Tuesday, September 1, 2009

ನಿರ್ಗಮಿಸುವ ಮುನ್ನ...

ಸುದ್ದಿಮಾತು ವಿದಾಯ ಹೇಳುವ ಇಂಗಿತ ವ್ಯಕ್ತ ಪಡಿಸಿದ ಮೇಲೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಕೆಲವರಿಗೆ ಸಂತೋಷವಾಗಿದೆ. ಸಾಕು ಮುಚ್ಚರಯ್ಯ ಬಾಯಿ ಎಂಬ ಧಾಟಿಯಲ್ಲಿ ಕೆಲವರು ಮಾತನಾಡಿದರೆ, ಮತ್ತೆ ಕೆಲವರು ಬ್ಲಾಗ್ ಬಗ್ಗೆ ಪ್ರೀತಿಯಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇ ಉಮ್ಮೇದಿಯಲ್ಲಿ ಒಬ್ಬರು ಮಾತು ಈ ಬ್ಲಾಗ್ ಬಂದ್ ಎಂದು ಘೋಷಿಸಿ ನಮ್ಮ ಜವಾಬ್ದಾರಿಯನ್ನು ಹಗುರ ಮಾಡ ಹೊರಟಿದ್ದಾರೆ. ಅವರೆಲ್ಲರಿಗೂ ನಾವು ಅಭಾರಿಗಳು. ಇಲ್ಲಿ ಕೆಲವು ಪ್ರತಿಕ್ರಿಯೆಗಳಿವೆ. ಒಮ್ಮೆ ಕಣ್ಣು ಹಾಯಿಸಿ...




ಶ್ಯಾಮಸುಂದರ್ (ದಟ್ಸ್ ಕನ್ನಡದಲ್ಲಿ)
- ಕನ್ನಡದಲ್ಲಿ ಬ್ಲಾಗ್ ಪರಂಪರೆ ಬೆಳೆಯಬೇಕು, ಯಾವ ಬ್ಲಾಗೂ ಕಣ್ಮುಚ್ಚಬಾರದು.
ಅವಧಿಯಲ್ಲಿ ಪ್ರಕಟಗೊಂಡದ್ದು... (ಬೈಲೈನ್ ಇಲ್ಲದ ಕಾರಣ ಇದನ್ನೂ ಅನಾಮಧೇಯ ಕಮೆಂಟ್ ಎಂದು ಗ್ರಹಿಸಲು ಓದುಗ ಸ್ವತಂತ್ರ.)

‘ಸುದ್ದಿಮಾತು’ ಬ್ಲಾಗ್ ತನ್ನ ಚಟುವಟಿಕೆಗಳನ್ನು ಬಂದ್ ಮಾಡಿದೆ. ತಾನು ಬ್ಲಾಗ್ ಆರಂಭಿಸಿದ ಕಾಲದ ಉದ್ದೇಶಕ್ಕೂ ನಂತರ ಬ್ಲಾಗ್ ಲೋಕ ಪಡೆದ ತಿರುವುಗಳಿಗೂ ಕೊಂಡಿ ಹಾಕಿ ‘ಬೇಸತ್ತು’ ಇನ್ನು ಪ್ರಕಟಣೆ ಇಲ್ಲ ಎಂದಿದ್ದಾರೆ. ‘ಸುದ್ದಿಮಾತು’ ಸಹಾ ಅನಾಮಿಕ ಬ್ಲಾಗ್. ವಿಮರ್ಶೆ ಮಾಡುವವರು ಹೆಸರಿಲ್ಲದೆ ವಿಮರ್ಶೆ ಮಾಡಿದರೆ ಅದಕ್ಕೆ ಹೆಚ್ಚೇನೂ ಮೌಲ್ಯ ಇರುವುದಿಲ್ಲ. ಇದನ್ನು ಅರಿತ ‘ಸುದ್ದಿಮಾತು’ ಬಳಗಕ್ಕೆ ಥ್ಯಾಂಕ್ಸ್.
ಅದೇ ಸಮಯದಲ್ಲಿ ‘ಸುದ್ದಿಮಾತು’ ಯಾರದ್ದು ಎನ್ನುವ ಪ್ರಶ್ನಾರ್ಥಕ ಚಿಹ್ನೆ ಹಾಗೇ ಉಳಿದಿದೆ. ಅವರದ್ದು, ಇವರದ್ದು ಇಲ್ಲಾ ನಿಮ್ಮದೇ ಎನ್ನುವ ಊಹಾಪೋಹಗಗಳನ್ನು ಬದಿಗೊತ್ತೋಣ. ಈ ಬ್ಲಾಗ್ ಇಂತಹವರದ್ದೆ ಎಂದು ಹೇಳುವ ಪುರಾವೆ ಇದ್ದರೆ ಅದನ್ನು ಬಹಿರಂಗಪಡಿಸಲು ನಮಗೂ ಇಷ್ಟ. ಕೇವಲ ಈ ಬ್ಲಾಗ್ ಗೆ ಮಾತ್ರ ಅಲ್ಲ ಯಾವುದೇ ಅನಾಮಿಕ ಬ್ಲಾಗ್ ಬಗ್ಗೆ ಪುರಾವೆ ಸಹಿತ ವಿವರ ನೀಡಿದರೆ ಪ್ರಕಟಿಸಲು ಸಿದ್ಧ.
Delete
Blogger
surya said...

ವೈಯಕ್ತಿಕ ನಿಂದೆಯ ಕೆಲ ಆಪಾದನೆಗಳ ನಡುವೆಯೂ ಸಮಕಾಲೀನ ಪತ್ರಿಕೋದ್ಯಮ ರಾಜಕಾರಣ ಕುರಿತು ಅರ್ಥಪೂರ್ಣ ಟೀಕೆ ಟಿಪ್ಪಣಿ ಒಳನೋಟಗಳನ್ನು ನೀಡಿದ ಸುದ್ದಿಮಾತು ಅನಾಮಿಕ ಎಂಬ ಕಾರಣಕ್ಕಾಗಿ ನೇಪಥ್ಯಕ್ಕೆ ಸರಿಯಬೇಕಾಗಿರುವ ಸನ್ನಿವೇಶ ಸೃಷ್ಟಿಯಾಗಿರುವುದು ಆರೋಗ್ಯಕರ ಅಲ್ಲ.
ಡಿ.ಉಮಾಪತಿ
ನವದೆಹಲಿ.


NiTiN Muttige said...

ಎಲ್ಲರ ಮಧ್ಯೆ ನಿಮ್ಮದು ವಿಭಿನ್ನವಾಗಿ ವೈಯಕ್ತಿಕವಾಗಿ ಅಷ್ಟೇಲ್ಲಾ ಕೆರಚು ಎರಚದೆ ಸುದ್ದಿಮನೆಯಲ್ಲಿನ ವಿವರ ಕೊಡುತ್ತಿದ್ರಿ.ಉಳಿದವರು ನೇರವಾಗಿ ವೈಯಕ್ತಿಕವಾಗೇ ದಾಳಿ ಆರಂಭಿಸಿದ್ದು ಬ್ಲಾಗ್ ಗಳ ದುರ್ಧೈವ.ಯಾರೋ ಹೇಳಿದರು ಅಂತ ಈ ತೀರ್ಮಾನ ಯಾಕೆ?.Delete


Blogger Sahana said...

It is not a good decision.
Please continue..
Your blog will help full to media persons & society. In the public interest you should continue to post. I hope you will do.

August 25, 2009 8:49 PM

Delete
Blogger ಎಚ್.ಎನ್. ಈಶಕುಮಾರ್ said...

ಅನಾಮಿಕರ ಸುದ್ದಿಮಾತು ಮುಂದುವರೆಯಲಿ ಎಂಬುದು ನಮ್ಮ ಬಯಕೆ ಆದರು ನಿಮ್ಮ ಸ್ವತಂತ್ರಕ್ಕೆ ಅಡ್ಡಿ ಪಡಿಸೋದು ಬೇಡ ನಿಮ್ಮ ನಿರ್ಧಾರ ಸಮಯೋಚಿತವಾಗಿದೆ.ಯಾರು ಏನನ್ನು ಬದಲಾವಣೆ ಮಾಡಲು ಸಾದ್ಯವಿಲ್ಲ ಅನ್ನೋದು ನಮ್ಮ ದೇಶದ ಅಘೋಷಿತ ಸತ್ಯ ಮನಪೂರ್ವಕ ವಿದಾಯಗಳು ಸುದ್ದಿಮಾತು ಪ್ರವರ್ತಕರೆ.......

Anonymous parasurama kalal said...

ದೂರ ಹೋಗುವ ಬಯಕೆ..ಯಾಕೇ ಯಾಕೇ ಇದು ನನ್ನ ಪ್ರಶ್ನೆ.

Jadi G said...

ಇತ್ತೀಚಿನ ದಿನಗಳಲ್ಲಿ ನೆಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ನೀವು ಬ್ಲಾಗ್ ಬರೆಯುವದನ್ನು ಅಂದ್ರೆ ಈ ಸುದ್ದಿ ಮಾತನ್ನು ನಿಲ್ಲಿಸುವುದ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ.

Delete
Anonymous Kruttike said...

ತಪ್ಪು ತೋರಿಸಿಕೊಟ್ಟಾಗ ಹೆಸರುವಾಸಿಯಾದವರಿಗೆ ಮುಖಭಂಗವಾಗುವುದು ಸಹಜವೆ. ಆ ಕಾರಣಕ್ಕಾಗಿ ನೀವೇಕೆ ದೂರಹೋಗಬೇಕು. ಖಂಡಿತ ಮುಂದುವರೆಸಿ. ನಾನಂತೂ ನಿಮ್ಮ ಬ್ಲಾಗ್ ತಪ್ಪದೆ ಓದುವವರಲ್ಲಿ ಒಬ್ಬಳು.

Blogger heggere said...

ಸುದ್ದಿ ಮಾತುಗಾರರೇ
ಸತ್ಯ ಹೇಳುವುದೇ ಈಗಿನ ಕಾಲದ ಅತಿ ದೊಡ್ಡ ತಪ್ಪು ಎನ್ನುವ ಮಂದಿ ಇಲ್ಲಿದ್ದಾರೆ. ನಿಮ್ಮ ಬ್ಲಾಗ್‌ನ ವಿದಾಯದ ಮಾತುಗಳು ನನಗೆ ಇಷ್ಟವಾಗಲಿಲ್ಲ.

Anonymous Anonymous said...

ರೀ, ಬ್ಲಾಗ್ ನಿಲ್ಸಿದ್ರೆ ಹುಷಾರ್! ಅದೇನ್ ಅಷ್ಟು ಸುಲಭ ಅಂದ್ಕೊಂಡ್ರಾ? ಸುಮ್ನೆ ಏನೂ ಕಾರಣ ಹೇಳ್ದೆ continue ಮಾಡಿ.ಅಷ್ಟೆ!

Don't yield to any pressure. That is not good character of a good journalist.August 30, 2009 10:46 AM

Delete
Blogger surya said...

ವೈಯಕ್ತಿಕ ನಿಂದೆಯ ಕೆಲ ಆಪಾದನೆಗಳ ನಡುವೆಯೂ ಸಮಕಾಲೀನ ಪತ್ರಿಕೋದ್ಯಮ ರಾಜಕಾರಣ ಕುರಿತು ಅರ್ಥಪೂರ್ಣ ಟೀಕೆ ಟಿಪ್ಪಣಿ ಒಳನೋಟಗಳನ್ನು ನೀಡಿದ ಸುದ್ದಿಮಾತು ಅನಾಮಿಕ ಎಂಬ ಕಾರಣಕ್ಕಾಗಿ ನೇಪಥ್ಯಕ್ಕೆ ಸರಿಯಬೇಕಾಗಿರುವ ಸನ್ನಿವೇಶ ಸೃಷ್ಟಿಯಾಗಿರುವುದು ಆರೋಗ್ಯಕರ ಅಲ್ಲ.
ಡಿ.ಉಮಾಪತಿ
ನವದೆಹಲಿ.

August 31, 2009 10:09 AM

Tuesday, August 25, 2009

ದೂರ ಹೋಗುವ ಬಯಕೆ. ನೀವೇನಂತೀರಿ?

ಇನ್ನು ಕೆಲವೇ ದಿನಗಳಲ್ಲಿ 'ಸುದ್ದಿಮಾತು'ಗೆ ಒಂದು ವರ್ಷದ ಸಂಭ್ರಮ. ಆ ಆಚರಣೆಗೆ ಮುನ್ನವೇ ನಾವು ನಿಮ್ಮಿಂದ ವಿದಾಯ ಬಯಸುತ್ತಿದ್ದೇವೆ. ವಿದಾಯ ಎಂದಾಕ್ಷಣ ನಿಮ್ಮಲ್ಲಿ ಹಲವು ಆಲೋಚನೆಗಳು ಒಮ್ಮೆಲೆ ನುಗ್ಗಿ ಬಂದಿರಬಹುದು. ಇವರ ಮೇಲೆ ಯಾರೋ ಕೇಸು ಹಾಕಿರಬೇಕು, ಇಲ್ಲ ಯಾರೋ ಇವರೇ ಮಾಡ್ತಿರೋದು ಅಂತ ಗೊತ್ತಾಗಿ ಧಮಕಿ ಹಾಕಿರಬೇಕು - ಹೀಗೆ ನಿಮ್ಮಲ್ಲಿ ಅನೇಕ ಐಡಿಯಾಗಳು ಹೊಳೆದಿರಲೂ ಸಾಕು.
ಆದರೆ ಅದಾವುದೂ ಅಲ್ಲ.
ಒಂದು ವರ್ಷದ ಹಿಂದೆ ಹೀಗೆ ಯಾವುದೋ ಪತ್ರಿಕಾ ವರದಿಗೆ ಸ್ಪಂದಿಸುವ ನೆವದಲ್ಲಿ ಬ್ಲಾಗ್ ಹುಟ್ಟಿಕೊಂಡಿತು. ನಿನ್ನೆ ಒಂದು ಪೋಸ್ಟ್ ಮಾಡಿದಿವಿ, ಇಂದೂ ಒಂದು ಮಾಡಿದರೆ ಹೇಗೆ.... ಹೀಗೆ ಸುದ್ದಿಮಾತು ಒಂದು ರೂಪ ಪಡೆದುಕೊಂಡಿತು. ಆ ನಂತರ ಮಾಧ್ಯಮ ಕ್ಷೇತ್ರದ ಬೆಳವಣಿಗೆಗಳನ್ನು ಗಮನಿಸುತ್ತಾ, ಪ್ರತಿಕ್ರಿಯಿಸುತ್ತಾ ಸಾಗಿದೆವು. ಕೆಲವೊಮ್ಮೆ ಉತ್ತಮ ಬರಹಗಳನ್ನು ಹೆಕ್ಕಿ ಹಾಕಿದೆವು. ಆರಂಭದಲ್ಲಿ ಬಂದ ಪ್ರತಿಕ್ರಿಯೆಯಿಂದ ಹಿಗ್ಗಿದೆವು. ನಮಗೆ 'ನಾವು ಯಾರು' ಎಂದು ಹೇಳಿಕೊಳ್ಳುವುದಕ್ಕಿಂತ, ನಮ್ಮ ವಿಚಾರವನ್ನು ಹೇಗೆ ಬ್ಲಾಗ್ ಓದುಗ ಸಮುಊಹ ಸ್ವೀಕರಿಸುತ್ತದೆ ಎಂಬುದರ ಬಗ್ಗೆ ಕುತೂಹಲವಿತ್ತು. ಕೆಲವರು 'ನೀವು ಕಾಂಗ್ರೆಸ್ಸಿನವರು' ಎಂದು ಟೀಕಿಸಿದರೆ, ಇನ್ನು ಕೆಲವರು 'ನೀವು ಎಡಪಂಥೀಯರು' ಎಂದು ಮುಊದಲಿಸಿದರು.
ಪ್ರಜಾವಾಣಿ ಪತ್ರಿಕೆಯನ್ನು ಒಟ್ಟಾರೆಯಾಗಿ ಒಪ್ಪಿಕೊಳ್ಳುತ್ತಲೇ, ಅದರ ಕೆಲ ಧೋರಣೆಗಳನ್ನು ಟೀಕಿಸಿದೆವು. ಆ ಪತ್ರಿಕೆ 60ನೇ ವರ್ಷಾಚರಣೆ ಸಂದರ್ಭದಲ್ಲಿ ಬರೆದ ಸಂಪಾದಕೀಯದಲ್ಲಿ ತಪ್ಪುಗಳನ್ನು ಹುಡುಕಿ ಬರೆದ ಲೇಖನ ಉತ್ತಮ ಪ್ರತಿಕ್ರಿಯೆ ತಂದಿತ್ತು. ಹಾಗೆಯೇ ವಿಜಯ ಕರ್ನಾಟಕ ಪಕ್ಕಾ ಚೆಡ್ಡಿಯಾಗಿ ವರ್ತಿಸಿದಾಗ ಟೀಕಿಸಲೇ ಬೇಕಾಯ್ತು. ಆದರೆ ಯಾರ ಮೇಲೂ ವೈಯಕ್ತಿಕ ಆರೋಪ ಮಾಡಲಿಲ್ಲ. ವಿಚಾರದ ನೆಲಗಟ್ಟಿನಲ್ಲೇ ನಮ್ಮ ಟೀಕೆ ಇತ್ತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ ಎಂದೇ ನಮ್ಮ ನಂಬುಗೆ.
ಈ ಮಧ್ಯೆ ನಮ್ಮ ಓದುಗರು ಸುದ್ದಿಮಾತುಗಾರರನ್ನು ಅನೇಕರಲ್ಲಿ ಹುಡುಕಿದರು. ಜಿ.ಎನ್ ಮೋಹನ್, ದಿನೇಶ್.. ಹೀಗೆ ಪತ್ರಿಕಾ ಜಗತ್ತಿನ ಅನೇಕ ಹೆಸರುಗಳು ಹರಿದಾಡಿದವು. ಕೆಲವರಂತೂ, 'ಅವರು ನಮ್ಮ ಹುಡುಗರೇ ಕಣೋ' ಎಂದು ಸುಖಾ ಸುಮ್ಮನೆ ಎಲ್ಲರ ಮುಂದೆ ಒಂಥರಾ ಸ್ಕೋಪ್ ತೆಗೊಳೋಕೆ ಹೇಳಿಕೊಂಡಿದ್ದ ಉದಾಹರಣೆಗಳೂ ಉಂಟು.
ಮೊದಲು ಒಂದು ವಿಚಾರವನ್ನು ಸ್ಪಷ್ಟ ಪಡಿಸುತ್ತೇವೆ. ನಾವು ಯಾರು ಎನ್ನುವುದು ಮುಖ್ಯವೇ ಅಲ್ಲ. ಕಾರಣ ಇಲ್ಲಿ ಯಾರೂ ಮುಖ್ಯರಲ್ಲ! ಅದೇ ಹೊತ್ತಿಗೆ ಇನ್ನೊಂದು ಮಾತು - ನೀವು ಸಂಶಯ ಪಡುತ್ತಿರುವ ಯಾರೂ ನಮ್ಮ ತಂಡದಲ್ಲಿಲ್ಲ. ಜಿ.ಎನ್ ಮೋಹನ್ ನಮ್ಮ ತಂಡದಲ್ಲಿ ಇದ್ದಿದ್ದರೆ, ಅವರಿಗೆ ಪ್ರಶ್ನೆ ಕೇಳುವ ಪ್ರಮೇಯವೇ ಬರುತ್ತಿರಲಿಲ್ಲ.
ಹೆಸರಿಲ್ಲದೆ ಬರೆದರೆ ಏನೆಲ್ಲಾ ಪ್ರತಿಕ್ರಿಯೆ ಬರಬಹುದು, ಎಂಬ ಸಣ್ಣ ಕುತೂಹಲದಿಂದ ಬ್ಲಾಗ್ ಮುಂದುವರಿಸಿದೆವು. ಇಲ್ಲಿಯವರೆಗೂ ಬಂದು ನಿಂತಿದ್ದೇವೆ. ಹೆಸರು ಹೇಳದಿದ್ದರೂ, ನಾವು ದಾರಿ ತಪ್ಪಲಿಲ್ಲ ಎಂದು ನಂಬುತ್ತೇವೆ. ಯಾರಿಗೂ ಮುಜುಗರಕ್ಕೆ ಈಡು ಮಾಡುವಂತಹ ಬರಹಗಳನ್ನು ಹಾಕಲಿಲ್ಲ. ನಿಜ. ಒಂದೆರಡು ಕಾಮೆಂಟ್ ಗಳನ್ನು ಪಬ್ಲಿಷ್ ಮಾಡುವಾಗ ಎಡವಿದೆವೇನೋ ಎನ್ನಿಸುತ್ತಿದೆ. ಅದು ಆ ಕ್ಷಣ wrong judgement. ಅಂತಹ ಕಾಮೆಂಟ್ ಗಳಿಂದ ಬೇಸರ ಆಗಿರುವವರಿಗೆ ಕ್ಷಮೆ ಕೋರುತ್ತೇವೆ.
ಇನ್ನು ವಿದಾಯದ ಮಾತುಗಳೇಕೆ?
ನಾವು ಹೆಸರು ಹೇಳದೆ ಬ್ಲಾಗ್ ನಡೆಸಿದ ಕಾರಣಕ್ಕೆ, ಹೆಸರಿಲ್ಲದೆ ಬರೆಯುವುದನ್ನು ಬೆಂಬಲಿಸುತ್ತೇವೆ ಎಂದಲ್ಲ. ಹೆಸರಿಲ್ಲದೆ ಉಳಿಯುವುದು ನಿಜವಾಗಿಯುಊ ಸ್ವಾತಂತ್ರ್ಯವೇ. ಆದರೆ ಅದನ್ನೇ ಸ್ವೇಚ್ಛೆಯಾಗಿಸಿಕೊಂಡವರ ಬಗ್ಗೆ ನಮಗೆ ಬೇಸರವಿದೆ. ಆ ಸ್ವಾತಂತ್ರ್ಯ ಆರೋಗ್ಯವಂತ ಚರ್ಚೆಗೆ ಪ್ರೇರಣೆ ಆಗದೆ, ವೈಯಕ್ತಿಕ ನಿಂದನೆಯ ಹಾದಿ ಹಿಡಿಯುತ್ತಿರುವುದು ದು:ಖದ ಸಂಗತಿ. ಸುದ್ದಿಮಾತು ಆರಂಭವಾದಾಗ ಮಾಧ್ಯಮಗಳ ಬಗ್ಗೆ ಬರೆಯುತ್ತಿದ್ದ ಬ್ಲಾಗ್ ಗಳು ಅಷ್ಟಾಗಿ ಕಾಣಲಿಲ್ಲ. ಇತ್ತೀಚೆಗೆ ಅವುಗಳ ಸಂಖ್ಯೆ ಹೆಚ್ಚಿದೆ. ಕೆಲವು ದಿನಗಳ ಹಿಂದೆ 'ಸುದ್ದಿ ಮನೆ ಕತೆ' ಯಾದವರು ಈಗ 'ಸ್ಫೋಟಕ ಸುದ್ದಿ' ಯಾಗಿ ಹಾಜರಾಗಿದ್ದಾರೆ. ಆ ಮಹಾನುಭಾವ ಮೋಹನ್ ಮತ್ತು ದಿನೇಶ್ ಒಂದೇ ದಿನ ಕಾಮೆಂಟ್ ಹಾಕಿದ್ರಂತೆ, ಆ ಕಾರಣಕ್ಕೆ ಇದು ಅವರದೇ ಬ್ಲಾಗ್ ಎಂದು ಫರ್ಮಾನು ಹೊರಡಿಸಿಬಿಟ್ಟ. ಇನ್ಯಾರೋ ಒಬ್ಬ ಪತ್ರಿಕೋದ್ಯಮದ ವಿದ್ಯಾರ್ಥಿ ಎಂದು ಹೇಳಿಕೊಂಡು ಬರೆಯುತ್ತಿದ್ದಾನೆ. ಈ ಮಧ್ಯೆ ಕಾರ್ಗಿಲ್ ವೀರ ಶಿವಪ್ರಸಾದ್, ಇಂತಹ ಬ್ಲಾಗರ್ಸ್ ಮಧ್ಯೆ ಸುದ್ದಿಮಾತು ವನ್ನೂ ಸೇರಿಸಿ ಸಾರಾಸಗಟಾಗಿ ತೀರ್ಪು ಕೋಡುತ್ತಾರೆ.
ಇಂತಹ ಕಲುಷಿತ ವಾತಾವರಣದಿಂದ ದೂರ ಇರಬೇಕೆಂಬುದು ನಮ್ಮ ಬಯಕೆ. ನೀವೇನಂತೀರಿ?

Thursday, August 13, 2009

ಸುವರ್ಣ ಬಿಟ್ಟು ಹೊರಟ ಭಟ್ಟರ ವಿದಾಯದ ನುಡಿಗಳು

ಹಿರಿಯ ಪತ್ರಕರ್ತ ಶಶಿಧರ ಭಟ್ ಸುವರ್ಣ ತೊರೆದಿದ್ದಾರೆ.
ಸುವರ್ಣ ನ್ಯೂಸ್ ಬಿಡುವುದಕ್ಕೂ ಮುನ್ನ ಅವರು ತಮ್ಮ ಕುಮ್ರಿ ಬ್ಲಾಗ್‌ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ.
ಸುದ್ದಿಮಾತು ಓದುಗರಿಗಾಗಿ ಭಟ್ಟರ ಮನದಾಳದ ಮಾತುಗಳು ಇಲ್ಲಿವೆ

ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹಿನಿಯನ್ನು ಕಟ್ಿ ಬೆಳೆಸುವ ಕೆಲಸ ಇದೆಯಲ್ಲ ಅದೇ ಹಾಗೆ. ಈ ಕೆಲಸದ ನಡುವೆ ನನ್ನ ಓದು ಕುಂಠಿತವಾಯಿತು. ಒಂದು ನಿಮಿಷ ಎಲ್ಲವನ್ನೂ ಬಿಟ್ಟು ನಿರಾಳವಾಗಿ ಇರದಂತಾಯಿತು. ನಾನು ವಾಹಿನಿಯಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದೆ. ಎಲ್ಲದಕ್ಕೂ ಒಂದು ಬಿಡುಗಡೆಯ ಕಾಲ ಅಂತ ಇರುತ್ತೆ. ಬಿಡುಗಡೆ ಅನ್ನುವುದೇ ನಮ್ಮ ಮನಸ್ಸನ್ನು ಪ್ರಫುಲ್ಲಿತವನ್ನಾಗಿ ಮಾಡುತ್ತದೆ. ಬಹುತೇಕ ಸಂದರ್ಭದಲ್ಲಿ ನಾವು ಬಿಡುಗಡೆಗಾಗಿ ಯತ್ನ ನಡೆಸುತ್ತ ಮತ್ತಷ್ಟು ಬಂಧನಕ್ಕೆ ಒಳಗಾಗಿರುತ್ತೇವೆ.
ಈಗ ನನಗೆ ಬಿಡುಗಡೆಯ ಸಮಯ ಬಂದಿದೆ. ನನ್ನ ವಾಹಿನಿಯನ್ನು ಇದ್ದಲ್ಲಿ ಇದ್ದ ಹಾಗೆ ಬಿಟ್ಟು ಮುಂದಕ್ಕೆ ನಡೆದು ಬಿಡುವ ಸಮಯ. ಈ ಸಮಯ ಮುಂದಕ್ಕೆ ಹೋಗುವಾಗ ಹಿಂದಕ್ಕೆ ನೋಡುವ ಸಮಯ ಕೂಡ. ಈ ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದಾಗ,ಕೆಲಸಕ್ಕೆ ಬರಲು ಯಾರೂ ಸಿದ್ಧರಿರಲಿಲ್ಲ. ಎಲ್ಲರಿಗೂ ಈ ವಾಹಿನಿ ಉಳಿಯಬಹುದೇ ಎಂಬ ಆತಂಕ. ಇಂಥಹ ಸ್ಥಿತಿಯಲ್ಲಿ ಬಂದ ಹುಡುಗರನ್ನು ಕಟ್ಟಿಕೊಂಡು ವಾಹಿನಿಯನ್ನು ಪ್ರಾರಂಭಿಸಿದೆವು. ಕ್ರೆಡಿಬಿಲಿಟಿಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದುಕೊಂಡೆವು. ಹಾಗೆ ತುಂಬಾ ವಿಭಿನ್ನವಾಗಿ ಸುದ್ದಿಯನ್ನು ನೀಡುವುದಕ್ಕೆ ಯತ್ನ ನಡೆಸಿದೆವು. ಜಿ ಇ ಸಿ ಚಾನಲ್ಲಿನಲ್ಲಿ ಸುದ್ದಿ ಬರುವಾಗ ಒಳ್ಳೆ ರೇಟಿಂಗ್ ಕೂಡ ಇತ್ತು. ಇದನ್ನು ಗಮನಿಸಿ ನಾವು ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದೆವು. ಸಣ್ಣದಾಗಿದ್ದ ನಮ್ಮ ಕುಟುಂಬ ದೊಡ್ದದಾಯಿತು. ಮನೆಗೆ ಬಂದವರು ಮನೆಯವರಾಗಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಒಂದು ಕುಟುಂಬದ ಯಜಮಾನನಂತೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕು ಎಂದು ನಾನು ಅಂದುಕೊಂಡೆ. ಅದರಂತೆ ಕೆಲಸ ನಿರ್ವಹಿಸಲು ಯತ್ನ ನಡೆಸಿದೆ. ಆದರೆ ಎಲ್ಲೋ ತಪ್ಪಾಗಿತ್ತು. ನನಗೆ ಆ ತಪ್ಪು ತಿಳಿದಿರಲಿಲ್ಲ. ನನಗೆ ಸುದ್ದಿ ಮತ್ತು ವಾಹಿನಿಯ ಬದ್ಧತೆ ಬಿಟ್ಟು ಬೇರೆ ಇರಲಿಲ್ಲ. ಈ ಕಾರಣದಿಂದಾಗಿ ಸಹೋದ್ಯೋಗಿಗಳಿಗೆ ಕೆಲವೊಮ್ಮೆ ರೇಗಿದ್ದು ಉಂಟು ಬೈದಿದ್ದು ಉಂಟು.
ನಮ್ಮ ಬದುಕಿನಲ್ಲಿ ಎಲ್ಲ ಕನಸುಗಳೂ ನನಸಾಗುವುದಿಲ್ಲ. ಅದಕ್ಕಾಗಿಯೇ ಬದುಕಿಗೆ ಒಂದು ಆಕರ್ಷಣೆ ಇದೆ. ನಾನೆಂದುಕೊಂಡಿದ್ದನ್ನು ನಾನು ಮಾಡಲು ಸಾಧ್ಯವಾಗಲಿಲ್ಲ. ನನ್ನ ಸ್ನೇಹ ಶೀಲ ಪ್ರವೃತ್ತಿ ದೌರ್ಬಲ್ಯ ಎಂಬಂತೆ ಪ್ರತಿಬಿಂಬಿತವಾಯಿತು. ಮನುಷ್ಯನ ಬದಲಾವಣೆಯಲ್ಲಿ ನಂಬಿಕೆ ಇಟ್ಟ ನಾನು ಎಲ್ಲರೂ ಬದಲಾಗುತ್ತಾರೆ ಎಂದು ನಂಬಿಕೊಂಡಿದ್ದೆ. ಆದರೆ ಬದಲಾಗಬೇಕಾದ ನಮ್ಮ ಸಹೋದ್ಯೋಗಿಗಳು ಬದಲಾಗಲಿಲ್ಲ. ಬದಲಾಗಿ ಈ ಮೇಲ್ ಗಳಲ್ಲಿ ದೂರುಗಳಲ್ಲಿ ನೀಡುವುದರಲ್ಲಿ ಸಮಯವನ್ನು ವ್ಯಯಿಸತೊಡಗಿದರು. ಇದೆಲ್ಲ ನನ್ನ ಮನಸ್ಸಿಗೆ ತುಂಬಾ ನೋವನ್ನು ಕೊಡುತ್ತಿತ್ತು. ನನ್ನ ಹುಡುಗರು ಹೀಗೆ ಮಾಡುತ್ತಾರಲ್ಲ ಎಂದು ಬೇಸರವಾಗುತ್ತಿತ್ತು. ಆದರೆ ಎಷ್ಟೆಂದರೂ ನನ್ನ ಹುಡುಗರು ತಾನೆ ಎಂದು ನಾನು ಸುಮ್ಮನಾಗುತ್ತಿದ್ದ್ವೆ. ಎಂದೂ ಯಾರ ವಿರುದ್ಧವೂ ನಾನು ದೂರಲಿಲ್ಲ. ದೂರು ನೀಡಲಿಲ್ಲ.
ಈಗ ನಾನು ಹೊಸ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಹೊರಟು ನಿಂತಿದ್ದೇನೆ. ಹೊಸ ಸವಾಲು ನನ್ನ ಮುಂದಿದೆ. ಕಳೆದ ಎರಡು ಮೂರು ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡಿದ ನನ್ನ ಹುಡುಗರಿಗೆ ಬೈಯಲು ನಾನಿರುವುದಿಲ್ಲ .ತಪ್ಪು ಎಂದು ಅನ್ನಿಸಿದ್ದನ್ನು ಹೇಳಲು ನಾನು ಇರುವುದಿಲ್ಲ. ನಾನು ಕಟ್ಟಿದ ವಾಹಿನಿಯ ಮೆಟ್ಟಿಲುಗಳನ್ನು ಇಳಿದು ಹೊರಟು ಬಿಡುತ್ತೇನೆ. ಈ ಹೊಣೆಗಾರಿಕೆಯನ್ನು ನಿರ್ವಹಿಸಲು ಬೇರೆಯವರು ಬರುತ್ತಾರೆ.
ನಾನು ನಮ್ಮ ಹಿರಿಯ ಸಹೋದ್ಯೋಗಿಗಳ ಜೊತೆ ಮಾತನಾಡುತ್ತ ಒಂದು ಮಾತು ಹೇಳಿದೆ. "ನೀವೆಲ್ಲ ಒಂದು ತಂಡವಾಗಿ ಕೆಲಸ ಮಾಡಿದ್ದರೆ ಇಂದು ನಮ್ಮ ವಾಹಿನಿ ನಂಬರ್ ಒನ್ ವಾಹಿನಿಯಾಗುತ್ತಿತ್ತು. ಆದರೆ ಅದು ಆಗಲಿಲ್ಲ. ನಿಮಗೆಲ್ಲ ನನ್ನ ಬಗ್ಗೆ ಭಯವಿತ್ತು. ನನ್ನ ಸಲಹೆಗಳನ್ನು ಸ್ವೀಕರಿಸುವ ಮುಕ್ತ ಮನಸ್ಸು ಇರಲಿಲ್ಲ. ಇಗೋ ನಿಮ್ಮನ್ನು ಬಂಧಿಸಿತ್ತು. ಇದಕ್ಕಾಗಿ ಗುಂಪುಗಾರಿಕೆ ಮಾಡುವವರು ನನ್ನನ್ನೂ ಗುಂಪುಗಾರಿಕೆ ಮಾಡುವವ ಎಂದು ಪ್ರತಿಬಿಂಬಿಸಲು ಯತ್ನ ನಡೆಸಿದಿರಿ. ಆದರೆ ನನಗೆ ಅಂಟಿಕೊಂದು ಇರುವುದು ಗೊತ್ತಿದೆ. ಹಾಗೆ ಎಲ್ಲವನ್ನು ಬಿಟ್ಟು ತಿರುಗಿ ನೋಡದೇ ಹೋಗುವುದಕ್ಕೂ ಗೊತ್ತಿದೆ. "
ಹಾಗೆ ತಿರುಗಿ ನೋಡದೇ ಹೋಗಿ ಬಿಡುವುದು ಯಾವಾಗಲೂ ಸಂತೋಷವನ್ನು ನೀಡುತ್ತದೆ. ನಾನು ಹಲವಾರು ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಕೆಲಸ ಮಾಡಿ ಹಾಗೆ ಹೊರಟು ಬಂದಿದ್ದೇನೆ. ಬರುವಾಗ ನಾನೆಲ್ಲಿ ತಪ್ಪು ಮಾಡಿದೆ ಎಂದು ಧ್ಯಾನಿಸುತ್ತ ಕುಳಿತುಕೊಳ್ಳುತ್ತೇನೆ. ಕೆಲವೊಮ್ಮೆ ನನ್ನ ತಪ್ಪುಗಳು ನನಗೆ ಅರಿವಾಗುತ್ತದೆ. ಕೆಲವೊಮ್ಮೆ ತಪ್ಪುಗಳು ಎದುರಿಗೆ ಬರುವುದೇ ಇಲ್ಲ. ಈ ಎಲ್ಲ ಅನುಭವಗಳ ನಡುವೆಯೂ ನಾನು ಮನುಷ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿಲ್ಲ. ಕಳೆದುಕೊಳ್ಳುವುದಿಲ್ಲ. ಯಾಕೆಂದರೆ ಮನುಷ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡ ದಿನ ಬದುಕಿನ ಹಾದಿಗೆ ತೆರೆ ಬೀಳುತ್ತದೆ, ಹೀಗೆ ಮನುಷ್ಯರನ್ನು ನಂಬುತ್ತಲೇ ನಮ್ಮಲ್ಲೆರ ಸಣ್ಣತನ, ಗುಂಪುಗಾರಿಕೆಯ ಬಗ್ಗೆ ಸಣ್ನಕ್ಕೆ ನಕ್ಕು ಬಿಡುತ್ತೇನೆ. ಶಶಿಧರ್ ಭಟ್ಟಾ ಇದು ನಿನಗೆ ಇನ್ನೊಂದು ಅನುಭವ ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ.
ಈಗ ಇನ್ನೊಂದು ಜವಾಬ್ದಾರಿಯನ್ನು ನಾನು ಒಹಿಸಿಕೊಳ್ಳಲು ಹೊರಟಿದ್ದೇನೆ. ಮತ್ತೆ ದ್ರುಶ್ಯ ಮಾಧ್ಯಮಕ್ಕೆ ನಾನು ಬರುತ್ತೇನೆಯೋ ಇಲ್ಲವೋ ನನಗೆ ತಿಳಿಯದು. ಮಹಾಯುದ್ಧ, ನ್ಯೂಸ್ ಅಂಡ್ ಯೂಸ್, ನಿಗೂಢ ಜಗತ್ತಿನಂತಹ ಕಾರ್ಯಕ್ರಮಗಳನ್ನು ಮತ್ತೆ ಮಾಡುತ್ತೇನೆಯೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಒಂದು ಮಾತನ್ನು ನಾನು ನಿಮಗೆ ಹೇಳಲೇ ಬೇಕು. ಸುವರ್ಣ ನ್ಯೂಸ್ ನನ್ನ ಮಗು. ಯಾರು ಒಪ್ಪಲಿ ಬಿಡಲಿ ಈ ಮಗುವಿನ ಹೆರಿಗೆ ನೋವನ್ನು ನಾನು ಅನುಭವಿಸಿದ್ದೇನೆ. ಇದು ರಚ್ಚೆ ಹಿಡಿದಾಗ ಸಮಾದಾನ ಮಾಡಿದ್ದೇನೆ. ಮುದ್ದು ಮಾಡಿದ್ದೇನೆ. ಹಾಗೆ ಮಗು ನನಗೆ ಒದ್ದಾಗ ಪ್ರೀತಿಯಿಂದ ತಲೆ ನೇವರಿಸಿದ್ದೇನೆ. ಈ ಮಗುವನ್ನು ಬಿಟ್ಟು ಹೋಗುವ ಘಳಿಗೆಯಲ್ಲಿ ಸ್ವಲ್ಪ ಬೇಸರವಾಗುವುದು ಸಹಜ. ಆದರೆ ಈ ಮಗುವಿನ ಬಗ್ಗೆ ನಿಮಗೆ ಪ್ರೀತಿ ಇರಲಿ. ನಿಮ್ಮ ಮಡಿಲಲ್ಲಿ ಹಾಕಿರುವ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳಿ.

Monday, August 10, 2009

ಇದು ಇಂದಿನ ಪತ್ರಿಕಾರಂಗ!

ಎಲ್ಲಾ ಪತ್ರಿಕೆ ಮಾಲೀಕರಿಗೆ ಕನ್ನಡ ಪ್ರಭ ರಂಗನಾಥ್ ಒಂದು ಪಾಠ ಕಲಿಸಿದ್ದಾರೆ. ಆ ಪಾಠ ಇಷ್ಟೆ 'ಯಾರು, ಎಷ್ಟೇ ಪ್ರತಿಭಾನ್ವಿತನಾಗಿದ್ದರೂ ಸಂಪೂರ್ಣ ಸ್ವಾತಂತ್ರ್ಯ ಕೂಡಬಾರದು!!' ಪತ್ರಿಕೆ ಮಾಲೀಕರ ಪೈಕಿ, ಈ ಪಾಠ ಹೆಚ್ಚು ತೀವ್ರವಾಗಿ ತಾಕಿರುವುದು ಮಿಸ್ಟರ್ ಸೋಂತಾಲಿಯಾಗೆ.
ರಂಗನಾಥ್, 90 ರ ದಶಕದಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟವರ ಮಧ್ಯೆ ರಂಗ ಎಂದೇ ಪರಿಚಿತ. ಅವರು ಕ್ರೈಮ್ ಬೀಟ್ ನಲ್ಲಿದ್ದುದರಿಂದ 'ಕ್ರೈಮ್ ರಂಗ' ಎಂಬ ಆರೋಪ ರೂಪದ ಬಿರುದು ಅವರಿಗುಂಟು. ಅವರು ತಮ್ಮ ವರದಿಗಳಿಗಿಂತ ಪೊಲೀಸ್ ಇಲಾಖೆಯಲ್ಲಿ ಇರುವ ಸಂಪರ್ಕಗಳಿಗಾಗಿ ಹೆಸರಾದವರು. ಸುದ್ದಿ ಹೆಕ್ಕುವ ಕಲೆ ಸಿದ್ಧಿಸಿತ್ತು. ಆ ಕಾರಣ ವೃತ್ತಿಯಲ್ಲಿ ಬೇಗನೇ ಮೇಲೆ ಬಂದರು. ಮುಖ್ಯವರದಿಗಾರ ಹಾಗೇ ಸಂಪಾದಕರೂ ಆದರು. ಸಂಪಾದಕರಾಗಿ ಕನ್ನಡ ಪ್ರಭಕ್ಕೆ ಹೊಸತನ ತಂದರು. ರಾಜಕುಮಾರ್ ತೀರಿಕೊಂಡಾಗ ಕನ್ನಡ ನಾಡೇ ಹುಬ್ಬೇರಿಸುವಂತೆ ಹದಿನಾರು ಪುಟಗಳ ಶ್ರದ್ಧಾಂಜಲಿಯನ್ನು ಅರ್ಧದಿನಕ್ಕೇ ಸಿದ್ಧಪಡಿಸಿದ್ದು ಶ್ಲಾಘನೀಯ. ಇತರ ಪತ್ರಿಕೆಗಳ ಸಂಪಾದಕರು ಯೋಚಿಸುವದಕ್ಕಿಂತ, ಯೋಜಿಸುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋದದ್ದು ರಂಗನಾಥ್ ವೈಶಿಷ್ಟ್ಯ. ವರ್ಷದ ಕನ್ನಡಿಗ ಎಂಬ ಯೋಜನೆ ಕೂಡಾ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ತೀರಾ ಇತ್ತೀಚೆಗೆ ಸಂಪಾದಕೀಯ ಪುಟದಲ್ಲಿ ಪ್ರೊಯೋಗ ಮಾಡಿ ಓದುಗರನ್ನು ಸೆಳೆದದ್ದು ಸಾಮಾನ್ಯವೇನಲ್ಲ.
ಕೆಲವೊಮ್ಮೆ ಅತಿರೇಕ ಇದ್ದದ್ದು ಢಾಳಾಗಿ ಕಾಣುತ್ತಿತ್ತು. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಸಾರಿ ಹೇಳಿದ್ದು ಕನ್ನಡಪ್ರಭ. ಆದರೆ ಇವರ ಸಹೋದರ ಪತ್ರಿಕೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಅಂತಹ ನಿಲುವು ತಾಳಲಿಲ್ಲ. ಪ್ರವೀಣ್ ಸೂದ್ ಮೈಸೂರಿನಲ್ಲಿ ಕಮೀಷನರ್ ಆಗಿದ್ದಾಗ ಫೇಕ್ ಎನ್ ಕೌಂಟರ್ (ಮುಖಾಮುಖಿ ಅಷ್ಟೆ. ಎನ್ ಕೌಂಟರ್ ಎಂದಾಕ್ಷಣ ಸಾಯಲೇಬೇಕಿಲ್ಲ) ಪ್ರಕರಣದ ವರದಿಯನ್ನು ಮಿಸ್ಟರ್ ರಂಗನಾಥ್ ಆ ಘಟನೆ ಆಗುವ ಮುನ್ನವೇ ಬರೆದಿಟ್ಟಿದ್ದರು ಎಂಬ ಸುದ್ದಿ ಇದೆ.
ಇಷ್ಟೆಲ್ಲಾ ಪ್ರಯೋಗಗಳು, ಅತಿರೇಕಗಳು ಸಾಧ್ಯವಾಗಿದ್ದು ಸೋಂತಾಲಿಯ ರಂಗನಾಥರ ಮೇಲಿಟ್ಟಿದ್ದ ವಿಶ್ವಾಸದಿಂದ. ಹಾಗೂ ಅವರು ಕೊಟ್ಟ ಸ್ವಾತಂತ್ರ್ಯದಿಂದ!
ಕೆಲವೇ ದಿನಗಳಲ್ಲಿ 'ಕನ್ನಡ ಪ್ರಭ' ಮತ್ತು 'ರಂಗನಾಥ್' ಎಂಬ ಎರಡು ಪದಗಳು ಒಂದೇ ಆಗಿಬಿಟ್ಟವು. ರಂಗ ಎಂದರೆ ಕನ್ನಡಪ್ರಭ ಮತ್ತು ವೈಸ್ ವರ್ಸಾ. ರಂಗನಾಥ್ ಮೊದಲು ವಕ್ರದೃಷ್ಟಿ ಬೀರಿದ್ದು ಪತ್ರಿಕೆಯಲ್ಲಿ ಬಹಳ ಕಾಲದಿಂದ ದುಡಿಯುತ್ತಿದ್ದ ಹಲವರ ಮೇಲೆ. ಅವರೆಲ್ಲರಿಗೂ ಹೊಸ ಹೊಸ ಸಾಫ್ಟ್ ವೇರ್ ಗಳನ್ನು ಕಲಿಯಲು ಡೆಡ್ ಲೈನ್ ನೀಡಿದರು. ಆಗದೇ ಹೋದರೆ ಮನೆಗೆ ನಡೆಯಿರಿ ಎಂದರು. ಬೇಸತ್ತು ಕೆಲವರು ಮನೆಗೆ ಹೋಗುವ ನಿರ್ಧಾರಕ್ಕೆ ಬರುವಂತೆ ಮಾಡಿದರು. ಕೇವಲ ಯುವಕರಿಂದ ತಾನು ಪತ್ರಿಕೆ ಮಾಡುತ್ತೇನೆ. ಹಳಬರೆಲ್ಲ ಸುಮ್ಮನೇ ದಂಡಕ್ಕೆ ಇರುವುದು ಎಂಬ ಮಾತುಗಳನ್ನಾಡುತ್ತಾ ಹಿರಿಯ ಜೀವಗಳು ವಿನಾಕಾರಣ ಗಿಲ್ಟ್ ನಿಂದ ಬೇಯುವಂತೆ ಮಾಡಿದ ಕೀರ್ತಿ ರಂಗನಾಥ್ ಗೆ ಸೇರಬೇಕು.
ರಂಗನಾಥ್ ಪತ್ರಿಕೆಗೆ ಏನೇ ಹೊಸತನ್ನು ತುಂಬಿದ್ದರೂ, ಆತ ಮಾಡದೇ ಹೋದದ್ದು ಏನೆಂದರೆ, ಪತ್ರಿಕೆಗೊಂದು ಭವಿಷ್ಯ ಕೊಡಲಿಲ್ಲ. ವರ್ತಮಾನಕಷ್ಟೆ ಅವರ ಕೊಡುಗೆ. ಈಗ ಅವರ ನಂತರ ಯಾರು ಎಂಬ ಪ್ರಶ್ನೆ ಬಂದಾಗ ಪತ್ರಿಕಾಲಯದಲ್ಲಿ ಯಾರೂ ಕಾಣುವುದಿಲ್ಲ. ಅವರ ಸಮಾನಕ್ಕೆ ಬೆಳೆದ ರವಿ ಹೆಗಡೆ ಕೂಡಾ ಹೊರಟು ನಿಂತಿದ್ದಾರೆ. ಒಂದಿಷ್ಟು ಕೆಲಸ ಕಲಿತಿದ್ದ ಕೆಲವರು ರಂಗನಾಥ್ ಕರೆದರೆ ಹೋಗಲು ತಾವೂ ರೆಡಿ ಎನ್ನುತ್ತಿದ್ದಾರೆ. ಸೋಂತಾಲಿಯಾಗೆ ಈಗ ತಪ್ಪಿನ ಅರಿವಾಗಿದೆ. ಏಕಾಏಕಿ ರಂಗನಾಥ್ ಹೊರಟು ನಿಂತಾಗ, ಅವರ ಸ್ಥಾನದಲ್ಲಿ ಯಾರನ್ನು ಕೂರಿಸಿವುದು?
ಕನ್ನಡ ಪತ್ರಿಕಾ ಇತಿಹಾಸವನ್ನು ಗಮನಿಸಿದರೆ ಮೊದಲ ಹಂತದಲ್ಲಿ ಉತ್ತಮ ಸಾಹಿತಿ ಬರಹಗಾರರು ಸಂಪಾದಕರಾಗಿ ದುಡಿದಿದ್ದಾರೆ. ಅವರಿಗೆ ಹೇಗೆ ಹೇಳುತ್ತೇವೆ, ಎನ್ನವುದಕ್ಕಿಂತ ಏನನ್ನು ಹೇಳುತ್ತೇವೆ ಎಂಬುದರ ಬಗ್ಗೆ ತೀವ್ರ ಆಸ್ಥೆ. ಮುಖ್ಯವಾಹಿನಿ ಮತ್ತು ಟ್ಯಾಬ್ಲಾಯ್ಡ್ ಕ್ಷೇತ್ರದಲ್ಲೂ ಹೀಗೇ ಆದದ್ದು. ನಂತರದ ದಿನಗಳಲ್ಲಿ, ಬರಹಗಾರರು ಹಿಂದಕ್ಕೆ ಸರಿದು, ಪತ್ರಿಕೋದ್ಯಮವನ್ನು ಅಕಡೆಮಿಕ್ ಶಿಸ್ತಾಗಿ ಓದಿಕೊಂಡವರು ಪತ್ರಿಕೆಗಳ ಸಾರಥ್ಯ ವಹಿಸಿದರು. ಅವರ ಪಾಲಿಗೆ ಪತ್ರಿಕೆ ಸಂವಹನಕ್ಕೆ ಒಂದು ಮಾಧ್ಯಮ ಅಷ್ಟೆ. ಇಂತಹವರು ಬಹುಬೇಗನೆ ಪತ್ರಿಕಾ ಮಾಲೀಕರ ಅಗತ್ಯ, ಜಾಹಿರಾತುದಾರರ ಮರ್ಜಿ ಮತ್ತು ವಿತರಕರ ಹಿತಾಸಕ್ತಿಗಳಿಗೆ ಮಣಿಯುತ್ತಿದ್ದರು. ಕಾರಣ ಇಷ್ಟೆ, ಅವರು ಕಲಿತು ಬಂದ ಪತ್ರಿಕೋದ್ಯಮ ಪಾಠದ ಪ್ರಕಾರ ಹೆಚ್ಚು ಸರ್ಕ್ಯುಲೇಶನ್ ಯಶಸ್ವೀ ಸಂವಹನದ ಸಂಕೇತ. ಜತೆಗೆ ಅವರಿಗೆ ಆಡಳಿತದಲ್ಲಿ ಹಿಡಿತ ಸಿದ್ಧಿಸಿತ್ತು. ತಮ್ಮ ಕೈ ಕೆಳಗಿನವರಿಂದ ಕೆಲಸ ತೆಗೆಯುವ ಕಲೆ ಗೊತ್ತು. ಆದರೆ ಉತ್ತಮ ಪತ್ರಕರ್ತರನ್ನು ಸೃಷ್ಟಿಸುವ ಜರೂರು ಇವರಿಗಿಲ್ಲ. ರಂಗನಾಥ್ ಅನೇಕರಿಗೆ ಕೆಲಸ ಕೊಟ್ಟು ಪತ್ರಕರ್ತರನ್ನಾಗಿ ಮಾಡಿರಬಹುದು.
ಆದರೆ ಅದೇ ಪತ್ರಿಕೆಯಲ್ಲಿ ಬಹಳ ಕಾಲ ದುಡಿದ ಸೂ. ರಮಾಕಾಂತ್ ಹಲವು ಆರೋಗ್ಯವಂತಹ ಮನಸ್ಸುಗಳಿಗೆ ಪ್ರೇರಕರಾಗಿದ್ದರು. ದೇವನೂರು ಮಹದೇವ ತನಗೆ ಸಮಾಜವಾದದ ದೀಕ್ಷೆ ಕೊಟ್ಟಿದ್ದೇ ಸೂ.ರಮಾಕಾಂತ್ ಎಂದು ಹೇಳಿಕೊಂಡಿದ್ದಾರೆ. ಒಮ್ಮೆ ಯೋಚಿಸಿ, ಇಂದಿನ ಪತ್ರಿಕೋದ್ಯಮದಲ್ಲಿ ಇಂತಹದೊಂದು ದೀಕ್ಷೆ ಕೊಡಬಲ್ಲವರು ಎಷ್ಟು ಜನರಿದ್ದಾರೆ? (ಬೇಕಾದ್ರೆ ಕೋಮುವಾದದ ದೀಕ್ಷೆ ಕೊಡಲು ಬೇಕಾದಷ್ಟು ಜನರಿದ್ದಾರೆ!) ಅಬ್ಬಬ್ಬಾ ಅಂದರೆ ರಂಗನಾಥ್ ತನಗೆ ಗೊತ್ತಿರುವ ಹಿರಿಯ ಅಧಿಕಾರಿಗೆ ಕಿರಿಯ ವರದಿಗಾರನನ್ನು ಪರಿಚಯಿಸಿ ಸುದ್ದಿ ತರಲು ಸಹಾಯ ಮಾಡಬಹುದು.
ಇದೆಲ್ಲಾ ಏಕೆ ಹೇಳಬೇಕಾಯಿತು ಎಂಬುದು ಈ ಬ್ಲಾಗ್ ಓದುಗರಿಗೆ ಗೊತ್ತಿದೆ. ರಂಗನಾಥ್ ಮತ್ತು ರವಿ ಹೆಗಡೆ ತಮ್ಮ ಕೆಲ ಗೆಳೆಯರ ಸಂಗಡ ಸುವರ್ಣ ಚಾನೆಲ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಕಳೆದ ವಾರ ಅವರು ರಾಜೀನಾಮೆ ನೀಡಿದರು ಎನ್ನುವ ಸುದ್ದಿ ಜಗಜ್ಜಾಹೀರು. ಪತ್ರಿಕೆಗೆ ಯಾರೂ ಅನಿವಾರ್ಯರಲ್ಲ. ಆದರೆ ಆಯಕಟ್ಟಿನ ಜಾಗೆಯಲ್ಲಿದ್ದವರೆಲ್ಲಾ ಗುಳೇ ಹೊರಟರೆ ಪತ್ರಿಕೆ ಸುಧಾರಿಸಿಕೊಳ್ಳಲು ಸಮಯ ಬೇಕಾಗುತ್ತದೆ.

Tuesday, July 28, 2009

ರಿಯಾಕ್ಷನ್ ಪಾರ್ ರಿಯಾಕ್ಷನ್ ಜರ್ನಲಿಸಂ..!

ಎಲೆಕ್ಟ್ರಾನಿಕ್ ಮಾಧ್ಯಮಗಳ ಸುದ್ದಿಹಸಿವು, ಅದಕ್ಕಾಗಿ ಅವರು ಆಯ್ದುಕೊಳ್ಳುವ ಮಾರ್ಗಗಳ ಕುರಿತಂತೆ ಸ್ವತಃ ಎಲೆಕ್ಟ್ರಾನಿಕ್ ಮೀಡಿಯಾ ಒಂದರ ದೆಹಲಿ ಪ್ರತಿನಿಧಿಯಾಗಿರುವ ಶ್ರೀನಿವಾಸಗೌಡ ತಮ್ಮ ಖಾಸಗಿ ಡೈರಿಯಲ್ಲಿ ಬರೆದಿದ್ದಾರೆ.
ಸುದ್ದಿಯನ್ನು ಸೃಷ್ಟಿಸುವ ಚಾಳಿ ಇತ್ತೀಚಿಗೆ ಈ ಮಾಧ್ಯಮಗಳಲ್ಲಿ ವ್ಯಾಪಕವಾಗಿದೆ. ರಿಯಾಕ್ಷನ್ ಫಾರ್ ರಿಯಾಕ್ಷನ್ ಜರ್ನಲಿಸಂ ಹೊಸ ತಲೆಮಾರಿನ ಪತ್ರಕರ್ತರನ್ನು ಹೇಗೆ ದಿಕ್ಕುತಪ್ಪಿಸಿದೆ ಎಂಬುದಕ್ಕೆ ಈ ಲೇಖನದಲ್ಲಿ ಒಳನೋಟಗಳಿವೆ. ಸುದ್ದಿ ಮಾತು ಓದುಗರಿಗಾಗಿ ಶ್ರೀನಿವಾಸಗೌಡರು ಬರೆದ ಲೇಖನ ಇಲ್ಲಿದೆ.

ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದವು.ಡೆಲ್ಲಿ ಅನ್ನೊ ನಗರಿ ಚುನಾವಣಾ ಬಿಸಿಯಿಂದ ಕೊತ, ಕೊತ ಅಂತ ಕುದಿಯುತ್ತಿತ್ತು. ಅಧಿಕಾರ ಹಿಡಿಯುವ ಹಪಹಪಿಯಿಂದ ರಾಜಕೀಯ ನಾಯಕರು ಕೆಸರೆರಚಾಟ, ಮಾತಿನ ಧಾಳಿ (ಬೈಟ್ ದಾಳಿ) ಮಾಡುತ್ತಿದ್ದರು. ನಾರ್ಥ್ ಇಂಡಿಯಾದ (ನ್ಯಾಷನಲ್ ಮೀಡಿಯಾದವರು) ಮಾದ್ಯಮಗಳು ರಾಜಕೀಯ ನಾಯಕರ ಹೇಳಿಕೆಗಳನ್ನ ರಾಷ್ಟ್ರೀಯ ಸುದ್ದಿಮಾಡುತ್ತಿದ್ದರು. ತಮಗೆ ಸಿಕ್ಕಿದ್ದೆಲ್ಲವನ್ನು ಎಕ್ಸ್ಲೂಸಿವ್ ಅಂತ ತೋರಿಸೊರು. ನ್ಯಾಷನಲ್ ಮಿಡಿಯಾಗಳಲ್ಲಿ ಪಸ್ಟ್ ಇನ್ ಸಿಎನ್‌ಎನ್ ಐಬಿಎನ್, ಪಸ್ಟ್ ಇನ್ ಟೈಮ್ಸ್ ನೌ, ಪಸ್ಚ್ ಇನ್ ಆಜ್ ತಕ್ ,ಅಂತ ಪ್ರೋಮೋ ಹಾಕಿಕೊಂಡು ರಾಜಕೀಯ ನಾಯಕರ ಸಂದರ್ಶನಗಳು, ಸುದ್ದಿಗಳು ಬರುತ್ತಿದ್ದವು.

ರಾಜಕೀಯ ನಾಯಕರ ಸಂದರ್ಶನ ಸಿಕ್ಕಿದ್ದೆ ಜೀವಮಾನದ ಸಾಧನೆ ಅಂಥ ಟೆಲಿವಿಷನ್ ಪತ್ರಕರ್ತರು ರೋಮಾಂಚನಕ್ಕೆ ಒಳಗಾಗಿದ್ದರು. ದಿನ ಬೆಳಾಗಾದರೆ 'ಲಾಲೂ ಹೀಗೆ ಅಂದವ್ರೆ ನೀವು ಏನ್ ಹೇಳ್ತಿರಿ', 'ಅಮರ್ ಸಿಂಗ್ ಹಿಂಗೆ ಹೇಳವ್ರಲ್ಲಾ ನೀವು ಏನಂತೀರಿ', 'ವರುಣ್ ಗಾಂಧಿ ಹೇಳಿಕೆಗೆ ನಿಮ್ಮ ರಿಯಾಕ್ಷನ್ ಏನು', 'ಮಾಯಾವತಿ ಹಿಂಗೆ ಹೇಳವ್ರಲ್ಲಾ ಅದಕ್ಕೆ ನೀವೆಂಗೆ ಹೇಳ್ತೀರಿ', ಅಂತ ಬೈಟ್ ತೆಗೆದುಕೊಳ್ಳೊದು ಆಯಾ ಬೀಟ್ ನಲ್ಲಿರೋ ಕೆಲಸ. ಇದಕ್ಕೆ ರಾಜಕೀಯ ಪಕ್ಷಗಳ ಸಹಕಾರ ಹೇಗಿದೆಯಪ್ಪಾ ಅಂದರೆ, ದಿನಾ ಸಾಯಂಕಾಲ ಎಲ್ಲಾ ಪಕ್ಷಗಳ ಕಚೇರಿಯಲ್ಲೂ ಪ್ರೆಸ್ ಕಾನ್ಪರೆನ್ಸ್ ಕರೆಯುತ್ತಾರೆ. ಅವರು ಹೇಳಿದ್ದಕ್ಕೆ ಇವರು, ಇವರು ಹೇಳಿದ್ದಕ್ಕೆ ಅವರು ಉತ್ತರ ಕೊಡುತ್ತಾರೆ.

ನೇರವಾಗಿ ಯಾರೂ ಕಚ್ಚಾಡಲ್ಲಾ, ಮೀಡಿಯಾ ರಾಜಕೀಯ ಪಕ್ಷಗಳಿಗೆ ಮೀಡಿಯೇಟರ್ ಇದ್ದ ಹಾಗೆ. ಚಾನಲ್ ಗಳಿಗೆ ಬೇಕಾಗಿದ್ದು ಏನು ಅಂತ ಅವರಿಗೊ ಅರ್ಥ ಆಗಿಹೊಗಿದೆ. ಅದಕ್ಕಾಗಿಯೇ ರಾಜಕೀಯ ಪಕ್ಷಗಳೂ ವರ್ಣರಂಜಿತವಾಗಿ ಮಾತಾಡೋರನ್ನ ಪಕ್ಷದ ವಕ್ತಾರರನ್ನಾಗಿ ನೇಮಿಸಿದ್ದಾರೆ.ಅವರಲ್ಲಿ ಬಹುತೇಕರು ಸುಪ್ರಿಂ ಕೋರ್ಟ್ ಲಾಯರ್ ಗಳು, ಇಲ್ಲಾ ಹಳೇ ಜರ್ನಲಿಸ್ಟ್ ಗಳು. ಪಾಟಿ ಸವಾಲಿಗೆ ಉತ್ತರಿಸಲು ಇವರಿಗೇ ಅಲ್ಲ ಗೊತ್ತಿರೋದು. ಅವರ ಕೆಲಸ ಏನಪ್ಪಾ ಅಂದರೆ ದಿನಪೂರ್ತಿ ಚಾನಲ್ ಗಳಿಗೆ ಬೈಟ್ ಕೋಡೋದು. ಪತ್ರಿಕೆಗಳಿಗೆ ಮಾತಾಡೋದು. ರಿಯಾಕ್ಷನ್ ಪಾರ್ ರಿಯಾಕ್ಷನ್ ಅದು ಅವರ ಕೆಲಸ ಯಾವ ಪಕ್ಷವೂ ಇದರಲ್ಲಿ ಹಿಂದೆ ಬಿದ್ದಿಲ್ಲ ಬಿಡಿ.

ಅವತ್ತು ಏನಾಯ್ತು ಅಂದರೆ ಬಿಜೆಪಿ ಕಚೇರಿಯಲ್ಲಿದ್ದೆವು. ಯಾರೋ ಎಲಕ್ಟ್ರಾನಿಕ್ ಮೀಡಿಯಾದ ವರದಿಗಾರ್ತಿ ಯೊಬ್ಬಳಿಗೆ ಅರುಣ್ ಶೌರಿ ಸಿಕ್ಕಾಪಟ್ಟೆ ರೇಗ್ತಾ ಇದ್ದರು. ನಾನು ಕುತೂಹಲಕ್ಕೆ ಅಂತ ಹತ್ತಿರ ಹೋದೆ.
'ಡೋಂಟ್ ಡೂ ದಿಸ್ ಬ್ಲಡಿ ಜರ್ನಲಿಸಂ, ದಿಸ್ ಈಸ್ ಕಾಲ್ಡ್ ಬೈಟ್ ಜರ್ನಲಿಜಂ. ವೈ ಶುಡ್ ಐ ರಿಯಾಕ್ಟ್ ಪಾರ್ ಸಂ ಒನ್ಸ್ ಸ್ಟೇಟ್ ಮೆಂಟ್. ಗೋ ಗೋ, ಲರ್ನ್ ವಾಟ್ ಈಸ್ ಜರ್ನಲಿಜಂ' ಅಂದರು .
ಒಂದು ರಿಯಾಕ್ಷನ್ ಬೈಟ್ ಕೇಳಿದ ಕಾರಣಕ್ಕೆ ಆ ರಿಪೋರ್ಟರ್ ಸಿಕ್ಕಾಪಟ್ಟೆ ಬೈಸಿಕೊಂಡು ಹ್ಯಾಪ ಮೊರೆ ಹಾಕಿಕೊಂಡು ಕಣ್ಣೀರಾಗುತ್ತಿದ್ದಳು. ಅಷ್ಟೇನು ಅನುಭವಿ ಅಲ್ಲದ ಆಕೆ ಸಿಎನ್‌ಇಬಿ ಎಂಬ ಹಿಂದಿ ಚಾನಲ್ಲಿನ ವರದಿಗಾರ್ತಿ, ಆಕೆ ಮಾಡಿದ ತಪ್ಪೇನಪ್ಪಾ ಅಂದರೆ, ಲಾಲೂ ಪ್ರಸಾದ್ ಯಾದವ್ ಅರುಣ್ ಗಾಂಧಿ ಕುರಿತು ಕೊಟ್ಟಿದ್ದ ಹೇಳಿಕೆಗೆ ಅರುಣ್ ಶೌರಿ ರಿಯಾಕ್ಷನ್ ಕೇಳಿ ಮೈಕ್ ಮುಂದಿಟ್ಟುಕೊಂಡಿದ್ದಳು. ಮೊದಲೇ ಪೈರ್ ಬ್ರಾಂಡ್ ಅರುಣ್ ಶೌರಿ, ಅವಳು ಚಿಕ್ಕ ಹುಡುಗಿ ಅನ್ನೊದನ್ನ ಮರೆತು ಝಾಡಿಸಿಬಿಟ್ಟಿದ್ದಾರೆ, ಹಿಂದೊಮ್ಮೆ ಪರ್ತಕರ್ತನಾಗಿದ್ದ ಶೌರಿ ಅವರಿಗೆ ಈಗಿನ ಎಲೆಕ್ಟ್ರಾನಿಕ್ ಮಾದ್ಯಮಗಳ ಕಾರ್ಯವೈಖರಿ ಬಗ್ಗೆ ಸಿಕ್ಕಾಪಟ್ಟೆ ಅಸಹನೆ ಇದ್ದ ಹಾಗೆ ಕಾಣುತ್ತಿತ್ತು. ಪಾಪ ಆ ಹುಡುಗಿ ದಿನಾ ಮಾಡೋದನ್ನೆ ಶೌರಿ ಮುಂದೆ ಮಾಡಿದಾಳೆ ಅವಳದೇನು ತಪ್ಪು....!

ಅವಳನ್ನು ನಿಯಂತ್ರಿಸೋ ಡೆಸ್ಕ್ ಇಂಚಾರ್ಜ್ ಅದನ್ನೇ ಬೇಕು ಅಂತ ಕೇಳಿರ್ತಾನೆ. 'ಗೆಟ್ ಸಮ್ ರಿಯಾಕ್ಷನ್ ಪಾರ್ ವರುಣ್ ಲಾಲೂ ಸ್ಟೇಟ್ ಮೆಂಟ್ 'ಅಂತ. ಅದಕ್ಕಂತ ಆಯಮ್ಮ ಸ್ವಲ್ಪಾನು ಯೋಚಿಸದೇ ಎದುರು ಸಿಕ್ಕ ಬೆಜೆಪಿ ನಾಯಕ ಅರುಣ್ ಶೌರಿ ಬೈಟ್ ಕೇಳಿದ್ದಾಳೆ.
ಅದೇ ರವಿಶಂಕರ್ ಪ್ರಸಾದ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು, ಅನಂತ್ ಕುಮಾರ್ ಅಂತ ಮೀಡಿಯಾ ಸೇವಿ ನಾಯಕರ ಹತ್ತಿರ ಬೈಟ್ ಕೇಳಿದ್ರೆ ಬರೇ ಬೈಟ್ ಯಾಕೆ ಸಂದರ್ಶನವೇ ಸಿಕ್ಕಿರೋದು...!

ಆದರೆ ವಾಸ್ತವ ಏನಪ್ಪಾದನ್ನ ಅರುಣ್ ಶೌರಿ ಸಿಟ್ಟಿನಲ್ಲಿ ಗಂಬೀರವಾದ ಅರ್ಥ ಇದೆ. ಇಂಡಿಯಾದ ಎಲೆಕ್ಟ್ರಾನಿಕ್ ಮಾದ್ಯಮ ಪ್ರಾಕ್ಟೀಸ್ ಮಾಡ್ತಾ ಇರೋ ವರದಿಗಾರಿಕೆ ಸರೀನಾ ಅನ್ನೊದು. ಯಾಕಂದರೆ ಇವತ್ತು ಪೊಲಟಿಕಲ್ ವರದಿಗಾರಿಕೆ ಅಂದರೆ ಏನು..? ರಾಜಕೀಯ ನಾಯಕರಿಂದ ಬೈಟ್ ತೆಗೆದುಕೊಂಡು ಬರೋದು, ಅದು ಎಂತಾ ಬೈಟು ಬೇಕು ಅಂದರೆ, ಅದಕ್ಕೆ ವಿರೋಧಿಪಕ್ಷದವನು ಕೆರಳಿ ಪ್ರತಿಕ್ರಿಯೆ ನೀಡುವಸ್ಟು ಸ್ಟ್ರಾಂಗ್ ಆಗಿರಬೇಕು. ಇಲ್ಲಾ ಅಂದರೆ ಅದು ಉಪಯೋಗಕ್ಕೆ ಬರಲ್ಲ ಅನ್ನೊದು ಈಗಿನ ನ್ಯೂ ಜರ್ನಲಿಸಂ.

ಬೈಟ್ ನಲ್ಲಿ ಏನಿರಬೇಕು ಬೈಗುಳ ಬೇಕು, ಮತ್ತೊಬ್ಬರನ್ನ ಅವಮಾನಿಸಬೇಕು, ಕೆರಳಿಸಬೇಕು, ಇಲ್ಲಾ ತೆಗಳಬೇಕು, 'ಇಲ್ಲಾರಿ ನಾನು ಮತ್ತೊಬ್ಬರ ಬಗ್ಗೆ ಮಾತಾಡಲ್ಲಾ ರೀ ಅಂದರೆ' ಆ ನಾಯಕ ವೇಸ್ಟ್, ಟಿಆರ್ ಪಿ ತಂದುಕೊಡದ ಪುರಾಣ, ಹರಿಕತೆ. ಒಳ್ಳೇ ಯೋಚನೆ, ಅಭಿವೃದ್ದಿ ಕೆಲಸ ಯಾವುದೂ ಬೇಡ ಬೇಕಿರೋದು ಸ್ಪೈಸಿ ಬೈಟ್ .
.
ಬೈಟ್ ಯಾವಾಗಲೂ ಸಮ್ ಥಿಂಗ್ ಸ್ಪೈಸಿ ಇರಬೇಕು...

ಪತ್ರಕರ್ತರನ್ನ ಅರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಕಾಂಟ್ರೋವಸಿ ಬೈಟ್ ಕೊಡುವ ರಾಜಕೀಯ ವ್ಯಕ್ತಿ ಗಳು ಅಂದ್ರೆ ಜರ್ನಲಿಸ್ಟ್ ಗಳಿಗೂ ಖುಷಿ. ಅವರ ಹಿಂದೆ ದಿನಾಲೂ ಬೀಟ್, ಅವರು ಹೇಳಿದ್ದೆಲ್ಲಾ ನ್ಯೂಸ್.
ಅದೇ ಬೈಟ್ ಕೊಟ್ಟ ವ್ಯಕ್ತಿ, ನಾಳೆ ನಾನು ಹಾಗೆ ಹೇಳಿಲ್ಲಾ ಅದೆಲ್ಲಾ ಮಾದ್ಯಮದವರ ಸೃಷ್ಠಿ ಅಂದರೂ ಬೇಜಾರಿಲ್ಲಾ. ಹಳೇ ಬೈಟ್ ಮತ್ತು ಹೊಸ ಬೈಟ್ ಸೇರಿಸಿ ಮಾಸಾಲ ಅರೆದರೆ ಒಳ್ಳೇ ಟಿಆರ್ ಪಿ ಬರುತ್ತೆ ಚಾನಲ್ಲಿಗೆ. ಬೈಟ್ ಜರ್ನಲಿಸಂ ಅಂದ್ರೆ ಸುಳಿವು ಸಿಕ್ಕಿತಲ್ಲಾ.

ಅದು ಬಿಡಿ ಸದ್ಯಕ್ಕೆ ಚಾಲ್ತಿಯಲ್ಲಿರೊ ಇನ್ನೊಂದು ಜರ್ನಲಿಸಂ ಇದೆ ಅದು ಇನ್ವಸ್ಟಿಗೇಟೀವ್ ಜರ್ನಲಿಸಂ. ಹಾಗಂದ್ರೆ ಹೊಸ ಅರ್ಥನೇ ಇದೆ.
ಈಗ ಇನ್ವೆಸ್ಚಿಗೇಟೀವ್ ಜರ್ನಲಿಸಂ ಅಂದರೆ ಏನಪ್ಪಾ ಅಂದರೆ ರಾಜಕಾರಣಿಗಳು, ಉದ್ಯಮಿಗಳು, ಮತ್ತಿತರ ಒತ್ತಡ ಗುಂಪುಗಳು ತಮಗೆ ಆಗದವರ, ತಮ್ಮ ವಿರೋಧಿಗಳ ಬಗ್ಗೆ ಖುದ್ದು ಮಾಹಿತಿ, ಸಿಡಿ, ದಾಖಲೆ, ಕಡೆಗೆ ಒಂದು ಬೈಟು ಎಲ್ಲಾ ಅವರೇ ಒದಗಿಸಿದರೆ. ಅದು ಇನ್ವೆಸ್ಟಿಗೇಶನ್ ರಿಪೋರ್ಟ್.

ಬಹುಶ ಅರುಣ್ ಶೌರಿ ಆರ್ಕೋಶ ಎಲಕ್ಟಾನಿಕ್ ಮಾದ್ಯಮ ತೀರಾ ದಾರಿತಪ್ಪಿದ ಸ್ಥಿತಿಗೆ ತಲುಪಿದ್ದಕ್ಕೆ ಸಿಕ್ಕ ಪ್ರತಿರಕ್ರಿಯೆ . ಮಿಡಿಯಾಗಳು ದಾರಿತಪ್ಪಿವೆ ಅನ್ನೊದು ಗೋಚರಿಸ್ತಾ ಇದೆ, ಆದರೂ ಕೆಲವು ಚಾನಲ್ ಗಳು ಕಾಲನ ಹೊಡೆತಕ್ಕೆ ಸಿಕ್ಕಿಯೂ ಬದುಕಿವೆ. ಮಾದ್ಯಮ ಬೀಡುಬೀಸಾಗಿ ಬೆಳೆಯುತ್ತಿದೆ ಯಾರ್ಯಾರ ಕೈಲೋ ಸಿಕ್ಕಿ ನಲುಗುತ್ತಿವೆ. ಅದಕ್ಕೆ ಸದ್ಯಕ್ಕೆ ಅಂತ್ಯ ಇದ್ದಂತೆ ಕಾಣುತ್ತಾ ಇಲ್ಲ. ಕನ್ಟ್ರಕ್ಚೀವ್ ಮಾದ್ಯಮ ಅನ್ನೊ ಕಲ್ಪನೆ ಇಲ್ಲಿಗೆ ಇಲ್ಲಿಗೆ ಇನ್ನೂ ಬಂದಂತೆ ಕಾಣೊಲ್ಲ.
ಬೇರೆ ಬೇರೆ ದೇಶಗಳ ಮಾದ್ಯಮಗಳು ಈಗಾಗಲೇ ಆ ಸ್ಥಿತಿ ತಲುಪಿ ಆಚೆ ಬಂದಿವೆ ಈಗ ಬಿಬಿಸಿಯನ್ನಾಗಲಿ, ಸಿಎನ್‌ಎನ್ ಆಗಲಿ, ಆಸ್ಟ್ರೇಲಿಯಾ ನ್ಯೂಸ್ ಆಗಲಿ ನೋಡಿದರೆ ಅಲ್ಲಿ ನಮ್ಮಂತೆ ಇಲ್ಲ, ಅಲ್ಲಿ ಟೀವಿ ಅ?ಯಂಕರ್ ಗಳು ನಮ್ಮವರ ಹಾಗೆ ಕಿರುಚುವುದಿಲ್ಲ, ಸಂದರ್ಶನಗಳಲ್ಲಿ ಗಲಾಟೆ ಇರಲ್ಲ.

ಕಾರ್ಯಕ್ರಮಕ್ಕೆ ರೋಚಕತೆ ಬೇಕಿಲ್ಲ, ಸೀರಿಯಸ್ ನೆಸ್ ಬೇಕು ಅಲ್ಲಿನ ರಾಜಕೀಯ ನಾಯಕರೂ ಯಾರೂ ನಮ್ಮವರಂತೆ ಬೈಟ್ ಕೊಡಲ್ಲ. ನಾವೆಲ್ಲ ಈಗ ಅದನ್ನೆಲ್ಲಾ ಯೋಚಿಸಬೇಕಿದೆ, ಜನಕ್ಕೆ ಟಿವಿ ನ್ಯೂಸ್ ನಲ್ಲಿ ಸೆಕ್ಸ್ ಪಿಲ್ಂ ಬೇಕು ಅಂತ ಅನ್ನಿಸಿದರೆ ಕೊಡೋಕೆ ಸಾದ್ಯನಾ. ಅದರಿಂದ ಟಿಆರ್ ಪಿ ಬರುತ್ತಲ್ಲಾ.

ಜನಕ್ಕೆ ಏನು ಬೇಕೋ ಅದನ್ನ ಕೊಡ್ತಿವಿ ಅನ್ನೊ ವಾಧದಲ್ಲಿ ಹುರುಳಿಲ್ಲ, ಜನ ಅದನ್ನೇ ನೊಡ್ತಾರಲ್ರೀ ಅದಕ್ಕೆ ಬೆಲೆ ಇರೋದು ಅಂದ್ರೆ ತಪ್ಪಾಗುತ್ತೆ, ಜನಕ್ಕೂ ಒಂದು ದಿನ ಎಲ್ಲಾ ಅರ್ಥ ಆಗುತ್ತೆ. ಕಾಯಬೇಕು ಅಷ್ಟೇ...


Thursday, July 23, 2009

ಕೇಶಿರಾಜರು ಮತ್ತು ಕನ್ನಡ ಪತ್ರಿಕೋದ್ಯಮ!

ಕೆಲವರಲ್ಲಿ ಒಂದು ಕಲ್ಪನೆ ಇದೆ. ಅದೇನೆಂದರೆ, ವ್ಯಾಕರಣ ದೋಷವಿಲ್ಲದೆ ಬರೆಯುವವರೆಲ್ಲಾ ಉತ್ತಮ ಪತ್ರಕರ್ತರಾಗಬಹುದು! ಮತ್ತು ಅದೇ ನಂಬಿಕೆಯ ಮುಂದುವರಿದ ಭಾಗ - ಭಾಷೆ, ವ್ಯಾಕರಣ ತಿಳಿಯದವನು ಪತ್ರಕರ್ತನಾಗಲಾರ ಮತ್ತು ಪತ್ರಕರ್ತನಾಗಕೂಡದು!
ಹೀಗೆ ಯೋಚಿಸುವವರು, ಮುಲಾಜೇ ಬೇಡ, ಅವರು ಬೇರಾರೂ ಅಲ್ಲ - ಭಾಷೆ, ವ್ಯಾಕರಣಗಳನ್ನು ಮಾತ್ರ ಕಲಿತು ಈ ಕ್ಷೇತ್ರಕ್ಕೆ ಬಂದವರು. ಪ್ರತಿಷ್ಠಿತ ಪತ್ರಿಕೆಗಳ ಆಯಕಟ್ಟಿನ ಜಾಗಗಳಲ್ಲಿ ಕುಳಿತಿರುವವರಿಗೆ ಪುಟದಲ್ಲಿ ಹೀಗೆ ತಪ್ಪುಗಳನ್ನು ಹೆಕ್ಕಿ ತೆಗೆಯುವುದೇ ಮುಖ್ಯವಾಗಿಬಿಟ್ಟಿದೆ. "ಅಯ್ಯೋ, ಇದು ಬ್ಲಂಡರ್. ಯಾವನ್ರೀ ಅವನು, 'ಚಳವಳಿ'ಯನ್ನು 'ಚಳುವಳಿ' ಅಂತ ಬರೆದವನು. ಕನ್ನಡ ಬರದವರೆಲ್ಲ ಪತ್ರಿಕೋದ್ಯಮಕ್ಕೆ ಬಂದರೆ ಹೀಗೆ ಆಗೋದು. ಅವನನ್ನು ಕರೆದು ಸ್ವಲ್ಪ ಬುದ್ಧಿ ಹೇಳಿ." - ಹೀಗೊಂದು ಫರ್ಮಾನು ಹೊರಡುತ್ತದೆ. ಅದರಂತೆ ಆ ವಿಭಾಗದ ಮುಖ್ಯಸ್ಥರು ಸಂಬಂಧಪಟ್ಟ ವರದಿಗಾರನನ್ನೊ, ಉಪಸಂಪಾದಕನನ್ನೋ ಝಾಡಿಸುತ್ತಾರೆ.
ವಿಭಾಗದ ಮುಖ್ಯಸ್ಥರು ಎನಿಸಿಕೊಂಡ ಅನೇಕರಿಗೆ ತಮ್ಮ ಕೆಳಗಿನವರ ವರದಿಗಳಲ್ಲಿ ಇಂತಹ ತಪ್ಪುಗಳನ್ನು ಹುಡುಕಿ 'ಸುದ್ದಿ ಮಾಡುವುದೇ' ಚಾಳಿ. ಹಾಗೆ ಸುದ್ದಿ ಮಾಡುವ ಮುಊಲಕ ತಾವು ಶಬ್ದಮಣಿದರ್ಪಣದ ಕೇಶಿರಾಜನೋ, ರಾಣಿಯೋ ಎಂಬಂತೆ ಪೋಸು ಕೊಡುತ್ತಾರೆ.
ಇತ್ತೀಚೆಗೆ ಇಂತಹ ಅನೇಕ ಕೇಶಿರಾಜರಲ್ಲಿ ಒಬ್ಬರು ಪ್ರಮುಖ ಕಾರ್ಯಕ್ರಮದ ವರದಿಗೆಂದು ಹೊರದೇಶಕ್ಕೆ ಹೋಗಿದ್ದರು. ಅಲ್ಲಿಂದ ಅವರು ಕಳುಹಿಸಿದ ವರದಿಗಳು ಇಂದು ಕಚೇರಿಯ ತುಂಬಾ, ಅಷ್ಟೇಕೆ ಅನೇಕ ಪತ್ರಿಕಾಲಯಗಳಲ್ಲಿ ಪ್ರಮುಖ ಸುದ್ದಿ. ಅವರ ವರದಿಗಳಲ್ಲಿ ಪದೇ ಪದೇ ಕಾಣಿಸಿಕೊಂಡ ಪದ 'ಪರಿಸರ ಮಾಲಿನ್ಯ ಸಂರಕ್ಷಣೆ'!!! ಅಂದಹಾಗೆ ಅವರು ಬರೆಯುತ್ತಿದ್ದುದು ಹವಾಮಾನ ವೈಪರೀತ್ಯದ ಬಗ್ಗೆ. Climate Change ಎಂದರೆ ಪರಿಸರ ಮಾಲಿನ್ಯ ಎಂದುಕೊಂಡೇ ಅವರು ಮೊದಲ ಎರಡು ದಿನ ವರದಿ ಮಾಡಿದ್ದರು! ವಿಶಿಷ್ಟ ಅಂದರೆ ಆ ವರದಿಗಳನ್ನು ಪತ್ರಿಕಾಲಯದ ನೊಟೀಸ್ ಬೋರ್ಡ್ ನಲ್ಲಿ ಅಂಟಿಸಿ, ಅಲ್ಲಿದ್ದ ತಪ್ಪುಗಳನ್ನು ಕೆಂಪು ಶಾಯಿಯಲ್ಲಿ ಗುರುತಿಸಲಾಗಿತ್ತು ಎಂಬ ಸುದ್ದಿಯುಊ ಹೊರಬಿದ್ದಿದೆ.
ಅದು ಒತ್ತಟ್ಟಿಗಿರಿಲಿ..
ಭಾಷೆಗೆ ಮಹತ್ವ ಕೊಡಲಿ. ಆದರೆ ಭಾಷೆಗಿಂತ ವಿಚಾರ, ಆಲೋಚನೆ, ಹೊಸ ದೃಷ್ಟಿಕೋನ ಮುಖ್ಯ ಅಲ್ಲವೆ?
ಅದೆಷ್ಟೋ ದಶಕಗಳ ಕಾಲ ಕನ್ನಡ ಪತ್ರಿಕೋದ್ಯಮ ಒಂದು ವರ್ಗಕ್ಕಷ್ಟೇ ಸೀಮಿತವಾಗಿದ್ದು ಇದೇ ಕಾರಣಕ್ಕೆ. 'ಅವರ' ಹೊರತಾಗಿ ಇತರರಿಗೆ ಭಾಷೆ ಜ್ಞಾನ ಅಷ್ಟಾಗಿ ಇರೋಲ್ಲ ಎಂಬ ಕುರುಡು ನಂಬಿಕೆಗೆ ಕನ್ನಡ ಪತ್ರಿಕೋದ್ಯಮ ಬಲಿಯಾಯಿತು.
ಹಾಗೆ ಸುಮ್ಮನೆ ಕನ್ನಡ ಪತ್ರಿಕೋದ್ಯಮದ ಇತಿಹಾಸ ಗಮನಿಸಿದರೆ, ಪ್ರಜಾವಾಣಿ ಹೊರತಾಗಿ ಬೇರೆ ಪ್ರಮುಖ ಪತ್ರಿಕೆಗಳು ನಮ್ಮ ನಾಡಿನ ಸಾಹಿತ್ಯಕ, ಸಾಂಸ್ಕೃತಿಕ ಬದಲಾವಣೆಗಳಿಗೆ ತೆರೆದುಕೊಳ್ಳಲಿಲ್ಲ. ಕಾರಣ ಇಷ್ಟೆ - ಆ ಪತ್ರಿಕೆಗಳಲ್ಲಿ ವಿಭಿನ್ನ ದೃಷ್ಟಿಕೋನ, ಬಹುಮುಖಿ ಆಲೋಚನೆಯ ಮನಸ್ಸುಗಳಿಗೆ ಕೊರತೆ ಇತ್ತು. ಅವುಗಳಲ್ಲಿ ಕೆಲಸ ಮಾಡುವ ಬಹುತೇಕರು ಒಂದೇ ವರ್ಗಕ್ಕೆ ಸೀಮಿತವಾಗಿದ್ದರು. ಪ್ರಜಾವಾಣಿಯಲ್ಲಿಯುಊ ಆಯಕಟ್ಟಿನ ತಾಣಗಳಲ್ಲಿ ಅವರೇ ಇದ್ದರೂ, ಸಾಂಸ್ಥಿಕವಾಗಿ ಪತ್ರಿಕೆಗೆ ಬೇರೆಯದೇ ಚೌಕಟ್ಟು, ಶಿಸ್ತು ಸಿದ್ಧಿಸಿತ್ತು. ಆ ಕಾರಣ 'ದಲಿತರು ಬಂದರು ದಾರಿಬಿಡಿ' ಎಂಬಂತಹ ತಲೆಬರಹ ಮುಖಪುಟದಲ್ಲಿ ಕಾಣಲು ಸಾಧ್ಯವಾಯಿತು. ಕರ್ನಾಟಕ ಪತ್ರಿಕೋದ್ಯಮಕ್ಕೆ ಪ್ರಜಾವಾಣಿ ಸೇರ್ಪಡೆಗೊಳ್ಳದೇ ಹೋಗಿದ್ದರೆ, ಇಲ್ಲಿನ ಪತ್ರಿಕೋದ್ಯಮ ಇಂದಿಗೂ ಅಗ್ರಹಾರದ ಆಚೆಗೆ ಹಬ್ಬುತ್ತಿರಲಿಲ್ಲ.

Friday, July 17, 2009

ಪ್ರಶ್ನೆಗಳಿರುವುದು ಜಿ.ಎನ್ ಮೋಹನ್ ಗೆ!!

ಇದು ಸಂತಸದ ಸಂಗತಿ. ಪತ್ರಿಕೋದ್ಯಮದ ಗಿರಣಿಯಲ್ಲಿ ಹಲವು ವರ್ಷಗಳಿಂದ, ನಾನಾ ರೂಪಗಳಲ್ಲಿ ತೊಡಗಿಸಿಕೊಂಡಿರುವ ಜಿ.ಎನ್ ಮೋಹನ್ ಈಗ ಮಿಡಿಯಾ ಮೆಣಸಿನಕಾಯಿ (ಮಿಡಿಯಾ ಮಿರ್ಚಿ) ಕಿವುಚಲು ಅಣಿಯಾಗಿದ್ದಾರೆ. ವಿಜಯ ಕರ್ನಾಟಕದ ಶನಿವಾರದ ಆವೃತ್ತಿಯಲ್ಲಿ ಪ್ರತಾಪ ಸಿಂಹನ ಅಂಕಣದೊಂದಿಗೆ ಮೋಹನ್ ಅಂಕಣ ಪ್ರಕಟವಾಗುವುದು ವಿಶೇಷ.
ಒಂದು ಪತ್ರಿಕೆ ಹೀಗೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಕುರಿತು ಚರ್ಚೆಗೆ ವೇದಿಕೆ ಒದಗಿಸುವುದು ವಿಶಿಷ್ಟ ಬೆಳವಣಿಗೆ. ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್ ಇಂತಹದೊಂದು ತೀರ್ಮಾನಕ್ಕೆ ಬರಲು ಏನೆಲ್ಲಾ ಕಾರಣಗಳು, ಒತ್ತಡಗಳಿದ್ದವು ಎಂಬುದು ನಿಗೂಢ. ಅದೇನೇ ಇದ್ದರೂ ಇದು ಒಂದು ಉತ್ತಮ ಪ್ರಯೋಗವೇ.
ಒಂದು ವಾರದ ಹಿಂದೆ ಸನ್ಮಾನ್ಯ ಭಟ್ಟರು ಇಂತಹದೊಂದು ಅಂಕಣದ ಬಗ್ಗೆ ಕ್ಲೂ ಕೊಟ್ಟಾಗ, ಬರೆಯುವವರ್ಯಾರು ಎಂಬ ಸಂಗತಿಯನ್ನು ಬಚ್ಚಿಟ್ಟಿದ್ದರು. ಅದು ಈಗ ಬಹಿರಂಗವಾಗಿದೆ. ಮೋಹನ್ ಈ ಕೆಲಸಕ್ಕೆ ಸಮರ್ಥರು ಎಂದು ಒಪ್ಪಿಕೊಳ್ಳುವ ಅನೇಕ ಮಂದಿ, ವಿಜಯ ಕರ್ನಾಟಕದ ಆಯ್ಕೆ ಇವರು ಆಗಿರಲಿಕ್ಕಿಲ್ಲ ಎಂದೇ ಭಾವಿಸಿದ್ದರು.
ಕಾರಣ ಇಷ್ಟೆ. ಮೋಹನ್ ಒಂದು ಭಜರಂಗಿಗಳ ಅಡ್ಡೆಯಲ್ಲಿ ಅಂಕಣಕಾರರಾಗುತ್ತಾರ? ನಾಡಿನ ಬಹಳಷ್ಟು ಮಂದಿ ಇಂದಿಗೂ ಮೋಹನ್ ರನ್ನು ಗುರುತಿಸುವುದು 'ನನ್ನೊಳಗಿನ ಹಾಡು ಕ್ಯೂಬಾ' ಎಂಬ ಪ್ರವಾಸ ಕಥನದಿಂದ, ಡೆಂಕಲ್ ಪ್ರಸ್ತಾವನೆ ಕುರಿತಂತೆ ಬರೆದ ಕಿರು ಹೊತ್ತಗೆಯಿಂದ. ಆ ಮುಊಲಕ ಅವರ ಎಡ ಪಂಥೀಯ ಧೋರಣೆಯ ಮನುಷ್ಯ ಎಂಬುದು ಅನೇಕರ ಲೆಕ್ಕಾಚಾರ. ಇತ್ತೀಚೆಗೆ ಅವರು ಈಟಿವಿ ಮೂಲಕ, ಅವಧಿ ಮುಊಲಕ, ಮೇಫ್ಲವರ್ ಮಿಡಿಯಾ ಹೌಸ್ ಮುಊಲಕ ಕಾಣಿಸಿಕೊಳ್ಳುತ್ತಿದ್ದಾರೆ. ಅದರಂತೆ ಅವರನ್ನು ಗ್ರಹಿಸುವ ರೀತಿಗಳೂ ಬದಲಾಗಿವೆ. ಅವರ ಸುತ್ತ ಒಂದಿಷ್ಟು ಬ್ಲಾಗ್ ಹುಡುಗರು ಆಗಾಗ ಕಾಣಿಸಿಕೊಳ್ಳುತ್ತಾರೆ. ಅವರು ಬರೆದದ್ದನ್ನು ಇವರು ಗಂಭೀರವಾಗಿ ಓದಿ, ಪ್ರತಿಕ್ರಿಯಿಸುವವರಂತೆ ನಟಿಸುತ್ತಾರೆ. ಸಿಕ್ಕ ಸಿಕ್ಕವರಿಗೆಲ್ಲಾ ಬ್ಲಾಗ್ ಮಾಡ್ರಿ ಅಂತ ಬ್ಲಾಗ್ ಹುಚ್ಚು ಹಿಡಿಸುತ್ತಾರೆ. ಇವೆಲ್ಲದರ ಮಧ್ಯೆ, ಎಡಪಂಧೀಯ ಹೋರಾಟದಿಂದ ರೂಪುಗೊಂಡ ದೇಶದ ಕತೆಯನ್ನೇ ತನ್ನೊಳಗಿನ ಹಾಡನ್ನಾಗಿಸಿಕೊಂಡ ಮೋಹನ್ ಮರೆಯಾಗಿದ್ದಾರೆ, ಅಥವಾ ಮಸುಕಾಗಿದ್ದಾರೆ.
ಹಾಗಂತ, ಅವರು ಅದೆಲ್ಲಕ್ಕೂ ತಿಲಾಂಜಲಿ ಇಟ್ಟಿದ್ದಾರೆ ಎಂದಲ್ಲ. ಹೊಸ ಓದುಗ ಸಮುಊಹ, ಭಿನ್ನ ಆಲೋಚನೆಯ ಗುಂಪನ್ನು ತನ್ನ ಪರಿಧಿಯೊಳಗೆ ತಂದುಕೊಳ್ಳುವ ಪ್ರಯತ್ನ ಇರಬಹುದು. ಈಗ ವಿಜಯಕರ್ನಾಟಕ ಪತ್ರಿಕೆಗೆ ಅಂಕಣ ಬರೆಯಲು ಒಪ್ಪಿಕೊಂಡಿರುವುದು ಅಂತಹದೇ ಒಂದು ಹೆಜ್ಜೆಯಾ?
ಕಾದು ನೋಡಬೇಕು...
ಇನ್ನು ವಿಜಯ ಕರ್ನಾಟಕ. ಓದುಗರನ್ನು ದಿಕ್ಕುತಪ್ಪಿಸುವ ಕಾರ್ಯದಲ್ಲಿ ಸದಾ ಮುಂದು. ಮತಾಂತರ ಕುರಿತಂತೆ ಚರ್ಚೆ ಆರಂಭಿಸಿ, ಎಲ್ಲರಿಗೂ ಬರೆಯಲು ಅವಕಾಶ ನೀಡಿ, ತಾವೇನೋ ಉದಾರವಾದಿಗಳು ಎಂಬಂತೆ ಪೋಸು ಕೊಟ್ಟವರು ಆ ಪತ್ರಿಕೆಯ ಮುಖ್ಯಸ್ಥರು. ಆದರೆ ಆ ಎಲ್ಲಾ ಚರ್ಚೆಗೆ ಭೈರಪ್ಪನಿಂದಲೇ ಉತ್ತರ ಕೊಡಿಸಿ, ಎಲ್ಲರಿಗೂ ಟೋಪಿ ಇಟ್ಟರು. ಪ್ರತಾಪ ಸಿಂಹ ತನಗೆ ಗೂಗಲ್ ನಲ್ಲಿ ಸಿಕ್ಕಿದ್ದನೆಲ್ಲಾ ಅಧಿಕೃತ ಮಾಹಿತಿ ಎಂದು ಬರೆದು ಒಂದು ವರ್ಗವನ್ನು ದಿಕ್ಕುತಪ್ಪಿಸಿದ್ದು ಸುಳ್ಳಲ್ಲ. ಅಡ್ವಾನಿ ಇನ್ನುಮುಂದೆ ಪ್ರಧಾನಿ ಆಗುವುದೇ ಎಲ್ಲ ಎಂಬ ಸತ್ಯ ಅರಿವಾದಾಗ ಭಟ್ಟರು ತಮ್ಮ ಅಂಕಣದ ತುಂಬಾ ಕಣ್ಣೀರು ಹರಸಿದ್ದು ಇನ್ನೂ ಹಸಿರಾಗಿಯೇ ಇದೆ. ಓದುಗರ ಪತ್ರ ನೋಡಿಕೊಳ್ಳುವ ಸಿಂಹ, ಆಗಾಗ ತಾನೇ ಕಾಪು, ಸುಳ್ಯ, ಕರ್ಜೆ ಎಂಬ ಕೆಲ ಊರುಗಳಲ್ಲಿರುವ ಓದುಗನಾಗಿ ಪತ್ರ ಬರೆದುಕೊಂಡದ್ದೂ ಜಗಜ್ಜಾಹೀರು. ಅನಂತಮುಊರ್ತಿ ಭೈರಪ್ಪನನ್ನು 'ಒಬ್ಬ ಚರ್ಚಾಪಟು' ಎಂದು ಮುಊದಲಿಸಿದ್ದಕ್ಕೆ ಎಸ್ ಎಂ ಎಸ್ ಚಳವಳಿ ಮಾಡಿದ ಭೂಪರಲ್ಲವೇ ಇವರು.
ಮೊನ್ನೆ ಮೊನ್ನೆ ತಾನೆ ವಿಜಯಾ ಕಾಲೇಜಿನ ಕೆಮಿಸ್ಟ್ರಿ ಉಪನ್ಯಾಸಕರೊಬ್ಬರ ಟ್ರಿಕ್ ಗೆ ಬಲಿಯಾದದ್ದು ಇದೇ ಪತ್ರಿಕೆ. ತಾನೂ ಒಬ್ಬ ಪ್ರಖ್ಯಾತ ಜ್ಯೋತಿಷ್ಯ ಶಾಸ್ತ್ರಜ್ಞ ತನ್ನದೂ ಒಂದು ಬರಹ ಪ್ರಕಟಿಸಿ ಎಂದು ಅವರು ಪತ್ರಿಕೆಗೆ ಸುಮ್ಮನೇ ಒಂದು ಲೇಖನ ಕಳುಹಿಸಿದರಂತೆ. ನೋಡು, ಈ ಪತ್ರಿಕೆ ಮಂದಿಗೆ ತಲೆಯೇ ಇರೋಲ್ಲ ಯಾವನು ಏನು ಬರೆದರೂ ಹಾಕ್ತಾರೆ ಎಂದು ಸ್ನೇಹಿತರೊಬ್ಬರ ಜೊತೆ ಬೆಟ್ ಕಟ್ಟಿ ಹಾಗೆ ಲೇಖನ ಕಳುಹಿಸಿದರು. ಆ ಲೇಖನವೂ ಪ್ರಕಟವಾಯಿತು.
ಈ ಪತ್ರಿಕೆಗೆ ಬರೆಯುವ ಕೆಲವು ಅಂಕಣಕಾರರು ಈ ನೆಲದ ಬಹುಜನರಿಗೆ ಮಾಡಿರುವ ದ್ರೋಹ ಅಷ್ಟಿಷ್ಟಲ್ಲ. ಪ್ರತಿ ಅಕ್ಷರದಲ್ಲೂ ಕೋಮುವಾದವನ್ನೇ ಉಸುರುವ ಬರಹಗಳು ಇಲ್ಲಿ ಮಾತ್ರ ಬರಲು ಸಾಧ್ಯ.
- ಇದೆಲ್ಲವೂ ಜಿ.ಎನ್ ಮೋಹನ್ ಗೆ ಚೆನ್ನಾಗಿ ಗೊತ್ತು. ಹಾಗಾದರೆ, ಇನ್ನು ಮುಂದೆ ಅವರ ಅಂಕಣ ಬರಹಗಳು ಹೇಗಿರುತ್ತವೆ? ಅವರು ಟೀಕೆಗೆ ನಿಲ್ಲುವುದಾದರೆ, ಮೊದಲು ಟೀಕಿಸಬೇಕಾದ್ದು ಆ ಪತ್ರಿಕೆಯ ಧೋರಣೆಗಳನ್ನೇ. ಮೋಹನ್ ನೇರವಾಗಿ ಅನ್ನಿಸಿದ್ದನ್ನು ಹೇಳಬಲ್ಲರು. ಇತ್ತೀಚೆಗೆ ಜೋಗಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಿಖರವಾಗಿ ಮಾತನಾಡಿದ್ದು ಅವರು ಮಾತ್ರ. ಜೋಗಿ ಮಾರುಕಟ್ಟೆಗಾಗಿ ಬರೆಯುತ್ತಾರೆ. ಅವರ ಕಥಾವಸ್ತುವಿಗೂ, ಟಿ.ಎನ್ ಸೀತಾರಂ ಅವರ ಜನಪ್ರಿಯ ಧಾರಾವಾಹಿಗೂ ವ್ಯತ್ಯಾಸಗಳಿಲ್ಲ ಎಂದು ಹೇಳಿದರು. ಅಂತಹದೊಂದು ಛಾತಿ ಅವರಿಗಿದೆ. ಆದರೆ, ಅದೇ ಧಾಟಿಯ ಮಾತುಗಳನ್ನು ಸಹಿಸಿಕೊಳ್ಳುವ ತಾಳ್ಮೆ ವಿಜಯ ಕರ್ನಾಟಕಕ್ಕೆ ಇದೆಯಾ?
ಅಂಥಹದೊಂದು ಸಂಘರ್ಷಕ್ಕೆ ಅನುವು ಮಾಡಿಕೊಡದಂತೆ ಬರೆಯುವ ಕೆಲಯುಊ ಮೋಹನ್ ಗೆ ಗೊತ್ತು. ಹಾಗಾದಲ್ಲಿ ಅವರು ರಾಜಿ ಆಗುತ್ತಾರ? ಬಹಳ ಕಾಲ ಅಂಕಣ ಉಳಿಯಲೆಂದು ವಿಜಯ ಕರ್ನಾಟಕದ ಬಗ್ಗೆ ಮಾತನಾಡದೇ ಸುಮ್ಮನಿರುತ್ತಾರಾ? ಧೋರಣೆ, ನಂಬಿ ಬಂದಿದ್ದ ಸಿದ್ಧಾಂತ ಎಲ್ಲವನ್ನು ಬದಿಗಿಟ್ಟು ಪಕ್ಕಾ ಅಕಡೆಮಿಕ್ ಶೈಲಿಗೆ ಒಗ್ಗಿಕೊಳ್ಳುತ್ತಾರ?
- ಈ ಪ್ರಶ್ನೆಗಳಿರುವು ಜಿ.ಎನ್ ಮೋಹನ್ ಗೆ!