Friday, October 31, 2008

ಯಾರಿಗೆ ಬೇಕು ಶಾಸ್ತ್ರೀಯ ಸ್ಥಾನಮಾನ?

ಕನ್ನಡ ಮೊದಲು ಜನಪದವಾಗಬೇಕು
ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ಸಿಕ್ಕಿದೆ. ನಿನ್ನೆ ರಾತ್ರಿ ಸುದ್ದಿವಾಹಿನಿಗಳಲ್ಲಿ, ಇಂದಿನ ಪತ್ರಿಕೆಗಳಲ್ಲಿ ಅದೇ ಸುದ್ದಿ. ಎಲ್ಲೆಲ್ಲೂ ಕನ್ನಡ ಡಿಂಡಿಮವಂತೆ! ಮುಗಿಲು ಮುಟ್ಟಿದ ಹರ್ಷೋದ್ಗಾರವಂತೆ!! "ಇಂದು ಕೇವಲ ರಾಜ್ಯೋತ್ಸವ ಅಲ್ಲ, ವಿಜಯೋತ್ಸವ" ಎಂದು ಯಡಿಯೂರಪ್ಪ ಫರ್ಮಾನು ಹೊರಡಿಸಿದ್ದಾರೆ. ಹಿರಿಯ ಸಾಹಿತಿ ಹಾಗೂ ಮಾಜಿ ಜಾತೀವಾದಿ-ಕುಲಪತಿ ದೇಜಗೌ ಸಿಕ್ಕಾಪಟ್ಟೆ ಖುಷಿಯಿಂದ ಕುಣಿದರಂತೆ. ಸುದ್ದಿ ವಾಹಿನಿಯೊಂದಕ್ಕೆ ಬೈಟ್ ಕೊಡುತ್ತಾ ಸನ್ಮಾನ್ಯರು ಹೇಳಿದ್ದು "ಹಳ್ಳಿಗಳಲ್ಲಿ ಕೂಡಾ ಶಾಸ್ತ್ರೀಯ ಸ್ಥಾನಮಾನದ ಬಗ್ಗೆ ಅರಿವು ಮೂಡಿತ್ತು. ನಾನು ಹಳ್ಳಿ ಕಡೆ ಹೋದಾಗೆಲ್ಲ ಅಲ್ಲಿಯ ಜನ ಶಾಸ್ತ್ರೀಯ ಸ್ಥಾನಮಾನ ಸಿಕ್ತಾ ಅಂತ ಪ್ರಶ್ನೆ ಮಾಡ್ತಾ ಇದ್ರು". ಕೆಲವು ಸುದ್ದಿವಾಹಿನಿಗಳಂತೂ ದಶಕಗಳ ಹೋರಾಟಕ್ಕೆ ಸಂದ ಜಯ ಎಂಬಂತೆ ಬಣ್ಣಿಸಿದ್ದಾರೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದಕ್ಕಿದ್ದಕ್ಕೆ ಇಷ್ಟೆಲ್ಲಾ ಸಂಭ್ರಮ ಪಡುತ್ತಿರುವುದನ್ನು ಕಂಡರೆ ನಗು ಬರುತ್ತಿದೆ. ಈ ಸ್ಥಾನದಿಂದ ಯಾರಿಗೆ ಲಾಭ ಎನ್ನುವುದನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ.

ಕನ್ನಡ ಭಾಷೆ ಮೂಲ ನೆಲೆ ಅಧ್ಯಯನಕ್ಕೆಂದು ಒಂದಿಷ್ಟು ಹಣ ಕೇಂದ್ರ ಸರಕಾರದಿಂದ ಬಿಡುಗಡೆಯಾಗುತ್ತದೆ. ಇಲ್ಲಿಯೇ ಒಂದು ಮಾತು ಸ್ಪಷ್ಟಪಡಿಸಬೇಕು - ಆಧುನಿಕ ಕನ್ನಡ ಭಾಷೆ ಬಳಕೆ, ಅದರ ಉಪಭಾಷೆಗಳು, ಸಾಹಿತ್ಯ ಅಧ್ಯಯನಕ್ಕೆ ಈ ಅನುದಾನದ ಅಡಿಯಲ್ಲಿ ಸಾಧ್ಯವಿಲ್ಲ. ಕನ್ನಡ ಭಾಷೆ ಅಧ್ಯಯನ ಕೇಂದ್ರಗಳು ಸ್ಥಾಪನೆಯಾಗುತ್ತವೆ. ಕನ್ನಡ ವಿದ್ವಾಂಸರಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಮನ್ನಣೆ ದೊರಕುತ್ತದೆ. ಕೆಲವು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಅಧ್ಯಯನ ಪೀಠಗಳು ಸ್ಥಾಪನೆಯಾಗುತ್ತವೆ.

ಈಗ ಹೇಳಿ ಹಳ್ಳಿ ರೈತ, ಕೂಲಿ ಕಾರ್ಮಿಕ, ಕನ್ನಡ ಪತ್ರಕರ್ತ ಸಂಭ್ರಮ ಪಡಲು, ಡಿಂಡಿಮ ಬಾರಿಸಲು ಇರುವ ಕಾರಣಗಳಾದರೂ ಏನು? ದೇಜಗೌ ಎದುರು ಪ್ರಶ್ನೆ ಕೇಳಿದ ಹಳ್ಳಿಗ ಮಾತನಾಡುವುದು ಶುದ್ಧ ಜಾನಪದ ಕನ್ನಡ. ಶಾಸ್ತ್ರೀಯ ಅನ್ನೋ ಪದವನ್ನು ಪಕ್ಕಾ ಹಳ್ಳಿಗರು ತಮ್ಮ ಮಾತುಗಳಲ್ಲಿ ಬಳಸುವುದನ್ನು ಯಾರೂ ಕೇಳಿರಲಾರರು. ಹಾಗಿರುವಾಗ ಕನ್ನಡ ಏಕದಂ ಶಾಸ್ತ್ರೀಯ ಭಾಷೆ ಆದರೆ ಅವರಿಗೆ ಅದರಿಂದ ಆಗುವ, ಲಾಭ ಒತ್ತಟ್ಟಿಗಿರಲಿ, ಪರಿಣಾಮವೇನು?

ಈ ಮೊದಲು ಯಡಿಯೂರಪ್ಪ ಯೋಜಿಸಿದಂತೆ, ದೆಹಲಿಗೆ 300 ಜನರ ನಿಯೋಗವನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದರೆ, ಕನಿಷ್ಠವೆಂದರೂ 3 ಕೋಟಿ ರೂ (ಒಬ್ಬರಿಗೆ ಕನಿಷ್ಠ ಒಂದು ಲಕ್ಷದಂತೆ) ಖರ್ಚಾಗುತ್ತಿತ್ತು. ಈ ಹಿಂದೆ ಕೆಲ ಸಾಹಿತಿಗಳ ನಿಯೋಗವನ್ನೂ ಕೊಂಡೊಯ್ದಿದ್ದರು. ಆ ಎಲ್ಲಾ ಖರ್ಚುಗಳನ್ನು ಗುಡ್ಡೆ ಹಾಕಿದರೆ, ಕೇಂದ್ರ ಸರಕಾರದಿಂದ ದೊರಕುವ ಅನುದಾನದ ಮೊತ್ತಕ್ಕೆ ಸರಿಸಮಾನಾಗುತ್ತಿತ್ತು!

ತಮಿಳಿಗೆ 2004ರ ಅಕ್ಟೋಬರ್ನಲ್ಲಿ ಕೇಂದ್ರ ಸರಕಾರ ಶಾಸ್ತ್ರೀಯ ಸ್ಥಾನಮಾನ ನೀಡಿತು. ಅಲ್ಲಿಂದಲೇ ಹೋರಾಟ ಶುರು. ತಮಿಳಿಗೆ ಕೊಟ್ಟಿದೀರಿ, ನಮಗೂ ಕೊಡಿ - ಇದು ಇದುವರೆಗಿನ ಹೋರಾಟದ ಕೇಂದ್ರ ಬಿಂದು. ತಮಿಳಿಗೆ ಕೊಡದೇ ಹೋಗಿದ್ದರೆ, ದೇಜಗೌ ಉಪವಾಸ ಕೂರುತ್ತಿರಲಿಲ್ಲ, ಅದ್ಯಾಕೆ ಯಡಿಯೂರಪ್ಪ ದೆಹಲಿಗೆ ನಿಯೋಗ ಕರೆದುಕೊಂಡು ಹೋಗೋ ಮಾತೂ ಆಡುತ್ತಿರಲಿಲ್ಲ. ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾದ ಒಂದು ಸಂಗತಿ ಎಂದರೆ, ಒಂದು ಭಾಷೆ ಶಾಸ್ತ್ರೀಯವಾದರೆ, ಅದು ಕೆಲವೇ ಕೆಲವು ವಿದ್ವಾಂಸರ ಭಾಷೆ ಆಗುತ್ತದೆ. ಅದು ಜನಪದವಾದಾಗ ಬಹಳ ಕಾಲ ಉಳಿಯುತ್ತದೆ.

ಸರಕಾರ, ಜನತೆ ಮುಂದಿರುವ ಸವಾಲು - ಕನ್ನಡವನ್ನು ಜನಪದವನ್ನಾಗಿ ಉಳಿಸುವುದು ಹೇಗೆ? ಕನ್ನಡ ಮಾತ್ರ ಗೊತ್ತಿರುವ ವ್ಯಕ್ತಿ ಬ್ಯಾಂಕ್ ಗೆ ಹೋದಾಗ ಹಣ ಹಿಂದಕ್ಕೆ ಪಡೆಯಲು ಸುಲಭವಾಗಿ ವ್ಯವಹರಿಸುವಂತಾಗಬೇಕು. ಯಾರದೋ ಹಿಕಮತ್ತಿಗೆ ಜಮೀನು ಕಳೆದುಕೊಂಡ ರೈತ ನ್ಯಾಯಾಲಯದಲ್ಲಿ ದಾವೆ ಹೂಡಿದರೆ, ಅಲ್ಲಿ ನಡೆಯುವ ವಾದ-ವಿವಾದ ಅವನಿಗೆ ಅರ್ಥವಾಗುವಂತಿರಬೇಕು. ರೋಗಿ ತನ್ನ ವೈದ್ಯ ಕೊಡುವ ಔಷಧಿ ಯಾವುದು ಎನ್ನುವುದನ್ನು ಓದುವಂತಿರಬೇಕು. ಕನ್ನಡ ಜನಪದವಾಗುವುದೆಂದರೆ ಹೀಗೆ. ಕನ್ನಡ ಜನಪದವಾಗಲೇ ಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ, ಕೆಲವೇ ದಿನಗಳಲ್ಲಿ ಭಾಷೆ ಸಾಯುತ್ತದೆ. ಇಂಗ್ಲಿಷ್ ಅನಿವಾರ್ಯ ಎಂಬ ಭಾವನೆ ಎಲ್ಲರಲ್ಲೂ ಹುಟ್ಟುತ್ತದೆ. ಆಗ ಕನ್ನಡ ವಿದ್ವಾಂಸರೆಲ್ಲ "ನಮ್ಮದು ಶಾಸ್ತ್ರೀಯ ಭಾಷೆ" ಎಂದು ಜಪಿಸುತ್ತಾ ವಿವಿಧೆಡೆಯಿಂದ ಬರುವ ಅನುದಾನಕ್ಕೆ ಬಾಯಿಬಿಟ್ಟುಕೊಂಡು ಕನ್ನಡದ ತಿಥಿಮಾಡಲಿ.

ಆಗ ಅದೇ ಹಳ್ಳಿಗ, ಇದೇ ದೇಜಗೌ ಅವರನ್ನು ಪ್ರಶ್ನಿಸುತ್ತಾನೆ - "ಶಾಸ್ತ್ರೀಯ ಭಾಷೆ ಅಂತ ನೀವು ಹೇಳಿದ್ದು, ಈಗ ಕನ್ನಡ ಮಾತಾಡೋರು ಯಾರೂ ಇಲ್ಲದಂಗೆ ಆಗೋಗದೆ ಅಲ್ವಾ ಗೌಡ್ರೆ?"

ಪ್ರಚಾರ ಕೊಟ್ಟರೆ ಪ್ರಶಸ್ತಿ!

ಕನರ್ಾಟಕ ಸರಕಾರ ಏಳು ಮಂದಿ ಪತ್ರಕರ್ತರನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ವಿವಿಧ ರೀತಿಯಲ್ಲಿ ಬಿಜೆಪಿ ಪಕ್ಷಕ್ಕೆ ಸಹಾಯ ಮಾಡಿದ ಅನೇಕರು ಈ ಪಟ್ಟಿಯಲ್ಲಿದ್ದಾರೆ. ಪಟ್ಟಿಯಲ್ಲಿ ಮೊದಲಿಗರು - ಪದ್ಮರಾಜ ದಂಡಾವತಿ. ಪ್ರಜಾವಾಣಿ ಸಹ ಸಂಪಾದಕರು. ಆರ್.ಪಿ ಜಗದೀಶ್ ನಂತರ ಪ್ರಜಾವಾಣಿಯನ್ನು ಬಿಜೆಪಿವಾಣಿಯನ್ನಾಗಿ ಪರಿವತರ್ಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಬಿಜೆಪಿ ತನ್ನ ಕಾರ್ಯಕರ್ತರಿಗಾಗಿ ನಡೆಸಿದ ವಿಶೇಷ ಪತ್ರಿಕಾ ಕಾರ್ಯಗಾರದಲ್ಲಿ "ರಾಜಕಾರಣಿಗಳು ಪತ್ರಿಕೆಗಳನ್ನು ಹೇಗೆ ಬಳಸಿಕೊಳ್ಳಬೇಕು" ಎಂಬುದರ ಬಗ್ಗೆ ಉಪನ್ಯಾಸ ಕೊಟ್ಟು ಬಂದವರು ಪದ್ಮರಾಜ ದಂಡಾವತಿ. ಅವರ ಉಪನ್ಯಾಸಕ್ಕೆ ಪುಟ್ಟ ಸಂಭಾವನೆ - ಒಂದು ಲಕ್ಷ ರೂ ನಗದು ಹಾಗೂ 20 ಗ್ರಾಂ ಚಿನ್ನ. ಅಥರ್ಾತ್ ರಾಜ್ಯೋತ್ಸವ ಪ್ರಶಸ್ತಿ!ಇನ್ನು ರವಿ ಬೆಳಗೆರೆ. ಬಳ್ಳಾರಿ ರೆಡ್ಡಿಪಟಾಲಂಗೆ ಆಪ್ತ. ತಾನು ಪತ್ರಕರ್ತ ಎನ್ನುವುದನ್ನೂ ಮರೆತು ಕೋಮುವಾದಿ ಪಕ್ಷ ಬಿಜೆಪಿಗೆ ಮತ ನೀಡಿ ಎಂದು ಬಳ್ಳಾರಿಯಲ್ಲಿ ಪ್ರಚಾರ ಮಾಡಿದವರು. ಗಣಿ ಮಾಫಿಯಾ ಹಿನ್ನೆಲೆ ರಾಜಕಾರಣಿಗಳು ತಮ್ಮ ಗೆಳೆಯನ ಋಣ ತೀರಿಸಲು ತೀರಾ ರಾಜ್ಯೋತ್ಸವವನ್ನೂ ಕೊಡಿಸದಿದ್ದರೆ ತಪ್ಪಾಗುವುದಿಲ್ಲವೆ?ಬೇಸುನ ಮಲ್ಯ - ಆರ್.ಎಸ್.ಎಸ್ ಮುಖವಾಣಿ ವಿಕ್ರಮ ಸಂಪಾದಕರಾಗಿದ್ದವರು. ಬಿಜೆಪಿ ಅಧಿಕಾರಕ್ಕೆ ಬಂದಾಗಲಾದರೂ ವಿಕ್ರಮ ಸಂಪಾದಕರಿಗೆ ಮಣೆ ಹಾಕದಿದ್ದರೆ ಕೇಶವ ಕೃಪ ಸುಮ್ಮನಿದ್ದೀತೆ?ಕೆ.ಬಿ. ಗಣಪತಿ - ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಸಂಪಾದಕರು ಹಾಗೂ ಮಾಲೀಕರು. ಮೈಸೂರು ಭಾಗದಲ್ಲಿ ಸಂಘ ಪರಿವಾರದವರು ತಮ್ಮ ವಿಕ್ರಮ, ಅಸೀಮಾ, ಹೊಸದಿಗಂತದಂತಹ ಪತ್ರಿಕೆಗಳನ್ನು ಪ್ರಸರಣ ಮಾಡುವ ಅಗತ್ಯವೇ ಇಲ್ಲ. ಕಾರಣ ಆ ಪತ್ರಿಕೆಗಳ ಹೊಣೆಯನ್ನು ಮೈಸೂರು ಮಿತ್ರ ಯಶಸ್ವಿಯಾಗಿ ನಿಭಾಯಿಸುತ್ತಿದೆ. ಆ ಕಾರಣ ಅವರಿಗೂ ಒಂದು ರಾಜ್ಯೋತ್ಸವ.ಉಳಿದಂತೆ ಇಮ್ರಾನ್ ಖುರೇಶಿ, ಧಾರವಾಡದ ಕೃಷ್ಣಮೂತರ್ಿ ಹೆಗಡೆ, ಶಿವಮೊಗ್ಗದ ಚಂದ್ರಕಾಂತ್ ಇವರಿಗೆ ಪ್ರಶಸ್ತಿ ಲಭಿಸಿದೆ. ಇವರಿಗೆ ಯಾವ್ಯಾವ ಲಾಬಿಗಳು ಪ್ರಶಸ್ತಿ ಗಿಟ್ಟಿಸಿತೋ? ಅಥವಾ ಅವರೆಲ್ಲಾ ನಿಜ ಅರ್ಥದಲ್ಲಿ ಅರ್ಹರಾಗಿದ್ದರೆ ಸುದ್ದಿಮಾತು ಅಭಿನಂದನೆಗಳು. ಮತ್ತೊಂದು ಸಂಗತಿ: 89 ಮಂದಿ ಪಟ್ಟಿ ಮೇಲೆ ಹಾಗೇ ಕಣ್ಣಾಡಿಸಿ, ನಿಮಗೆ ಒಂದೂ ಕ್ರಿಶ್ಚಿಯನ್ ಹೆಸರು ಕಾಣುವುದಿಲ್ಲ. ಪ್ರಶಸ್ತಿಗಾಗಿ ಪರಿಗಣಿಸಿದ 24 ಕ್ಷೇತ್ರಗಳಲ್ಲಿ ಒಬ್ಬೇ ಒಬ್ಬ ಕ್ರಿಶ್ಚಿಯನ್ ಸಾಧಕರು ಕಾಣಲಿಲ್ಲವೇ ಸರಕಾರಕ್ಕೆ? ಅಥವಾ ಯಡಿಯೂರಪ್ಪ ನೇತೃತ್ವ ಸರಕಾರದ ಅಲ್ಪಸಂಖ್ಯಾತ ವಿರೋಧಿ ನೀತಿ ಪ್ರಶಸ್ತಿ ಆಯ್ಕೆಗೂ ಅನ್ವಯವಾಯಿತೆ?ಇತ್ತೀಚೆಗೆ ನಡೆದ ಚಚರ್್ಮೇಲಿನ ದಾಳಿಗಳನ್ನು "ಮತಾಂತರ ವಿರುದ್ಧ ಜನತೆ ತೋರಿದ ಪ್ರತಿಕ್ರಿಯೆ" ಎಂದು ಸಮಥರ್ಿಸಿಕೊಂಡ ಯಡಿಯೂರಪ್ಪನವರಿಂದ ಜಾತ್ಯತೀತ, ಧರ್ಮ ಸಮನ್ವಯ ಆಡಳಿತ ನಿರೀಕ್ಷಿಸುವುದೂ ತರವಲ್ಲವೇನೋ..ಅಂದಹಾಗೆ ಈ ಬಾರಿಯಿಂದ ಪ್ರಶಸ್ತಿ ಮೌಲ್ಯ ಹೆಚ್ಚಾಗಿದೆ. ಹಿಂದಿನ ವರ್ಷಗಳಲ್ಲಿ ಕೇವಲ ಹಣ ಅಥವಾ ಚಿನ್ನದ ಪದಕ ನೀಡುತ್ತಿದ್ದರು. ಈ ಬಾರಿ ಒಂದು ಲಕ್ಷ ರೂ ನಗದಿನೊಂದಿಗೆ 20 ಗ್ರಾಂ ಚಿನ್ನ ಕೂಡಾ ಲಭ್ಯ. ಮುಂದಿನ ವರ್ಷ ನಿಮಗೆ ಪ್ರಶಸ್ತಿ ಬೇಕೆಂದರೆ, ಈಗಿನಿಂದಲೇ ಪ್ರಯತ್ನಿಸಲು ಶುರು ಮಾಡಿ. ಲಾಬಿ ಜೋರಾಗಲಿದೆ.

Tuesday, October 28, 2008

ಸಾಹಿತ್ಯಕ ಮೌಲ್ಯ ಅಳೆಯಲು ಒಂದು ಕೋಷ್ಟಕ!

'ಮಯೂರ' ದಿಂದ ಇಂತಹದೊಂದು ಪ್ರಯೋಗ!

ನಮ್ಮ ಲಿಟೆರರಿ ಬ್ಯುರೋದಿಂದ

ಕತೆ, ಕಾದಂಬರಿ, ಕವಿತೆ - ಸೃಜನಶೀಲ ಮಾಧ್ಯಮ ಪ್ರಕಾರಗಳು. ತನ್ನ ಅನುಭವಕ್ಕೆ ದಕ್ಕಿದ್ದನ್ನು ಹೇಳಿಕೊಳ್ಳಲು ಮಾನವ ಕಂಡುಕೊಂಡ ಮಾಧ್ಯಮಗಳಿವು. ಬರವಣಿಗೆಯನ್ನು ಬದ್ಧತೆಯಾಗಿ ಸ್ವೀಕರಿಸಿಕೊಂಡವರು 'ಶ್ರೇಷ್ಠ' ಅಥವಾ 'ಕನಿಷ್ಟ' ಎಂಬ ವ್ಯಸನಗಳಿಗೆ ತುತ್ತಾಗುವುದಿಲ್ಲ. 'ಅಭಿವ್ಯಕ್ತಿ'ಯೇ ಮೂಲ ಉದ್ದೇಶವಾಗಿರುತ್ತೆ. ಓದುಗರು ತಮ್ಮ ಜ್ಞಾನದ ಹರವು, ಸಾಮಾಜಿಕ ಹಿನ್ನೆಲೆ ಹಾಗೂ ಇನ್ನಿತರೆ ಪ್ರೇರಣೆಗಳಿಂದ ಒಂದು ಕೃತಿಯನ್ನು ಗ್ರಹಿಸುತ್ತಾರೆ. ಅಂತೆಯೇ ವಿಮರ್ಶಿಸುತ್ತಾರೆ. ಗ್ರಹಿಕೆ ಸಾಪೇಕ್ಷ. ಆ ಕಾರಣ ಪ್ರತಿ ಓದು ಕೂಡ ಒಂದು ವಿಮರ್ಶೆ.
ಇಷ್ಟೆಲ್ಲಾ ಪೀಠಿಕೆ ಹಾಕಲು ಒಂದು ಕಾರಣವಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ನವೆಂಬರ್ ತಿಂಗಳ ಮಯೂರದಲ್ಲಿ ರಂಗಕರ್ಮಿ ಪ್ರಸನ್ನರ ಇತ್ತೀಚಿನ ಕಾದಂಬರಿ ಬಾಲಗೋಪಾಲ ವಿಮರ್ಶೆ ಪ್ರಕಟವಾಗಿದೆ. ಅಶೋಕ ಹೆಗಡೆ ವಿಮರ್ಶಕ. ಇದು ಒಂದು ಅತಿ ಸಾಧಾರಣ ಕೃತಿ ಎಂದು ಪರಿಗಣಿಸಿದ ವಿಮರ್ಶಕರು ಕಾದಂಬರಿಯ ಪ್ರಾಮುಖ್ಯವನ್ನು 0.39 ಎಂದು ನಮೂದಿಸಿದ್ದಾರೆ. ವಿಮರ್ಶಾ ಲೇಖನ ಜತೆ ಒಂದು ಕೋಷ್ಟಕವನ್ನೂ ನೀಡಿದ್ದಾರೆ. ಹತ್ತು ಗುಣಾತ್ಮಕ ಹಾಗೂ ಹತ್ತು ಋಣಾತ್ಮಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಮಾಡಿ ಕಾದಂಬರಿಯನ್ನು ಲೇಖಕರು ಡಿಸೆಕ್ಟ್ ಮಾಡಿದ್ದಾರೆ. (ಕೋಷ್ಟಕವನ್ನು ಕೆಳಗೆ ನೀಡಲಾಗಿದೆ). ಪ್ರತಿ ಅಂಶಕ್ಕೂ ಗರಿಷ್ಟ ಹತ್ತು ಅಂಕಗಳು. ಕಾದಂಬರಿಯಲ್ಲಿನ ಗುಣಾತ್ಮಕ ಅಂಶಗಳ ಒಟ್ಟು ಮೊತ್ತ 29 (100ಕ್ಕೆ). ಋಣಾತ್ಮಕ ಅಂಶಗಳು 74 (100ಕ್ಕೆ). ಕಾದಂಬರಿಯ ಪ್ರಾಮುಖ್ಯ - 29/74 = 0.39! ಅದರರ್ಥ ಈ ಕಾದಂಬರಿಯ ಮೌಲ್ಯ ಅರ್ಧಕ್ಕಿಂತ ಕಡಿಮೆ. ಈ ರೀತಿ ಸೃಜನಶೀಲ ಕೃತಿಯನ್ನು ಅಳೆಯುವುದು ಒಂದು ಪ್ರಯೋಗವಾಗಿಯೂ ಸ್ವೀಕರಿಸುವುದು ಆಗದ ಮಾತು. ಮಾರುಕಟ್ಟೆಯ ಸರಕಿನಂತೆ ಕಾದಂಬರಿಯನ್ನು ನೋಡುವ ಪ್ರಕ್ರಿಯೆಗೆ ಮಯೂರ ನಾಂದಿ ಹಾಡುತ್ತಿದೆ.
ಹೀಗೆ ಒಂದು ಕೃತಿ ಅಳೆಯಲು ಕೋಷ್ಟಕ ಸಿದ್ಧಪಡಿಸಿಬಿಟ್ಟರೆ, ಅದೇ ಕೋಷ್ಟಕ ಇಟ್ಟುಕೊಂಡು ಕಾದಂಬರಿಯನ್ನೂ ರಚಿಸಿಬಿಡಬಹುದಲ್ಲ! ಒಂದು ಉತ್ತಮ ಕಾದಂಬರಿಗೆ ಇಂತಿಷ್ಟೇ ವೈಚಾರಿಕತೆ, ಹೀಗೀಗೇ ಸಂವಹನ ಎಂದು ವಿಮರ್ಶಕರು ಹಾಗೂ ಮಯೂರದ ಸಂಪಾದಕರು ಹೇಳುವುದಾದರೆ ಒಳಿತು. ಕಾದಂಬರಿ ಬರೆಯುವ ಆಸಕ್ತಿ ಇಟ್ಟುಕೊಂಡಿರುವ ತರುಣರಿಗೆ ಮಾರ್ಗದರ್ಶನವಾದೀತು!
ಅದಿರಲಿ. ಹತ್ತಕ್ಕೆ ಹತ್ತು ಅಂಕ ಗಳಿಸುವುದೆಂದರೆ ಹೇಗೆ? ಪ್ರಸನ್ನರ ಕಾದಂಬರಿಯ ಸಂವಹನಕ್ಕೆ ಕೋಷ್ಟಕದಲ್ಲಿ ನೀಡಿರುವ ಅಂಕ ಶೂನ್ಯ! ಹಾಗಾದರೆ, ಇಲ್ಲಿ ಭಾಷೆಯೇ ಇಲ್ಲವೇ? ರಂಗಭೂಮಿ ಸಂವಹನದಲ್ಲಿ ಯಶಸ್ವಿಯಾದ ಪ್ರಸನ್ನ ಕಾದಂಬರಿ ಮೂಲಕ ಏನನ್ನೂ ಸಂವಹಿಸಲಾಗದೆ ಸಂಪೂರ್ಣವಾಗಿ ಸೋತು ಹೋದರೆ?
ಈ ಕಾದಂಬರಿಯಲ್ಲಿ ಯಶಸ್ವಿ ಸಂವಹನ ಸಾಧಿಸುವಲ್ಲಿ ಸೋತ್ತಿರುವ ಪ್ರಸನ್ನ ಮುಂದಿನ ಕಾದಂಬರಿ ಬರೆಯೋ ಹೊತ್ತಿಗೆ ಹೆಚ್ಚು ಅಂಕ ಪಡೆಯಲು ಏನು ಮಾಡಬೇಕೆಂಬುದನ್ನು ಮಯೂರದ ಸಂಪಾದಕರು ಹೇಳಿದರೆ ಒಳಿತು. ಸಾಧ್ಯವಾದರೆ ಪ್ರಸನ್ನರಿಗೆ ಸಂಪಾದಕರು ಸ್ಪೆಷಲ್ ಕ್ಲಾಸ್ ತಗೊಂಡು ಕಾದಂಬರಿ ಬರೆಯೋದನ್ನ, ವಿಮರ್ಶಾ ಕೋಷ್ಟಕದಲ್ಲಿ ಹೆಚ್ಚಿನ ಅಂಕಗಳಿಸೋ ಕಲೆಯನ್ನು ಹೇಳಿಕೊಡಬಹುದಲ್ಲ? ಜಿ.ಪಿ ಬಸವರಾಜು ಮಯೂರ ಉಸ್ತುವಾರಿ ನೋಡಿಕೊಳ್ಳುತ್ತಿರುವವರೆಗೆ ಇಂತಹ ಅಸಂಬದ್ಧ ಪ್ರಯೋಗಗಳಿಗೆ ಅವಕಾಶ ಇರಲಿಲ್ಲ. ಇತ್ತೀಚೆಗೆ ಬಸವರಾಜು ನಿವೃತ್ತಿ ಪಡೆದರು. ಮಯೂರದ ಜವಾಬ್ದಾರಿಯನ್ನು ಚ. ಹ ರಘುನಾಥ್ ಎಂಬ ಬರಹಗಾರನ ಹೆಗಲ ಮೇಲೆ ಹೊರಿಸಿದ ನಂತರವೇ ಇಂತಹ ಬರಹಗಳು ವಿಮರ್ಶೆಯಾಗಿ ಪ್ರಕಟವಾಗುತ್ತಿವೆ.
---

ಕನ್ನಡ ಕಾದಂಬರಿ ವಿಮರ್ಶಾ ಕೋಷ್ಟಕ
ಕೃತಿ: ಬಾಲಗೋಪಾಲ


ಗುಣಾತ್ಮಕ ಅಂಶ
ಕಥಾವಸ್ತು - 3; ಭಾಷೆ - 4; ಪಾತ್ರಪೋಷಣೆ - 6; ತಾರ್ಕಿಕತೆ - 5; ಚಿತ್ರಣ/ಪ್ರತಿರೂಪಗಳು - 2; ಭಾವಲೋಕ - 1; ಸಂವಹನ - 0; ಜೀವನದೃಷ್ಟಿ/ಒಳನೋಟ - 2; ಲೋಕದೃಷ್ಟಿ - 5; ತೆರೆದ ಸಾಧ್ಯತೆ/ಮುಕ್ತಾಯ - 1; ಒಟ್ಟು - 29.
ಋಣಾತ್ಮಕ ಅಂಶ
ನಿರೂಪಕನ ಮಾತುಗಳು - 8; ಗೊಂದಲ/ತದ್ವಿರುದ್ಧತೆ - 8; ವಿಕ್ಷಿಪ್ತತೆ - 9; ಅಪ್ರಸ್ತುತೆ - 7; ಅತಿಮಾತು/ವಾಚ್ಯತೆ - 10; ಉಪಮೇಯಗಳ ಕ್ಲೀಷೆ - 6; ಪೂರ್ವಗ್ರಹ - 4; ಸ್ವಮಗ್ನತೆ - 8; ಅತಿ ವೈಚಾರಿಕತೆ - 8; ಉದ್ದೇಶರಹಿತ ಪಾತ್ರಗಳ ಬಳಕೆ - 6; ಒಟ್ಟು - 74.
ಕಾದಂಬರಿಯ ಪ್ರಾಮುಖ್ಯ - 29/74 = 0.39.

Monday, October 27, 2008

ಅಧಿಕಾರ ಕೊಂಡರೆ ಅಹಂಕಾರ ಫ್ರೀ

ನಮ್ಮ ಬೆಳಗಾವಿ ಪ್ರತಿನಿಧಿಯಿಂದ
ಕಿತ್ತೂರು ಉತ್ಸವದಲ್ಲಿ ನಮ್ಮ ಜನಪ್ರತಿನಿಧಿಗಳು ಕಿತ್ತಾಡಿದ್ದು ನಿಮಗೆ ಗೊತ್ತೇ ಇದೆ. ವಿಧಾನ ಪರಿಷತ್ತು ವಿರೋಧ ಪಕ್ಷ ನಾಯಕ ಉಗ್ರಪ್ಪ ಮಾತಿಗೆ ಗಣಿ ರಾಜಕಾರಣಿ ಜನಾರ್ಧನ ರೆಡ್ಡಿ ಹಾಗೂ ಅವರ ಭಂಟ ಯುವ ಶಾಸಕ ಸುರೇಶ್ ಬಾಬು ತಿರುಗಿ ಬಿದ್ದಿದ್ದಾರೆ. ನಾಡಿನ ಜನತೆ ದೂರದರ್ಶನದಲ್ಲಿ ವೀಕ್ಷಿಸಿದಂತೆ, ಉಗ್ರಪ್ಪ ಮುಖ್ಯಮಂತ್ರಿ ವಿರುದ್ಧ ಮಾತನಾಡಿದರು. ಕಿತ್ತೂರು ಉತ್ಸವಕ್ಕೆ ತೋರಿದ ನಿರ್ಲಕ್ಷ್ಯ ಕುರಿತು ಮಾತನಾಡಿದರು. ಅಷ್ಟಕ್ಕೆ ರೆಡ್ಡಿ ಎದ್ದು ನಿಂತುಬಿಟ್ಟರು. ಇದು ರಾಜಕೀಯ ಸಮಾರಂಭವಲ್ಲ. ಹೀಗೆಲ್ಲಾ ಮಾತನಾಡುವುದು ತರವಲ್ಲ ಎಂದು ಕೂಗಾಡಿದರು. ತಕ್ಷಣವೇ ಸುರೇಶ್ ಬಾಬು ಕೂಡಾ ಎದ್ದುನಿಂತು ಅವರಿಗೆ ದನಿ ಸೇರಿಸಿದ. ಗಣಿ ಹಣದ ದೌಲತ್ತು ಆ ಹುಡುಗನನ್ನು ಹಾಗೆ ಮಾಡಿಸಿತ್ತು.
ಇಂಥದೇ ಇನ್ನೊಂದು ಘಟನೆ ಕಳೆದ ವಾರ ಬೆಂಗಳೂರಿನಲ್ಲಿ ನಡೆಯಿತು. ಮಂಡ್ಯ ನಗರಸಭಾ ಸದಸ್ಯರ ದಂಡು ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದರು. ದುಡ್ಡು ಕೊಟ್ಟು ಕೊಂಡ ಸದಸ್ಯರು ಪಕ್ಷ ಸೇರುವ ಸಮಾರಂಭಕ್ಕೆ ಪತ್ರಿಕಾ ಮಾಧ್ಯಮದವರನ್ನು ನಿರ್ಲಕ್ಷಿಸಲಾಯಿತು. ಕೇವಲ ವಿದ್ಯುನ್ಮಾನ ಮಾಧ್ಯಮ ಮಿತ್ರರನ್ನು ಆಹ್ವಾನಿಸಿದ್ದರು. ಪರಿಣಾಮ ಪತ್ರಿಕೆಗಳ ಸಿಬ್ಬಂದಿ ಬಿಜೆಪಿ ನಾಯಕರಿಗೆ ಫೋನಾಯಿಸಿ ತರಾಟೆಗೆ ತೆಗೆದುಕೊಂಡರು. ಆಪರೇಷನ್ ಕಮಲ ರೂವಾರಿ ಕರುಣಾಕರರೆಡ್ಡಿ ಆಣತಿ ಮೇರೆಗೆ ಕೇವಲ ಟಿವಿಯವರನ್ನು ಕರೆಸಲಾಗಿತ್ತು.
ಇತ್ತೀಚೆಗೆ ತಾನೆ ಬಿಜೆಪಿ ಕಾರ್ಯಕರ್ತರಿಗೆ ಮಾಧ್ಯಮ ಕಾರ್ಯಗಾರ ಏರ್ಪಡಿಸಿತ್ತು. ಪ್ರತಿಷ್ಠಿತ ಪತ್ರಿಕೆಗಳಲ್ಲಿ ಉನ್ನತ ಸ್ಥಾನದಲ್ಲಿರುವವರು ಕಾರ್ಯಕರ್ತರಿಗೆ ಪಾಠ ಮಾಡಿದರು. ಇವರು ಪಾಠ ಮಾಡಿದ್ದು ಪತ್ರಿಕಾ ಮಾಧ್ಯಮ ನಿರ್ಲಕ್ಷಿಸಲೆಂದೆ?
ಕನ್ನಡಪ್ರಭ ಬಿಜೆಪಿ ನಾಯಕರ ವರ್ತನೆ ಖಂಡಿಸಿ ವರದಿ ಮಾಡಿದೆ. ಪತ್ರಿಕೆ ತೀರಾ ಖಾರವಾಗಿಯೇ ಬಿಜೆಪಿಯನ್ನು ಟೀಕಿಸಿದೆ. ಅಧಿಕಾರ ಇಲ್ಲದಾಗ ಮಾಧ್ಯಮದವರ ಬೆನ್ನು ಬಿದ್ದಿದ್ದ ಬಿಜೆಪಿಯವರು ಅಧಿಕಾರಕ್ಕೆ ಬಂದಮೇಲೆ ಟಿವಿ ಮಾಧ್ಯಮದವರು ಮಾತ್ರ ಬಂದರೆ ಸಾಕು ಎಂಬ ಧೋರಣೆ ತಳೆದಿದ್ದಾರೆ. ಟೀವೀಲಿ ಬಂದರೆ ಪತ್ರಿಕೆಯವರೂ ನೋಡಿ ಬರ್‍ಕೋತಾರೆ ಎಂಬ ಉಡಾಫೆ ಇವರದು.
ಒಂದು ಓಟಿಗೆ ಇಂತಿಷ್ಟು ನೋಟುಗಳೆಂದು ಹಂಚಿ ಅಧಿಕಾರ ಕೊಂಡು ಈ ಜನರಿಗೆ, ಅಧಿಕಾರದೊಂದಿಗೆ ಅಹಂಕಾರ ಫ್ರೀ ದೊರಕಿದೆ!
(pic courtesy: The hindu)

Saturday, October 25, 2008

ಪ್ರೆಸ್ ಕ್ಲಬ್‌ನಲ್ಲಿ ಹನ್ನೆರಡು ದಿನಗಳ ಸೂತಕ

ಬೆಂಗಳೂರು ಪ್ರೆಸ್ ಕ್ಲಬ್ ನೌಕರ ವೀರೇಶ್ ಆತ್ಮಹತ್ಯೆ ಮಾಡಿಕೊಂಡರು. ವಿಶೇಷವೆಂದರೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದೂ ಪ್ರೆಸ್‌ಕ್ಲಬ್‌ನ ಕೊಠಡಿಯೊಂದರಲ್ಲಿ. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ಚಕ್ರವ್ಯೂಹದಲ್ಲಿ ವೀರೇಶ್ ಸಿಕ್ಕಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡರೆ ಮನೆಯವರಿಗೆ ಆಸ್ತಿಯಾದರೂ ಉಳಿಯುತ್ತದೆ ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾದರು. ಇದಾದ ಎರಡೇ ದಿನಕ್ಕೆ ಪ್ರೆಸ್‌ಕ್ಲಬ್‌ನ ಮತ್ತೊಬ್ಬ ನೌಕರ ಹೃದಯಾಘಾತದಿಂದ ಮರಣ ಹೊಂದಿದರು. ತೀರಿಕೊಂಡ ಇಬ್ಬರೂ ಸಂಭಾವಿತರು. ಕ್ಲಬ್ ಒಡನಾಟವಿರುವ ಎಲ್ಲರಿಗೂ ಇದು ಗೊತ್ತಿರುವ ವಿಷಯ. ಇಬ್ಬರ ಸಾವಿಗೂ ಸುದ್ದಿಮಾತು ಸಂತಾಪ ವ್ಯಕ್ತಪಡಿಸುತ್ತದೆ.
ಇಲ್ಲಿ ಹೇಳಲು ಹೊರಟ ವಿಷಯ ಅದಲ್ಲ. ವೀರೇಶ್ ಸತ್ತ ನಂತರ ಕ್ಲಬ್ ಕ್ಯಾಂಟೀನ್ ಆದಾಯವೇ ಕಡಿಮೆಯಾಗಿದೆಯಂತೆ. ಯಾಕೆಂದರೆ ಕ್ಲಬ್ ಸದಸ್ಯರಲ್ಲಿ ಅನೇಕರು ಅಲ್ಲಿ ತಿಂಡಿ-ಊಟ ಮಾಡುತ್ತಿಲ್ಲ. ಕಾರಣವೇನು ಗೊತ್ತೆ? ಸೂತಕ!
ಹನ್ನೆರಡು ದಿನ ನಾವೇನೂ ತಿನ್ನೋದಿಲ್ಲ ಅಂತ ಕೆಲ ಸದಸ್ಯರು ನೇರವಾಗಿಯೇ ಹೇಳಿದ್ದಾರಂತೆ. ಮತ್ತೆ ಕೆಲವರು ಬಿಜಿ ಕಣ್ರೀ ಅಂತ ಕ್ಲಬ್ ಕಡೆ ತಲೆ ಹಾಕಿಯೂ ನೋಡುತ್ತಿಲ್ಲವಂತೆ. ಕೆಲವರು ಬಂದರೂ ಜಾಣತನದಿಂದ ಕ್ಲಬ್‌ನಲ್ಲಿ ಅಡುಗೆ ಸರಿಯಿಲ್ಲಾರೀ ಎಂದು ಪಕ್ಕದ ಕ್ಯಾಂಟೀನ್‌ನಲ್ಲಿ ಹೊಟ್ಟೆ ತಣಿಸಿಕೊಳ್ಳುತ್ತಿದ್ದಾರಂತೆ.
ಪ್ರೆಸ್ ಕ್ಲಬ್ ಸದಸ್ಯರೆಂದರೆ ಬೇರೆ ಹೇಳಬೇಕಿಲ್ಲ ತಾನೆ? ಎಲ್ಲರೂ ಪತ್ರಕರ್ತರೇ. ಜಗತ್ತಿನ ಆಗುಹೋಗುಗಳನ್ನೆಲ್ಲ ಭಿತ್ತರಿಸುವ ಪತ್ರಕರ್ತರಿಗೆ ಸೂತಕ ಬಡಿದರೆ ಕಥೆ ಏನು?
ಸೋ ಕಾಲ್ಡ್ ಜ್ಞಾನವಂತರು, ಸಕಲ ವಿದ್ಯಾ ಪರಿಣತರು, ಆಧುನಿಕ ಮನಸ್ಥಿತಿಯವರೂ ಆದ ಪತ್ರಕರ್ತರು ಹೀಗೆ ಸೂತಕ, ಜಾತಕ, ಶಕುನ, ಮಾಟ, ಮಂತ್ರ ಅಂತೆಲ್ಲ ಮೌಢ್ಯಕ್ಕೆ ಬಲಿಯಾದರೆ ಅವರು ಪ್ರತಿನಿಧಿಸುವ ಪತ್ರಿಕೆಗಳಲ್ಲಿ ಸಾವಿನ ವಾಸನೆ ಹೊಡೆಯದೆ ಇನ್ನೇನಾಗುತ್ತದೆ?
ರಾಜಕಾರಣಿಗಳ ಮೌಢ್ಯವನ್ನು ಟೀಕಿಸುವ ಪತ್ರಕರ್ತರು ತಾವೇ ಮೌಢ್ಯಕ್ಕೆ ಶರಣಾದರೆ ಅದಕ್ಕೇನು ಅರ್ಥ?
ವೀರೇಶ್ ತೀರಿಕೊಂಡ ೧೧ನೇ ದಿನಕ್ಕೆ ಪ್ರೆಸ್‌ಕ್ಲಬ್‌ನಲ್ಲ ಪೂಜೆ ಮಾಡಿಸಿ ಸೂತಕ ತೆಗೆಯಲಾಗುತ್ತದೆಯಂತೆ!
ನಮ್ಮದೊಂದು ಸಲಹೆ, ಮನೆಯಲ್ಲಿ ಯಾರಾದರೂ ಸತ್ತರೆ ಒಂದು ವರ್ಷ ಯಾವುದೇ ಶುಭಕಾರ್ಯ ಮಾಡಬಾರದು ಎಂದು ಪುರೋಹಿತರು ಹೇಳುತ್ತಾರೆ. ಪ್ರೆಸ್ ಕ್ಲಬ್ ದಯಮಾಡಿ ಇನ್ನೊಂದು ವರ್ಷ ಯಾವುದೇ ಕಾರ್ಯಕ್ರಮ ನಡೆಸದಿರಲಿ!

'ದಂಡ'ವತೆ

ಪ್ರಜಾವಾಣಿ ನೋಡಿಕೊಳ್ಳಲು ಒಬ್ಬ ಘನ ಸಂಪಾದಕರು ಬೇಡ ಎಂದು ಪ್ರಜಾವಾಣಿ ಯಾವತ್ತೋತೀರ್ಮಾನಿಸಿ ಆಗಿದೆ. ಈಗ ಪದ್ಮರಾಜ 'ದಂಡ'ವತೆ ಎಂಬುವರ ತಲೆಗೆ ಸಿಕ್ಕಿದ್ದೆಲ್ಲಾಕಟ್ಟಿ ಸುಮ್ಮನಾಗಿಬಿಟ್ಟಿದೆ . ಆ ಕಾರಣಕ್ಕೆ ಪ್ರಜಾವಾಣಿ ದಿನ ದಿನವೂಮುಖೆಡಿಯಾಗುತ್ತಿದೆ.
ದೆಹಲಿಯಿಂದ ದಿನೇಶ್ ಅಮೀನ್ ಮಟ್ಟು ಬರೆದು ತನ್ನದೇ ಆದ ವಿಶ್ಲೇಷಣೆಯಿಂದ ಹೆಸರುಗಳಿಸಿದ್ದನ್ನು ಈ 'ದಂಡ'ಕ್ಕೆ ಸಹಿಸಲು ಸಾಧ್ಯವೇ ಆಗುತ್ತಿಲ್ಲ. ಆ ಕಾರಣದಿಂದಾಗಿ ಈಗಬೇಕೆಂದೇ ದಿನೇಶ್ ಬದಲು ಬ್ಯೂರೋದಲ್ಲಿರುವ ಡೆಕ್ಕನ್ ಹೆರಾಲ್ಡ್ ವರದಿಗಾರರ ಹೆಸರುಬರುವಂತೆ ನೋಡಿಕೊಳ್ಳುತ್ತಿದ್ದಾರೆ. ಪಿ ಮಹಮದ್ ಅವರ ಕಾರ್ಟೂನ್ ಒಳಪುಟಕ್ಕೆ ಆಗೀಗಎತ್ತಂಗಡಿಯಾಗುತ್ತಿದೆ. ಪ್ರಜಾವಾಣಿಯನ್ನು ಇನ್ನೂ ಕಾಪಾಡಿರುವ ಸಂಗತಿಗಳು ಏನೆಲ್ಲಾಇದ್ದಾವೋ ಅದನ್ನೆಲ್ಲಾ ಪಕ್ಕಕ್ಕೆ ಸರಿಸಿ ಅದಕ್ಕೆ ಇತಿಶ್ರೀ ಹಾಡಿಬಿಡಲು ಈ 'ದಂಡ'ನಿರ್ಧರಿಸಿದಂತಿದೆ.ಈ ಮಧ್ಯೆ ಸುಧಾ ನೇತೃತ್ವ ಬಿ ಎಂ ಹನೀಫ್ ಅವರ ಕೈಗೆ ಬಂದಿದ್ದು ೧೫ ವರ್ಷಗಳಿಂದಹಳಿತಪ್ಪಿಹೋಗಿದ್ದ ಅದನ್ನು ಈಗ ಸರಿ ದಾರಿಗೆ ಹಚ್ಚುತ್ತಿದ್ದಾರೆ. ಆದರೆ ಈ 'ದಂಡ'ದಅಸಹನೆ ಅವರ ಮೇಲೂ ಯಾವಾಗ ಹೆಚ್ಚುತ್ತದೋ ಗೊತ್ತಿಲ್ಲ.ಮೂಡಬಿದ್ರೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ಪತ್ರಕರ್ತರ ಮುಂದೆ ತಾನುಒಬ್ಬ ಹಿರಿಯ ಪತ್ರಕರ್ತ ಎಂಬುದನ್ನೂ ಮರೆತು ವೀರೇಂದ್ರ ಹೆಗ್ಗಡೆ ಅವರ ಕಾಲಿಗೆ ಡೈವ್ಹೊಡೆದದ್ದೂ ಇವರೇ. ಪ್ರಜಾವಾಣಿ ಯಾಕೆ ಹಳ್ಳಕ್ಕೆ ಬೀಳಲೆಂದೇ ಶ್ರಮಿಸುತ್ತಿದೆಯೋ ಅದೂತನ್ನ ೬೧ನೆಯ ವರ್ಷದಲ್ಲಿ.
-innobba.anonymous@gmail.com

Thursday, October 23, 2008

ಜೀ ಕನ್ನಡ ನ್ಯೂಸ್ ಹೀಗೇಕೆ?


ಜೀ ಕನ್ನಡ ವಾಹಿನಿ ಆರಂಭವಾದಾಗಿನಿಂದಲೂ ಅದು ಮನರಂಜನೆಗೆ ಆದ್ಯತೆ ನೀಡುತ್ತ ಸುದ್ದಿ ವಿಭಾಗವನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಮೊದಮೊದಲು ಸುದ್ದಿಯನ್ನು ವಿಚಿತ್ರವಾಗಿ, ಜಾಹೀರಾತಿನಂತೆ ಸೆಕೆಂಡುಗಳ ಲೆಕ್ಕದಲ್ಲಿ ತೋರಿಸಿ ಆಭಾಸ ಮಾಡಲಾಗುತ್ತಿತ್ತು. ಇದರಿಂದಾಗಿ ವೀಕ್ಷಕರ ಕಥೆ ಹಾಗಿರಲಿ, ವರದಿಗಾರರೇ ತಲೆತಲೆ ಚೆಚ್ಚಿಕೊಳ್ಳುವಂತಾಗಿತ್ತು.ಈಗ ಸಂಜೆ ಏಳುಗಂಟೆಗೆ ಅದರ ಪ್ರೈಮ್ ಸುದ್ದಿ ಪ್ರಸಾರವಾಗುತ್ತದೆ. ಈ ಟಿವಿ, ಕಸ್ತೂರಿ, ಉದಯ ಟಿವಿಗಳಲ್ಲಿ ೮ ಗಂಟೆಗೆ ಸುದ್ದಿ ಪ್ರಸಾರವಾದರೆ ಅದಕ್ಕೂ ಮುನ್ನ ಪ್ರಸಾರವಾಗುವ ಜೀ ಟಿವಿಯ ಸುದ್ದಿ ಹೆಚ್ಚು ಜನಪ್ರಿಯವಾಗಬೇಕಿತ್ತು. ಆದರೆ ಹಾಗಾಗುತ್ತಿಲ್ಲ.ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಜೀ ಟಿವಿಯಲ್ಲಿ ಇದ್ದಕ್ಕಿದ್ದಂತೆ ತಾರಾಮಣಿಗಳು ಸುದ್ದಿ ಓದಲು ಆರಂಭಿಸಿದರು. ಇದೊಂದು ಹೊಸ ಪ್ರಯೋಗ ನೋಡೋಣ ಎಂದರೆ ಈ ತಾರಾಮಣಿಗಳು ಸುದ್ದಿ ಓದಲು ಬಾರದೆ ಒದ್ದಾಡಿ ಸಾರ್ವಜನಿಕ ಮನರಂಜನೆ ನೀಡಿದರು. ಮನರಂಜನೆಗೇ ಆದ್ಯತೆ ನೀಡುವ ಜೀ ಟಿವಿ ಸುದ್ದಿ ನೀಡುವಲ್ಲೂ ಮನರಂಜನೆ ನೀಡುವ ಮೂಲಕ ಹಾಸ್ಯಾಸ್ಪದವಾಯಿತು.ತಾರಾಮಣಿಯರ ಸುದ್ದಿವಾಚನವೇನೋ ನಿಂತು ಹೋಯಿತು. ಆದರೆ ಸುದ್ದಿಯಲ್ಲಿನ ಗೊಂದಲಗಳು ಹಾಗೇ ಮುಂದುವರೆದಿವೆ.ತೀರಾ ತಕರಾರು ಮಾಡಲೇಬೇಕಾಗಿರುವುದು ಕ್ರೈಂ ಸುದ್ದಿಗಳ ವಾಚನದ ವಿಷಯ. ಥೇಟು ಕ್ರೈಂ ಧಾರಾವಾಹಿಗಳಲ್ಲಿ ಹಿನ್ನೆಲೆ ಧ್ವನಿ ನೀಡುವಂತೇ ಸುದ್ದಿಯಲ್ಲೂ ನೀಡಿದರೆ ಹೇಗೆ? ಕ್ರೈಂ ಧಾರಾವಾಹಿಗಳಿಗೆ ಆ ನಾಟಕೀಯ, ಲೌಡ್ ಆದ ಹಿನ್ನೆಲೆ ಧ್ವನಿ ಬೇಕೇನೋ? (ಟಿಆರ್‌ಪಿಗಾಗಿ) ಆದರೆ ಸುದ್ದಿ ಓದುವವರಿಗೂ ಈ ಕರ್ಕಷ, ಒರಟು ಧ್ವನಿಗಳನ್ನು ಕೇಳಿಸುವ ಅಗತ್ಯವೇನು? ರಾತ್ರಿ ಹತ್ತರ ನಂತರದ ಕ್ರೈಂ ಕಥಾನಕಗಳ ಯಶಸ್ಸನ್ನು ಸುದ್ದಿವಿಭಾಗಕ್ಕೂ ತರುವ ಐಡಿಯಾ ಕೊಟ್ಟವರಾದರೂ ಯಾರು?ಜೀ ಟಿವಿಯವರಿಗೆ ಗೊತ್ತಿಲ್ಲದೇ ಇರಬಹುದಾದ ವಿಷಯವೆಂದರೆ ಕ್ರೈಂ ಧಾರಾವಾಹಿಗಳನ್ನು ಅದರಲ್ಲಿ ಆಸಕ್ತಿ ಉಳ್ಳವರು ಮಾತ್ರ ನೋಡುತ್ತಾರೆ. ಆದರೆ ಸುದ್ದಿಯನ್ನು ಎಲ್ಲರೂ ನೋಡುತ್ತಾರೆ. ಎರಡನ್ನೂ ಮಿಕ್ಸ್ ಮಾಡುವ ಮೂಲಕ ಜೀ ಟಿವಿ ಸುದ್ದಿ ವಿಭಾಗದ ಗೆಳೆಯರು ಗೊಂದಲಕ್ಕೆ ಸಿಕ್ಕಿಬೀಳುವುದು ಬೇಡ.
(ಈ ಬರಹ ನಮ್ಮ ಆಹ್ವಾನಕ್ಕೆ ಬಂದ ಮೊದಲ ಈಮೇಲ್ ಪ್ರತಿಕ್ರಿಯೆ. ಯಥಾವತ್ ಇಲ್ಲಿ ಪ್ರಕಟಿಸಿದ್ದೇವೆ).