Tuesday, October 28, 2008

ಸಾಹಿತ್ಯಕ ಮೌಲ್ಯ ಅಳೆಯಲು ಒಂದು ಕೋಷ್ಟಕ!

'ಮಯೂರ' ದಿಂದ ಇಂತಹದೊಂದು ಪ್ರಯೋಗ!

ನಮ್ಮ ಲಿಟೆರರಿ ಬ್ಯುರೋದಿಂದ

ಕತೆ, ಕಾದಂಬರಿ, ಕವಿತೆ - ಸೃಜನಶೀಲ ಮಾಧ್ಯಮ ಪ್ರಕಾರಗಳು. ತನ್ನ ಅನುಭವಕ್ಕೆ ದಕ್ಕಿದ್ದನ್ನು ಹೇಳಿಕೊಳ್ಳಲು ಮಾನವ ಕಂಡುಕೊಂಡ ಮಾಧ್ಯಮಗಳಿವು. ಬರವಣಿಗೆಯನ್ನು ಬದ್ಧತೆಯಾಗಿ ಸ್ವೀಕರಿಸಿಕೊಂಡವರು 'ಶ್ರೇಷ್ಠ' ಅಥವಾ 'ಕನಿಷ್ಟ' ಎಂಬ ವ್ಯಸನಗಳಿಗೆ ತುತ್ತಾಗುವುದಿಲ್ಲ. 'ಅಭಿವ್ಯಕ್ತಿ'ಯೇ ಮೂಲ ಉದ್ದೇಶವಾಗಿರುತ್ತೆ. ಓದುಗರು ತಮ್ಮ ಜ್ಞಾನದ ಹರವು, ಸಾಮಾಜಿಕ ಹಿನ್ನೆಲೆ ಹಾಗೂ ಇನ್ನಿತರೆ ಪ್ರೇರಣೆಗಳಿಂದ ಒಂದು ಕೃತಿಯನ್ನು ಗ್ರಹಿಸುತ್ತಾರೆ. ಅಂತೆಯೇ ವಿಮರ್ಶಿಸುತ್ತಾರೆ. ಗ್ರಹಿಕೆ ಸಾಪೇಕ್ಷ. ಆ ಕಾರಣ ಪ್ರತಿ ಓದು ಕೂಡ ಒಂದು ವಿಮರ್ಶೆ.
ಇಷ್ಟೆಲ್ಲಾ ಪೀಠಿಕೆ ಹಾಕಲು ಒಂದು ಕಾರಣವಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ನವೆಂಬರ್ ತಿಂಗಳ ಮಯೂರದಲ್ಲಿ ರಂಗಕರ್ಮಿ ಪ್ರಸನ್ನರ ಇತ್ತೀಚಿನ ಕಾದಂಬರಿ ಬಾಲಗೋಪಾಲ ವಿಮರ್ಶೆ ಪ್ರಕಟವಾಗಿದೆ. ಅಶೋಕ ಹೆಗಡೆ ವಿಮರ್ಶಕ. ಇದು ಒಂದು ಅತಿ ಸಾಧಾರಣ ಕೃತಿ ಎಂದು ಪರಿಗಣಿಸಿದ ವಿಮರ್ಶಕರು ಕಾದಂಬರಿಯ ಪ್ರಾಮುಖ್ಯವನ್ನು 0.39 ಎಂದು ನಮೂದಿಸಿದ್ದಾರೆ. ವಿಮರ್ಶಾ ಲೇಖನ ಜತೆ ಒಂದು ಕೋಷ್ಟಕವನ್ನೂ ನೀಡಿದ್ದಾರೆ. ಹತ್ತು ಗುಣಾತ್ಮಕ ಹಾಗೂ ಹತ್ತು ಋಣಾತ್ಮಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಮಾಡಿ ಕಾದಂಬರಿಯನ್ನು ಲೇಖಕರು ಡಿಸೆಕ್ಟ್ ಮಾಡಿದ್ದಾರೆ. (ಕೋಷ್ಟಕವನ್ನು ಕೆಳಗೆ ನೀಡಲಾಗಿದೆ). ಪ್ರತಿ ಅಂಶಕ್ಕೂ ಗರಿಷ್ಟ ಹತ್ತು ಅಂಕಗಳು. ಕಾದಂಬರಿಯಲ್ಲಿನ ಗುಣಾತ್ಮಕ ಅಂಶಗಳ ಒಟ್ಟು ಮೊತ್ತ 29 (100ಕ್ಕೆ). ಋಣಾತ್ಮಕ ಅಂಶಗಳು 74 (100ಕ್ಕೆ). ಕಾದಂಬರಿಯ ಪ್ರಾಮುಖ್ಯ - 29/74 = 0.39! ಅದರರ್ಥ ಈ ಕಾದಂಬರಿಯ ಮೌಲ್ಯ ಅರ್ಧಕ್ಕಿಂತ ಕಡಿಮೆ. ಈ ರೀತಿ ಸೃಜನಶೀಲ ಕೃತಿಯನ್ನು ಅಳೆಯುವುದು ಒಂದು ಪ್ರಯೋಗವಾಗಿಯೂ ಸ್ವೀಕರಿಸುವುದು ಆಗದ ಮಾತು. ಮಾರುಕಟ್ಟೆಯ ಸರಕಿನಂತೆ ಕಾದಂಬರಿಯನ್ನು ನೋಡುವ ಪ್ರಕ್ರಿಯೆಗೆ ಮಯೂರ ನಾಂದಿ ಹಾಡುತ್ತಿದೆ.
ಹೀಗೆ ಒಂದು ಕೃತಿ ಅಳೆಯಲು ಕೋಷ್ಟಕ ಸಿದ್ಧಪಡಿಸಿಬಿಟ್ಟರೆ, ಅದೇ ಕೋಷ್ಟಕ ಇಟ್ಟುಕೊಂಡು ಕಾದಂಬರಿಯನ್ನೂ ರಚಿಸಿಬಿಡಬಹುದಲ್ಲ! ಒಂದು ಉತ್ತಮ ಕಾದಂಬರಿಗೆ ಇಂತಿಷ್ಟೇ ವೈಚಾರಿಕತೆ, ಹೀಗೀಗೇ ಸಂವಹನ ಎಂದು ವಿಮರ್ಶಕರು ಹಾಗೂ ಮಯೂರದ ಸಂಪಾದಕರು ಹೇಳುವುದಾದರೆ ಒಳಿತು. ಕಾದಂಬರಿ ಬರೆಯುವ ಆಸಕ್ತಿ ಇಟ್ಟುಕೊಂಡಿರುವ ತರುಣರಿಗೆ ಮಾರ್ಗದರ್ಶನವಾದೀತು!
ಅದಿರಲಿ. ಹತ್ತಕ್ಕೆ ಹತ್ತು ಅಂಕ ಗಳಿಸುವುದೆಂದರೆ ಹೇಗೆ? ಪ್ರಸನ್ನರ ಕಾದಂಬರಿಯ ಸಂವಹನಕ್ಕೆ ಕೋಷ್ಟಕದಲ್ಲಿ ನೀಡಿರುವ ಅಂಕ ಶೂನ್ಯ! ಹಾಗಾದರೆ, ಇಲ್ಲಿ ಭಾಷೆಯೇ ಇಲ್ಲವೇ? ರಂಗಭೂಮಿ ಸಂವಹನದಲ್ಲಿ ಯಶಸ್ವಿಯಾದ ಪ್ರಸನ್ನ ಕಾದಂಬರಿ ಮೂಲಕ ಏನನ್ನೂ ಸಂವಹಿಸಲಾಗದೆ ಸಂಪೂರ್ಣವಾಗಿ ಸೋತು ಹೋದರೆ?
ಈ ಕಾದಂಬರಿಯಲ್ಲಿ ಯಶಸ್ವಿ ಸಂವಹನ ಸಾಧಿಸುವಲ್ಲಿ ಸೋತ್ತಿರುವ ಪ್ರಸನ್ನ ಮುಂದಿನ ಕಾದಂಬರಿ ಬರೆಯೋ ಹೊತ್ತಿಗೆ ಹೆಚ್ಚು ಅಂಕ ಪಡೆಯಲು ಏನು ಮಾಡಬೇಕೆಂಬುದನ್ನು ಮಯೂರದ ಸಂಪಾದಕರು ಹೇಳಿದರೆ ಒಳಿತು. ಸಾಧ್ಯವಾದರೆ ಪ್ರಸನ್ನರಿಗೆ ಸಂಪಾದಕರು ಸ್ಪೆಷಲ್ ಕ್ಲಾಸ್ ತಗೊಂಡು ಕಾದಂಬರಿ ಬರೆಯೋದನ್ನ, ವಿಮರ್ಶಾ ಕೋಷ್ಟಕದಲ್ಲಿ ಹೆಚ್ಚಿನ ಅಂಕಗಳಿಸೋ ಕಲೆಯನ್ನು ಹೇಳಿಕೊಡಬಹುದಲ್ಲ? ಜಿ.ಪಿ ಬಸವರಾಜು ಮಯೂರ ಉಸ್ತುವಾರಿ ನೋಡಿಕೊಳ್ಳುತ್ತಿರುವವರೆಗೆ ಇಂತಹ ಅಸಂಬದ್ಧ ಪ್ರಯೋಗಗಳಿಗೆ ಅವಕಾಶ ಇರಲಿಲ್ಲ. ಇತ್ತೀಚೆಗೆ ಬಸವರಾಜು ನಿವೃತ್ತಿ ಪಡೆದರು. ಮಯೂರದ ಜವಾಬ್ದಾರಿಯನ್ನು ಚ. ಹ ರಘುನಾಥ್ ಎಂಬ ಬರಹಗಾರನ ಹೆಗಲ ಮೇಲೆ ಹೊರಿಸಿದ ನಂತರವೇ ಇಂತಹ ಬರಹಗಳು ವಿಮರ್ಶೆಯಾಗಿ ಪ್ರಕಟವಾಗುತ್ತಿವೆ.
---

ಕನ್ನಡ ಕಾದಂಬರಿ ವಿಮರ್ಶಾ ಕೋಷ್ಟಕ
ಕೃತಿ: ಬಾಲಗೋಪಾಲ


ಗುಣಾತ್ಮಕ ಅಂಶ
ಕಥಾವಸ್ತು - 3; ಭಾಷೆ - 4; ಪಾತ್ರಪೋಷಣೆ - 6; ತಾರ್ಕಿಕತೆ - 5; ಚಿತ್ರಣ/ಪ್ರತಿರೂಪಗಳು - 2; ಭಾವಲೋಕ - 1; ಸಂವಹನ - 0; ಜೀವನದೃಷ್ಟಿ/ಒಳನೋಟ - 2; ಲೋಕದೃಷ್ಟಿ - 5; ತೆರೆದ ಸಾಧ್ಯತೆ/ಮುಕ್ತಾಯ - 1; ಒಟ್ಟು - 29.
ಋಣಾತ್ಮಕ ಅಂಶ
ನಿರೂಪಕನ ಮಾತುಗಳು - 8; ಗೊಂದಲ/ತದ್ವಿರುದ್ಧತೆ - 8; ವಿಕ್ಷಿಪ್ತತೆ - 9; ಅಪ್ರಸ್ತುತೆ - 7; ಅತಿಮಾತು/ವಾಚ್ಯತೆ - 10; ಉಪಮೇಯಗಳ ಕ್ಲೀಷೆ - 6; ಪೂರ್ವಗ್ರಹ - 4; ಸ್ವಮಗ್ನತೆ - 8; ಅತಿ ವೈಚಾರಿಕತೆ - 8; ಉದ್ದೇಶರಹಿತ ಪಾತ್ರಗಳ ಬಳಕೆ - 6; ಒಟ್ಟು - 74.
ಕಾದಂಬರಿಯ ಪ್ರಾಮುಖ್ಯ - 29/74 = 0.39.

3 comments:

Anonymous said...

mayurakku bar bantu andre tappalla. sahitya krati andre varshik pareekse andkondide mayura. haage prjavani saptahikadllobba baradu laxman kodase, sanghpriya dandavte deseyinda drastikonve horatu haogide. heegagi ati vaicharikate hecchagide yendu 8 anka needi bangopal reject aagidane. s.l.bhairppa praneetaru prajavani samooha seridmele idelle samanya. hosa hosa prayogadindagi mayur mattu prajavani kooda maulya kaledukolluttive annodu sullalla.

Anonymous said...

ನಿಮ್ಮ ಸುದ್ದಿಮಾತಿನಲ್ಲಿ ಯಾವ್ಯಾವ ವಿಚಾರವನ್ನೆಲ್ಲಾ ನಿಮ್ಮ ಮೂಗಿನ ನೇರಕ್ಕೇ ಹೀಗೇ ಎಂದು ತೀರ್ಪು ಕೊಡುತ್ತೀರಿ. ಹಾಗೇ ಮಯುರದವರು ಮಾಡಿರಬೇಕು. ಟೀಕೆ ಮಾಡುವ ಹಕ್ಕು ಎಲ್ಲರಿಗೂ ಇರುತ್ತೆ. ವಿಮರ್ಷೆಯೂ ಹಾಗೆ.
ಈಗ ನಿಮ್ಮ ಬರಹದಲ್ಲೂ ಮಯೂರದ ಬಗ್ಗೆ ನಿಮ್ಮದೇ ಧೋರಣೆಯಲ್ಲಿ ವಿಮರ್ಷೆ ಇದೆ. ಪ್ರಯೋಗ ಯಾವತ್ತೂ ತಪ್ಪಲ್ಲ. ನಾವು ಬರೆದದ್ದಲ್ಲಾ ಸರಿ ಎಂಬ ಧೋರಣೆಯನ್ನು ನಿಮ್ಮ ಬ್ಲಾಗ್ ಬಿಟ್ಟುಬಿಡಲಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ
---Maadesh

Anonymous said...

It is interesting to read the comments. But if it is from the persons by name some credence can be attributed. If not it may not be taken seriously. We too expect frank feedback from all quarters, including blogs. I welcome any friend to talk to me in improving the Supplement(Saptahika Puravanai). All healthy comments are welcome to improve the product. we are just mortals, but the media should remain and grow.