Thursday, June 25, 2009

ಉತ್ತಮ ಸಮಾಜಕ್ಕಾಗಿ...!!!

ಕೆಲ ದಿನಗಳ ಹಿಂದಿನಿಂದ ಇಂತಹದೊಂದು ಸುದ್ದಿ ಹರಿದಾಡುತ್ತಿದೆ. ಟಿವಿ9 ಸುದ್ದಿ ವಾಹಿನಿ ವರದಿಗಾರನೊಬ್ಬ ಇತ್ತೀಚೆಗೆ ತಾನೆ ಪದವಿ ಕಳೆದುಕೊಂಡ ಮಂತ್ರಿಯೊಬ್ಬರೊಂದಿಗೆ ವ್ಯವಹಾರ ನಡೆಸಿ ಸರಿಸುಮಾರು ಒಂದು ಕೋಟಿ ರೂಗಳಷ್ಟು ಹಣ ಸಂಗ್ರಹಿಸಿದ್ದಾನೆ. 'ಉತ್ತಮ ಸಮಾಜ ನಿರ್ಮಾಣ'ದ ಹೊಣೆಹೊತ್ತಿರುವ ವಾಹಿನಿಗೆ ಕಳಂಕ ತರುವಂತಹ ಸುದ್ದಿ ಇದು. ಸ್ವತಃ ಆ ರಾಜಕಾರಣಿಯೇ ಈ 'ಸತ್ಯ'ವನ್ನು ಹೊರಹಾಕಿದ್ದಾರೆ!
ಆ ವರದಿಗಾರ ತನ್ನ ಆಫೀಸಿನ ಮುಖ್ಯಸ್ಥ, ಮುಖ್ಯ ವರದಿಗಾರ.. ಹೀಗೆ ಎಲ್ಲರಿಗೂ ಹಣ ನೀಡಬೇಕು ಎಂದೆಲ್ಲಾ ಹೇಳಿ ಆ ರಾಜಕಾರಣಿಯಿಂದ ಹಣ ಪಡೆದಿದ್ದಾನೆ ಎನ್ನುವುದು ಸುದ್ದಿ. ಆ ಬೃಹತ್ ಮೊತ್ತ ನೀಡಿ ಒಂದು ಸುದ್ದಿ ವಾಹಿನಿಯೊಂದರ 'ಒಲವ'ನ್ನು ಗಳಿಸಿಕೊಳ್ಳುವಂತಹ ಅನಿವಾರ್ಯತೆ ಆ ರಾಜಕಾರಣಿಗೆ ಯಾಕಿತ್ತು ಎನ್ನುವುದು ಕೇಳಲೇಬೇಕಾದ ಪ್ರಶ್ನೆ. ಒಂದಂತೂ ಸತ್ಯ, ಆ ಹಣ 'ಕೃಷ್ಣನ ಲೆಕ್ಕ'ಕ್ಕೆ ಸೇರಿದ್ದು. ಆ ಕಾರಣ ಅವರು ಯಾರಲ್ಲಿಯೂ ಬಹಿರಂಗವಾಗಿ ದೂರುವಂತಿಲ್ಲ.
ಈ ಸುದ್ದಿ ಮುಖ್ಯಸ್ಥರಿಗೆ ಗೊತ್ತಾಗುತ್ತಿದ್ದಂತೆಯೇ ಆ ವರದಿಗಾರನನ್ನು ಮನೆಗೆ ಕಳುಹಿಸಿದ್ದಾರೆ. ಪತ್ರಿಕೋದ್ಯಮದ 'ಓಂ' ಕಾರ ಕಲಿಯುತ್ತಿರುವಾಗಲೇ ಇಷ್ಟು ಹಣ ಮಾಡಿಕೊಂಡ ಮೇಲೆ ಕೆಲಸ ಹೋದರೇನಂತೆ?
ಇತ್ತ ಆ ರಾಜಕಾರಣಿ ದುಡ್ಡಿನ ಆಸೆಯನ್ನೂ ಬಿಟ್ಟಿದ್ದಾರೆ. ತಿರುಪತಿ ಹುಂಡಿಗೆ ಹಾಕಿದೆ ಎಂದುಕೊಂಡು ಸುಮ್ಮನಾದರೂ ಅಚ್ಚರಿಯಿಲ್ಲ.
ಟಿವಿ9 ಬೆಂಗಳೂರಿನಲ್ಲಿ ಬೇರು ಬಿಟ್ಟಾಗಿನಿಂದ ಹಲವು ಕುಟುಕು ಕಾರ್ಯಾಚರಣೆಗಳನ್ನು ಮಾಡಿ, ಲಂಚ ಬಾಕರನ್ನು ವೀಕ್ಷಕರಿಗೆ ತೋರಿಸಿದೆ. ಆದರೆ ತಮ್ಮ ಮನೆಯಲ್ಲಿಯೇ ಇದ್ದವನನ್ನು ಹುಡಕಲಾಗಲಿಲ್ಲ. ಇನ್ನು ಅದರ ಬಗ್ಗೆ ಸುದ್ದಿ ಮಾಡುವುದಂತೂ ದೂರದ ಮಾತು.
ಮಾಧ್ಯಮ ಕ್ಷೇತ್ರದಲ್ಲಿ ಭ್ರಷ್ಟಾಚಾರ ತೀರಾ ಸಾಮಾನ್ಯ ಎನ್ನುವ ಮಾತುಗಳು ಹೆಚ್ಚೆಚ್ಚು ಕೇಳಿ ಬರುತ್ತಿವೆ. ನಿಜ. ಭ್ರಷ್ಟರಿದ್ದರು, ಇದ್ದಾರೆ ಹಾಗೆಯೇ ಮುಂದೆಯುಊ ಇರಬಹುದು. ಆದರೆ ಪರಿಸ್ಥಿತಿ ಈ ಮಟ್ಟಿಗೆ ಹಾಳಾಗುತ್ತಿದೆ ಎಂದಾಕ್ಷಣ ಎಚ್ಚೆತ್ತುಕೊಳ್ಳಬೇಕಿರುವುದು ಸುದ್ದಿ ಸಂಸ್ಥೆಗಳ ಜವಾಬ್ದಾರಿ. ಇಂದು ಟಿವಿ9 ಬಗ್ಗೆ ಮಾತನಾಡಲು ಒಂದಿಷ್ಟು ಸರಕು ಸಿಕ್ಕಿರಬಹುದು. ಹಾಗಂತ ಬೇರೆ ಸುದ್ದಿವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ಇರುವವರೆಲ್ಲ ಸಭ್ಯರು ಎಂದಲ್ಲ. ದುಡ್ಡಿಗಾಗಿ ಸಂಸ್ಥೆಯ ಹೆಸರು, ತಮ್ಮ ಮಾನವನ್ನು ಮಾರಿಕೊಳ್ಳುವವರ ಸಂಖ್ಯೆ ಒಟ್ಟು ಪತ್ರಕರ್ತರ ಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆಯೆ. ಆದರೂ ಅಂತಹವರ ಕಾರಣ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು.
ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆ ಕ್ರಮೇಣ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಎದುರು ಪತ್ರಕರ್ತ ತೀರಾ ಸಣ್ಣವನಾಗುತ್ತಾನೆ. ಸುದ್ದಿ ಕೇಳಲು ಹೋದರೆ ಒಂದಿಷ್ಟೂ ಮರ್ಯಾದೆ ಕೊಡದೆ ನಡೆಸಿಕೊಳ್ಳಬಹುದು. "ನೀವೇನ್ರಿ, ಒಂದಿಷ್ಟು ದುಡ್ಡು ಬಿಸಾಕಿದ್ರೆ ನನ್ನ ಮನೆ ಮುಂದೆ ನಾಯಿ ತರಹ ಬಿದ್ದಿರ್ತೀರಿ ಎಂದು" ದಬಾಯಿಸ ಬಹುದು. ಈ ಕಾರಣಗಳಿಗಾಗಿ ಸುದ್ದಿ ಸಂಸ್ಥೆಗಳು ಎಚ್ಚರ ವಹಿಸುವ ಅಗತ್ಯವಿದೆ. ವೃತ್ತಿಗೆ ಬದ್ಧರಾಗಿ, ನಿಯತ್ತಿನಿಂದ ದುಡಿಯುವ ಮನಸ್ಸುಗಳು ಬೇಕಾದಷ್ಟಿವೆ. ಅವರಿಗೆ ಅವಕಾಶ ದೊರಕಬೇಕು.
ಆದರೆ, ಸುದ್ದಿ ಸಂಸ್ಥೆ ಮುಖ್ಯಸ್ಥರೇ ಕೈ ಒಡ್ಡಿ ನಿಂತರೆ - ಧರೆಯೇ ಹತ್ತಿ ಉರಿದಂತೆ! ಹಾಗಾಗದಿರಲಿ.

8 comments:

ಗೋವಿಂದ್ರಾಜ್ said...

ಈಗಾಗಲೇ ಅಂತಹ ಆರೋಪಕ್ಕೆ ಸಿಲಿಕುತ್ತಿರುವ ಪತ್ರಕರ್ತ ಸಮೂಹ ಇಂತಹ ಘಟನೆ ನಡೆಯುವುದರೊಂದಿಗೆ ಮತ್ತಷ್ಟು ಹೆಚ್ಚ್ಗುತ್ತೆ. ಅದು ನಿಲ್ಲುವಂತೆ ಮಾಡುವುದು ಕಷ್ಟವೇ. ಆದರೆ ಪತ್ರಿಕಾ ರಂಗಕ್ಕೆ ಬಧ್ಧತೆ ಯಿಂದ ಬರುವುದಕ್ಕಿಂತ ಹಣ ಮಾಡಲೋಸುಗ ಬರುವ ಕೆಲವರ ಸ್ನಖ್ಯ ಹೆಚ್ಚುತ್ತಿರುವುದು ದಿಟವೇ...

chanakya said...

ನಿಮಗೆ ತುಂಬಾ ತಡವಾಗಿ ಈ ಸುದ್ದಿ ಸಿಕ್ಕಿದೆ..ಆದ್ರೂ ಇದನ್ನ ಪ್ರಕಟಿಸೋ ಮೂಲಕ ಈ ದಾರಿ ತುಳಿಯುತಿದ್ದ...ತಯಾರಿ ನಡೆಸಿದ್ದ ಸಾಕಷ್ಟು ಮಂದಿಗೆ ಇದು ಪರೋಕ್ಷ ಎಚ್ಚರಿಕೆ ಅಂದ್ರೆ ತಪ್ಪಾಗೊಲ್ಲ. ಆದ್ರೆ ನೀವೇ ಉಲ್ಲೇಖಿಸಿರುವಂತೆ ಧರೆ ಹೊತ್ತಿ ಉರಿದೊಡೆ...ಅಬ್ಬಾ ಕಲ್ಪಿಸಿಕೊಳ್ಳಿಕ್ಕೂ ಅಸಾದ್ಯ..ಆದ್ರೆ ನೋವಿನ ಸಂಗತಿ ಅಂದ್ರೆ ನಾವು ಹೀಗೆ ಅಂತ ಅಂದುಕೊಳ್ಳದೆ ಇರೋರು ಇಂತಹ ಕೃತ್ಯಕ್ಕೆ ಮುಂದಾದಾಗ..ಕನಿಕರಕ್ಕಿಂತ..ಕಡಕೋಪ ಬರುತ್ತೆ...ಎನಿವೇ ಇದು ಎಚ್ಚೆತ್ತುಕೊಳ್ಳೋ ಸಮಯ.ಅಂತಷ್ಟೇ ಹೇಳ್ಬಹುದು...

Anonymous said...

ರಾಜಕಾರಣಿಗಳು ಇಷ್ಟು ಬೀಸುಬೀಡಾಗಿ ಭೃಷ್ಟಚಾರ ನಡೆಸುತ್ತಿರುವುದಕ್ಕೆ ಪತ್ರಿಕೋದ್ಯಮಿಗಳೇ ಕಾರಣ.ಏಕೆಂದರೆ ಬಹುತೇಕ ಪತ್ರಕರ್ತರು ರಾಜಕಾರಣಿಗಳ ಗುಲಾಮರು.ರಾಜಕಾರಣಿಗಳು ಎಸೆಯುವ ಪಾಪದ ಕಾಸಿಗೆ ಬಾಯಿಬಿಡುವ ನಾಯಿಗಳು.ಅವರಿಗೆ ಅವರ ವೃತ್ತಿಯ ಮಹತ್ವವೇ ಗೊತ್ತಿಲ್ಲ.ಪತ್ರಿಕಾ ಛಾಯಾಗ್ರಹಕರಂತೂ ಪ್ರತಿ ತಿಂಗಳು ಮುಖ್ಯಮಂತ್ರಿಗಳೂ ಸೇರಿದಂತೆ ಮಂತ್ರಿಗಳಿಂದ ಇಂತಿಷ್ಟು ಹಣ ಪಡೆಯುತ್ತಾರೆ.ಹೀಗಿರುವಾಗ ಮಂತ್ರಿಗಳಿಗೆ ಪತ್ರಕರ್ತರು ಎಂದರೆ ತಮ್ಮ ಮನೆಯಾಳುಗಳು.ಇನ್ನು ಉತ್ತಮ ಸಮಾಜದ ಚಾನಲ್್ನಲ್ಲಿ ನಡೆದಿರುವ ಕೋಟಿ ರೂಪಾಯಿ ಹಗರಣದ ಹಿಂದೆ ಅಲ್ಲಿ ಕೆಲಸ ಮಾಡುತ್ತಿರುವ ಹಲವು ಭೃಷ್ಟರ ಕೈವಾಡವಿದೆ.ಧರೆ ಹತ್ತಿ ಉರಿಯತೊಡಗಿದೆ ಏನು ಮಾಡುವುದು? ಮರಿ ಪತ್ರಕರ್ತರಂತೂ ಹಂಡ ಕುಡಿದ ಕೋತಿಗಳಾಂತಾಗಿದ್ದಾರೆ.ಈ ಸಮಾಜವನ್ನು ದೇವರೇ ಕಾಪಾಡಬೇಕು.

Anonymous said...

intha ghatanegalige samste mattu mukyatharu karana. patrikodyma emmbha ruthiyannau collection center madi,tamma nechatana mereutiddre. kevala tanna jathi,sambhadha ennuva karana yaude ahrthe illaddiru kelasa nedi patrakarthara mana tegeuuthiddre.

Anonymous said...

TV9 Karmakandagala bagge yaru sting operation madalu idu sakala...

parasurama kalal said...

ಜನಪರ ಚಳವಳಿಗಳು ಇಲ್ಲದ ನಿರ್ವಾತ ಪ್ರದೇಶದಲ್ಲಿ ಸಾಹಿತ್ಯ, ಸಂಸ್ಕೃತಿ,ಪತ್ರಿಕೋದ್ಯಮ ಅಥವಾ ಸಂಘಟನೆಗಳು ಫ್ಯಾಂಟಮ್, ಸೂಪರ್‍ ಮ್ಯಾನ್, ಸ್ಪೈಡರ್‍ ಮ್ಯಾನ್ ಅಂತಹ ರಮ್ಯ ನಾಯಕರನ್ನು ಸೃಷ್ಠಿಸುತ್ತದೆ. ಅವರು ತಮ್ಮ ರಮ್ಯ ಸಾಹಸಗಳ ಮೂಲಕ ಈ ಎಲ್ಲದರ ವಕ್ತಾರರಾಗಿ ಕಾಣುತ್ತಾರೆ. ಇದೊಂದು ಹುಸಿ ಭ್ರಮೆ. ಕಾಲದ ಪಯಣದಲ್ಲಿ ಈ ಹುಸಿ ಗುಳ್ಳೆ ಹೊಡೆದು ಹೋಗುತ್ತದೆ.
ಪತ್ರಿಕೋದ್ಯಮದ ವಿಷಯಕ್ಕೆ ಬಂದರೆ ಪತ್ರಕರ್ತರಿಗೆ ಕನಿಷ್ಠ ಕೆಲವು ನೀತಿ, ನಿಯಮಗಳು ಇರಬೇಕೆಂದು ನಿರೀಕ್ಷೆ ಮಾಡುವುದು ಸಹಜವಾದ್ದುದ್ದೆ. ಆದರೆ ಇವತ್ತು ಅಂತಹ ವಾತಾವರಣ ಇಲ್ಲವಾಗಿದೆ. ಪತ್ರಕರ್ತರು ಸುದ್ದಿಗಳ ಬೆನ್ನು ಹೇಗೆ ಹತ್ತಿದ್ದಾರೆಂದರೆ ಯಾರಾದರೂ ಸಚಿವರು ಬಂದರೇ ಅವರನ್ನು ಓಡುತ್ತಲೇ ಹಿಡಿದು ತಮಗೆ ಬೇಕಾದ ಸುದ್ದಿಯನ್ನು ಕಕ್ಕಿಸಲು ಅವರನ್ನು ಸುತ್ತುವರೆದು ಕೇಳುವ ಪ್ರಶ್ನೆಗಳಂತೂ ತೀರಾ ಬಾಲಿಶವಾಗಿರುತ್ತವೆ. ಕೆಲವೊಮ್ಮೆ ನಾನು ಪತ್ರಕರ್ತ ಎಂದು ಹೇಳಿಕೊಳ್ಳದಷ್ಟು ನಿರ್ಲಜ್ಜವಾಗಿರುತ್ತವೆ. ಪತ್ರಕರ್ತರು ಪತ್ರಿಕೆಗೆ ಬೇಕಾಗುವ ಸರಕನ್ನು ಸಾಗಾಣಿಕೆ ಮಾಡುವ ಹಮಾಲರಂತೆ ನನಗೆ ಕಾಣುತ್ತಾರೆ.
ಉದಾಹರಣೆಗೆ ನನ್ನ ಜಿಲ್ಲೆಗೆ ನಾನು ಬರುತ್ತೇನೆ. ಎರಡು ಫೇಜಿ ಸ್ಥಳೀಯ ಸುದ್ದಿಗಳಿಗೆ ರಾಜ್ಯಮಟ್ಟದ ಪತ್ರಿಕೆಗಳು ಮೀಸಲಿಟ್ಟುರುತ್ತವೆ. ಗಣಿಗಾರಿಕೆಯಿಂದ ಪ್ರತಿದಿನ ನಡೆಯುವ ರಸ್ತೆ ಅಪಘಾತದ ಎರಡು ಫೋಟೋಗಳು, ಗಣಿ ಧಣಿಗಳ ಪರ-ವಿರೋಧದ ಸುದ್ದಿಗಳು, ಅಲ್ಲಿ ಪ್ರೆಸ್ ಮೀಟ್, ಇಲ್ಲಿ ಪ್ರೆಸ್ ಮೀಟ್ ( ಪ್ರೆಸ್ ಮೀಟ್ ಅನ್ನುವುದು ಎಷ್ಟು ಹಗರುವಾಗಿ ಹೋಗಿದೆ ಎಂದರೆ ನಿನ್ನೆ ಮೊನ್ನೆ ನಮ್ಮೆದು ಓಡಾಡುವ ಹುಡುಗ ಕರವೇ ಅಧ್ಯಕ್ಷನಾಗಿ ಪ್ರಸ್ ಮೀಟ್ ಕರೆದು ಬಿಡುತ್ತಾನೆ.)
ಅದೊಂದು ಕಾರ್ಯಕ್ರಮ,ಇಲ್ಲೊಂದು ಕಾರ್ಯಕ್ರಮ ಇದರಲ್ಲಿಯೇ ಕಳೆದು ಹೋಗುವ ಪತ್ರಕರ್ತರು ಕನಿಷ್ಠ ರಸ್ತೆ ಅಪಘಾತ ಯಾಕೇ ಪ್ರತಿದಿನ ನಡೆಯುತ್ತಿದ್ದಾವೆ. ರಸ್ತೆ ಹಾಳಾಗಿದೆಯೋ ಅಥವಾ ವಾಹನಗಳ ದಟ್ಟನೆ ಹೆಚ್ಚಾಗಿದೆಯೋ ಇವೆಲ್ಲವೂಗಳ ಜೊತೆ ಬೇಗ ಗಳಿಸಬೇಕೆಂಬ 'ಆಸೆಬರುಕುತನ' ಯಾರದು? ಯಾರ ಒತ್ತಡಕ್ಕೆ ಚಾಲಕರು ಬಲಿಯಾಗುತ್ತಿದ್ದಾರೆ. ಇಂತಹ ಪ್ರಶ್ನೆಗಳನ್ನು ಸಹ ಕೇಳಿಕೊಳ್ಳುವುದಿಲ್ಲ. ಡೆಸ್ಕಿನಲ್ಲಿ ಇರುವವರು ಇಂತಹ ಸುದ್ದಿ ಬರೆಯಿರಿ ಎಂದು ಹೇಳುವುದಿಲ್ಲ. ಅವರಿಗೂ ಫೇಜು ತುಂಬಿಸುವುದು ಮುಖ್ಯ, ಸುದ್ದಿ ಮಿಸ್ ಆಗದಂತೆ ನೋಡಿಕೊಳ್ಳುವುದು ಮುಖ್ಯ.
ಪತ್ರಿಕಗಳ ಇಡೀ ಸ್ವರೂಪವೇ ಇಂತಹ ಅಸಂಗತದಿಂದ ಕೂಡಿದೆ. ಆಗ ಫ್ಯಾಂಟಮ್, ಸೂಪರ್‍ ಮ್ಯಾನ್, ಸ್ಪೈಡರ್‍ ಮ್ಯಾನ್ ಹುಟ್ಟಿಕೊಳ್ಳುತ್ತಾರೆ.
ಸಂಪಾದಕ ಮಹಾಶಯರೇ ಸೂಪರ್‍ ಮ್ಯಾನ್ ಗಳಾದಾಗ ಇನ್ನೂ ಬಿಡಿ ಪತ್ರಕರ್ತರ ಪಾಡೇನು?
ತನಿಖಾ ವರದಿ ಎನ್ನುವುದು ರಾಜಕಾರಣಿಯ ತದ್ವಿರುದ್ಧ ಹೇಳಿಕೆ, ತನಗಾಗದ ಸರ್ಕಾರಿ ಅಧಿಕಾರಿಯ ಭ್ರಷ್ಠತನದ ವರದಿ ಎಂದಾಗಿ ಹೋಗಿದೆ ಹೊರತು 'ಮಳೆ ಕೈ ಕೊಟ್ಟು ರೈತನ ಬೆಳೆ ನಾಶ, ಗಣಿ ಕಾರ್ಮಿಕರು ಕ್ಷಯ, ಕ್ಯಾನ್ಸರ್‍ ರೋಗಗಳಿಗೆ ತುತ್ತಾಗುತ್ತಿರುವುದು. ಸಾಮಾನ್ಯ ಜನ ಏದುಸಿರು ಬಿಡುತ್ತಾ ಜೀವನ ಸಾಗಿಸುತ್ತಿರುವುದು ಮುಖ್ಯವಾಗುವುದಿಲ್ಲ. ಯಾವ ಗಣಿ ಉದ್ಯಮಿ ಹೆಲಿಕ್ಯಾಪ್ಟರ್‍ ಹೇಗಿದೆ? ಎಷ್ಟು ಜನ ಕುಳಿತುಕೊಳ್ಳಬಹುದು ಇದು ಸುದ್ದಿಯಾಗಿ ಬಿಡುತ್ತದೆ.
ಅದ್ದರಿಂದ ಪತ್ರಿಕೆಗಳ ಸ್ವರೂಪ, ಸುದ್ದಿಯ ಗ್ರಹಿಕೆಯ ವಿಧಾನ ಎಲ್ಲವೂ ಬದಲಾಗಬೇಕು. ನಿರ್ಲ್ಯಕ್ಷಕ್ಕೆ ಒಳಗಾಗಿರುವ ವಿಷಯಗಳು ಮುಂಚೂಣಿಗೆ ಬರಬೇಕು. ಈ ವಿಷಯದಲ್ಲಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ಇಂತಹ ಘಟನೆಗಳು ಇನ್ನೂ ಹೆಚ್ಚುತ್ತಾ ಕಳವಳಕಾರಿ ವಾತವರಣ, ಹಪಾಹಪಾತಿನ ಮಾತ್ರ ನಮ್ಮಲ್ಲಿ ಉಳಿದುಕೊಳ್ಳುತ್ತವೆ.
- ಪರುಶುರಾಮ ಕಲಾಲ್

Anonymous said...

uttama samaaja-kkagi yendu heli moodha-nambikegala vybhaveekarisuva matthu vasthu-sthithi-yannu thiruchuva tv9 bari badivaara-da badaayi ashte... kaviswara-shikaripura

Anonymous said...

TV9 channel samajdalli moodanambike bittuttide.