Monday, May 4, 2009

ಈಗ ಮಾಡಬೇಕಾದ್ದು...

ಏಪ್ರಿಲ್ - ಮೇ ಬಂತೆಂದರೆ ಪ್ರೆಸ್ ಕ್ಲಬ್ ನಲ್ಲಿ ಪ್ರೊಮೊಷನ್, ಹೈಕ್, ಟ್ರಾನ್ಸ್ ಫರ್..ಗಳದ್ದೇ ಸುದ್ದಿ. ಸಹೋದ್ಯೋಗಿಗಳ ಮಧ್ಯೆ ಈರ್ಷ್ಯೆ, ಇಗೋ, ಜಿದ್ದುಗಳೆಲ್ಲವೂ ಜಾಗೃತಗೊಳ್ಳುವ ಕಾಲವೂ ಇದೇ. ಅವನಿಗೆ "ಒಟ್ಟಿಗೆ ಎರಡೆರಡು ಇಂಕ್ರಿಮೆಂಟ್, ನನಗೋ ಒಂದೇ" - ಎಂದು ಕೊರಗುವವರು ಕೆಲವರಾದರೆ, ಮತ್ತೆ ಕೆಲವರದು "ಅವರದು ಜಾತಿ ರಾಜಕೀಯ. ನಾವು ಎಷ್ಟೇ ಕೆಲಸ ಮಾಡಿದರೂ ಗುರುತಿಸೋಲ್ಲ" ಎಂಬ ಗೊಣಗಾಟ. "ಏನೋ ದಿಕ್ಕು ತಪ್ಪಿ ಇಲ್ಲಿಗೆ ಬಂದ್ಬಿಟ್ವಿ. ಆದಷ್ಟು ಬೇಗ ಕಳಚಕೋಳೋದು ಒಳ್ಳೇದು" - ಎಂದು ನಿಟ್ಟುಸಿರು ಬಿಡುವವರದು ಇನ್ನೊಂದು ಗುಂಪು. - ಇದು ಪ್ರತಿವರ್ಷ ಏಪ್ರಿಲ್-ಮೇ ದಿನಗಳ ಬೆಳವಣಿಗೆಗಳು.
ಆದರೆ ಈ ವರ್ಷ ಹಾಗಿಲ್ಲ.
ನಿಜ. ಹಿಂದಿನಂತಿಲ್ಲ ಈ ವರ್ಷ. ಪತ್ರಕರ್ತರು ಪ್ರೊಮೊಷನ್ಸ್ ಬಗ್ಗೆ ಮಾತನಾಡುತ್ತಿಲ್ಲ. ಯಾಕೆಂದರೆ ಇರೋ ಪೊಸಿಷನ್ ಉಳಿದರೆ ಸಾಕು ಎನ್ನುವ ಸ್ಥಿತಿ ಅವರದು. ಹೈಕ್ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಾರಣ, ಅವರು ಇರೋ ಸಂಬಳ ಕಟ್ ಆಗದಿದ್ರೆ ಅದೇ ಸಮಾಧಾನ ಎನ್ನುವ ಹಂತ ತಲುಪಿದ್ದಾರೆ. ಜಾಗತಿಕ ಆರ್ಥಿಕ ಕುಸಿತ ಪತ್ರಕರ್ತರನ್ನು ಇಂತಹ ಸ್ಥಿತಿ ತಂದು ನಿಲ್ಲಿಸಿದೆ. ಟೈಮ್ಸ್ ಆಫ್ ಇಂಡಿಯಾದಂತಹ ಪತ್ರಿಕೆ ತನ್ನ ಉದ್ಯೋಗಿಗಳ ಜೇಬಿಗೆ ಕತ್ತರಿ ಹಾಕಿತು. ಡೆಕ್ಕನ್ ಕ್ರಾನಿಕಲ್ ದೊಡ್ಡ ಸಂಬಳ ಕೊಟ್ಟು ಕರೆದುಕೊಂಡು ಬಂದಿದ್ದವರಿಗೆ ನಿರಾಸೆ ಮಾಡಿದೆ ಎಂಬ ಸುದ್ದಿ ಹೊರಬಿದ್ದಿದೆ.
ಮೊನ್ನೆ ಮೊನ್ನೆ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕ ಶೇಖರ್ ಗುಪ್ತಾ ಬೆಂಗಳೂರಿನಲ್ಲಿದ್ದರು. ಐಐಜೆಎನ್ಎಂ ಘಟಿಕೋತ್ಸವದಲ್ಲಿ ಮಾತನಾಡುತ್ತ, ಆರ್ಥಿಕ ದುಸ್ಥಿತಿ ನಂತರದ ದಿನಗಳು ಪತ್ರಿಕೋದ್ಯಮದ ಪಾಲಿಗೆ ಸುವರ್ಣ ಯುಗ ಕಲ್ಪಿಸಲಿವೆ ಎಂದರು. ಕೇವಲ ವೃತ್ತಿ ನೈಪುಣ್ಯ ಉಳ್ಳವರು ಕ್ಷೇತ್ರದಲ್ಲಿ ಉಳಿಯಲು ಸಾಧ್ಯ. ಆಗ ಪತ್ರಿಕೋದ್ಯಮ ಉತ್ತಮ ಏಳಿಗೆ ಸಾಧಿಸಲು ಸಾಧ್ಯ ಎಂದರು.
ಅವರ ಮಾತುಗಳು, ಪತ್ರಕರ್ತರೆಲ್ಲರು ನಾವು ನಿಜಕ್ಕೂ ಈ ಕ್ಷೇತ್ರದಲ್ಲಿ ಉಳಿಯಲು ಅರ್ಹರೇ ಎಂಬುದನ್ನು ಯೋಚಿಸುವಂತೆ ಮಾಡುತ್ತವೆ. ಹಾಗೆ ಸ್ವ ವಿಮರ್ಶೆಗೆ ತೊಡಗುವ ಪತ್ರಕರ್ತ ನಿಜಕ್ಕೂ ಒಳ್ಳೆಯ ಪತ್ರಕರ್ತನಾಗುವತ್ತ ಹೆಜ್ಜೆ ಹಾಕುತ್ತಾನೆ. ನಮ್ಮ ಪತ್ರಕರ್ತರು ಈಗ ಮಾಡಬೇಕಾದ್ದು ಅದನ್ನೇ.

No comments: