Tuesday, September 30, 2008

ಮಠ, ಮಾಲ್ ಮತ್ತು ವಿ.ಕ.ಗೋಲ್ಮಾಲ್...

ಗರುಡ ಮಾಲ್ ನ ಉದಯ ಗರುಡಾಚಾರ್ ಈಗ ಸುದ್ದಿಯಲ್ಲಿದ್ದಾರೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈಜಿಪುರದಲ್ಲಿ ಬಡವರಿಗಾಗಿ ಮನೆ ಕಟ್ಟುವ ನೆಪದಲ್ಲಿ ಬೆಲೆಬಾಳುವ ಸರಕಾರಿ ಜಾಗ ಗುಳುಂ ಮಾಡಿಕೊಳ್ಳಲು ಅವಕಾಶ ಇರುವ ಯೋಜನೆಯೊಂದನ್ನು ತಮ್ಮ ಒಡೆತನದ ಮಾವೆರಿಕ್ ಹೋಲ್ಡಿಂಗ್ಸ್ ಕಂಪನಿಗೆ ಪಡೆದುಕೊಂಡಿದ್ದಾರೆ. ಇದು ಸಾಧ್ಯವಾದದ್ದು, ಉದಯ್ ಚುನಾವಣೆಗೆ ಮುನ್ನ ಬಿಜೆಪಿ ಸೇರಿದುದರ ಪರಿಣಾಮ ಎಂದು ಯಾರೂ ಅಲ್ಲಗಳೆಯಲಾರರು. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿದಾಗ ಪಕ್ಷ ಇಂತಹ ಯೋಜನೆ ಆಸೆ ತೋರಿಸಿ ಸುಮ್ಮನಿರಿಸಿತ್ತು ಎನ್ನುವುದರಲ್ಲಿ ಯಾವ ಸಂಶಯವೂ ಬೇಕಿಲ್ಲ.
ವಿಜಯ ಕರ್ನಾಟಕ ದಿನಪತ್ರಿಕೆ ಈ ವಿಚಾರ-ವಿವಾದವನ್ನು ಸವಿವರವಾಗಿ ಪ್ರಕಟಿಸಿತು. 3-4 ದಿನಗಳ ಕಾಲ ಮುಖಪುಟದ ಪ್ರಮುಖ ಸುದ್ದಿಯನ್ನಾಗಿಸಿ ಸುದ್ದಿ ಪ್ರಕಟಿಸಿ ವಿರೋಧ ಪಕ್ಷದವರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ಫಲವಾಗಿ ಕಾಂಗ್ರೆಸ್ ದನಿ ಎತ್ತಿತ್ತು. Of course, ಇದೆಲ್ಲಕ್ಕೂ ಮೊದಲೇ ಮಾಜಿ ಪ್ರಧಾನಿ ದೇವೇಗೌಡರು ಈಜಿಪುರಕ್ಕೆ ಭೇಟಿ ನೀಡಿ ಅಲ್ಲಿನ ಸಂಪೂರ್ಣ ಜಾಗ ಬಡವರ ಮನೆಗಾಗಿ ಮೀಸಲಿಡಬೇಕು ಎಂದು ಆಗ್ರಹಿಸಿದರು. ಆಯಕಟ್ಟಿನ ಜಾಗದಲ್ಲಿ ಬಹುಕೋಟಿ ಮೌಲ್ಯದ ಸರಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಯೊಬ್ಬ ಪಡೆಯುವ ಪ್ರಯತ್ನಕ್ಕೆ ಅಡ್ಡಗಾಲು ಹಾಕಿದ ವಿಜಯ ಕರ್ನಾಟಕ ಕಾರ್ಯ ಶ್ಲಾಘನೀಯ.
ಅದಿರಲಿ. ಒಂದು ಕ್ಷಣ ಈಜಿಪುರ ಸುದ್ದಿಯನ್ನು ಪಕ್ಕಕ್ಕಿಟ್ಟು, ಗೋಕರ್ಣಕ್ಕೆಬರೋಣ.
ಗೋಕರ್ಣದ ದೇವಾಲಯವೂ ಸರಕಾರದ ಆಸ್ತಿ. ವರ್ಷವೊಂದಕ್ಕೆ ಲಕ್ಷಾಂತರ ಆದಾಯ ತರುತ್ತಿದ್ದ ಪ್ರಮುಖ ದೇವಾಲಯ. ರಾಮಚಂದ್ರಾಪುರ ಮಠದವರು ಬಯಸಿದರು ಎಂದಾಕ್ಷಣ ಸರಕಾರ ಆ ದೇವಾಲಯವನ್ನು ಹಸ್ತಾಂತರಿಸುವ ನಿರ್ಧಾರ ತೆಗೆದುಕೊಂಡಿತು. ಆ ಊರಿನಲ್ಲಿ ಈ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿ ಧರಣಿ, ಪ್ರತಿಭಟನಾ ಮೆರವಣಿಗೆ ಮಾಡಿದರೆ ವಿಜಯ ಕರ್ನಾಟಕದಲ್ಲಿ ಒಂದು ಕಾಲಂ ಸುದ್ದಿಯಿಲ್ಲ. ಪತ್ರಿಕೆ ರಾಮಚಂದ್ರಾಪುರ ಮಠದ ಪರವಾಗಿ ನಿಂತಿತು. ಪರವಾಗಿ ಎಂದರೆ ಕಡಿಮೆಯಾದೀತು; ಮಠದ ಮುಖವಾಣಿಯಾಯಿತು ಎನ್ನಬೇಕು. ಆ ಊರಿನಲ್ಲಿ ಹಸ್ತಾಂತರಕ್ಕೆ ಯಾರ ವಿರೋಧವೂ ಇಲ್ಲ ಎಂದು ಘೋಷಿಸಿತು. ಒಂದು ಪತ್ರಿಕೆ ಹೀಗೆ ಒಂದು ಸಮುದಾಯದ ಅಸ್ತಿತ್ವವನ್ನೇ ಧಿಕ್ಕರಿಸಿತು.
ಗೋಕರ್ಣದ ಅಭಿವೃದ್ಧಿಗಾಗಿ ಹಸ್ತಾಂತರ ಅನಿವಾರ್ಯ ಎನ್ನುವಂತಹ ವರದಿಗಳು ಪ್ರಕಟವಾದವು. ಇದಪ್ಪಾ ತಮಾಷೆ ಅಂದರೆ. ಜನರಿಂದ ಚುನಾಯಿತರಾದ ಸರಕಾರ, ಜಿಲ್ಲಾ ಪಂಚಾಯಿತಿ, ಸ್ಥಳೀಯ ಎಂ.ಎಲ್ಎ ಎಲ್ಲರೂ ಇರುವಾಗ ಪಟ್ಟಣದ ಅಭಿವೃದ್ಧಿಗೆ 'ಗೋ ರಕ್ಷಣೆ' ಎಂಬ ಅಸ್ಪಷ್ಟ, ಅಸಂಬದ್ಧ ಕ್ಯಾಂಪೇನ್ ಮಾಡುತ್ತಿರುವ ಸ್ವಾಮೀಜಿಯ ಮೊರೆ ಹೋಗುವುದು ಪ್ರಜಾಪ್ರಭುತ್ವವನ್ನೇ ಲೇವಡಿ ಮಾಡಿದಂತೆ. ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಧಾಟಿಯಲ್ಲಿ ಮಾತನಾಡಿದ್ದು ಅವರ ಬೇಜವಾಬ್ದಾರಿತನವನ್ನು ಪ್ರದರ್ಶಿಸುತ್ತದೆ. ಅವರ ಅಭಿಪ್ರಾಯ ನಿಜವೇ ಆಗಿದ್ದಲ್ಲಿ ಒಂದೊಂದು ಪಟ್ಟಣದ ಅಭಿವೃದ್ಧಿಯನ್ನು ಒಂದೊಂದು ಪಟ್ಟಣಕ್ಕೆ ವಹಿಸಿ ಮುಖ್ಯಮಂತ್ರಿ ಮನೆ ಸೇರುವುದು ಒಳಿತು!
ಪ್ರಶ್ನೆ ಇಷ್ಟೆ. ವಿಜಯ ಕರ್ನಾಟಕ ದೇವಾಲಯ ಹಸ್ತಾಂತರ ವಿಚಾರದಲ್ಲಿ ಹಠಕ್ಕೆ ಬಿದ್ದು ಮಠದ ಪರ ನಿಂತದ್ದೇಕೆ? ಈಜಿಪುರದ ಸರಕಾರಿ ಜಮೀನನ್ನು ಕಬಳಿಸಲು ಬಿಡದ ಪತ್ರಿಕೆ ದೇವಾಲಯವನ್ನು ಮಠಕ್ಕೆ ಕೊಡುವಾಗ ಸರಕಾರಕ್ಕೆ ಸಾಥ್ ನೀಡಿದ್ದೇಕೆ?
ಇಲ್ಲಿ ಸ್ಷಷ್ಟವಾಗುವ ವಿಚಾರವೆಂದರೆ, ಮಠಕ್ಕೆ ದೇವಾಲಯ ಹಸ್ತಾಂತರಿಸುವಲ್ಲಿ ಪತ್ರಿಕೆ, ಅದರ ಸಂಪಾದಕರ ಹಿತಾಸಕ್ತಿ ಇತ್ತು. ಅಂತೆಯೇ ಉದಯ ಗರುಡಾಚಾರ್ ಗೆ ಸರಕಾರಿ ಜಮೀನು ತಪ್ಪಿಸಬೇಕೆಂಬ ಯಾವುದೋ ಶಕ್ತಿ ಪತ್ರಿಕೆಯನ್ನು ಹೀಗೆ ಆಡಿಸಿತ್ತು.
ಪತ್ರಿಕೆ ತೀವ್ರ ಕಾಳಜಿಯಿಂದ ಬಡವರ ಜಮೀನಿನ ಪರವಾಗಿ ನಿಂತಿದೆ ಎಂದು ಭಾವಿಸಿದರೆ ಅದು ಓದುಗರ ದಡ್ಡತನವಲ್ಲದೆ ಮತ್ತೇನಲ್ಲ. Of course, ಪತ್ರಿಕೆ ಅಂದುಕೊಂಡಂತೆ ಓದುಗರು ದಡ್ಡರೇನಲ್ಲ!

ಏನ್ ನಡೀತಾ ಇದೆ ಅಲ್ಲಿ.., ಟೀವಿ9 ಹೇಳ್ಬೇಕು..

ಸೋಮವಾರ ಅಹ್ಮದಾಬಾದ್‌ನಲ್ಲಿ ೧೭ ಕಚ್ಚಾ ಬಾಂಬ್‌ಗಳು ಪತ್ತೆಯಾದ ಸುದ್ದಿಯನ್ನು ಬಿತ್ತರಿಸಿದ ಟೀವಿ೯ ಪರಿ ಪ್ರಶ್ನಾರ್ಹವಾದುದು. ಅಹ್ಮದಾಬಾದ್‌ನಲ್ಲಿ ಟೀವಿ೯ ಕನ್ನಡ ವಾಹಿನಿಗೆ ಯಾವ ಪ್ರತಿನಿಧಿಯೂ ಇಲ್ಲ. ಅದು ಸುದ್ದಿ ಸಂಸ್ಥೆಗಳ ನೆರವಿನಿಂದ ಪ್ರಸಾರ ಮಾಡಬೇಕು. ಆದರೆ ಟೀವಿ೯ ವರದಿ ಮಾಡಿದ್ದು ಪ್ರತ್ಯಕ್ಷದರ್ಶಿಯಂತೆ.
ನ್ಯೂಸ್ ಆಂಕರ್ ಹಮೀದ್ ಪಾಳ್ಯ ಮೊದಲಿಗೆ ಸುದ್ದಿ ಓದಿದರು. ನಂತರ ಮತ್ತೊಬ್ಬ ಟೀವಿ೯ ಉದ್ಯೋಗಿ ಸುನೀಲ್ ಶಿರಸಂಗಿ ಜೊತೆ ಚರ್ಚೆ. ಹೀಗೆ ಚರ್ಚೆ ಮಾಡಲು ಸುನೀಲ್ ಯಾರು? ಸುನೀಲ್‌ಗೂ ಈ ದಾಳಿಗೂ ಏನು ಸಂಬಂಧ? ಅವರೇನಾದರೂ ಅಹ್ಮದಾಬಾದ್‌ನಲ್ಲಿ ಇದ್ದರೆ? ಇಷ್ಟಕ್ಕೂ ವಾಯ್ಸ್ ಓವರ್ ಕೊಡುವಂತಹ ಮಾತುಗಳೆಲ್ಲವನ್ನೂ ಸುನೀಲ್ ಶಿರಸಂಗಿ ಜೊತೆ ಚರ್ಚೆ ಮಾಡುವ ಪ್ರಮೇಯ ಏನಿತ್ತು? ಸುನೀಲ್ ಶಿರಸಂಗಿ ಎಲ್ಲರಿಗೂ ಗೊತ್ತಿರುವಂತೆ ಉತ್ತಮ ಕ್ರೀಡಾ ವರದಿಗಾರ. ಆ ವಿಚಾರವಾಗಿ ಚರ್ಚೆ ಮಾಡಲಿ. ಆದರೆ ಬಾಂಬ್ ದಾಳಿ ಕುರಿತು ಚರ್ಚಿಸಲು ಅವರೇನು ವಿಷಯ ತಜ್ಞರೆ? ಪೊಲೀಸ್ ಅಧಿಕಾರಿಯೇ? ಅಥವಾ ಈ ದಾಳಿ ಕುರಿತು ಉತ್ತರಿಸಲೇ ಬೇಕಾದ ಜವಾಬ್ದಾರಿಯುತ ವ್ಯಕ್ತಿಯೇ. ಯಾವುದೂ ಅಲ್ಲ. ಕಡೆಯ ಪಕ್ಷ ಘಟನೆ ವಿವರಿಸುವುದಕ್ಕೆ ಖುದ್ದು ಸ್ಥಳದಲ್ಲಿರುವ ವರದಿಗಾರನೂ ಅಲ್ಲ. ಮೇಲಾಗಿ ಅವರಿಗೆ ಬಾಂಬ್ ದಾಳಿಯ ಆಯಾಮಗಳೇ ತಿಳಿದಿರಲಿಲ್ಲ. ಅವರು ಮಾತನಾಡುತ್ತಾ, ದೇಶದ ಐತಿಹಾಸಿಕ ಸ್ಥಳಗಳೆಲ್ಲಾ ಮದರಸಾಗಳಾಗುತ್ತಿವೆ. ಈ ಬಗ್ಗೆ ಎಚ್ಚರವಹಿಸಬೇಕು ಎಂದರು. ತಮ್ಮ ಈ ವಾದವನ್ನು ಸಮರ್ಥಿಸಿಕೊಳ್ಳಲು ಯಾವೊಂದು ಉದಾಹರಣೆಯನ್ನಾಲಿ, ನಿದರ್ಶನವನ್ನಾಗಲಿ ನೀಡಲಿಲ್ಲ. ಇಷ್ಟಕ್ಕೂ ಅಹ್ಮದಾಬಾದ್‌ನಲ್ಲಿ ಬಾಂಬ್‌ಗಳು ಸಿಕ್ಕಿರುವುದಕ್ಕೂ, ಮಂದಿರ, ಮದರಸಾಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ? (ಮೊನ್ನೆ ತಾನೆ ಸಿಎನ್‌ಎನ್ ಐಬಿಎನ್ ಸಮೀಕ್ಷೆಯಲ್ಲಿ ಶೇ. ೬೦ರಷ್ಟು ಮಂದಿ ಭಯೋತ್ಪಾದನೆಗೂ ಧರ್ಮಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ).
ನಂತರ ಟೀವಿ೯ ದೆಹಲಿ ಪ್ರತಿನಿಧಿ ಶಿವಪ್ರಸಾದ್ ದೂರವಾಣಿ ಮೂಲಕ ಚರ್ಚೆ. ಅದು ಇನ್ನೊಂದು ಅಜ್ಞಾನದ ಅಧ್ಯಾಯ. ಶಿವಪ್ರಸಾದ್ ಬಾಂಬ್ ಪೂರೈಕೆ ಬಗ್ಗೆ ಮಾತನಾಡಿದರು. ಉಗ್ರರಿಗೆ ಪಾಕಿಸ್ತಾನದಿಂದ ಬಾಂಬ್‌ಗಳು ಪೂರೈಕೆ ಆಗುತ್ತಿದ್ದವು. ಈಗ ಇಲ್ಲೇ ತಯಾರಿಸಲಾಗುತ್ತಿದೆ ಎಂದರು.
ಇವರಾದ ನಂತರ ಮೈಸೂರಿನ ಟೀವಿ೯ ಪ್ರತಿನಿಧಿ ಗಂಜಿಗೆರೆ ಸುರೇಶ್ ಅಖಾಡಕ್ಕಿಳಿದರು. ಸುರೇಶ್ ಚರ್ಚೆಗೆ ಬರಲು ಇದ್ದ ಏಕೈಕ ಕಾರಣ ನಿನ್ನೆ ಮೈಸೂರಿನಲ್ಲಿ ಮೂವರು ಶಂಕಿತರನ್ನು ಬಂಧಿಸಿದ್ದು. ಆಗ ತಾನೇ ನಿದ್ರೆಯಿಂದ ಎದ್ದು ಬಂದಂತೆ ಮಾತನಾಡಿದ ಸುರೇಶ್ ಮೈಸೂರಿಗೆ ಗಂಡಾಂತರ ಕಾದಿದೆ ಎಂಬ ಹೊಸ ಬಾಂಬ್ ಹಾಕಿದರು.
ಇಷ್ಟಕ್ಕೂ ದಸರಾ ವೇಳೆ ಗಲಭೆ ಸೃಷ್ಟಿಸಬಹುದು ಎನ್ನುವ ಹಿನ್ನೆಲೆಯಲ್ಲಿ ಮೂವರನ್ನು ಸಂಶಯಾಸ್ಪದವಾಗಿ ಬಂಧಿಸಲಾಗಿದೆ. ಆದರೆ ಸುರೇಶ್ ಮಾತುಗಳಲ್ಲಿ ಈ ಮೂವರು ಶಂಕಿತ ಉಗ್ರರಾಗಿಬಿಟ್ಟರು.
ಅಲ್ಲಿಗೆ ಚರ್ಚೆ ಮುಗಿಯಿತು. ಇದಿಷ್ಟೂ ಸುದ್ದಿಯನ್ನು ಪ್ರಸಾರ ಮಾಡಿದ ಟೀವಿ೯ ಏನನ್ನು ಹೇಳಿತು? ಎಂದು ಮಾತ್ರ ಕೇಳಬೇಡಿ. ಒಂದು ಸುದ್ದಿಯನ್ನು ಸುದ್ದಿಯಾಗಿ ಅಷ್ಟೆ ನೋಡದೆ ಅದನ್ನು ವರ್ಣರಂಜಿತವಾಗಿ ಉಣಬಡಿಸುವ ಇಂಥ ಉಮೇದಿಗೆ ಏನು ಹೇಳಬೇಕು?

ಇನ್ನೊಂದು ಮಾತು.
ಸುವರ್ಣ ಕನ್ನಡ ವಾಹಿನಿ ಕುರಿತು. ಸುವರ್ಣ ವಾಹಿನಿಯ ವಾರ್ತಾ ವಾಚಕಿ ಶ್ವೇತ ದೆಹಲಿಯ ಪ್ರತಿನಿಧಿ ಪ್ರಶಾಂತ ನಾತು ಅವರಿಗೆ ದೂರವಾಣಿ ಕರೆ ಮಾಡಿ ಅಹ್ಮದಾಬಾದ್‌ನಲ್ಲಿ ಬಾಂಬ್ ಸಿಕ್ಕಿರುವುದರಿಂದ ದೆಹಲಿಯ ಪರಿಸ್ಥಿತಿ ಹೇಗಿದೆ ಎಂಬ ಅಸಂಬದ್ಧ ಪ್ರಶ್ನೆಯನ್ನು ಕೇಳಿದರು. ಥಟ್ಟನೆ ಉತ್ತರ ಕೊಟ್ಟ ಪ್ರಶಾಂತ್ ಏನೂ ಗೊತ್ತಿಲ್ಲ ಶ್ವೇತ ಎಂದರು. ಆಮೇಲೆ ಮೊನ್ನೆಯ ದಾಳಿಯಿಂದ ಜನ ಸ್ವಲ್ಪ ಆತಂಕಗೊಂಡಿದ್ದಾರೆ ಶ್ವೇತ ಎಂದರು. ಇವರಿಬ್ಬರ ಸಂಭಾಷಣೆ ಸ್ನೇಹಿತರೀರ್ವರ ನಡುವಿನ ದೂರವಾಣಿ ಮಾತುಕತೆಯಂತಿತ್ತು.
ಯೋಚಿಸಿ, ಸುವರ್ಣ ಚಾನೆಲ್ ದೆಹಲಿ ಪ್ರತಿನಿಧಿಗೆ ದೂರವಾಣಿ ಮಾಡಿ ಮಾತನಾಡಿಸಿ ಜನರಿಗೆ ಕೊಟ್ಟ ಮಾಹಿತಿಯಾದರೂ ಏನು? ಹೀಗೆ ಬೇಡದ ವಿಚಾರಗಳನ್ನು ಚ್ಯೂಯಿಂಗ್ ಗಮ್ ರೀತಿ ಜಗಿಯುವ ಕೆಟ್ಟ ಚಪಲ ಯಾಕೆ?

Sunday, September 28, 2008

ಸ್ಟುಡಿಯೋದಲ್ಲಿ ವರ್ಣಭೇದ ನೀತಿ!!

ಒಂದು ವಾರದ ಹಿಂದಿನ ಮಾತು. ಮರೆಯುವ ಮುನ್ನ ದಾಖಲಿಸಿ ಬಿಡುವುದು ಒಳ್ಳೆಯದು. ಟೈಮ್ಸ್ ನೌ ಸುದ್ದಿವಾಹಿನಿಯಲ್ಲಿ ಚರ್ಚೆ. ಆರ್ನಾಬ್ ಗೋಸ್ವಾಮಿ ಜತೆ ಅಂದು ಕಪಿಲ್ ಸಿಬಲ್ (ಕಾಂಗ್ರೆಸ್), ಡಿ.ರಾಜ (ಸಿಪಿಐ), ಅರುಣ್ ಜೈಟ್ಲಿ (ಬಿಜೆಪಿ) ಹಾಗೂ ಪತ್ರಕರ್ತ ಎಂ. ಜೆ ಅಕ್ಬರ್ ಇದ್ದರು.
ಗೋಸ್ವಾಮಿ ಗೊತ್ತಲ್ಲ. ಟಿಪಿಕಲ್ ಇಂಗ್ಲಿಷ್ ಚಾನೆಲ್ ಪತ್ರಕರ್ತ. ಪ್ರಶ್ನೆ ಕೇಳೋ ಧಾಟಿಯಲ್ಲೇ ನನಗೆ ಈ ಪ್ರಶ್ನೆಗೆ ಉತ್ತರ ಬೇಕೇ ಬೇಕು ಎನ್ನುವ ದನಿ ಇರುತ್ತೆ. ಅದಕ್ಕಿಂತ ಮುಖ್ಯವಾಗಿ ಚರ್ಚೆ ವೇಳೆ ಒಂದಿಷ್ಟು ವಿವಾದಾತ್ಮಕ ಹೇಳಿಕೆಗಳು ಹೊರಬಂದು ದೇಶಾದ್ಯಂತ ಚರ್ಚೆ ಆದರೆ ಅಂತಹದೊಂದು ಕಾರ್ಯಕ್ರಮ ನಡೆಸಿಕೊಟ್ಟದ್ದು ಸಾರ್ಥಕ ಎಂದೇ ಅನೇಕ ಪತ್ರಕರ್ತರು ಲೆಕ್ಕ ಹಾಕುತ್ತಾರೆ.
ಅಂದೂ ಅದೇ ತೆರನ ಚರ್ಚೆ. ಮುಂದಿನ ಲೋಕಸಭಾ ಚುನಾವಣೆ ಎಂದರೆ ಅದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಪೈಪೋಟಿ. ಬಿಜೆಪಿ ಅಡ್ವಾನಿಯನ್ನು ತನ್ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದೆ. ಕಾಂಗ್ರೆಸ್ ನಿಂದ ಮನಮೋಹನ್ ಸಿಂಗ್. ಪ್ರಧಾನಿ ಹುದ್ದೆಗೆ ಇವರೀರ್ವರಲ್ಲಿ ಯಾರು ಬಲಾಢ್ಯರು ಎಂದು ಚರ್ಚೆ. ಸಿಬಲ್ ಹೇಳುವಂತೆ as of now Manmohan Singh is PM candidate of the Congress. ಚರ್ಚೆ ಕೇವಲ ಕಾಂಗ್ರೆಸ್ ಹಾಗೂ ಬಿಜೆಪಿ ಸುತ್ತಲೇ ಸುತ್ತುತ್ತಿತ್ತು.
ಒಂದು ಹಂತದಲ್ಲಿ ಗೋಸಾಮಿ ಅಡ್ವಾನಿ ಹಾಗೂ ಸಿಂಗ್ ಯಾರು ಸ್ಟ್ರಾಂಗ್ ಎಂದು ನಾಲ್ಕೂ ಮಂದಿಗೆ ಕೇಳಿದರು. ಎಂದಿನಂತೆ ಸಿಬಲ್ ಮನಮೋಹನ ಸಿಂಗ್ ಎಂದರೆ, ಜೈಟ್ಲಿ ಅಡ್ವಾನಿ ಎಂದರು. ಡಿ. ರಾಜ ಮಾತ್ರ ಈ ದೇಶದ ಜನ ಯಾರು ಪ್ರಧಾನಿ ಅನ್ನೋದನ್ನ ನಿರ್ಧರಿಸುತ್ತಾರೆ ಎಂದರು.
ಗೋಸ್ವಾಮಿ ಸುಮ್ಮನಾಗಲಿಲ್ಲ. "ನೀವು ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ. ನನ್ನ ಪ್ರಶ್ನೆ ಇರುವುದು ಇರುವ ಇಬ್ಬರಲ್ಲಿ ನಿಮಗೆ ಯಾರು ಹಿತವರು" ಎಂದು ಮತ್ತೆ ಕೇಳಿದರು. ರಾಜ ಕೋಪದಿಂದಲೇ "I am not here answer your questions. You can't decide the fight is between Advani and Manmohan Singh. People will decide who should become the PM", ಎಂದು ಗದರಿದರು. ಅಡ್ವಾನಿ - ಸಿಂಗ್ ನಡುವೆ ಒಬ್ಬರನ್ನು ಆಯ್ಕೆ ಮಾಡುವುದು ರಾಜನಿಗೆ ಸರಿಬರದ ಕಾರಣ ಹಾಗೆ ಮಾತನಾಡಿದ್ದರು.
ತಮಿಳುನಾಡಿನ ಕುಗ್ರಾಮ ಒಂದರಲ್ಲಿ ಒಂದಿಂಚು ಜಮೀನಿಲ್ಲದ ರೈತ ಕಾರ್ಮಿಕ ಕುಟಂಬದಲ್ಲಿ ಜನಿಸಿದ ರಾಜಾ ಆ ಹಳ್ಳಿಯವರ ಪೈಕಿ ವಿಶ್ವವಿದ್ಯಾನಿಲಯ ಮೆಟ್ಟಿಲು ಹತ್ತಿ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೊದಲಿಗ. ಇಂದು ರಾಜ ಸಿಪಿಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ. ಎಡ ಪಕ್ಷಗಳ ನೇತಾರರಲ್ಲಿ ಸಿದ್ಧಾಂತ ನಿಷ್ಠೆ ಹಾಗೂ ಸ್ಷಷ್ಟ ಧೋರಣೆ ಹೊಂದಿರುವ ಕೆಲವರಲ್ಲಿ ಅವರೂ ಒಬ್ಬರು. ಕುಗ್ರಾಮದಿಂದ ದೆಹಲಿ ಹಂತದ ವರೆಗೆ ನಡೆದ ದಾರಿ ಸುಗಮವೇನಾಗಿರಲಿಲ್ಲ. ಆದರೆ ಇಂಗ್ಲಿಷ್ ದೃಶ್ಯ ಮಾಧ್ಯಮ ಅವರನ್ನು ನಡೆಸಿಕೊಳ್ಳುವ ರೀತಿ ಇದೆಯಲ್ಲ, ಅದು ಅತ್ಯಂತ ಆಕ್ಷೇಪಾರ್ಹ.
ಮೇಲೆ ಉಲ್ಲೇಖಿಸಿದ ಚರ್ಚೆಯನ್ನು ವೀಕ್ಷಿಸಿದವರಿಗೆ ನೆನಪಿರಬಹುದು. ಡಿ. ರಾಜ ತಮ್ಮ ಅಭಿಪ್ರಾಯ ಮಂಡಿಸುವಾಗಲೆಲ್ಲ ಚಾನೆಲ್ ಸ್ಕ್ರೀನ್ ಮೇಲೆ ಕಾಣಿಸುತ್ತಿದ್ದುದು ಅರುಣ್ ಜೈಟ್ಲಿ. ರಾಜನ ದನಿ ಕೇಳುತ್ತಿತ್ತಷ್ಟೆ. ಅವರು ಮಾತು ಮುಗಿಸಬೇಕು ಅನ್ನುವಾಗ ಕೆಮರಾ ಒಮ್ಮೆ ಅವರನ್ನು ಹಾದು ಗೋಸ್ವಾಮಿ ಸೇರುತ್ತಿತ್ತು. ಎಡಪರ ಚಿಂತನೆಗಳಿಂದ ಕೂಡಿದ ರಾಜನ ಮಾತುಗಳಿಗೆ ವ್ಯಂಗ್ಯ ನಗು ತೋರುತ್ತಿದ್ದ ಜೈಟ್ಲಿಯನ್ನು ವೀಕ್ಷಕರು ನೋಡಬೇಕೆ? ಇದು ಒಂದು ಬಾರಿಯಲ್ಲ. ಕಾರ್ಯಕ್ರಮದ ಉದ್ದಕ್ಕೂ.. ಯಾಕೆ ಹೀಗೆ? ಟೈಮ್ಸ್ ನೌ ಸುದ್ದಿ ವಾಹಿನಿ ಒಂದು ಪ್ರಮುಖ ಪಕ್ಷದ ರಾಷ್ಟ್ರಿಯ ಕಾರ್ಯದರ್ಶಿಯನ್ನು ನಡೆಸಿಕೊಳ್ಳುವ ರೀತಿನಾ ಇದು? ಅಥವಾ ರಾಜ ನಂತಹ ನಿಮ್ನ ವರ್ಗ ಪ್ರತಿನಿಧಿಸುವ ನಾಯಕರನ್ನು ಹೀಗೇ ನಡೆಸಿಕೊಳ್ಳಬೇಕೆನ್ನುವುದು ಟೈಮ್ಸ್ ನೌ ನೀತಿಯೇ?
ಜಾತೀಯತೆ, ವರ್ಣಭೇದ ನೀತಿ ಬದಲಾದ ಕಾಲಘಟ್ಟದಲ್ಲಿ ಸುದ್ದಿ ವಾಹಿನಿಗಳ ಸ್ಟುಡಿಯೋಗಳಿಗೂ ಪ್ರವೇಶಿಸಿ ಬಿಟ್ಟವೆ?

ಅವರದ್ದು ಮತಾಂತರ.. ಇವರದ್ದೇನು?

"ಗುಡ್ಡ ಗಾಡು ಜನರಿಗೆ, ದಲಿತರಿಗೆ ಬೇಕಾದ ಮೂಲ ಸೌಲಭ್ಯ ಕೊಟ್ಟು, ಅವರೊಳಗೆ ಧಾರ್ಮಿಕ ಸಂಸ್ಕಾರ ಬೆಳೆಸುತ್ತೇವೆ..."
ಹೀಗಂದರು ಪೇಜಾವರ ಶ್ರೀಗಳು. ಭಾನುವಾರ ಬೆಳಗ್ಗೆ ಸುವರ್ಣ ನ್ಯೂಸ್ ಚಾನೆಲ್‌ನಲ್ಲಿ ಬರುವ ವಾಕ್ಪಥದ ಈ ವಾರದ ಅತಿಥಿ ಅವರು. ಕ್ರೈಸ್ತ ಮತಸ್ಥರು ಆಮಿಷವೊಡ್ಡಿ ಮತಾಂತರ ನಡೆಸುತ್ತಿದ್ದಾರೆ ಎಂದು ಹುಯಿಲಿಡುತ್ತಿರುವ ಹಿಂದೂ ಸಂಘಟನೆಗಳ ಪರ ವಕಾಲತ್ತು ವಹಿಸಿದ ಶ್ರೀಗಳು ಕಡೆಗೂ ಮಾತನಾಡಿದ್ದು ಮತಾಂತರದ ಮಾತನ್ನೇ.
ಗುಡ್ಡಗಾಡುಗಳಲ್ಲಿ ಇರುವ ಶೂದ್ರರು, ಹಿಂದುಳಿದವರನ್ನು ಹಿಂದೂಗಳನ್ನಾಗಿ ಮತಾಂತರಿಸಲು ಹೊರಟಿರುವ ಇವರು ಹೇಳುತ್ತಿರುವುದು ಯಾವ ಸಂಸ್ಕಾರದ ಬಗ್ಗೆ? ಶೂದ್ರರಾಗಲಿ, ಹಿಂದುಳಿದವರಾಗಲಿ ಈಗ ಸಂಸ್ಕಾರವಂತರಾಗಿಲ್ಲವೆ? ಅಥವಾ ಶತಮಾನಗಳಿಂದ ಅವರು ನಂಬಿಕೊಂಡು ಬದುಕುತ್ತಿರುವ ಆಚಾರ-ವಿಚಾರಗಳು ಸಂಸ್ಕಾರಯುತವಾಗಿಲ್ಲವೆ? ಅಥವಾ ಪೇಜಾವರರ ಪ್ರಕಾರ ಅಬ್ರಾಹ್ಮಣವಾದ ಎಲ್ಲ ವಿಧಿಗಳು ಸಂಸ್ಕಾರದಿಂದ ಕೂಡಿರುವುದಿಲ್ಲವೆ? ಪೇಜಾವರರು ಹೇಳಬೇಕು.
ಆದರೆ ಅವರೇನು ಹೇಳುತ್ತಾರೆಂದು ಗೊತ್ತಿದ್ದು, ಅಂಥ ಉತ್ತರಗಳು, ಪ್ರತಿಕ್ರಿಯೆಗಳು ಹೊರಬರುವಂತೆ ಪ್ರಶ್ನೆ ಸಿದ್ಧ ಮಾಡಿಕೊಂಡು ಬಂದಿದ್ದವರು ವಾಕ್ಪಥದ ಆಂಕರ್ ವಿಜಯಕರ್ನಾಟಕ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್. ಮಾತಷ್ಟೇ ಅಲ, ಶ್ರೀಗಳು ಹೇಳುವ ಪ್ರತಿ ಮಾತಿಗೂ ಸಮ್ಮತಿ ಇದೆ ಎಂಬ ಹಾಗೆ ಶಲ್ಯಧಾರಿಯಾಗಿ ವಿನಮ್ರರಾಗಿ ಕಾಣಿಸಿಕೊಂಡರು.
ಪರಿಣಾಮವಾಗಿ ಕಳೆದ ಹದಿನೈದಿಪ್ಪತ್ತು ದಿನಗಳಲ್ಲಿ ಬಜರಂಗಿಗಳು, ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನೆ ನಡೆಸಿದ ದೌರ್ಜನ್ಯಮನ್ನು ಸಮರ್ಥಿಸಿಕೊಳ್ಳುವುದಕ್ಕೆ ಸುವರ್ಣ ನ್ಯೂಸ್ ಭಾನುವಾರ ವೇದಿಕೆಯಾಯಿತು.
ಕಾರ್ಯಕ್ರಮದ ಉದ್ದಕ್ಕೂ ಶಾಂತಿ, ಸಾಮರಸ್ಯ ಇರಬೇಕು ಎಂಬ ಮಾತುಗಳನ್ನು ಆಡುತ್ತಲೇ ಇದ್ದ ಶ್ರೀಗಳು, ಭಜರಂಗಿಗಳು ಅನುಸರಿಸಿದ ಹಿಂಸಾ ಮಾರ್ಗದ ಬಗ್ಗೆ ಸೊಲ್ಲೆತ್ತಲಿಲ್ಲ. ಬಜರಂಗಿಗಳ ಅತಾರ್ಕಿಕ, ಅನಾಗರಿಕವಾದ ನಡವಳಿಕೆ ಬಗ್ಗೆ ಸಂವೇದನೆಯುಳ್ಳ ಮನುಷ್ಯನಾಗಿ ಮಾತನಾಡಲೇ ಇಲ್ಲ. ಬದಲಿಗೆ ಅವರು ಹೇಳಿದ್ದು; ಚರ್ಚ್‌ಗಳು ಹೆಚ್ಚು ಸಂಘಟಿತವಾಗಿವೆ. ಹಿಂದೂ ದೇಗುಲಗಳು ಹಾಗಿಲ್ಲ. ಸಂಘಟಿಸಿ ಬೆಳೆಸುವುದಕ್ಕೆ ವಿಶ್ವ ಹಿಂದೂ ಪರಿಷತ್‌ನಂಥ ಸಂಘಟನೆಗಳು ಬೇಕು ಎಂಬಂಥ ಮಾತುಗಳನ್ನು.
ಕ್ರೈಸ್ತರು ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ ಎಂಬುದು ಹಿಂದೂ ಸಂಘಟನೆಗಳು, ಮಠಾಧೀಶರಗಳ ಕೂಗು. ಪೇಜಾವರರು ಘಂಟಾಘೋಷವಾಗಿ ನಾವು ಗುಡ್ಡಗಾಡುಗಳಲ್ಲಿ ಇರುವ ದಲಿತರು, ನಿರ್ಲಕ್ಷಿತರಿಗೆ ಮೂಲ ಸೌಲಭ್ಯಗಳು ಕೊಟ್ಟು ಉದ್ಧಾರ ಮಾಡುವ, ಅವರಲ್ಲಿ ಧಾರ್ಮಿಕ ಸಂಸ್ಕಾರ ಬೆಳೆಸುವ ಮಾತಾಡಿದರು.
ಹೀಗೆ ಪೇಜಾವರ ಶ್ರೀಗಳು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಹಾಗೆ ಮಾತಾಡುತ್ತಿದ್ದರೆ ಇದನ್ನೆಲ್ಲಾ ಮೂಕರಾಗಿ ಕೇಳುತ್ತಿದ್ದವರು ಸಂದರ್ಶಕ ವಿಶ್ವೇಶ್ವರ ಭಟ್. ಈ ಸಂದರ್ಭದಲ್ಲಿ ವಿಶ್ವೇಶ್ವರ ಭಟ್ ಸಂದರ್ಶಕರೋ ಅಥವಾ ವೀಕ್ಷಕರೋ ಎನ್ನುವ ಅನುಮಾನ ಕೂಡ ಎಡೆಯಾಡಿತು.
ಇದೇ ಹೊತ್ತಿನಲ್ಲಿ ರಾಷ್ಟ್ರೀಯ ವಾಹಿನಿ ಸಿಎನ್‌ಎನ್ ಐಬಿಎನ್‌ನಲ್ಲಿ ಮತ್ತೊಂದು ಕಾರ್ಯಕ್ರಮ ಪ್ರಸಾರವಾಯಿತು. ರಾಜ್ ದೀಪ್ ಸರದೇಸಾಯಿ ನಡೆಸಿಕೊಡುವ ವೀಕೆಂಡ್ ಎಡಿಷನ್‌ನ "ಟೆರರ್ ನೇಷನ್ ವಾಯ್ಸ್" ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಹಾನಗರಗಳಲ್ಲಿ ನಡೆದ ಬಾಂಬ್ ಸ್ಪೋಟ ಕುರಿತ ವಿವಿಧ ಆಯಾಮಗಳ ಚರ್ಚೆ ನಡೆಯಿತು. ಇದರಲ್ಲಿ ಮಧ್ಯಪ್ರದೇಶದ ಬಿಜೆಪಿ ಸಂಸದ ರಾಜ್ ಪ್ರತಾಪ್ ರೂಡಿ, ಕಾಂಗ್ರೆಸ್ ಸಂಸದೆ ಜಯಂತಿ ನಟರಾಜನ್ ಹಾಗೂ ಕವಿ ಜಾವೇದ್ ಅಖ್ತರ್ ಭಾಗವಹಿಸಿದ್ದರು.
ಬಿಜೆಪಿ ಸಂಸದ ರಾಜ್ ಪ್ರತಾಪ್ ಸಿಮಿ ಸಂಘಟನೆ ಕುರಿತು ಕೆಂಡಕಾರಿದರು. ಮುಸ್ಲಿಮರು ಸಿಮಿಯನ್ನು ಬೆಂಬಲಿಸುತ್ತಾರೆ ಎಂದು ಆರೋಪಿಸಿದರು. ಆದರೆ ಭಜರಂಗಿಗಳನ್ನು ಸಮರ್ಥಿಸಿಕೊಂಡರು. ಹಾಗೆಯೇ ಕೊಲೆಗೈದ ಧಾರಾಸಿಂಗ್‌ ಪರ ವಕಾಲತ್ತು ವಹಿಸಿದರು.
ಇದಕ್ಕೆ ಸ್ಪಷ್ಟನೆ ಕೊಟ್ಟ ಜಾವೇದ್ ಅಖ್ತರ್, "ನಾನು ಸಿಮಿ ಎಂಬ ಮೂಲಭೂತವಾದಿ ಸಂಘಟನೆಯನ್ನು ವಿರೋಧಿಸುತ್ತೇನೆ. ನಿಷೇಧಿಸಿದರೆ ಇನ್ನೂ ಸಂತೋಷ. ಆದರೆ ನೀವು ಹಿಂದೂ ಮೂಲಭೂತವಾದಿಗಳನ್ನು ಬೆಂಬಲಿಸುತ್ತೀರಿ, ಪರವಹಿಸುತ್ತೀರಿ" ಎಂದರು.
ಅಲ್ಲಿ ಉತ್ತರ ಭಾರತದಲ್ಲಿ ರಾಜ್ ಪ್ರತಾಪ್ ರೂಡಿ ಮಾಡುತ್ತಿರುವುದನ್ನೇ ಇಲ್ಲಿ ಪೇಜಾವರರು ಮಾಡುತ್ತಿದ್ದರು. ಆದರೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ಜತೆಗೆ ಸಿಎನ್‌ಎನ್ ಐಬಿಎನ್ ವಾಹಿನಿ ನಡೆಸಿದ ಅಭಿಮತ ಸಂಗ್ರಹದಲ್ಲಿ ಶೇ. ೧೭ ರಷ್ಟು ಮಂದಿ "ಭಜರಂಗದಳ ಕೂಡ ಒಂದು ಉಗ್ರವಾದಿ ಸಂಘಟನೆ" ಎಂದಿದ್ದಾರೆ!! ಇದೇ ಅಭಿಮತ ಭಯೋತ್ಪಾದನೆಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಎತ್ತಿ ಹಿಡಿದಿದೆ. ಶೇ. ೬೦ಕ್ಕೂ ಹೆಚ್ಚು ಮಂದಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಗಮನಿಸಿ, ಇಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಮಠಾಧೀಶರ ಮುಂದೆ ನಿಂತು ನೀವು ಹೇಳಿದ್ದೇ ಸರಿ ಎಂದು ತಲೆ ಅಲ್ಲಾಡಿಸುತ್ತಿದ್ದರೆ, ಅಲ್ಲಿ ಮತ್ತೊಬ್ಬ ಪತ್ರಕರ್ತ ರಾಜ್ ದೀಪ್ ಸರದೇಸಾಯಿ ಜವಾಬ್ದಾರಿಯುತ ವ್ಯಕ್ತಿಗಳ ಜತೆಗೆ ಬದಲಾಗುವ ಪರಿಸ್ಥಿತಿಗೆ ಯಾರು ಹೊಣೆ? ಮಂದೇನು ಮಾಡಬೇಕು? ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದರು.

Friday, September 26, 2008

ದಿನೇಶ್ ಅವರ "ದೇಸಿಮಾತು.."

ದಿನೇಶ್ ಕುಮಾರ್ ಎಸ್.ಸಿ. ಈ ಹೊತ್ತಿನ ಬಹುಮುಖ್ಯ ಕನ್ನಡದ ಚಿಂತಕರಲ್ಲಿ ಒಬ್ಬರು. ಅವರ ಬ್ಲಾಗ್ ದೇಸಿಮಾತು ನಲ್ಲಿರುವ ಅವರ ಬರಹಗಳನ್ನು ಓದುವ ಎಲ್ಲರಿಗೂ ಅವರ ಸೈದ್ಧಾಂತಿಕ ನೆಲಗಟ್ಟು, ಸಮಾಜ ಮುಖಿ ಆಲೋಚನೆ ಸ್ಪಷ್ಟವಾಗಿ ಗೊತ್ತು. ದಿನೇಶ್ ಮೂಲತಃ ಪತ್ರಕರ್ತ. ಒಂದು ಸಂಜೆ ಪತ್ರಿಕೆ ನಡೆಸುವ ಹೊಣೆ ಹೊತ್ತಿದ್ದಾರೆ. ಬೆಂಗಳೂರಿನಂತಹ ನಗರದಲ್ಲಿ ಸಂಜೆ ಪತ್ರಿಕೆ ನಡೆಸುವ ಕೆಲಸ ಸಾಮಾನ್ಯವೇನಲ್ಲ. ವೃತ್ತಿ ಜತೆ ಸಾಮಾಜಿಕ ಹೋರಾಟಗಳಲ್ಲೂ ಅವರು ಭಾಗಿ. ದೇಶದ ತುಂಬಾ ವೃತ್ತಿಪರ ಶಿಕ್ಷಣ ಕೋರ್ಸ್ ಗಳಲ್ಲಿ ಮೀಸಲಾತಿಗೆ ವಿರೋಧ ಮಾಡಿ ಕೆಲವು ಪಟ್ಟಭದ್ರರು ಮತ್ತು ಸಾಮಾಜಿಕ ಸ್ಥಿತಿಗತಿ ತಿಳಿಯದ ಹುಡುಗರು ಹೋರಾಟ ಮಾಡುತ್ತಿದ್ದಾಗ, ದಿನೇಶ್ ಮತ್ತವರ ಸ್ನೇಹಿತರು ಬೆಂಗಳೂರಿನಲ್ಲಿ ಮೀಸಲಾತಿ ಪರವಾಗಿ ಬೃಹತ್ ರಾಲಿ ಮಾಡಿದ್ದರು. ಇತ್ತೀಚೆಗೆ ಹಿಂದುಳಿದ ವರ್ಗ ಆಯೋಗದಡಿ ನಡೆಯಬೇಕಿರುವ ಜಾತಿವಾರು ಜನಗಣತಿಯನ್ನು ಖಾಸಗಿಯವರಿಗೆ ವಹಿಸುವ ನಿರ್ಧಾರ ವಿರೋಧಿಸಿ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ಕೂತಿದ್ದರು. ವಿರೋಧ ಪಕ್ಷಗಳ ನೇತಾರರು ಇವರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.ದಿನೇಶ್ ಸದ್ಯ ತಮ್ಮ ಬ್ಲಾಗಿನಲ್ಲಿ ಅತ್ಯುತ್ತಮ ಲೇಖನವೊಂದನ್ನು ಬರೆದಿದ್ದಾರೆ. ಮಠಮಾನ್ಯಗಳಿಗೆ ಇಂದಿನ ರಾಜ್ಯ ಸರಕಾರ ಕೊಡುತ್ತಿರುವ ಮಾನ್ಯತೆ ಕಂಡು ಅವರು ಬೇಸತ್ತಿದ್ದಾರೆ. ಕರ್ನಾಟಕ ರಾಜಕಾರಣವನ್ನು ಬಹುಕಾಲ ಆಳಿದ ಲೋಹಿಯಾವಾದಿಗಳು ಇಂದಿನ ಸರಕಾರದಲ್ಲಿ ಇಲ್ಲವಾಗಿದ್ದಾರೆ. ಲೋಹಿಯಾ ಯಾಕೆ ಇಂದು ಬಹುಮುಖ್ಯವಾಗಿ ನೆನಪಾಗುತ್ತಾರೆ ಎನ್ನುವುದಕ್ಕೆ ನೀವು ಈ ಲೇಖನ ಓದಲೇಬೇಕು. ಲೇಖನದ ಕೊಂಡಿ ಇಲ್ಲಿದೆ

Thursday, September 25, 2008

ಸೂತಕದ ಮನೆಯಲ್ಲಿ ನಗೆಯ ಸ್ವಾಗತ ಬಯಸುವುದು ತರವೆ?

ಪತ್ರಕರ್ತರ ಮೇಲೆ ಒಂದು ಆರೋಪ ಇದೆ. ಅವರು ಅನೇಕ ಸಾರಿ ತಮಗನಿಸಿದ್ದನ್ನ ಸಾರ್ವತ್ರಿಕಗೊಳಿಸಿ ಬರೆಯುತ್ತಾರೆ. ಮತ್ತು ತಾವು ಬರೆದದ್ದೇ ಸತ್ಯ ಎಂಬ ದಾರ್ಷ್ಟ್ಯದಿಂದಲೇ ಅವರ ಬರಹ ಕೂಡಿರುತ್ತದೆ. ಈ ಆರೋಪಕ್ಕೆ ತಕ್ಕ ಉದಾಹರಣೆ ದಿನಾಂಕ ಸೆ.೨೪ ರಂದು ಉದಯವಾಣಿ ಮುಖಪುಟದಲ್ಲಿ ಪ್ರಕಟವಾದ ಒಂದು ವರದಿ.

ಹಜವಾಗಿ ಬಿಷಪ್ ಡಾ. ಬರ್ನಾರ್ಡ್ ಮೊರಸ್ ಬೇಸತ್ತಿದ್ದರು. ಚರ್ಚ್ ಮೇಲಿನ ದಾಳಿಗಳು ಎಂಟು ದಿನಗಳಾದರೂ ನಿಲ್ಲಲೇ ಇಲ್ಲ. ಮಂಗಳೂರಿನ ಚರ್ಚ್‌ಗಳಲ್ಲಿ ಪ್ರಾರ್ಥನಾ ನಿರತ ನನ್‌ಗಳು ದಾಳಿಗೆ ತುತ್ತಾಗಿದ್ದರು. ಅವರ ದೈವ ಏಸು ಕೈ, ಕಾಲು ಮುರಿದುಕೊಂಡು ಅಂಗವಿಕಲನಾಗಿದ್ದ. ಒಂದರ ಹಿಂದೆ ಒಂದರಂತೆ ೨೮ ಚರ್ಚ್‌ಗಳ ಮೇಲೆ ದಾಳಿಯಾಗಿತ್ತು. ಅವರ ಬೇಸರಕ್ಕೆ ಬಲವಾದ ಮತ್ತೊಂದು ಕಾರಣ, ದಾಳಿ ಹೊಣೆ ಹೊತ್ತ ಬಜರಂಗ ದಳ ಆಡಳಿತದಲ್ಲಿರುವ ಬಿಜೆಪಿಗೆ ಆಪ್ತಮಿತ್ರ. ಸರಕಾರವೇ ಚರ್ಚ್‌ಗಳ ದಾಳಿಗೆ ನಿಂತುಬಿಟ್ಟರೆ, ನ್ಯಾಯ ಕೇಳುವುದು ಎಲ್ಲಿ ಎಂಬ ಆತಂಕ ಅವರಲ್ಲಿ ಮನೆಮಾಡಿತ್ತು. ಅದನ್ನು ಹೊರಹಾಕಲು ಸರಿಯಾದ ಸಮಯ ಸಿಕ್ಕಿರಲಿಲ್ಲ. ಕಳೆದ ಸೋಮವಾರ (ಸೆ.೨೨) ಮುಖ್ಯಮಂತ್ರಿ ಸಾಂತ್ವನ ಹೇಳಲು ಬಂದಾಗ ದು:ಖ, ಬೇಸರ ಕಟ್ಟೆ ಒಡೆಯಿತು. . “We are hurt. We are hurt. Jesus is god for us. What would you do if your garbha gudis are attacked” ಎಂದು ನೋವನ್ನು ತೋಡಿಕೊಂಡರು. ನೆರೆದಿದ್ದ ಛಾಯಾಗ್ರಾಹಕರಿಗೆ, ವಿದ್ಯುನ್ಮಾನ ಮಾಧ್ಯಮದವರಿಗೆ ಅದು ಅಪೂರ್ವ ಅವಕಾಶ. ಮಾರನೇ ದಿನ ಎಲ್ಲೆಡೆ ಪ್ರಚಾರವಾಯಿತು.ಇಷ್ಟನ್ನೇ ಇಟ್ಟುಕೊಂಡು ಉದಯವಾಣಿ ವರದಿಗಾರರೊಬ್ಬರು ಮುಖಪುಟ ಲೇಖನ ಸಿದ್ದಪಡಿಸಿದ್ದಾರೆ. ಅವರ ಐದು ಕಾಲಂ ಸುದ್ದಿಯ ಒಂದಂಶ ಎಂದರೆ - ನಾಡಿನ ಮುಖ್ಯಮಂತ್ರಿ ಜ್ವರದಿಂದ ಬಳಲುತ್ತಿದ್ದರೂ ತಮ್ಮನ್ನು ಭೇಟಿ ಮಾಡಲು ಬಂದಾಗ ಬಿಷಪ್ ಹೀಗೆ ನಡೆದುಕೊಳ್ಳಬಾರದಿತ್ತು. ಹಾಗೂ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಏರ್ಪಟ್ಟಿದ್ದು, ಬಿಷಪ್ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ರವಾಗಿದೆ.ಇವರು ಲೇಖನದಲ್ಲಿ ಪದೇ ಪದೇ ಉಲ್ಲೇಖಿಸುವ ಸಾರ್ವಜನಿಕ ವಲಯ ಯಾವುದು? ವಿಧಾನ ಸೌಧದ ಮೂರನೇ ಮಹಡಿಯೇ? ಬಿಜೆಪಿ ವಲಯವೇ? ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣ ಅಂಗಳವೇ ಅಥವಾ ಉದಯವಾಣಿ ಕಚೇರಿ ಪ್ರಾಂಗಣವೇ? ವರದಿಗಾರರು ನಾಲ್ಕು ಮಂದಿ ಓದುಗರನ್ನಾದರೂ ಮಾತನಾಡಿಸಿ ಬರೆಯುವ ಪ್ರಯತ್ನ ಮಾಡಬಹುದಿತ್ತು. ಅದಾವುದೂ ಇಲ್ಲದೆ ತಮಗನಿಸಿದ್ದನ್ನ ಸಾರ್ವತ್ರಿಕ ಮಾಡಿ ಬರೆದು ಬಿಡಬಹುದೆ?ಇದೇ ಧಾಟಿಯಲ್ಲಿ ವಿಜಯ ಕರ್ನಾಟಕ ಓದುಗರ ಅಂಕಣದಲ್ಲಿ ಒಂದು ಪತ್ರ ಪ್ರಕಟವಾಗಿದೆ (ಸೆ.೨೪) ಅದರಂತೆ ಬಿಷಪ್ ವರ್ತನೆ ಮುಖ್ಯಮಂತ್ರಿಗೆ ಮಾಡಿದ ಅವಮಾನವಂತೆ. ಮುಖ್ಯಮಂತ್ರಿಗೆ ಅವಮಾನ ಮಾಡಿದರೆ ಅದು ನಾಡಿಗೇ ಅವಮಾನ ಮಾಡಿದಂತೆ ಎಂದು ತಮ್ಮಯ್ಯ ಎಂಬ ಓದುಗ (?) ಅಭಿಪ್ರಾಯಪಟ್ಟಿದ್ದಾರೆ.ಒಂದು ಕ್ಷಣ ಹಾವೇರಿಯಲ್ಲಿ ಗೋಲಿಬಾರ್‌ನಿಂದ ಸತ್ತ ರೈತನನ್ನು ಜ್ಙಾಪಿಸಿಕೊಳ್ಳಿ. ದು:ಖತಪ್ತ ಕುಟುಂಬಕ್ಕೆ ಮುಖ್ಯಮಂತ್ರಿಯೂ ಭೇಟಿ ನೀಡಿದ್ದರು. ರೈತನ ತಾಯಿ ದು:ಖಿಸುತ್ತ ನನ್ನ ಮಗನ್ನ ನಿಮ್ಮ ಪೊಲೀಸರು ಕೊಂದರು. ನೀವೆಷ್ಟೇ ದುಡ್ಡ ಕೊಟ್ಟರೂ ಮಗ ಬರ್ತಾನೇನಪ್ಪಾ.. ಎಂದು ಪ್ರಶ್ನೆ ಮಾಡಿದರು. ನಾಡಿನ ಮುಖ್ಯಮಂತ್ರಿ ಮನೆಗೆ ಭೇಟಿ ನೀಡಿದಾಗ ಆ ಮುದುಕಿ ಅಳುತ್ತಾ ಸ್ವಾಗತ ನೀಡಬಾರದಿತ್ತು. ಅದು ನಾಡಿನ ದೊರೆಗೆ ಮಾಡಿದ ಅವಮಾನ. ಹಾಗಾಗಿ ಇಡೀ ನಾಡಿಗೇ ಮಾಡಿದ ಅವಮಾನ ಎಂದು ಯಾರಾದರೂ ಮಾತನಾಡುವುದು ತರವೇ? ಅಂತೆಯೇ ಬಿಷಪ್ ಮನೆ. ಅದೂ ಸೂತಕದ ಮನೆ. ಇಲ್ಲಿ ದು:ಖಕ್ಕೆ ನೇರವಾಗಿ ಕಾರಣಾರದವರು ಬಿಜೆಪಿ ಮಿಲಿಟೆಂಟ್ ವಿಂಗ್ - ಬಜರಂಗ ದಳ. ತನ್ನ ಪಕ್ಷದ ಹುಡುಗರಿಂದ ದಾಳಿ ಮಾಡಿಸಿ, ಇಡೀ ಸಮುದಾಯವನ್ನು ಆತಂಕಕ್ಕೆ ನೂಕಿದ ಮುಖ್ಯಮಂತ್ರಿಗೆ ಸೂತಕದ ಮನೆಯಲ್ಲಿ ನಗೆಯ ಸ್ವಾಗತ ಬಯಸುವುದು ತರವೇ?
(ಚಿತ್ರಕೃಪೆ: ಕನ್ನಡಪ್ರಭ)

Wednesday, September 24, 2008

ಮಾತನಾಡಿದರೆ ಹುಷಾರ್.. ಸ್ವಾಮೀಜಿ ಧಮಕಿ!!!

ಚಿತ್ರದುರ್ಗ ಹತ್ತಿರದ ಸಿರಿಗೆರೆಯಲ್ಲಿ ಬುಧವಾರ ಒಂದು ಕಾರ್ಯಕ್ರಮ. ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಿದ್ದರು. ಹೊನ್ನಾಳಿ ರೇಣುಕಾಚಾರ್ಯ ಕಾರ್ಯಕ್ರಮಕ್ಕೆ ತಡವಾಗಿ ಬಂದರಂತೆ. ಸಿರಿಗೆರೆ ಹಿರಿ ಶ್ರೀ ಶಿವಮೂರ್ತಿ ಶಿವಾಚಾರ್ಯ ರೇಣುಕಾಚಾರ್ಯರನ್ನು ಹತ್ತಿರಕ್ಕೆ ಕರೆದು ನೆರೆದಿದ್ದ ಸಮಸ್ತರಿಗೆ ಕೇಳುವಂತೆ, ಪಕ್ಕದಲ್ಲಿದ್ದ ಮುಖ್ಯಮಂತ್ರಿಗೆ ಮನವರಿಕೆಯಾಗುವಂತೆ ಶಾಸಕನನ್ನು ಝಾಡಿಸಿದರಂತೆ. ಪ್ರಜಾವಾಣಿ ವರದಿ ಪ್ರಕಾರ ಸ್ವಾಮಿ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ಅವರ ಮಾತಿನ ಸಾರಾಂಶ - ನೀವು ಇನ್ನು ಮುಂದೆ ಮುಖ್ಯಮಂತ್ರಿಯವರ ಬಗ್ಗೆಯಾಗಲಿ, ಬಿಜೆಪಿ ಸರಕಾರದ ಬಗ್ಗೆಯಾಗಲಿ, ಬಹಿರಂಗ ಹೇಳಿಕೆ ನೀಡಕೂಡದು. ಆಜ್ಞೆಗೆ ತಪ್ಪಿದರೆ...ಹುಷಾರ್! ಎಂದು ಸನ್ಮಾನ್ಯ ಗುರು ಗುಟುರಿದ್ದಾರೆ.
ಒಂದು ಕ್ಷಣ ದಿಗಿಲಾಯಿತು. ಸಿರಿಗೆರೆ ಶ್ರೀಗಳು ಅದ್ಯಾವಾಗ ಕರ್ನಾಟಕ ಬಿಜೆಪಿ ಅಧ್ಯಕ್ಷರಾದರು?
ಇದುವರೆಗೆ ಪತ್ರಿಕೆಗಳಲ್ಲಿ ಗಮನಿಸಿದಂತೆ, ಪಕ್ಷದ ಅಧ್ಯಕ್ಷರು ಇಂತಹ ಎಚ್ಚರಿಕೆ ನೀಡುವುದು ಸಾಮಾನ್ಯ. ಆದರೆ, ಸಿರಿಗೆರೆ ಶ್ರೀಗೆ ಈ ಹೆಚ್ಚುವರಿ ಜವಾಬ್ದಾರಿ ನೀಡಿದ್ದು ಯಾರು?
ಜನರಿಂದ ಆಯ್ಕೆಯಾದ ಶಾಸಕನಿಗೆ ಎಚ್ಚರಿಕೆ ನೀಡುವಷ್ಟು ದಾಷ್ಟ್ಯ ಯಾವುದೋ ಒಂದು ಜಾತಿಯ ಒಂದು ಪಂಗಡಕ್ಕೆ ಸೀಮಿತರಾಗಿರುವ ಸ್ವಾಮೀಜಿಗೆ ಏಕೆ? Is he an extra constitutional authority?
ರೇಣುಕಾಚಾರ್ಯ ಶ್ರೀಗಳ ಮಾತಿಗೆ ತಕ್ಕ ಉತ್ತರ ನೀಡುವಷ್ಟು ಸಮರ್ಥನಲ್ಲ. 'ಆಯ್ತು ಸ್ವಾಮಿ' ಎಂದು ಹಲ್ಕಿರಿಯುತ್ತ ಹಿಂದೆ ಸರಿದಿರುತ್ತಾರೆ. ಪಾಪ ಆತನಿಗೂ ಮತಗಳು ಬೇಕು. ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕು.
ಹಿಂದೆ ಇದೇ ಸ್ವಾಮೀಜಿ ಎಚ್. ವಿಶ್ವನಾಥ್ ಶಿಕ್ಷಣ ಮಂತ್ರಿಯಾಗಿದ್ದಾಗ 'ಕಡತ ತಗೊಂಡು ನಮ್ಮ ಮಠಕ್ಕೆ ಬನ್ನಿ. ಆಡಳಿತ ನಡೆಸೋದು ಹೇಗೆ ಅಂತ ಹೇಳ್ತೀನಿ' ಎಂದು ಆಜ್ಞೆ ಹೊರಡಿಸಿದ್ದರು. ವಿಶ್ವನಾಥ್ ನಮ್ರವಾಗಿ ನಿಮ್ಮ ಮಠಕ್ಕೆ ಒಬ್ಬ ಭಕ್ತನಾಗಿ ಹಾರ ಹಿಡಿದು ಬರುತ್ತೇನೆ ಹೊರತು, ಕಡತ ತರುವುದಿಲ್ಲ ಎಂದಿದ್ದರು. ಆ ನಂತರ ಅಂದಿನ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಸಾರ್ವಜನಿಕ ಸಮಾರಂಭವೊಂದರಲ್ಲಿ ಸ್ವಾಮೀಜಿ ಕಾಲಿಗೆ ಬಿದ್ದು ಕ್ಷಮೆ ಕೇಳಿ, ವಿಶ್ವನಾಥ್ ರನ್ನು ಬೇರೆ ಖಾತೆಗೆ ವರ್ಗಾಯಿಸಿದ್ದು ಈಗ ಇತಿಹಾಸ.
(ಚಿತ್ರ ಕೃಪೆ: ಪ್ರಜಾವಾಣಿ)

Tuesday, September 23, 2008

ಟಾರ್ಗೆಟ್ ಮಾಡುವುದು ಎಂದರೆ ಇದೇ ಅಲ್ಲವೇ?

ಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದೆ. ಮುಖ್ಯಮಂತ್ರಿ ಸೋಮವಾರ (ದಿನಾಂಕ - ಸೆಪ್ಟಂಬರ್ ೨೨) ತುರ್ತು ಸಂಪುಟಸಭೆ ನಂತರ ಪತ್ರಿಕೆಗಳೊಂದಿಗೆ ಮಾತನಾಡುತ್ತಾ, ಸಂಸದ ಸಾಂಗ್ಲಿಯಾನ ಚಟುವಟಿಕೆಗಳ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಅನೇಕ ಚರ್ಚ್‌ಗಳು ದಾಳಿಗೊಳಗಾದವು. ಬಜರಂಗದಳ ಮುಖಂಡ ಮಹೇಂದ್ರ ಕುಮಾರ್ ದಾಳಿ ಹೊಣೆ ಹೊತ್ತ. ಆದರೂ ತಕ್ಷಣ ಆತನ ಬಂಧನವಾಗಲಿಲ್ಲ. ಇರಲಿ. ಈ ವಿಧ್ವಂಸಕ ಚಟುವಟಿಕೆ ನಡೆಸುತ್ತಿರುವ ಬಜರಂಗದಳ ಚಟುವಟಿಕೆಗಳ ಮೇಲೆ ನಿಗಾ ಇಡಬೇಕಾದ ಮುಖ್ಯಮಂತ್ರಿ, ಅಂತಹ ದಾಳಿಗಳನ್ನು ವಿರೋಧಿಸಿದ ಸಂಸದ ಸಾಂಗ್ಲಿಯಾನ ಚಟುವಟಿಕೆ ಮೇಲೆ ನಿಗಾ ಇಡುತ್ತಾರಂತೆ! ಇವರೂ ಒಬ್ಬ ಮುಖ್ಯಮಂತ್ರಿ, ಅವರದೂ ಒಂದು ಆಡಳಿತ..
ಕೊಡಗಿನಲ್ಲೂ ಚರ್ಚ್ ಮೇಲೆ ದಾಳಿ ಆಗಿದೆ ಸ್ವಾಮಿ ಎಂದರೆ, ಹೌದೌದು, ಅಲ್ಲಿಯೂ ಮತಾಂತರಕ್ಕೆ ಸಂಬಂಧ ಪಟ್ಟಂತೆ ಹಲವರನ್ನು ಬಂದಿಸಲಾಗಿದೆ ಎನ್ನುತ್ತಾರೆ ಮುಖ್ಯಮಂತ್ರಿ.
ಜೀಸಸ್ ನಮಗೆ ದೇವರು. ನಿಮ್ಮ ಗರ್ಭಗುಡಿಯನ್ನು ಯಾರಾದರೂ ಹಾನಿ ಮಾಡಿದರೆ ಏನು ಮಾಡುತ್ತೀರಿ ಎಂದು ಬಿಷಪ್ ದು:ಖದಿಂದ ಪ್ರಶ್ನಿಸುತ್ತಿದ್ದರೆ, ಈ ರಾಜ್ಯ ಮತಾಂತರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತದಂತೆ?
ಹೋಗಲಿ, ಸಾಂಗ್ಲಿಯಾನಾ ಮೇಲೆ ನಿಗಾ ಇಡಲು ಇರುವ ಕಾರಣಗಳಾದರೂ ಏನು?
ಅವರು ಇತ್ತೀಚೆಗೆ ವಿವಾದಿತ ಪುಸ್ತಕ ಸತ್ಯದರ್ಶಿನಿವನ್ನು ಪ್ರಕಟಿಸಿದ್ದಾರೆ ಎಂದು ಆರೋಪ ಎದುರಿಸುತ್ತಿರುವ ನ್ಯೂಲೈಫ್ ಟ್ರಸ್ಟ್‌ನ ಸ್ಯಾಮುಎಲ್ ಜತೆ ಪತ್ರಿಕಾಗೋಷ್ಠಿ ನಡೆಸಿದರು. ಸ್ಯಾಮುಎಲ್ ಆ ಪುಸ್ತಕಕ್ಕೂ ತಮಗೂ ಸಂಬಂಧವಿಲ್ಲ, ನಮ್ಮಿಂದ ಬಲವಂತದ ಮತಾಂತರ ನಡೆಯುತ್ತಿದ್ದರೆ ತನಿಖೆಯಾಗಲಿ ಎಂದರು. ಸಾಂಗ್ಲಿಯಾನ ಮಾತನಾಡುತ್ತಾ ಅಲ್ಪಸಂಖ್ಯಾತರಿಗೆ ಕರ್ನಾಟಕದಲ್ಲಿ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದರು. ಅದು ತಪ್ಪೆ? ಅವರ ಮೇಲೆ ನಿಗಾ ಇಡಲು ಆದೇಶಿಸುವಷ್ಟು ಘೋರ ಅಪರಾಧವೇ?
ಸಾಂಗ್ಲಿಯಾನ ರಾಜ್ಯದ ಮತಾಂತರ ಚಟುವಟಿಕೆಗಳ ಬೆಂಬಲಕ್ಕಿದ್ದಾರೆ ಎನ್ನುವುದು ಇನ್ನೊಂದು ಆರೋಪ. ಹಿಂದೂ ಸಂಘಟನೆಗಳು ಮತಾಂತರ ಕುರಿತಂತೆ ಮಾತನಾಡಲು ನೈತಿಕವಾಗಿ ಹಕ್ಕಿಲ್ಲದವರು. ಇತಿಹಾಸ ಗಮನಿಸಿದರೆ ಹಿಂದೂ ಧರ್ಮ ಎಂದು ಹೆಸರು ಹುಟ್ಟುಹಾಕಿ, ಗುಡ್ಡಗಾಡುಗಳಲ್ಲಿ ಮಾರಮ್ಮ, ಮಲೆ ಮಹದೇಶ್ವರ, ವೀರಭದ್ರ, ಉಚ್ಚಂಗೆ ಎಲ್ಲಮ್ಮ, ಚೌಡಮ್ಮ.. ಹೀಗೆ ಅನೇಕ ಸ್ಥಳೀಯ ದೇವ-ದೇವತೆಗಳನ್ನು ಪೂಜಿಸುತ್ತಾ ತಮಗೊಂದು ಧರ್ಮದ ಅಗತ್ಯವೇ ಇಲ್ಲವೆಂಬಂತೆ ಬದುಕುತ್ತದ್ದ ಕೋಟಿ ಕೋಟಿ ಜನರಿಗೆ ನೀವು ಹಿಂದೂ ಎಂದು ಹಣೆಪಟ್ಟಿ ಕಟ್ಟಿ ಮತಾಂತರ ಮಾಡಿದವರು ಇದೇ ಜನ.
ಶಿಕ್ಷಣಕ್ಕೆ, ಉತ್ತಮ ವೈದ್ಯಕೀಯ ಸೇವೆಗೆ, ಅಸ್ಪೃಶ್ಯತೆ ಇಲ್ಲದ ಜೀವನ ನಡೆಸಲು ಮತಾಂತರ ಆಗುವುದಾದರೆ ಅಗಲಿ ಬಿಡಿ. ಅದರಿಂದ ಇವರಿಗೇನು ತೊಂದರೆ.
ಪತ್ರಿಕಗಳೂ, ಬಜರಂಗದಳಕ್ಕಿಂತ ಸಾಂಗ್ಲಿಯಾನ ಹೆಚ್ಚು ಅಪಾಯಕಾರಿ ಎಂಬಂತೆ ಬಿಂಬಿಸುತ್ತಿವೆ. ಕನ್ನಡಪ್ರಭ (ದಿನಾಂಕ ಸೆ.೨೩ ಆವೃತ್ತಿ) ವರದಿಯೊಂದು ಹೇಳುತ್ತೆ, ಸಾಂಗ್ಲಿಯಾನ ಭಾಗವಹಿಸಿದ್ದ ಸಭೆಯೊಂದರಲ್ಲಿ ಒಂದು ಗುಂಪು ರಾಷ್ಟ್ರಗೀತೆ ಹಾಡುವಾಗ ಎದ್ದುನಿಂತು ಗೌರವಿಸಲಿಲ್ಲ. ಸಾಂಗ್ಲಯಾನ ಸಭೆಯಲ್ಲಿ ಹಾಜರಿದ್ದರೂ ಅದನ್ನು ಪ್ರತಿಭಟಿಸಲಿಲ್ಲ ಎಂಬುದು ಪತ್ರಿಕೆ ದೂರು. ಉದ್ದೇಶಪೂರ್ವಕವಾಗಿ ಒಬ್ಬರನ್ನು ಟಾರ್ಗೆಟ್ ಮಾಡುವುದು ಎಂದರೆ ಇದೇ ಅಲ್ಲವೇ?