ಸೋಮವಾರ ವಿಕಾಸ ಸೌಧದಲ್ಲಿ ಒಬ್ಬ ನಕಲಿ ಪತ್ರಕರ್ತನ ಬಂಧನವಾಗಿದೆ. ಈ ಟಿವಿ ವರದಿಗಾರ ಸಂಜಯ್ ಎಂದು ಹೇಳಿಕೊಂಡು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರಿಂದ ಹಣ ಪಡೆಯಲು ಯತ್ನಿಸಿದ್ದ ಜಗದೀಶ್ ಬಂಧಿತ. ಒಂದು ವಾರದ ಹಿಂದೆಯೇ ಮಂತ್ರಿಯನ್ನು ಕಂಡು ತನ್ನ ತಾಯಿಗೆ ತೀವ್ರ ಅನಾರೋಗ್ಯ ಚಿಕಿತ್ಸೆಗೆ ಸಹಾಯ ಮಾಡಿ ಎಂದಿದ್ದಾನೆ. ಆಯ್ತು ನೋಡೋಣ ಸೋಮವಾರ ಬನ್ನಿ ಎಂದು ಹೇಳಿ ಕಳುಹಿಸಿದ್ದಾರೆ. ಮಂತ್ರಿ ತನ್ನ ಆಪ್ತ ಸಿಬ್ಬಂದಿಗೂ ಈ ಬಗ್ಗೆ ಮಾಹಿತಿ ನೀಡಿ, ಸಾಧ್ಯವಾದರೆ ಸರಕಾರಿ ಆಸ್ಪತ್ರೆಯಲ್ಲಿ ಅವರ ತಾಯಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಎಂದಿದ್ದಾರೆ.
ಮಂತ್ರಿಯ ಆಣತಿಯಂತೆ ಜಗದೀಶ್ ಸೋಮವಾರ ಮಂತ್ರಿಯನ್ನು ಕಾಣಲು ವಿಕಾಸ ಸೌಧಕ್ಕೆ ಬಂದಿದ್ದಾನೆ. ಬಂದವನೇ ತನ್ನ ಮೊಬೈಲ್ ಚಾರ್ಜ್ ಮಾಡಲು ಚಾರ್ಜರ್ ಕೊಡಿ ಎಂದು ಕೇಳಿದ್ದಾನೆ. ಅಲ್ಲಿಯ ನೌಕರರು ಚಾರ್ಜರ್ ಇಲ್ಲ ಎಂದಾಗ, ನಾನು ಈ-ಟಿವಿ ವರದಿಗಾರ ನನಗೆ ಚಾರ್ಜರ್ ಬೇಕೇ ಬೇಕು, ತರಿಸಿ ಕೊಡಿ ಎಂದೆಲ್ಲಾ ಕೂಗಾಡಿದ್ದಾನೆ. ಆತನ ವರ್ತನೆ ಸಹಜವಾಗಿಯೇ ಅನುಮಾನ ಹುಟ್ಟಿಸಿದೆ.
ಈ ಟಿವಿ ಕಚೇರಿಗೆ ಫೋನ್ ಮಾಡಿ ವಿಚಾರಿಸಿದರೆ, ಸಂಜಯ್ ಎಂಬ ಹೆಸರಿನವರ್ಯಾರೂ ಸುದ್ದಿ ವಿಭಾಗದಲ್ಲಿಲ್ಲ. ಮಂತ್ರಿ ಸಹಚರರು ಆತನನ್ನು ಅಲ್ಲಿಯೇ ಕೂರಿಸಿ, ನಂತರ ಈ ಟಿವಿ ಸುದ್ದಿ ವಾಹಿನಿ ಸಿಬ್ಬಂದಿ ಸಹಾಯದೊಂದಿಗೆ ವಿಧಾನಸಭಾ ಪೊಲೀಸ್ ಸುಪರ್ದಿಗೆ ನೀಡಿದರು.
ಪತ್ರಕರ್ತರೆಂದರೆ ಸುಲಿಗೆಕೋರರು, ಬ್ಲಾಕ್ ಮೇಲ್ ಪ್ರವೀಣರು ಎಂಬ ಟೀಕೆಗಳಿಗೆ ಇಂತಹ ನಕಲಿ ಪತ್ರಕರ್ತರು ಕಾರಣ. ಇಂತಹ ನಕಲಿ ಪತ್ರಕರ್ತರ ಹಾವಳಿಯಿಂದ ಪತ್ರಿಕೋದ್ಯಮದ ಹೆಸರು ಹಾಳು. ಬಂಧಿತ, ಸಂಜಯ್ ಎನ್ನುವ ಹೆಸರಿನಲ್ಲಿ ದಂಧೆ ಮಾಡ್ತಿದ್ದ. ಆದರೆ ಅದೇ ಹೆಸರಿನ ವರದಿಗಾರನೊಬ್ಬ ಈ ಟಿವಿಯ ಉದ್ಯೋಗಿಯಾಗಿದ್ದಿದ್ದರೆ? ಆತ ಅತ್ಯಂತ ಪ್ರಾಮಾಣಿಕನಾಗಿದ್ದರೂ, ಫೀಲ್ಡ್ ನಲ್ಲಿ ಭ್ರಷ್ಟ ಎನ್ನುವ ಮಾತು ಪ್ರಚಲಿತವಾಗಿರುತ್ತಿತ್ತು. ವ್ಯಕ್ತಿಯೊಬ್ಬನ ತೇಜೋವಧೆ ಮಾಡುವ ಕೆಲಸ ತೀರಾ ಕಷ್ಟವೇನಲ್ಲ.
ಕೊನೆ ಮಾತು:
ಒಬ್ಬ ನಕಲಿ ಪತ್ರಕರ್ತ ದುಡ್ಡು ಮಾಡಲು ಹೋಗಿ ಬಂಧನಕ್ಕೊಳಗಾಗಿದ್ದಾನೆ. ಆದರೆ ದುಡ್ಡು, ಸೈಟ್ ಮಾಡುತ್ತಲೇ ಇರುವ ಅಸಲಿ ಪತ್ರಕರ್ತರು ಬಹುಸಂಖ್ಯೆಯಲ್ಲಿ ಇನ್ನೂ ವಿಧಾನಸೌಧ, ವಿಕಾಸ ಸೌಧಗಳಲ್ಲಿ ತಿರುಗಾಡುತ್ತಿದ್ದಾರೆ. ಅವರ ಬಂಧನ... ಆಗದ ಮಾತು ಬಿಡಿ!
Monday, October 13, 2008
Subscribe to:
Post Comments (Atom)
No comments:
Post a Comment