Friday, September 26, 2008

ದಿನೇಶ್ ಅವರ "ದೇಸಿಮಾತು.."

ದಿನೇಶ್ ಕುಮಾರ್ ಎಸ್.ಸಿ. ಈ ಹೊತ್ತಿನ ಬಹುಮುಖ್ಯ ಕನ್ನಡದ ಚಿಂತಕರಲ್ಲಿ ಒಬ್ಬರು. ಅವರ ಬ್ಲಾಗ್ ದೇಸಿಮಾತು ನಲ್ಲಿರುವ ಅವರ ಬರಹಗಳನ್ನು ಓದುವ ಎಲ್ಲರಿಗೂ ಅವರ ಸೈದ್ಧಾಂತಿಕ ನೆಲಗಟ್ಟು, ಸಮಾಜ ಮುಖಿ ಆಲೋಚನೆ ಸ್ಪಷ್ಟವಾಗಿ ಗೊತ್ತು. ದಿನೇಶ್ ಮೂಲತಃ ಪತ್ರಕರ್ತ. ಒಂದು ಸಂಜೆ ಪತ್ರಿಕೆ ನಡೆಸುವ ಹೊಣೆ ಹೊತ್ತಿದ್ದಾರೆ. ಬೆಂಗಳೂರಿನಂತಹ ನಗರದಲ್ಲಿ ಸಂಜೆ ಪತ್ರಿಕೆ ನಡೆಸುವ ಕೆಲಸ ಸಾಮಾನ್ಯವೇನಲ್ಲ. ವೃತ್ತಿ ಜತೆ ಸಾಮಾಜಿಕ ಹೋರಾಟಗಳಲ್ಲೂ ಅವರು ಭಾಗಿ. ದೇಶದ ತುಂಬಾ ವೃತ್ತಿಪರ ಶಿಕ್ಷಣ ಕೋರ್ಸ್ ಗಳಲ್ಲಿ ಮೀಸಲಾತಿಗೆ ವಿರೋಧ ಮಾಡಿ ಕೆಲವು ಪಟ್ಟಭದ್ರರು ಮತ್ತು ಸಾಮಾಜಿಕ ಸ್ಥಿತಿಗತಿ ತಿಳಿಯದ ಹುಡುಗರು ಹೋರಾಟ ಮಾಡುತ್ತಿದ್ದಾಗ, ದಿನೇಶ್ ಮತ್ತವರ ಸ್ನೇಹಿತರು ಬೆಂಗಳೂರಿನಲ್ಲಿ ಮೀಸಲಾತಿ ಪರವಾಗಿ ಬೃಹತ್ ರಾಲಿ ಮಾಡಿದ್ದರು. ಇತ್ತೀಚೆಗೆ ಹಿಂದುಳಿದ ವರ್ಗ ಆಯೋಗದಡಿ ನಡೆಯಬೇಕಿರುವ ಜಾತಿವಾರು ಜನಗಣತಿಯನ್ನು ಖಾಸಗಿಯವರಿಗೆ ವಹಿಸುವ ನಿರ್ಧಾರ ವಿರೋಧಿಸಿ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ಕೂತಿದ್ದರು. ವಿರೋಧ ಪಕ್ಷಗಳ ನೇತಾರರು ಇವರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.ದಿನೇಶ್ ಸದ್ಯ ತಮ್ಮ ಬ್ಲಾಗಿನಲ್ಲಿ ಅತ್ಯುತ್ತಮ ಲೇಖನವೊಂದನ್ನು ಬರೆದಿದ್ದಾರೆ. ಮಠಮಾನ್ಯಗಳಿಗೆ ಇಂದಿನ ರಾಜ್ಯ ಸರಕಾರ ಕೊಡುತ್ತಿರುವ ಮಾನ್ಯತೆ ಕಂಡು ಅವರು ಬೇಸತ್ತಿದ್ದಾರೆ. ಕರ್ನಾಟಕ ರಾಜಕಾರಣವನ್ನು ಬಹುಕಾಲ ಆಳಿದ ಲೋಹಿಯಾವಾದಿಗಳು ಇಂದಿನ ಸರಕಾರದಲ್ಲಿ ಇಲ್ಲವಾಗಿದ್ದಾರೆ. ಲೋಹಿಯಾ ಯಾಕೆ ಇಂದು ಬಹುಮುಖ್ಯವಾಗಿ ನೆನಪಾಗುತ್ತಾರೆ ಎನ್ನುವುದಕ್ಕೆ ನೀವು ಈ ಲೇಖನ ಓದಲೇಬೇಕು. ಲೇಖನದ ಕೊಂಡಿ ಇಲ್ಲಿದೆ

No comments: