Sunday, March 15, 2009

ಆಯಾಮ ನಾಲ್ಕು, ಪ್ರಶ್ನೆ ಎರಡು

ಪ್ರಜಾವಾಣಿ ಪದ್ಮರಾಜ ದಂಡಾವತಿ ಅಂಕಣ ಆರಂಭಿಸಿದ್ದಾರೆ. ಕಳೆದ ನಾಲ್ಕುವಾರಗಳಿಂದ 'ನಾಲ್ಕನೇ ಆಯಾಮ' ಪ್ರಕಟವಾಗುತ್ತಿದೆ. ಮೊದಲ ಅಂಕಣದಲ್ಲಿ ಯಡಿಯೂರಪ್ಪನ ಆಡಳಿತ ವೈಖರಿಯನ್ನು ಝಾಡಿಸಿದ್ದರು. ಎರಡನೆ ವಾರ 'ಇದು ಚುನಾವಣಾ ಸಮಯ' ಎನ್ನುವ ಧಾಟಿಯಲ್ಲಿ ಒಂದು ಬರಹವಿತ್ತು. ಕಳೆದ ವಾರ ಮಾಧ್ಯಮಗಳನ್ನು ಹಿಗ್ಗಾ ಮುಗ್ಗಾ ಟೀಕಿಸಿದರು. ಮಾಧ್ಯಮಗಳಿಗೆ ಒಂಬುಡ್ಸಮ್ಯಾನ್ ಇದ್ದರೆ ತಪ್ಪೇನು ಎಂದು ವಾದಿಸಿ, ಗೃಹ ಮಂತ್ರಿ ಆಚಾರ್ಯರ ದನಿಗೆ ತಮ್ಮ ದನಿ ಸೇರಿಸಿದ್ದರು.
ಈ ಬಾರಿ ಅವರು ಆಯ್ಕೆ ಮಾಡಿಕೊಂಡಿರುವ ವಿಚಾರ ಕಾಂಗ್ರೆಸ್. ವಯಸ್ಸು, ಒಗ್ಗಟ್ಟು ಹಾಗೂ ಹಣದ ವಿಚಾರಗಳಲ್ಲಿ ಕಾಂಗ್ರೆಸ್ ಇತರ ಪಕ್ಷಗಳಿಗಿಂತ ತೀರಾ ಹಿಂದುಳಿದಿದೆ ಎಂಬುದು ಅವರ ಒಟ್ಟಾರೆ ಅಭಿಪ್ರಾಯ. ಈ ಬರಹ ಓದಿದ ನಂತರ ಎದ್ದು ನಿಂತ ಎರಡು ಪ್ರಶ್ನೆಗಳನ್ನಷ್ಟೆ ಇಲ್ಲಿ ಪಟ್ಟಿ ಮಾಡುತ್ತಿದ್ದೇವೆ.

1. ದಂಡಾವತಿಯವರ ಪ್ರಕಾರ 'ಬಿಜೆಪಿಯಲ್ಲಿ ಯಡಿಯೂರಪ್ಪ ಅವರೊಬ್ಬರೇ 60 ದಾಟಿದವರು. ಉಳಿದವರೆಲ್ಲ ಕಾಂಗ್ರೆಸ್ ನ ಘಟಾನುಘಟಿ ನಾಯಕರ ಹಾಗೆ ವಯಸ್ಸಾದವರಲ್ಲ'. ಈ ಮಾತು ಒಪ್ಪತಕ್ಕದ್ದೇ? ಯಡಿಯೂರಪ್ಪನ ಪಕ್ಷದಲ್ಲಿರುವ ರಾಮಚಂದ್ರಗೌಡ (71), ಡಾ.ವಿ.ಎಸ್ ಆಚಾರ್ಯ (69), ಡಿ.ಎಚ್ ಶಂಕರಮೂರ್ತಿ (69), ಸಿ.ಎಂ ಉದಾಸಿ (70+) - ಇವರೆಲ್ಲರೂ ಇನ್ನೂ ಹದಿಹರೆಯದವರೆ? ಚುನಾವಣೆಗೆ ಸ್ಪರ್ಧಿಸುತ್ತಿರುವ ರೇವುನಾಯಕ ಬೆಳಮಗಿ, ಬೀದರ್ ನ ಗುರುಪಾದಪ್ಪ ನಾಗಮಾರಪಲ್ಲಿ ಇನ್ನೂ ಗೋಲಿ ಆಡುವ ಮಕ್ಕಳೆ? ಹೋಗಲಿ, ಬಿಜೆಪಿ ತನ್ನ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿರುವ ಎಲ್ ಕೆ ಅಡ್ವಾನಿ (82) ಗೇನು ಕಡಿಮೆ ವಯಸ್ಸೆ?

2. ಕಾಂಗ್ರೆಸ್ ನಲ್ಲಿ ಒಗ್ಗಟ್ಟಿಲ್ಲ ಎಂಬುದು ಸತ್ಯ. ಖರ್ಗೆ ಕಂಡರೆ ಸಿದ್ದರಾಮಯ್ಯನಿಗೆ ಆಗುವುದಿಲ್ಲ. ಷರೀಫ್ ರನ್ನು ಕಂಡರೆ ಇಬ್ರಾಹಿಂಗೆ ಆಗುವುದಿಲ್ಲ. ಆದರೆ ಕಾಂಗ್ರೆಸ್, ಒಗ್ಗಟ್ಟಿನ ವಿಚಾರದಲ್ಲೂ ಇತರೆ ಪಕ್ಷಗಳಿಗೆ ಸಾಟಿಯಲ್ಲ ಎನ್ನುವಾಗಲಾದರೂ, ಅಂಕಣಕಾರರಿಗೆ ಮೊನ್ನೆ ಮೊನ್ನೆ ನಡೆದ ಬಿಜೆಪಿ ಬೀದಿ ಜಗಳ ನೆನಪಿಗೆ ಬರಲಿಲ್ಲವೆ?
ಪಕ್ಷದ ಅಧ್ಯಕ್ಷರನ್ನು ಹಾಗೂ ಮುಖ್ಯಮಂತ್ರಿಯನ್ನು ಮೂರು ಮಂದಿ ಹಾಲಿ ಸಂಸದರೇ (ಯತ್ನಾಳ್, ಮಲ್ಲಿಕಾರ್ಜುನಯ್ಯ, ಕೆ.ಬಿ ಶಾಣಪ್ಪ) ಸರ್ವಾಧಿಕಾರಿಗಳು ಎಂದು ದೂರಿ, 'ಬಿಜೆಪಿ ಉಳಿಸಿ' ಆಂದೋಲನದ ಮಾತುಗಳನ್ನಾಡಿದ್ದು ತೀರಾ ಕಡೆಗಣಿಸಬೇಕಾದ ಸಂಗತಿಯೆ? ಅನಂತಕುಮಾರ್ ಕೂಡಾ ಬಹಿರಂಗವಾಗಿ ಸದಾನಂದಗೌಡರನ್ನು ಟೀಕಿಸಿದ್ದು ಸುಳ್ಳೆ?
---
ಅಂಕಣ ಬರಹ ಒಂದು ಕಲೆ. ಬರಹವನ್ನು ಓದಿ ಮುಗಿಯುವ ಹೊತ್ತಿಗೆ ಓದುಗನಲ್ಲಿ ಒಂದು ಅಭಿಪ್ರಾಯ ಮೊಳಕೆ ಹೊಡೆಯಬೇಕು. ಅದು ಸಾಧ್ಯವಾಗುವುದು ಬರಹಗಾರ ತನ್ನ ನಿಲುವನ್ನು ಸೂಕ್ತ ಆಧಾರಗಳಿಂದ ಬೆಂಬಲಿಸಿದಾಗ ಮಾತ್ರ. ಅದು ಸಾಧ್ಯವಾಗದಿದ್ದಾಗ ಇಂತಹ ಪ್ರಶ್ನೆಗಳು ಏಳುತ್ತವೆ. ಅಂದಹಾಗೆ ಒಂದು ಅಭಿಪ್ರಾಯವನ್ನು ಮಂಡಿಸುವುದೇ ಅಂಕಣಕಾರನ ಏಕಮೇವ ಉದ್ದೇಶವೂ ಆಗಬೇಕಿಲ್ಲ. ಒಂದು ಘಟನೆ, ಬೆಳವಣಿಗೆಯನ್ನು ನಾನಾ ಕೋನಗಳಿಂದ ನೋಡುವುದು, ಆ ಮೂಲಕ ಹೊಸ ಹೊಳಹುಗಳನ್ನು ಓದುಗನಿಗೆ ತಲುಪಿಸಿದರೆ ಅಂಕಣ ಯಶಸ್ವಿಯಾಗುತ್ತದೆ ಅಲ್ಲವೆ?

4 comments:

Anonymous said...

ಸುದ್ದಿಮಾತು ಬ್ಲಾಗ್ ಓದುವ ಕೆಲವೇ ನಿಮಿಶಗಳ ಹಿಂದೆ ಪ್ರಜಾವಾಣಿ ಓದ್ತಾ ಇದ್ದೆ ಪದ್ಮರಾಜ ದಂಡವತಿ ಅವ್ರ ಪೋಟೋ ನೋಡಿ ಅಚ್ಚರಿ ಆಗಿ ಹಾಗೆ ಕಣ್ಣಾಡಿಸಿದೆ, ಎಂಥಾ ಬರಹ ಅಂತಿರಿ ಅಬ್ಬ ನಾನು ಯಾವತ್ತು ಅಂತ ಅಂಕಣ ಓದಿಲ್ಲ ಅಸ್ಟು ಮಾಹಿತಿ, ಬರಹದಲ್ಲಿ ಒಗಟು, ಯೋಚನೆಯಲ್ಲಿ ಸಂಕೀರ್ಣತೆ, ಓದಿದವರಿಗೆ ಇನ್ನು ಹತ್ತು ಬಾರಿ ಓದಬೇಕೆಂಬ ಕನ್ಪ್ಯೂಶನ್....! ಪತ್ರಕರ್ತ ಮಿತ್ರನೊಬ್ಬ ಹೇಳಿದಂತೆ ಶಾಂತಕುಮಾರ್ ಮತ್ತೆ ಪ್ರಜಾವಾಣಿ ಉಸ್ತುವಾರಿ ಹೊತ್ತುಕೊಂಡ ಮೇಲೆ ಎರಡು ನಿರ್ದಾರ ಮಾಡಿದರಂತೆ ಎರಡು ವಾರಕ್ಕೆ ಒಮ್ಮೆ ಬರೆಯವ ದಿನೇಶ್ ಅಮೀನ್ ಮಟ್ಟು ಪ್ರತಿ ವಾರ ಬರೆಯಬೇಕು, ಬರೆಯುವುದನ್ನು ಮರೆತಿರುವ ಪದ್ಮರಾಜ ದಂಡವತಿ ಬರೆಯಬೇಕು ಅಂತ,
ಈಗ ಯಾಕೋ ಶಾಂತಕುಮಾರ್ ಮತ್ತೆ ಯೋಚಿಸಬೇಕು ಅನಿಸುತ್ತೆ..
ಎಸ್. ಗೌಡ

Anonymous said...

ದಂಡಾವತಿ ಬಿ.ಜೆ.ಪಿ ಕಾರ್ಯಕರ್ತರಂತೆ ಬರೆದಿದ್ದಾರೆ, ನೆಎವು ಅದನ್ನ ಕಾಂಗ್ರೆಸ್ ಕಾರ್ಯಕರ್ತರಂತೆ ವಿರೋಧಿಸಿದೀರಿ. ಸರಿಯಾಗಿದೀರಿ ಇಬ್ರೂನು...

ಗೋವಿಂದ್ರಾಜ್ said...

It seems that the all people with saffron idealogy in Prajavani will write columns then get recognition later jump into action to mint money using their political contacts....You dont criticise because RPJ's tradition is on. That's it.

Anonymous said...

ಅಜಿತ್ ಅವರೇ,
ನಿಮ್ಮ ಕಾಮೆಂಟ್ ಗೆ ಥ್ಯಾಂಕ್ಸ್ ,
ಮತೊಮ್ಮೆ ನನ್ನ ಕಾಮೆಂಟ್ ಓದಿ.
ನೀವು ಬರೆದಿರುವುದನ್ನು ನೀವೇ ಮತೊಮ್ಮೆ ಓದಿಕೊಳ್ಳಿ,
ಆ ನಂತರವೂ ನಿಮಗೆ ನಾನು ಕಾಂಗ್ರೆಸ್ ಕಾರ್ಯಕರ್ತ ಅನ್ನಿಸಿದ್ರೆ
ಒಂದು ಬಾರಿ ಕನ್ನಡಿ ಮುಂದೆ ನಿಂತು ಯೋಚಿಸಿ
ಮತೊಮ್ಮೆ ಕಾಮೆಂಟ್ ಮಾಡಿ,
ಎಸ್ ಗೌಡ