್ನೇ ಹೆಮ್ಮೆಯ ಸಂಗತಿ ಎಂದು ಬೀಗುವ ಕಾಲವಿತ್ತು. ಈಗ ಬದಲಾಗುತ್ತಿದೆ ಎಂದು ಬರೆಯುತ್ತಾ ಸುದ್ದಿಮಾತು ಹಾಗೂ ಮತ್ತಿತರೆ ಬ್ಲಾಗ್ ಗಳನ್ನು ಉದಾಹರಿಸಿದ್ದಾರೆ (ಪೂರ್ಣ ಲೇಖನ ಇಲ್ಲಿದೆ, ಓದಿ). ನಮ್ಮ ಬರಹಗಳನ್ನು ಟೀಕಿಸುವವರು ಈ ಬೆಳವಣಿಗೆಯನ್ನು ಅಷ್ಟಾಗಿ ಸಹಿಸುವವರಲ್ಲ ಎಂದೆನಿಸುತ್ತದೆ.
ಒಂದಂತೂ ಸ್ಪಷ್ಟ. ನಮ್ಮ ಬರಹಗಳಿಂದ ಯಾರನ್ನೇ ಆಗಲಿ ತಿದ್ದುತ್ತೇವೆ ಎನ್ನುವ ಉಮೇದಿ ನಮ್ಮದೇನಲ್ಲ.

ಭ್ರಷ್ಟ ಪತ್ರಕರ್ತ ಬಂಧನ..ಅಮಾನತು...!

ಪತ್ರಿಕೋದ್ಯಮ ಇತರೆ ಕ್ಷೇತ್ರಗಳಿಗಿಂತ ಭಿನ್ನವಾಗೇನೂ ಉಳಿದಿಲ್ಲ.
ಸರಕಾರಿ ನೌಕರ ಒಂದು ಕಡತವನ್ನು ಮತ್ತೊಂದು ಟೇಬಲ್ ಗೆ ವರ್ಗಾಯಿಸಲು ದುಡ್ಡು ಕೇಳುವಂತೆ, ಪತ್ರಕರ್ತ ಸುದ್ದಿಯೊಂದು ಅಚ್ಚಿಗೆ ಹೋಗಲು ದುಡ್ಡು ಕೇಳುತ್ತಾನೆ. ಈ ಮಾತು ಹೇಳುತ್ತಿದ್ದಂತೆಯೇ ಹಲವರು "ಎಲ್ಲರೂ ಹಾಗಲ್ಲ. ನಾವು ಇದುವರೆಗೆ ಯಾರಿಂದಲೂ ಒಂದು ಪೈಸೆ ತಗೊಂಡಿಲ್ಲ" ಎಂದು ಅವಲತ್ತುಕೊಳ್ಳ ಬಹುದು. ಅದು ನಿಜ. ಎಲ್ಲರೂ ಭ್ರಷ್ಟರು ಎಂದು ದೂರುವ ಉದ್ದೇಶ ಈ ಲೇಖನದ್ದಲ್ಲ. ಪ್ರಾಮಾಣಿಕರಾಗಿರುವ ಕೆಲವರಿಂದಾಗಿಯೇ ಇಂದಿಗೂ ಪತ್ರಿಕೋದ್ಯಮದ ಬಗ್ಗೆ ಕೆಲವರಲ್ಲಾದರೂ ಗೌರವ ಕಾಣಬಹುದು. ಅದಿರಲಿ.
ಕೆಲ ವರ್ಷಗಳ ಹಿಂದಿನ ಮಾತು. ಪ್ರಮುಖ ವಾಣಿಜ್ಯೋದ್ಯಮ ಸಂಸ್ಥೆಯೊಂದು ಪತ್ರಿಕಾ ಗೋಷ್ಠಿ ಕರೆದಿತ್ತು. ಎಂದಿನಂತೆ ವಾಣಿಜ್ಯ ವಿಚಾರ ವರದಿ ಮಾಡುವ ಪತ್ರಕರ್ತರು ಹಾಜರಿದ್ದರು. ಅವರು ಗೋಷ್ಢಿ ಮುಗಿಸಿ ಹೊರಡುವ ಹೊತ್ತಿಗೆ ಎಲ್ಲರ ಕೈಗೂ ಬೆಲೆಬಾಳುವ ಉಡುಗೊರೆ! ಅವರಲ್ಲಿ ಕೆಲವರು ಸ್ವಲ್ಪೇ ಹೊತ್ತಿನಲ್ಲಿ ಅವೆನ್ಯೂ ರಸ್ತೆಯಲ್ಲಿ ಹಾಜರ್. ಉಡುಗೊರೆಗಳನ್ನು ಅಂಗಡಿಗಳಿಗೆ ಮಾರಿ ಜೇಬಿಗೆ ದುಡ್ಡು ಇಳೇ ಬಿಟ್ಟುಕೊಂಡು ಕಚೇರಿಯತ್ತ ನಡೆದರು. ಈಗಲೂ ಈ ಸಂಪ್ರದಾಯ ಮುಂದಿವರಿದಿದೆ.
ಕೆಲ ತಿಂಗಳುಗಳ ಹಿಂದೆ ಪ್ರಮುಖ ಪತ್ರಿಕೆಯೊಂದರಲ್ಲಿ ಒಂದು ನೂತನ ದುಬಾರಿ ಮೊಬೈಲ್ ಪೋನ್ ಸೆಟ್ ಬಗ್ಗೆ ಕಾಲು ಪುಟದಷ್ಟು ವರದಿ ಅಚ್ಚಾಗಿತ್ತು.
ಅದರ ಹಿಂದಿನ ರಹಸ್ಯ ಏನಪ್ಪಾ ಅಂದರೆ, ಆ ಕಂಪನಿ ಜಾಹೀರಾತು ವಿಭಾಗದ ಉದ್ಯೋಗಿ ಪತ್ರಕರ್ತನಿಗೆ ದುಬಾರಿ ಸೆಟ್ ನ್ನು ಗಿಫ್ಟ್ ಕೊಟ್ಟಿದ್ದ! ಗಮನಿಸಬೇಕಾದ ಅಂಶ ಎಂದರೆ, ಅದೇ ಕಂಪನಿ ಆ ಪ್ರಮುಖ ಪತ್ರಿಕೆಯಲ್ಲಿ ಕಾಲು ಪುಟದಷ್ಟು ಜಾಹಿರಾತು ನೀಡಬೇಕೆಂದರೆ, ಲಕ್ಷಗಟ್ಟಲೆ ಹಣ ನೀಡಬೇಕಿತ್ತು. ಆದರೆ ಜಾಣ ಉದ್ಯೋಗಿ, ಉಡುಗೊರೆಯನ್ನು ಪತ್ರಕರ್ತನಿಗೆ ನೀಡಿ ಕೆಲವೇ ಸಾವಿರಗಳಲ್ಲಿ ತನ್ನ ಉದ್ದೇಶ ಈಡೇರಿಸಿಕೊಂಡಿದ್ದ!
ಪತ್ರಕರ್ತರ ವಲಯದಲ್ಲಿ ಜನಜನಿತವಾಗಿರುವ ಒಂದು ಮಾತೆಂದರೆ - "ವೃತ್ತಿ ಜೀವನವಿಡೀ ಪ್ರಾಮಾಣಿಕನಾಗಿದ್ದು; ನಿವೃತ್ತಿಯಾಗುವ ಹೊತ್ತಿಗೆ ಪ್ರಭಾವ ಬಳಸಿಕೊಂಡು ಜಿ-ಕೆಟಗರಿಯಲ್ಲಿ ಒಂದು ಬಿಡಿಎ ಸೈಟ್ ಗಿಟ್ಟಿಸಿಕೊಂಡರೆ ಸಾಕು". ಬಿಡಿಎ ಒಂದು ನಿವೇಶನ ಎಂದರೆ ಹತ್ತಾರು ಲಕ್ಷಗಳ ವ್ಯವಹಾರ. ಹೀಗೆ ಪ್ರಭಾವ ಬಳಸಿಕೊಂಡು ಲಾಭ ಪಡೆದವರು ಹಲವರು ಇದ್ದಾರೆ.
ಕೆಲವು ಸಂದರ್ಭಗಳಲ್ಲಿ ಪತ್ರಿಕೆ ಮಾಲೀಕರು ವೈಯಕ್ತಿಕ ಲಾಭಕ್ಕಾಗಿ ಪತ್ರಿಕೆಯನ್ನೇ ಮಾರಿಬಿಡುವ ಅಥವಾ ಅಡ ಇಡುವ ಉದಾಹರಣೆಗಳೂ ಉಂಟು. - ಇದಿಷ್ಟೂ ಪ್ರಿಂಟ್ ಪತ್ರಿಕೋದ್ಯಮದ ಮಾತಾಯಿತು. ಇನ್ನು ವಿದ್ಯುನ್ಮಾನ ಮಾಧ್ಯಮದ ಮಾತು ಶುರು ಮಾಡಿದರೆ, ಮತ್ತೊಂದು ಬ್ಲಾಗ್ ಗೆ ಬೇಕಾಗುವಷ್ಟು ಸರಕು ಸಿಕ್ಕೀತು.
ಆದರೂ ಮಾಧ್ಯಮಗಳಲ್ಲಿ ದಿನಕ್ಕೊಂದಾದರೂ 'ಲೊಕಾಯುಕ್ತ ದಾಳಿಗೆ ಡಿ ಗ್ರೂಪ್ ನೌಕರ ಬಲಿ' ಎಂಬ ಸುದ್ದಿಗಳಿರುತ್ತವೆ. ಒಂದು ಘಟನೆ ನೆನಪಾಗುತ್ತೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉನ್ನತ ಹುದ್ದೆಯಲ್ಲಿದ್ದವರೊಬ್ಬರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿದ್ದವು. ಸಿಂಡಿಕೇಟ್ ಆತನನ್ನು ವೃತ್ತಿಯಿಂದ ಅಮಾನತು ಮಾಡಿ ತನಿಖೆಗೆ ಆದೇಶಿಸಿತ್ತು. ಅದೇ ಸುದ್ದಿ ಅಂದಿನ ಟೈಮ್ಸ್ ಆಫ್ ಇಂಡಿಯಾ ಮುಖಪುಟದಲ್ಲಿ ಅಚ್ಚಾಗಿತ್ತು. ಖಾಸಗಿ ಶಾಲೆಯಲ್ಲಿ ಅಂದು ಪ್ರೇಯರ್ ಮೀಟಿಂಗ್ ಸಂದರ್ಭದಲ್ಲಿ ಪತ್ರಿಕೆ ಓದುವ ಸರದಿ, ಅಮಾನತ್ತುಗೊಂಡಿರುವ ಅಧಿಕಾರಿ ಮಗನದು. ಶಿಕ್ಷಕರೊಬ್ಬರು ಅಮಾನತ್ತಿನ ಸುದ್ದಿಯನ್ನೂ ತಪ್ಪದೇ ಓದಬೇಕು ಎಂದು ಗುರುತು ಮಾಡಿಕೊಟ್ಟಿದ್ದರು. ಹುಡುಗ ಸುದ್ದಿ ಓದುತ್ತಲೇ ಕಣ್ಣೀರು ಹಾಕಿದ. ಕೆಲ ಹುಡುಗರು ಅದು ಅವರಪ್ಪನದೇ ಸುದ್ದಿ ಎಂದು ಕಿಚಾಯಿಸಿದರು. ಮನೆಗೆ ಮರಳಿದ ಹುಡುಗ ಇಡೀ ದಿನ ಮೌನಿಯಾಗಿದ್ದ. ಊಟ ಕೂಡ ಮಾಡಲಿಲ್ಲ. ಇದು ಸುದ್ದಿಯ ಪರಿಣಾಮ. ಆದರೂ ಭ್ರಷ್ಟ ಪತ್ರಕರ್ತ ಬಂಧನ ಅಥವಾ ಅಮಾನತು ಎಂಬ ಸುದ್ದಿ ಎಲ್ಲಿಯೂ ಪ್ರಕಟವಾಗುವುದಿಲ್ಲ ನೋಡಿ!

Thursday, October 9, 2008

ನಾಡಹಬ್ಬ: ಇದು ಯಾರ ಹಬ್ಬ?


ಮೈಸೂರಿನಲ್ಲಿ ಅದ್ದೂರಿ ದಸರಾ ಮುಗಿದಿದೆ. ಆನೆ ಮೇಲೆ ಕ್ವಿಂಟಾಲ್ ತೂಕದ ಮರಿರಾಜ ಕೂತಿದ್ದರೆ ಅದು ರಾಜ ದಸರಾ. ಅದೇ ಮರಿರಾಜನ ಸ್ಥಾನದಲ್ಲಿ ಚಾಮುಂಡಿ ಪ್ರತಿಮೆ ಇದ್ದರೆ ಅದು ಪ್ರಜಾ ದಸರಾ. ಮರಿರಾಜನ ಮೆರವಣಿಗೆ ಅರಸೊತ್ತಿಗೆ ಪ್ರತಿನಿಧಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಚಾಮುಂಡಿ ಮೆರವಣಿಗೆ ಪ್ರಜಾಪ್ರಭುತ್ವ ಪ್ರತಿನಿಧಿಸುತ್ತದೆಯೇ?
ಖಂಡಿತ ಇಲ್ಲ.
ಚಾಮುಂಡಿ ಒಂದು ವರ್ಗದ ದೇವತೆ. ಆಕೆಯನ್ನು ಅಂಬಾರಿ ಮೇಲೆ ಊರತುಂಬ ಮೆರವಣಿಗೆ ಮಾಡಿದರೆ ಅದು 'ನಾಡಹಬ್ಬ' ಹೇಗಾದೀತು? ಕೇವಲ ಹಿಂದೂಗಳು ಈ ನಾಡಿನಲ್ಲಿದ್ದಾರ? ಬಹುಸಂಖ್ಯೆಯಲ್ಲಿರುವ 'ಅಹಿಂದು'ಗಳಿಗೆ ಈ ನಾಡಹಬ್ಬದಲ್ಲಿ ಪ್ರಾತಿನಿಧ್ಯ ಇಲ್ಲವೇ?
ಕೆಲ ವರ್ಷಗಳ ಹಿಂದೆ ಚಾಮುಂಡಿ ದೇವಿ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವುದರ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಆದರೆ ಆ ದನಿಗೆ ಸೂಕ್ತ ಮನ್ನಣೆ, ಬೆಂಬಲ ಸಿಗಲಿಲ್ಲ. ಇದೇ ಕಾರಣಕ್ಕೆ ಕೆಲ ಪ್ರಾಜ್ಞರು, ಪ್ರಗತಿಪರರು ಈ ಸೋಕಾಲ್ಡ್ ನಾಡಹಬ್ಬ ಸಂಭ್ರಮದಿಂದ ದೂರ ಉಳಿದಿದ್ದಾರೆ.
ನಾಡಹಬ್ಬ ಮಾತ್ರವಲ್ಲ, ಕನ್ನಡ ರಾಜ್ಯೋತ್ಸವವೂ ಹೀಗೆ. ಭುವನೇಶ್ವರಿ ಎಂಬ ದೇವತೆಗೆ ಕನ್ನಡ ಮಾತೆ ಎಂಬ ಬಿರುದು ಪ್ರದಾನವಾಗಿದೆ. ರಾಜ್ಯೋತ್ಸವ ಸಂದರ್ಭಗಳಲ್ಲಿ. ಆಕೆಯದೇ ಮೆರವಣಿಗೆ. ಒಂದು ನಾಡು ತನ್ನ ಗುರುತನ್ನು ಒಂದು ಹಿಂದೂ ದೇವಿ ವಿಗ್ರಹದಲ್ಲಿ ಕಂಡುಕೊಳ್ಳುವುದು ಸಂಕುಚಿತ ಮನೋಭಾವವಲ್ಲದೆ ಮತ್ತೇನು?
ಇಷ್ಟೆಲ್ಲಕ್ಕೂ ಕಾರಣ, ಈ ಸಮುದಾಯದಲ್ಲಿ ಆಳವಾಗಿ ಬೇರೂರಿವ ಒಂದು ನಂಬಿಕೆ - 'ಭಾರತ ಒಂದು ಹಿಂದೂ ರಾಷ್ಟ್ರ'. ಇಲ್ಲಿಯ ಮುಸಲ್ಮಾನರು, ಕ್ರಿಶ್ಚಿಯನ್ನರು ಹಿಂದೂ ನೆಲದ ಅನ್ನತಿನ್ನಲೆಂದೇ ಬಂದವರು ಎಂಬ ಧೋರಣೆ ಗಟ್ಟಿಯಾಗಿದೆ. ಚಿದಾನಂದಮೂರ್ತಿ, ಯಡಿಯೂರಪ್ಪ, ಮಹೇಂದ್ರಕುಮಾರ್, ಆರ್ಎಸ್ಎಸ್ ನವರು..ಇವರೆಲ್ಲಾ ಹೀಗೇ ಎಂದುಕೊಂಡವರು.
ಮೊಟ್ಟಮೊದಲನೆಯದಾಗಿ ಇವರೆಲ್ಲ ಒಪ್ಪಿಕೊಳ್ಳಬೇಕಾಗಿರುವುದು - ಭಾರತ ಹಿಂದೂ ರಾಷ್ಟ್ರವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶ ಚುಕ್ಕಾಣಿ ಹಿಡಿಯುವವರು ಆಯ್ಕೆಯಾಗುತ್ತಾರೆ. ಅವರು ಯಾವ ಒಂದು ಧರ್ಮದ ನೇತಾರರಂತೆ ವರ್ತಿಸುವಂತಿಲ್ಲ. ಮತ್ತು ಈ ಹೊತ್ತಿನ ಧರ್ಮ ಗ್ರಂಥ - ಭಾರತ ಸಂವಿಧಾನ. ಭಗವದ್ಗೀತೆ, ಬೈಬಲ್, ಕುರಾನ್, ಗ್ರಂಥಸಾಹೇಬ..ಎಲ್ಲವೂ ಅದೇ. ಮುಂದಿನ ದಿನಗಳಲ್ಲಾದರೂ, ನಾಡಹಬ್ಬ ಎಂಬ ಕಲ್ಪನೆ ಬದಲಾಗಲಿ. ಈ ನಾಡು ನಮ್ಮದು ಕೂಡಾ ಎಂಬ ಭಾವನೆ ಎಲ್ಲರಲ್ಲೂ ಮೂಡುವಂತಾಗಲಿ.
(ಚಿತ್ರಕೃಪೆ: ಕನ್ನಡಪ್ರಭ)

ಮಾತಿನೇಟು...!!


Wednesday, October 8, 2008

ಅಲ್ಲಿತ್ತು ಮನೆ.. ಇಲ್ಲಿ ಬಂದದ್ದು ಸುಮ್ಮನೆ...


ಇಂದಿನ ಪತ್ರಿಕೆಗಳ ಮುಖಪುಟ ಸುದ್ದಿ - ರಾಜ್ಯಕ್ಕೆ ಕೈ ತಪ್ಪಿದ ನ್ಯಾನೋ.. ದಿಟ. ನ್ಯಾನೋ ಕಾರು ತಯಾರಿಕ ಘಟಕವನ್ನು ಟಾಟಾ ಮೋಟಾರ್ಸ್ ಗುಜರಾತ್ನಲ್ಲಿ ಸ್ಥಾಪಿಸಲು ನಿರ್ಧರಿಸಿದ್ದಾರೆ. ರಾಜ್ಯ ಅವರ ಆಯ್ಕೆಯಾಗಲಿಲ್ಲ. ತೀರಾ, ಅದೇನು ಕರ್ನಾಟಕಕ್ಕೆ ಎರಗಿದ ದುರಂತವೇ? ನ್ಯಾನೋ ಇಲ್ಲದಿದ್ದರೆ ಇಲ್ಲಿಯ ಜನ ಬುದಕುಲು ಸಾಧ್ಯವೇ ಇಲ್ಲವೇನೋ ಎಂಬ ಮಟ್ಟಿಗೆ ಈ ಸುದ್ದಿಯನ್ನು ಚರ್ಚಿಸಲಾಗುತ್ತಿದೆ.
ರತನ್ ಟಾಟಾ ಒಬ್ಬ ಉದ್ಯಮಿ. ಎಲ್ಲಿ ಲಾಭದಾಯಕವೋ ಅಲ್ಲಿಗೇ ಹೋಗಿ ವ್ಯಾಪಾರ ಮಾಡ್ತಾರೆ. ಅವರ ತಯಾರಿಕಾ ಘಟಕಕ್ಕೆ ಅಗತ್ಯ ಸವಲತ್ತು ದೊರಕುವ ಕಡೆ ತಮ್ಮ ಯುನಿಟ್ ಹಾಕ್ತಾರೆ. ಈಗಲೂ ಹಾಗೆ.
ಟಾಟಾ ಮೋಟಾರ್ಸ್ ಕಂಪನಿಯವರು ಧಾರವಾಡ ಹತ್ತಿರದ ತಮ್ಮ ಭೂಮಿಗೆ ಭೇಟಿನೀಡಿದಾಗ ಹತ್ತಿರದಲ್ಲೆಲ್ಲೂ ಒಂದು ಪಂಚತಾರಾ ಹೊಟೇಲ್ ಇಲ್ಲ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆಂದು ದೂರದ ಬೆಂಗಳೂರಿಗೆ ಬರಬೇಕು. ಇನ್ನು ಅಗತ್ಯ ಜಮೀನನ್ನು ಸರಕಾರ ಇನ್ನಷ್ಟೇ ರೈತರಿಂದ ಕೊಂಡು ಕೊಡಬೇಕು. ಆದರೆ ಗುಜರಾತ್ ನಲ್ಲಿ ಆ ಪರಿಸ್ಥಿತಿ ಇರಲಿಲ್ಲ. ಅಲ್ಲಿ ಎಲ್ಲವೂ ಲಭ್ಯವಿತ್ತು. ಸಾನಂದ್ ಅಹಮದಾಬಾದ್ ನಿಂದ ಕೇವಲ ಇಪ್ಪತ್ತೈದು ಕಿ.ಮೀ ದೂರ. ಮೇಲಾಗಿ ಅದು ಬಿಜೆಪಿ ನೇತಾರ ಹಾಗೂ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ ಅಡ್ವಾನಿ ಪ್ರತಿನಿಧಿಸುವ ಕ್ಷೇತ್ರವಾದ ಗಾಂಧಿನಗರದ ವ್ಯಾಪ್ತಿಗೆ ಒಳಪಡುತ್ತೆ. ಈ ಎಲ್ಲಾ ಕಾರಣಗಳು ರತನ್ ಟಾಟಾ, ಕರ್ನಾಟಕಕ್ಕೆ ಟಾಟಾ ಹೇಳುವಂತೆ ಮಾಡಿದವು.
ಮೇಲಾಗಿ ಟಾಟಾ ಕಂಪನಿ ಸಿಂಗೂರ್ ನಲ್ಲಿ ತಮ್ಮ ಯುನಿಟ್ಗಾಗಿ ಈಗಾಗಲೇ ಖರ್ಚು ಮಾಡಿರುವ ಹಣವನ್ನು ಕರ್ನಾಟಕ ಸರಕಾರ ತೆರಿಗೆ ವಿನಾಯತಿ ರೂಪದಲ್ಲಿ ಹಿಂದಕ್ಕೆ ಪಡೆಯಲು ಯತ್ನಿಸಿತ್ತು. ಸರಕಾರವೂ ಸಮ್ಮತಿಸಿತ್ತು. ಆದರೆ ಜಮೀನು, ನೀರಿನ ವ್ಯವಸ್ಥೆ, ವಿದ್ಯುಚ್ಛಕ್ತಿ, ಪಂಚತಾರಾ ಹೊಟೇಲ್..ಇವಾವೂ ಅವರು ಅಂದು ಕೊಂಡಂತೆ ಲಭ್ಯವಾಗಲಿಲ್ಲ.
ಅಷ್ಟಕ್ಕೂ ಟಾಟಾ ಯುನಿಟ್ ನಿಂದ ಲಾಭವಾಗುತ್ತಿದ್ದು ಕೆಲವೇ ಮಂದಿಗೆ. ಕೆಲವು ಸಾವಿರ ಉದ್ಯೋಗ ಸ್ರುಷ್ಟಿಯಾಗುತ್ತಿತ್ತು ಎನ್ನವುದು ನಿಜವೇ ಆದರೂ, ಅಲ್ಲಿಯ ಉದ್ಯೋಗಿಗಳೆಲ್ಲ ಕನ್ನಡಿಗರೇ ಆಗಿರಬೇಕೆಂಬ ಕಾನೂನೇನಿಲ್ಲ. ದೈಹಿಕ ಶ್ರಮ ಬಯಸುವ ಕೆಲಸಗಳಿಗೆ ಒಂದಿಷ್ಟು ಸ್ಥಳೀಯರನ್ನು ನೇಮಿಸಿಕೊಳ್ಳುತ್ತಿದ್ದರಷ್ಟೆ. ಅದಕ್ಕಾಗಿ ಏಕಿಷ್ಟು ದು:ಖ.
ತಮಾಷೆ ಎಂದರೆ, ಬಡ ರೈತರಿಗಾಗಿ ಬಗರ್ ಹುಕುಂ ಸಾಗುವಳಿ ಜಮೀನು ನೀಡಲು ನೂರೆಂಟು ಬಾರಿ ಯೋಚಿಸುವ ಸರಕಾರ ಸಾವಿರಾರು ಎಕರೆ ಜಮೀನನ್ನು ಒಮ್ಮೆಲೆ ಇಂತಹ ಕಂಪನಿಗಳಿಗೆ ನೀಡಲು ಮುಂದಾಗಿಬಿಡುತ್ತದೆ!
ತುರ್ತಾಗಿ ಆಗಬೇಕಿರುವುದು - ಎಲ್ಲಾ ನಗರಗಳಿಗೂ ಅಗತ್ಯ ಮೂಲಸೌಲಭ್ಯ ಒದಗಿಸುವ ಕಾರ್ಯ. ರಸ್ತೆ, ನೀರು, ವಿದ್ಯುತ್ ಸರಿಯಾಗಿ ಒದಗಿಸಿದರೆ ಸಣ್ಣ ಸಣ್ಣ ಊರುಗಳಲ್ಲೂ ಪಂಚತಾರಾ ಹೊಟೇಲ್ಗಳು ಕಣ್ತೆರೆಯುತ್ತವೆ, ದೊಡ್ಡ ದೊಡ್ಡ ಕಂಪನಿಗಳು ಹೂಡಿಕೆ ಮಾಡಲು ಆಸಕ್ತಿ ತೋರುತ್ತವೆ. ಸರಕಾರ ಮೊದಲು ಇತ್ತ ಗಮನ ಹರಿಸಲಿ.

Monday, October 6, 2008

ದೀಪದ ಕೆಳಗೆ ಕತ್ತಲೆ..

ದೃಶ್ಯ 1
ನಿಮಗೆ ನೆನಪಿರಬಹುದು. ಕೆಲವು ವರ್ಷಗಳ ಹಿಂದೆ ಮೈಸೂರು ಹತ್ತಿರ ಹಂಗರಹಳ್ಳಿಯಲ್ಲಿ ಕೆಲವರು ಜೀತಕ್ಕಿದ್ದರು. ರೈತ ಸಂಘ ಹಾಗೂ ಇನ್ನಿತರೆ ಪ್ರಗತಿಪರರು ಒಮ್ಮಲೆ ದಾಳಿ ಮಾಡಿ ಸುದ್ದಿ ಬಹಿರಂಗ ಮಾಡಿದರು. ಅಂದು ಎಲ್ಲಾ ಪತ್ರಿಕೆಗಳಲ್ಲಿ ಇದ್ದ ಚಿತ್ರ - ಕಾಲಿಗೆ ಸರಪಳಿ ಸುತ್ತಿಕೊಂಡು ಕೆಲಸ ಮಾಡುತ್ತಿದ್ದ ಬಡವರದು. ಅಮಾನುಷ ಕೃತ್ಯಕ್ಕೆ ಅಂದು ಜನಸಮುದಾಯ ನೊಂದಿತ್ತು. ಆಗಿನ್ನು 24x7 ಚಾನೆಲ್ ಗಳ ಭರಾಟೆ ಇರಲಿಲ್ಲ. ಇದ್ದಿದ್ದರೆ ನಮ್ಮ ಟಿವಿ 9 ರಂಗನಾಥ್ ಭಾರದ್ವಾಜ್ ರ ಸಂಜೆ ವಿಶೇಷಕ್ಕೆ ಫುಲ್ ಮೀಲ್ಸ್.
ದೃಶ್ಯ 2
ಮೈಸೂರಿನ ಸ್ಥಳೀಯ ಪತ್ರಿಕೆಯೊಂದು ಎಲ್ಲಾ ಪತ್ರಿಕೆಗಳಂತೆ ಆ ಸುದ್ದಿಯನ್ನೂ ಪ್ರಮುಖವಾಗಿ ಪ್ರಕಟಿಸಿತ್ತು. ಕೆಲ ದಿನಗಳು ಉರುಳಿದವು. ಅದೇ ಪತ್ರಿಕೆ ಕಚೇರಿಯ ಗೋಡೆಗಳ ಮೇಲೆ ಅಲ್ಲಲ್ಲಿ ಕೆಮರಾಗಳು ಕಣ್ತೆರೆದವು. ಆ ಎಲ್ಲಾ ಕೆಮರಾಗಳು ಸೆರೆಹಿಡಿವ ದೃಶ್ಯವನ್ನು ಸನ್ಮಾನ್ಯ ಮಾಲೀಕ-ಸಂಪಾದಕರು ತಮ್ಮ ಮನೆಯಲ್ಲೇ ಕೂತು ವೀಕ್ಷಿಸುವ ವ್ಯವಸ್ಥೆ ಕೂಡ ಜಾರಿಯಾಯಿತು. ಕಚೇರಿ ವೇಳೆ ಉದ್ಯೋಗಿಗಳು ಕೆಲಸ ಮಾಡ್ತಾರೋ ಇಲ್ಲವೋ ಎಂಬುದರ ಮೇಲೆ ಕಣ್ಣಿಡಲು ಸಂಪಾದಕರು ಇಂತಹ ಯೋಜನೆ ಕಾರ್ಯರೂಪಕ್ಕೆ ತಂದಿದ್ದರು.

ಬಡವರನ್ನು ಜೀತಕ್ಕಿಟ್ಟುಕೊಂಡಿದ್ದ ಜಮೀನ್ದಾರ, ಜೀತದಾಳುಗಳು ಕಣ್ತಪ್ಪಿಸಿ ಪರಾರಿಯಾಗಬಾರದೆಂದು ಸರಪಳಿ ಬಳಸಿದರೆ, ಉದ್ಯೋಗಿಗಳು ಕೆಲಸದ ವೇಳೆ ಕಳ್ಳಾಟ ಆಡಬಾರದೆಂದು ಸಂಪಾದಕ ಕೆಮರಾ ಬಳಸಿದ್ದ. ಜಮೀನ್ದಾರನಿಗೂ, ಸಂಪಾದಕನಿಗೂ ಏನು ವ್ಯತ್ಯಾಸ?
Of course - ಇದು ಯಾವ ಪತ್ರಿಕೆಯಲ್ಲೂ ವರದಿಯಾಗಲಿಲ್ಲ. ನಂತರದ ದಿನಗಳಲ್ಲಿ ಇಂತಹದೇ ವ್ಯವಸ್ಥೆ ಜಾರಿಗೆ ಬಂದದ್ದು ವಿಆರ್ಎಲ್ ಒಡೆತನದ ವಿಜಯ ಕರ್ನಾಟಕ, ವಿಜಯ ಟೈಮ್ಸ್ ದಿನಪತ್ರಿಕೆಗಳ ಬೆಂಗಳೂರು ಕಚೇರಿಗಳಲ್ಲಿ.
ಬಹುಶಃ ಎಲ್ಲಾ ಪತ್ರಕರ್ತನಿಗೂ ಒಂದು ಪ್ರಶ್ನೆ ಕಾಡಿರುತ್ತೆ. "ಊರಿನವರ ಸಂಕಟಾನೆಲ್ಲಾ ಬರೀತೀವಿ. ಆದರೆ ನಮ್ಮ ಕತೆ ಕೇಳೋರು ಯಾರು?"
24x7 ಸುದ್ದಿ ವಾಹಿನಿಗಳು ಬಂದಾಗಿನಿಂದ, ಟಿವಿ ಪತ್ರಕರ್ತರಿಗೆ 24 ಗಂಟೆ ಕೆಲಸ. ರಾತ್ರಿ 12 ಗಂಟೆಗೆ ಪುಟಪರ್ತಿ ದಾರಿ ತಪ್ಪಿದವನಂತೆ ಕೇಂದ್ರ ಗೃಹಮಂತ್ರಿ ಶಿವರಾಜ್ ಪಾಟೀಲ್ ಬೆಂಗಳೂರಿನ ರಾಜಭವನಕ್ಕೆ ಬಂದು ಬಿಡ್ತಾನೆ. ಬಂದವನೋ ಬೇಗ ಹೋಗ್ತಾನೋ. ಇಲ್ಲಿನ ಸಚಿವರನ್ನು ಕರೆಸ್ಕೊಂಡು ಮಾತು, ಮಾತು, ಮಾತು... ನಿದ್ರೆಗೆ ಜಾರಿದ್ದ ಲಕ್ಷ್ನಣ ಹೂಗಾರ್ ಎದ್ದು ಫೋನ್ ರಿಸೀವ್ ಮಾಡಬೇಕು. ಅತ್ತ ಕಡೆ ಪ್ರಶ್ನೆ ಕೇಳೋ ಸುದ್ದಿ ವಾಚಕಿಗೆ ಉತ್ತರ ಹೇಳಬೇಕು. ಅವ ಯಾಕೆ ಬಂದಾನೆ? ರಾಜ್ಯದ ಸಚಿವರನ್ನು ತರಾಟೆಗೆ ತೆಗೆದುಕೊಂಡನೇ? ಏನು ಸಲಹೆ ನೀಡಿರಬಹುದು?
ಅಲ್ಲಾರೀ... ಒಳಗೆ ಹೋದೋರು ಇನ್ನೂ ಹೊರಗೆ ಬಂದೇ ಇಲ್ಲ. ಹೊರಗಿರೋರನ್ನು ಒಳಗೆ ಹೋಗೋಕೆ ಬಿಟ್ಟಿಲ್ಲ. ಅಂದ್ರೂ ಇಷ್ಟೆಲ್ಲಾ ಪ್ರಶ್ನೆಗೆ ಉತ್ತರ ಕೊಡಬೇಕು. ಪಾಪ ಸುದ್ದಿ ವಾಚಕಿ ತಾನೆ ಏನು ಮಾಡಿಯಾಳು, ಆಕೆನೂ ತನ್ನ ಪಾಲಿನ ಅರ್ಧಗಂಟೆ ಮುಗಿಸಬೇಕಲ್ಲ. ಇನ್ನು ಪ್ರಿಂಟ್ ಪತ್ರಿಕೋದ್ಯಮದವರಿಗೂ ಈ ಸಂಕಟ ತಪ್ಪಿದ್ದಲ್ಲ. ಡೆಡ್ ಲೈನ್ ಒಳಗೆ ಏನೋ ಒಂದಿಷ್ಟು ಕೆದಕಿ ಕೊಡಬೇಕು. ಹೀಗೆ ಏನಾದ್ರು ಅವಸರಕ್ಕೆ ವರದಿ ಮಾಡುವಾಗಲೇ ಅವಘಡಗಳಾಗೋದು.
ಸಣ್ಣ ಪುಟ್ಟ ಪತ್ರಿಕಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಸರಿ ಸಮಯಕ್ಕೆ ಸಂಬಳಾನೂ ಸಿಗೋಲ್ಲ. ಸಿಕ್ಕರೂ ತೀರಾ ಅಗತ್ಯಗಳಿಗೆ ಬೇಕಾದಷ್ಟು ಇರೋಲ್ಲ. ಇದನ್ನೆಲ್ಲಾ ಕೇಳೋರ್ಯಾರು? ಆದರೆ ಪತ್ರಕರ್ತರು ಊರಾಗಿನ ಎಲ್ಲರ ಕತೆ ಕೇಳಬೇಕು. ಬರೀಬೇಕು. ಬರೆದದ್ದರಿಂದ ಒಂದಿಷ್ಟು ಬದಲಾದರೆ ವರದಿಯ impact ಎಂದೇ ಖುಷಿಪಡಬೇಕು. ಅದಕ್ಕೇ ಹೇಳೋದು - ದೀಪದ ಕೆಳಗೇ ಕತ್ತಲು.

ಅದೋ.. ಇದೋ..

ಅಂಡು ಸುಟ್ಟ ಬೆಕ್ಕಿನಂತೆ ಅಡ್ಡಾಡುತ್ತಿರುವ ಯಡಿಯೂರಪ್ಪ ಅವರನ್ನು ಕುರಿತು "ಸುದ್ದಿ ಮಾತು" ಬರೆಯಬೇಕೆನ್ನುವಷ್ಟರಲ್ಲಿ ಪ್ರಜಾವಾಣಿ ಪತ್ರಿಕೆಯ ದೆಹಲಿ ಪ್ರತಿನಿಧಿ ದಿನೇಶ್ ಅಮೀನಮಟ್ಟು ಈ ವಾರದ ತಮ್ಮ "ದೆಹಲಿನೋಟ" ಅಂಕಣದಲ್ಲಿ ನಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ.
ಸುದ್ದಿಮಾತಿನ ಮಿತಿ ಚಿಕ್ಕದು. ನಾವು, ಹೆಚ್ಚೆಂದರೆ ಏಳೆಂಟು ಪ್ಯಾರಾ ಬರೆಯುತ್ತಿದ್ದೆವು. ಕೇವಲ ಅದರಲ್ಲೂ ಕೇವಲ ಯಡಿಯೂರಪ್ಪ ಸುತ್ತಲೇ ಗಿರಕಿ ಹೊಡೆಯುತ್ತಿದ್ದೆವು. ಆದರೆ ದಿನೇಶ್ ಸಮಗ್ರವಾದ ಲೇಖನವೊಂದನ್ನು ಮುಂದಿಟ್ಟಿದ್ದಾರೆ.
ಹಾಗಾಗಿ ಇಂದಿನ ಸುದ್ದಿ ಮಾತು ದಿನೇಶ್ ಅಮೀನಮಟ್ಟು ಅವರ ಕುರಿತು. ಮಾತಿಗೆ ಮುನ್ನ ನೀವೊಮ್ಮೆ ದೆಹಲಿ ನೋಟದ ಇವತ್ತಿನ ಲೇಖನ "ಮುಖ್ಯಮಂತ್ರಿಗಳೇ, ಅಧಿಕಾರ ನಿಮ್ಮ ಕೈಯಲ್ಲೇ ಇರಲಿ' ಓದಿ.
ದಿನೇಶ್ ಅಮೀನ್ ಮಟ್ಟು ಬಲು ಅಪರೂಪದ ಪತ್ರಕರ್ತ. ಸದಾ ಸಮಾಜಮುಖಿ ಆಲೋಚನೆಯನ್ನೇ ಧ್ಯಾನಿಸುವ ಬರಹಗಾರ. ಕನ್ನಡ ಪತ್ರಿಕೆಗೆ ದೆಹಲಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಇಡೀ ರಾಷ್ಟ್ರದ ಸಮಗ್ರ ಪರಿಕಲ್ಪನೆಯನ್ನು, ಚಿತ್ರಣವನ್ನು ಸ್ಪಷ್ಟವಾಗಿ ಹೇಳುವ ಸಾಮರ್ಥ್ಯ ಇರುವ ಏಕೈಕ ಪತ್ರಕರ್ತ.
ದಿನೇಶ್ ತಮ್ಮ ಇಂದಿನ ಲೇಖನದಲ್ಲಿ ಯಡಿಯೂರಪ್ಪ ಯಾವ ಮಾದರಿಯನ್ನು ಅನುಸರಿಸಿ ರಾಜ್ಯವಾಳುತ್ತಿದ್ದಾರೆ ಎಂಬುದನ್ನು ಚರ್ಚಿಸಿದ್ದಾರೆ. ಈ ಮೊದಲು ಯಡಿಯೂರಪ್ಪ ಅವರೇ ಪಠಿಸಿದ "ಮೋದಿ ಮಾದರಿ", "ವಾಜಪೇಯಿ ಮಾದರಿ"ಗಳನ್ನು ತಿಳಿಸಿದ್ದಾರೆ. ಹಾಗೆಯೇ ಗಾಂಧೀ, ಬಸವಣ್ಣನ ಮಾದರಿಗಳ ಬಗ್ಗೆಯೂ ಮಾತನಾಡಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ಜನಪರ ಮಾದರಿಯಾದರೆ ಎಲ್ಲವನ್ನೂ ಸಾಧಿಸಬಹುದು ಎಂದಿದ್ದಾರೆ. ಈ ಮೂಲಕ ದಿನೇಶ್ ಅಮೀನಮಟ್ಟು ಅವರು ಯಡಿಯೂರಪ್ಪ ಅವರಿಗೆ ಜನಪರ ಮಾದರಿ ಹೇಳಿಕೊಟ್ಟಿದ್ದಾರೆ.
ಅದೇ ರೀತಿ ಅವರೂ ಕೂಡ ಇದನ್ನೇ ಪ್ರತಿಪಾದಿಸುವಂಥವರು. ಇತ್ತೀಚೆಗೆ ಜಮ್ಮು ಕಾಶ್ಮೀರ ವಿಚಾರವನ್ನು ಚರ್ಚಿಸಿದ್ದ ದಿನೇಶ್ ಆ ಲೇಖನದಲ್ಲೂ ಜಮ್ಮು-ಕಾಶ್ಮೀರದಲ್ಲಿ ಜನಮತ ಗಣನೆ ಆಗಲಿ ಎಂದು ಪ್ರತಿಪಾದಿಸಿದ್ದರು. ಹಾಗಾಗಿಯೇ ಅವರು ಜನಪರ ಮಾದರಿಯನ್ನು ಮುಂದಿಟ್ಟಿದ್ದಾರೆ. ಈಗಲಾದರೂ ಯಡಿಯೂರಪ್ಪನವರಿಗೆ ಜನಪರ ಮಾದರಿ ನೆನಪಾಗುವುದೆ?

Sunday, October 5, 2008

ನಗೆಯು ಬರುತಿದೆ ನಗೆಯು ಬರುತಿದೆ...

ಶನಿವಾರ ಕೆಲ ಸ್ವಾಮಿಗಳು ಪಾದಯಾತ್ರೆ ಮಾಡಿದರು. ಎಲ್ಲಾ ಪತ್ರಿಕೆಗಳು ಈ ಸುದ್ದಿಯನ್ನು ಪ್ರಮುಖವಾಗಿಯೇ ಬಿಂಬಿಸಿದರು.

ಸ್ವಾಮಿಗಳ ಯಾತ್ರೆ ಹಿಂದೆ ಇದ್ದ ಘನಘೋರ ಉದ್ದೇಶ ಬಲವಂತದ ಮತಾಂತರ ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನಿಗೆ ಒತ್ತಾಯ. ಯಾತ್ರೆ ಆರಂಭವಾದದ್ದು ಬಸವ ಸಮಿತಿ ಕಚೇರಿಯಿಂದ. ಅಂತ್ಯಗೊಂಡದ್ದು ಕೆಲವೇ ಹೆಜ್ಜೆಗಳ ದೂರದಲ್ಲಿರುವ ಬಸವೇಶ್ವರ ಸರ್ಕಲ್ ನಲ್ಲಿ. ಅಷ್ಟರಲ್ಲಿ, ಸ್ವಾಮಿಗಳು ಹೆಚ್ಚು ದೂರ ನಡೆಯಬಾರದು ಎಂದು ಸರಕಾರದ ಇಬ್ಬರು ಮಂತ್ರಿಗಳು ಮುಖ್ಯಮಂತ್ರಿ ಪರವಾಗಿ ಮನವಿ ಪತ್ರ ಸ್ವೀಕರಿಸಿದರು. ಅದಿರಲಿ ಒತ್ತಟ್ಟಿಗೆ.

ಪಾದಯಾತ್ರೆಯಲ್ಲಿ ಭಾಗವಹಿಸಿದವರಲ್ಲಿ ಒಬ್ಬ ಬ್ರಾಹ್ಮಣ ಸ್ವಾಮೀಜಿ - ಪೇಜಾವರ ವಿಶ್ವೇಶತೀರ್ಥ ಹಾಗೂ ಇತರರೆಲ್ಲ ವಿವಿಧ ವೀರಶೈವ ಮಠದವರು. ಒಕ್ಲಲಿಗರ ಸ್ವಾಮೀಜಿ ಮೊದಲು ಬರುತ್ತೇನೆ ಎಂದವರು ಡಯಾಲಿಸಿಸ್ ಕಾರಣ ಬರಲಿಲ್ಲವಂತೆ. ಅದೇ ರೀತಿ ಸಿದ್ಧಗಂಗಾ ಶ್ರೀಗಳಿಗೆ ಅನಾರೋಗ್ಯ. ಅವರ ಹಾಜರಿ ಇಲ್ಲದಿದ್ದರೂ, ಪಾದಯಾತ್ರೆಯ ಉದ್ದೇಶಕ್ಕೆ ಅವರ ಬೆಂಬಲ ಇದೆಯೆಂದು ಸಂಘಟಕರ ಸ್ಪಷ್ಟೋಕ್ತಿ.

ಪೇಜಾವರ ಶ್ರೀ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಮತಾಂತರ ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆ ಎಂದರು. ಪತ್ರಕರ್ತರೊಬ್ಬರು ದಲಿತರು ಸಹಸ್ರಾರು ಸಂಖ್ಯೆಯಲ್ಲಿ ಬೌದ್ಧಧರ್ಮಕ್ಕೆ ಮತಾಂತರ ಹೊಂದುವುದರ ಬಗ್ಗೆ ಸ್ವಾಮೀಜಿಯ ಅಭಿಪ್ರಾಯ ಕೇಳಿದರು. ಸ್ವಾಮೀಜಿ "ಬೌದ್ಧ ಧರ್ಮ ಹಿಂದೂ ಧರ್ಮದ ಅಂಗವೇ ಆದರೂ ಮತಾಂತರ ಸಲ್ಲ. ಕಾರಣ ಇಷ್ಟೆ. ಹಿಂದೂ ಧರ್ಮದಲ್ಲಿರುವ ದಲಿತರೆಲ್ಲಾ ಬೌದ್ಧಧರ್ಮ ಸ್ವೀಕರಿಸಿದರೆ ಹಿಂದೂ ಧರ್ಮದಲ್ಲಿ ದಲಿತರ ಸಂಖ್ಯೆ ಕಡಿಮೆಯಾಗಿ ಧರ್ಮಕ್ಕೆ ಅನ್ಯಾಯ ಆಗುತ್ತೆ", ಎಂದರು.

ಡಾ. ಅಂಬೇಡ್ಕರ್ ತಮ್ಮ ಜೀವಿತದ ಕೊನೆ ಹಂತದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು. "ಆಗಿನ್ನೂ ನಾನು ಚಿಕ್ಕವ. ಆಗಲೇ ಅಂಬೇಡ್ಕರರನ್ನು ಭೇಟಿಯಾಗಿ ಅವರ ಮನವೊಲಿಸಬೇಕು ಎಂಬ ಆಸೆ ನನ್ನಲ್ಲಿತ್ತು", ಎಂದು ಸ್ವಾಮೀಜಿ ಇತಿಹಾಸ ಜ್ಞಾಪಿಸಿಕೊಂಡರು.

ಸ್ವಾಮೀಜಿಯವರ ಮಾತಿನಿಂದ ಸ್ಪಷ್ಟವಾಗುವ ಒಂದಂಶವೆಂದರೆ, ಹಿಂದೂ ಧರ್ಮದಲ್ಲಿ ಸದಾ ಮೇಲ್ಜಾತಿಯವರಿಂದ ತುಳಿತಕ್ಕೆ ಒಳಪಡಲು, ಶೋಷಣೆಗೆ ಈಡಾಗಲು ದಲಿತರೆಂಬ ವರ್ಗ ಬಹುಸಂಖ್ಯೆಯಲ್ಲಿ ಇರಬೇಕು. ಇಲ್ಲವಾದರೆ ಹಿಂದೂ ಧರ್ಮಕ್ಕೆ ಅನ್ಯಾಯವಾಗುತ್ತೆ.

ಸ್ವಾಮೀಜಿ ಅರ್ಥಮಾಡಿಕೊಳ್ಳಬೇಕಾದ್ದು; ದಲಿತರ್ಯಾರೂ ಹಿಂದುಗಳಲ್ಲ. ಹಿಂದೂ ಧರ್ಮದ ಸೋಕಾಲ್ಡ್ ಶಾಸ್ತ್ರದ ಪ್ರಕಾರ ಹಿಂದೂಗಳಿಗೆ ಗೋಮಾಂಸ ವರ್ಜ್ಯ. ಆದರೆ ದಲಿತರು ಗೊಮಾಂಸ ಸ್ವೀಕರಿಸುತ್ತಾರೆ. ಹಾಗಾದರೆ ಅವರು ಹಿಂದೂಗಳು ಹೇಗಾದಾರು? ಅವರ ಏಳಿಗೆಗೆ, ಶೋಷಣೆ ಮುಕ್ತ ಬದುಕಿಗಾಗಿ ಅವರಿಷ್ಟದ ಧರ್ಮ ಅನುಸರಿಸಿದರೆ ಅದನ್ನು ಹಿಂದೂ ಧರ್ಮಕ್ಕಾದ ಅನ್ಯಾಯ ಎಂದು ಭಾವಿಸುವುದು ಎಷ್ಟು ಸರಿ?

ಇನ್ನೊಂದು ಪ್ರಶ್ನೆ. ಈ ಪಾದಯಾತ್ರೆಯಲ್ಲಿ ಭಾಗವಹಿಸಿದ ಅನೇಕರು ಬಸವಣ್ಣನ ಅನುಯಾಯಿಗಳು. ಬಸವ ಹೋರಾಡಿದ್ದೇ ಹಿಂದೂ ಧರ್ಮದ ಆಧಾರಗಳಾದ ಅಸ್ಪೃಶ್ಯತೆ, ಜಾತೀಯತೆ ವಿರುದ್ಧ. ಇವರ ಪೂರ್ವಜರು ಬಸವಣ್ಣನ ಹಾದಿ ಹಿಡಿದು ಹೊಸ ಕ್ರಾಂತಿಗೆ ಕಾರಣರಾಗಿದ್ದರು. ಆದರೆ ವಿಪರ್ಯಾಸ ನೋಡಿ. ಇದೇ ಮಂದಿ ಇಂದು ಕಟ್ಟಾ ಬ್ರಾಹ್ಮಣ ಮಠದ ಸ್ವಾಮೀಜಿ ಹಿಂದೆ ಬಾಲದಂತೆ ಮತಾಂತರದ ವಿರುದ್ಧ ಪಾದಯಾತ್ರೆ ಮಾಡ್ತಿದಾರೆ. ನಗೆಯು ಬರುತಿದೆ ನನಗೆ ನಗೆಯು ಬರುತಿದೆ. ಇವರ ಆಟ ನೋಡಲಾರದೆ ಘೋರಿಯಲ್ಲಿ ಬಸವಣ್ಣನ ದೇಹ ಮಗ್ಗಲು ಬದಲಿಸಿ

Friday, October 3, 2008

ಸುದ್ದಿಮಾತು ಸಂಪಾದಕೀಯ...

ಸುದ್ದಿಮಾತು ಮಾತನಾಡಲು ಆರಂಭಿಸಿ ವಾರಗಳೇ ಉರುಳಿ ಹೋದವು. ಓದುಗರಲ್ಲಿ ನೂರೆಂಟು ಅನುಮಾನಗಳು. ನಾವು ನಿರೀಕ್ಷಿಸಿದಂತೆ, ಪತ್ರಕರ್ತ ಸಮೂಹವೇ ಬ್ಲಾಗ್ ನ ಬಹುತೇಕ ಓದುಗರು. ಬ್ಲಾಗ್ ಗೆ ಭೇಟಿ ಕೊಟ್ಟವರೆಲ್ಲ, view my complete profile ಮೇಲೆ ಮರೆಯದೆ ಕ್ಲಿಕ್ ಮಾಡಿದರು. ಖಾಲಿ-ಖಾಲಿ ಇದ್ದದ್ದನು ಕಂಡು 'ಯಾರಿರಬಹುದು' ಎಂದು ಲೆಕ್ಕಾಚಾರಕ್ಕೆ ಶುರುಹಚ್ಚಿದರು.
'ಯಾರೋ ನಮ್ಮ ಮಧ್ಯೆ ಇರೋ ಪತ್ರಕರ್ತನೇ ಇಂತಹ ಕೆಲಸ ಮಾಡುತ್ತಿರಬೇಕು' ಎಂದು ಹಲವರು ಅಂದುಕೊಂಡದ್ದೂ ಬ್ಲಾಗ್ ಕಿವಿಗೆ ಕೇಳಿಸಿದೆ. ಬ್ಲಾಗ್ ಪ್ರತಿದಿನ update ಆಗುತ್ತೆ ಅಂದರೆ, 'ಯಾವನೋ ಕೆಲಸ ಇಲ್ಲದ ಆಸಾಮಿ ಇರಬೇಕು'; 'ಪದೇ ಪದೇ ಯಡಿಯೂರಪ್ಪನ್ನ ಬಯ್ಯೋದು ನೋಡಿದರೆ ಇವ ಕಾಂಗ್ರೆಸ್ ನವನೋ, ಎಡಪಂಥೀಯವನೋ ಇರಬೇಕು'; ಪತ್ರಿಕಾ ಭಾಷೆ ಬಗ್ಗೆ, ಪತ್ರಕರ್ತರ ಅವಾಂತರಗಳ ಬಗ್ಗೆ ಬರೆಯೋದು ನೋಡಿದ್ರೆ 'ಯಾರೋ ಪತ್ರಕರ್ತನೇ ಇರಬೇಕು...' ಹೀಗೆ ಹತ್ತಾರು ಊಹೆಗಳು ಓದುಗರಲ್ಲಿ ಎದ್ದಿರುವುವುದು ಸಹಜ.
ಈ ಎಲ್ಲಾ ಸಂಶಯಗಳಿಗೆ ಉತ್ತರ ನೀಡುವ ಸಮಯ ಈಗ ಬಂದಿದೆ. ಮೊದಲನೆಯದಾಗಿ ಇದು ಯಾರೋ ಒಬ್ಬ ಮಾಡುತ್ತಿರುವ ಬ್ಲಾಗ್ ಅಲ್ಲ. ಐದು ಮಂದಿ ಇದ್ದೇವೆ. ನಾವ್ಯಾರೂ ಪತ್ರಕರ್ತರಲ್ಲ. ಹಾಗಂತ ಪತ್ರಿಕೋದ್ಯಮ ಪರಿಚಯ ಇಲ್ಲ ಅಂತಲ್ಲ. ನಾವೆಲ್ಲರೂ ಬೇರೆ ಬೇರೆ ಪತ್ರಿಕೆಗಳಲ್ಲಿ 4-5 ವರ್ಷ ಕಾಲ ಕೆಲಸ ಮಾಡಿ ಈಗ ಬೇರೆಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಹಾಗಾಗಿ ಪತ್ರಿಕೋದ್ಯಮದೆಡೆಗೆ ಇಂಥ ಕಾಳಜಿ. ಪತ್ರಿಕೆ, ಪತ್ರಿಕೋದ್ಯಮ ಬಗ್ಗೆನೇ ಬರೆದರೆ ಹೇಗೆ ಅಂತ ನಾವೆಲ್ಲಾ ಕೂಡಿ ನಿರ್ಧಾರ ಮಾಡಿ ಬ್ಲಾಗ್ ಆರಂಭಿಸಿದೆವು.
ನಮ್ಮ ಹೆಸರು ಯಾಕೆ ಹೇಳ್ತಿಲ್ಲ ಅನ್ನೋದು ನಿಮ್ಮ ಪ್ರಶ್ನೆ ಇರಬಹುದು. ಆದರೆ ಹೆಸರಲ್ಲೇನಿದೆ? ಹೆಸರು ಹೇಳಿದ್ರೆ - ಇವ ಘಟ್ಟದ ಕೆಳಗಿನವನು, ಅವನು ಉತ್ತರ ಕರ್ನಾಟಕದವನು, ಮತ್ತೆ ಅವನೋ ಮಹಾನ್ ಚಡ್ಡಿ, ಇನ್ನೊಬ್ಬನೋ ಆ ಜಾತಿಯವನು.. ಹೀಗೆ ಏನೇನೋ ಕಾರಣ ಕೊಟ್ಟು ಬರಹಗಳನ್ನು ಓದೋ ಸನ್ನಿವೇಶ ಸೃಷ್ಟಿಯಾಗುತ್ತೆ. ಅದೆಲ್ಲಾ ಯಾಕೆ?
Ronald Bartes ಹೇಳೋ ಹಾಗೆ author is dead. ಬ್ಲಾಗ್ ನಲ್ಲೂ ಹಾಗೆ. ಬರಹಗಾರರಿಗೆ ಅಸ್ತಿತ್ವವಿಲ್ಲ. ಬರಹಗಳಿಗೆ ಮಾತ್ರ ಆಧಾರ ಇರುತ್ತೆ. ಬದ್ಧತೆ ಇರುತ್ತೆ. ನಿಮಗನ್ನಿಸಿದ್ದನ್ನ ನಮ್ಮೊಂದಿಗೆ ಹೇಳಿಕೊಳ್ಳಿ..
ಅಂದಹಾಗೆ ಯಾರನ್ನು ಬಯ್ಯುವ ಉದ್ದೇಶ ನಮ್ಮದಲ್ಲ. ತಪ್ಪು ಮಾಡಿದಾಗ ಸುದ್ದಿಮಾತು ಆಡಿಕೊಳ್ಳುತ್ತದೆ. ಸರಿ ಮಾಡಿದಾಗ ಮೆಚ್ಚಿಕೊಳ್ಳುತ್ತದೆ. ಹಾಗೆಯೇ ರಂಜನೆಯು ಇರಲಿ ಎಂದು ಇನ್ನುಮುಂದೆ ಪ್ರತಿ ಶುಕ್ರವಾರ "ಸಿನಿಮಾತು" ನಿಮ್ಮ ಬ್ಲಾಗ್ ಅಂಗಳದಲ್ಲಿ.

ನಮ್ಮ ನಡುವೆ ಹೀಗೊಬ್ಬ ರಾಜಕಾರಣಿ..




ಗಾಂಧಿ ಜನ್ಮದಿನದಂದು ರಾಜಸ್ಥಾನದ ಬಾರಾನ್ ಜಿಲ್ಲೆಯ ಪಿಂಜ್ರಾ ಹಳ್ಳಿಯಲ್ಲಿ ರಾಹುಲ್ ಗಾಂಧಿ ಶ್ರಮದಾನ ನಡೆಸಿದರು. ಅದರ ನಾಲ್ಕು ಚಿತ್ರಗಳು ಸುದ್ದಿ ಮಾತು ಓದುಗರಿಗೆ. ಈ ಕುರಿತು ಚುರುಮುರಿ ಕೂಡ ಬರೆದಿದೆ. ಅಲ್ಲಿಯೂ ಒಮ್ಮೆ ನೋಡಿ.
(ಚಿತ್ರಕೃಪೆ: ವಿವಿಧ ಪತ್ರಿಕೆಗಳಿಂದ.. )

Thursday, October 2, 2008

ಶಂಕಿತ ವ್ಯಕ್ತಿ ಬಂಧನ!

ನಿನ್ನೆ ರಾತ್ರಿ ಸುವರ್ಣ ಸುದ್ದಿ ವಾಹಿನಿಯಲ್ಲಿ ಸುದ್ದಿ. ವಾರ್ತಾವಾಚಕಿ 'ಸುಬ್ರಮಣ್ಯದಲ್ಲಿ ಶಂಕಿತ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ' ಎಂದರು. ಇದಪ್ಪಾ ಮಜಾ....
ಶಂಕಿತ ಉಗ್ರಗಾಮಿ, ಶಂಕಿತ ನಕ್ಸಲ, ಶಂಕಿತ ಕಳ್ಳ, ಶಂಕಿತ ದರೋಡೆಕೋರ, ಶಂಕಿತ ಕೊಲೆಗಾರ ಎನ್ನುವ ಪದಬಳಕೆ ಪರಿಚಿತ. ಆದರೆ ಇದೇನಿದು - ಶಂಕಿತ ವ್ಯಕ್ತಿ?
ಸುವರ್ಣ ಸುದ್ದಿವಾಹಿನಿ ಮಾತ್ರವಲ್ಲ. ಶುಕ್ರವಾರದ ಕನ್ನಡಪ್ರಭ ಮುಖಪುಟದಲ್ಲಿ ಇದೇ ತಲೆಬರಹದ ಸುದ್ದಿ ಪ್ರಕಟವಾಗಿದೆ. ಹಾಗಾದರೆ ಇವರಿಗೆಲ್ಲಾ, ಆತ 'ವ್ಯಕ್ತಿ' ಎಂಬುದರ ಬಗ್ಗೆಯೇ ಶಂಕೆಯೇ? ಅಥವಾ ಒಬ್ಬ ಮನುಷ್ಯ 'ವ್ಯಕ್ತಿ'ಯಾಗಿರುವುದೂ ಒಂದು ಸಂಶಯಾಸ್ಪದ ಸಂಗತಿಯೇ?
'ಶಂಕಿತ' ಎನ್ನುವ ಪದ ಬಳಕೆ ಪತ್ರಕರ್ತರಿಗೆ ಬಹುಪ್ರಿಯವಾಗಿರುವುದೇ ಇಂತಹ ತಪ್ಪುಗಳಿಗೆ ಕಾರಣ. ಸುಬ್ರಮಣ್ಯ ಘಟನೆಯಲ್ಲಿ ಬಂಧಿಯಾಗಿದ್ದು ಒಬ್ಬ ಹಿಂದೂ ಹೆಸರಿನವನಾದ ಕಾರಣ ಪತ್ರಕರ್ತರು ಶಂಕಿತ ಉಗ್ರ ಎನ್ನಲಿಲ್ಲ. ಆದರೆ ಅದೇ ಆತನ ಜಾಗದಲ್ಲಿ ಒಬ್ಬ ಮುಸಲ್ಮಾನ ಇದ್ದಿದ್ದರೆ ಆತನನ್ನು ಶಂಕಿತ ಉಗ್ರ ಎಂದು ಯಾವುದೇ ಮುಲಾಜಿಲ್ಲದೆ ಘೋಷಿಸಿಬಿಡುತ್ತಿದ್ದರು. ಏನ್ ಮಾಡೋದು? ಇವರು ಒಂಥರಾ ಶಂಕಿತ ಪತ್ರಕರ್ತರು!!!

ಏನು ಒಂದು... ವಿಷಯ ಇದೆ ಅಂದ್ರೆ...
ನಮ್ಮ ಟಿವಿ9 ಮತ್ತು ಸುವರ್ಣ ಸುದ್ದಿವಾಹಿನಿಗಳಲ್ಲಿ "ಏನ್ ಒಂದು" ಎನ್ನುವ ಪದಬಳಕೆ ಸಾಮಾನ್ಯ. ಅದರಲ್ಲೂ ಟಿವಿ9ನಲ್ಲಿ ಹೆಚ್ಚು. ಎಲ್ಲಾ ವರದಿಗಾರ, ವಾರ್ತಾವಾಚಕರು 'ಏನ್ ಒಂದು...' ಎನ್ನುವ ಪದದ ಮೂಲಕವೇ ಸುದ್ದಿ ಆರಂಭಿಸುತ್ತಾರೆ.


ಮತ್ತೆ ಒಂದು ಮನವಿ...


ಶಂಕಿತ ಪತ್ರಕರ್ತರೇ ತಿದ್ದಿಕೊಳ್ಳುವಿರಾ...

ಮರೆಯದಿರಿ ಈ ಗಾಂಧಿಯ...

"ಒಂದು ದಿನದ ಅವಧಿಗೆ ನಾನೊಬ್ಬ ಸರ್ವಾಧಿಕಾರಿಕಾರಿಯಾಗಿ ನೇಮಕಗೊಂಡಿದ್ದರೆ, ದೇಶದ ಎಲ್ಲ ಪತ್ರಿಕೆಗಳನ್ನು ನಿಷೇಧಿಸುತ್ತಿದ್ದೆ; ಹರಿಜನ ಪತ್ರಿಕೆಯೊಂದನ್ನು ಹೊರತು ಪಡಿಸಿ..."
ಇದು ಮಹಾತ್ಮ ಗಾಂಧಿ ಆಡಿದ ಮಾತು. ೧೯೪೬ ಜೂನ್ ೧೯ರಂದು ಪ್ರಾರ್ಥನಾ ಸಭೆಯಲ್ಲಿ ಪತ್ರಿಕೆಗಳ ಧೋರಣೆ ಕುರಿತು ನೊಂದು ಅವರು ಈ ರೀತಿ ಹೇಳಿದ್ದರು. ಅವತ್ತು ಪತ್ರಿಕೆಗಳು ಕಮರ್ಷಿಯಲ್ ಆಗಿದ್ದವು. ಸರ್ಕಾರದ ವಿರುದ್ಧ ನಿಭೀರ್ತಿಯಿಂದ ಬರೆಯುವುದಕ್ಕೆ ಹೆದರುತ್ತಿದ್ದವು. ಹರಿಜನ ಪತ್ರಿಕೆ ಮಾತ್ರ ಸಮಾಜ ಮುಖಿಯಾಗಿತ್ತು. ಅದಕ್ಕೆ ಅದನ್ನು ನಿಷೇಧಿಸುವ ಪತ್ರಿಕೆಗಳಿಂದ ಹೊರತಾಗಿಸಲಾಗಿತ್ತು.
ಗಾಂಧಿ ಮುತ್ಸದಿಯಾಗಿ, ಅಪ್ರತಿಮ ಹೋರಾಟಗಾರನಾಗಿ, ಅಹಿಂಸ ಪ್ರತಿಪಾದಕನಾಗಿ ನಮಗೆ ಚಿರಪರಿಚಿತ. ಹಾಗೇ ಅವರೊಬ್ಬ ಪತ್ರಕರ್ತರೂ ಆಗಿದ್ದರು. ಯಂಗ್ ಇಂಡಿಯಾ, ಹರಿಜನ, ನವಜೀವನ್ ಪತ್ರಿಕೆಗಳಿಗೆ ಸಂಪಾದಕರಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದುಡಿದವರು.
ಪತ್ರಿಕೆಯೊಂದರ ಹೊಣೆ ಏನು ಎಂಬುದನ್ನು ಒಬ್ಬ ಪತ್ರಕರ್ತನಾಗಿ ಈ ಪತ್ರಿಕೆಗಳ ಮೂಲಕ ಮಾಡಿ ತೋರಿಸಿದರು.
ಇಡೀ ದೇಶ ಗಾಂಧಿಯೊಬ್ಬರ ಮಾತು ಕೇಳಲು ಸಾಧ್ಯವಾಗಿದ್ದು ಈ ಪತ್ರಿಕೆಗಳಿಂದಲೇ. ದೇಶದ ಮೂಲೆ ಮೂಲೆಗೆ ತಮ್ಮ ದನಿ ತಲುಪಿಸುವುದಕ್ಕೆ ಗಾಂಧಿ ಪತ್ರಿಕೋದ್ಯಮವನ್ನು ಸಮರ್ಥವಾಗಿ ಬಳಸಿಕೊಂಡರು. ಸಮಾಜದ ಹುಳುಕುಗಳನ್ನು ಎತ್ತಿ ಹಿಡಿಯುತ್ತಾ, ಮಾರ್ಗದರ್ಶಿ ಎನಿಸುವ ಅನೇಕ ಹಿತನುಡಿಗಳನ್ನು ದೇಶಬಾಂಧವರಿಗೆ ಹಂಚಿದರು. ಗಾಂಧೀಜಿ ಪತ್ರಿಕೋದ್ಯಮಕ್ಕೆ ಅತ್ಯುತ್ತಮ ಮೌಲ್ಯಗಳನ್ನು ತಂದುಕೊಟ್ಟರು. ಕೆಟ್ಟ ಸ್ಥಿತಿಯಲ್ಲಿ ಧೈರ್ಯ ತುಂಬುವುದು, ಸತ್ಯದ ಬಗ್ಗೆ ಅಚಲ ನಂಬಿಕೆ ಇಡುವುದು, ವಸ್ತುನಿಷ್ಠತೆ ಉಳಿಸಿಕೊಳ್ಳುವುದು, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಟೊಂಕ ಕಟ್ಟುವುದನ್ನು ಅವರು ಹೇಳಿಕೊಟ್ಟರು. ಅವರಿಗೆ ಗೊತ್ತಿತ್ತು ಸಾರ್ವಜನಿಕ ಅಭಿಪ್ರಾಯ ಮೂಡಿಸುವುದಕ್ಕೆ ಮತ್ತು ಆಡಳಿತ ನಿರ್ಧಾರಗಳ ಮೇಲೆ ಪ್ರಭಾವ ಬೀರುವುದಕ್ಕೆ ಪತ್ರಿಕೆ ಅಸ್ತ್ರವಾಗಬಲ್ಲದು ಎಂದು.
ಹರಿಜನ ಮತ್ತು ಯಂಗ್ ಇಂಡಿಯಾ ಪತ್ರಿಕೆಗಳನ್ನು ಆರಂಭಿಸಿ ದೇಶದ ಯುವ ಮನಸ್ಸುಗಳನ್ನು ಸೆಳೆದರು. ಹರಿಜನ ಪತ್ರಿಕೆ ಅನುವಾದಿತ ಆವೃತಿಗಳಲ್ಲಿ ದೇಶದ ವಿವಿಧ ಭಾಷೆಗಳಲ್ಲಿ ಪ್ರಕಟವಾಗುವಷ್ಟು ಪ್ರಭಾವ ಬೀರಿತು. ಯಾಕೆಂದರೆ ಗಾಂಧಿ ವಿಚಾರಧಾರೆಗಳು ಅಷ್ಟು ಪ್ರಖರವಾಗಿದ್ದವು.
ಹರಿಜನ್ ಬಂಧು (ಗುಜರಾತಿ), ಹರಿಜನ ಸೇವಕ್ (ಹಿಂದಿ) ಪತ್ರಿಕೆಗಳು ದೇಶದ ಧ್ವನಿಯಾದವು.
ದೇಶದ ಪತ್ರಿಕೋದ್ಯಮ ಚಿಗುರುತ್ತಿರುವ ಹೊತ್ತಿನಲ್ಲಿ ಗಾಂಧಿ ಒಬ್ಬ ಪತ್ರಕರ್ತನಾಗಿ ಇಷ್ಟೆಲ್ಲಾ ಕೆಲಸ ಮಾಡಿದರು. ಒಂದೆಡೆ ಸ್ವತಂತ್ರ ಹೋರಾಟಕ್ಕೆ ಇಡೀ ದೇಶವನ್ನು ಒಗ್ಗೂಡಿಸುತ್ತಿದ್ದರು. ಮತ್ತೊಂದೆಡೆ ದೇಶವನ್ನು ಕಿತ್ತು ತಿನ್ನುವ ಜಾತೀಯತೆ, ಅಸ್ಪೃಶ್ಯತೆ ಹೊಡೆದೋಡಿಸಲು ಶ್ರಮಿಸುತ್ತಿದ್ದರು.
ಇಂಥ ಗಾಂಧೀಜಿಯನ್ನು ಇಂದು ಪತ್ರಿಕೆಗಳು ಹೇಗೆ ಸ್ಮರಿಸಿಕೊಂಡಿವೆ ಎನ್ನುವುದರತ್ತ ಇವತ್ತಿನ ಸುದ್ದಿಮಾತು.

ಕನ್ನಡಪ್ರಭದಲ್ಲಿ ಒಂದು ವಿಶೇಷ ಸುದ್ದಿ: ಹರಿಜನರ ಉದ್ಧಾರಕ್ಕಾಗಿ ಗಾಂಧಿ ಗಂಗಾಜಲ ಕುಡಿಯುತ್ತಿದ್ದ ಬೆಳ್ಳಿಲೋಟವನ್ನು ಹರಾಜಿಗಿಟ್ಟ ಬಗ್ಗೆ ಕೆ.ಪಿ. ನಾಗರಾಜ್ ಬರೆದಿದ್ದಾರೆ. ಇದು ನಡೆದಿದ್ದು ಕೋಲಾರ ಜಿಲ್ಲೆಯ ಬಂಗಾರ ಪೇಟೆಯಲ್ಲಿ, ೧೯೩೬ರ ಮೇ ೩೧ರಂದು. (ಪೂರ್ಣ ವರದಿ ಇಲ್ಲಿ ಓದಿಕೊಳ್ಳಬಹುದು). ಜತೆಗೆ ೧೫೦ ದೇಶಗಳಲ್ಲಿ ಗಾಂಧೀಜಿ ಅವರ ಅಂಚೆ ಚೀಟಿ ತಂದಿರುವ ಬಗ್ಗೆ ಒಂದು ವರದಿಯೂ ಇದೆ.
ವಿಜಯ ಕರ್ನಾಟಕ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಸಂಪಾದಕೀಯ ಪುಟದಲ್ಲಿ ಗಾಂಧಿ ಮತ್ತು ಲಾಲ್ ಬಹದ್ಧೂರ ಶಾಸ್ತ್ರಿಗಳಿಬ್ಬರನ್ನೂ ಸ್ಮರಿಸಿಕೊಂಡಿದೆ. ಸೋಕಾಲ್ಡ್ ಸಮಾಜಮುಖಿ ಪತ್ರಿಕೆ ಪ್ರಜಾವಾಣಿ ಬೆಂಗಳೂರಿನಲ್ಲಿ ಮಾತ್ರ ಪ್ರಸಾರವಾಗುವ ಮೆಟ್ರೋದಲ್ಲಿ ಗಾಂಧಿ ನಮ್ಮ ನಡುವೆ ಹೇಗಿದ್ದಾರೆಂಬ ಪುಟ್ಟ ಬರಹಕ್ಕೆ ಸೀಮಿತಗೊಳಿಸಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ಮುಖಪುಟದಲ್ಲಿ ಎರಡು ವಿಶೇಷ ವರದಿಗಳನ್ನು ಪ್ರಕಟಿಸಿದೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಗಾಂಧಿ ಬಗ್ಗೆ ಏನೂ ಇಲ್ಲ. ಆದರೆ ಒಬ್ಬ ಅಹಿಂಸಾವಾದಿ ಹುಟ್ಟಿದ ದಿನವಾದ ಇಂದು, ಟೈಮ್ಸ್ ಆಫ್ ಇಂಡಿಯಾ, ಅಹಿಂಸೆಯ ಪ್ರತಿಪಾದಕ ಬೌದ್ಧ ಸಂನ್ಯಾಸಿಯೊಬ್ಬರನ್ನು ಅತಿಥಿ ಸಂಪಾದರಕ್ಕನ್ನಾಗಿ ಕರೆಸಿ ಇಂದಿನ ಸಂಚಿಕೆ ರೂಪಿಸಿದೆ. ಇದು ಕೂಡ ಗಾಂಧಿ ತತ್ವಗಳಿಗೆ ಸಲ್ಲಿಸುವ ಗೌರವವೇ. ಗಾಂಧೀಜಿಯ ತತ್ವಾದರ್ಶಗಳನ್ನು ಮತ್ತೆ ಮತ್ತೆ ನೆನಪಿಸುವುದು ಪತ್ರಿಕೆಗಳ ಕರ್ತವ್ಯ. ಪತ್ರಿಕೆಗಳು ಈ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಪ್ರವೃತ್ತವಾಗಲಿ.