ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವುದು ಯಾರಿಗೆ? ಇಡೀ ರಾಜ್ಯಕ್ಕೊ? ಶಿವಮೊಗ್ಗ ಜಿಲ್ಲೆಗೊ? ಶಿಕಾರಿಪುರಕ್ಕೊ? ಈ ಪ್ರಶ್ನೆಗಳಿಗೆ ಉತ್ತರ ಇವತ್ತಿನ `ಕನ್ನಡ ಪ್ರಭ’ದಲ್ಲಿದೆ (ಇಲ್ಲಿದೆ). ಈ ಹಿಂದೆ ಮಾಜಿ ಪ್ರದಾನಿ ಎಚ್.ಡಿ. ದೇವೇಗೌಡ ಮತ್ತು ಅವರ ಮಗ ಎಚ್.ಡಿ. ರೇವಣ್ಣ ಅವರ ಬಗ್ಗೆಯೂ ಇಂತಹುದೆ ಆರೋಪಗಳು ಬಂದಿದ್ದವು. ಮಾಧ್ಯಮಗಳು ಎಂದಿನಂತೆ ಅವರ ಮೇಲೆ ಹೆಚ್ಚಾಗಿಯೇ ಹರಿಹಾಯ್ದಿದ್ದವು. ಯಡಿಯೂರಪ್ಪ ಅವರ ಪ್ರಕರಣದಲ್ಲಿ ಈಗತಾನೇ ಬಾಯಿ ಬಿಡುತ್ತಿವೆ ಎಂದುಕೊಂಡರು ಮುಂದೆ ತೀವ್ರವಾಗಿ ಖಂಡಿಸಬೇಕಾದ ಜವಾಬ್ದಾರಿ ಮಾಧ್ಯಮಗಳದ್ದು ಎನ್ನುವುದನ್ನು ಮರೆಯಬಾರದು.
ಬಿಜೆಪಿ ಸರ್ಕಾರ ನೂರುದಿನ ಪೂರೈಸಿದಾಗ ಯಡಿಯೂರಪ್ಪ ಪತ್ರಿಕೆಗಳಿಗೆ ನೀಡಿದ ಸಂದರ್ಶನಗಳಲ್ಲಿ `ಆಡಳಿತದಲ್ಲಿ ನನ್ನ ಕುಟುಂಬದವರ ಹಸ್ತಕ್ಷೇಪ ಇಲ್ಲ" ಎಂದು ಹೇಳಿಕೊಂಡಿದ್ದರು. ಅದರಲ್ಲೂ "ಅಗ್ನಿ" ವಾರಪತ್ರಿಕೆ ಸಂದರ್ಶನದಲ್ಲಿ "ನನ್ನ ಯಾವೊಬ್ಬ ಸಂಬಂಧಿಯೂ ಮೂಗು ತೂರಿಸುತ್ತಿಲ್ಲ" ಎನ್ನುವಂತೆ ಮಾತನ್ನಾಡಿದ್ದರು. ಆದರೆ ಬಹುತೇಕ ಮಾಧ್ಯಮಗಳಿಗೆ ಗೊತ್ತಿಲ್ಲದ (ಗೊತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿವೆ) ಸಂಗತಿ ಎಂದರೆ ಇದೇ ಯಡಿಯೂರಪ್ಪ ಅವರ ತಂಗಿಯ ಮಗ ಅರವಿಂದ್ ಈಗ ವಿಧಾನಸೌಧದಲ್ಲಿ ವಿಶೇಷ ಅಧಿಕಾರಿಯಾಗಿದ್ದಾರೆ. ಈ ಬೆಳವಣಿಗೆ ಆಗಿದ್ದು ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ.
ಮತ್ತೆ ಹಿಂದೆ ತಿರುಗಿ ನೋಡುವುದಾದರೆ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಅಳಿಯ ಸಿದ್ಧಾರ್ಥ ಪ್ರಭಾವಿಯಾಗಿದ್ದರು. ಆದರೆ ಎಸ್.ಎಂ.ಕೃಷ್ಣ ಯಾವತ್ತೂ ಮಂಡ್ಯ ಜಿಲ್ಲೆಗೆ ಮೀಸಲಾಗಿರಲಿಲ್ಲ. ಮದ್ದೂರಿಗೆ ಏನನ್ನೂ ಮಾಡಲಿಲ್ಲ. ಅದೇ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಮದ್ದೂರಿನಿಂದ ಬೆಂಗಳೂರಿನ ಚಾಮರಾಜಪೇಟೆಗೆ ಬಂದು ಬಿಟ್ಟರು. ರಾಜ್ಯದ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ದೇವರಾಜ ಅರಸು ಕೂಡ ತಮ್ಮ ಕ್ಷೇತ್ರ ಹುಣಸೂರಿಗೆ ಏನೇನೂ ಮಾಡಲಿಲ್ಲ. ಹಾಗೆಯೇ ನಿಜಲಿಂಗಪ್ಪ ಅವರ ಕಾಲದಲ್ಲಿ ಅವರ ತವರು ಜಿಲ್ಲೆ ಚಿತ್ರದುರ್ಗಕ್ಕೆ ಸಂದ ಕೊಡುಗೆಯೂ ಅಷ್ಟಕಷ್ಟೆ. ಹಾಗೇ ನಿಜಲಿಂಗಪ್ಪ ಅವರು ಮನಸ್ಸು ಮಾಡಿದ್ದರೆ ಅವತ್ತೇ ಭದ್ರ ಮೇಲ್ದಂಡೆ ಯೋಜನೆಗೆ ಹಸಿರು ನಿಶಾನೆ ತೋರಿಸಬಹುದಿತ್ತು. ಅವರೆಲ್ಲರ ದೃಷ್ಟಿಯಲ್ಲಿ "ಸಮಗ್ರ ಕರ್ನಾಟಕ" ಇದುದ್ದರಿಂದ ಅವರ್ಯಾರು ಅಂತಹ ತಪ್ಪುಗಳನ್ನು ಮಾಡಲಿಲ್ಲ.
ಈ ಇತಿಹಾಸ ಗೊತ್ತಿರದ ಯಡಿಯೂರಪ್ಪ ತಮ್ಮ ವ್ಯಾಪ್ತಿಯನ್ನು ಕಿರಿದಾಗಿಸಿಕೊಳ್ಳುತ್ತಿದ್ದಾರೆ. ಅತ್ಯಂತ ಹಿಂದುಳಿದ ಗಡಿ ಜಿಲ್ಲೆಯಾದ ಚಾಮರಾಜನಗರವನ್ನು ಮರೆತಿದ್ದಾರೆ. ಶಾಪಗ್ರಸ್ತ ಜಿಲ್ಲೆಯೆಂದೇ ಕರೆಯಲ್ಪಡುವ ಚಾಮರಾಜನಗರಕ್ಕೆ ಇವರು ಕಾಲಿಡದಿದ್ದರೂ ಅಭಿವೃದ್ಧಿಗೆ ಪೂರಕವಾದ ಅನುದಾನ ಬಿಡುಗಡೆ ಮಾಡಬಾರದೆ? ಭರಚುಕ್ಕಿ ಉತ್ಸವಕ್ಕೆ ಸಿದ್ಧತೆ ನಡೆಸಿಕೊಡಲು ಚಾಮರಾಜನಗರ ಜಿಲ್ಲಾಡಳಿತ ಕಾಯುತ್ತಾ ಕುಳಿತಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಬೇಕೆಂದೇ ಜಿಲ್ಲಾಡಳಿತ ಭರಚುಕ್ಕಿ ಉತ್ಸವವನ್ನು ಉಮ್ಮಿಕೊಂಡಿತು. ಅದೇ ದೃಷ್ಟಿಯಿಂದ ದಸರಾ ವೇಳೆಯಲ್ಲಿ ಈ ಉತ್ಸವ ನಡೆಸುವ ಚಿಂತನೆ ಇತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರ ಬಂದು ಅಗತ್ಯ ಅನುದಾನ ಬಿಡುಗಡೆ ಮಾಡಿಲ್ಲ. ಮೇಲಾಗಿ ಮುಖ್ಯಮಂತ್ರಿಗಳು ಬಂದು ಉದ್ಘಾಟನೆ ಮಾಡಲಿ ಎನ್ನುವ ಸ್ಥಳೀಯ ಶಾಸಕರ ಮಾತಿಗೂ ಮನ್ನಣೆ ಸಿಕ್ಕಿಲ್ಲ.
ಕನ್ನಡಪ್ರಭ ವರದಿ ಆಧರಿಸಿ ಹೇಳುವುದಾದರೆ ಶಿವಮೊಗ್ಗ ಜಿಲ್ಲೆಗೆ 4.25 ಕೋಟಿ ರು ಬಿಡುಗಡೆಯಾಗಿದೆ. ಯಡಿಯೂರಪ್ಪ ಕೇವಲ ಶಿವಮೊಗ್ಗಕ್ಕಷ್ಟೆ ಅಲ್ಲದೆ ಅಧಿಕಾರ ಅನುಭವಿಸಲು ಕಾರಣಕರ್ತರಾದ ಗಣಿಧಣಿಗಳಿಗೂ ಪಾಲು ನೀಡಿದ್ದಾರೆ. ಬಳ್ಳಾರಿ ಹೆಚ್ಚು ಅನುದಾನ ಪಡೆದ ಜಿಲ್ಲೆಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಆದರೆ ಹಾಸನ, ರಾಮನಗರ ಜಿಲ್ಲೆಗಳಿಗೆ ಒಂದುಪೈಸೆ ಸಹ ಬಿಡುಗಡೆಯಾಗಿಲ್ಲ. ಹಾಸನದಲ್ಲಿ ರೇವಣ್ಣ, ರಾಮನಗರದಲ್ಲಿ ಕುಮಾರಸ್ವಾಮಿ ಇದ್ದಾರೆ ಎಂಬುದು ಎಲ್ಲರಿಗೂ ವೇದ್ಯ. ಇನ್ನು ಮೈಸೂರಲ್ಲಿ ಕಾಂಗ್ರೆಸ್- ಜೆಡಿಎಸ್ ಪ್ರಾಬಲ್ಯವಿದೆ. ಅದಕ್ಕಾಗಿ ಆ ಜಿಲ್ಲೆಗಳಿಗೆ ಅನುದಾನ ನೀಡಲಾಗಿಲ್ಲ. ಹಾಗಾದರೆ ಯಾರಿಗೆ ಮುಖ್ಯಮಂತ್ರಿ?
ನಯಾಪೈಸೆಯೂ ಬಿಡುಗಡೆಯಾಗದ ಬೆಂಗಳೂರು ಗ್ರಾಮಾಂತರ, ಬಿಜಾಪುರ, ಚಾಮರಾಜನಗರ, ಮೈಸೂರು, ಹಾಸನ, ಉಡುಪಿ ಜಿಲ್ಲೆಗಳ ಜನರು ನಿಮ್ಮ ಯಾವ ಪುರುಷಾರ್ಥಕ್ಕೆ "ನಮ್ಮ ಮುಖ್ಯಮಂತ್ರಿ" ಎನ್ನಬೇಕು?
Monday, October 13, 2008
Subscribe to:
Post Comments (Atom)
No comments:
Post a Comment