Wednesday, September 24, 2008

ಮಾತನಾಡಿದರೆ ಹುಷಾರ್.. ಸ್ವಾಮೀಜಿ ಧಮಕಿ!!!

ಚಿತ್ರದುರ್ಗ ಹತ್ತಿರದ ಸಿರಿಗೆರೆಯಲ್ಲಿ ಬುಧವಾರ ಒಂದು ಕಾರ್ಯಕ್ರಮ. ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಿದ್ದರು. ಹೊನ್ನಾಳಿ ರೇಣುಕಾಚಾರ್ಯ ಕಾರ್ಯಕ್ರಮಕ್ಕೆ ತಡವಾಗಿ ಬಂದರಂತೆ. ಸಿರಿಗೆರೆ ಹಿರಿ ಶ್ರೀ ಶಿವಮೂರ್ತಿ ಶಿವಾಚಾರ್ಯ ರೇಣುಕಾಚಾರ್ಯರನ್ನು ಹತ್ತಿರಕ್ಕೆ ಕರೆದು ನೆರೆದಿದ್ದ ಸಮಸ್ತರಿಗೆ ಕೇಳುವಂತೆ, ಪಕ್ಕದಲ್ಲಿದ್ದ ಮುಖ್ಯಮಂತ್ರಿಗೆ ಮನವರಿಕೆಯಾಗುವಂತೆ ಶಾಸಕನನ್ನು ಝಾಡಿಸಿದರಂತೆ. ಪ್ರಜಾವಾಣಿ ವರದಿ ಪ್ರಕಾರ ಸ್ವಾಮಿ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ಅವರ ಮಾತಿನ ಸಾರಾಂಶ - ನೀವು ಇನ್ನು ಮುಂದೆ ಮುಖ್ಯಮಂತ್ರಿಯವರ ಬಗ್ಗೆಯಾಗಲಿ, ಬಿಜೆಪಿ ಸರಕಾರದ ಬಗ್ಗೆಯಾಗಲಿ, ಬಹಿರಂಗ ಹೇಳಿಕೆ ನೀಡಕೂಡದು. ಆಜ್ಞೆಗೆ ತಪ್ಪಿದರೆ...ಹುಷಾರ್! ಎಂದು ಸನ್ಮಾನ್ಯ ಗುರು ಗುಟುರಿದ್ದಾರೆ.
ಒಂದು ಕ್ಷಣ ದಿಗಿಲಾಯಿತು. ಸಿರಿಗೆರೆ ಶ್ರೀಗಳು ಅದ್ಯಾವಾಗ ಕರ್ನಾಟಕ ಬಿಜೆಪಿ ಅಧ್ಯಕ್ಷರಾದರು?
ಇದುವರೆಗೆ ಪತ್ರಿಕೆಗಳಲ್ಲಿ ಗಮನಿಸಿದಂತೆ, ಪಕ್ಷದ ಅಧ್ಯಕ್ಷರು ಇಂತಹ ಎಚ್ಚರಿಕೆ ನೀಡುವುದು ಸಾಮಾನ್ಯ. ಆದರೆ, ಸಿರಿಗೆರೆ ಶ್ರೀಗೆ ಈ ಹೆಚ್ಚುವರಿ ಜವಾಬ್ದಾರಿ ನೀಡಿದ್ದು ಯಾರು?
ಜನರಿಂದ ಆಯ್ಕೆಯಾದ ಶಾಸಕನಿಗೆ ಎಚ್ಚರಿಕೆ ನೀಡುವಷ್ಟು ದಾಷ್ಟ್ಯ ಯಾವುದೋ ಒಂದು ಜಾತಿಯ ಒಂದು ಪಂಗಡಕ್ಕೆ ಸೀಮಿತರಾಗಿರುವ ಸ್ವಾಮೀಜಿಗೆ ಏಕೆ? Is he an extra constitutional authority?
ರೇಣುಕಾಚಾರ್ಯ ಶ್ರೀಗಳ ಮಾತಿಗೆ ತಕ್ಕ ಉತ್ತರ ನೀಡುವಷ್ಟು ಸಮರ್ಥನಲ್ಲ. 'ಆಯ್ತು ಸ್ವಾಮಿ' ಎಂದು ಹಲ್ಕಿರಿಯುತ್ತ ಹಿಂದೆ ಸರಿದಿರುತ್ತಾರೆ. ಪಾಪ ಆತನಿಗೂ ಮತಗಳು ಬೇಕು. ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕು.
ಹಿಂದೆ ಇದೇ ಸ್ವಾಮೀಜಿ ಎಚ್. ವಿಶ್ವನಾಥ್ ಶಿಕ್ಷಣ ಮಂತ್ರಿಯಾಗಿದ್ದಾಗ 'ಕಡತ ತಗೊಂಡು ನಮ್ಮ ಮಠಕ್ಕೆ ಬನ್ನಿ. ಆಡಳಿತ ನಡೆಸೋದು ಹೇಗೆ ಅಂತ ಹೇಳ್ತೀನಿ' ಎಂದು ಆಜ್ಞೆ ಹೊರಡಿಸಿದ್ದರು. ವಿಶ್ವನಾಥ್ ನಮ್ರವಾಗಿ ನಿಮ್ಮ ಮಠಕ್ಕೆ ಒಬ್ಬ ಭಕ್ತನಾಗಿ ಹಾರ ಹಿಡಿದು ಬರುತ್ತೇನೆ ಹೊರತು, ಕಡತ ತರುವುದಿಲ್ಲ ಎಂದಿದ್ದರು. ಆ ನಂತರ ಅಂದಿನ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಸಾರ್ವಜನಿಕ ಸಮಾರಂಭವೊಂದರಲ್ಲಿ ಸ್ವಾಮೀಜಿ ಕಾಲಿಗೆ ಬಿದ್ದು ಕ್ಷಮೆ ಕೇಳಿ, ವಿಶ್ವನಾಥ್ ರನ್ನು ಬೇರೆ ಖಾತೆಗೆ ವರ್ಗಾಯಿಸಿದ್ದು ಈಗ ಇತಿಹಾಸ.
(ಚಿತ್ರ ಕೃಪೆ: ಪ್ರಜಾವಾಣಿ)

6 comments:

Unknown said...

ಆರ್ಚ್ ಬಿಷಪ್ ಡಾ.ಬರ್ನಾಡ್ ಮೋರಸ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ತಮ್ಮ ಮನೆ ಬಾಗಿಲಿನಲ್ಲಿ ನಿಲ್ಲಿಸಿ ‘ವಿ ಆರ್ ಹರ್ಟ್’ ಎಂದು ನೋವು ತೋಡಿಕೊಂಡರೆ ಅದು ಇಡೀ ನಾಡಿಗೆ ಮಾಡಿದ ಅವಮಾನ ಎಂದು ಕೆಲವು ಪತ್ರಿಕೆಗಳು ಹುಯಿಲೆಬ್ಬಿಸುತ್ತವೆ.
ಈಗಾಗಲೇ ಬಿಷಪ್ ಕ್ಷಮೆ ಯಾಚಿಸಬೇಕು ಎಂದು ವೀರಶೈವ ಸಂಘಟನೆಯೊಂದು ಧಮಕಿ ಹಾಕಿದೆ.
ಇದು ತಪ್ಪು ಎನ್ನುವುದಾದರೆ ರೇಣುಕಾಚಾರ್ಯ ಎಂಬ ಜನಪ್ರತಿನಿಧಿಗೆ ಸಾರ್ವಜನಿಕ ಸಮಾರಂಭದಲ್ಲಿ ಧಮಕಿ ಹಾಕಿರುವ ಸಿರಿಗೆರೆ ಸ್ವಾಮೀಜಿಗೆ ಏನು ಹೇಳಬೇಕು? ಹಿಂದೂ, ವೀರಶೈವ ಮಠಾಧೀಶರು ಮಾತ್ರ ತಮ್ಮ ಸಿಟ್ಟನ್ನು ಜನಪ್ರತಿನಿಧಿಗಳ ಮುಖಕ್ಕೆ ರಾಚುವಂತೆ ಕಾರಿಕೊಳ್ಳಬಹುದು, ಆದರೆ ಕ್ರಿಶ್ಚಿಯನ್, ಮುಸ್ಲಿಂ ಗುರುಗಳು ನೋವನ್ನೂ ಸಹ ತೋಡಿಕೊಳ್ಳುವಂತಿಲ್ಲ (ಅದೂ ಸಕಾರಣವಾಗಿ)
ಸುದ್ದಿಮಾತುಗೆ ಆಹಾರವಾಗಿದ್ದಕ್ಕೆ ಶ್ರೀಗಳಿಗೆ ನನ್ನ ಅನುಕಂಪಗಳು.
ಜ್ಞಾನೇಂದ್ರ ಕುಮಾರ್ ಪ.ಬ.

Unknown said...

ಸತ್ಯವಾದ ಮಾತನ್ನೇ ಹೇಳಿದಿರಿ ಜ್ಞಾನೇಂದ್ರ. ಇಂಥ ಮಠಾಧೀಶರು, ಜಾತ್ಯತೀತ ಸಮಾನತೆಯ ಬಗ್ಗೆ ಮಾತಾಡುತ್ತಾರೆ.ಇಂಥ ಸೋಗಲಾಡಿಗಳನ್ನು, ಬೂರ್ಜ್ವಗಳನ್ನಿಟ್ಟು ಭಾರತನ್ನು ಜಾತ್ಯತೀತವಾಗಿ ಉಳಿಸಿಕೊಳ್ಳುವುದು ಹೇಗೆ? ವಿವಿಧತೆಯಲ್ಲಿ ಏಕತೆ ಎಂದರೆ ಭಾರತ ಎನ್ನುತ್ತಿದ್ದೆವು. ಮುಂದಿನ ದಿನಗಳಲ್ಲಿ ಅಂಥ ಮಾತಾಡಿದರೂ ಕಷ್ಟವಾಗಬಹುದೇನೋ?
ಹಾಂ.. ಸುದ್ದಿ ಮಾತು ಇಂಥ (ರೇಣುಕಾಚಾರ್ಯ, ಸಿರಿಗೆರೆ ಶ್ರೀ)ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದು ಶ್ಲಾಘನೀಯ ಸಂಗತಿ. ಗುಡ್ ಲಕ್...

ದಿನೇಶ್ ಕುಮಾರ್ ಎಸ್.ಸಿ. said...

ಸುದ್ದಿಮಾತು ಒಡೆಯರೆ,
ಬಹಳ ವೇಗವಾಗಿ ಸುದ್ದಿಗೆ ಗುದ್ದು ನೀಡಿದ್ದೀರಿ, ಅಭಿನಂದನೆಗಳು.
ನಿಮ್ಮ ಅಭಿಮತವನ್ನು ಬೆಂಬಲಿಸುವ ಒಂದಷ್ಟು ಪತ್ರಗಳು ಪ್ರಜಾವಾಣಿ ವಾಚಕರ ವಾಣಿಯಲ್ಲಿ ಪ್ರಕಟಗೊಂಡರೆ ಒಳ್ಳೆಯದು.
ಸಿರಿಗೆರೆಯವರ ನಡವಳಿಕೆ ಸ್ಷಷ್ಟವಾಗಿ ಪ್ರಜಾಪ್ರಭುತ್ವ ವಿರೋಧಿ, ಅದರಲ್ಲಿ ಎರಡು ಮಾತಿಲ್ಲ. ಸ್ವಾಮೀಜಿಗಳು ಇನ್ನೂ ರಾಜಶಾಹಿ ವ್ಯವಸ್ಥೆಯ ಗುಂಗಿನಿಂದ ಹೊರಬಂದಿಲ್ಲದೇ ಇರುವುದು ಸಮಸ್ಯೆಗೆ ಮೂಲಕಾರಣ.
ನಿಮ್ಮ ಸುದ್ದಿಬೇಟೆ ಹೀಗೇ ಮುಂದುವರೆಯಲಿ

ಜಿ ಎನ್ ಮೋಹನ್ said...

'ಸುದ್ದಿಮಾತು' ಒಳ್ಳೆಯ ಪ್ರಯತ್ನ. ಇತ್ತೀಚಿಗೆ ಲಂಕೇಶ್ ಪತ್ರಿಕೆ ವಿಶೇಷಾಂಕದಲ್ಲಿ ಬಿ ಎಂ ಬಷೀರ್ ಬರೆದ ಮಾಧ್ಯಮ ವಿಮರ್ಶೆ ಓದಿ ಕನ್ನಡದಲ್ಲಿ ಮಾಧ್ಯಮಗಳ ನಡತೆಗೆ ಕನ್ನಡಿ ಹಿಡಿಯುವವರಿಲ್ಲವೇ? ಎನಿಸಿತ್ತು.

ಸುದ್ದಿಮಾತು ಆ ನಿಟ್ಟಿನಲ್ಲಿ ಸಾಗುತ್ತದೆ ಎಂಬ ನಂಬಿಕೆ ನನ್ನದು. ಹಿಂದೆ ಮಂಗಳೂರಿನಲ್ಲಿ 'ಒರೆ-ಕೋರೆ' ಎಂಬ ಇಂತಹದೇ ಪ್ರಯತ್ನ ಮುದ್ರಣದಲ್ಲಾಗಿತ್ತು. ತುಂಬಾ ಚೆನ್ನಾಗಿ ಸಂಚಿಕೆಗಳನ್ನು ರೂಪಿಸಿದ್ದರು. ಮೀಡಿಯಾ ಟ್ರಾಫಿಕ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ 'ಸುದ್ದಿ ಮಾತು'ಗಳ ಅಗತ್ಯವಿದೆ.

-ಜಿ ಎನ್ ಮೋಹನ್

Unknown said...

ಕನ್ನಡದ ಮುಖ್ಯವಾಹಿನಿ ಪತ್ರಿಕೆಗಳೆಲ್ಲಾ ಚಡ್ಡಿ ಧರಿಸಿ ತನ್ನದು ಅದರ ಸಾಚಾತನ ಸಾಬೀತಿನ ಪೈಪೋಟಿಗೆ ಬಿದ್ದಂತೆ ವರ್ತಿಸುತ್ತಿರುವಾಗ ಸುದ್ದಿಮಾತು ನಿಜವಾಗಿಯೂ ಸೂಕ್ಷ್ಮ ಗ್ರಹಿಕೆಯಿಂದ ಆಸ್ಥಾನ ಪಂಡಿತ ಪತ್ರಿಕೆಗಳಿಗೆ, ಪತ್ರಕರ್ತರಿಗೆ ಮರ್ಮಾಘಾತವನ್ನೇ ನೀಡುತ್ತಿದೆ.ಅದಕ್ಕಾಗಿ ನಿಮಗೆ ಅಭಿನಂದನೆ!

ಇನ್ನು ಈ ಸ್ವಾಮೀಜಿ ಎಂತಹ ಸರ್ವಾಧಿಕಾರಿ ಮನೋಭಾವದವರು ಎಂಬುದನ್ನು ಅಲ್ಲಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮೂರ್ನಾಲ್ಕು ವರ್ಷ ಕೆಲಸ ಮಾಡಿದಾಗಲೇ ಕಣ್ಣಾರೆ ಕಂಡಿದ್ದೇನೆ. ಮಲೇಬೆನ್ನೂರಿನಂತಹ ಸೌಹಾರ್ದದ ಊರಿನಲ್ಲಿ ಹಿಂದೂ ಸಮಾಜೋತ್ಸವದ ಹೆಸರಿನಲ್ಲಿ ಕೋಮು ಬೆಂಕಿ ಹಚ್ಚಿ ಮೈಕಾಸಿಕೊಂಡ ಇಂತಹವರಿಂದ ಸಮಾಜದ್ದಾಗಲೀ, ನಾಡಿನದ್ದಾಗಲೀ ಹಿತ ನಿರೀಕ್ಷಿಸುವುದೇ ಮೂರ್ಖತನ.
ಕನಿಷ್ಠ ಸ್ವಾಭಿಮಾನ, ವೈಚಾರಿಕತೆ ಕೊನೆಗೆ ಪ್ರಾಮಾಣಿಕತೆಯೂ ಇಲ್ಲದ ವ್ಯಕ್ತಿಯೊಬ್ಬರು ಅಧಿಕಾರದ ಗದ್ದುಗೆಗೇರಿದರೆ ಏನಾಗುತ್ತದೆ ಎಂಬುದಕ್ಕೆ ನಾವು ಮೂಕಸಾಕ್ಷಿಗಳಾಗುತ್ತಿರುವುದು ದುರಂತವೇ ಸರಿ...

Anonymous said...

pls publish your e-mail adress ..
it helps me to givesome hints about media lafdas.....