Sunday, September 28, 2008

ಸ್ಟುಡಿಯೋದಲ್ಲಿ ವರ್ಣಭೇದ ನೀತಿ!!

ಒಂದು ವಾರದ ಹಿಂದಿನ ಮಾತು. ಮರೆಯುವ ಮುನ್ನ ದಾಖಲಿಸಿ ಬಿಡುವುದು ಒಳ್ಳೆಯದು. ಟೈಮ್ಸ್ ನೌ ಸುದ್ದಿವಾಹಿನಿಯಲ್ಲಿ ಚರ್ಚೆ. ಆರ್ನಾಬ್ ಗೋಸ್ವಾಮಿ ಜತೆ ಅಂದು ಕಪಿಲ್ ಸಿಬಲ್ (ಕಾಂಗ್ರೆಸ್), ಡಿ.ರಾಜ (ಸಿಪಿಐ), ಅರುಣ್ ಜೈಟ್ಲಿ (ಬಿಜೆಪಿ) ಹಾಗೂ ಪತ್ರಕರ್ತ ಎಂ. ಜೆ ಅಕ್ಬರ್ ಇದ್ದರು.
ಗೋಸ್ವಾಮಿ ಗೊತ್ತಲ್ಲ. ಟಿಪಿಕಲ್ ಇಂಗ್ಲಿಷ್ ಚಾನೆಲ್ ಪತ್ರಕರ್ತ. ಪ್ರಶ್ನೆ ಕೇಳೋ ಧಾಟಿಯಲ್ಲೇ ನನಗೆ ಈ ಪ್ರಶ್ನೆಗೆ ಉತ್ತರ ಬೇಕೇ ಬೇಕು ಎನ್ನುವ ದನಿ ಇರುತ್ತೆ. ಅದಕ್ಕಿಂತ ಮುಖ್ಯವಾಗಿ ಚರ್ಚೆ ವೇಳೆ ಒಂದಿಷ್ಟು ವಿವಾದಾತ್ಮಕ ಹೇಳಿಕೆಗಳು ಹೊರಬಂದು ದೇಶಾದ್ಯಂತ ಚರ್ಚೆ ಆದರೆ ಅಂತಹದೊಂದು ಕಾರ್ಯಕ್ರಮ ನಡೆಸಿಕೊಟ್ಟದ್ದು ಸಾರ್ಥಕ ಎಂದೇ ಅನೇಕ ಪತ್ರಕರ್ತರು ಲೆಕ್ಕ ಹಾಕುತ್ತಾರೆ.
ಅಂದೂ ಅದೇ ತೆರನ ಚರ್ಚೆ. ಮುಂದಿನ ಲೋಕಸಭಾ ಚುನಾವಣೆ ಎಂದರೆ ಅದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಪೈಪೋಟಿ. ಬಿಜೆಪಿ ಅಡ್ವಾನಿಯನ್ನು ತನ್ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದೆ. ಕಾಂಗ್ರೆಸ್ ನಿಂದ ಮನಮೋಹನ್ ಸಿಂಗ್. ಪ್ರಧಾನಿ ಹುದ್ದೆಗೆ ಇವರೀರ್ವರಲ್ಲಿ ಯಾರು ಬಲಾಢ್ಯರು ಎಂದು ಚರ್ಚೆ. ಸಿಬಲ್ ಹೇಳುವಂತೆ as of now Manmohan Singh is PM candidate of the Congress. ಚರ್ಚೆ ಕೇವಲ ಕಾಂಗ್ರೆಸ್ ಹಾಗೂ ಬಿಜೆಪಿ ಸುತ್ತಲೇ ಸುತ್ತುತ್ತಿತ್ತು.
ಒಂದು ಹಂತದಲ್ಲಿ ಗೋಸಾಮಿ ಅಡ್ವಾನಿ ಹಾಗೂ ಸಿಂಗ್ ಯಾರು ಸ್ಟ್ರಾಂಗ್ ಎಂದು ನಾಲ್ಕೂ ಮಂದಿಗೆ ಕೇಳಿದರು. ಎಂದಿನಂತೆ ಸಿಬಲ್ ಮನಮೋಹನ ಸಿಂಗ್ ಎಂದರೆ, ಜೈಟ್ಲಿ ಅಡ್ವಾನಿ ಎಂದರು. ಡಿ. ರಾಜ ಮಾತ್ರ ಈ ದೇಶದ ಜನ ಯಾರು ಪ್ರಧಾನಿ ಅನ್ನೋದನ್ನ ನಿರ್ಧರಿಸುತ್ತಾರೆ ಎಂದರು.
ಗೋಸ್ವಾಮಿ ಸುಮ್ಮನಾಗಲಿಲ್ಲ. "ನೀವು ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ. ನನ್ನ ಪ್ರಶ್ನೆ ಇರುವುದು ಇರುವ ಇಬ್ಬರಲ್ಲಿ ನಿಮಗೆ ಯಾರು ಹಿತವರು" ಎಂದು ಮತ್ತೆ ಕೇಳಿದರು. ರಾಜ ಕೋಪದಿಂದಲೇ "I am not here answer your questions. You can't decide the fight is between Advani and Manmohan Singh. People will decide who should become the PM", ಎಂದು ಗದರಿದರು. ಅಡ್ವಾನಿ - ಸಿಂಗ್ ನಡುವೆ ಒಬ್ಬರನ್ನು ಆಯ್ಕೆ ಮಾಡುವುದು ರಾಜನಿಗೆ ಸರಿಬರದ ಕಾರಣ ಹಾಗೆ ಮಾತನಾಡಿದ್ದರು.
ತಮಿಳುನಾಡಿನ ಕುಗ್ರಾಮ ಒಂದರಲ್ಲಿ ಒಂದಿಂಚು ಜಮೀನಿಲ್ಲದ ರೈತ ಕಾರ್ಮಿಕ ಕುಟಂಬದಲ್ಲಿ ಜನಿಸಿದ ರಾಜಾ ಆ ಹಳ್ಳಿಯವರ ಪೈಕಿ ವಿಶ್ವವಿದ್ಯಾನಿಲಯ ಮೆಟ್ಟಿಲು ಹತ್ತಿ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೊದಲಿಗ. ಇಂದು ರಾಜ ಸಿಪಿಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ. ಎಡ ಪಕ್ಷಗಳ ನೇತಾರರಲ್ಲಿ ಸಿದ್ಧಾಂತ ನಿಷ್ಠೆ ಹಾಗೂ ಸ್ಷಷ್ಟ ಧೋರಣೆ ಹೊಂದಿರುವ ಕೆಲವರಲ್ಲಿ ಅವರೂ ಒಬ್ಬರು. ಕುಗ್ರಾಮದಿಂದ ದೆಹಲಿ ಹಂತದ ವರೆಗೆ ನಡೆದ ದಾರಿ ಸುಗಮವೇನಾಗಿರಲಿಲ್ಲ. ಆದರೆ ಇಂಗ್ಲಿಷ್ ದೃಶ್ಯ ಮಾಧ್ಯಮ ಅವರನ್ನು ನಡೆಸಿಕೊಳ್ಳುವ ರೀತಿ ಇದೆಯಲ್ಲ, ಅದು ಅತ್ಯಂತ ಆಕ್ಷೇಪಾರ್ಹ.
ಮೇಲೆ ಉಲ್ಲೇಖಿಸಿದ ಚರ್ಚೆಯನ್ನು ವೀಕ್ಷಿಸಿದವರಿಗೆ ನೆನಪಿರಬಹುದು. ಡಿ. ರಾಜ ತಮ್ಮ ಅಭಿಪ್ರಾಯ ಮಂಡಿಸುವಾಗಲೆಲ್ಲ ಚಾನೆಲ್ ಸ್ಕ್ರೀನ್ ಮೇಲೆ ಕಾಣಿಸುತ್ತಿದ್ದುದು ಅರುಣ್ ಜೈಟ್ಲಿ. ರಾಜನ ದನಿ ಕೇಳುತ್ತಿತ್ತಷ್ಟೆ. ಅವರು ಮಾತು ಮುಗಿಸಬೇಕು ಅನ್ನುವಾಗ ಕೆಮರಾ ಒಮ್ಮೆ ಅವರನ್ನು ಹಾದು ಗೋಸ್ವಾಮಿ ಸೇರುತ್ತಿತ್ತು. ಎಡಪರ ಚಿಂತನೆಗಳಿಂದ ಕೂಡಿದ ರಾಜನ ಮಾತುಗಳಿಗೆ ವ್ಯಂಗ್ಯ ನಗು ತೋರುತ್ತಿದ್ದ ಜೈಟ್ಲಿಯನ್ನು ವೀಕ್ಷಕರು ನೋಡಬೇಕೆ? ಇದು ಒಂದು ಬಾರಿಯಲ್ಲ. ಕಾರ್ಯಕ್ರಮದ ಉದ್ದಕ್ಕೂ.. ಯಾಕೆ ಹೀಗೆ? ಟೈಮ್ಸ್ ನೌ ಸುದ್ದಿ ವಾಹಿನಿ ಒಂದು ಪ್ರಮುಖ ಪಕ್ಷದ ರಾಷ್ಟ್ರಿಯ ಕಾರ್ಯದರ್ಶಿಯನ್ನು ನಡೆಸಿಕೊಳ್ಳುವ ರೀತಿನಾ ಇದು? ಅಥವಾ ರಾಜ ನಂತಹ ನಿಮ್ನ ವರ್ಗ ಪ್ರತಿನಿಧಿಸುವ ನಾಯಕರನ್ನು ಹೀಗೇ ನಡೆಸಿಕೊಳ್ಳಬೇಕೆನ್ನುವುದು ಟೈಮ್ಸ್ ನೌ ನೀತಿಯೇ?
ಜಾತೀಯತೆ, ವರ್ಣಭೇದ ನೀತಿ ಬದಲಾದ ಕಾಲಘಟ್ಟದಲ್ಲಿ ಸುದ್ದಿ ವಾಹಿನಿಗಳ ಸ್ಟುಡಿಯೋಗಳಿಗೂ ಪ್ರವೇಶಿಸಿ ಬಿಟ್ಟವೆ?

2 comments:

Unknown said...

ಅರ್ನಾಬ್ ಗೋಸ್ವಾಮಿಯಂಥವರು ಇಡೀ ದೇಶದ ರಾಜಕೀಯವನ್ನು ತಾವೇ ನಿರ್ದೇಶಿಸಬೇಕು ಎಂದು ಬಯಸುತ್ತಾರೆ. ಎಲ್ಲವೂ ತಮ್ಮ ಅಂಕೆಯಲ್ಲಿರಬೇಕು ಎಂದು ಬಯಸುತ್ತಾರೆ.
ನೀವು ಗಮನಿಸಿದ ಹಾಗೆಯೇ ಅರ್ನಾಬ್ ತನ್ನ ಪ್ರಶ್ನೆಗೆ ಇಂಥದ್ದೇ ಉತ್ತರ ಬೇಕೆನ್ನುವ ದುರಹಂಕಾರಿ. ಅಹಂಕಾರ ಕೇವಲ ಬುದ್ಧಿಯನ್ನು ಮಾತ್ರವಲ್ಲ; ಆತನ ಇಡೀ ದೇಹವನ್ನು ಆವರಿಸಿದಂತೆ ಕಾಣುತ್ತದೆ. ಹೀಗಾಗಿ ಆತ ನೆಟ್ಟಗೆ ಸ್ಟೂಡಿಯೋದಲ್ಲಿ ಕುಳಿತುಕೊಳ್ಳುವುದನ್ನೂ ಕಲಿತಿಲ್ಲ.
ಇಬ್ಬರ ಹೆಸರು ಹೇಳಿ ಇವರಿಬ್ಬರಲ್ಲಿ ಯಾರು ಪ್ರಧಾನಿಯಾಗಬೇಕು ಎಂದು ಕೇಳುವುದೇ ದಾರ್ಷ್ಟ್ಯ. ದೇಶದ ಮುಂದಿನ ಪ್ರಧಾನಿ ಯಾರಾಗಬೇಕು ಎಂಬುದನ್ನು ಜನ ತೀರ್ಮಾನಿಸುತ್ತಾರೆ ಎಂಬುದು ಗೋಸ್ವಾಮಿಗೆ ಗೊತ್ತಿಲ್ಲ ಎಂದೇನಲ್ಲ. ಆದರೆ ಆತನಿಗೆ ತನ್ನ ಅಹಂಕಾರ ಪ್ರದರ್ಶನಕ್ಕೆ ವೇದಿಕೆ ಬೇಕು ಅಷ್ಟೆ.
ಸುದ್ದಿಮಾತು ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತ ಹೋಗುತ್ತಿರುವುದಕ್ಕೆ ಸಂತೋಷವೆನಿಸುತ್ತದೆ. ಆದರೆ ದಿನಕ್ಕೊಂದು ಪೋಸ್ಟ್ ಅದು ಹೇಗೆ ಮ್ಯಾನೇಜ್ ಮಾಡ್ತೀರೋ? ಅಭಿನಂದನೆಗಳು.
ಜ್ಞಾನೇಂದ್ರ ಕುಮಾರ್ ಪ.ಬ.

sugandhi said...

ಚೆನ್ನಾಗಿ ಬರ್‍ದಿದ್ದೀರಿ. ಇಂಥ ಗೋಸ್ವಾಮಿಗಳು ಭಾರತ ಪತ್ರಿಕೋದ್ಯಮದ ಟೇಬಲ್ ಟೇಬಲ್‌ಗಳಲ್ಲೂ ಸಿಗುತ್ತಾರೆ. ಇವರ್‍ನೆಲ್ಲಾ ಜನರೇ ತಿರಸ್ಕರಿಸಿ ಬಿಸಾಕಬೇಕು