ಮುಸಲ್ಮಾನರು ಅತೀ ಕಡಿಮೆ ಸಂಖ್ಯೆಯಲ್ಲಿರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿರುವ ಇಬ್ಬರು, ಆ ಸಮುದಾಯದ ಮತಗಳಿಲ್ಲದೆಯೂ ತಾವು ಗೆಲ್ಲಬಲ್ಲೆವು ಎಂಬ ದಾಷ್ಟ್ಯದಿಂದ ಈ ಮಾತುಗಲನ್ನಾಡಿದ್ದಾರೆ. ಮತ್ತು ಆ ಮೂಲಕ, ಹಿಂದೂಗಳೆಲ್ಲ ಒಟ್ಟಾಗಿ ತಮಗೇ ಮತಹಾಕಬೇಕು ಎಂಬ ಸಂದೇಶವನ್ನೂ ಸಾರುತ್ತಿರುವುದು ಸ್ಪಷ್ಟ.
ದೇಶ ಅಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮೂಲಕ ಪ್ರತಿನಿದಿಗಳನ್ನು ಆಯ್ಕೆಮಾಡುವುದು ಪದ್ಧತಿ. ವರುಣ್ ಮತ್ತು ಹೆಗಡೆಯವರಿಗೆ ಈ ವ್ಯವಸ್ಥೆಯ ಬಗ್ಗೆಯೇ ಅಪನಂಬಿಕೆ ಇದೆ. ಒಂದು ಸಮುದಾಯದವರು ಮತ ಹಾಕದಿದ್ದರೂ ತಾನು ಗೆಲ್ಲುತ್ತೇನೆ ಎನ್ನುವುದಾದರೆ, ಗೆದ್ದ ಮೇಲೆ ಆ ಸಮುದಾಯಕ್ಕೆ ತಾನು ಪ್ರತಿನಿಧಿಯಾಗಿರಲಾರೆ ಎಂದು ಹೇಳಿದಂತೆ.
ಅವರ ಕ್ಷೇತ್ರದ ಮುಸಲ್ಮಾನ ಪ್ರಜೆ ಸಂಕಷ್ಟದಲ್ಲಿದ್ದಾಗ, ಈ ಪ್ರತಿನಿಧಿ ತನಗೂ, ಆತನ ಸಮಸ್ಯೆಗೂ ಸಂಬಂಧವಿಲ್ಲದವನಂತೆ ಇದ್ದು ಬಿಡುತ್ತಾನೆ. ಅಲ್ಪಸಂಖ್ಯಾತ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ, ಅದು ಪ್ರತಿನಿಧಿಯ ಮನಸ್ಸನ್ನು ಘಾಸಿಗೊಳಿಸುವುದಿಲ್ಲ. ಅಲ್ಪಸಂಖ್ಯಾತ ಸಮುದಾಯದವರ ಮಕ್ಕಳು ಶಾಲೆಗೆ ಹೋಗದಿದ್ದರೆ, ಇವರ ಪಾಲಿಗೆ ಅದು ಮುಖ್ಯವಲ್ಲ. ಮುಸಲ್ಮಾನರ ಓಣಿಗೆ ಕುಡಿವ ನೀರು ತಲುಪದಿದ್ದರೆ, ಮೋರಿ ಸ್ವಚ್ಛಗೊಳ್ಳದಿದ್ದರೆ, ಸಾಮೂಹಿಕ ಶೌಚಾಲಯ ವ್ಯವಸ್ಥೆ ಇಲ್ಲದಿದ್ದರೆ...ಊಹ್ಞುಂ ಅದಾವುದೂ ಇವರಿಗೆ ಸಮಸ್ಯೆಯೇ ಅಲ್ಲ. Muslims just do not exist for them. ಏಕೆಂದರೆ ಅವರ ಮತ ಇಲ್ಲದಿದ್ದರೂ ಗೆದ್ದುಬಂದರಲ್ಲ!
ಕೆಲ ಇಂಗ್ಲಿಷ್ ಪತ್ರಿಕೆಗಳಲ್ಲಿ ಒಂದು ಧೋರಣೆ ಇದೆ. ಕೂಲಿ ಕಾರ್ಮಿಕನ ಮಗಳು ಅಥವಾ ಬಡ ರೈತನ ಮಗಳು ಅತ್ಯಾಚಾರಕ್ಕೆ ಒಳಗಾದರೆ ಈ ಪತ್ರಿಕೆಗಳಿಗೆ ಅದು ಸುದ್ದಿಯೇ ಅಲ್ಲ. "ಅಯ್ಯೋ, ಆ ಜನ 3ರೂಪಾಯಿ ಕೊಟ್ಟು ನಮ್ ಪೇಪರ್ ಓದ್ತಾರಾ?" ಎಂದು ಆ ಸುದ್ದಿಯನ್ನು ಮೂಲೆಗುಂಪು ಮಾಡುತ್ತಾರೆ. ಆದರೆ ಅದೇ ಐಟಿ ಉದ್ಯೋಗಿ ಅಥವಾ ಶ್ರೀಮಂತ ಕುಟುಂಬದ ಹೆಣ್ಣುಮಗಳಾದರೆ ಅದು ದೊಡ್ಡ ಸುದ್ದಿ. ಕಾರಣ ಅವರು ದುಡ್ಡುಕೊಟ್ಟು ಪೇಪರ್ ಓದ್ತಾರಲ್ಲ?
ಈ ದೇಶದ ಜನಪ್ರತಿನಿಧಿಗಳಾಗಲು ಚುನಾವಣೆಗೆ ನಿಲ್ಲುತ್ತಿರುವ ಆ ಇಬ್ಬರದೂ, ಇಂಗ್ಲಿಷ್ ಪತ್ರಿಕೆ ಮಾಲಿಕರದೂ ಒಂದೇ ಧೋರಣೆ. ದುಡ್ಡು ಕೊಟ್ಟು ಪೇಪರ್ ಓದುವುದಿಲ್ಲ ಎಂಬ ಕಾರಣಕ್ಕೆ ಬಹುದೊಡ್ಡ ಸಮುದಾಯ ಪತ್ರಿಕಾ ಜಗತ್ತಿನಿಂದ ಹೊರಗುಳಿಯುವಂತೆ, ನಿಮ್ಮ ಓಟು ಬೇಡವೆಂದು ಅಲ್ಪಸಂಖ್ಯಾತ ಸಮುದಾಯವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಿಂದಲೇ ಹೊರಗಿಡುವ ಹುನ್ನಾರ ಈ ಕೋಮುವಾದಿ ರಾಜಕಾರಣಿಗಳದು? ಸಮಾಜದ ಒಂದು ಅಂಗವನ್ನೇ ಹೊರಗಿಡುವ ಮಾತನಾಡುತ್ತಿರುವವರನ್ನು ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುತ್ತಿರುವ ಪಕ್ಷಕ್ಕೆ ಒಂದಿಷ್ಟು ನಾಚಿಕೆ ಇಲ್ಲವೆ?
ಯುಗಾದಿ ಇವರಿಗೆ ಬುದ್ಧಿ ಕೊಡಲಿ. ಅಂದಹಾಗೆ ನಿಮಗೆಲ್ಲರಿಗೂ ಯುಗಾದಿ ಶುಭಾಶಯಗಳು.
2 comments:
With the ruling BJP Government's not initiating any stringent action aganist those people who are disturbing peace in the state, people like Pramod Mutalik are venting their anger against muslims for every other day...So that the latter are living under greater fear now days...this should be stopped by only the media if they are really committed to social justice
Please give details about kagodu timmappa. Othervise u will be simpley blammed as anti-bjp
- R.S.Reddy
Post a Comment