Thursday, January 29, 2009

ಪಬ್ ಕಲ್ಚರ್ ಮತ್ತು ಯಡ್ಯೂರಪ್ಪ

ಯಡ್ಯೂರಪ್ಪನವರೆ, ತಾವು ಇತ್ತೀಚೆಗೆ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಸಿದಾಗ ಹತ್ತುದಿನವೂ ಪತ್ರಕರ್ತರಿಗೆ ಮದ್ಯಪಾನದ ಸಮಾರಾಧನೆಯನ್ನೇ ನಡೆಸಿದಿರಲ್ಲಾ, ಅದು ಯಾವ ಸಂಸ್ಕೃತಿಯ ಭಾಗ? ಅದು ಪಬ್ ಕಲ್ಚರ್ ಅಲ್ಲವೆ?
ಎರಡು ದಿನಗಳ ಹಿಂದೆ ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ಪಬ್ ಸಂಸ್ಕೃತಿಗೆ ಇತಿ ಶ್ರೀ ಹಾಡುತ್ತೇನೆ ಎಂದು ಗುಟುರಿದ್ದಾರೆ. ಅವರಿಗೆ ಹುಡುಗ-ಹುಡುಗಿ ಕೈ-ಕೈ ಹಿಡಿದು ರಸ್ತೆಯಲ್ಲಿ ಓಡಾಡುವುದನ್ನು ಸಹಿಸಲಾಗುವುದಿಲ್ಲವಂತೆ. ಅದು ಅವರ ಸಮಸ್ಯೆ.
ಅವರ ಮಾತಿನಿಂದ ಜ್ಞಾನೋದಯ ಆದವರಂತೆ ಯಡ್ಯೂರಪ್ಪನೂ ಅದೇ ರಾಗ ಹಾಡಿದ್ದಾರೆ. ಇಬ್ಬರೂ ಪಬ್ ಕಲ್ಚರ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇವರು ತೀವ್ರವಾಗಿ ವಿರೋಧಿಸುವ ಪಬ್ ಕಲ್ಚರ್ ಅಂದರೇನು?
ಪಬ್ ಎಂದರೆ ಆಲ್ಕೋಹಾಲ್ ಪಾನೀಯಗಳನ್ನು ಸೇವಿಸಲು ಅಥವಾ ಕೊಳ್ಳಲು ಸರಕಾರದಿಂದ ಮಾನ್ಯತೆ ಪಡೆದ ತಾಣ. ಹದಿನೆಂಟು ದಾಟಿದ ಹುಡುಗ, ಹುಡುಗಿ, ಮಧ್ಯವಯಸ್ಕ, ಹಿರಿಯ ನಾಗರಿಕ... ಹೀಗೆ ಎಲ್ಲರಿಗೂ ಪಬ್ ಗೆ ಪ್ರವೇಶವಿದೆ. ಅಲ್ಲಿಗೆ ಹೋಗುವವರು ಕುಡಿಯುತ್ತಾರೆ. ಕುಡಿಯುತ್ತಾ ಹರಟುತ್ತಾರೆ. ಅಥವಾ ಹರಟುತ್ತಾ ಕುಡಿಯುತ್ತಾರೆ, ಹಾಡುತ್ತಾರೆ, ಕೇಕೆ ಹಾಕುತ್ತಾರೆ.. - ಇದನ್ನೇ ಪಬ್ ಕಲ್ಚರ್ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಈಗ ಹೇಳಿ ಈ ಪಬ್ ಸಂಸ್ಕೃತಿಯಿಂದ ಯಾರಿಗೆ ಹಾನಿ? ಅದನ್ನು ನಿಯಂತ್ರಿಸಿ ಇವರು ಉದ್ಧಾರ ಮಾಡುವುದು ಯಾರನ್ನು?
ಒಂದು ಕ್ಷಣ ಹೀಗೆ ಯುವ ಜನಾಂಗ ಕುಡಿತದ ಮೊರೆಹೋಗಿ ತಮ್ಮ ಅಮುಊಲ್ಯ ಆರೋಗ್ಯ ಹಾಳುಮಾಡಿಕೊಳ್ಳುತ್ತಾರೆ ಎನ್ನುವುದು ಇವರ ಆಲೋಚನಾ ಪರಿಗೆ ಮುಖ್ಯ ಕಾರಣ ಇರಬಹುದು ಎಂದು ಒಪ್ಪಿಕೊಳ್ಳೋಣ.
ಆದರೆ, ಯಡ್ಯೂರಪ್ಪನವರೆ, ತಾವು ಇತ್ತೀಚೆಗೆ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಸಿದಾಗ ಹತ್ತುದಿನವೂ ಪತ್ರಕರ್ತರಿಗೆ ಮದ್ಯಪಾನದ ಸಮಾರಾಧನೆಯನ್ನೇ ನಡೆಸಿದಿರಲ್ಲಾ, ಅದು ಯಾವ ಸಂಸ್ಕೃತಿಯ ಭಾಗ? ಅದನ್ನು ಪಬ್ ಕಲ್ಚರ್ ಎನ್ನದೆ ಮತ್ತೊಂದು ಹೆಸರಿನಿಂದ ಕರೆಯುತ್ತೀರಾ?
ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಿರುವುದು, ನಾವು ಹೇಗೆ ಬದುಕುತ್ತೇವೆ ಮತ್ತು ಆ ರೀತಿ ಬದುಕುವುದರಿಂದ ಇತರರಿಗೆ ತೊಂದರೆಯಾಗುತ್ತಿದೆಯೇ? ಇತರರಿಗೆ ತೊಂದರೆ ಮಾಡುವಂತಹ ವರ್ತನೆ ನಮ್ಮಲ್ಲಿದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು. ಮೊದಲು ಶ್ರೀರಾಮ ಸೇನೆ, ಬಜರಂಗ ದಳ ಹುಡುಗರ ವರ್ತನೆಗಳಿಂದ ಸಮಾಜದಲ್ಲಿರುವ ಅನೇಕರಿಗೆ ತೊಂದರೆಯಾಗುತ್ತಿದೆ. ಮೊದಲು ಅಂಥವರ ಸಂಸ್ಕೃತಿಗೆ ಇತಿ ಶ್ರೀ ಹಾಡುವುದರ ಗಮನಕೊಡುವುದು ಇಂದಿನ ಅಗತ್ಯ.

6 comments:

Anonymous said...

ಇಷ್ಟೇ ಅಲ್ಲ. ಅಧಿವೇಷನದ ನಂತರ ವಾರ್ತಾ ಇಲಾಖೆ ವೊಲ್ವೋ ಬಸ್‌ನಲ್ಲಿ ಪತ್ರಕರ್ತರನ್ನು ಗೋವಾ ಟ್ರಿಪ್ಪಿಗೂ ಕರ್‍ಕೊಂಡು ಹೋಗಿದ್ದರು. ಇದು ಪಬ್ ಸಂಸ್ಕೃತಿಯಲ್ಲ , ಡಿಸ್ಕೋ ಥೆಕ್ ಸಂಸ್ಕೃತಿ ಎಂದು ವಾರ್ತಾ ಸಚಿವ ಕಟ್ಟಾ ಯಡ್ಡಿಯವರಿಗೆ ಕಿವಿಯಲ್ಲಿ ಹೀಳಿ ಸಮಾಧಾನ ಮಾಡಿದ್ದರಂತೆ. ಅದಕ್ಕೆ ಅವರು ಸಧ್ಯಕ್ಕೆ ಪಬ್ ಬಗ್ಗೆ ಮಾತ್ರ ಮಾತಾಡ್ತಾ ಇದಾರೆ. ಇನ್ನು ಸರ್ಕಾರದ ಪಾನ ಗೋಷ್ಠಿಯಲ್ಲಿ ಭಾಗಿಯಾಗದ ನಾವೇ ದುರದೃಷ್ಟವಂತರು ಎಂದು ಅಧಿವೇಷನಕ್ಕೆ ಹೋಗದೇ ಇದ್ದ ಪತ್ರಕರ್ತರು ಕೆಲವರು ಬೇಜಾರಾಗಿದ್ದು ದಿಟ ಸಾರ್‍

NiTiN Muttige said...

ಅಲ್ಲಾ ಸ್ವಾಮಿ, ಹುಡುಗ-ಹುಡುಗಿ ರಸ್ತೆಯಲ್ಲಿ ಅಸಹ್ಯವಾಗಿ ಏನೇನೋ ಮಾಡಿಕೊಂಡು ಹೋದರೂ ನೋಡೋಕೆ ಆಗತ್ತಾ? ಸಂಸ್ಕಾರವಿದ್ದವರು ಖಂಡಿತ ನೋಡಲ್ಲ... ಹುಡುಗ-ಹುಡುಗಿ ಹೋಗೊದಕ್ಕಿಂತ ನೋಡುವವರೇ ಕಣ್ಣುಮುಚ್ಚಿಕೊಳ್ಳಬೇಕಾದ ಸ್ಥಿತಿ ಬಂದಿದೆ.ಇದನ್ನ ನೋಡುವುದು ಅವರ ಸಮಸ್ಯೆ ಅಂದರೆ ಅದು ಹೇಗೆ ಅಂತ ಸ್ವಲ್ಪ ಹೇಳಿ.

ಹೊರಗಣವನು said...

nivu ondu vishya bittiddiri. belagavi adhiveshana mugida mele patrakartarannu govakke govt volvo busnalli khuddu yaddi kalisidru. alde allina cm digambara kamatge 'kannada patrakartarella digambaragalu barta iddare vyvaste madi' endu cm kacheri parupattedarare phone madidru.

Anonymous said...

ಸಾರ್‍,

ಪಬ್ಬಲ್ಲಿ ಕುಡಿದರೆ ಯಾರಿಗೆ ಕಷ್ಟವಾಗುವುದು? ಅವರ ದುಡ್ಡು ಅವರ ಮೋಜು. ಅದರಿಂದ ಬೊಕ್ಕಸಕ್ಕೆ ಎಷ್ಟೊಂದು ತೆರಿಗೆ ಬರುವುದು. ಕರ್ನಾಟಕ ಸರಕಾರ ಹೆಂಡದ ದುಡ್ಡಿನಿಂದಲೇ ಸರಕಾರಿ ಕೆಲಸಗಾರರಿಗೆ ಸಂಬಳ ಕೊಡುವುದು ಎಂದು ಹೇಳುತ್ತಿದ್ದ ಕಾಲವೂ ಇತ್ತಲ್ಲ.

ಅದೇನೋ ನಮ್ಮ ದೇಶದಂತಹ ಹಿಂದುಳಿದ, ಮುಂದುವರಿಯದ ದೇಶಗಳಲ್ಲೇ ಈ ಬಗೆಯ ’ನೈತಿಕತೆ’ ’ಸಭ್ಯತೆ’ ಮುಂತಾದವುಗಳ ಚರ್ಚೆ ಸಿಕ್ಕಾಪಟ್ಟೆ ಜಾಸ್ತಿ.

ಅಮೆರಿಕದ ಯುನಿವರಿಸಿಟಿಯಿಂದ ಡಾಕ್ಟರೇಟು ತೆಗೆದುಕೊಳ್ಳುವ ಮುನ್ನ ಅಮೆರಿಕದಲ್ಲಿ 'Gay'ಪಬ್ಗಳೂ ಕೂಡ legal ಅಂತ ಅವರಿಗೆ ತಿಳಿದಿರಲಿಲ್ಲವೇ. ಅಂತಹ ’ಪಬ್ ಸಂಸ್ಕೃತಿ’ಯನ್ನು ತನ್ನ ಸಂಸ್ಕೃತಿಯ ದೊಡ್ಡ ಅಂಗ ಮಾಡಿಕೊಂಡಿರುವ ಅಮೆರಿಕದಿಂದ ನಮಗೆ ಉದ್ಯೋಗಗಳು ಬೇಕು, ದುಡ್ಡು ಬೇಕು, ಈಗ ಮುಖ್ಯಮಂತ್ರಿಗಳಿಗೆ ಡಾಕ್ಟರೇಟು ಬೇಕು, ಅವರ ವಿಜ್ನಾನ ಬೇಕು, ಅವರಿಂದ ಏನೆಲ್ಲ ಬೇಕು, ಆದರೆ ನಮ್ಮ ಯುವತಿಯರು ಜೀನ್ಸ್ ತೊಟ್ಟರೆ ಅಸಭ್ಯ! ಪಬ್ಗೆ ಹೋದರೆ ಜಾರತನ!

ಗಮನಿಸಿರಿ.... ಮಾನ್ಯ ಮುಖ್ಯಮಂತ್ರಿಗಳು ಡಾಕ್ಟರೇಟು ಪಡೆಯಲು ನಮ್ಮ ’ಪಂಚೆ ನೀಳಂಗಿ’ ಬಿಟ್ಟು ಸೂಟಲ್ಲಿ ಹೋಗಿದ್ರು.! ಅದು ತಪ್ಪಲ್ಲ ಬಟ್ಟೆ ಅವರಿಷ್ಟ ಅಲ್ವ! :)

ಏನೋಪ್ಪ.. ಇವರು ಏನು ಮಾಡಲು ಹೊರಟಿದ್ದಾರೆ ಎಂದು ತಿಳಿವೊಲ್ದು.!

ಕಾನೂನು ಮಾಡಿ ದಂಡಿಸುವುದು ಒಳ್ಳೆಯದು. ಆದರೆ ಕಾನೂನು ಇಲ್ಲದೇ ದಂಡಿಸುವುದು ಹಕ್ಕು ಕಸಿದುಕೊಳ್ಳುವ ಕ್ರಿಯೆ.

ಪಬ್ಗಳ ಬಗ್ಗೆ ಸರಕಾರ ಏನು ಬಯಸುವುದು, ಏನು ಕಟ್ಟಳೆಗಳು ಎಂದು ಸ್ಪಷ್ಟ ಕಾನೂನು ರಚಸಿ ಆಮೇಲೆ ಯಾವುದು ತಪ್ಪು ಸರಿಯೆಂದು ಹೇಳಬೇಕಲ್ವ!

Anonymous said...

ಅತ್ಯಂತ ಸೂಕ್ತವಾದ ಮಾತುಗಳು. Spot on!

Anonymous said...

i condeming ramsena brutal violence . But the same time pub culture in young generation especially in student level must go.