Thursday, August 13, 2009

ಸುವರ್ಣ ಬಿಟ್ಟು ಹೊರಟ ಭಟ್ಟರ ವಿದಾಯದ ನುಡಿಗಳು

ಹಿರಿಯ ಪತ್ರಕರ್ತ ಶಶಿಧರ ಭಟ್ ಸುವರ್ಣ ತೊರೆದಿದ್ದಾರೆ.
ಸುವರ್ಣ ನ್ಯೂಸ್ ಬಿಡುವುದಕ್ಕೂ ಮುನ್ನ ಅವರು ತಮ್ಮ ಕುಮ್ರಿ ಬ್ಲಾಗ್‌ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ.
ಸುದ್ದಿಮಾತು ಓದುಗರಿಗಾಗಿ ಭಟ್ಟರ ಮನದಾಳದ ಮಾತುಗಳು ಇಲ್ಲಿವೆ

ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹಿನಿಯನ್ನು ಕಟ್ಿ ಬೆಳೆಸುವ ಕೆಲಸ ಇದೆಯಲ್ಲ ಅದೇ ಹಾಗೆ. ಈ ಕೆಲಸದ ನಡುವೆ ನನ್ನ ಓದು ಕುಂಠಿತವಾಯಿತು. ಒಂದು ನಿಮಿಷ ಎಲ್ಲವನ್ನೂ ಬಿಟ್ಟು ನಿರಾಳವಾಗಿ ಇರದಂತಾಯಿತು. ನಾನು ವಾಹಿನಿಯಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದೆ. ಎಲ್ಲದಕ್ಕೂ ಒಂದು ಬಿಡುಗಡೆಯ ಕಾಲ ಅಂತ ಇರುತ್ತೆ. ಬಿಡುಗಡೆ ಅನ್ನುವುದೇ ನಮ್ಮ ಮನಸ್ಸನ್ನು ಪ್ರಫುಲ್ಲಿತವನ್ನಾಗಿ ಮಾಡುತ್ತದೆ. ಬಹುತೇಕ ಸಂದರ್ಭದಲ್ಲಿ ನಾವು ಬಿಡುಗಡೆಗಾಗಿ ಯತ್ನ ನಡೆಸುತ್ತ ಮತ್ತಷ್ಟು ಬಂಧನಕ್ಕೆ ಒಳಗಾಗಿರುತ್ತೇವೆ.
ಈಗ ನನಗೆ ಬಿಡುಗಡೆಯ ಸಮಯ ಬಂದಿದೆ. ನನ್ನ ವಾಹಿನಿಯನ್ನು ಇದ್ದಲ್ಲಿ ಇದ್ದ ಹಾಗೆ ಬಿಟ್ಟು ಮುಂದಕ್ಕೆ ನಡೆದು ಬಿಡುವ ಸಮಯ. ಈ ಸಮಯ ಮುಂದಕ್ಕೆ ಹೋಗುವಾಗ ಹಿಂದಕ್ಕೆ ನೋಡುವ ಸಮಯ ಕೂಡ. ಈ ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದಾಗ,ಕೆಲಸಕ್ಕೆ ಬರಲು ಯಾರೂ ಸಿದ್ಧರಿರಲಿಲ್ಲ. ಎಲ್ಲರಿಗೂ ಈ ವಾಹಿನಿ ಉಳಿಯಬಹುದೇ ಎಂಬ ಆತಂಕ. ಇಂಥಹ ಸ್ಥಿತಿಯಲ್ಲಿ ಬಂದ ಹುಡುಗರನ್ನು ಕಟ್ಟಿಕೊಂಡು ವಾಹಿನಿಯನ್ನು ಪ್ರಾರಂಭಿಸಿದೆವು. ಕ್ರೆಡಿಬಿಲಿಟಿಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದುಕೊಂಡೆವು. ಹಾಗೆ ತುಂಬಾ ವಿಭಿನ್ನವಾಗಿ ಸುದ್ದಿಯನ್ನು ನೀಡುವುದಕ್ಕೆ ಯತ್ನ ನಡೆಸಿದೆವು. ಜಿ ಇ ಸಿ ಚಾನಲ್ಲಿನಲ್ಲಿ ಸುದ್ದಿ ಬರುವಾಗ ಒಳ್ಳೆ ರೇಟಿಂಗ್ ಕೂಡ ಇತ್ತು. ಇದನ್ನು ಗಮನಿಸಿ ನಾವು ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದೆವು. ಸಣ್ಣದಾಗಿದ್ದ ನಮ್ಮ ಕುಟುಂಬ ದೊಡ್ದದಾಯಿತು. ಮನೆಗೆ ಬಂದವರು ಮನೆಯವರಾಗಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಒಂದು ಕುಟುಂಬದ ಯಜಮಾನನಂತೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕು ಎಂದು ನಾನು ಅಂದುಕೊಂಡೆ. ಅದರಂತೆ ಕೆಲಸ ನಿರ್ವಹಿಸಲು ಯತ್ನ ನಡೆಸಿದೆ. ಆದರೆ ಎಲ್ಲೋ ತಪ್ಪಾಗಿತ್ತು. ನನಗೆ ಆ ತಪ್ಪು ತಿಳಿದಿರಲಿಲ್ಲ. ನನಗೆ ಸುದ್ದಿ ಮತ್ತು ವಾಹಿನಿಯ ಬದ್ಧತೆ ಬಿಟ್ಟು ಬೇರೆ ಇರಲಿಲ್ಲ. ಈ ಕಾರಣದಿಂದಾಗಿ ಸಹೋದ್ಯೋಗಿಗಳಿಗೆ ಕೆಲವೊಮ್ಮೆ ರೇಗಿದ್ದು ಉಂಟು ಬೈದಿದ್ದು ಉಂಟು.
ನಮ್ಮ ಬದುಕಿನಲ್ಲಿ ಎಲ್ಲ ಕನಸುಗಳೂ ನನಸಾಗುವುದಿಲ್ಲ. ಅದಕ್ಕಾಗಿಯೇ ಬದುಕಿಗೆ ಒಂದು ಆಕರ್ಷಣೆ ಇದೆ. ನಾನೆಂದುಕೊಂಡಿದ್ದನ್ನು ನಾನು ಮಾಡಲು ಸಾಧ್ಯವಾಗಲಿಲ್ಲ. ನನ್ನ ಸ್ನೇಹ ಶೀಲ ಪ್ರವೃತ್ತಿ ದೌರ್ಬಲ್ಯ ಎಂಬಂತೆ ಪ್ರತಿಬಿಂಬಿತವಾಯಿತು. ಮನುಷ್ಯನ ಬದಲಾವಣೆಯಲ್ಲಿ ನಂಬಿಕೆ ಇಟ್ಟ ನಾನು ಎಲ್ಲರೂ ಬದಲಾಗುತ್ತಾರೆ ಎಂದು ನಂಬಿಕೊಂಡಿದ್ದೆ. ಆದರೆ ಬದಲಾಗಬೇಕಾದ ನಮ್ಮ ಸಹೋದ್ಯೋಗಿಗಳು ಬದಲಾಗಲಿಲ್ಲ. ಬದಲಾಗಿ ಈ ಮೇಲ್ ಗಳಲ್ಲಿ ದೂರುಗಳಲ್ಲಿ ನೀಡುವುದರಲ್ಲಿ ಸಮಯವನ್ನು ವ್ಯಯಿಸತೊಡಗಿದರು. ಇದೆಲ್ಲ ನನ್ನ ಮನಸ್ಸಿಗೆ ತುಂಬಾ ನೋವನ್ನು ಕೊಡುತ್ತಿತ್ತು. ನನ್ನ ಹುಡುಗರು ಹೀಗೆ ಮಾಡುತ್ತಾರಲ್ಲ ಎಂದು ಬೇಸರವಾಗುತ್ತಿತ್ತು. ಆದರೆ ಎಷ್ಟೆಂದರೂ ನನ್ನ ಹುಡುಗರು ತಾನೆ ಎಂದು ನಾನು ಸುಮ್ಮನಾಗುತ್ತಿದ್ದ್ವೆ. ಎಂದೂ ಯಾರ ವಿರುದ್ಧವೂ ನಾನು ದೂರಲಿಲ್ಲ. ದೂರು ನೀಡಲಿಲ್ಲ.
ಈಗ ನಾನು ಹೊಸ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಹೊರಟು ನಿಂತಿದ್ದೇನೆ. ಹೊಸ ಸವಾಲು ನನ್ನ ಮುಂದಿದೆ. ಕಳೆದ ಎರಡು ಮೂರು ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡಿದ ನನ್ನ ಹುಡುಗರಿಗೆ ಬೈಯಲು ನಾನಿರುವುದಿಲ್ಲ .ತಪ್ಪು ಎಂದು ಅನ್ನಿಸಿದ್ದನ್ನು ಹೇಳಲು ನಾನು ಇರುವುದಿಲ್ಲ. ನಾನು ಕಟ್ಟಿದ ವಾಹಿನಿಯ ಮೆಟ್ಟಿಲುಗಳನ್ನು ಇಳಿದು ಹೊರಟು ಬಿಡುತ್ತೇನೆ. ಈ ಹೊಣೆಗಾರಿಕೆಯನ್ನು ನಿರ್ವಹಿಸಲು ಬೇರೆಯವರು ಬರುತ್ತಾರೆ.
ನಾನು ನಮ್ಮ ಹಿರಿಯ ಸಹೋದ್ಯೋಗಿಗಳ ಜೊತೆ ಮಾತನಾಡುತ್ತ ಒಂದು ಮಾತು ಹೇಳಿದೆ. "ನೀವೆಲ್ಲ ಒಂದು ತಂಡವಾಗಿ ಕೆಲಸ ಮಾಡಿದ್ದರೆ ಇಂದು ನಮ್ಮ ವಾಹಿನಿ ನಂಬರ್ ಒನ್ ವಾಹಿನಿಯಾಗುತ್ತಿತ್ತು. ಆದರೆ ಅದು ಆಗಲಿಲ್ಲ. ನಿಮಗೆಲ್ಲ ನನ್ನ ಬಗ್ಗೆ ಭಯವಿತ್ತು. ನನ್ನ ಸಲಹೆಗಳನ್ನು ಸ್ವೀಕರಿಸುವ ಮುಕ್ತ ಮನಸ್ಸು ಇರಲಿಲ್ಲ. ಇಗೋ ನಿಮ್ಮನ್ನು ಬಂಧಿಸಿತ್ತು. ಇದಕ್ಕಾಗಿ ಗುಂಪುಗಾರಿಕೆ ಮಾಡುವವರು ನನ್ನನ್ನೂ ಗುಂಪುಗಾರಿಕೆ ಮಾಡುವವ ಎಂದು ಪ್ರತಿಬಿಂಬಿಸಲು ಯತ್ನ ನಡೆಸಿದಿರಿ. ಆದರೆ ನನಗೆ ಅಂಟಿಕೊಂದು ಇರುವುದು ಗೊತ್ತಿದೆ. ಹಾಗೆ ಎಲ್ಲವನ್ನು ಬಿಟ್ಟು ತಿರುಗಿ ನೋಡದೇ ಹೋಗುವುದಕ್ಕೂ ಗೊತ್ತಿದೆ. "
ಹಾಗೆ ತಿರುಗಿ ನೋಡದೇ ಹೋಗಿ ಬಿಡುವುದು ಯಾವಾಗಲೂ ಸಂತೋಷವನ್ನು ನೀಡುತ್ತದೆ. ನಾನು ಹಲವಾರು ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಕೆಲಸ ಮಾಡಿ ಹಾಗೆ ಹೊರಟು ಬಂದಿದ್ದೇನೆ. ಬರುವಾಗ ನಾನೆಲ್ಲಿ ತಪ್ಪು ಮಾಡಿದೆ ಎಂದು ಧ್ಯಾನಿಸುತ್ತ ಕುಳಿತುಕೊಳ್ಳುತ್ತೇನೆ. ಕೆಲವೊಮ್ಮೆ ನನ್ನ ತಪ್ಪುಗಳು ನನಗೆ ಅರಿವಾಗುತ್ತದೆ. ಕೆಲವೊಮ್ಮೆ ತಪ್ಪುಗಳು ಎದುರಿಗೆ ಬರುವುದೇ ಇಲ್ಲ. ಈ ಎಲ್ಲ ಅನುಭವಗಳ ನಡುವೆಯೂ ನಾನು ಮನುಷ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿಲ್ಲ. ಕಳೆದುಕೊಳ್ಳುವುದಿಲ್ಲ. ಯಾಕೆಂದರೆ ಮನುಷ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡ ದಿನ ಬದುಕಿನ ಹಾದಿಗೆ ತೆರೆ ಬೀಳುತ್ತದೆ, ಹೀಗೆ ಮನುಷ್ಯರನ್ನು ನಂಬುತ್ತಲೇ ನಮ್ಮಲ್ಲೆರ ಸಣ್ಣತನ, ಗುಂಪುಗಾರಿಕೆಯ ಬಗ್ಗೆ ಸಣ್ನಕ್ಕೆ ನಕ್ಕು ಬಿಡುತ್ತೇನೆ. ಶಶಿಧರ್ ಭಟ್ಟಾ ಇದು ನಿನಗೆ ಇನ್ನೊಂದು ಅನುಭವ ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ.
ಈಗ ಇನ್ನೊಂದು ಜವಾಬ್ದಾರಿಯನ್ನು ನಾನು ಒಹಿಸಿಕೊಳ್ಳಲು ಹೊರಟಿದ್ದೇನೆ. ಮತ್ತೆ ದ್ರುಶ್ಯ ಮಾಧ್ಯಮಕ್ಕೆ ನಾನು ಬರುತ್ತೇನೆಯೋ ಇಲ್ಲವೋ ನನಗೆ ತಿಳಿಯದು. ಮಹಾಯುದ್ಧ, ನ್ಯೂಸ್ ಅಂಡ್ ಯೂಸ್, ನಿಗೂಢ ಜಗತ್ತಿನಂತಹ ಕಾರ್ಯಕ್ರಮಗಳನ್ನು ಮತ್ತೆ ಮಾಡುತ್ತೇನೆಯೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಒಂದು ಮಾತನ್ನು ನಾನು ನಿಮಗೆ ಹೇಳಲೇ ಬೇಕು. ಸುವರ್ಣ ನ್ಯೂಸ್ ನನ್ನ ಮಗು. ಯಾರು ಒಪ್ಪಲಿ ಬಿಡಲಿ ಈ ಮಗುವಿನ ಹೆರಿಗೆ ನೋವನ್ನು ನಾನು ಅನುಭವಿಸಿದ್ದೇನೆ. ಇದು ರಚ್ಚೆ ಹಿಡಿದಾಗ ಸಮಾದಾನ ಮಾಡಿದ್ದೇನೆ. ಮುದ್ದು ಮಾಡಿದ್ದೇನೆ. ಹಾಗೆ ಮಗು ನನಗೆ ಒದ್ದಾಗ ಪ್ರೀತಿಯಿಂದ ತಲೆ ನೇವರಿಸಿದ್ದೇನೆ. ಈ ಮಗುವನ್ನು ಬಿಟ್ಟು ಹೋಗುವ ಘಳಿಗೆಯಲ್ಲಿ ಸ್ವಲ್ಪ ಬೇಸರವಾಗುವುದು ಸಹಜ. ಆದರೆ ಈ ಮಗುವಿನ ಬಗ್ಗೆ ನಿಮಗೆ ಪ್ರೀತಿ ಇರಲಿ. ನಿಮ್ಮ ಮಡಿಲಲ್ಲಿ ಹಾಕಿರುವ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳಿ.

8 comments:

Anonymous said...

(..ಮಹಾಯುದ್ಧ, ನ್ಯೂಸ್ ಅಂಡ್ ಯೂಸ್, ನಿಗೂಢ ಜಗತ್ತಿನಂತಹ ಕಾರ್ಯಕ್ರಮಗಳನ್ನು ಮತ್ತೆ ಮಾಡುತ್ತೇನೆಯೆ ಎಂಬುದು ನನಗೆ ಗೊತ್ತಿಲ್ಲ..)

Most of the titles/progs are taken from Malayalam Asianet News channel.Titles are in Englsih like news hour, news & views, FIR,special report,etc
But, quality prog of asianet was missing here like Kannadi.

ನಿಗೂಢ ಜಗತ್ತu is news version of BANAMATHI of ETV by you.

Anonymous said...

BLAME IT ON RIO...

This post not from a professional journalist. The writing of Bhat itself describes what he is..

Anonymous said...

ಸ್ವಾಮಿ ಅವರು ಬರೆದದ್ದಕ್ಕೂ ವಾಸ್ತವಕ್ಕೂ ಭಾರೀ ವ್ಯತ್ಯಾಸವಿದೆ ತಮ್ಮಿಂದ ಏನೂ ಏನೂ ತಪ್ಪಾಗಿಲ್ಲ. ಎಲ್ಲದಕ್ಕೂ ಸಹೋದ್ಯಗಿಗಳು ಕಾರಣ ಎಂಬ ಅಭಿಪ್ರಾಯ ಅಲ್ಲಿದೆ. ತನ್ನ ತಪ್ಪಿನಿಂದಾದ ದುರಂತವನ್ನು ಇನ್ನೊಬ್ಬೆರ ಮೇಲೆ ಹಾಕಿ ಜವಾಬ್ದಾರಿಯಿಂದ ಜಾರಿಕೊಳ್ಳುವವನು ಒಳ್ಳಯ ನಾಯಕನಾಗಲಾರ ಭಾವನಾತ್ಮಕವಾಗಿ ಬರೆದಾಕ್ಷಣ ಅದೆಲ್ಲವೂ ಸತ್ಯ ಎಂದು ಯಾರೂ ನಂಬ ಬೇಕಾಗಿಲ್ಲ. ಎಲ್ಲಾ ಮೌಲ್ಯಗಳ ತತ್ವ ಸಿದ್ದಾಂತದ ಬಗ್ಗೆ ಮಾತನಾಡುವ ಭಟ್ಟರೊಂದಿಗೆ ಕೆಲಸ ಮಾಡಿರುವವರ ಅನುಭವ ಕೇಳಿ. ಇಷ್ಟಾಗಿಯೂ ಅವರೊಬ್ಬ ಉತ್ತಮ ಪತ್ರಕರ್ತ ಅಷ್ಟೇ. ಉಳಿದಂತೆ ಸಣ್ಣತನಗಳಿಗೇನೂ ಕೊರತೆ ಇಲ್ಲ. ಮೊದಲು ಅವರು ತಮ್ಮ ಆತ್ಮರತಿ, ವಿಪರೀತ ಎನ್ನಿಸುವ ಇಗೋಗಳಿಂದ ಅವರು ಹೊರ ಬರಬೇಕು ...ಅವರಾಗಿ ಸುವರ್ಣ ಬಿಟ್ಟು ಹೋಗ್ತಿದ್ದಾರೋ ಅಥವಾ ಸ್ವಯಂಕ್‌ಋತಾಪರಾಧದಿಂದ ಅವರು ಹೋಗುವಂತಾಯಿತೋ ಎಂಬುದು ಎಲ್ಲರಿಗೂ ತಿಳಿದರೆ ಒಳ್ಳೆಯದು........

Anonymous said...

Bhattaru bareda lekhana matra hakiddiri. ellara baggeyu nimma abhipraya tilisuva nivu e vicharadalli nimma abhipraya tilisale illa. bhattar ithihas nimage gottillavo athava avaru nimma friendo?

Anonymous said...

battariginnu kumriye gati paapa! che heege aagabaaradagittu, aadru aagebittide. ella ranganata sanketi mahime...!
nishada

Anonymous said...

ಭಟ್ರೇ...
ನಿಮ್ಮ ಬರಹ, ಕ್ಯೆಲಾಗದ ಜೋಭದ್ರಗೇಡಿಯೊಬ್ಬನ ನಿಸ್ಸಹಾಯಕ ಚೀತ್ಕಾರದಂತಿದೆ.ನೀವೊಬ್ಬ ಒಳ್ಳೆಯ ರಾಜಕೀಯ ವರದಿಗಾರ. ನಿಮ್ಮನ್ನ ಕರೆದುಕೊಂಡುಬಂದು ನ್ಯೂಸ್ ಚಾನಲ್ ಒಂದರ ಮುಖ್ಯಸ್ತನ್ನಾಗಿಸಿದ್ದು ಮ್ಯಾನೇಜ್ಮೆಂಟು ಮಾಡಿದ ಮೊದಲ ಮಹಾಪರಾಧ. ಯಾವತ್ತೂ ನೀವೊಬ್ಬ ಒಳ್ಳೇ ಟೀಮ್ ಲೀಡರ್ ಆಗ್ಲೇ ಇಲ್ಲ. ನಿಮ್ಮ ಸಹೋದ್ಯೋಗಿಗಳಿಗೆ ನೀವು ಕೊಟ್ಟ ಒಂದೇ ಒಂದು constructive ಸಲಹೆಯನ್ನ ನೆನಪುಮಾಡಿಕೊಂಡು ಹೇಳಿ ನೋಡೋಣ. ನಂಗೆ ದೂರದರ್ಶನ ಸ್ಟ್ಯೆಲ್ ಬೇಡ ಅಂದ್ರಿ. ನೀವು ಕೊಟ್ಟ ಐಡಿಯಾಗಳು ದೂರದರ್ಶನದವರಿಗೂ ಔಟ್ ಡೇಟೆಡ್ ಅನ್ನಿಸುತ್ತಿದ್ದವು.
ಬಹುಶಃ ನಿಮಗೇ ಗೊತ್ತಿಲ್ಲದ ಒಂದು ಸತ್ಯ ಹೇಳ್ತೀನಿ ಕೇಳಿ. ಸುವರ್ಣ ನ್ಯೂಸ್ ನಿಮ್ಮ ಮಗು ಅನ್ನೋ ಭಾವನೆ ನಿಮ್ಮ ಮನಸಿನಲ್ಲಿ ಮೊದಲಿಗೆ ಇದ್ದಿದ್ದು ನಿಜ. ಆದರೆ ಶುರುವಾದ ಕೆಲವೇ ದಿನಗಳಲ್ಲಿ, ಅದನ್ನ ಅವಸರದಲ್ಲಿ ಹೆತ್ತುಬಿಟ್ಟೆ ಅಂತ ನಿಮಗೇ ಅನ್ನಿಸೋದಕ್ಕೆ ಪ್ರಾರಂಭವಾಯಿತು. ಕ್ಯೆ ಕೆಳಗಿನವರಿಗೆ ಒಂದೇ ಒಂದು ಸಣ್ಣ ತರಬೇತಿ ಕೂಡ ಕೊಡದೇ ಚಾನಲ್ ಶುರು ಮಾಡಿದ್ರಿ. ಒಂದೇ ಒಂದು ಫ್ಯೆಲ್ ಸ್ಟೋರಿ ಕ್ಯೆಯಲ್ಲಿರಲಿಲ್ಲ. ಸ್ಟ್ರಿಂಜರ್ ಗಳನ್ನ ಕ್ಯಾಮರಾದೆದುರು ಕರ್ಕೊಂಬಂದು ನಿಲ್ಲಿಸಿದರೆ ತ್ಯಾತ್ಯಾ... ಬ್ಯಾಬ್ಯಾ... ರೌಂಡ್ ನೆಕ್ಕು-ಅರ್ಧ ತೋಳು ಇರುವ ಅಸಡ್ದಾಳ ಟಿ ಶರ್ಟ್ ಹಾಕಿಕೊಂಡು ಪಿಟುಸಿ ಕೊಡಬಾರದು ಅನ್ನೋ ಮಿನಿಮಮ್ ಪಾಠ ಕೂಡ ಕಲಿಸಲಿಲ್ಲ. ತಪ್ಪಿಲ್ಲದಂತೆ ಒಂದೇ ಒಂದು ಕನ್ನಡ ವಾಕ್ಯ ಬರೆಯೋಕೆ ಬರದವರನ್ನ ಕರ್ಕೊಂಬಂದು ಕ್ಯೆ ತುಂಬ ಸಂಬಳ ಕೊಟ್ಟು ರಿಪೋರ್ಟರ್ ಮಾಡಿದ್ರಿ. ತಮ್ಮ ಪಾಡಿಗೆ ತಾವು ನಿಯತ್ತಾಗಿ ಕೆಲಸ ಮಾಡಿಕೊಂಡಿದ್ದವರಿಗೆ ಸಂಬಳ ಏರಿಸದೆ, ನೋಟಿಸ್ ಮೇಲೆ ನೋಟಿಸ್ ಕೊಟ್ಟು ಮಜಾ ತಗೊಂಡ್ರಿ. ಚಾನೆಲ್ ಶುರುವಾದ ಆರೇ ತಿಂಗಳಲ್ಲಿ ಮಹಾಪತನ ಶುರುವಾಗಿತ್ತು. ಇದು ಗೆಲ್ಲೋ ಆಟ ಅಲ್ಲ ಅಂತ ನಿಮಗೇ ಅರ್ಥವಾಗಿತ್ತು. ನಿಮ್ಮ ಹುದ್ದೆಯ ಬಗ್ಗೆ ನಿಮಗೇ insecurity ಶುರುವಾಯಿತು. ಆವಾಗ ಸುತ್ತಲಿರುವವರೆಲ್ಲ ನಿಮ್ಮ್ಫ ವಿರುಧ್ಧ ಸಂಚು ರೂಪಿಸ್ತಿದಾರೆ ಅಂತ ನಿಮ್ಮನ್ನ ನೀವೇ ನಂಬಿಸಿಕೊಂಡು, ನಂತರ ಮ್ಯಾನೇಜಮೆಂಟನ್ನೂ ನಂಬಿಸೋದಕ್ಕೆ ಹೊರಟಿರಿ.ಯಾರು - ಯಾರ ಜೊತೆ ಎಲ್ಲಿ ನಿಂತು ಮಾತಾಡಿದ್ರು, ಯಾರ್ಯಾರು ಒಟ್ಟಿಗೆ ಊಟಕ್ ಹೋದ್ರು,ಕಾಫಿ - ತಿಂಡಿಗೆ ಹೋದ್ರು ಅಂತ ಜಾಸೂಸಿ ಶುರುಮಾಡಿದ್ರಿ. ಅದನ್ನೆಲ್ಲಾ ತಂದು ನಿಮಗೆ ಹೇಳೋರದೊಂದು ಗುಂಪು ಕಟ್ಟಿಕೊಂಡ್ರಿ. ತಿಂಗಳಿಗೊಮ್ಮೆ ನಿಮ್ಮ ಕ್ಯೆ ಕೆಳಗಿನವರ ಮೊಬ್ಯೆಲ್ ಪ್ರಿಂಟ್ ಔಟ್ ತರಿಸಿಕೊಂಡು ನೋಡುವ ಬೇಹುಗಾರರಾದ್ರಿ. ಯಾರೂ ನಿಮ್ಮ ವಿರುಧ್ಧ ಮ್ಯಾನೇಜ್ಮೆಂಟಿಗೆ ದೂರು ಒಯ್ಯದಂತೆ ಕಾಯುವ ಚೌಕಿದಾರರಾದ್ರಿ. ಆದ್ರೆ ಭಟ್ರೇ, ನೀವ್ಯಾವತ್ತೂ ಮಾಡಬೇಕಾಗಿದ್ದ ಕೆಲಸ ಮಾಡಲೇ ಇಲ್ಲ.
ಕ್ಯೆ ಕೆಳಗಿನವ್ರು ಸರಿಯಾಗಿ ಕೆಲಸ ಮಾಡ್ತಿಲ್ಲ, ಅವ್ರು ಕೋ-ಆಪರೇಟ್ ಮಾಡ್ತಿಲ್ಲ, ನನ್ನ ವಿರುಧ್ಧ ದೂರು ಕೊಡೋದ್ರಲ್ಲೇ ಕಾಲಕಳೀತಿದಾರೆ ಅಂತ ದೂರೋದು ಚಾನೆಲ್ಲೊಂದರ ಸುದ್ದಿ ವಿಭಾಗದ ಮುಖ್ಯಸ್ಥನಾದವನಿಗೆ ಶೋಭೆ ತರುವ ಕೆಲಸ ಅಲ್ಲ ಅನ್ನೋದು ನಿಮಗೆ ಕಡೆತನಕ ಅರ್ಥವಾಗಲಿಲ್ಲ ಅನ್ನೋದೇ ಬೇಜಾರು. ಚಾನಲ್ ನಲ್ಲಿರೋ ಯಾರ ಮನಸಿನಲ್ಲೂ ನಿಮ್ಮ ಬಗ್ಗೆ ವಿಷ ಇಲ್ಲ. ಒಬ್ಬ ಹಿರಿಯ ಮಿತ್ರನಾಗಿ ನೀವು ಎಲ್ಲರಿಗೂ ಬೇಕು. ನಾನು ಹೋಗಿ ಬರಲೇ ಅಂತ ಕೇಳಿದ್ದೀರ. ಮತ್ತೆ ಬರೋದಾದ್ರೆ ನಿಮ್ಮ ಶಕ್ತಿಯೇನು - ವೀಕ್ನೆಸ್ ಏನು ಅನ್ನೋದನ್ನ ಅರ್ಥ ಮಾಡ್ಕೊಂಡು ಬನ್ನಿ. ನಿಮ್ಮ ತಾಕತ್ತಿಗೆ ನೀಗೋ ಹುದ್ದೆಗೆ ಬನ್ನಿ. ಸುಮ್ನೇ "ಐ ಯಾಮ್ ದಿ ಚೀಫ್" ಅಂದ್ಕೊಂಡು ಬಂದುಬಿಟ್ರೆ ಮತ್ತೆ ಇದೇ ಕಥೆಯಾದೀತು. ಯಾಕಂದ್ರೆ ನೂರಾರು ಜನರ ಬದುಕು ಒಂದು ಚಾನಲ್ಲಿನ ಯಶಸ್ಸಿನ ಮೇಲೆ ನಿಂತಿರುತ್ತೆ. ಅದರ ಮೇಲೆ ಯಾರೋ ಒಬ್ಬ ಬಂದು ನೀರು ಸುರೀಬಾರ್ದು. ಅಲ್ವಾ ಭಟ್ರೇ...

Anonymous said...

edannu bhatta mahapathna endu kareyabude

venkatesh said...

manushyara mele nanaginnu nambike hoogilla emba bhatara maatu nijakku kaadisutte. individual aagi tumba strong agiruvavaru team leader aagi eeke sooluttare? bhattar svagata samvedanasheelarennu chintanege hachuvantadu. avrar hosa avatarakke chaitanya mattu spooti sigali