Wednesday, February 11, 2009

ಅವ್ಯವಸ್ಥೆ ಮತ್ತು ರಣರಂಗದ ಸ್ವಾಮೀಜಿ!

ಚಿತ್ರದುರ್ಗ ಸಾಹಿತ್ಯ ಸಮ್ಮೇಳನ ಮುಗಿಯಿತು. ಪತ್ರಿಕೆಗಳಲ್ಲಿ ಸಮ್ಮೇಳನದ ವರದಿಗಳನ್ನಷ್ಟೇ ಓದಿದ ಜನತೆಗೆ, ಅಮೃತ ಮಹೋತ್ಸವ ಯಾವ ನೆನಪುಗಳನ್ನು ಕಟ್ಟಿಕೊಟ್ಟಿದೆ ಎಂಬುದರ ಪುಟ್ಟ ಪಟ್ಟಿಯೊಂದನ್ನು ಮಾಡೋಣ.
* ಧೂಳು!!!!
* ಊಟದಲ್ಲಿ ಅವ್ಯವಸ್ಥೆ
* ಕುಡಿಯಲು ನೀರಿಲ್ಲ
* ತಂಗಲು ತಾಣವಿಲ್ಲ
* ನೌಕರರಿಗೆ ಓಓಡಿ ಪತ್ರ ದೊರಕಲಿಲ್ಲ
* ಪುಸ್ತಕ ಮಳಿಗೆಗಳಲ್ಲಿ ತಿಂಡಿ ಅಂಗಡಿಗಳದೇ ಕಾರುಬಾರು
* ಸಭೆ ಮಧ್ಯೆದಲ್ಲಿಯೇ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ
* ಪೊಲೀಸ್ ಪಹರೆಯಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷ
* ನಿಲ್ಲದ ಪರದಾಟ
* ಸ್ವಾಗತ ಸಮಿತಿ ಮತ್ತು ಪರಿಷತ್ ಮಧ್ಯೆ ತಿಕ್ಕಾಟ
- ಇವುಗಳ ಮಧ್ಯೆ ಕಾಣಿಸಿದ್ದು - ಸಮ್ಮೇಳನಾಧ್ಯಕ್ಷರ ಭಾಷಣ ವರದಿ. ಅವರ ಭಾಷಣಕ್ಕಿಂತ ಹೆಚ್ಚಿನ ಮನ್ನಣೆ ಪಡೆದದ್ದು ಆ ಭಾಷಣಕ್ಕೆ ಸಿರಿಗೆರೆ ಸ್ವಾಮಿ ನೀಡಿದ ಪ್ರತಿಕ್ರಿಯೆ. ಜೊತೆಗೆ ಬರಗೂರು ರಾಮಚಂದ್ರಪ್ಪನವರ ಸಮಾರೋಪ ಭಾಷಣದ ಕಿರು ವರದಿ.
ಸಮ್ಮೇಳನಕ್ಕೆ ಒಂದೆರಡು ದಿನಗಳ ಮಟ್ಟಿಗೆ ಹೋಗಿ ಬಂದ ಮಿತ್ರರು ಹೇಳುವಂತೆ ಅಲ್ಲಿನ ಸ್ಥಳೀಯ ಆವೃತ್ತಿಗಳಲ್ಲೂ ಚಿತ್ರಣ ಇದಕ್ಕಿಂತ ಭಿನ್ನ ಇರಲಿಲ್ಲ.
ಯಾಕೆ ಹೀಗೆ? ಚಿತ್ರದುರ್ಗದ ಸಮ್ಮೇಳನ ಕೆಲ ಕಾರಣಗಳಿಗೆ ಐತಿಹಾಸಿಕ. ಇದುವರೆಗಿನ ಯಾವ ಸಮ್ಮೇಳನದ ಅಧ್ಯಕ್ಷರೂ ತಮ್ಮ ಭಾಷಣದಲ್ಲಿ ದಲಿತ ಹುಡುಗರಿಗೆ ಉತ್ತಮ ಶಿಕ್ಷಣ ಕೊಡಲು ವಸತಿ ಶಾಲೆಗಳನ್ನು ಸ್ಥಾಪಿಸಿ ಎಂದು ಮುಖ್ಯಮಂತ್ರಿಯನ್ನು ಆಗ್ರಹಿಸಿದ ಉದಾಹರಣೆ ಇಲ್ಲ. ಇದು ನಿಜ ಅರ್ಥದಲ್ಲಿ ಸಾಹಿತ್ಯ ಪರಿಷತ್ ಸಂಘಟಿಸಿದ 'ಪರ್ಯಾಯ ಸಮ್ಮೇಳನ'.
'ಅವ್ಯವಸ್ಥೆ' ವರದಿಗಾರಿಕೆಗೆ ಹಿತವಾಗಿ ಎಟುಕುತ್ತದೆ. ಆ ಹಿತಕ್ಕೆ ಮಾರುಹೋಗಿ ವರದಿಗಾರ ತನ್ನೊಳಗಿನ ಪತ್ರಕರ್ತನಿಗೆ ಸಾಯಲು ಬಿಡಬಾರದು. ಈ ಎಲ್ಲಾ ಹಿಂದಿನ ಸಮ್ಮೇಳನಕ್ಕಿಂತ ಇದು ಹೇಗೆ ಭಿನ್ನ ಎಂದು ನೋಡಬೇಕಲ್ಲ. ಊಟ ಕೊರತೆ, ವಸತಿ ಸಮಸ್ಯೆ ನಿಜಕ್ಕೂ ವರದಿಮಾಡಲೇ ಬೇಕಾದ ವಿಚಾರಗಳು. ಆದರೆ ಅದೇ ಮುಖ್ಯ ಅಲ್ಲ. ಸಮ್ಮೇಳನದ ನಾಲ್ಕೂ ದಿನ ಅದನ್ನೇ ಬರೆದರೆ ಓದುಗರ ಮನಸ್ಸಿನಲ್ಲಿ ಸಮ್ಮೇಳನಾಧ್ಯಕ್ಷರ ಆಶಯ, ಚಿತ್ರದುರ್ಗ ಜನತೆಯ ಪಾಲ್ಗೊಳುವಿಕೆಗಿಂತ ಅವ್ಯವಸ್ಥೆಯೇ ಉಳಿದುಬಿಡುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪತ್ರಿಕೆಗಳು ಬದಲಾಗಬೇಕಾದ ಅಗತ್ಯವಿದೆ.
ಡಾ.ಎಲ್ ಬಸವರಾಜು ಅವರು ಒಂದು ಹಂತದಲ್ಲಿ ಬೇಸತ್ತು ಸಮ್ಮೇಳನದಿಂದ ಹೊರನಡೆಯಬೇಕೆಂಬ ನಿರ್ಧಾರಕ್ಕೂ ಬಂದಿದ್ದರೆಂದು ಸುದ್ದಿ ಪ್ರಕಟವಾಗಿದೆ. ಅದು ನಿಜವೇ ಆಗಿದ್ದಲ್ಲಿ; ಆ ಹಿರಿಯ ಜೀವ ಅಸಮಾಧಾನಗೊಳ್ಳಲು ಸಾಕಷ್ಟು ಕಾರಣಗಳಿದ್ದವು ಎಂಬುದನ್ನು ಮಾತ್ರ ಒಪ್ಪಲೇಬೇಕು.
ಮಠದ ಸ್ವಾಮಿಗಳನ್ನು, ರಾಜಕಾರಣಿಗಳನ್ನು ಹೊರಗಿಟ್ಟು ಸಮ್ಮೇಳನ ಮಾಡಿ ಎಂದು ಬಸವರಾಜು ಅವರು ಕರೆ ಕೊಟ್ಟರು. ಅದರಲ್ಲಿ ತಪ್ಪೇನು. ಇದು ಸಾಹಿತ್ಯ ಪರಿಷತ್ ಮಾಡುತ್ತಿರುವ ಮೊದಲ ಸಮ್ಮೇಳನವಲ್ಲ. 75 ನೆಯದು. ಇಷ್ಟಾದರೂ ಸಾಹಿತ್ಯ ಪರಿಷತ್ ಸ್ವಂತ ಸಂಪನ್ಮೂಲದಿಂದ ಸಮ್ಮೇಳನ ನಡೆಸಲಿ ಎಂಬುದು ಅವರ ಮಾತಿನ ಉದ್ದೇಶ. ಮಠಗಳು ಏನೇ ಸಮಾಜ ಸುಧಾರಣೆ ಮಾಡಿದ್ದರೂ, ಅವು ಸುಧಾರಣೆಗೊಂಡಿಲ್ಲ. ಜಾತೀಯತೆಯಿಂದ ಮುಕ್ತಗೊಂಡಿಲ್ಲ. ಅವರೂ ಒಂದರ್ಥದಲ್ಲಿ ಶಕ್ತಿ ಕೇಂದ್ರ (power centres) ಆಗಿರುವ ಕಾರಣ ಹಣ ಹರಿದು ಬರುತ್ತದೆ. ಅದನ್ನೇ ಶಿಕ್ಷಣ ಕ್ಷೇತ್ರಕ್ಕೆ ಬಂಡವಾಳವಾಗಿ ವಿನಿಯೋಗಿಸುತ್ತಾರೆ, ಲಾಭದ ಬೆಳೆ ಬೆಳೆಯುತ್ತಾರೆ.
ಸಿರಿಗೆರೆ ಸ್ವಾಮೀಜಿ ಬಸವರಾಜು ಮಾತಿಗೆ ನೀಡಿದ ಪ್ರತಿಕ್ರಿಯೆಯಂತೂ ಒಬ್ಬ ಸುಸಂಸ್ಕೃತನ ಬಾಯಲ್ಲಿ ಬರುವ ಮಾತುಗಳಾಗಿರಲಿಲ್ಲ. "ಅಲ್ಲಿ ರಣರಂಗವೇ ಏರ್ಪಟ್ಟರೂ, ನಾವು ಅದರಲ್ಲಿ ಗೆದ್ದೇ ಬರುತ್ತೇವೆ" ಎನ್ನುವಾಗ, ಅವರು ಸ್ವಾಮೀಜಿಯೋ ಅಥವಾ ಅಂಡರ್ ವರ್ಲ್ಡ ಡಾನ್ ಇರಬಹುದೇ ಎಂಬ ಸಂಶಯ ಕಾಡುತ್ತದೆ. ಬರಗೂರು ತಮ್ಮ ಮಾತುಗಳಲ್ಲಿ ಹೇಳಿದಂತೆ (ಪತ್ರಿಕೆ ವರದಿಗಳು ಹೇಳುವಂತೆ) ಯಾರ ಮಾತೂ ಅಂತಿಮ ಸತ್ಯವಲ್ಲ. ಪರಸ್ಪರ ಚರ್ಚೆ, ಸಂವಾದಗಳ ಮುಊಲಕ ಸತ್ಯಗಳನ್ನು ಹುಡುಕಬೇಕಾಗುತ್ತದೆ. ಸಮಾಜಕ್ಕೆ ದಿಕ್ಕು ತೋರಿಸುವ ಸ್ಥಾನದಲ್ಲಿ ಕುಳಿತಿರುವವರು ರಣರಂಗದ ಮಾತನಾಡಿದರೆ ಹೇಗೆ?
ಒಬ್ಬ ಸ್ವಾಮೀಜಿ ಹೀಗೆ ಮಾತನಾಡಿದಾಗ ಸಮ್ಮೇಳನಾಧ್ಯಕ್ಷರು ಬೇಸರದಿಂದ ಹೊರ ನಡೆಯುವ ತೀರ್ಮಾನಕ್ಕೆ ಬಂದದ್ದೇ ಆಗಿದ್ದಲ್ಲಿ, ಅದು ಆ ಸ್ವಾಮೀಜಿಗೆ ಆದ ಅವಮಾನ!

3 comments:

Anonymous said...

nivu patti madiruva nenapugalu purvagraha. alli nadina samasye charche agide, 2 koti moulyada pusthaka kharidi agide, hosobarige gostigallali avakasha sikkide, chiti illade ellarigu oota sikkide, saviraru mandi gostigallali bhagavahisiddare avu nimage nenapugallave? dullu enumadalu sadya? vasati samasye agilla. 3500 hasige khali iddavu.

surya said...

Patrakartarannu nija atma vimarshege hachhuva, echharisuva bareha. Avyavastheya hitakke maaru hoadare patrakrta taanu saayuvudae allade, vaachakarigoo droha bagedantey.

-Teja

chanakya said...

ಈವರಗೆ ನೀವು ಮಾಡ್ತಿದ್ದ ಮಹಾನ್ ಕಾರ್ಯವನ್ನ ಈವತ್ತು ಬೇರೆ ಪತ್ರಿಕೆಗಳು ಮಾಡ್ತಾ ಇದಾವೆ ಅನ್ಸಲ್ವಾ ಗೆಳೆಯಾ? ಯಾಕಂದ್ರೆ ನೆಗೆಟಿವ್ ಮೆಂಟಾಲಿಟಿಗೆ ಕೇಂದ್ರ ಸ್ತಾನವೇ ನಿಮ್ದು. ನಿಮ್ಮನ್ನ ಬಿಟ್ಟು ಉಳಿದೋರೆಲ್ಲಾ ಜಾಣರು? ಅನ್ಕೊಂಡ್ರೆ ತಪ್ಪಾಗುತ್ತೆ ಅಲ್ವಾ. ಆದ್ರು ದುರ್ಗದ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಗುರುಗಳು ನಮ್ ವ್ಯವಸ್ತೆನಾ ಬೆತ್ತಲೆ ಮಾಡಿದಾರೆ.ಅದಕ್ಕಾಗಿ ಅವ್ರಿಗೆ ಒಂದು ದೀರ್ಘದಂಡ ಪ್ರಣಾಮ...