Wednesday, December 17, 2008

ವಾರಕ್ಕೆ ಒಂದು ಗಂಟೆ...

ರೈತ ಸಂಘದ ಪ್ರೊ. ನಂಜುಂಡಸ್ವಾಮಿ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಇನ್ನೇನು ಅವರು ಮಾತಿಗೆ ಶುರು ಹಚ್ಚಬೇಕು, ಇಂಗ್ಲಿಷ್ ಪತ್ರಿಕೆ ಉದ್ಯೋಗಿಯೊಬ್ಬ, "introduce yourself" ಎಂದ. ಪ್ರೊಫೆಸರ್ ರಾಂಗಾದರು. "You need not attend my press conference. Our farmers do not read your paper" ಎಂದು ಆತನನ್ನು ಹೊರಗಟ್ಟಿದರು. ಈ ಘಟನೆ ಈ ಬ್ಲಾಗ್ ಓದುತ್ತಿರುವ ಬಹುತೇಕರಿಗೆ ಗೊತ್ತಿದ್ದದ್ದೇ. ಇತ್ತೀಚೆಗೆ ನಗರಿ ಬಾಬಯ್ಯ ಒಂದು ಪತ್ರಿಕಾ ಗೋಷ್ಠಿ ಕರೆದಾಗಲೂ ಇಂತಹದೇ ಪ್ರಕರಣ ನಡೆದಿತ್ತು.
ಪ್ರೆಸ್ ಕ್ಲಬ್ ಗೆ ನಿಯಮಿತವಾಗಿ ಭೇಟಿ ನೀಡುವವರಿಗೆ ಇನ್ನೂ ಹೆಚ್ಚಿನ ಘಟನೆಗಳ ಮಾಹಿತಿ ಇರಬಹುದು. ತರುಣ ಪತ್ರಕರ್ತರ ಸಂಖ್ಯೆ ಹೆಚ್ಚುತ್ತಿರುವಂತೆ, ಈ ತೆರನ ಅವಘಡಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣ ಸೂಕ್ತ ತರಬೇತಿ ಇಲ್ಲದೆ ಪತ್ರಕರ್ತರು ನೇರವಾಗಿ ಕ್ಷೇತ್ರಕ್ಕೆ ಕಾಲಿಡುವುದು.
ತರಬೇತಿ ಎಂದಾಕ್ಷಣ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ತರಗತಿಗಳಲ್ಲ. ಹಾಗೆ ನೋಡಿದರೆ, ಇತ್ತೀಚೆಗೆ ಪತ್ರಿಕೋದ್ಯಮದಲ್ಲಿ ಎಂ.ಎ ಪದವಿ ಪಡೆದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಕೆಲವು ಖಾಸಗಿ ಶಾಲೆಗಳಂತೂ ಲಕ್ಷಗಟ್ಟಲೆ ಹಣ ಪಡೆದು ತರಬೇತಿ ನೀಡುತ್ತವೆ. ನಾಲ್ಕು ಗೋಡೆಗಳ ಮಧ್ಯ ನಡೆಯುವ ತರಗತಿಗಳಲ್ಲಿ ಎಲ್ಲವನ್ನೂ ಕಲಿಯುವುದು ಸಾಧ್ಯವಾಗಿದ್ದರೆ, ಇಂದಿನ ಪತ್ರಿಕೋದ್ಯಮ ಉನ್ನತ ಸ್ಥಾನದಲ್ಲಿರಬೇಕಿತ್ತು. ಯಾಕೆ ಹಾಗಿಲ್ಲ. ತಕ್ಷಣಕ್ಕೆ ಎದುರಿಗೆ ಗೃಹ ಮಂತ್ರಿ ಚಿದಂಬರಂ ಅಥವಾ ಕೇಂದ್ರ ಯೋಜನಾ ಆಯೋಗ ಉಪಾಧ್ಯಕ್ಷ ಬಂದರೆ ಪ್ರಶ್ನೆ ಕೇಳಲು ತಡಕಾಡುತ್ತಾರೆ. ಅಷ್ಟೇ ಅಲ್ಲ, ನಮ್ಮದೇ ನೆಲದ ಗಿರೀಶ್ ಕಾಸರವಳ್ಳಿ, ಅನಂತಮುಊರ್ತಿ, ಮಾತನಾಡಿಸುವುದಕ್ಕೂ ಕಷ್ಟ ಪಡುತ್ತಾರೆ.
ಓದುವಿನಡೆಗೆ ಇಲ್ಲದ ಆಸ್ಥೆ ಈ ಪರಿಸ್ಥಿತಿಗೆ ಮುಖ್ಯ ಕಾರಣ.
ಪತ್ರಿಕೋದ್ಯಮ ಪಾಠ ಹೇಳುವ ವಿಶ್ವವಿದ್ಯಾನಿಲಯಗಳು ಇಂದಿನ ಹಣಕಾಸು ಸ್ಥಿತಿ ಬಗ್ಗೆ ಮಾತನಾಡುವುದಿಲ್ಲ. ಭಾರತದ ರಾಜಕೀಯ ಇತಿಹಾಸ ಪತ್ರಕರ್ತನಿಗೆ, ಅದರಲ್ಲೂ ರಾಜಕೀಯ ಸುದ್ದಿ ವರದಿ ಮಾಡುವ ವರದಿಗಾರನಿಗೆ ಬಹುಮುಖ್ಯ ಎಂದು ಪತ್ರಿಕೋದ್ಯಮದ ಮೇಷ್ಟ್ರುಗಳು ಹೇಳುವುದು ತೀರಾ ಕಡಿಮೆ. ಒಂದು ವಸ್ತುನಿಷ್ಠ ವರದಿ ಬರೆಯುವುದು ಸುಲಭದ ಕೆಲಸವಲ್ಲ. ಇಂದಿನ ಯಾವುದೇ ಸುದ್ದಿ ಓದಿದರೂ, ಟಿವಿಯಲ್ಲಿ ನೋಡಿದರೂ ಕಣ್ಣಿಗೆ ರಾಚುವ ಒಂದು ಅಂಶವೆಂದರೆ, ವರದಿಗಾರ ಸುದ್ದಿ ಹೇಳುವುದಕ್ಕಿಂತ ತನ್ನ ಅಭಿಪ್ರಾಯ ಹೇಳುವುದರಲ್ಲಿ ಕಾತುರನಾಗಿರುತ್ತಾನೆ. ಜನರಿಗೆ ಸುದ್ದಿ ಮುಖ್ಯ, ವರದಿಗಾರನ ಅಭಿಪ್ರಾಯವಲ್ಲ. ಹಾಗಾದರೆ ಇದನ್ನು ಪತ್ರಕರ್ತರಿಗೆ ತಿಳಿಸಿ ಹೇಳುವವರು ಯಾರು?
ಅನೇಕರಿಗೆ ಗೊತ್ತಿರಬಹುದು, ಹಿಂದೆ ಪ್ರಜಾವಾಣಿ ಪತ್ರಿಕೆಯಲ್ಲಿ ಸಿನಿಮಾ ವಿಮರ್ಶೆ ಮಾಡುವವರು ಪುಣೆಯ ಸಿನಿಮಾ ಅಂಡ್ ಟೆಲಿವಿಷನ್ ಸಂಸ್ಥೆ ನಡೆಸುವ ಒಂದು ತಿಂಗಳ ಫಿಲ್ಮ್ ಅಪ್ರಿಸಿಯೇಷನ್ ಕ್ರಾಶ್ ಕೋರ್ಸ್ ಹಾಜರಾಗಿ ಬರುತ್ತಿದ್ದರು. ಬೇರೆಯವರು ಸಿನಿಮಾ ವಿಮೆರ್ಶೆ ಮಾಡುವಂತಿರಲಿಲ್ಲ. ಆದರೆ ಈಗ ಹಾಗಿಲ್ಲ. ಸಿನಿಮಾ ಬೀಟ್ ಮಾಡುವವರೆಲ್ಲ ಸಿನಿಮಾ ವಿಮರ್ಶಕರೆ. ಸಿನಿಮಾ ತಂತ್ರಗಾರಿಕೆ ಗಂಧಗಾಳಿ ಗೊತ್ತಿಲ್ಲದಿದ್ದರೂ ಅವರು - ಚಿತ್ರದ ಸಂಗೀತ ಪರವಾಗಿಲ್ಲ, ಛಾಯಾಗ್ರಹಣ ಚೆನ್ನಾಗಿದೆ, ನಟನೆ ಇನ್ನೂ ಸುಧಾರಿಸಬೇಕು, ಕತೆಯಲ್ಲಿ ಬಿಗಿಯಿಲ್ಲ, ನಿರ್ದೇಶಕ ಇನ್ನೂ ಪಳಗಬೇಕು - ಎಂದು ಫರ್ಮಾನು ಹೊರಡಿಸುತ್ತಾರೆ. ಇದು ವಿಪರ್ಯಾಸ.
ಸರಕಾರದ ಯಾವುದೇ ಕಳಪೆ ಕಾಮಗಾರಿ ಬಗ್ಗೆ ಟೀಕೆ ಮಾಡುವುದನ್ನು ತಮ್ಮ 'ಜನ್ಮ ಸಿದ್ಧ ಹಕ್ಕು' ಎಂದೇ ಭಾವಿಸುವ ಪತ್ರಿಕೆಗಳು, ಪತ್ರಿಕೆ ಸಂಪಾದಕರು, ಕಳಪೆ ಪತ್ರಿಕೋದ್ಯಮದ ಬಗ್ಗೆ ಗಮನ ಕೊಡುವುದು ತಮ್ಮ ಕರ್ತವ್ಯ ಎಂದೇಕೆ ಭಾವಿಸುವುದಿಲ್ಲ.
ಇತ್ತೀಚೆಗೆ ಆರಂಭವಾದ ಟೈಮ್ಸ್ ಆಫ್ ಇಂಡಿಯಾ ಕನ್ನಡ ಪತ್ರಿಕೆ ಕಾರ್ಯಾಲಯದಲ್ಲಿ ವಾರಕ್ಕೊಂದು ವಿಶೇಷ ಕಾರ್ಯಕ್ರಮ ಇರುತ್ತೆ. ಬೇರೆ ಬೇರೆ ಕ್ಷೇತ್ರದ ಗಣ್ಯರು ಒಂದು ಗಂಟೆ ಕಾಲ ಪತ್ರಿಕೆ ಸಿಬ್ಬಂದಿ ಜತೆ ಹರಟುತ್ತಾರೆ. ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಈ ಕಾರ್ಯಕ್ರಮ ಇನ್ನಷ್ಟು ಪ್ರೊಫೆಶನಲ್ ಆಗುವ ಅಗತ್ಯವಿದೆ.
ಕೇವಲ ಸಾಹಿತಿ, ಗಿಣಿ ಶಾಸ್ತ್ರ ಹೇಳುವವರು, ದೂರದರ್ಶನ ಕೇಂದ್ರ ನಿರ್ದೇಶಕರು ಬಂದರೆ ಸಾಲದು. ಚಂದ್ರಯಾನ ಸುದ್ದಿ ಹೆಚ್ಚು ಬರುವ ದಿನಗಳಲ್ಲಿ ಒಬ್ಬ ಹಿರಿಯ ವಿಜ್ಞಾನಿ ಬಂದು ಸಿಬ್ಬಂದಿ ಜತೆ ಚಂದ್ರಯಾನ ಕುರಿತು ಉಪನ್ಯಾಸ ನೀಡುವಂತಿರಬೇಕು. ಹಾಗೆಯೇ ಆರ್ಥಿಕ ಕ್ಷೇತ್ರದ ಬದಲಾವಣೆಗಳ ಬಗ್ಗೆ, ದೇಶದ ರಕ್ಷಣಾ ವ್ಯವಸ್ಥೆ ಬಗ್ಗೆ, ಅಂತಾರಾಜ್ಯ ನದಿ ನೀರು ಹಂಚಿಕೆ ಕುರಿತಂತೆ ಉಪನ್ಯಾಸಗಳು ನಡೆಯಬೇಕು. ಆಗ ಪತ್ರಕರ್ತರು ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಸಹಕಾರಿಯಾಗುತ್ತದೆ. ಅದೇನೆ ಇರಲಿ, ಈ ಪತ್ರಿಕೆಯ ಪ್ರಯೋಗ ಮೆಚ್ಚುವಂತಹದ್ದು. ಆದರೆ ಇತರರಿಗೆ ಇದು ಏಕೆ ಮಾದರಿಯಾಗಬಾರದು? ವಾರಕ್ಕೊಮ್ಮೆ ಒಂದು ಗಂಟೆ ಹೊಸ ವಿಚಾರ ತಿಳಿದರೆ ಒಳಿತಲ್ಲವೇ?

7 comments:

Anonymous said...

good observations. you are absolutely right.

Anonymous said...

ಆತುರದ ಅಡುಗೆ ಮಾಡುವುದನ್ನು ಬಿಟ್ಟು ತುಂಬ ತಾಳ್ಮೆಯಿಂದ ಈ ಲೇಖನ ಬರೆದಿದ್ದೀರಿ, ಅಭಿನಂದನೆಗಳು.
ಹಾಗೆಯೇ ನಂಜುಂಡಸ್ವಾಮಿಯವರಿಗೆ ಪರಿಚಯ ಮಾಡಿಕೊಳ್ಳಿ ಎಂದು ಕೇಳಿದವರು ಒಬ್ಬ ಪತ್ರಕರ್ತೆ ಅಂತ ನನ್ನ ನೆನಪು. ಈ ತರಹದ ಸುಮಾರು ಘಟನೆಗಳು ನಡೆದಿವೆ.
ಪ್ರೆಸ್‌ಕ್ಲಬ್‌ನಲ್ಲಿ ಯಾವ ಪತ್ರಿಕೆಗೂ ವರದಿ ಮಾಡದ ಕೆಲವು ತಲೆಮಾಸಿದ ರೋಲ್‌ಕಾಲ್ ಜನರು ಬಂದು ಪ್ರೆಸ್‌ಮೀಟ್‌ಗೆ ಬಂದು ಕುಳಿತುಕೊಳ್ಳುತ್ತಾರೆ. ತಲೆಹರಟೆ ಪ್ರಶ್ನೆ ಕೇಳುತ್ತಾರೆ.
ಮೊನ್ನೆ ಪೊಲೀಸ್ ಅಧಿಕಾರಿಯೊಬ್ಬರು ಸ್ಪೋರ್ಟ್ಸ್ ಈವೆಂಟ್ ಬಗ್ಗೆ ಗೋಷ್ಠಿ ಮಾಡಲು ಬಂದರೆ ನಿಮಗೆ ಯಾರ್ರೀ ಪರ್‍ಮಿಶನ್ ಕೊಟ್ಟವರು ಎಂದು ದಬಾಯಿಸಿದರಂತೆ.
ಇಂಥ ತಲೆಹರಟೆಗಳ ಬಗ್ಗೆನೂ ಬರೆಯಿರಿ

ಬಾನಾಡಿ said...

ದೇಶದ ಕೆಲವೊಂದು ಪತ್ರಿಕೆಗಳು ಕೆಲವೊಂದು ಕ್ಷೇತ್ರದಲ್ಲಿ ಪರಿಣಿತರಾದವರನ್ನು ಪತ್ರಕರ್ತರನ್ನಾಗಿ ನೇಮಕಗೊಳಿಸುವ ವಿಚಾರವನ್ನು ನಾನು ನೋಡಿದ್ದೇನೆ. ಪೆಟ್ರೊಕೆಮಿಕಲ್‍ನಲ್ಲಿ ಇಂಜಿನಿಯರ್ ಡಿಗ್ರಿ ಮಾಡಿ, ಐಐಎಂ ಅಹಮದಾಬಾದ್ ನಲ್ಲಿ ಎಂಬಿಎ ಮಾಡಿದಾತನೊಬ್ಬ ಪೆಟ್ರೊಕೆಮಿಕಲ್ ಬೀಟ್ ಮಾಡುತ್ತಿದ್ದುದನ್ನು ನಾನು ಕಂಡಿದ್ದೇನೆ. ಅವನು ಆ ಉದ್ಯಮದ ತಾಂತ್ರಿಕ ಹಾಗೂ ಆರ್ಥಿಕ ವಿಚಾರಗಳನ್ನು ಓದುಗರಿಗೆ ಮುಟ್ಟಿಸುವ ಪರಿಯನ್ನು ಕಂಡಾಗ ಅತ್ಯಂತ ಸಂತೋಷವಾಗುತ್ತದೆ.
ಸಂವಿಧಾನ ಓದದವರು ರಾಜಕೀಯ ಬೀಟ್ ನಲ್ಲಿ, ಐಪಿಸಿ ಕೋಡ್ ಗೊತ್ತಿಲ್ಲದವರು ಕ್ರೈಂ ಬೀಟ್ ನಲ್ಲಿ, ಚಲನಚಿತ್ರದ ವ್ಯಾಕರಣ ತಿಳಿಯದವರು ಸಿನಿಮಾ ಬೀಟ್ ನಲ್ಲಿ ಕೆಲಸ ಮಾಡುವುದನ್ನು ನೋಡಿದಾಗ ಇವರಿಗೆ ಬರೆಯಲು ಗೊತ್ತಾದರೆ ಸಾಕೆ, ಏನನ್ನು ಬರೆಯಬೇಕು ಎಂದು ಗೊತ್ತಿರಬೇಡವೇ ಎಂದನಿಸುವುದು ಸಹಜ. ಇಂದಿನ ವೇಗದ ಯುಗದಲ್ಲಿ ಸಮಯನೀಡಿ ಒಂದು ವಿಷಯದ ಕುರಿತು ಗಹನವಾದ ಅಧ್ಯಯನ ಮಾಡುವ ವ್ಯವಧಾನವೂ ಯಾರಲ್ಲೂ ಇಲ್ಲ. ಎಲ್ಲಕ್ಕೂ ಗೂಗಲ್ ಇದೆಯಲ್ಲ!!
ಬಾನಾಡಿ

Anonymous said...

negative mindge avakash kodbedi.times of india kannada maaduva samvad bereyavarige sphoorti. intha alochane bere patrikegalu madodrinda ara bare patrakartarigu olledu.

Anonymous said...

this is the most and only sensible post in suddimaatu till now, i suppose!

Harisha - ಹರೀಶ said...

ಮಂಜು ಅವರ ಮಾತನ್ನು ನಾನೂ ಅನುಮೋದಿಸುತ್ತೇನೆ.

Anonymous said...

khandita ella patrakartarigu update agabeku. samidana tilidirabeku. illadiddre avagada aguthe. RDPR minister Shobha taluku panchayiti bagge hellida matu UDAYAVANI TP galannu raddu endu lead madittu. varadigaranige 73ne tiddupadi gottidare e riti varadi baruthirallila allave?