Tuesday, November 4, 2008

ಪೇಜಾವರ ಶ್ರೀಗಳ ಸಾರ್ವಜನಿಕ ಮನರಂಜನೆ!

ಪೇಜಾವರ ಶ್ರೀಗಳು ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಶ್ರೀಗಳು ಕರ್ನಾಟಕದ ಮಟ್ಟಿಗೆ ಹಿಂದೂ ಧರ್ಮದ ಅಘೋಷಿತ (ಸ್ವಘೋಷಿತವೂ ಹೌದು) ವಕ್ತಾರರು. ಹಿಂದೂ ಧರ್ಮಕ್ಕೆ ಸಂಬಂಧಿಸಿದ ಎಲ್ಲ ವಾದವಿವಾದಗಳ ಸಂದರ್ಭಗಳಲ್ಲೂ ಶ್ರೀಗಳು ಕ್ರಿಯಾತ್ಮಕವಾಗಿ ಪಾಲ್ಗೊಳ್ಳುತ್ತಾರೆ ಮತ್ತು ತಮ್ಮದೇ ಆದ ವಿಚಾರಧಾರೆಗಳಿಂದ ಹಿಂದುತ್ವವನ್ನು, ಇಡೀ ಸಂಘಪರಿವಾರವನ್ನು ಸಮರ್ಥಿಸಿಕೊಳ್ಳುತ್ತಾರೆ. ಅವರ ದುರದೃಷ್ಟವೆಂದರೆ ಹಿಂದೂಧರ್ಮದ ವಕ್ತಾರರ ಸ್ಥಾನವನ್ನು ಹೊಸದಾಗಿ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಕಸಿದುಕೊಂಡುಬಿಟ್ಟಿದ್ದಾರೆ. ಹೀಗಾಗಿ ಪೇಜಾವರರು ಗಲಿಬಿಲಿಗೊಂಡು ದಲಿತರ ಬೌದ್ಧಧರ್ಮ ಸ್ವೀಕಾರವನ್ನು ತಮ್ಮದೇ ಆದ ಭಾಷೆಯಲ್ಲಿ ಖಂಡಿಸಿ ಮಾತನಾಡಿದ್ದಾರೆ, ತನ್ಮೂಲಕ ಭೈರಪ್ಪನವರಿಂದ ಮತ್ತೆ ತಮ್ಮ ಸ್ಥಾನ ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ.ಪೇಜಾವರರು ನೀಡಿರುವ ಹೇಳಿಕೆ ನ.೩ರ ಎಲ್ಲ ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಿಜಯ ಕರ್ನಾಟಕದಲ್ಲಿ ಹೇಳಿಕೆಯ ಪೂರ್ಣಪಾಠ ಪ್ರಕಟವಾಗಿದೆ. ಪೇಜಾವರರ ಹೇಳಿಕೆಯಲ್ಲೇ ದ್ವಂದ್ವವಿದೆ. ಹೇಳಿಕೆಯ ಆರಂಭದಲ್ಲೇ ಬೌದ್ಧಧರ್ಮವೂ ಹಿಂದೂ ಧರ್ಮದ ಒಂದು ಭಾಗವೇ ಆಗಿದೆ ಎಂದು ಪೇಜಾವರರು ಹಸಿಹಸಿ ಸುಳ್ಳು ಹೇಳುತ್ತಾರೆ. ಒಂದು ವೇಳೆ ಇವರು ಹೇಳುವ ಸುಳ್ಳು ನಿಜವೇ ಆಗಿದೆ ಎಂದು ಒಪ್ಪಿಕೊಂಡರೂ ಬೌದ್ಧಧರ್ಮಕ್ಕೆ ಮತಾಂತರಗೊಳ್ಳಬೇಡಿ ಎಂದು ಹೇಳುವ ಅಗತ್ಯವಾದರೂ ಏನಿತ್ತು. ದಲಿತರು ಬೌದ್ಧಧರ್ಮಕ್ಕೆ ಹೋದರೂ ಪೇಜಾವರರ ಥಿಯರಿಯಂತೆ ಅವರು ಹಿಂದೂ ಧರ್ಮದಲ್ಲೇ ಉಳಿಯುತ್ತಾರಲ್ಲವೆ? ಹಾಗಿದ್ದ ಮೇಲೆ ಮತಾಂತರವಾಗಬೇಡಿ ಎಂದು ಹೇಳುವ ಅಗತ್ಯವಾದರೂ ಏನು?ಪ್ರತಿಯೊಬ್ಬರಿಗೂ ತಮಗೆ ಇಷ್ಟವಾದ ಧರ್ಮವನ್ನು ಸ್ವೀಕರಿಸುವ ಹಕ್ಕಿದೆ, ಆದುದರಿಂದ ಇಂತಹ ಮತಾಂತರವನ್ನು ನಾವು ವಿರೋಧಿಸಲಾರೆವು ಎಂದು ಪೇಜಾವರರು ಹೇಳುತ್ತಾರೆ. ಮುಂದುವರೆದು ಬೌದ್ಧಧರ್ಮದಲ್ಲೂ ಪರಲೋಕ, ಸ್ವರ್ಗ, ನರಕ, ಪುಣ್ಯ, ಪಾಪ, ಪುನರ್ಜನ್ಮ, ಮೂರ್ತಿಪೂಜೆಗಳು ಇರುವುದರಿಂದ ಅಲ್ಲಿಗೆ ಹೋಗುವುದರಿಂದ ಪ್ರಯೋಜನವಿಲ್ಲ ಎಂದು ಪರೋಕ್ಷ ವಿರೋಧ ವ್ಯಕ್ತಪಡಿಸುತ್ತಾರೆ. ಪೇಜಾವರರು ಎಷ್ಟು ಗೊಂದಲಗಳನ್ನು ಕೆಡವಿಕೊಂಡಿದ್ದಾರೆಂದರೆ ಒಂದು ವೇಳೆ ಮತಾಂತರಗೊಳ್ಳುವುದಾದರೆ ದಯಾನಂತ ಸರಸ್ವತಿಯವರ ಆರ್ಯ ಸಮಾಜಕ್ಕೆ ಸೇರುವುದು ಹೆಚ್ಚು ಉಚಿತ ಎಂದು ಅಪ್ಪಣೆ ಕೊಡುತ್ತಾರೆ. ಆರ್ಯ ಸಮಾಜವನ್ನು ಸೇರುವುದು ಉಚಿತ ಎಂದು ಹೇಳುವ ಪೇಜಾವರರೇ ಮೊದಲು ಆ ಕೆಲಸ ಮಾಡಲಿ, ಆಮೇಲೆ ಆ ಸಮಾಜವನ್ನು ಸೇರುವ ಕುರಿತು ಪರಿಶೀಲಿಸೋಣ ಎಂದು ದಲಿತರು ಹೇಳಿದರೆ ಅವರು ಏನನ್ನುತ್ತಾರೆ?ವಿವಿಧ ಧರ್ಮಗಳು ಜಗತ್ತನ್ನು ಕಂಡಿರುವ ಕುರಿತಾದ ವಿಶ್ಲೇಷಣೆಯನ್ನು ಪೇಜಾವರರು ಮಾಡುತ್ತಾರೆ. ಜಗತ್ತು ಸತ್ಯವೋ, ಮಿಥ್ಯೆಯೋ ಅಥವಾ ಇವರೆರಡರ ನಡುವಿನ ಮಧ್ಯದ ಸ್ಥಿತಿಯೋ ಇದೆಲ್ಲವೂ ಈ ಹೊತ್ತಿನಲ್ಲಿ ದಲಿತರಿಗೆ ಪ್ರಸ್ತುತವಾದ ವಿಷಯಗಳೇ ಅಲ್ಲ ಎಂಬುದು ಪೇಜಾವರರಿಗೆ ಹೊಳೆಯುವುದಿಲ್ಲ. ಹೊಳೆದರೂ ಅವರು ಸುಮ್ಮನೆ ಎಲ್ಲರನ್ನು ಕನ್‌ಫ್ಯೂಸ್ ಮಾಡಿ ತಮ್ಮ ವಿಚಾರಧಾರೆ ಹೇರಲು ಯತ್ನಿಸುತ್ತಾರೆ.ತಮ್ಮ ಹೇಳಿಕೆಯ ಕೊನೆಯ ಭಾಗದಲ್ಲಿ ಪೇಜಾವರರು ತಮ್ಮ ನಿಜವಾದ ಅಜೆಂಡಾವನ್ನು ಹಿಡಿದು ಮಾತನಾಡುತ್ತಾರೆ. 'ಇನ್ನೂ ಒಂದು ಹೆಜ್ಜೆ ಮುಂದುವರೆದು ಹೇಳುವುದೇನೆಂದರೆ ದಲಿತರು ಹಿಂದೂ ಧರ್ಮವನ್ನು ತೊರೆದು ಮತಾಂತರಗೊಳ್ಳುವುದರ ಬದಲು ಹಿಂದೂ ಧರ್ಮದಲ್ಲಿಯೇ ಇರುವುದು ಒಳ್ಳೆಯದು ಎಂದು ಅವರು ತಮ್ಮ ನಿಜಸ್ವರೂಪದೊಂದಿಗೆ ಪ್ರತ್ಯಕ್ಷರಾಗುತ್ತಾರೆ.ಪೇಜಾವರರು ತಮ್ಮ ಹೇಳಿಕೆಗೆ ಒಂದು ಬಗೆಯ ಬ್ಲಾಕ್‌ಮೇಲ್ ಸ್ಪರ್ಶವನ್ನೂ ನೀಡುತ್ತಾರೆ. ದಲಿತರು ಮತಾಂತರಗೊಳ್ಳುವುದರಿಂದ ಹಿಂದೂ ಧರ್ಮದಲ್ಲಿರುವ ದಲಿತರ ಸಂಖ್ಯೆಯೂ ಕಡಿಮೆಯಾಗಿ ಅವರು ಇನ್ನೂ ಅಲ್ಪಸಂಖ್ಯಾತರೇ ಆಗುತ್ತಾರೆ ಎಂದು ಹೇಳುವ ಮೂಲಕ ದಲಿತರಲ್ಲಿ ಭೀತಿ ಹುಟ್ಟಿಸಲು ಯತ್ನಿಸುತ್ತಾರೆ. ಪ್ರಗತಿಪರ ಹಿಂದೂ ಸಮಾಜದ ಸಹಕಾರದಿಂದ ಅನ್ಯಾಯದ ವಿರುದ್ಧವಾಗಿ ಸಂಘಟಿತವಾಗಿ ಹೋರಾಟ ಮಾಡುವುದೇ ಸರಿಯಾದ ಮಾರ್ಗ ಎನ್ನುವುದು ಪೇಜಾವರರು ಕಂಡುಕೊಂಡಿರುವ, ದಲಿತರಿಗೆ ನೀಡಿರುವ ಹೊಸಮಾರ್ಗ. ಆದರೆ ಪೇಜಾವರರು ಪ್ರಗತಿಪರ ಹಿಂದೂ ಸಮಾಜ ಯಾವುದು ಎಂಬುವುದನ್ನು ಸ್ಪಷ್ಟಪಡಿಸುವುದಿಲ್ಲ. ಪೇಜಾವರರು ಪ್ರತಿನಿಧಿಸುವ ಶೂದ್ರ ಸಮೂಹದ ಪ್ರತ್ಯಕ್ಷ ವಿರೋಧಿ, ಮನುಸ್ಮೃತಿಯ ಪ್ರತಿಪಾದಕ ವಿಶ್ವ ಹಿಂದೂ ಪರಿಷತ್ ಅಥವಾ ಆರ್‌ಎಸ್‌ಎಸ್ ಪ್ರಗತಿಪರ ಹಿಂದೂ ಸಮಾಜವೆ? ಅಥವಾ ಅಸ್ಪೃಶ್ಯತೆಯ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿರುವಂತೆ ನೋಡಿಕೊಂಡಿರುವ ಪೇಜಾವರರು ಕುಳಿತಿರುವ ಮಠಪೀಠಗಳೇ ಪ್ರಗತಿಪರ ಹಿಂದೂ ಸಮಾಜವೆ? ಅಥವಾ ಹಿಂದುಳಿದ-ದಲಿತರನ್ನೇ ಇತರ ಧರ್ಮೀಯರ ವಿರುದ್ಧ ಎತ್ತಿಕಟ್ಟಿ ಬಲಿಪಶುಗಳನ್ನಾಗಿ ಮಾಡಲಾಗುವ ಭಜರಂಗದಳ ಪ್ರಗತಿಪರ ಹಿಂದೂ ಸಮಾಜವೇ?ದಲಿತರು ಹೋರಾಟ ಮಾಡಿಕೊಂಡೇ ಇರಬೇಕು ಎಂದು ಹೇಳುವ ಮನಸ್ಥಿತಿಯಲ್ಲೇ ಅಸ್ಪೃಶ್ಯತೆ, ವರ್ಣಾಶ್ರಮ ವ್ಯವಸ್ಥೆ ಜೀವಂತವಾಗಿರಬೇಕು ಎಂಬ ಧ್ವನಿಯನ್ನು ಗುರುತಿಸಬಹುದು.ದಲಿತರಿಗೆ ಭಕ್ತಿದೀಕ್ಷೆ ಹಾಗು ಮಂತ್ರದೀಕ್ಷೆಗಳನ್ನು ನೀಡುತ್ತೇವೆ ಎಂದು ಪೇಜಾವರರು ಘೋಷಿಸಿದ್ದಾರೆ. ತಮ್ಮ ಮಠಕ್ಕೆ ಓರ್ವ ದಲಿತನನ್ನು ಉತ್ತರಾಧಿಕಾರಿಯನ್ನಾಗಿ ಮಾಡಿ ನೋಡೋಣ ಎಂದು ಪ್ರಗತಿಪರರು ಕೇಳುತ್ತಲೇ ಇದ್ದಾರೆ. ಇದಕ್ಕೆ ಮಾತ್ರ ಪೇಜಾವರರು ಜಾಣ ಮೌನ ಮುಂದುವರೆಸುತ್ತಾರೆ. ನಿಮ್ಮ ಎಲ್ಲ ಮಠಪೀಠಗಳನ್ನು ಅಸ್ಪೃಶ್ಯರಿಗೆ ಬಿಟ್ಟುಕೊಡಿ ಎಂದು ಒಡ್ಡಲಾಗಿರುವ ಸವಾಲನ್ನು ಸ್ವೀಕರಿಸಲು ಪೇಜಾವರರೂ ಸೇರಿದಂತೆ ಯಾವ ಮಠಾಧೀಶರೂ ತಯಾರಿಲ್ಲ.ಇನ್ನಷ್ಟು ಶತಮಾನಗಳ ಕಾಲ ದಲಿತರನ್ನು ಹಿಂದುಳಿದವರನ್ನು ತುಳಿಯುತ್ತಲೇ ಇರಬಹುದು, ತುಳಿಯುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂದುಕೊಂಡಿದ್ದ ಯಥಾಸ್ಥಿತಿವಾದಿಗಳೆಲ್ಲ ಈಗ ಭೀತಿಗೆ ಸಿಲುಕಿದ್ದಾರೆ. ದಲಿತರು, ಹಿಂದುಳಿದವರು ಬೇರೆ ಬೇರೆ ಧರ್ಮಗಳ ಕಡೆ ಕಣ್ಣು ಹರಿಸಿರುವುದು ಈ ಭೀತಿಗೆ ಕಾರಣ. ಹೀಗಾಗಿ ಇಷ್ಟು ವರ್ಷಗಳ ಕಾಲ ಇಲ್ಲದ ದಲಿತರ ಮೇಲಿನ ಪ್ರೀತಿ ಈಗ ಪೇಜಾವರರಂಥವರಿಗೆ ಹುಟ್ಟಿಕೊಂಡಿದೆ!ಹಿಂದೂ ಧರ್ಮದಲ್ಲೇ ಇರಿ, ಒಗ್ಗಟ್ಟಾಗಿ ನ್ಯಾಯಕ್ಕಾಗಿ ಹೋರಾಡೋಣ ಎಂಬಂಥ ಹಾಸ್ಯಾಸ್ಪದ ಮಾತುಗಳಿಂದ ಪೇಜಾವರರು ಕ್ರಾಂತಿಕಾರಿಯಾಗಲು ಹೊರಟಿದ್ದಾರೆ. ಕುರಿಯನ್ನು ಕಾಯಲು ತೋಳವನ್ನು ನಿಯೋಜಿಸುವುದೇ ಸೂಕ್ತ ಎಂಬಂತಿದೆ ಅವರ ಮಾತು.ಮಾಧ್ಯಮಗಳ ಮೂಲಕ ಪೇಜಾವರರು ಆಗಾಗ ಇಂಥ ಸಾರ್ವಜನಿಕ ಮನರಂಜನೆಯನ್ನು ನೀಡುತ್ತಿರುತ್ತಾರೆ. ಇಂಥವುಗಳನ್ನು ನಮ್ಮ ಮಾಧ್ಯಮಗಳು ಆದ್ಯತೆ ನೀಡಿ ಪ್ರಕಟಿಸುತ್ತಲೇ ಇರುತ್ತವೆ. ಈ ಆತ್ಮವಂಚನೆಯ ಪರಿಪಾಠಗಳಿಗೆ ಕೊನೆಯೇ ಇಲ್ಲವೇ ಎಂಬುದು ನಮ್ಮ ಪ್ರಶ್ನೆ.

8 comments:

Anonymous said...

enough is said about this. pls give a break and concentrate on media affairs.

Anonymous said...

(in continuation of the above)

The author looks as much a joker as the swamiji whom he attacks in this post, if for nothing else for their respective obsessive and compulsive preoccupation with this issue which means plain nonsense to an average dalit as well as brahmin, and all those who are in between...Both the author and the frail swamiji are under an incurable illusion that they are championing something fundamental to society. Sorry sirs, people have better things to mind about.

Anonymous said...

ಮೀಡಿಯಾ ಬಗ್ಗೆ ಮಾತ್ರ ಬರೀರಿ, ಪೇಜಾವರ, ಭೈರಪ್ಪ, ಯಡಿಯೂರಪ್ಪ ಬಗ್ಗೆ ಬರೀಬೇಡಿ ಎಂದು ಆಗಾಗ ಹಲವರು ಮೈಪರಚಿಕೊಳ್ಳುತ್ತಾರೆ. ಮೊದಲ ಎರಡು ಕಮೆಂಟ್‌ಗಳನ್ನು ಬರೆದಿರುವವರದೂ ಇದೇ ರೋಧನೆ.
ಪೇಜಾವರರಂಥವರು ಜನರನ್ನು ದಿಕ್ಕು ತಪ್ಪಿಸುವುದು ಮೀಡಿಯಾಗಳಲ್ಲೇ. ಇವರಂಥವರಿಗೆ ಹೆಚ್ಚಿನ ಪ್ರಚಾರ, ಆದ್ಯತೆ ನೀಡುವ ಮೂಲಕ ಮೀಡಿಯಾಗಳೂ ಸಹ ಪಕ್ಷಪಾತದ ಧೋರಣೆ ಅನುಸರಿಸುತ್ತಲೇ ಬಂದಿವೆ. ಹೀಗಾಗಿ ಸುದ್ದಿಮಾತು ಇಂಥ ಹೇಳಿಕೆಗಳನ್ನು ನಿಕಷಕ್ಕೆ ಒಳಪಡಿಸಿದರೆ ತಪ್ಪೇನು? ಅದಕ್ಕೇಕೆ ಮೈಪರಚಿಕೊಳ್ಳಬೇಕು?
ಮೀಡಿಯಾಗಳಲ್ಲಿ ಬರುವ ಗಣ್ಯರ ಹೇಳಿಕೆಗಳು ಆಯಾ ಮೀಡಿಯಾಗಳ ಅಭಿಪ್ರಾಯವಲ್ಲ ನಿಜ, ಆದರೆ ಯಾರ ಹೇಳಿಕೆಗೆ ಎಷ್ಟು ಪ್ರಾತಿನಿಧ್ಯ ನೀಡಬೇಕು ಎಂದು ನಿರ್ಧಾರ ಮಾಡುವಲ್ಲೇ ಮೀಡಿಯಾಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಿಕೊಳ್ಳುತ್ತವೆ. ಹೀಗಾಗಿ ಸುದ್ದಿಮಾತು ಇಂಥ ವಿಶ್ಲೇಷಣೆಗಳನ್ನು ಆಗಾಗ ಮಾಡುತ್ತ ಹೋಗಲಿ.
ಮೈ ಪರಚಿಕೊಳ್ಳುವವರು ಪರಚಿಕೊಳ್ಳಲಿ.
-ರತ್ನಾಕರ ಶೆಟ್ಟಿ, ಬೈಂದೂರು

Anonymous said...

ವಿಶ್ವೇಶತೀರ್ಥ ಶ್ರೀಗಳ ಇಬ್ಬಂದಿತನವನ್ನು ಚೆನ್ನಾಗಿ ಬಯಲು ಮಾಡಿದ್ದೀರಿ. ನೀವು ಬರೆದಂತೆ ಈ ನಾಟಕಗಳನ್ನು ಆಡುವ ಬದಲು ಅಸ್ಪೃಶ್ಯರಿಗೆ ಎಲ್ಲ ಮಠ-ಮಂದಿರಗಳನ್ನು ಬಿಟ್ಟುಕೊಡಲು ಅವರು ಸಿದ್ಧರಿದ್ದಾರೆಯೇ? ಪೇಜಾವರರ ಪರ ವಕಾಲತ್ತು ವಹಿಸಿಕೊಳ್ಳುವವರು ಇದನ್ನು ಶ್ರೀಗಳ ಗಮನಕ್ಕೆ ತಂದು ಅವರ ಮನವೊಲಿಸುವರೆ?
ಬೂಟಾಟಿಕೆಯ ಮಾತುಗಳಿಂದ ಹಿಂದೂ ಧರ್ಮ ಉದ್ಧಾರವಾಗುವುದಿಲ್ಲ. ಕ್ರಿಯೆ ಅತ್ಯಗತ್ಯ. ಸುಳ್ಳು ಅನುಕಂಪ ತೋರುವ ಮೂಲಕ ಜನರನ್ನು ದಾರಿತಪ್ಪಿಸುವ ಈ ಜನರು ಈಗ ತಮ್ಮ ಸಾಮ್ರಾಜ್ಯ ಕುಸಿಯುತ್ತಿರುವುದರಿಂದ ಭೀತರಾಗಿದ್ದಾರೆ.
ನಿಜಕ್ಕೂ ಈ ಹೊತ್ತಿನಲ್ಲಿ ಅನುಕಂಪಕ್ಕೆ ಅರ್ಹರಾಗಿರುವುದು ಪೇಜಾವರ ಶ್ರೀಗಳೆ. ಯಾಕೆಂದರೆ ಅವರು ಪ್ರತಿಪಾದಿಸುವ ಬ್ರಾಹ್ಮಣಧರ್ಮ ಇವತ್ತು ಶಿಥಿಲಗೊಳ್ಳುತ್ತಿದೆ. ಅದು ಜನವಿರೋಧಿಯೆಂದು ಸ್ವತಃ ಪೇಜಾವರರೇ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಪೇಜಾವರರು ತಮ್ಮ ಅನುಯಾಯಿಗಳ ಜತೆ ಬೇರೆ ಧರ್ಮಕ್ಕೆ ಮತಾಂತರ ಹೊಂದುವುದು ಒಳ್ಳೆಯದು.
-ಗಣಪತಿ ಹೆಗಡೆ

Anonymous said...

swamee baindoor rathnakara shetre, comments section iruvude namma namma abhiprayagalannu blog nadesuvavara jate hanchikollalu. Adu mai parachuva kriye alla. charcheya baaga. naavu helidannu avaru oppikollabekaagilla. Avara samarthane avaru mandisabahudu. Eniddaroo naavu my parachikondare nimma maigenoo gaayavaagudilla taane?

Media dalli Pejavara ityaadigala varadi atiranjitavaagiyoo, atiyaagiyoo baruvudiddare adannu vastu nishtavaagi bareyabeku. Summane mediadavaru pejavararigo, matyaarigo hechchu praamkhyate koduttaare, inyaavudakko kadime koduttaare ennuvudaralli arthavilla. Yaava media, yaavaga, yaava statement bagge adhika prachaara ellaa bareyabekaaguttade. Illi Basheer bareda lekhana nodi: konepaksha ashtaadaroo vastunishtavaagiddare adarinda suddhimaatinanta vedikeya bagge gaurava mooduttade. Summane idda stereotype galannu innondu extremenalli pratipaadisuttaa hoguvudaralli arthavilla antha nanna bhaavane. Neevu oppikollabekaagilla.

Aarambhadalli bharavase moodisida suddimaatu barabaruttaa vayyaktika teekegalige mattu halasalu vaadagalige vedikeyaagudannu nodi ee abhipraaya ashte.

ಗೋವಿಂದ್ರಾಜ್ said...

Pejavar seer always do a high drama when ever he addresses media persons. He is after all a seer as other are!Why do media persons give such a great importance his speeches. I personally consider him as equal as myself for he never does practice what he utters. First of all, let him give some space to Dalits boys and make them as seers to the mutt and let him speak later: If at all he is really a social reformer as his followers project and he himslef boasts. He wants always to appear in the media rather than doing some social work that would atleat help some communities. He is an heir of Hinduism and he wants to retain the "legacy"(?) of the religion. Nothing more or nothing less. Let him hoarse. If he really has some social committment let him materialise the challeneg posed by the Dalit politicians and dalit leaders.

Anonymous said...

ಪೇಜಾವರ ಶ್ರೀ ಒಬ್ಬ ಖಾವಿ ರಾಜಕಾರಣಿ. ಅವನ ಮಾತುಗಳನ್ನು, ನಡೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಕಿಲ್ಲ. ಮಹಾ ಜಾತಿವಾದಿಯಾಗಿರುವ ಪೇಜಾವರ ಸ್ವಾಮಿಯನ್ನು ಬೆಳೆಸಿದ್ದು ಮತ್ತು ಬೆಳೆಸುತ್ತಿರುವುದು ಮಾಧ್ಯಮದ ಜನಿವಾರಗಳು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈಗಲೂ ಮಾಧ್ಯಮವನ್ನು ತಮ್ಮ ಮುಷ್ಠಿಯಲ್ಲಿಟ್ಟುಕೊಳ್ಳಲು ಎಲ್ಲ ರೀತಿಯಿಂದ ಯತ್ನಿಸುತ್ತಿರುವ ಇವರು, ಇತರ ಧರ್ಮ, ಜಾತಿ ಹಾಗೂ ವಿಷಯಗಳಿಗೆ ಸಂಬಂಧಿಸಿದ ಸುದ್ದಿಗಳ ಕತ್ತು ಹಿಸುಕುತ್ತಿದ್ದಾರೆ.

ಇದರ ಬಗ್ಗೆಯೂ ಸುದ್ದಿಮಾತು ಗೆಳೆಯರು ಬರೆಯಬೇಕೆಂದು ವಿನಂತಿ.

Anonymous said...

ನಿಮಗೆ ಬಂದಿರುವ ಮೂರು ಕಾಮೀಟ್ಗಳಲ್ಲಿ ಎಲ್ಲ ಮಾಧ್ಯಮಗಳು ಪೇಜಾವರರ ಬಾಲದಂತೆ ಎಂದು ಹೇಳಿರುವುದು ಸರಿಯಲ್ಲ. ಯಾಕೆಂದರೆ ಎಲ್ಲ ಮಾಧ್ಯಮಗಳು ಅವರ ವಾಕ್ಯಗಳನ್ನಾಗಲೀ ಅವರ ಹೇಳಿಕೆಗಳನ್ನಾಗಲಿ ಪ್ರಕಟಿಸುವುದಿಲ್ಲ. ಕೆಲ ಮಾಧ್ಯಮಗಲು ಮಾತ್ರ ಅವರ ಎಲ್ಲಾ ಪರಿಪಾಟಲಗಳನ್ನು ಪ್ರಕಟಿಸುತ್ತಾರೆ. ಅಂತಹವರಿಗೆ ಇದೆ ತಟ್ಟಬೇಕಾಗಿದೆ. ಓಕೆ ಏನೇ ಆಗಲಿ ನಿಮ್ಮ ಪೇಜಾವರರ ಸಾರ್ವಜನಿಕ ಮನರಂಜೆ ಲೇಖನ ಮಾತ್ರ ವಾಸ್ತವಕ್ಕೆ ತುಂಬಾ ಹತ್ತಿರವಾದುದು. ಹಾಗೆಯೇ ಮೂರು ಕಾಮೀಟ್ಗಳಲ್ಲಿ ತಿಳಿಸಿರುವಂತೆ ನೀವು ಇತರೆ ಜಾತಿ, ಧರ್ಮ ಹೀಗೆ ಕೆಲವು ವಿಷಯಗಳನ್ನು ಕತ್ತು ಹಿಸುಕಿ ಕೊಲ್ಲುತ್ತಿರುವ ಬಗ್ಗೆ ನೀವು ಇನ್ನಷ್ಟು ಹೆಚ್ಚು ಹೊತ್ತು ನೀಡಿ ಬರೆಯಿರಿ

-ಹರೀಶ್ ಕುಮಾರ್