Tuesday, February 10, 2009

ಆಚಾರ್ಯ ಅರ್ಥ ಮಾಡಿಕೊಳ್ಳಬೇಕು

ಗೃಹ ಮಂತ್ರಿ ಆಚಾರ್ಯ ಸಂಕಷ್ಟದಲ್ಲಿದ್ದಾರೆ. ಒಂಬುಡ್ಸಮನ್ ನೇಮಕ ಮಾಡ್ತೇವೆ ಎಂಬ ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅವರ ಮಂತ್ರಿಮಂಡಲ ಸಹೋದ್ಯೋಗಿಗಳಾದ ಕೆ.ಎಸ್ ಈಶ್ವರಪ್ಪ, ರಾಮಚಂದ್ರಗೌಡ ಹಾಗೂ ಸ್ವತಃ ಮುಖ್ಯಮಂತ್ರಿಯೇ ಆಚಾರ್ಯ ಅಭಿಪ್ರಾಯಕ್ಕೆ ಮಣೆ ಹಾಕಿಲ್ಲ. ಆದರೆ ಆಚಾರ್ಯ ತಮ್ಮ ರಾಗ ಬದಲಿಸಿಲ್ಲ. ತಮ್ಮ ಬ್ಲಾಗ್ ನಲ್ಲಿ ತಮ್ಮ ವಿಚಾರಧಾರೆ ಮುಂದುವರಿಸಿದ್ದಾರೆ.
ಈ ದಿನಗಳು ಮಂಗಳೂರಿಗರ ಪಾಲಿಗೆ ಅಶಾಂತಿಯ ದಿನಗಳು. ಪ್ರೊ. ಸೋಮಯಾಜಿ ಸರಕಾರವನ್ನು ಟೀಕಿಸಿದರೆ ತಪ್ಪು. ಖುದ್ದು ಜಿಲ್ಲಾ ಮಂತ್ರಿಯೇ ಕಾಲೇಜಿನ ಪ್ರಾಂಶುಪಾಲರಿಗೆ ದೂರವಾಣಿ ಕರೆ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸುತ್ತಾರೆ. ಅಂತೆಯೇ ಅವರಿಗೆ ಒಂದು ನೋಟಿಸ್ ಜಾರಿಯಾಗುತ್ತೆ. ಈ ಕುರಿತಂತೆ ಕನ್ನಡದ ಪ್ರಮುಖ ಪತ್ರಿಕೆಯ ಪ್ರಲಾಪಿಯೊಬ್ಬ ಓದುಗರ ಹೆಸರಿನಲ್ಲಿ ಒಂದು ಪತ್ರ ಬರೆದು ಸೋಮಯಾಜಿಯನ್ನು ಟೀಕಿಸುತ್ತಾನೆ. ಸರಕಾರ ಕೆಲಸ ಕೊಟ್ಟಿದೆ, ಸಂಬಳ ಕೊಡುತ್ತಿದೆ ಎಂಬ ಕಾರಣಕ್ಕೆ ಸರಕಾರದ ವಿರುದ್ಧ ಮಾತನಾಡಬಾರದು ಎಂದರೆ ಅದ್ಯಾವ ನ್ಯಾಯ.
ಒಂದು ಪತ್ರಿಕೆ ಫ್ಯಾಸಿಸ್ಟ್ ಆದರೆ, ಒಂದು ಸರಕಾರ ಫ್ಯಾಸಿಸ್ಟ್ ಧೋರಣೆ ತಳೆದರೆ ಏನೆಲ್ಲಾ ಆಗಬಹುದು ಎನ್ನುವುದಕ್ಕೆ ಮೇಲಿನ ಎರಡು ಘಟನೆಗಳು ಉದಾಹರಣೆ.
ಮಾಧ್ಯಮಗಳು ಅತಿರಂಜಿತ ವರದಿ ಬಿತ್ತರಿಸುತ್ತಿವೆ ಎಂದರೆ, ಓದುಗರು ಎಚ್ಚರಿಸುತ್ತಾರೆ. ಮಾಧ್ಯಮಗಳು ಎಚ್ಚೆತ್ತುಕೊಳ್ಳುತ್ತವೆ. ಸರಕಾರ ಒಂಬುಡ್ಸಮನ್ ನೇಮಿಸಿ ಎಚ್ಚರಿಸುವ ಅಗತ್ಯವೇನಿಲ್ಲ ಎಂಬುದನ್ನು ಆಚಾರ್ಯ ಅರ್ಥಮಾಡಿಕೊಳ್ಳಬೇಕು.

1 comment:

Anonymous said...

ಅಲ್ಲಾ ಸ್ವಾಮೀ, ನನಗೊಂದು ವಿಷಯ ಅರ್ಥವಾಗಿತ್ತಿಲ್ಲ.

ನೀವು ಮಾಧ್ಯಮದವರು ಎಲ್ಲಾ ಸಾಚಾ ಸೀದಾ ಸಾದಾದವರಾದರೆ, ಏನೂ ಅಡಗಿಸಲು ಇಲ್ಲವಾದರೆ ಪಾಪದ ಆಚಾರ್ಯರ ಓಂಬುಡ್ಸಮನ್ ಸಲಹೆಗೇಕೇಕೆ ಇಷ್ಟು ತಲೆ ಚಚ್ಚಿಕೊಳ್ಳುತ್ತಿದ್ದೀರಿ?

ಇನ್ನು ಈಶ್ವರಪ್ಪ, ರಾಮಚಂದ್ರ ಗೌಡರಂತ ಅಯ್ಯಗಳನ್ನು ಬಿಡಿ - ಅವರಿಗೆ ಓಂಬುಡ್ಸಮನ್ ಎಂಬುದರ ಅರ್ಥ ತಿಳಿದಿದೆಯೋ ಇಲ್ಲವೋ. ಅಥವಾ ಇಂತಹ ದ್ವಂದದ ಹೇಳಿಕೆ ಸಂಘ ಪರಿವಾರದ ಸ್ಟೈಲ್ ಬಿಡಿ. ಕೇಂದ್ರದಲ್ಲಿ ಎನ್ ಡ್ ಎ ಸರಕಾರ ಇದ್ದಾಗಲೂ ಅತ್ತ ವಾಜಪೇಯಿ ಒಂದು, ಇತ್ತ ಅಡ್ವಾಣಿ ಒಂದು ಹೇಳಿಕೆಗಳನ್ನು ಉದ್ಧೇಶ ಪೂರ್ವಕವಾಗಿಯೇ ಹೇಳಿ ಮಾಧ್ಯಮದವರನ್ನು ಕನ್ಫ್ಯೂಸ್ ಮಾಡಿತ್ತಿದ್ದರು.

ನನಗೇನೂ ಆಚಾರ್ಯರ ಆಲೋಚನೆ ಸದಾಶಯದ್ದು ಅಂದೆನಿಸುತ್ತದೆ - ಅದರಲ್ಲೂ ಪೊಲಿಯೋ ಲಸಿಕೆ ಪ್ರಕರಣದಲ್ಲಿ ಅರ್ಧ ರಾತ್ರಿಯಲ್ಲಿ ಮುಗ್ಧ ಕಂದಮ್ಮಗಳನ್ನು ಬೀದಿಗಿಳಿಸುವಂತೆ ಮಾಡಿದ ಟಿವಿ ಚಾನೆಲ್ ಕಿತಾಪತಿ ನೋಡಿ.