Tuesday, March 24, 2009

ಬಸವಣ್ಣ ಯಡಿಯೂರಪ್ಪನ ಖಾಸಗಿ ಸ್ವತ್ತು!

ಸುಖಾ ಸುಮ್ಮನೆ ಕೇಳಿದ್ದನ್ನು, ನೋಡಿದ್ದನ್ನು ಎಲ್ಲವನ್ನೂ ಹಾಗೇ ಬರೆದು ಬಿಡಬೇಕು ಎಂಬ ಉಮ್ಮೇದಿ ಅನೇಕ ಪತ್ರಕರ್ತರದು. ಬರೆಯುವ ಮುನ್ನ, ಮೆದುಳಿಗೆ ಒಂದಿಷ್ಟು ಕೆಲಸ ಕೊಟ್ಟರೆ, ಬರೆಯುತ್ತಿರುವುದು ಸೂಕ್ತವೇ, ಅದಕ್ಕೊಂದು ಅರ್ಥವಿದೆಯೇ ಎನ್ನುವ ಪ್ರಶ್ನೆಗಳು ಏಳುತ್ತವೆ.
ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಭಗವಾಧ್ವಜ ಹಾರಿಸಬೇಕೆಂದು ಪಟ್ಟು ಹಿಡಿದರು. ರಾಜ್ಯಾದ್ಯಂತ ಪ್ರತಿಭಟನೆ ವ್ಯಕ್ತವಾಯಿತು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಾತನಾಡುತ್ತ "ಬಿಜೆಪಿಯವರು ಅಡ್ವಾನಿಯನ್ನು ಪ್ರಧಾನಿ ಮಾಡಲು ರಾಜ್ಯದ ಗಡಿಯನ್ನೂ ಮಾರಾಟ ಮಾಡಲು ಸಿದ್ಧರಿದ್ದಾರೆ" ಎಂದು ಟೀಕಿಸಿದರು.
ಈ ಮಾತಿನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಮಾತು ಏನಿತ್ತು, ಆ ದೇವರೇ ಬಲ್ಲ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿ, ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದರು. ಆದರೆ, ಮುಖ್ಯಮಂತ್ರಿ ಮಾತು ವರದಿ ಮಾಡಿದ ಪತ್ರಕರ್ತರು, ಆ ಹೇಳಿಕೆ ಅದ್ಹೇಗೆ ನೀತಿ ಸಂಹಿತೆ ಉಲ್ಲಂಘಿಸುತ್ತದೆ ಎನ್ನುವುದನ್ನು ಕೇಳುವ ಗೋಜಿಗೆ ಹೋಗಲಿಲ್ಲ.
ಇಂತಹದೇ ಇನ್ನೊಂದು ಘಟನೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ದಾವಣೆಗೆರೆ ಸಮಾವೇಶದಲ್ಲಿ, ಮಾತನಾಡುತ್ತ ಬಸವಣ್ಣನ ನಾಡಿನಲ್ಲಿ, ಜಾತಿಗಳ ಮಧ್ಯೆ, ಕೋಮುಗಳ ಮಧ್ಯೆ ದ್ವೇಷದ ಬೀಜ ಬಿತ್ತಿ ಸಾಮರಸ್ಯ ಕದಡುವ ಪ್ರಯತ್ನವನ್ನು ರಾಜ್ಯದ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ದೂರಿದರು.
ಯಡಿಯೂರಪ್ಪನಿಗೆ ಸಹಿಸಲಾಗಲಿಲ್ಲ. ಬಸವಣ್ಣನ ಹೆಸರು ಬಳಸಿಕೊಂಡು ಸೋನಿಯಾ ಚುನಾವಣಾ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ದೂರಿದರು. ಇದಪ್ಪಾ ತಮಾಷೆ ಅಂದರೆ, ಬಸವಣ್ಣ ಯಡಿಯೂರಪ್ಪನ ಖಾಸಗಿ ಸ್ವತ್ತೆ? ಸೋನಿಯಾ ಬಸವಣ್ಣನ ಹೆಸರು ಉಲ್ಲೇಖಿಸಿದ್ದೇ ತಪ್ಪೆ?
ಭುಜಗಳಿಗೆ ರೆಕ್ಕೆ ಕಟ್ಟಿಕೊಂಡವರಂತೆ ರಾಜ್ಯದ ಉದ್ದಗಲಕ್ಕೂ ಅಲೆದಾಡಿ ಮುಖ್ಯಮಂತ್ರಿ ತಮ್ಮ ಬೌದ್ಧಿಕ ದಿವಾಳಿತಕ್ಕೆ ಹತ್ತಿರವಾಗುತ್ತಿದ್ದಾರೆ. ಈ ಮೇಲಿನ ಅರ್ಥವಿಲ್ಲದ ಹೇಳಿಕೆಗಳು, ಅವರ ಮಾನಸಿಕ ಸ್ಥಿತಿಯನ್ನು ಪುಷ್ಟೀಕರಿಸುತ್ತವೆ. ಆದರೆ ಪತ್ರಕರ್ತರಿಗೂ ಅದೇ ಚಾಳಿ ಅಂಟಿಕೊಂಡರೆ!!

3 comments:

Anonymous said...

priya mitrare, sonia gandhi helikege yadiyurappa shivaji nagarada samad bhavandalli aayojisidda bjp alpasankhyatara samavesha sandarbha dalli re-action needida sandarbhadalli naanu kooda allidde. Aadare yadiyurappa, sonia gandhi jaati visha beeja bittuvante helike neediddare. e bagge chanavana ayaogakke patra bareyuve endiddu nija. aadare aa sandharbhadalli avaru basavanna navara hesaru prastapisalilla... camaradalli avara byte record aagide marayare...

Anonymous said...

ಹೌದು, ಸೋನಿಯಾಜಿ ಅವರಿಗೆ ಬಸವಣ್ಣನವರೇ ಏಕೆ ಬೇಕಿತ್ತು? ಶಂಕರ, ರಾಮಾನುಜ, ಮಧ್ವಾಚಾರ್ಯ .... ಏಕೆ ನೆನಪಿಗೆ ಬರಲಿಲ್ಲ? ಯಡ್ಯೂರಪ್ಪನವರನ್ನು, ಅವರ ಜಾತಿಯನ್ನು ಹೀಯಾಳಿಸಲೆಂದೇ ಸೋನಿಯಾಜಿ ಬಸವಣ್ಣನವರ ಮಾತೆತ್ತಿದ್ದಾರೆ. ನೀವೂ ಸುಖಾಸುಮ್ಮನೆ, ಎಂದಿನ ಬಿ.ಜೆ.ಪಿ-ವಿರೋಧಿ ನೀತಿಯಿಂದ ಇಂಥ ಸುದ್ದಿಗಳನ್ನು ಹಾಕುತ್ತೀರಿ. ನಿಮ್ಮ ಬೌದ್ಧಿಕ ದಿವಾಳಿತನ ಎಷ್ಟರ ಮಟ್ಟಿಗಿದೆಯೆಂದರೆ ಯಡ್ಯೂರಪ್ಪನವರ ವಿರೋಧಕ್ಕೋಸ್ಕರ ಕುಮಾರಸ್ವಾಮಿಯ ಬಾಲಿಶ ಮಾತುಗಳನ್ನು ಪ್ರಧಾನವಾಗಿ ಅಚ್ಚು ಹಾಕುತ್ತೀರಿ.

ನನಗೆ ಗೊತ್ತು, ಈ ಪತ್ರವನ್ನು ನೀವು ಪ್ರಕಟಿಸುವುದಿಲ್ಲ. ಪ್ರಕಟವಾದ ಕೆಲ ನಿಮಿಷಗಳಲ್ಲೇ ಅಳಿಸಿ ಹಾಕುತ್ತೀರಿ.

- ರಂಗಧಾಮಯ್ಯ, ಕೋಣನಕುಂಟೆ

Anonymous said...

ಕೆಲವೇ ದಿನಗಳಲ್ಲಿ ಯಡಿಯೂರಪ್ಪ ತಮ್ಮ ಮೇಲೆ ತಾವೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ ಅಪಾಯ ಇದೆ..!
ಅಧಿಕಾರ ಬಂದ ದಿನದಿಂದ ಇಂಥ ಎಸ್ಟೋ ಹೇಳಿಕೆಗಳನ್ನ ಮಾನ್ಯ ಮುಖ್ಯಮಂತ್ರಿಗಳು ಕೊಟ್ಟು ಗಿಟ್ಟಿಸಿಕೊಂಡಿದ್ದಾರೆ
ಅವನ್ನ ನಮ್ಮ ಪತ್ರಕರ್ತರು ಫ್ಲಾಶ್ ನ್ಯೂಸ್, ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ, ಯಡಿಯೂರಪ್ಪನವರ "ಎಕರಾ ಪಕರಾ" ಹೇಳಿಕೆಗಳು ಯಾಕೋ ಸುದ್ದಿ ಮಾತು ಕಣ್ಣಿಗೆ ಈಗ ಬಿದ್ದಂತೆ ಕಾಣುತ್ತೆ.
ಎಸ್ ಗೌಡ.