Monday, August 10, 2009

ಇದು ಇಂದಿನ ಪತ್ರಿಕಾರಂಗ!

ಎಲ್ಲಾ ಪತ್ರಿಕೆ ಮಾಲೀಕರಿಗೆ ಕನ್ನಡ ಪ್ರಭ ರಂಗನಾಥ್ ಒಂದು ಪಾಠ ಕಲಿಸಿದ್ದಾರೆ. ಆ ಪಾಠ ಇಷ್ಟೆ 'ಯಾರು, ಎಷ್ಟೇ ಪ್ರತಿಭಾನ್ವಿತನಾಗಿದ್ದರೂ ಸಂಪೂರ್ಣ ಸ್ವಾತಂತ್ರ್ಯ ಕೂಡಬಾರದು!!' ಪತ್ರಿಕೆ ಮಾಲೀಕರ ಪೈಕಿ, ಈ ಪಾಠ ಹೆಚ್ಚು ತೀವ್ರವಾಗಿ ತಾಕಿರುವುದು ಮಿಸ್ಟರ್ ಸೋಂತಾಲಿಯಾಗೆ.
ರಂಗನಾಥ್, 90 ರ ದಶಕದಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟವರ ಮಧ್ಯೆ ರಂಗ ಎಂದೇ ಪರಿಚಿತ. ಅವರು ಕ್ರೈಮ್ ಬೀಟ್ ನಲ್ಲಿದ್ದುದರಿಂದ 'ಕ್ರೈಮ್ ರಂಗ' ಎಂಬ ಆರೋಪ ರೂಪದ ಬಿರುದು ಅವರಿಗುಂಟು. ಅವರು ತಮ್ಮ ವರದಿಗಳಿಗಿಂತ ಪೊಲೀಸ್ ಇಲಾಖೆಯಲ್ಲಿ ಇರುವ ಸಂಪರ್ಕಗಳಿಗಾಗಿ ಹೆಸರಾದವರು. ಸುದ್ದಿ ಹೆಕ್ಕುವ ಕಲೆ ಸಿದ್ಧಿಸಿತ್ತು. ಆ ಕಾರಣ ವೃತ್ತಿಯಲ್ಲಿ ಬೇಗನೇ ಮೇಲೆ ಬಂದರು. ಮುಖ್ಯವರದಿಗಾರ ಹಾಗೇ ಸಂಪಾದಕರೂ ಆದರು. ಸಂಪಾದಕರಾಗಿ ಕನ್ನಡ ಪ್ರಭಕ್ಕೆ ಹೊಸತನ ತಂದರು. ರಾಜಕುಮಾರ್ ತೀರಿಕೊಂಡಾಗ ಕನ್ನಡ ನಾಡೇ ಹುಬ್ಬೇರಿಸುವಂತೆ ಹದಿನಾರು ಪುಟಗಳ ಶ್ರದ್ಧಾಂಜಲಿಯನ್ನು ಅರ್ಧದಿನಕ್ಕೇ ಸಿದ್ಧಪಡಿಸಿದ್ದು ಶ್ಲಾಘನೀಯ. ಇತರ ಪತ್ರಿಕೆಗಳ ಸಂಪಾದಕರು ಯೋಚಿಸುವದಕ್ಕಿಂತ, ಯೋಜಿಸುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋದದ್ದು ರಂಗನಾಥ್ ವೈಶಿಷ್ಟ್ಯ. ವರ್ಷದ ಕನ್ನಡಿಗ ಎಂಬ ಯೋಜನೆ ಕೂಡಾ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ತೀರಾ ಇತ್ತೀಚೆಗೆ ಸಂಪಾದಕೀಯ ಪುಟದಲ್ಲಿ ಪ್ರೊಯೋಗ ಮಾಡಿ ಓದುಗರನ್ನು ಸೆಳೆದದ್ದು ಸಾಮಾನ್ಯವೇನಲ್ಲ.
ಕೆಲವೊಮ್ಮೆ ಅತಿರೇಕ ಇದ್ದದ್ದು ಢಾಳಾಗಿ ಕಾಣುತ್ತಿತ್ತು. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಸಾರಿ ಹೇಳಿದ್ದು ಕನ್ನಡಪ್ರಭ. ಆದರೆ ಇವರ ಸಹೋದರ ಪತ್ರಿಕೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಅಂತಹ ನಿಲುವು ತಾಳಲಿಲ್ಲ. ಪ್ರವೀಣ್ ಸೂದ್ ಮೈಸೂರಿನಲ್ಲಿ ಕಮೀಷನರ್ ಆಗಿದ್ದಾಗ ಫೇಕ್ ಎನ್ ಕೌಂಟರ್ (ಮುಖಾಮುಖಿ ಅಷ್ಟೆ. ಎನ್ ಕೌಂಟರ್ ಎಂದಾಕ್ಷಣ ಸಾಯಲೇಬೇಕಿಲ್ಲ) ಪ್ರಕರಣದ ವರದಿಯನ್ನು ಮಿಸ್ಟರ್ ರಂಗನಾಥ್ ಆ ಘಟನೆ ಆಗುವ ಮುನ್ನವೇ ಬರೆದಿಟ್ಟಿದ್ದರು ಎಂಬ ಸುದ್ದಿ ಇದೆ.
ಇಷ್ಟೆಲ್ಲಾ ಪ್ರಯೋಗಗಳು, ಅತಿರೇಕಗಳು ಸಾಧ್ಯವಾಗಿದ್ದು ಸೋಂತಾಲಿಯ ರಂಗನಾಥರ ಮೇಲಿಟ್ಟಿದ್ದ ವಿಶ್ವಾಸದಿಂದ. ಹಾಗೂ ಅವರು ಕೊಟ್ಟ ಸ್ವಾತಂತ್ರ್ಯದಿಂದ!
ಕೆಲವೇ ದಿನಗಳಲ್ಲಿ 'ಕನ್ನಡ ಪ್ರಭ' ಮತ್ತು 'ರಂಗನಾಥ್' ಎಂಬ ಎರಡು ಪದಗಳು ಒಂದೇ ಆಗಿಬಿಟ್ಟವು. ರಂಗ ಎಂದರೆ ಕನ್ನಡಪ್ರಭ ಮತ್ತು ವೈಸ್ ವರ್ಸಾ. ರಂಗನಾಥ್ ಮೊದಲು ವಕ್ರದೃಷ್ಟಿ ಬೀರಿದ್ದು ಪತ್ರಿಕೆಯಲ್ಲಿ ಬಹಳ ಕಾಲದಿಂದ ದುಡಿಯುತ್ತಿದ್ದ ಹಲವರ ಮೇಲೆ. ಅವರೆಲ್ಲರಿಗೂ ಹೊಸ ಹೊಸ ಸಾಫ್ಟ್ ವೇರ್ ಗಳನ್ನು ಕಲಿಯಲು ಡೆಡ್ ಲೈನ್ ನೀಡಿದರು. ಆಗದೇ ಹೋದರೆ ಮನೆಗೆ ನಡೆಯಿರಿ ಎಂದರು. ಬೇಸತ್ತು ಕೆಲವರು ಮನೆಗೆ ಹೋಗುವ ನಿರ್ಧಾರಕ್ಕೆ ಬರುವಂತೆ ಮಾಡಿದರು. ಕೇವಲ ಯುವಕರಿಂದ ತಾನು ಪತ್ರಿಕೆ ಮಾಡುತ್ತೇನೆ. ಹಳಬರೆಲ್ಲ ಸುಮ್ಮನೇ ದಂಡಕ್ಕೆ ಇರುವುದು ಎಂಬ ಮಾತುಗಳನ್ನಾಡುತ್ತಾ ಹಿರಿಯ ಜೀವಗಳು ವಿನಾಕಾರಣ ಗಿಲ್ಟ್ ನಿಂದ ಬೇಯುವಂತೆ ಮಾಡಿದ ಕೀರ್ತಿ ರಂಗನಾಥ್ ಗೆ ಸೇರಬೇಕು.
ರಂಗನಾಥ್ ಪತ್ರಿಕೆಗೆ ಏನೇ ಹೊಸತನ್ನು ತುಂಬಿದ್ದರೂ, ಆತ ಮಾಡದೇ ಹೋದದ್ದು ಏನೆಂದರೆ, ಪತ್ರಿಕೆಗೊಂದು ಭವಿಷ್ಯ ಕೊಡಲಿಲ್ಲ. ವರ್ತಮಾನಕಷ್ಟೆ ಅವರ ಕೊಡುಗೆ. ಈಗ ಅವರ ನಂತರ ಯಾರು ಎಂಬ ಪ್ರಶ್ನೆ ಬಂದಾಗ ಪತ್ರಿಕಾಲಯದಲ್ಲಿ ಯಾರೂ ಕಾಣುವುದಿಲ್ಲ. ಅವರ ಸಮಾನಕ್ಕೆ ಬೆಳೆದ ರವಿ ಹೆಗಡೆ ಕೂಡಾ ಹೊರಟು ನಿಂತಿದ್ದಾರೆ. ಒಂದಿಷ್ಟು ಕೆಲಸ ಕಲಿತಿದ್ದ ಕೆಲವರು ರಂಗನಾಥ್ ಕರೆದರೆ ಹೋಗಲು ತಾವೂ ರೆಡಿ ಎನ್ನುತ್ತಿದ್ದಾರೆ. ಸೋಂತಾಲಿಯಾಗೆ ಈಗ ತಪ್ಪಿನ ಅರಿವಾಗಿದೆ. ಏಕಾಏಕಿ ರಂಗನಾಥ್ ಹೊರಟು ನಿಂತಾಗ, ಅವರ ಸ್ಥಾನದಲ್ಲಿ ಯಾರನ್ನು ಕೂರಿಸಿವುದು?
ಕನ್ನಡ ಪತ್ರಿಕಾ ಇತಿಹಾಸವನ್ನು ಗಮನಿಸಿದರೆ ಮೊದಲ ಹಂತದಲ್ಲಿ ಉತ್ತಮ ಸಾಹಿತಿ ಬರಹಗಾರರು ಸಂಪಾದಕರಾಗಿ ದುಡಿದಿದ್ದಾರೆ. ಅವರಿಗೆ ಹೇಗೆ ಹೇಳುತ್ತೇವೆ, ಎನ್ನವುದಕ್ಕಿಂತ ಏನನ್ನು ಹೇಳುತ್ತೇವೆ ಎಂಬುದರ ಬಗ್ಗೆ ತೀವ್ರ ಆಸ್ಥೆ. ಮುಖ್ಯವಾಹಿನಿ ಮತ್ತು ಟ್ಯಾಬ್ಲಾಯ್ಡ್ ಕ್ಷೇತ್ರದಲ್ಲೂ ಹೀಗೇ ಆದದ್ದು. ನಂತರದ ದಿನಗಳಲ್ಲಿ, ಬರಹಗಾರರು ಹಿಂದಕ್ಕೆ ಸರಿದು, ಪತ್ರಿಕೋದ್ಯಮವನ್ನು ಅಕಡೆಮಿಕ್ ಶಿಸ್ತಾಗಿ ಓದಿಕೊಂಡವರು ಪತ್ರಿಕೆಗಳ ಸಾರಥ್ಯ ವಹಿಸಿದರು. ಅವರ ಪಾಲಿಗೆ ಪತ್ರಿಕೆ ಸಂವಹನಕ್ಕೆ ಒಂದು ಮಾಧ್ಯಮ ಅಷ್ಟೆ. ಇಂತಹವರು ಬಹುಬೇಗನೆ ಪತ್ರಿಕಾ ಮಾಲೀಕರ ಅಗತ್ಯ, ಜಾಹಿರಾತುದಾರರ ಮರ್ಜಿ ಮತ್ತು ವಿತರಕರ ಹಿತಾಸಕ್ತಿಗಳಿಗೆ ಮಣಿಯುತ್ತಿದ್ದರು. ಕಾರಣ ಇಷ್ಟೆ, ಅವರು ಕಲಿತು ಬಂದ ಪತ್ರಿಕೋದ್ಯಮ ಪಾಠದ ಪ್ರಕಾರ ಹೆಚ್ಚು ಸರ್ಕ್ಯುಲೇಶನ್ ಯಶಸ್ವೀ ಸಂವಹನದ ಸಂಕೇತ. ಜತೆಗೆ ಅವರಿಗೆ ಆಡಳಿತದಲ್ಲಿ ಹಿಡಿತ ಸಿದ್ಧಿಸಿತ್ತು. ತಮ್ಮ ಕೈ ಕೆಳಗಿನವರಿಂದ ಕೆಲಸ ತೆಗೆಯುವ ಕಲೆ ಗೊತ್ತು. ಆದರೆ ಉತ್ತಮ ಪತ್ರಕರ್ತರನ್ನು ಸೃಷ್ಟಿಸುವ ಜರೂರು ಇವರಿಗಿಲ್ಲ. ರಂಗನಾಥ್ ಅನೇಕರಿಗೆ ಕೆಲಸ ಕೊಟ್ಟು ಪತ್ರಕರ್ತರನ್ನಾಗಿ ಮಾಡಿರಬಹುದು.
ಆದರೆ ಅದೇ ಪತ್ರಿಕೆಯಲ್ಲಿ ಬಹಳ ಕಾಲ ದುಡಿದ ಸೂ. ರಮಾಕಾಂತ್ ಹಲವು ಆರೋಗ್ಯವಂತಹ ಮನಸ್ಸುಗಳಿಗೆ ಪ್ರೇರಕರಾಗಿದ್ದರು. ದೇವನೂರು ಮಹದೇವ ತನಗೆ ಸಮಾಜವಾದದ ದೀಕ್ಷೆ ಕೊಟ್ಟಿದ್ದೇ ಸೂ.ರಮಾಕಾಂತ್ ಎಂದು ಹೇಳಿಕೊಂಡಿದ್ದಾರೆ. ಒಮ್ಮೆ ಯೋಚಿಸಿ, ಇಂದಿನ ಪತ್ರಿಕೋದ್ಯಮದಲ್ಲಿ ಇಂತಹದೊಂದು ದೀಕ್ಷೆ ಕೊಡಬಲ್ಲವರು ಎಷ್ಟು ಜನರಿದ್ದಾರೆ? (ಬೇಕಾದ್ರೆ ಕೋಮುವಾದದ ದೀಕ್ಷೆ ಕೊಡಲು ಬೇಕಾದಷ್ಟು ಜನರಿದ್ದಾರೆ!) ಅಬ್ಬಬ್ಬಾ ಅಂದರೆ ರಂಗನಾಥ್ ತನಗೆ ಗೊತ್ತಿರುವ ಹಿರಿಯ ಅಧಿಕಾರಿಗೆ ಕಿರಿಯ ವರದಿಗಾರನನ್ನು ಪರಿಚಯಿಸಿ ಸುದ್ದಿ ತರಲು ಸಹಾಯ ಮಾಡಬಹುದು.
ಇದೆಲ್ಲಾ ಏಕೆ ಹೇಳಬೇಕಾಯಿತು ಎಂಬುದು ಈ ಬ್ಲಾಗ್ ಓದುಗರಿಗೆ ಗೊತ್ತಿದೆ. ರಂಗನಾಥ್ ಮತ್ತು ರವಿ ಹೆಗಡೆ ತಮ್ಮ ಕೆಲ ಗೆಳೆಯರ ಸಂಗಡ ಸುವರ್ಣ ಚಾನೆಲ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಕಳೆದ ವಾರ ಅವರು ರಾಜೀನಾಮೆ ನೀಡಿದರು ಎನ್ನುವ ಸುದ್ದಿ ಜಗಜ್ಜಾಹೀರು. ಪತ್ರಿಕೆಗೆ ಯಾರೂ ಅನಿವಾರ್ಯರಲ್ಲ. ಆದರೆ ಆಯಕಟ್ಟಿನ ಜಾಗೆಯಲ್ಲಿದ್ದವರೆಲ್ಲಾ ಗುಳೇ ಹೊರಟರೆ ಪತ್ರಿಕೆ ಸುಧಾರಿಸಿಕೊಳ್ಳಲು ಸಮಯ ಬೇಕಾಗುತ್ತದೆ.

4 comments:

Anonymous said...

Nothing will happen to KP..It will run smoothly as earlier.
Most them are part timer in KP. They do other work like script writing etc.

My comment is for RAMAKANTH, a great journalist of par excellence with human touch.
Do anybody remember him. You all talk about rubbish people only.

Thanks for remembering Ramakanth, who was inspiration for Vijay Karnataka (1999). He was with Vk in the last days of him...

Anonymous said...

ತನ್ನ ಪ್ರತಿಬೆಯ ಬಗ್ಗೆ ತನಗೆ ಭಯ ಇರುವ ವ್ಯಕ್ತಿ ಎಂದಿಗೂ ಶಿಷ್ಯಕೋಟಿಯನ್ನು ಹುಟ್ಟು ಹಾಕಲು ಸಾಧ್ಯವಿಲ್ಲ, ಕೋಟಿಯಲ್ಲ ತಮ್ಮ ಜೀವ ಮಾನದಲ್ಲಿ ಒಬ್ಬನೆ ಒಬ್ಬನನ್ನು ಬೆಳೆಸಲು ಸಾದ್ಯವಿಲ್ಲ. ಇಂತವರು ಇಡಿ ವ್ಯವಸ್ಥೆಯನ್ನು ಅಥಾವ ಕಛೇರಿಯನ್ನು ಹೇಗೆ ತಮ್ಮ ಕಪಿ ಪುಷ್ಠಿಯಲ್ಲಿಟ್ಟುಕೊಳ್ಳಬಹದು ಎಂಬುದರ ಮೇಲೆ ವರ್ಕಜೌಟ್ ಮಾಡುತ್ತಿರುತ್ತಾರೆ.

ಅವರ ಪ್ರತಿಬೆಗೆ ನಮ್ಮ ನಮನ, ಅವರ ಈ ತನಕ್ಕೆ ನಮ್ಮ ಧಿಕ್ಕಾರ.

Anonymous said...

ಹೊಸತನವೂ ಸೇರಿ ಚೆನ್ದವಾಗಬಹುದು. ರಂಗನಾಥ್ \ಸುವರ್ಣ ಗಾದರೂ ಸೇರಲಿ ಅಥವಾ ತಾಮದೇ ಪತ್ರಿಕೆ ಮಾಡಲಿ. ನಡೆದ ತಪ್ಪನ್ನು ತಿದ್ದಿ ಹೋಗುವ ಛಾತಿ ಅವರಿಗಿದೆ. ಕನ್ನಡ ದ್ದೆ ಓದು ಪತ್ರಿಕೆ ಅಥವಾ ಟಿವಿ ಚಾನೆಲ್ ನ್ನು ಕನ್ನಡಿಗರು ಒಪ್ಪುವಂತೆ ಮಾಡಲಿ

Anonymous said...

neevu ramakanth avarannu smarisikondiruvudannu oodi tumba kushi aitu. nanage avra kiru parichaya. adu araluva munnave avaru good bye heli bittaru. entha gunagrahi avaru. chilumeglaannu kaarangi maaduvavru. anta innobbaru G.S. sadashiva. ivarugal saanidyadalli kelasvaste alla ghanate, suksmate, vivekavannu kaliyabahudittu. eega ee mattakke pa.sa. kumara antavariddare. ranganalli ondu killing instict ide. idondu amezing guna alva sir. idakondu manaviya vivekada parivesha idare chennagirutte alva