Thursday, June 25, 2009

ಉತ್ತಮ ಸಮಾಜಕ್ಕಾಗಿ...!!!

ಕೆಲ ದಿನಗಳ ಹಿಂದಿನಿಂದ ಇಂತಹದೊಂದು ಸುದ್ದಿ ಹರಿದಾಡುತ್ತಿದೆ. ಟಿವಿ9 ಸುದ್ದಿ ವಾಹಿನಿ ವರದಿಗಾರನೊಬ್ಬ ಇತ್ತೀಚೆಗೆ ತಾನೆ ಪದವಿ ಕಳೆದುಕೊಂಡ ಮಂತ್ರಿಯೊಬ್ಬರೊಂದಿಗೆ ವ್ಯವಹಾರ ನಡೆಸಿ ಸರಿಸುಮಾರು ಒಂದು ಕೋಟಿ ರೂಗಳಷ್ಟು ಹಣ ಸಂಗ್ರಹಿಸಿದ್ದಾನೆ. 'ಉತ್ತಮ ಸಮಾಜ ನಿರ್ಮಾಣ'ದ ಹೊಣೆಹೊತ್ತಿರುವ ವಾಹಿನಿಗೆ ಕಳಂಕ ತರುವಂತಹ ಸುದ್ದಿ ಇದು. ಸ್ವತಃ ಆ ರಾಜಕಾರಣಿಯೇ ಈ 'ಸತ್ಯ'ವನ್ನು ಹೊರಹಾಕಿದ್ದಾರೆ!
ಆ ವರದಿಗಾರ ತನ್ನ ಆಫೀಸಿನ ಮುಖ್ಯಸ್ಥ, ಮುಖ್ಯ ವರದಿಗಾರ.. ಹೀಗೆ ಎಲ್ಲರಿಗೂ ಹಣ ನೀಡಬೇಕು ಎಂದೆಲ್ಲಾ ಹೇಳಿ ಆ ರಾಜಕಾರಣಿಯಿಂದ ಹಣ ಪಡೆದಿದ್ದಾನೆ ಎನ್ನುವುದು ಸುದ್ದಿ. ಆ ಬೃಹತ್ ಮೊತ್ತ ನೀಡಿ ಒಂದು ಸುದ್ದಿ ವಾಹಿನಿಯೊಂದರ 'ಒಲವ'ನ್ನು ಗಳಿಸಿಕೊಳ್ಳುವಂತಹ ಅನಿವಾರ್ಯತೆ ಆ ರಾಜಕಾರಣಿಗೆ ಯಾಕಿತ್ತು ಎನ್ನುವುದು ಕೇಳಲೇಬೇಕಾದ ಪ್ರಶ್ನೆ. ಒಂದಂತೂ ಸತ್ಯ, ಆ ಹಣ 'ಕೃಷ್ಣನ ಲೆಕ್ಕ'ಕ್ಕೆ ಸೇರಿದ್ದು. ಆ ಕಾರಣ ಅವರು ಯಾರಲ್ಲಿಯೂ ಬಹಿರಂಗವಾಗಿ ದೂರುವಂತಿಲ್ಲ.
ಈ ಸುದ್ದಿ ಮುಖ್ಯಸ್ಥರಿಗೆ ಗೊತ್ತಾಗುತ್ತಿದ್ದಂತೆಯೇ ಆ ವರದಿಗಾರನನ್ನು ಮನೆಗೆ ಕಳುಹಿಸಿದ್ದಾರೆ. ಪತ್ರಿಕೋದ್ಯಮದ 'ಓಂ' ಕಾರ ಕಲಿಯುತ್ತಿರುವಾಗಲೇ ಇಷ್ಟು ಹಣ ಮಾಡಿಕೊಂಡ ಮೇಲೆ ಕೆಲಸ ಹೋದರೇನಂತೆ?
ಇತ್ತ ಆ ರಾಜಕಾರಣಿ ದುಡ್ಡಿನ ಆಸೆಯನ್ನೂ ಬಿಟ್ಟಿದ್ದಾರೆ. ತಿರುಪತಿ ಹುಂಡಿಗೆ ಹಾಕಿದೆ ಎಂದುಕೊಂಡು ಸುಮ್ಮನಾದರೂ ಅಚ್ಚರಿಯಿಲ್ಲ.
ಟಿವಿ9 ಬೆಂಗಳೂರಿನಲ್ಲಿ ಬೇರು ಬಿಟ್ಟಾಗಿನಿಂದ ಹಲವು ಕುಟುಕು ಕಾರ್ಯಾಚರಣೆಗಳನ್ನು ಮಾಡಿ, ಲಂಚ ಬಾಕರನ್ನು ವೀಕ್ಷಕರಿಗೆ ತೋರಿಸಿದೆ. ಆದರೆ ತಮ್ಮ ಮನೆಯಲ್ಲಿಯೇ ಇದ್ದವನನ್ನು ಹುಡಕಲಾಗಲಿಲ್ಲ. ಇನ್ನು ಅದರ ಬಗ್ಗೆ ಸುದ್ದಿ ಮಾಡುವುದಂತೂ ದೂರದ ಮಾತು.
ಮಾಧ್ಯಮ ಕ್ಷೇತ್ರದಲ್ಲಿ ಭ್ರಷ್ಟಾಚಾರ ತೀರಾ ಸಾಮಾನ್ಯ ಎನ್ನುವ ಮಾತುಗಳು ಹೆಚ್ಚೆಚ್ಚು ಕೇಳಿ ಬರುತ್ತಿವೆ. ನಿಜ. ಭ್ರಷ್ಟರಿದ್ದರು, ಇದ್ದಾರೆ ಹಾಗೆಯೇ ಮುಂದೆಯುಊ ಇರಬಹುದು. ಆದರೆ ಪರಿಸ್ಥಿತಿ ಈ ಮಟ್ಟಿಗೆ ಹಾಳಾಗುತ್ತಿದೆ ಎಂದಾಕ್ಷಣ ಎಚ್ಚೆತ್ತುಕೊಳ್ಳಬೇಕಿರುವುದು ಸುದ್ದಿ ಸಂಸ್ಥೆಗಳ ಜವಾಬ್ದಾರಿ. ಇಂದು ಟಿವಿ9 ಬಗ್ಗೆ ಮಾತನಾಡಲು ಒಂದಿಷ್ಟು ಸರಕು ಸಿಕ್ಕಿರಬಹುದು. ಹಾಗಂತ ಬೇರೆ ಸುದ್ದಿವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ಇರುವವರೆಲ್ಲ ಸಭ್ಯರು ಎಂದಲ್ಲ. ದುಡ್ಡಿಗಾಗಿ ಸಂಸ್ಥೆಯ ಹೆಸರು, ತಮ್ಮ ಮಾನವನ್ನು ಮಾರಿಕೊಳ್ಳುವವರ ಸಂಖ್ಯೆ ಒಟ್ಟು ಪತ್ರಕರ್ತರ ಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆಯೆ. ಆದರೂ ಅಂತಹವರ ಕಾರಣ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು.
ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆ ಕ್ರಮೇಣ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಎದುರು ಪತ್ರಕರ್ತ ತೀರಾ ಸಣ್ಣವನಾಗುತ್ತಾನೆ. ಸುದ್ದಿ ಕೇಳಲು ಹೋದರೆ ಒಂದಿಷ್ಟೂ ಮರ್ಯಾದೆ ಕೊಡದೆ ನಡೆಸಿಕೊಳ್ಳಬಹುದು. "ನೀವೇನ್ರಿ, ಒಂದಿಷ್ಟು ದುಡ್ಡು ಬಿಸಾಕಿದ್ರೆ ನನ್ನ ಮನೆ ಮುಂದೆ ನಾಯಿ ತರಹ ಬಿದ್ದಿರ್ತೀರಿ ಎಂದು" ದಬಾಯಿಸ ಬಹುದು. ಈ ಕಾರಣಗಳಿಗಾಗಿ ಸುದ್ದಿ ಸಂಸ್ಥೆಗಳು ಎಚ್ಚರ ವಹಿಸುವ ಅಗತ್ಯವಿದೆ. ವೃತ್ತಿಗೆ ಬದ್ಧರಾಗಿ, ನಿಯತ್ತಿನಿಂದ ದುಡಿಯುವ ಮನಸ್ಸುಗಳು ಬೇಕಾದಷ್ಟಿವೆ. ಅವರಿಗೆ ಅವಕಾಶ ದೊರಕಬೇಕು.
ಆದರೆ, ಸುದ್ದಿ ಸಂಸ್ಥೆ ಮುಖ್ಯಸ್ಥರೇ ಕೈ ಒಡ್ಡಿ ನಿಂತರೆ - ಧರೆಯೇ ಹತ್ತಿ ಉರಿದಂತೆ! ಹಾಗಾಗದಿರಲಿ.

Tuesday, June 16, 2009

ನಾಗ್ತಿಹಳ್ಳಿ ಲೆಕ್ಕಾಚಾರ; ಪ್ರೇಕ್ಷಕನಿಗೆ ಮೋಸ!

ಕೆಲ ವರ್ಷಗಳ ಹಿಂದಿನ ಘಟನೆ. ನೀನಾಸಂನ ಸಂಸ್ಕೃತಿ ಶಿಬಿರದಲ್ಲಿ ಸಮಕಾಲೀನ ಸಿನಿಮಾ ಕುರಿತು ಸಂವಾದ ಏರ್ಪಟ್ಟಿತ್ತು. ಕವಿತಾ ಲಂಕೇಶ್ ಮತ್ತು ಗಿರೀಶ್ ಕಾಸರವಳ್ಳಿ ಸಭೆಯಲ್ಲಿದ್ದರು. ಯುವಕನೊಬ್ಬ ಕೇಳಿದ ಪ್ರಶ್ನೆ ಹೀಗಿತ್ತು - 'ಸಾರ್ವಜನಿಕರು ತಮಗೆ ಯಾವುದೇ ವಸ್ತು ಕೊಂಡಾಗ ಮೋಸವಾದರೆ ಅದನ್ನು ಗ್ರಾಹಕರ ಹಕ್ಕು ಅಧಿನಿಯಮದ ಅಡಿ ಪ್ರಶ್ನಿಸಲು ಅವಕಾಶವಿದೆ. ಅದೇ ರೀತಿ, ಉತ್ತಮ ಚಿತ್ರ, ಮನೆಮಂದಿಯೆಲ್ಲ ಕೂತು ಸಂಭ್ರಮ ಪಟ್ಟು ನೋಡಬಹುದಾದ ಸಿನಿಮಾ ಎಂದೆಲ್ಲಾ ಪ್ರಚಾರ ಮಾಡಿ ಪ್ರೇಕ್ಷಕರನ್ನು ಥಿಯೇಟರಿಗೆ ಸೆಳೆದ ಚಿತ್ರವೊಂದು ಎಲ್ಲಾ ಭರವಸೆಗಳನ್ನು ಹುಸಿ ಮಾಡಿದರೆ, ಅದೇ ಗ್ರಾಹಕರ ಕಾಯ್ದೆ ಅಡಿ ಪರಿಹಾರ ಕೇಳಬಹುದೇ?'
ನಾಗ್ತಿಹಳ್ಳಿ ಚಂದ್ರಶೇಖರ್ ಅವರ ಲೇಟೆಸ್ಟ್ ಸಿನಿಮಾ 'ಒಲವೇ ಬದುಕಿನ ಲೆಕ್ಕಾಚಾರ' ನೋಡಿದಾಗಿನಿಂದ ಆ ಯುವಕನ ಪ್ರಶ್ನೆ ಮತ್ತೆ ಮತ್ತೆ ನೆನಪಾಗುತ್ತಿದೆ. ಹಾಗಂತ ನಾಗ್ತಿಹಳ್ಳಿ ಚಿತ್ರದ ಬಗ್ಗೆ ಭಾರೀ ಭರವಸೆ ಇಟ್ಟುಕೊಂಡು ಹೋಗಿದ್ದೆವು ಎಂದೆಲ್ಲ. ಮುಊಲತಃ ಕತೆಗಾರ, ಮಾಡಿದರೆ ವಿಭಿನ್ನ ಚಿತ್ರವನ್ನೇ ಮಾಡುತ್ತಾರೆ ಎಂಬ ಸಣ್ಣ ನಿರೀಕ್ಷೆ ಕೂಡಾ ಹುಸಿಯಾಯಿತು. ನಾಗ್ತಿಹಳ್ಳಿ ಮಾತಿನಲ್ಲಿಯೇ ಹೇಳುವುದಾದರೆ, ಅವರ ಸಿನಿಮಾದ ಬಗ್ಗೆ ನಮಗಿದ್ದ ಲೆಕ್ಕಾಚಾರ ತಪ್ಪಾಗಿತ್ತು.
ಲೋಪದೋಷಗಳನ್ನು ಪಟ್ಟಿ ಮಾಡುತ್ತಾ ಕೂತರೆ ದೊಡ್ಡ ಪಟ್ಟಿಯೇ ಆಗಿಬಿಡುತ್ತದೆ. ಅದು ಒತ್ತಟ್ಟಿಗಿರಲಿ. ನಾಗ್ತಿಹಳ್ಳಿ ಈ ಸಿನಿಮಾ ಮುಊಲಕ ಹೇಳಲು ಹೊರಟಿರುವುದು ಏನನ್ನು ಎನ್ನುವುದು ಮುಖ್ಯ ಪ್ರಶ್ನೆ. ಜುಬ್ಬಾಧಾರಿಗಳು ಅಲಿಯಾಸ್ ಬುದ್ಧಿಜೀವಿಗಳು ಢೋಂಗಿಗಳು, ಮಾರ್ಕ್ಸ್, ಲೆನಿನ್, ಚೆ, ಫಿಡೆಲ್ ಕಾಸ್ಟ್ರೋ ಎಂದೆಲ್ಲಾ ಮಾತನಾಡುವವರು ಮುಊಲತಃ ಲಂಪಟರು, ಹೊಟೇಲ್ ನಲ್ಲಿ ಚಮಚ ಕದಿಯುವ ಸಣ್ಣ ಮನುಷ್ಯರು, ಹೆಣ್ಣನ್ನು ಕೀಳಾಗಿ ಕಾಣುವವರು ಎಂದು ಬಿಂಬಿಸುವುದರ ಹಿಂದಿನ ಉದ್ದೇಶ ಏನು?
ಇತ್ತೀಚಿನ ದಿನಗಳಲ್ಲಿ ಬುದ್ಧಿಜೀವಿ ಎನ್ನುವ ಪದ ತೀವ್ರ ಅಪಮಾನಕ್ಕೆ ಈಡಾಗುತ್ತಿದೆ. ಒಂದು ಪಟ್ಟಭದ್ರರ ಗುಂಪು ಇಂತಹದೊಂದು ಪ್ರಪಾಗಾಂಡದಲ್ಲಿ ತೊಡಗಿದೆ. ಅವರ ಪ್ರಕಾರ ಜಗತ್ತಿನ ಎಲ್ಲಾ ಬುದ್ಧಿಜೀವಿಗಳು 'ಹುಸಿ ಜಾತ್ಯತೀತವಾದಿಗಳು'. ಕೆಲ ದಿನಗಳ ಹಿಂದೆ ಲೇಖಕ, ಪತ್ರಕರ್ತ ಜೋಗಿ ಒಂದು ಕಾದಂಬರಿ ಬರೆದು ಬಿಡುಗಡೆ ಮಾಡಿದರು. ಅದರ ಮುಖ್ಯ ಪಾತ್ರ ಇಂತಹದೇ ಒಂದು ಬುದ್ಧಿಜೀವಿ. ಆ ಜೀವಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸುತ್ತದೆ. ಪ್ರಶಸ್ತಿಗೆ ನಾನಾ ರೀತಿಯ ಲಾಬಿ ನಡೆಸಿರುತ್ತಾರೆ. ಅವರ ಸುತ್ತಲೇ ಆ ಕಾದಂಬರಿ ಸುತ್ತುತ್ತದೆ, ಆ ಮುಊಲಕ ಒಂದು ವಿಚಾರವಾದಿ ಸಮುಊಹ ಮತ್ತು ಬುದ್ಧಿಜೀವಿ ಗುಂಪನ್ನು ಅದು ವ್ಯಂಗ್ಯದಿಂದಲೇ ಕಾಣುತ್ತದೆ.
ಆ ಕಾದಂಬರಿ ಸಾಧಿಸಲು ಹೊರಟಿದ್ದನ್ನೇ ನಾಗ್ತಿಹಳ್ಳಿ ತನ್ನ ಸಿನಿಮಾ ಮುಊಲಕ ನಿರೂಪಿಸಲು ಶ್ರಮಿಸಿದ್ದಾರೆ. ಅಂದಹಾಗೆ ಅವರ ಪ್ರಯತ್ನಕ್ಕೆ ಜೋಗಿಯವರ ಸಹಕಾರ ಕೂಡ ಇದೆ (ಚಿತ್ರಕತೆಯಲ್ಲಿ ಜೋಗಿಯದು ಮುಖ್ಯ ಪಾತ್ರ). ಉಪನ್ಯಾಸಕನ ಪಾತ್ರ ಶುರುವಾಗುವುದೇ ಕೆಂಪು ಕರವಸ್ತ್ರದಿಂದ ಮುಊಗನ್ನು ಒರೆಸಿಕೊಳ್ಳುವುದರ ಮುಊಲಕ. ಈ ಧೋರಣೆ ಚಿತ್ರದುದ್ದಕ್ಕೂ ಮುಂದುವರೆಯುತ್ತದೆ. ಕಾಲೇಜಿನಲ್ಲಿ ಅರ್ಥಶಾಸ್ತ್ರ ಬೋಧಿಸಬೇಕಾದ ಅವರು ಕ್ರಾಂತಿ ಮಾತನಾಡುತ್ತಾರೆ. ಮನೆಯಲ್ಲಿ ದಿನಕ್ಕೊಬ್ಬ ಹುಡುಗಿಯ ಸಂಗ, ರಾತ್ರಿಯಾದರೆ ಹುಡುಗರೊಟ್ಟಿಗೆ ಡಾಬಾ, ಲೈವ್ ಬ್ಯಾಂಡ್, ಬಿಲ್ ಕೊಡದೆ ಗಲಾಟೆ ಮತ್ತು ಚಮಚ ಕದಿಯುವುದು. ಮದುವೆ ಮತ್ತು ಹುಡುಗಿಯರ ಬಗ್ಗೆ ತೀರಾ ಅಹಸ್ಯ ಎನಿಸುವ ಹೇಳಿಕೆಗಳು ಆತನಿಂದ ಹೊರಬರುತ್ತವೆ. (ಈ ಕಾರಣಕ್ಕೆ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದ್ದು!)
ಮೇಷ್ಟ್ರು ತಮ್ಮ ಅಂಕಪಟ್ಟಿ ಸುಟ್ಟು ಹಾಕಿದ ಪ್ರಕರಣದಿಂದಲೇ ಅವರು ಢೋಂಗಿ ಎನ್ನುವುದು ಹುಡುಗರಿಗೆ ಸಾಬೀತಾಗಿರುತ್ತದೆ. ಆದರೂ ಬಾಲಚಂದ್ರ (ಕಿಟ್ಟಿ) ಅವರ ಕ್ರಾಂತಿಗೆ ಮರುಳಾಗುತ್ತಾನೆ? ಅವರು ಹೇಳಿದ್ದೆಲ್ಲಾ ವೇದವಾಕ್ಯ ಎಂದು ನಂಬುತ್ತಾನೆ. ಪ್ರೀತಿಸಿದ ಹುಡುಗಿಗೆ ಮೋಸ ಮಾಡುತ್ತಾನೆ. ಅವಳಿಂದ ಹಣ ತಂದು ಮೇಷ್ಟ್ರಿಗೆ ಹೆಂಡ ಕುಡಿಸುತ್ತಾನೆ. ಕೊನೆಗೆ ಓಡಿಹೋಗಿ ಇನ್ನೊಬ್ಬ ಢೋಂಗಿ ಜುಬ್ಬಾಧಾರಿ ಬುದ್ಧಿಜೀವಿಯಾಗುತ್ತಾನೆ.
ಕರ್ನಾಟಕದ ಬಹುದೊಡ್ಡ ಬುದ್ಧಿಜೀವಿ ಸಮುದಾಯಕ್ಕೆ ಆಶ್ರಯ ಕೊಟ್ಟ ಮಹಾರಾಜ ಕಾಲೇಜಿನಲ್ಲಿ ಈ ಚಿತ್ರದ ಕಾಲೇಜು ಸನ್ನಿವೇಶಗಳು ಚಿತ್ರೀಕರಣಗೊಂಡಿವೆ. ನಾಗ್ತಿಹಳ್ಳಿಗೆ ಗೊತ್ತಿರಬಹುದು, ಆ ಕಾಲೇಜಿನಲ್ಲಿ ಪಾಠ ಮಾಡಿದ ಕುವೆಂಪು ಇಂದಿನ ಅದೆಷ್ಟೋ ವಿಚಾರವಾದಿಗಳಿಗೆ ಮುಊಲ ಬೇರು. ವಿಚಾರಕ್ರಾಂತಿಗೆ ಕರೆ ನೀಡಿದವರು ಅವರು. ಕನ್ನಡ ಸಾಹಿತ್ಯ ಚಳವಳಿಗಳು ಹುಟ್ಟಿಕೊಂಡದ್ದು ಅಲ್ಲಿಯೇ. ಈಗ್ಗೆ ಕೆಲ ವರ್ಷಗಳ ಹಿಂದಿನ ತನಕ ಅಲ್ಲಿಯೇ ಪಾಠ ಮಾಡುತ್ತಿದ್ದ ಪ್ರೊ.ಕೆ. ಎಸ್. ಭಗವಾನ್, ಕೆ. ರಾಮದಾಸ್ ಚ. ಸರ್ವಮಂಗಳ ಇರತರು 'ಯಾವುದನ್ನೂ ಪ್ರಶ್ನೆ ಮಾಡದೆ ಒಪ್ಪಬೇಡಿ' ಎಂಬ ಪರಂಪರೆಯನ್ನು ಬಹುಕಾಲ ಮುಂದುವರೆಸಿದವರು. ಒಂದಂತೂ ಸತ್ಯ ಪ್ರೊ. ಕೆ. ರಾಮದಾಸ್ ಮಾತು ಕೇಳಿದವನು ಜಾತಿವಾದಿಯಾಗಿರುತ್ತಿರಲಿಲ್ಲ, ಕೋಮುವಾದಿಯಾಗಿರುತ್ತಿರಲಿಲ್ಲ. ಇಂತಹದೊಂದು ಪರಂಪರೆ ಕನ್ನಡದ ಸಂದರ್ಭದಲ್ಲಿ ಸದಾ ಜಾಗೃತವಾಗಿದೆ. ಇದೆಲ್ಲದರ ಸ್ಪಷ್ಟ ಅರಿವು ನಾಗ್ತಿಹಳ್ಳಿಗೂ ಇದೆ. ಆದರೆ ಅವರ ಚಿತ್ರದಲ್ಲಿ ಅದಾವುದೂ ಇಲ್ಲ. ಯಾವ ವಿಚಾರದಲ್ಲೂ ಸಭ್ಯನಲ್ಲದ ಒಂದು ಪಾತ್ರ ಸೃಷ್ಟಿಸಿ ಅದನ್ನು ಬುದ್ಧಿಜೀವಿ, ವಿಚಾರವಾದಿ, ಮಾರ್ಕ್ಸ್ ವಾದಿಗಳಿಗೆ ಸಮೀಕರಿಸುವ ಪ್ರಯತ್ನ ಮಾಡಿದ್ದು ದುರಂತ.
ಈ ಸಿನಿಮಾ ಜಡ (inert). ಅದು ಬೆಳೆಯುವುದೇ ಇಲ್ಲ. ಮೊದಲಾರ್ಧದಲ್ಲಿ ಹುಡುಗರಿಗೆ ಸುಳ್ಳುಹೇಳಿ, ಯಾರದೋ ದುಡ್ಡಲ್ಲಿ ಹೆಂಡ ಕುಡ್ಕೊಂಡು, ಹೆಣ್ಣಿನ ಸಂಗ ಮಾಡ್ಕೊಂಡು ಜೀವನ ಮಾಡ್ತಿದ್ದ ಮೇಷ್ಟ್ರು, ದ್ವಿತೀಯಾರ್ಧ್ಲದಲ್ಲಿ ಜನರಿಗೆ ಸುಳ್ಳುಗಳ 'ಬ್ರಹ್ಮಾಂಡ' ಸೃಷ್ಟಿಸಿ ಮೋಸ ಮಾಡಿ, ವರದಕ್ಷಿಣೆ ಹಣದಲ್ಲಿ ಮಜಾ ಮಾಡುತ್ತಾ ಜೀವನ ಮಾಡ್ತಾರೆ.
ಆ ಪಾತ್ರ ಬದಲಾಗುವುದೇ ಇಲ್ಲ. ಆದರೆ ಚಿತ್ರಕತೆ ಮಾತ್ರ ಮೇಷ್ಟ್ರು ಬದಲಾದರು ಎನ್ನುವಂತೆ ಬಿಂಬಿಸುವ ಪ್ರಯತ್ನ ಮಾಡುತ್ತದೆ. ಮಗು ಮತ್ತು ಪತ್ನಿಯೊಂದಿಗೆ ದೇವಸ್ಥಾನದಿಂದ ಹೊರ ಬರುವ ಮೇಷ್ಟ್ರನ್ನು ನೋಡಿದಾಗ ಬಾಲಚಂದ್ರನ ಪ್ರತಿಕ್ರಿಯೆಯಲ್ಲಿ ಇದನ್ನು ಕಾಣಬಹುದು. ಬಾಲಚಂದ್ರನ ಪ್ರಕಾರ ಮೇಷ್ಟ್ರು 'ನಮಗೆಲ್ಲ ಕ್ರಾಂತಿ ಕ್ರಾಂತಿ ಅಂತ ಬೋಧಿಸಿ, ಈಗ ಮದುವೆ ಮಾಡ್ಕೊಂಡು ಸುಖವಾಗಿದ್ದಾರೆ' ಎಂದು ಭಾವಿಸುತ್ತಾನೆ. ಆ ಮುಊಲಕ ತನ್ನ ಪ್ರೇಯಸಿಯನ್ನು ಹುಡುಕಲು ಮುಂದಾಗುತ್ತಾನೆ. ಇದೇ ವಿಚಿತ್ರ. ಮೇಷ್ಟ್ರು ಮೊದಲು ಹೇಗಿದ್ದರೋ, ಈಗಲೂ ಹಾಗೇ ಇದ್ದಾರೆ. ಹಾಗಿರುವಾಗ ಅವರಲ್ಲಿನ ಯಾವ ಬದಲಾವಣೆ ಅವನನ್ನು ಪ್ರಭಾವಿಸಲು ಸಾಧ್ಯ?
ನಾಗ್ತಿಹಳ್ಳಿಯನ್ನು ತೀವ್ರ ಟೀಕೆಗೆ ಗುರಿಪಡಿಸಬೇಕಾಗಿರುವುದು ಅವರು ಮಹಿಳೆಯರ ಬಗ್ಗೆ ಹೊರಹೊಮ್ಮಿಸುವ ಅಭಿಪ್ರಾಯಗಳಿಗಾಗಿ. ಉದಾಹರಣೆಗೆ ಬಾಲಚಂದ್ರ ತನ್ನ ಕಾಲೇಜಿನ ಮಹಿಳಾ ಸಹೋದ್ಯೋಗಿಗಳನ್ನು ಪರಿಚಯಿಸುವ ಪರಿಯನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. ಜಿಯೋಗ್ರಾಫಿ ಲೆಕ್ಚರರ್ ಭೂಗೋಳವೇ ಸರಿ ಇಲ್ವಂತೆ. ಇಂಗ್ಲಿಷ್ ಉಪನ್ಯಾಸಕಿ ಮುಖ ಕರೆದ ಬೋಂಡವಂತೆ! ಜಗತ್ತಿನಲ್ಲಿ ಇರುವವರು ಎರಡೇ ಜಾತಿಯ ಹುಡುಗಿಯರು - ಕೆಟ್ಟ ಹುಡುಗಿಯರು, ಅತೀ ಕೆಟ್ಟ ಹುಡುಗಿಯರು! ಅದೇ, ಜೋಗಿ/ನಾಗ್ತಿಹಳ್ಳಿ ಚಿತ್ರಕತೆಯಲ್ಲಿ ಯಾವುದೇ ಗಂಡಸಿನ ಬಗ್ಗೆ ಇಂತಹದೊಂದು ಕಾಮೆಂಟ್ ಪಾಸ್ ಮಾಡುವುದಿಲ್ಲ.
ಈ ಚಿತ್ರದಲ್ಲಿ ಬಂದು ಹೋಗುವ ಹೆಣ್ಣಿನ ಪಾತ್ರಗಳ ಮೇಲೆ ಒಂದು ಕಣ್ಣು ಹಾಯಿಸಿ - ಅಪ್ಪನಿಂದ ಹಿಂಸೆಗೆ ಒಳಪಟ್ಟು, ಪ್ರೀತಿಸಿದ ಹುಡುಗನಿಂದ ಮೋಸ ಹೋದ ರುಕ್ಮಿಣಿ; ತಮ್ಮನ ಒಳಿತಿಗಾಗಿ ತನ್ನ ದೇಹವನ್ನು ಅರ್ಪಿಸಲು ಸಿದ್ಧವಿರುವ 'ಅವಳು'; ಮಗನಿಗಾಗಿ ಒಮ್ಮೆ ತಡಕಾಡಿ ಹಳ್ಳಿಗೆ ಹಿಂತಿರುಗುವ ಅಮ್ಮ ಮತ್ತು ಗಡಿಯಲ್ಲಿರುವ ಗಂಡ ಹಾಗೂ ಆತನ ಸಹಚರರ ಒಳಿತಿಗಾಗಿ ಒಂದು ದಿನ ಉಪವಾಸ ಮಾಡುವ ಕಂಪೂಟರ್ ಸೈನ್ಸ್ ಉಪನ್ಯಾಸಕಿ! ಚಿತ್ರದಲ್ಲಿ ಯಾವ ಹೆಣ್ಣು ಪಾತ್ರವೂ ಗಟ್ಟಿಯಾಗಿ ನಿಲ್ಲುವುದಿಲ್ಲ. ಡೈಸಿ ಬೋಪಣ್ಣನ ಪಾತ್ರ ಸವಕಲು. ಆ ಪಾತ್ರ ಬಾಲಚಂದ್ರನಲ್ಲಿ ಬದಲಾವಣೆಗೆ ಕಾರಣವಾಯಿತು ಎಂದು ಹೇಳಲು ಒಂದು ಸನ್ನಿವೇಶ ಸೃಷ್ಟಿಯಾಗಿದೆ. ಆದರೆ ಅದರಲ್ಲಿ ಹೊಸತನ, ಗಟ್ಟಿತನ ಇಲ್ಲ.
ತಾಂತ್ರಿಕ ಅಂಶಗಳಲ್ಲೂ ಚಿತ್ರ ಗಟ್ಟಿಯಾಗಿ ನಿಲ್ಲುವುದಿಲ್ಲ. ಮೊದಲಾರ್ಧದ ಸನ್ನಿವೇಶ ನಡೆಯುವುದು ಹಳ್ಳಿಯಲ್ಲೋ, ಪಟ್ಟಣದಲ್ಲೋ ಗೊತ್ತಾಗುವುದೇ ಇಲ್ಲ. ಅಲ್ಲಿ ಪದವಿ ಕಾಲೇಜಿದೆ, ಲೈವ್ ಬ್ಯಾಂಡ್ ಇರುವ ಬಾರ್ ಇದೆ. ರಿಲಯನ್ಸ್ ಫ್ರೆಶ್ ನೆನಪಿಸುವ ಅಂಗಡಿ ಇದೆ. ಅದೇ ಊರಲ್ಲಿ ಒಂದು ಹಳ್ಳಿಯಲ್ಲಿ ಇರಬಹುದಾದ ಒಂದು ಸಾಮಾನ್ಯ ರೈಲ್ವೇ ನಿಲ್ದಾಣ ಇದೆ ಮತ್ತು ಥಟ್ಟನೆ ಹಳ್ಳಿಯನ್ನು ನೆನಪಿಸುವ 'ರಾತ್ರಿಯಾದರೆ ಬೇಟೆಗೆಂದು ರೈಫಲ್ ಹಿಡಿದು ಹೊರಡುವ' ಅಪ್ಪನ ಸನ್ನಿವೇಶಗಳಿವೆ. ಹಾಗಾದರೆ ಆ ಪ್ರದೇಶ ಯಾವುದು?
ಇನ್ನು ಕ್ಲೈಮಾಕ್ಸ್. ಅದೊಂದು ಸರ್ಕಸ್. ಎರಡು ಕನಸು ಮತ್ತು ಒಂದು ನಿಜ - ಹೀಗೆ ಮುಊರು ಕ್ಲೈಮಾಕ್ಸ್ ಗಳಿವೆ. ರುಕ್ಮಣಿ, ಬಾಲಚಂದ್ರನ ಗೆಳೆಯನನ್ನೇ ಮದುವೆಯಾಗಿರುತ್ತಾಳೆ. ಇದು ಅಚ್ಚರಿ. ಬಾಲಚಂದ್ರ ಮೋಸ ಮಾಡಿ ಅವಳನ್ನು ರೈಲು ನಿಲ್ದಾಣದಲ್ಲಿ ಏಕಾಂಗಿಯಾಗಿ ಬಿಟ್ಟು ಹೋದಾಗ, ಅವಳ ಅಪ್ಪ ಮತ್ತು ಅವಳನ್ನು ಮದುವೆಯಾಗುವ ಕನಸು ಕಾಣುತ್ತಿರುವ (ನೀನಾಸಂ ಅಶ್ವತ್ಧ್) ಅವಳನ್ನು ಹಿಡಿದುಕೊಳ್ಳುತ್ತಾರೆ. ಅಲ್ಲಿಂದ ಅವಳ ಕತೆ ಏನಾಯ್ತು ಗೊತ್ತಿಲ್ಲ. ಆದರೆ ಅಂತ್ಯದ ಹೊತ್ತಿಗೆ, ಬಾಲಚಂದ್ರನ ಗೆಳೆಯನನ್ನೇ ಮದುವೆಯಾಗಿ ಒಂದು ಮಗುವನ್ನು ಹೆತ್ತಿರುತ್ತಾಳೆ. ಇದೆಲ್ಲಾ ಹೇಗಾಯ್ತು ಸ್ವಾಮಿ?
ಅದಕ್ಕೇ ಕೇಳಿದ್ದು ನಾಗ್ತಿಹಳ್ಳಿ ಲೆಕ್ಕಾಚಾರದಲ್ಲಿ ಪ್ರೇಕ್ಷಕನಿಗೆ ಮೋಸವಾಗಿದೆ, ಗ್ರಾಹಕರ ಕಾಯಿದೆ ಅಡಿ ಪರಿಹಾರಕ್ಕೆ ಅರ್ಜಿ ಹಾಕಬಹುದೆ?

Tuesday, June 9, 2009

ಬಿಜೆಪಿ ಸೋತಿದ್ದೇಕೆ? ಸುಧೀಂದ್ರ ಕುಲಕರ್ಣಿಯನ್ನು ಒಮ್ಮೆ ಕೇಳಿ ನೋಡಿ...

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು ಏಕೆ? ಈ ಪ್ರಶ್ನೆಗೆ ವಿವರವಾಗಿ ಮತ್ತು ನಿಖರವಾಗಿ ಉತ್ತಿರಿಸಿರುವವರು ಅದೇ ಬಿಜೆಪಿ ಜತೆ ಗುರುತಿಸಿಕೊಂಡಿರುವ ಸುಧೀಂದ್ರ ಕುಲಕರ್ಣಿ. ಅವರ ಉತ್ತರ ಕಟ್ಟರ್ ಬಿಜೆಪಿಗಳಿಗೆ ಸರಿ ಕಂಡಿಲ್ಲ. "ಅದು ಅವರ ವೈಯಕ್ತಿಕ ಅಭಿಪ್ರಾಯ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ಹೊತ್ತಿನಲ್ಲಿ ಸುಧೀಂದ್ರ ಕುಲಕರ್ಣಿ ಎತ್ತಿರುವ ಗಂಭೀರ ಪ್ರಶ್ನೆಗಳನ್ನು ಕುರಿತು ಬಿಜೆಪಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.
143 ಸ್ಥಾನಗಳಷ್ಟು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ನಾಲ್ಕು ರಾಜ್ಯಗಳಲ್ಲಿ ಇನ್ನೂ ಬಿಜೆಪಿಗೆ ನೆಲೆಯುಊರಲು ಸಾಧ್ಯವೇ ಆಗದಿರುವಾಗ, ಆ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಸುಲಭದ ಮಾತಲ್ಲ. ದೇಶದ ಜನಸಂಖ್ಯೆಯಲ್ಲಿ ಹಿಂದು ಮತಬ್ಯಾಂಕ್ ಸೃಷ್ಟಿಸಿ ಅದರ ಆಧಾರದ ಮೇಲೆ ಅಧಿಕಾರ ಹಿಡಿಯ ಹೊರಟವರಿಗೆ, ಆ 'ಮತಬ್ಯಾಂಕ್' ತೀರಾ ಚಿಕ್ಕದು ಎಂಬುದರ ಅರಿವಾಗಿದೆ. ಹಿಂದು ಸಮುದಾಯದ ಒಂದು ಸಣ್ಣ ಗುಂಪು ಮಾತ್ರ ಬಿಜೆಪಿಗೆ ಬೆನ್ನುಲುಬಾಗಿ ನಿಂತಿದೆಯೇ ಹೊರತು, ಬಹುಸಂಖ್ಯಾತರು ಇತರ ಪಕ್ಷಗಳ ಒಲವು-ನಿಲುವುಗಳಲ್ಲಿ ಹರಿದು ಹಂಚಿಹೋಗಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಕಾರಣಕ್ಕೆ ಒಂದು ಪಕ್ಷಕ್ಕೆ ಮತ ನೀಡಬೇಕು ಎಂದು ಆಲೋಚಿಸುವ ಮನಸುಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಈಗಾಗಲೇ ಮುಸ್ಲಿಂ ಹಾಗೂ ಕ್ರೈಸ್ತರ ವಿರೋಧ ಕಟ್ಟಿಕೊಂಡಾಗಿದೆ. ಗುಜರಾತ್ ಗಲಭೆ ಮತ್ತು ಇತ್ತೀಚಿನ ಚರ್ಚ್ ದಾಳಿಯಂತಹ ಪ್ರಕರಣಗಳು ಈ ವಿರೋಧವನ್ನು ಮತ್ತಷ್ಟು ಸದೃಢಗೊಳಿಸಿವೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ತನ್ನ ಕೋಮುವಾದಿ ಸಿದ್ಧಾಂತದ ನೆಲೆಯಿಂದ ಹೊರಬಂದು ಯೋಚಿಸಬೇಕಿದೆ. ಇದನ್ನೇ ಸುಧೀಂಧ್ರ ಕುಲಕರ್ಣಿ ತಮ್ಮ ತೆಹಲ್ಕಾ ಲೇಖನದಲ್ಲಿ ಹೇಳಿದ್ದು.
ಅವರು ಸಾಚಾರ್ ಸಮಿತಿ ವರದಿಗೆ ಬಿಜೆಪಿ ನಾಯಕರು ನೀಡಿದ ಪ್ರತಿಕ್ರಿಯೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಆ ವರದಿ ಭಾರತದಲ್ಲಿನ ಮುಸಲ್ಮಾನರ ದೈನೇಸಿ ಸ್ಥಿತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ಇಷ್ಟು ದಿನ ಆಡಳಿತ ಮಾಡಿದರೂ, ಅವರ ಏಳಿಗೆ ಸಾಧ್ಯವಾಗಿಲ್ಲ ಎನ್ನುವ ವಿಚಾರ ಮುಂದೆ ಮಾಡಿ ವಾದ ಮಾಡುವುದನ್ನು ಬಿಟ್ಟು, ಬಿಜೆಪಿ ಇಡೀ ವರದಿಯನ್ನೇ ಸಾರಾಸಗಟಾಗಿ ತಿಸ್ಕರಿಸಿ ತಪ್ಪು ಮಾಡಿತು ಎನ್ನುತ್ತಾರೆ ಕುಲಕರ್ಣಿ. ಮುಸಲ್ಮಾನರ ಏಳಿಗೆಗಾಗಿ ಸರಕಾರ ಕೈಗೊಳ್ಳುವ ಯಾವುದೇ ಕಾರ್ಯಕ್ರಮ ಬಿಜೆಪಿ ಮನಸ್ಸುಗಳಿಗೆ 'ಓಲೈಕೆ' ಯಾಗಿ ಕಾಣುತ್ತದೆ. ಈ ನಿಟ್ಟಿನಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿ ಎರಡು ತಮ್ಮ ಹಿಂದುತ್ವವನ್ನು ಪುನರ್ ವಿಶ್ಲೇಷಿಸಬೇಕು. ಹಾಗೂ ಆ ಮುಊಲಕ ಪಕ್ಷದ ಕಾರ್ಯಕರ್ತರಲ್ಲಿ 'ಹಿಂದುತ್ವ'ದ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಬೇಕುವ ಅಗತ್ಯವಿದೆ ಎಂದಿದ್ದಾರೆ.
ಸೋಲು ಅನಾಥ ಎಂಬ ಮಾತಿದೆ. ಆದರೆ, ಸುದೀಂಧ್ರ ಕುಲಕರ್ಣಿ ಬಿಜೆಪಿ ಸೋಲಿನಲ್ಲಿ ನನ್ನದೂ ಸ್ವಲ್ಪ ಪಾತ್ರವಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಈ ಬಾರಿ ಚುನಾವಣೆ ವೇಳೆಯಲ್ಲಿ ಟಿವಿ ಚಾನೆಲ್ ಗಳ ಟಾಕ್ ಶೋಗಳಲ್ಲಿ ಬಿಜೆಪಿ ಪ್ರತಿನಿಧಿಯಾಗಿ ಕಾಣಿಸಿಕೊಂಡರು. ಅಡ್ವಾನಿಯನ್ನು ಸಮರ್ಥಿಸಿಕೊಳ್ಳುವ ಕೆಲ ಸಂದರ್ಭಗಳಲ್ಲಿ ಅವರು ತೀರಾ ಪೇಲವವಾಗಿ ಕಂಡರು. ಈ ಹಿಂದೆ ಅಡ್ವಾನಿ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ನೀಡಿದ ಜಿನ್ನಾ ಪರ ಅಭಿಪ್ರಾಯಕ್ಕೆ ಸುದೀಂಧ್ರ ಕುಲಕರ್ಣಿಯೇ ಕಾರಣ ಎಂಬ ಮಾತು ರಾಜಕೀಯ ವಲಯದಲ್ಲಿದೆ. ಅಂದು ಅಡ್ವಾನಿಯ ಬಾಯಿಂದ ಅಂತಹ ಅಭಿಪ್ರಾಯ ಹೇಳಿಸಿ ಪಕ್ಷದ ನಾಯಕರ ವಿರೋಧಕ್ಕೆ ಗುರಿಯಾಗಿದ್ದ ಈ ಮಾಜಿ ಪತ್ರಕರ್ತ ಈಗ ತಮ್ಮ ಲೇಖನದಿಂದ ಮತ್ತೆ ಪಕ್ಷದ ನೇತಾರರಿಂದ ಟೀಕೆಗೆ ಗುರಿಯಾಗಿದ್ದಾರೆ.
ಕನ್ನಡಿಗ
ಅಂದಹಾಗೆ ಕುಲಕರ್ಣಿ ಕನ್ನಡಿಗರು. ಧಾರವಾಡದವರು. ಬಾಂಬೆಯ Indian Institute of Technology ಯಿಂದ ಬಿ-ಟೆಕ್ ಪದವಿ ಪಡೆದರು. ನಂತರ ಪತ್ರಿಕೋದ್ಯಮ ಕ್ಷೇತ್ರ ಆಯ್ಕೆ ಮಾಡಿಕೊಂಡು ಬಾಂಬೆಯ Daily ಮತ್ತು Blitz ಪತ್ರಿಕೆಗಳಿಗೆ ದುಡಿದರು. ಆಗ ಮಾರ್ಕ್ಸ್ ಮತ್ತು ಲೆನಿನ್ ರನ್ನು ಆಳವಾಗಿ ಓದಿಕೊಂಡು ಸ್ನೇಹಿತರ ಮಧ್ಯೆ ಎಡಪಂಥೀಯ ಚಿಂತಕನೆಂದೇ ಪರಿಚಿತರು. ಕ್ರಮೇಣ ಬದಲಾದರು. ಕಾರ್ಪೊರೇಟ್ ಜಗತ್ತಿಗೆ ಹೊಂದಿಕೊಂಡರು. ಅಡ್ವಾನಿಗೆ ಆಪ್ತರಾದರು. ಅವರ ರಥಯಾತ್ರೆಯಲ್ಲಿ ಪಾಲ್ಗೊಂಡರು. ವಾಜಪೇಯಿ ಪ್ರಧಾನಿಯಾದಾಗ ಅವರ ಭಾಷಣಗಳನ್ನು ಬರೆದುಕೊಡುವ ಕಾಯಕಕ್ಕೆ ನಿಯುಕ್ತಿಯಾದರು. ನಂತರ ಬಿಜೆಪಿಯಲ್ಲಿ ಕಾರ್ಯದರ್ಶಿ ಸ್ಥಾನ ಸಿಕ್ಕತು. ಜಿನ್ನಾ ಹೇಳಿಕೆ ನಂತರ ಪಕ್ಷದ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಇಂದಿಗೂ ಅಡ್ವಾನಿಗೆ ಆಪ್ತರು. ಕೆಲವೇ ತಿಂಗಳುಗಳ ಹಿಂದಿನವರೆಗೂ ಪ್ರಜಾವಾಣಿಗೆ ಅಂಕಣ ಬರೆಯುತ್ತಿದ್ದರು. ಇನ್ನೊಂದು ವಿಚಾರ, ಇವರ ಕಿರಿಯ ಸಹೋದರ ಡಾ. ಸಂಜೀವ್ ಕುಲಕರ್ಣಿ ಧಾರವಾಡದ ಪ್ರಸಿದ್ಧ ವೈದ್ಯ. ಮಾದರಿಯಾದ ಒಂದು ಶಾಲೆಯನ್ನೂ ನಡೆಸುತ್ತಿದ್ದಾರೆ.

Friday, June 5, 2009

'ದೆಹಲಿ ನೋಟ'ದ ಕಣ್ಣುಗಳೀಗ ಬೆಂಗಳೂರಿನಲ್ಲಿ...

ಕ್ರಿಕೆಟಿಗರಿಗೆ ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನದಂತೆ, ಇಲ್ಲಿನ ಪತ್ರಕರ್ತರಿಗೆ ದೆಹಲಿ! ವೃತ್ತಿ ಬದುಕಿನಲ್ಲಿ ಕೆಲ ವರ್ಷಗಳ ಮಟ್ಟಿಗಾದರೂ ಅಲ್ಲಿ ಕೆಲಸ ಮಾಡಿ ಬರಬೇಕೆಂಬ ಬಯಕೆ ಅನೇಕರದು. ಕೆಲವರ ಬಯಕೆ ಇಡೇರುವುದುಂಟು. ಅಂತಹ ಕೆಲವರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ, ತಮ್ಮ ಸುದ್ದಿಸಂಸ್ಥೆಯ ಮತ್ತು ಓದುಗರ/ನೋಡುಗರ ನಿರೀಕ್ಷೆಗೆ ತಕ್ಕುದಾಗಿ ಕರ್ತವ್ಯ ನಿರ್ವಹಿಸಬಲ್ಲರು. ಆ ಕೆಲವೇ ಕೆಲವು ಮಂದಿಯಲ್ಲಿ ಮೊದಲಿಗರಾಗಿ ನಿಲ್ಲುವವರು ಪ್ರಜಾವಾಣಿಯ ದಿನೇಶ್ ಅಮಿನ್ ಮಟ್ಟು. ಪತ್ರಕರ್ತರ ಲಾರ್ಡ್ಸ್ ನಲ್ಲಿ ಸತತ ಸೆಂಚುರಿಗಳನ್ನೇ ಬಾರಿಸಿ ಇದೀಗ ಬೆಂಗಳೂರಿಗೆ ಮರಳಿದ್ದಾರೆ.
ದಿನೇಶ್ ಸತತ ಒಂಭತ್ತು ವರ್ಷಗಳ ಕಾಲ ಪ್ರಜಾವಾಣಿ ಓದುಗರಿಗೆ ದೆಹಲಿ ತೋರಿಸಿದವರು. ಚುನಾವಣೆ ಸಂದರ್ಭಗಳಲ್ಲಿ ದೇಶದ ಉದ್ದಗಲಕ್ಕೂ ಅಲೆದಾಡಿ ವಿಶ್ಲೇಷಣೆ ಬರೆದರು. ಪಶ್ಚಿಮ ಬಂಗಾಳದಲ್ಲಿ ಸುದೀರ್ಘ ಅವಧಿಗೆ ಎಡರಂಗ ಆಡಳಿತ ನಡೆಸಲು ಸಾಧ್ಯವಾಗಿದ್ದು ಏತಕ್ಕೆ ಎನ್ನುವುದು ಅವರ ಬರಹಗಳ ಮುಊಲಕ ಸ್ಪಷ್ಟವಾಯಿತು. ಓರಿಸ್ಸಾದ ಪಪ್ಪು ಪಾಸ್ ಹೋಗಯಾ, ಎನ್ನುವಾಗಲೂ ಪಪ್ಪುವಿನ (ನವೀನ್ ಪಟ್ನಾಯಕ್ ನ) ಮುಂದಿನ ನಡೆ ಬಗ್ಗೆ ಸಂಶಯ ಇಟ್ಟುಕೊಂಡೇ ಬರೆಯುತ್ತಾರೆ.
ಮುಂದಿನ ಪ್ರಧಾನಿ ಯಾರಾಗಬಹುದು ಎಂಬ ಬರಹದಲ್ಲಿ, 'ಇಷ್ಟೆಲ್ಲಾ ಸಾಧ್ಯತೆಗಳಿವೆಯಾ?' ಎಂದು ಓದುಗರಲ್ಲಿ ಅಚ್ಚರಿ ಮುಊಡಿಸಿದ್ದುಂಟು. ಈಗ್ಗೆ ಕೆಲವು ತಿಂಗಳುಗಳ ಹಿಂದೆ, ಗುಜರಾತ್ ಅಭಿವೃದ್ಧಿ ವಿಚಾರದಲ್ಲಿ ದೇಶದಲ್ಲಿಯೇ ಮುಂದಿದೆ ಎಂದು ಎಲ್ಲಾ ಮಾಧ್ಯಮಗಳು ಬೀಗುತ್ತಿದ್ದ ಕಾಲದಲ್ಲಿ ದಿನೇಶ್, ಆ ರಾಜ್ಯ ಹಿಂದುಳಿದಿರುವುದೆಲ್ಲಿ ಎನ್ನುವುದನ್ನು, ಅಂಕಿ ಅಂಶ ಸಹಿತ ವಿವರಿಸಿದ್ದರು.
ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಸರಕಾರ ಮುರಿದು ಬಿದ್ದಾಗ, ಜೆಡಿಎಸ್ ಪಕ್ಷದ ಮೇಲೆ ವಚನ ಭ್ರಷ್ಟತೆ ಆರೋಪ ಹೊರಿಸಲಾಯಿತು. ಅದೇ ಹೊತ್ತಿಗೆ ದಿನೇಶ್ ಬಿಜೆಪಿ ದೇಶಾದ್ಯಂತ ಹೀಗೆ ಎಷ್ಟು ಪಕ್ಷಗಳನ್ನು 'ವಚನ ಭ್ರಷ್ಟರನ್ನಾಗಿ' ಮಾಡಿದೆ ಎಂದು ಅಂಕಣ ಬರೆದರು. ಮಾರನೇ ದಿನ ಕುಮಾರಸ್ವಾಮಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಆ ಅಂಕಣದ್ದೇ ಸುದ್ದಿ. ವಿಚಿತ್ರ (ವಿಶಿಷ್ಷ) ಅಂದರೆ, ಜೆಡಿಎಸ್ ಆ ಅಂಕಣದ ಭಾಗಗಳನ್ನೇ ತನ್ನ ನಡೆಯ ಸಮರ್ಥನೆಗಾಗಿ ಇತರ ಪತ್ರಿಕೆಗಳಲ್ಲಿ ಜಾಹೀರಾತಿನ ರೂಪದಲ್ಲಿ ಬಳಸಿಕೊಂಡಿತು.
ಈ ವಾರ ದೆಹಲಿ ಹವಾಗುಣದ ಬಗ್ಗೆ ಒಂದು ಚಂದದ ಬರಹ ಬರೆದು ದೆಹಲಿಗೆ ವಿದಾಯ ಹೇಳಿದ್ದಾರೆ. ದಿನೇಶ್ ರ ಈ ಬರಹದಲ್ಲಿ 'ಸೂರ್ಯ' ಮತ್ತೆ ಮತ್ತೆ ಕಾಣಸಿಗುತ್ತಾನೆ. ಅವರಿಗೆ ದೆಹಲಿಯ ಸಂಸದರನ್ನು ಕಂಡಾಗಲೆಲ್ಲ "ಯಾಕೋ ನೆತ್ತಿಮೇಲೆ ಸುಡುತ್ತಿರುವ ಸೂರ್ಯನೇ ನೆನಪಾಗುತ್ತಿದ್ದ. ಕಣ್ಣೆತ್ತಿ ನೋಡುವ ಹಾಗಿಲ್ಲ. ಸಮೀಪ ಹೋದರೆ ಸುಟ್ಟುಬಿಡುವಂತೆ ಧಗ ಧಗ ಉರಿಯುತ್ತಿರುವ ಅಧಿಕಾರದ ಬೆಂಕಿ". ಅಧಿಕಾರವನ್ನು ಬೆಂಕಿಗೆ ಹೋಲಿಸುತ್ತಾರೆ. ತರುಣ ಪತ್ರಕರ್ತರಿಗೆ ಇಲ್ಲೊಂದು ಕಿವಿಮಾತು ಎಂದು ತಿಳಿದರೆ ತಪ್ಪಿಲ್ಲ. ಸೆಪ್ಟಂಬರ್-ಅಕ್ಟೋಬರ್ ತಿಂಗಳ ಸೂರ್ಯನನ್ನು ಅವರು, ಅಧಿಕಾರದಲ್ಲಿಲ್ಲದ ಪಕ್ಷದ ಸಂಸದರಿಗೆ ಹೋಲಿಸುತ್ತಾರೆ. ಆ ತಿಂಗಳಲ್ಲಿ ಸೂರ್ಯ ಇದ್ದೂ ಇಲ್ಲದ ಹಾಗೆ.
ದೆಹಲಿಯಲ್ಲಿ ಬಿಸಿಲ ಝಳ ಕಡಿಮೆಯಾಗುವ ಹೊತ್ತಿನಲ್ಲಿ ದಿನೇಶ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅಂದಹಾಗೆ 'ದಿನೇಶ್' ಕೂಡಾ ಸೂರ್ಯನ ಇನ್ನೊಂದು ಹೆಸರು. ಪ್ರಜಾವಾಣಿ ಓದುಗರ ಪಾಲಿಗೆ ದಿನೇಶ್ ಅಮಿನ್ ಮಟ್ಟು 'ದೆಹಲಿಯ ಸೆಪ್ಟಂಬರ್-ಅಕ್ಟೋಬರ್ ತಿಂಗಳ' ಸೂರ್ಯನಾಗದಿರಲಿ ಎಂಬುದೇ ಸುದ್ದಿಮಾತು ಆಶಯ.