Thursday, February 26, 2009

ಬಳ್ಳಾರಿ ರೆಡ್ಡಿಗಳೂ, ವಿಮಾನ ನಿಲ್ದಾಣವೂ...

ಬಳ್ಳಾರಿ ಸಿರಿವಾರದ ಬಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವುದು ಸಚಿವ ಜನಾರ್ಧನ ರೆಡ್ಡಿಗೆ ಪ್ರತಿಷ್ಠೆಯ ವಿಷಯ ಯಾಕಾಗಿದೆ? ಒಂದು ಸಾವಿರ ಎಕರೆ ನೀರಾವರಿ ಕೃಷಿಭೂಮಿಯನ್ನು ಕಬಳಿಸಿ, ಈ ವಿಮಾನ ನಿಲ್ದಾಣ ನಿರ್ಮಿಸುವ ಅಗತ್ಯ ಏನಿದೆ?

ಪರಿಶೀಲನೆ ನಡೆಸುತ್ತಾ ಹೋದರೆ ಕರ್ನಾಟಕ ರಾಜ್ಯಕ್ಕಿಂತಲೂ ಆಂಧ್ರ ಪ್ರದೇಶಕ್ಕೆ ಈ ವಿಮಾನ ನಿಲ್ದಾಣದಿಂದ ಹೆಚ್ಚು ಲಾಭವಿದೆ ಎಂಬ ಅಂಶ ಬೆಳಕಿಗೆ ಬರುತ್ತದೆ. ಬಳ್ಳಾರಿ ಗಡಿಗೆ ಹೊಂದಿಕೊಂಡಿರುವ ಆಂಧ್ರ ಪ್ರದೇಶದಲ್ಲಿ ಬ್ರಹ್ಮಣಿ ಸ್ಟೀಲ್ ಉದ್ಯಮ ಸ್ಥಾಪಿಸಲು ಜನಾರ್ಧನ ರೆಡ್ಡಿ ಈಗಾಗಲೇ ನಿರ್ಧರಿಸಿದ್ದಾರೆ. ಕೋಟ್ಯಾಂತರ ರೂ. ಬಂಡವಾಳದ ಈ ಸ್ಟೀಲ್ ಉದ್ಯಮಕ್ಕೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರ ಪುತ್ರನೂ ಪಾಲುದಾರನೆಂಬ ವರ್ತಮಾನಗಳಿವೆ. ಈ ಉದ್ಯಮಕ್ಕೆ ಅನುಕೂಲವಾಗಲೆಂದು ಸಮೀಪದಲ್ಲಿರುವ ಸಿರಿವಾರದ ಬಳಿ ವಿಮಾನ ನಿಲ್ದಾಣ ಸ್ಥಾಪಿಸಲಾಗುತ್ತಿದೆ ಎಂಬ ಆರೋಪಗಳು ನಿಜ ಎನ್ನುವಂತೆ ರೈತರ ಹೋರಾಟವನ್ನು ವಿರೋಧಿಗಳ ಕುತಂತ್ರ ಎಂದು ಜನಾರ್ಧನ ರೆಡ್ಡಿ ಪರಿವಾರ ಬಣ್ಣಿಸುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸಹ ಅದೇ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದು ಶತಸಿದ್ಧ ಎಂದೇ ಹೇಳುತ್ತಿದ್ದಾರೆ.

ತುಂಗಾಭದ್ರಾ ನದಿಯಿಂದ ನೀರು ಪಡೆದು ಕೃಷಿ ಮಾಡುತ್ತಿರುವ ರೈತರು ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡರೆ ಹೆಚ್ಚುವರಿಯಾಗಿ ಉಳಿಯುವ ನೀರನ್ನು ಸಹ ಈ ಉದ್ಯಮಕ್ಕೆ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರವೂ ಇದೆ. ಎಲ್ಲಾ ಉದ್ಯಮಗಳೂ ಈಗಾಗಲೇ ತುಂಗಾಭದ್ರಾ ಜಲಾಶಯದ ನೀರನ್ನೇ ನೆಚ್ಚಿಕೊಂಡಿವೆ. ಇದಕ್ಕೆ ಜನಾರ್ಧನ ರೆಡ್ಡಿ ಅವರ ಉದ್ಯಮವೂ ಹೊರತಲ್ಲ. ಬಳ್ಳಾರಿಯಲ್ಲಿ ಈಗಾಗಲೇ ಒಂದು ವಿಮಾನ ನಿಲ್ದಾಣವಿದೆ. ತೋರಣಗಲ್ಲಿನಲ್ಲಿ ಜಿಂದಾಲ್ ಕಂಪನಿಯದೆ ಆದ ಖಾಸಗಿ ವಿಮಾನ ನಿಲ್ದಾಣವಿದೆ.

ಈ ಹಿಂದೆ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಗೂ ಜಿಂದಾಲ್, ಕಿರ್ಲೋಸ್ಕರ್, ಕಲ್ಯಾಣಿ ಬೃಹತ್ ಉಕ್ಕು ಉದ್ಯಮಗಳ ಸ್ಥಾಪನೆಯ ಹಿನ್ನೆಲೆಯಲ್ಲಿ ಸರ್ವೇಕಾರ್ಯ ನಡೆದು ಬಳ್ಳಾರಿ-ಹೊಸಪೇಟೆ ನಡುವೆ ಬರುವ ಪಾಪಿನಾಯಕನಹಳ್ಳಿ ಬಳಿ ಈ ವಿಮಾನ ನಿಲ್ದಾಣ ಸೂಕ್ತ ಪ್ರದೇಶವೆಂದು ಗುರುತಿಸಲಾಗಿತ್ತು.

ಆದರೆ ಇದನ್ನೆಲ್ಲಾ ಬದಿಗಿರಿಸಿ, ಆಂಧ್ರಪ್ರದೇಶಕ್ಕೆ ಅನುಕೂಲವಾಗಲೆಂದು ಕನ್ನಡ ನೆಲದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುತ್ತಿರುವ ಮುಖ್ಯಮಂತ್ರಿ, ಸಚಿವರ ವರ್ತನೆಯ ಬಗ್ಗೆ ನಮ್ಮ ಕನ್ನಡ ಸಂಘ, ಸಂಸ್ಥೆಗಳು ಯಾಕೋ ಏನೋ ಧ್ವನಿ ಎತ್ತುತ್ತಿಲ್ಲ. ಕನ್ನಡ ನೆಲ, ಜಲ ಈಗ ಯಾರ ಬಾಯಿಗೆ ಎನ್ನುವ ಪ್ರಶ್ನೆಯನ್ನು ಮಾಧ್ಯಮಗಳು ಕೇಳದಂತೆ ಅವರ ಬಾಯಿಗೆ ಲ್ಯಾಪ್‌ಟಾಪ್ ತುರುಕಲಾಗಿದೆ. ಕನ್ನಡ ಸಂಘಸಂಸ್ಥೆಗಳಾದರೂ ಬಾಯಿಬಿಡಬೇಕಲ್ಲವೆ?

3 comments:

Anonymous said...

y suddimatu bayi muchhide

Anonymous said...

This is Good Story. it containts facts and truth of formers. Reddy hidden agenda is - take water to his Brahmini Steel project from Tungabhadra. Bellary Journalists are purchable Commondities. Mr. Yadgiri K.P - Journalist is Kamchoor hi.

Rajan - Photographer

Anonymous said...

ಸುದ್ದಿ ಮಾತು ಇತ್ತೀಚಿಗೆ ಸುದ್ದಿ ಮಾಡುತ್ತಿಲ್ಲ ಯಾಕೆ, ಬಲ್ಲ ಮೂಲಗಳ ಪ್ರಕಾರ ನಿಮ್ಮ ಮೇಲೆ ಪೋಲಿಸ್ ಕೇಸ್ ದಾಕಲಾಗಿದೆ ಅಂತೆ ಹೌದ,