Wednesday, October 22, 2008

ತಿಂಗಳು ಕಳೆದಿದ್ದು ಗೊತ್ತಾಗಲೇ ಇಲ್ಲ...

ಇಂದು ಅಕ್ಟೋಬರ್ 23. ಸುದ್ದಿಮಾತು ಎಂಬ ಬ್ಲಾಗ್ ಬಾಗಿಲು ತೆರೆದು ಒಂದು ತಿಂಗಳಾಯ್ತು. ಅಂದ ಹಾಗೆ ಮೊದಲಿಗೆ ನಿಮ್ಮ ಕ್ಷಮೆ ಕೋರಬೇಕು. ಬುಧವಾರ ನಾವು ಯಾವ ಹೊಸ ಸುದ್ದಿಯನ್ನೂ ಪೋಸ್ಟ್ ಮಾಡಲಾಗಲಿಲ್ಲ. ಒಂದು ಸುದ್ದಿ ಸಿದ್ಧವಾಗಿದ್ದರೂ ತಾಂತ್ರಿಕ ಕಾರಣಗಳಿಂದ ಪೋಸ್ಟ್ ಮಾಡಲಿಲ್ಲ. ಕಳೆದ ಒಂದು ತಿಂಗಳಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ಸುದ್ದಿ ನೀಡುತ್ತಲೇ ಬಂದಿದ್ದೇವೆ. ದಿವವೂ ಏನಾದ್ರೂ ಹೊಸದು ಇರುತ್ತೆ ಎಂದು ಭೇಟಿ ಕೊಟ್ಟ ಮಿತ್ರರಿಗೆ ಬೇಸರವಾಗಿದೆ. ಕ್ಷಮೆ ಇರಲಿ. ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ತೇವೆ.
ಏನನ್ನೋ ಬರೆಯಲು ಕೂತು, ಮತ್ತೇನೋ ಮೂಡಿಬಂದಾಗ ಹುಟ್ಟಿಕೊಂಡದ್ದೇ ಸುದ್ದಿಮಾತು. ಸ್ಟಷ್ಟದನಿಯಲ್ಲಿ ಹೇಳುವುದಾದರೆ, ಯಾವುದೇ ಪೂರ್ವ ತಯಾರಿ ಇಲ್ಲದೆ ಆರಂಭಗೊಂಡದ್ದ ಈ ಬ್ಲಾಗ್. "ಅಂದಿನ ಪತ್ರಿಕೆಗಳನ್ನು ಓದಿ, ಅನ್ನಿಸಿದ್ದನ್ನು ಬರೆಯುವುದು" ಎಂಬ ಅಸ್ಪಷ್ಟ ಆಲೋಚನೆ ಹಿನ್ನೆಲೆಯಲ್ಲಿ ಮಾತು ಮುಂದುವರೆಯಿತು.
ಇದ್ಯಾವುದೋ ಹೊಸ ಬ್ಲಾಗ್ ಬಂತಲ್ಲ ಎಂದು ಕೆಲವರು ಇಣುಕಿದರು. ಪತ್ರಕರ್ತರು, ಪತ್ರಿಕೋದ್ಯಮ ಬಗ್ಗೆನೇ ತುಂಬಾ ಬರೀತಾರಲ್ಲ; ನಾವೂ ನೋಡೊಣ, ಏನ್ಮಾಡ್ತಾರೆ ಎಂಬ ಕುತೂಹಲದಿಂದ ಸಾಕಷ್ಟು ಮಂದಿ ಪತ್ರಕರ್ತರು ಬ್ಲಾಗ್ ಗೆ ಖಾಯಂ ಓದುಗರಾದರು. ಅಂತೆಯೇ ಪ್ರತಿಕ್ರಿಯೆಗಳೂ ಹೆಚ್ಚಾದವು. ಬ್ಲಾಗ್ ಬರಹಗಳಿಗೆ ಉತ್ತೇಜನ ನೀಡುವುದೇ ಪ್ರತಿಕ್ರಿಯೆಗಳು. ನಮ್ಮನ್ನು ಯಾರೋ ಸೂಕ್ಷ್ಮವಾಗಿ ಗಮನಸುತ್ತಿದ್ದಾರೆ ಎಂದರೆ; ನಾವು ಎಚ್ಚರಗೊಳ್ಳುತ್ತೇವೆ.
ನಾವು ನಮ್ಮ ಗುರುತನ್ನು ಬಹಿರಂಗ ಮಾಡದ ಕಾರಣ ಓದುಗರು ಅನೇಕರ ಮೇಲೆ ಅನುಮಾನ ಪಡುವಂತಾಗಿದೆ. ನಮ್ಮ ಉದ್ದೇಶ ಸ್ಪಷ್ಟ "ನಾವು ಯಾರು" ಎನ್ನುವ ಸಂಗತಿ ಮುಖ್ಯ ಆಗಲೇಬಾರದು. ಬರಹ ಮುಖ್ಯವಾಗಲಿ.
ಮತ್ತೊಂದು ವಿಚಾರ. ಈ ಬ್ಲಾಗ್ ಕಂಡದ್ದನ್ನೆಲ್ಲ ಟೀಕೆ ಮಾಡಲು ಹುಟ್ಟಿಕೊಂಡಿಲ್ಲ. ಸರಿಕಾಣದನ್ನು ಟೀಕೆ ಮಾಡಲೇಬೇಕಾಗುತ್ತದೆ. ಆದರೆ ಟೀಕೆ ಮಾಡಲೆಂದೇ ಟೀಕೆಯಲ್ಲ. ಹಾಗೆ, ಟೀಕೆಯನ್ನು ಎಲ್ಲರೂ ಒಪ್ಪಲೇಬೇಕೆಂದಲ್ಲ. ಉತ್ತಮವಾದದನ್ನು ಕಂಡಾಗ ಮೆಚ್ಚಿಕೊಂಡಿದ್ದೇವೆ. ಹಾಗಂತ ನಾವು ಕೇವಲ-ಟೀಕೆ ಮೆಚ್ಚುಗೆಗಳಿಗೆ ಸೀಮಿತವಾಗಿಲ್ಲ. ಬೆಳವಣಿಗೆಗಳನ್ನು ವಿಶ್ಲೇಷಿಸುತ್ತೇವೆ. ಆರೋಗ್ಯಕರ ಚರ್ಚೆ ನಮ್ಮ ಉದ್ದೇಶ.
ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಲಭ್ಯ ಇರುವ ಫೆಲೋಷಿಪ್, ಸ್ಕಾಲರ್ ಷಿಪ್ ಮಾಹಿತಿ ಒದಗಿಸುವ ಉದ್ದೇಶವೂ ಸುದ್ದಿಮಾತಿಗಿದೆ. ನಾವು ಐದು ಮಂದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಅವಧಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಎಲ್ಲರೂ ಒಂದೆಡೆ ಸೇರಿ ಚರ್ಚಿಸಿ ತೀರಾ ವ್ಯವಸ್ಥಿತವಾಗಿ ಮಾಡಲಾಗುತ್ತಿಲ್ಲ ಎಂಬ ಕೊರಗು ಇದ್ದೇ ಇದೆ. ಮುಂದಿನ ದಿನಗಳಲ್ಲಿ ಇದೆಲ್ಲವೂ ಸರಿ ಹೋಗಬಹುದು ಎಂಬ ನಿರೀಕ್ಷೆ ಇದೆ .
ನಮ್ಮ ಬ್ಲಾಗ್ ಮತ್ತಷ್ಟು ಸಮಗ್ರವಾಗಿ ಹೊರಬರಲು ನಿಮ್ಮದೂ ಸಹಕಾರ ಬೇಕು ನಮ್ಮೊಂದಿಗೆ ವಿಚಾರಗಳನ್ನು ಹಂಚಿಕೊಳ್ಳಲು ಸಂಪರ್ಕಿಸಿ: suddimaatu@gmail.com

3 comments:

ದಿನೇಶ್ ಕುಮಾರ್ ಎಸ್.ಸಿ. said...

ಟೀಕೆಗಾಗಿ ಟೀಕೆ ಮಾಡದೇ ಇರುವ ನಿಮ್ಮ ನಿಲುವು ಸರಿಯಾಗಿದೆ.
ಸುದ್ದಿಮಾತು ಆರಂಭವಾದಾಗಿನಿಂದಲೂ ಗಮನಿಸಿದ್ದೇನೆ. ವಿಷಯದ ಆಯ್ಕೆ ಹಾಗು ನಿರೂಪಣೆಯಲ್ಲಿ ಎಲ್ಲೂ ಎಡವದೇ ಇರುವುದು ಖುಷಿಯ ವಿಷಯ.
ಮತ್ತೊಂದು ನಾನು ಗಮನಿಸಿದ ವಿಷಯ: ಸುದ್ದಿಮಾತು ಕೇವಲ ಸಮೂಹಮಾಧ್ಯಮದ ವಿಶ್ಲೇಷಣೆ ಮಾಡದೆ ಸಂದರ್ಭ ಬಂದಾಗ ಸಾಮಾಜಿಕ, ರಾಜಕೀಯ ವಿಶ್ಲೇಷಣೆಗಳನ್ನೂ ನಡೆಸಿದೆ.
ನನಗೂ ಮೊದಮೊದಲು ಸುದ್ದಿಮಾತು ಬರೆಯುವವರು ಅವರಿರಬೇಕು, ಇವರಿರಬೇಕು ಎಂದು ಅನುಮಾನ ಮಾಡಿ ಈಗ ತೆಪ್ಪಗಿದ್ದೇನೆ. ಆ ಕುತೂಹಲವೂ ಹೊರಟು ಹೋಗಿದೆ.
ನೀವು ಯಾರೇ ಆಗಿರಿ, ಈಗ ನಿಮಗಿರುವ ಸಾಮಾಜಿಕ ಕಳಕಳಿ, ಬದ್ಧತೆಗಳನ್ನೇ ಮುಂದುವರೆಸಿಕೊಂಡು ಹೋಗಿ, ಒಳ್ಳೆಯದಾಗಲಿ

Supreeth.K.S said...

ತಿಂಗಳು ಪೂರೈಸಿದ್ದಕ್ಕೆ ಶುಭಾಶಯಗಳು :)

ಕರಣಂ ರಮೇಶ್ said...

yes.. neevu aadashtoo sariyaada dariyalle saaguttiddeeri... best of luck. bye the way, thingalu pooraisiddakka shubhaashayagalu...
illi innondu mukhyavada vishaya charchege bidabekendu anistide... nannu obba patrakartane... bjp sarkar (haaganbaardu,adu thappagutte... mukhyamantri aniskondiro yadiyoorappa avaru janasaamanyara samasyegalige spandisiddakkinta mata maanyagalu swameejigalige mane haakidde hechchu... paapa rune teeristidaare... irli bidi.. vishaya adalla... tumakoorina siddaganga shreegalige bharatarathna kodiso vishaya... naanu kanda haage ee bedike yadiyoorappa avarobbaradenalla... kaleda sumaru hattu varshagalinda kendrakke more (kshamisi ee pada balasiddakke.. nangeno ide sari anistu) idtane bandidaare,. aadre kendra maatra kyare andilla.. alla swamiji aadru yaake ee rajakaaranigala morege mouna sammathi needtidaare ?(avrinda yavude pratikriye baarade irodrinda mounam sammathi lakshanam anta andkondidene) nijakkoo swamijigalu bharata ratna seridante yaavude prashastigaligintalu migilaadavaru.. pratee varsha raajakaaranigalu more idodu.. kendre adanna kyare annade irodu.. idu yaake sari anistilla.. adrinda swamijigale ee bagge ondu pharmanu horadisi yaavude shifaarassu beda anta omme annabaaradeke? yaakendre shifarasugalinda baro yavude prashasti adeshte doddadirali adakke moulya kammi alva?
enanteeree?