Saturday, February 21, 2009

ಕೃಷ್ಣಯ್ಯ ಶೆಟ್ಟಿಯ ಲಾಡು ಮತ್ತು ಮಾಧ್ಯಮಗಳ ತೌಡು

ವೈಕುಂಠ ಏಕಾದಶಿಗೆ ಲಾಡು ನೀಡಿದ ಸಚಿವ ಕೃಷ್ಣಯ್ಯ ಶೆಟ್ಟಿ ಈ ಬಾರಿ ಶಿವರಾತ್ರಿಯಂದು ಗಂಗಾಜಲ ಕುಡಿಸಲು ತೀರ್ಮಾನಿಸಿದ್ದಾರೆ. ಸಚಿವರ ಮೌಢ್ಯತೆ ಬಗ್ಗೆ ಮಾತಾಡುವ ಮುಂಚೆ ಇಂತಹ ಮೌಢ್ಯತೆಯನ್ನೇ ನಮ್ಮ ಎಲೆಕ್ಟ್ರಾನಿಕ್ ಮಾಧ್ಯಮಗಳು ಆಶ್ರಯಿಸಿರುವುದು ಅತ್ಯಂತ ಖೇದದ ವಿಷಯವಾಗಿದೆ.ಮೂಢನಂಬಿಕೆಗಳನ್ನು ಅಗೋಚರ, ಹೀಗೂ ಉಂಟೆ ಎಂದು ಇನ್ನಿಷ್ಟು ಮೌಢ್ಯಕ್ಕೆ ಜನಸಾಮಾನ್ಯರನ್ನು ನೂಕಲು ಹಗಲಿರಳು ವಿವಿಧ ಚಾನೆಲ್‌ಗಳು ಪ್ರಯತ್ನ ನಡೆಸುತ್ತಲೆ ಬರುತ್ತಿವೆ. ಜ್ಯೋತಿಷ್ಯಗಳಂತೂ ವರ್ತಮಾನದ ಎಲ್ಲಾ ವಿಷಯಗಳಿಗೂ ಭವಿಷ್ಯ ಹೇಳಲಾರಂಭಿಸಿದ್ದಾರೆ.
ಇತ್ತೀಚಿನ ’ವಾಲ್ಯೆಂಟೈನ್ ಡೇ’ ಸಂದರ್ಭದಲ್ಲೂ ಜ್ಯೋತಿಷ್ಯಿಯೊಬ್ಬರು ಯಾವ ಯಾವ ನಕ್ಷತ್ರದಲ್ಲಿ ಜನಿಸಿದವರು ಪ್ರೀತಿಸಿ ಮದುವೆಯಾಗುತ್ತಾರೆ. ವಿಚ್ಛೇದನೆ ಪಡೆಯುತ್ತಾರೆ ಎಂಬ ಚರ್ಚೆ ನಡೆಸಿಕೊಟ್ಟಿದ್ದಂತೂ ಇದರ ಅತಿರೇಕ ಆಗಿತ್ತು. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದರೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ ಅವನ ಹೆಸರು, ಜನ್ಮದಿನಾಂಕ ಎಲ್ಲವನ್ನೂ ನೋಡಿ ಆತ್ಮಹತ್ಯೆಯ ಯೋಗ ಅವನಿಗಿತ್ತು ಎಂದು ವಾದಿಸಬಹುದು. ಅಥವಾ ಶಾಸಕ ಸಂಪಂಗಿ ಈ ಈ ಸಮಯದಲ್ಲಿ, ಈ ಮೂಹರ್ತದಲ್ಲಿ ಲಂಚ ಸ್ವೀಕರಿಸಿದ್ದರೆ ಸಿಕ್ಕು ಬೀಳುತ್ತಿರಲಿಲ್ಲ ಎನ್ನುವವರೆಗೆ ಹೋಗಬಹುದು. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸದೆ, ಹಬ್ಬ ಹರಿದಿನಗಳು ಹಾಗೂ ಮಠಾಧೀಶರ ಸಮಾರಂಭ, ಧಾರ್ಮಿಕ ಸಮಾರಂಭಗಳ ವರದಿಗಳಂತೂ ದಿನಂಪೂರ್ತಿ ಇಲ್ಲದ ವಿಶೇಷಣಗಳ ಜೊತೆ ಪಾಲಿಸಬೇಕಾದ ಆಚರಣೆಗಳು ಎನ್ನುವಂತೆ ಬಿಂಬಿಸಲಾಗುತ್ತಿದೆ.
ಈ ನಡುವೆ ರಾಜಕಾರಣಿ ಅಥವಾ ಸಿನಿಮಾ ನಟರು ಕಾಣಿಸಿಕೊಂಡರೆ ಅದಕ್ಕೊಂದು ರಂಗು ಕೊಡಲಾಗುತ್ತಿದೆ. ಈ ನಡುವೆ ಅಸ್ತಾ, ಸಂಸ್ಕಾರ, ಗಾಡ್ ಮತ್ತಿತರ ಚೆನಾಲ್‌ಗಳಂತೂ ಜನರನ್ನು ಎಲ್ಲಿಗೆ ಕರೆದೊಯ್ಯುತ್ತಿವೆಯೇ ನೋಡಬೇಕು. ದಿನ ಪತ್ರಿಕೆಯಲ್ಲಿ ದಿನ ಭವಿಷ್ಯ ಇರಬೇಕೆ ಬೇಡವೇ ಎಂಬ ಚರ್ಚೆಯೊಂದು ಈ ಹಿಂದೆ ನಡೆದಿತ್ತು. ಹೌದೇ? ಇಂತಹ ಚರ್ಚೆ ನಡೆಯಿತೇ? ಎಂಬ ಸ್ಥಿತಿಗೆ ಬಂದು ಮುಟ್ಟಿದ್ದೇವೆ. ಕನ್ನಡದ ಎಲ್ಲಾ ದಿನಪತ್ರಿಕೆಗಳು ದಿನ ಭವಿಷ್ಯ, ಅಣಿಮುತ್ತುಗಳು, ಆಶೀರ್ವಚನಗಳನ್ನು ಆಶ್ರಯಿಸಿವೆ. ಇನ್ನೂ ಕೃಷ್ಣಯ್ಯ ಶೆಟ್ಟಿ ’ಗಂಗಾಜಲ’ದ ಬಗ್ಗೆ ಮಾಧ್ಯಮಗಳಲ್ಲಿ ಯಾಕೇ ಚರ್ಚೆಯಾಗುವುದಿಲ್ಲ ಎನ್ನುವದಕ್ಕೆ ಇಷ್ಟೆಲ್ಲಾ ಹೇಳಬೇಕಾಯಿತು.

2 comments:

Mediapepper said...

ಸ್ವಾಮಿ, ಕನ್ನಡ ದಿನಪತ್ರಿಕೆಗಳನ್ನು ಮಾತ್ರ ಯಾಕೆ ಹೇಳ್ತೀರಿ? ಭವಿಷ್ಯ ಕಾಲಂ ಆಂಗ್ಲ ಪತ್ರಿಕೆಗಳಲ್ಲೂ ಇದೆ. ಟೈಂಸಾಫ್ ಇಂಡಿಯಾದ ಸ್ಪೀಕಿಂಗ್ ಟ್ರೀ ಕಾಲಂ ತುಂಬ ಜನಪ್ರಿಯ...ಓದೋರು ಇರುವಾಗ ನಿಮಗ್ಯಾಕೆ ಬೇಸರ?

Anonymous said...

ಹಾಗೆಯೇ ಗ್ರಹಣ ಕಾಲದಲ್ಲಿ ಧರ್ಬೆ, ಪಿತೃ ಪಕ್ಷದಲ್ಲಿ ವಡೆ-ಪಾಯಸ, ಹೋಳಿ ಹಬ್ಬಕ್ಕೆ ಕೋಳಿ ಸಾರು, ಯುಗಾದಿಯಂದು ಬೇವು-ಬೆಲ್ಲ, ಬಕ್ರೀದ್‍ನಂದು ಬಾಡಿನೂಟ, ಕ್ರಿಸ್ಮಸ್ ದಿನ ಕೇಕುಗಳನ್ನು ಮಂತ್ರಿಗಳು ದಯಮಾಡಿ ಬಡಬಗ್ಗರಿಗೆ ಉಚಿತವಾಗಿ ಹಂಚಬೇಕೆಂದು ಈ ಮೂಲಕ ಕೋರುತ್ತಿದ್ದೇವೆ.
- ತಿಮ್ಮರಾಯಿ, ತರ್ಲೆಕುಂಟನಳ್ಳಿ