Thursday, October 2, 2008

ಮರೆಯದಿರಿ ಈ ಗಾಂಧಿಯ...

"ಒಂದು ದಿನದ ಅವಧಿಗೆ ನಾನೊಬ್ಬ ಸರ್ವಾಧಿಕಾರಿಕಾರಿಯಾಗಿ ನೇಮಕಗೊಂಡಿದ್ದರೆ, ದೇಶದ ಎಲ್ಲ ಪತ್ರಿಕೆಗಳನ್ನು ನಿಷೇಧಿಸುತ್ತಿದ್ದೆ; ಹರಿಜನ ಪತ್ರಿಕೆಯೊಂದನ್ನು ಹೊರತು ಪಡಿಸಿ..."
ಇದು ಮಹಾತ್ಮ ಗಾಂಧಿ ಆಡಿದ ಮಾತು. ೧೯೪೬ ಜೂನ್ ೧೯ರಂದು ಪ್ರಾರ್ಥನಾ ಸಭೆಯಲ್ಲಿ ಪತ್ರಿಕೆಗಳ ಧೋರಣೆ ಕುರಿತು ನೊಂದು ಅವರು ಈ ರೀತಿ ಹೇಳಿದ್ದರು. ಅವತ್ತು ಪತ್ರಿಕೆಗಳು ಕಮರ್ಷಿಯಲ್ ಆಗಿದ್ದವು. ಸರ್ಕಾರದ ವಿರುದ್ಧ ನಿಭೀರ್ತಿಯಿಂದ ಬರೆಯುವುದಕ್ಕೆ ಹೆದರುತ್ತಿದ್ದವು. ಹರಿಜನ ಪತ್ರಿಕೆ ಮಾತ್ರ ಸಮಾಜ ಮುಖಿಯಾಗಿತ್ತು. ಅದಕ್ಕೆ ಅದನ್ನು ನಿಷೇಧಿಸುವ ಪತ್ರಿಕೆಗಳಿಂದ ಹೊರತಾಗಿಸಲಾಗಿತ್ತು.
ಗಾಂಧಿ ಮುತ್ಸದಿಯಾಗಿ, ಅಪ್ರತಿಮ ಹೋರಾಟಗಾರನಾಗಿ, ಅಹಿಂಸ ಪ್ರತಿಪಾದಕನಾಗಿ ನಮಗೆ ಚಿರಪರಿಚಿತ. ಹಾಗೇ ಅವರೊಬ್ಬ ಪತ್ರಕರ್ತರೂ ಆಗಿದ್ದರು. ಯಂಗ್ ಇಂಡಿಯಾ, ಹರಿಜನ, ನವಜೀವನ್ ಪತ್ರಿಕೆಗಳಿಗೆ ಸಂಪಾದಕರಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದುಡಿದವರು.
ಪತ್ರಿಕೆಯೊಂದರ ಹೊಣೆ ಏನು ಎಂಬುದನ್ನು ಒಬ್ಬ ಪತ್ರಕರ್ತನಾಗಿ ಈ ಪತ್ರಿಕೆಗಳ ಮೂಲಕ ಮಾಡಿ ತೋರಿಸಿದರು.
ಇಡೀ ದೇಶ ಗಾಂಧಿಯೊಬ್ಬರ ಮಾತು ಕೇಳಲು ಸಾಧ್ಯವಾಗಿದ್ದು ಈ ಪತ್ರಿಕೆಗಳಿಂದಲೇ. ದೇಶದ ಮೂಲೆ ಮೂಲೆಗೆ ತಮ್ಮ ದನಿ ತಲುಪಿಸುವುದಕ್ಕೆ ಗಾಂಧಿ ಪತ್ರಿಕೋದ್ಯಮವನ್ನು ಸಮರ್ಥವಾಗಿ ಬಳಸಿಕೊಂಡರು. ಸಮಾಜದ ಹುಳುಕುಗಳನ್ನು ಎತ್ತಿ ಹಿಡಿಯುತ್ತಾ, ಮಾರ್ಗದರ್ಶಿ ಎನಿಸುವ ಅನೇಕ ಹಿತನುಡಿಗಳನ್ನು ದೇಶಬಾಂಧವರಿಗೆ ಹಂಚಿದರು. ಗಾಂಧೀಜಿ ಪತ್ರಿಕೋದ್ಯಮಕ್ಕೆ ಅತ್ಯುತ್ತಮ ಮೌಲ್ಯಗಳನ್ನು ತಂದುಕೊಟ್ಟರು. ಕೆಟ್ಟ ಸ್ಥಿತಿಯಲ್ಲಿ ಧೈರ್ಯ ತುಂಬುವುದು, ಸತ್ಯದ ಬಗ್ಗೆ ಅಚಲ ನಂಬಿಕೆ ಇಡುವುದು, ವಸ್ತುನಿಷ್ಠತೆ ಉಳಿಸಿಕೊಳ್ಳುವುದು, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಟೊಂಕ ಕಟ್ಟುವುದನ್ನು ಅವರು ಹೇಳಿಕೊಟ್ಟರು. ಅವರಿಗೆ ಗೊತ್ತಿತ್ತು ಸಾರ್ವಜನಿಕ ಅಭಿಪ್ರಾಯ ಮೂಡಿಸುವುದಕ್ಕೆ ಮತ್ತು ಆಡಳಿತ ನಿರ್ಧಾರಗಳ ಮೇಲೆ ಪ್ರಭಾವ ಬೀರುವುದಕ್ಕೆ ಪತ್ರಿಕೆ ಅಸ್ತ್ರವಾಗಬಲ್ಲದು ಎಂದು.
ಹರಿಜನ ಮತ್ತು ಯಂಗ್ ಇಂಡಿಯಾ ಪತ್ರಿಕೆಗಳನ್ನು ಆರಂಭಿಸಿ ದೇಶದ ಯುವ ಮನಸ್ಸುಗಳನ್ನು ಸೆಳೆದರು. ಹರಿಜನ ಪತ್ರಿಕೆ ಅನುವಾದಿತ ಆವೃತಿಗಳಲ್ಲಿ ದೇಶದ ವಿವಿಧ ಭಾಷೆಗಳಲ್ಲಿ ಪ್ರಕಟವಾಗುವಷ್ಟು ಪ್ರಭಾವ ಬೀರಿತು. ಯಾಕೆಂದರೆ ಗಾಂಧಿ ವಿಚಾರಧಾರೆಗಳು ಅಷ್ಟು ಪ್ರಖರವಾಗಿದ್ದವು.
ಹರಿಜನ್ ಬಂಧು (ಗುಜರಾತಿ), ಹರಿಜನ ಸೇವಕ್ (ಹಿಂದಿ) ಪತ್ರಿಕೆಗಳು ದೇಶದ ಧ್ವನಿಯಾದವು.
ದೇಶದ ಪತ್ರಿಕೋದ್ಯಮ ಚಿಗುರುತ್ತಿರುವ ಹೊತ್ತಿನಲ್ಲಿ ಗಾಂಧಿ ಒಬ್ಬ ಪತ್ರಕರ್ತನಾಗಿ ಇಷ್ಟೆಲ್ಲಾ ಕೆಲಸ ಮಾಡಿದರು. ಒಂದೆಡೆ ಸ್ವತಂತ್ರ ಹೋರಾಟಕ್ಕೆ ಇಡೀ ದೇಶವನ್ನು ಒಗ್ಗೂಡಿಸುತ್ತಿದ್ದರು. ಮತ್ತೊಂದೆಡೆ ದೇಶವನ್ನು ಕಿತ್ತು ತಿನ್ನುವ ಜಾತೀಯತೆ, ಅಸ್ಪೃಶ್ಯತೆ ಹೊಡೆದೋಡಿಸಲು ಶ್ರಮಿಸುತ್ತಿದ್ದರು.
ಇಂಥ ಗಾಂಧೀಜಿಯನ್ನು ಇಂದು ಪತ್ರಿಕೆಗಳು ಹೇಗೆ ಸ್ಮರಿಸಿಕೊಂಡಿವೆ ಎನ್ನುವುದರತ್ತ ಇವತ್ತಿನ ಸುದ್ದಿಮಾತು.

ಕನ್ನಡಪ್ರಭದಲ್ಲಿ ಒಂದು ವಿಶೇಷ ಸುದ್ದಿ: ಹರಿಜನರ ಉದ್ಧಾರಕ್ಕಾಗಿ ಗಾಂಧಿ ಗಂಗಾಜಲ ಕುಡಿಯುತ್ತಿದ್ದ ಬೆಳ್ಳಿಲೋಟವನ್ನು ಹರಾಜಿಗಿಟ್ಟ ಬಗ್ಗೆ ಕೆ.ಪಿ. ನಾಗರಾಜ್ ಬರೆದಿದ್ದಾರೆ. ಇದು ನಡೆದಿದ್ದು ಕೋಲಾರ ಜಿಲ್ಲೆಯ ಬಂಗಾರ ಪೇಟೆಯಲ್ಲಿ, ೧೯೩೬ರ ಮೇ ೩೧ರಂದು. (ಪೂರ್ಣ ವರದಿ ಇಲ್ಲಿ ಓದಿಕೊಳ್ಳಬಹುದು). ಜತೆಗೆ ೧೫೦ ದೇಶಗಳಲ್ಲಿ ಗಾಂಧೀಜಿ ಅವರ ಅಂಚೆ ಚೀಟಿ ತಂದಿರುವ ಬಗ್ಗೆ ಒಂದು ವರದಿಯೂ ಇದೆ.
ವಿಜಯ ಕರ್ನಾಟಕ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಸಂಪಾದಕೀಯ ಪುಟದಲ್ಲಿ ಗಾಂಧಿ ಮತ್ತು ಲಾಲ್ ಬಹದ್ಧೂರ ಶಾಸ್ತ್ರಿಗಳಿಬ್ಬರನ್ನೂ ಸ್ಮರಿಸಿಕೊಂಡಿದೆ. ಸೋಕಾಲ್ಡ್ ಸಮಾಜಮುಖಿ ಪತ್ರಿಕೆ ಪ್ರಜಾವಾಣಿ ಬೆಂಗಳೂರಿನಲ್ಲಿ ಮಾತ್ರ ಪ್ರಸಾರವಾಗುವ ಮೆಟ್ರೋದಲ್ಲಿ ಗಾಂಧಿ ನಮ್ಮ ನಡುವೆ ಹೇಗಿದ್ದಾರೆಂಬ ಪುಟ್ಟ ಬರಹಕ್ಕೆ ಸೀಮಿತಗೊಳಿಸಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ಮುಖಪುಟದಲ್ಲಿ ಎರಡು ವಿಶೇಷ ವರದಿಗಳನ್ನು ಪ್ರಕಟಿಸಿದೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಗಾಂಧಿ ಬಗ್ಗೆ ಏನೂ ಇಲ್ಲ. ಆದರೆ ಒಬ್ಬ ಅಹಿಂಸಾವಾದಿ ಹುಟ್ಟಿದ ದಿನವಾದ ಇಂದು, ಟೈಮ್ಸ್ ಆಫ್ ಇಂಡಿಯಾ, ಅಹಿಂಸೆಯ ಪ್ರತಿಪಾದಕ ಬೌದ್ಧ ಸಂನ್ಯಾಸಿಯೊಬ್ಬರನ್ನು ಅತಿಥಿ ಸಂಪಾದರಕ್ಕನ್ನಾಗಿ ಕರೆಸಿ ಇಂದಿನ ಸಂಚಿಕೆ ರೂಪಿಸಿದೆ. ಇದು ಕೂಡ ಗಾಂಧಿ ತತ್ವಗಳಿಗೆ ಸಲ್ಲಿಸುವ ಗೌರವವೇ. ಗಾಂಧೀಜಿಯ ತತ್ವಾದರ್ಶಗಳನ್ನು ಮತ್ತೆ ಮತ್ತೆ ನೆನಪಿಸುವುದು ಪತ್ರಿಕೆಗಳ ಕರ್ತವ್ಯ. ಪತ್ರಿಕೆಗಳು ಈ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಪ್ರವೃತ್ತವಾಗಲಿ.

2 comments:

j.k said...

mareyadiri e gandhiya...lekhana patrikodhyamada vasthavikatte mele belakuchellide. itteechege bhayotpadane ellede vyapiside. intaha sandarbadalle ahimsavadi gandhi hecchu nenapagabeku. e vasthavate socald no.1 patrikegalige bekagilla. it-bt odugara avalambhitha patrikegalalli gandhi nireekshishode sariyalla anisutte.
*jnanendra pa.ba.

MSR said...

geleyre, 'mreydiri e gandhiya' lekhana channagide...adre, gandhi kalAdAlli sarkaarAd virudha bareyuva saakastu patrikegliddavu...tarun bharath ittu...panjab kesari ittu..heege patti madta hodre sakastu patrikegala ptti madbahudu...gandhi obba olleya vyapari kooda.. hagagi "harijan patrike"ya prasarana sankhye hechisikolloke bere patrikeglanna ban madtidreno...!para ninde atma prashamse avttigoo ittu.. ivttigoo ide... neevu madikoltirodu kuda ade alva...?