Tuesday, June 9, 2009

ಬಿಜೆಪಿ ಸೋತಿದ್ದೇಕೆ? ಸುಧೀಂದ್ರ ಕುಲಕರ್ಣಿಯನ್ನು ಒಮ್ಮೆ ಕೇಳಿ ನೋಡಿ...

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು ಏಕೆ? ಈ ಪ್ರಶ್ನೆಗೆ ವಿವರವಾಗಿ ಮತ್ತು ನಿಖರವಾಗಿ ಉತ್ತಿರಿಸಿರುವವರು ಅದೇ ಬಿಜೆಪಿ ಜತೆ ಗುರುತಿಸಿಕೊಂಡಿರುವ ಸುಧೀಂದ್ರ ಕುಲಕರ್ಣಿ. ಅವರ ಉತ್ತರ ಕಟ್ಟರ್ ಬಿಜೆಪಿಗಳಿಗೆ ಸರಿ ಕಂಡಿಲ್ಲ. "ಅದು ಅವರ ವೈಯಕ್ತಿಕ ಅಭಿಪ್ರಾಯ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ಹೊತ್ತಿನಲ್ಲಿ ಸುಧೀಂದ್ರ ಕುಲಕರ್ಣಿ ಎತ್ತಿರುವ ಗಂಭೀರ ಪ್ರಶ್ನೆಗಳನ್ನು ಕುರಿತು ಬಿಜೆಪಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.
143 ಸ್ಥಾನಗಳಷ್ಟು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ನಾಲ್ಕು ರಾಜ್ಯಗಳಲ್ಲಿ ಇನ್ನೂ ಬಿಜೆಪಿಗೆ ನೆಲೆಯುಊರಲು ಸಾಧ್ಯವೇ ಆಗದಿರುವಾಗ, ಆ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಸುಲಭದ ಮಾತಲ್ಲ. ದೇಶದ ಜನಸಂಖ್ಯೆಯಲ್ಲಿ ಹಿಂದು ಮತಬ್ಯಾಂಕ್ ಸೃಷ್ಟಿಸಿ ಅದರ ಆಧಾರದ ಮೇಲೆ ಅಧಿಕಾರ ಹಿಡಿಯ ಹೊರಟವರಿಗೆ, ಆ 'ಮತಬ್ಯಾಂಕ್' ತೀರಾ ಚಿಕ್ಕದು ಎಂಬುದರ ಅರಿವಾಗಿದೆ. ಹಿಂದು ಸಮುದಾಯದ ಒಂದು ಸಣ್ಣ ಗುಂಪು ಮಾತ್ರ ಬಿಜೆಪಿಗೆ ಬೆನ್ನುಲುಬಾಗಿ ನಿಂತಿದೆಯೇ ಹೊರತು, ಬಹುಸಂಖ್ಯಾತರು ಇತರ ಪಕ್ಷಗಳ ಒಲವು-ನಿಲುವುಗಳಲ್ಲಿ ಹರಿದು ಹಂಚಿಹೋಗಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಕಾರಣಕ್ಕೆ ಒಂದು ಪಕ್ಷಕ್ಕೆ ಮತ ನೀಡಬೇಕು ಎಂದು ಆಲೋಚಿಸುವ ಮನಸುಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಈಗಾಗಲೇ ಮುಸ್ಲಿಂ ಹಾಗೂ ಕ್ರೈಸ್ತರ ವಿರೋಧ ಕಟ್ಟಿಕೊಂಡಾಗಿದೆ. ಗುಜರಾತ್ ಗಲಭೆ ಮತ್ತು ಇತ್ತೀಚಿನ ಚರ್ಚ್ ದಾಳಿಯಂತಹ ಪ್ರಕರಣಗಳು ಈ ವಿರೋಧವನ್ನು ಮತ್ತಷ್ಟು ಸದೃಢಗೊಳಿಸಿವೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ತನ್ನ ಕೋಮುವಾದಿ ಸಿದ್ಧಾಂತದ ನೆಲೆಯಿಂದ ಹೊರಬಂದು ಯೋಚಿಸಬೇಕಿದೆ. ಇದನ್ನೇ ಸುಧೀಂಧ್ರ ಕುಲಕರ್ಣಿ ತಮ್ಮ ತೆಹಲ್ಕಾ ಲೇಖನದಲ್ಲಿ ಹೇಳಿದ್ದು.
ಅವರು ಸಾಚಾರ್ ಸಮಿತಿ ವರದಿಗೆ ಬಿಜೆಪಿ ನಾಯಕರು ನೀಡಿದ ಪ್ರತಿಕ್ರಿಯೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಆ ವರದಿ ಭಾರತದಲ್ಲಿನ ಮುಸಲ್ಮಾನರ ದೈನೇಸಿ ಸ್ಥಿತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ಇಷ್ಟು ದಿನ ಆಡಳಿತ ಮಾಡಿದರೂ, ಅವರ ಏಳಿಗೆ ಸಾಧ್ಯವಾಗಿಲ್ಲ ಎನ್ನುವ ವಿಚಾರ ಮುಂದೆ ಮಾಡಿ ವಾದ ಮಾಡುವುದನ್ನು ಬಿಟ್ಟು, ಬಿಜೆಪಿ ಇಡೀ ವರದಿಯನ್ನೇ ಸಾರಾಸಗಟಾಗಿ ತಿಸ್ಕರಿಸಿ ತಪ್ಪು ಮಾಡಿತು ಎನ್ನುತ್ತಾರೆ ಕುಲಕರ್ಣಿ. ಮುಸಲ್ಮಾನರ ಏಳಿಗೆಗಾಗಿ ಸರಕಾರ ಕೈಗೊಳ್ಳುವ ಯಾವುದೇ ಕಾರ್ಯಕ್ರಮ ಬಿಜೆಪಿ ಮನಸ್ಸುಗಳಿಗೆ 'ಓಲೈಕೆ' ಯಾಗಿ ಕಾಣುತ್ತದೆ. ಈ ನಿಟ್ಟಿನಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿ ಎರಡು ತಮ್ಮ ಹಿಂದುತ್ವವನ್ನು ಪುನರ್ ವಿಶ್ಲೇಷಿಸಬೇಕು. ಹಾಗೂ ಆ ಮುಊಲಕ ಪಕ್ಷದ ಕಾರ್ಯಕರ್ತರಲ್ಲಿ 'ಹಿಂದುತ್ವ'ದ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಬೇಕುವ ಅಗತ್ಯವಿದೆ ಎಂದಿದ್ದಾರೆ.
ಸೋಲು ಅನಾಥ ಎಂಬ ಮಾತಿದೆ. ಆದರೆ, ಸುದೀಂಧ್ರ ಕುಲಕರ್ಣಿ ಬಿಜೆಪಿ ಸೋಲಿನಲ್ಲಿ ನನ್ನದೂ ಸ್ವಲ್ಪ ಪಾತ್ರವಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಈ ಬಾರಿ ಚುನಾವಣೆ ವೇಳೆಯಲ್ಲಿ ಟಿವಿ ಚಾನೆಲ್ ಗಳ ಟಾಕ್ ಶೋಗಳಲ್ಲಿ ಬಿಜೆಪಿ ಪ್ರತಿನಿಧಿಯಾಗಿ ಕಾಣಿಸಿಕೊಂಡರು. ಅಡ್ವಾನಿಯನ್ನು ಸಮರ್ಥಿಸಿಕೊಳ್ಳುವ ಕೆಲ ಸಂದರ್ಭಗಳಲ್ಲಿ ಅವರು ತೀರಾ ಪೇಲವವಾಗಿ ಕಂಡರು. ಈ ಹಿಂದೆ ಅಡ್ವಾನಿ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ನೀಡಿದ ಜಿನ್ನಾ ಪರ ಅಭಿಪ್ರಾಯಕ್ಕೆ ಸುದೀಂಧ್ರ ಕುಲಕರ್ಣಿಯೇ ಕಾರಣ ಎಂಬ ಮಾತು ರಾಜಕೀಯ ವಲಯದಲ್ಲಿದೆ. ಅಂದು ಅಡ್ವಾನಿಯ ಬಾಯಿಂದ ಅಂತಹ ಅಭಿಪ್ರಾಯ ಹೇಳಿಸಿ ಪಕ್ಷದ ನಾಯಕರ ವಿರೋಧಕ್ಕೆ ಗುರಿಯಾಗಿದ್ದ ಈ ಮಾಜಿ ಪತ್ರಕರ್ತ ಈಗ ತಮ್ಮ ಲೇಖನದಿಂದ ಮತ್ತೆ ಪಕ್ಷದ ನೇತಾರರಿಂದ ಟೀಕೆಗೆ ಗುರಿಯಾಗಿದ್ದಾರೆ.
ಕನ್ನಡಿಗ
ಅಂದಹಾಗೆ ಕುಲಕರ್ಣಿ ಕನ್ನಡಿಗರು. ಧಾರವಾಡದವರು. ಬಾಂಬೆಯ Indian Institute of Technology ಯಿಂದ ಬಿ-ಟೆಕ್ ಪದವಿ ಪಡೆದರು. ನಂತರ ಪತ್ರಿಕೋದ್ಯಮ ಕ್ಷೇತ್ರ ಆಯ್ಕೆ ಮಾಡಿಕೊಂಡು ಬಾಂಬೆಯ Daily ಮತ್ತು Blitz ಪತ್ರಿಕೆಗಳಿಗೆ ದುಡಿದರು. ಆಗ ಮಾರ್ಕ್ಸ್ ಮತ್ತು ಲೆನಿನ್ ರನ್ನು ಆಳವಾಗಿ ಓದಿಕೊಂಡು ಸ್ನೇಹಿತರ ಮಧ್ಯೆ ಎಡಪಂಥೀಯ ಚಿಂತಕನೆಂದೇ ಪರಿಚಿತರು. ಕ್ರಮೇಣ ಬದಲಾದರು. ಕಾರ್ಪೊರೇಟ್ ಜಗತ್ತಿಗೆ ಹೊಂದಿಕೊಂಡರು. ಅಡ್ವಾನಿಗೆ ಆಪ್ತರಾದರು. ಅವರ ರಥಯಾತ್ರೆಯಲ್ಲಿ ಪಾಲ್ಗೊಂಡರು. ವಾಜಪೇಯಿ ಪ್ರಧಾನಿಯಾದಾಗ ಅವರ ಭಾಷಣಗಳನ್ನು ಬರೆದುಕೊಡುವ ಕಾಯಕಕ್ಕೆ ನಿಯುಕ್ತಿಯಾದರು. ನಂತರ ಬಿಜೆಪಿಯಲ್ಲಿ ಕಾರ್ಯದರ್ಶಿ ಸ್ಥಾನ ಸಿಕ್ಕತು. ಜಿನ್ನಾ ಹೇಳಿಕೆ ನಂತರ ಪಕ್ಷದ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಇಂದಿಗೂ ಅಡ್ವಾನಿಗೆ ಆಪ್ತರು. ಕೆಲವೇ ತಿಂಗಳುಗಳ ಹಿಂದಿನವರೆಗೂ ಪ್ರಜಾವಾಣಿಗೆ ಅಂಕಣ ಬರೆಯುತ್ತಿದ್ದರು. ಇನ್ನೊಂದು ವಿಚಾರ, ಇವರ ಕಿರಿಯ ಸಹೋದರ ಡಾ. ಸಂಜೀವ್ ಕುಲಕರ್ಣಿ ಧಾರವಾಡದ ಪ್ರಸಿದ್ಧ ವೈದ್ಯ. ಮಾದರಿಯಾದ ಒಂದು ಶಾಲೆಯನ್ನೂ ನಡೆಸುತ್ತಿದ್ದಾರೆ.

4 comments:

parasurama kalal said...

ಸುಧೀಂದ್ರ ಕುಲಕರ್ಣಿ ಇವತ್ತು ಕಾಣುವ ರೀತಿಯೇ ಬೇರೆ. ನನ್ನ ಕಣ್ಣು ಮುಂದೆ ಈಗಲೂ ಇರುವ ಚಿತ್ರ ಬೇರೆ.
ಹುಬ್ಬಳ್ಳಿಯ ಸುಂದತ್ತಾ ಬಟ್ಟೆಗಿರಣಿ ಮುಷ್ಕರದಲ್ಲಿ ಹೋರಾಟಗಾರನಾಗಿ ಸಂಪೂರ್ಣ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಕಾಲವದು. ಆಗ ಹೊಸಪೇಟೆ ಸ"ಪದ ಎಂ.ವೈ.ಘೋರ್ಪಡೆ ಒಡೆತನಕ್ಕೆ ಸೇರಿದ ಸ್ಮಯೋರ್ ಕಾರ್ಖಾನೆಯ ಅಸಂಘಟಿತರಾಗಿದ್ದ ಕಾ"ಕರು ಆಡಳಿತ ಮಂಡಳಿ ಕಿರಿಕಿರಿಗೆ ರೋಸಿ ಒಂದುದಿನ ಇದ್ದಕ್ಕಿದ್ದಂತೆ ಕಾರ್ಖಾನೆಗೆ ಬೀಗ ಜಡೆದು ಮುಷ್ಕರಕ್ಕಿಳಿದರು. ಇಂತಹ ಚಳವಳಿಯನ್ನು ಯಶಸ್ವಿಗೊಳಿಸಲು "ದ್ಯಾರ್ಥಿಗಳಾಗಿದ್ದ ನಾವು ಕಷ್ಟಪಡುತ್ತಿದ್ದೇವೆ. ಆಗ ಹುಬ್ಬಳ್ಳಿಗೆ ಹೋಗಿ ಕಾ"ಕ ಮುಖಂಡ ".ಎನ್.ಹಳಕಟ್ಟಿಗೆ ಪರಿಸ್ಥಿತಿ ತಿಳಿಸಿ ಬನ್ನಿ ಎಂದು ಒತ್ತಾಸಿದಾಗ ಅವರು ಕಳಿಸಿಕೊಟ್ಟಿದ್ದು ಈ ಸುಧೀಂದ್ರ ಕುಲಕರ್ಣಿಯನ್ನು. ಸಿ.ಪಿ.ಎಂ. ಪಕ್ಷದಲ್ಲಿದ್ದ ಸುಧೀಂದ್ರ ಕುಲಕರ್ಣಿ ಕಾ"ಕ ಚಳುವಳಿಯ ಜವಾಬ್ದಾರಿ ಹೊತ್ತಿದ್ದರು. ತೆಳ್ಳನೆಯ ದೇಹ, ಕರಿಯ ಗಡ್ಡ, ಒಂದಿಷ್ಟು ಚೀಲದಲ್ಲಿ ಇಂಗ್ಲೀನ ಕೆಂಪು ಪುಸ್ತಕಗಳು, ಸಿಗರೇಟ್ ಪ್ಯಾಕ್. ಇಷ್ಟು ಆಸ್ತಿ ಹೊತ್ತುಕೊಂಡು ಹೊಸಪೇಟೆಗೆ ಬಂದಿಳಿದ ಅವರು, ಅತ್ಯಂತ "ತಭಾ. ಎಲ್ಲಾ ಮಾತುಗಳಿಗೂ ಯಾವಾಗಲೂ ಮಂದಸ್ಮಿತ ನಗು. ನಮಗಂತೂ ರಷ್ಯನ್ ಲೇಖಕರಂತೆ ಕಾಣುತ್ತಿದ್ದರು. ಸ್ಟೌವ್ ಹಚ್ಚಿ ಅವರಿಗೆ ಕೂಳು ಕುಚ್ಚಿಹಾಕುವುದು. ಸಾಂಬಾರು ತಂದು ಎಲ್ಲರೂ ತಿನ್ನುವುದು. ಬೆಳಿಗ್ಗೆಯ ಸ್ಮಯೋರ್ ಕಾರ್ಖಾನೆಗೆ ಓಡುವುದು. ಲಾರಿ ಹತ್ತಿ ಕಾರ್ಖಾನೆ ಬಳಿ ಇಳಿಯುವಾಗ ಲಾರಿಯವನಿಗೆ ಕೊಡಲು ದುಡ್ಡು ಸಹ ಇರುತ್ತಿರಲಿಲ್ಲ. ಅದಕ್ಕಾಗಿ ಕಾ"ಕರ ಐಕ್ಯತೆ, ವರ್ಗ ಚಳವಳಿಯ ಭಾಷಣ ನಡೆಸಿ ಲಾರಿ ಚಾಲಕನಿಗೆ ರೆಡ್ ಸಲ್ಯೂಟ್ ಹೇಳುತ್ತಿದ್ದೇವು. ಇದೆಲ್ಲಾ ಜೊತೆಯಲ್ಲಿರಲಿ ಎಂದು ಈ "ವರ ನೀಡಿರುವೆ. ಎಷ್ಟು ದಿನಗಳ ಮೇಲೆ ಸುಧೀಂದ್ರ ಕುಲಕರ್ಣಿ ಎಲ್.ಕೆ.ಅದ್ವಾನಿ ಸಲಹೆಗಾರ ಎಂಬುದನ್ನು ಕೇಳಿ ತಬ್ಬಿಬ್ಬಾಗಿ ಹೋದೆ. 'ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ. ಮುತ್ತ, ಮುತ್ತ' ಎನ್ನುವ ಹಾಡು ಹೇಳುವ ಸರದಿ ನಮ್ಮದಾತು.
- ಪರುಶುರಾಮ ಕಲಾಲ್

Anonymous said...

One more vital reason for the debacle of BJP is it wanted to make Hindutva 'socially acceptable' without the democratisation of its ideology. As the famous lines go '' someone's good deeds are someone else's hell''. It truly applies to BJP. Sudhindra Kulkarni, who is the political strategist of BJP's poll campaign failed to strategise Hindutva.
Nisar Ahmed
Hospet.

ಹರೀಶ್ ಕೇರ said...

ಕಲಾಲ್, ನಿಮ್ಮ ಅನುಭವ ಹಾಗೂ ಬರಹ ಚೆನ್ನಾಗಿವೆ. ನಿಲುವು ಸಮರ್ಪಕವಾಗಿದೆ. ನೀವ್ಯಾಕೆ ಒಂದು ಬ್ಲಾಗ್ ತೆರೆಯಬಾರದು ?
- ಹರೀಶ್ ಕೇರ

Anonymous said...

what is BJPs HINDUTVA.
It keep on changing...