Saturday, May 23, 2009

ಸತ್ಯ ಮತ್ತು ದೇಶದ ಪರ ಇರಬೇಕು

"ಪತ್ರಿಕೆಯೋ ಅಥವಾ ಚಾನಲ್ಲೊ ಅಥವಾ ನಿಮ್ಮಂಥಹ ಯಾವದೋ ಒಂದು ಬ್ಲಾಗೋ ಎಲ್ಲರಿಗೂ ಅವರದೇ ಆದ ಒಂದು ಮುಖ ಅಂಥಾ ಇರುತ್ತದೆ. ನಿಮ್‌ ಮುಖಾನೇ ಕಾಣ್ತಿಲ್ಲ..ಯಾಕಂದ್ರೆ ನೀವು ಯಾವ ಸಮಯದಲ್ಲಿ ಯಾರ ಪರವಾಗಿ ಇರ್ತಿರೋ ಅಥವಾ ವಿರುದ್ಧವಾಗಿರ್ತಿರೋ ಹೇಳೋಕೆ ಆಗಲ್ಲ.ಒಟ್ಟಾರೆ ನೀವು ಬಿಜೆಪಿ ವಿರೋಧಿಗಳು ಅನ್ನೋದಂತೂ ಸ್ಪಷ್ಟ..ಯಾಕಂದ್ರೆ ತತ್ವ ಸಿದ್ದಾಂತ..ಪಕ್ಷಗಳಿಗಷ್ಟೇ ಅಲ್ಲ ಮಾದ್ಯಮಕ್ಕೂ ಇರಬೇಕು ಅಂತ ವಾದ ಮಾಡೋನು ನಾನು..ನಿಮಗಂತೂ ಯಾವದೂ ಇಲ್ಲ ಬಿಡಿ..ನೀವು ಲೆಫ್ಟೂ ಅಲ್ಲ ಇತ್ತ ರೈಟೂ ಅಲ್ಲ..ಎಡಬಿಡಂಗಿ ಆದ್ರೆ ಭಾರೀ ಕಷ್ಟ ಸ್ವಾಮಿ...."

ಚಾಣಾಕ್ಯ ಎನ್ನುವವರು ಇಂತಹದೊಂದು ಕಾಮೆಂಟ್ ಮಾಡಿದ್ದಾರೆ. ನಮ್ಮ ಬ್ಲಾಗ್ ನ ಈ ಹಿಂದಿನ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಅವರು ಹೀಗೆ ಅಭಿಪ್ರಾಯ ಪಟ್ಟಿದ್ದಾರೆ. ಅವರಿಗೆ ಮೊದಲು ನಮ್ಮ ವಂದನೆಗಳು. ಅವರು ಮೊದಲು 'ನಮ್ಮ ಮುಖ' ಕಾಣುತ್ತಿಲ್ಲ ಎಂದು ದೂರಿದ್ದಾರೆ. ಮುಂದುವರೆಸಿ, ನೀವು ಯಾವ ಸಮಯ ಯಾರ ಪರ ಇರ್ತಿರೋ ಗೊತ್ತಿಲ್ಲ, ಆದರೆ ನೀವಂತೂ ಬಿಜೆಪಿ ವಿರೋಧಿಗಳು ಎನ್ನುವುದಂತೂ ಸ್ಪಷ್ಟ - ಎಂದಿದ್ದಾರೆ.

ಇವರ ಮಾತಿಗೆ ನೇರ, ದಿಟ್ಟ ವಾಗಿ ಹೇಳುವುದಾದರೆ, ಸ್ವಂತ ಪ್ರಜ್ಞೆ ಇರುವವನು ಮತ್ತು ಸಮಾಜದ ಹಿತ ಮುಖ್ಯ ಎಂದುಕೊಂಡ ಎಂಥವನೇ ಆಗಲಿ ಅವನು ಬಿಜೆಪಿ ವಿರೋಧಿಯಾಗಿರುತ್ತಾನೆ. ಅದರ ತತ್ವದಲ್ಲಿಯೇ ಎಡವಟ್ಟುಗಳಿವೆ. ನೂರಾರು ಜಾತಿ, ಜನಾಂಗ, ಭಾಷೆ ಒಳಗೊಂಡಿರುವ ಒಂದು ದೇಶವನ್ನು ಒಂದು ಧರ್ಮದ ಕಣ್ಣುಗಳಿಂದ ನೋಡುವವರನ್ನು ದೇಶಭಕ್ತರೆನ್ನಬೇಕೆ? ಪಕ್ಕದ ಮನೆಯ ಅನ್ಯಧರ್ಮೀಯನನ್ನು ಶತ್ರುವಿನಂತೆ ಕಾಣುವ ಮನೋಧರ್ಮ ಹುಟ್ಟುಹಾಕಿದ ಪಕ್ಷವನ್ನು ಆರಾಧಿಸಬೇಕೆ? ಒಂದು ನಂಬಿಕೆ ಇತ್ತು, ವಿದ್ಯಾವಂತರೆಲ್ಲ ಬಿಜೆಪಿ ಜತೆ ಇದ್ದಾರೆ. ಈ ಮಾತು ಕೇಳಿದಾಗೆಲ್ಲ, ಅವರೆಲ್ಲಾ ಎಷ್ಟರ ಮಟ್ಟಿಗೆ ವಿದ್ಯಾವಂತರು ಎಂಬ ಸಂಶಯ ಮುಊಡುತ್ತಿತ್ತು.

ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್, ಕಳೆದವಾರದ ತಮ್ಮ ಅಂಕಣದಲ್ಲಿ ಕಣ್ಣೀರು ಇಡುವುದೊಂದು ಬಾಕಿ. ಅಡ್ವಾನಿ ಕರ್ಣನಂತೆ. ಯುದ್ಧದಲ್ಲಿ ಗೆಲ್ಲುವ ಸಾಮರ್ಥ್ಯ ಇತ್ತಂತೆ, ಆದರೂ ಗೆಲ್ಲಲಿಲ್ಲ. ಗಾಂಧಿನಗರದ ಜನ ಅಡ್ವಾನಿಯನ್ನು ಗೆಲ್ಲಿಸಿದ ಅಂತರವನ್ನು ಸ್ವಲ್ಪ ಗಮನಿಸಿ. ಹಿಂದಿನ ಚುನಾವಣೆಗಿಂತ ಈ ಬಾರಿ ಅವರ ಜನಪ್ರಿಯತೆ ಕಡಿಮೆ ಆಗಿದೆ. ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದರೂ, ಅವರ ಜನಪ್ರಿಯತೆ ಹೆಚ್ಚಲಿಲ್ಲ. ಗಾಂಧಿನಗರದಲ್ಲಿಯೇ ನಡೆಯದ್ದಿದುದು ಬೇರೆಲ್ಲಿ ನಡೆದೀತು?

ಭಟ್ ತಮ್ಮ ಅಂಕಣದಲ್ಲಿ ಅಡ್ವಾನಿಯನ್ನು ಕಳಂಕ ರಹಿತ ವ್ಯಕ್ತಿ ಎಂದಿದ್ದಾರೆ. ಅವರ ವ್ಯಕ್ತಿತ್ವದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದೆಲ್ಲಾ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಒಮ್ಮೆ ಅಡ್ವಾನಿಯ ಇತಿಹಾಸ ಗಮನಿಸಿ. ಅವರ ವ್ಯಕ್ತಿತ್ವ ಪೂರ್ತಿ ಕಪ್ಪುಮಯ. ಬಾಬರಿ ಮಸೀದಿ ಧ್ವಂಸ ದೇಶ ಕಂಡ ಘೋರ ಕೃತ್ಯ. ಅದರ ನೇತೃತ್ವ ವಹಿಸಿದ್ದು ಯಾರು ಸ್ವಾಮಿ? ದೇಶದ ಉದ್ದಗಲಕ್ಕೂ ಅಡ್ಡಾಡಿ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ತೇವೆ ಎಂದು ಬೊಬ್ಬೆ ಹೊಡೆಯುತ್ತ ಓಟು ಕೇಳಿದ್ದು ಪ್ರಶಂಸಾರ್ಹ ಕೆಲಸವೇ? ಇಂದಿನ ನರೇಂದ್ರ ಮೋದಿ, ವರುಣ್ ಗಾಂಧಿಯಂತಹವರಿಗೆ ಮುಊಲ ಪ್ರೇರಣೆಯೇ ಈ ಅಡ್ವಾನಿ. ಅಡ್ವಾನಿ ಪ್ರಧಾನಿಯಾಗದೇ ಹೋದದ್ದಕ್ಕೆ ಪಕ್ಷ ಇವರೀರ್ವರನ್ನು ಹೊಣೆ ಮಾಡುವ ಮುನ್ನು ಇದನ್ನೆಲ್ಲಾ ಪಕ್ಷ ಯೋಚಿಸಬೇಕಿದೆ.

ಪತ್ರಿಕೆಗಳು ನಿಷ್ಟಕ್ಷಪಾತಿಯಾಗಿರಬೇಕು ಎನ್ನವುದು ಎನ್ನುವುದನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ನಮ್ಮ ಪ್ರಕಾರ ಪತ್ರಿಕೆಗಳು ಸತ್ಯ ಮತ್ತು ದೇಶದ ಪರ ಇರಬೇಕು. ಅದರರ್ಥ ಸತ್ಯವನ್ನು ತಿರುಚಿ, ದೇಶದ ವೈವಿಧ್ಯತೆಗೆ ಭಂಗ ತರುವವರ ವಿರುದ್ಧ ಇರುಬೇಕು. ವಿನೋದ್ ಮೆಹ್ತಾ ಮಾತಿನಲ್ಲಿ ಹೇಳುವುದಾದರೆ "journalist is not an ideological eunuch". ಹಾಗೂ ಯಾರಾದರೂ ತಾನು ಸೈದ್ಧಾಂತಿಕವಾಗಿ ನಪುಂಸಕ ಎಂದು ಭಾವಿಸುವುದಾದರೆ ಅಂತಹವನನ್ನು ಗಂಭಿರವಾಗಿ ಪರಿಗಣಿಸುವ ಅಗತ್ಯವೇ ಇಲ್ಲ ಎನ್ನುತ್ತಾರೆ ಮೆಹ್ತಾ. ಈ ಮಾತಿನೊಂದಿಗೆ ಇಂದಿನ ನಮ್ಮ ಮಾತು ಮುಗಿಸುತ್ತೇವೆ.

3 comments:

ಗೋವಿಂದ್ರಾಜ್ said...

ನಿಮ್ಮ ನಿಲುವು, ರಾಚಿದಂತೆ ಬಹಿರಂಗ ವಾಗಿ ಹೇಳಿಕೊಂಡದ್ದು ಒಳ್ಳೆಯದು. ಯಾವುದೇ ಮಧ್ಯಮ ಜನಪರ, ಸಮಾಜಮುಖಿ ಆಗಿರಬೇಕು ಎಂಬುದು ಮುಖ್ಯವಾಗಬೇಕು ಎಂಬುದು ಸತ್ಯ. ಅದನ್ನು ವಿ ಕ ಆಗಲಿ ಇನ್ಯಾವುದೇ ಮಧ್ಯಮ ಆಗಲಿ ಒಪ್ಪಿಕೊಂಡು ಹಾಗೆ ನಡೆಯಬೇಕು. ಅಡ್ವಾಣಿ ಪ್ರಧಾನಿ ಆಗದೆ ಹೋದದ್ದು ಇಲ್ಲಿನ ದುರದೃಷ್ಟ ಏನಲ್ಲ ಎಂಬುದು ಕೆಲವರಿಗೆ ತಿಳಿಯಲಿ.

Anonymous said...

ಸುದ್ದಿಮಾತು,

ನಿಮ್ಮ ನೇರ ಮತ್ತು ದಿಟ್ಟನುಡಿಗಳು ಮೆಚ್ಚುಗೆಯಾಯಿತು, ಮತ್ತು ನಿಮ್ಮ ಗುಂಪಿನಲ್ಲಿ ಯಾರೂ "ವಿ.ಕೆ"ಯಲ್ಲಿಲ್ಲ ಎಂಬುದು ಖಚಿತವಾಯಿತು.

ನಾನು ಮುಂದುವರೆಯುತ್ತಾ ನಮ್ಮ ಯಾವ ಪಕ್ಷಗಳು "ಜಾತಿರಹಿತ" ರಾಜಕೀಯ ನೆಡಸುತ್ತಿವೆ ಎಂಬುದರ ಬಗ್ಗೆ ತಾವಷ್ಟು ಬೆಳಕು ಚೆಲ್ಲಬೇಕು ಎಂದು ಕೇಳುತ್ತೆನೆ.

ಎಲ್ಲ ಪತ್ರಿಕೆಯವರು, ಚಾನಲನವರು ಒಂದೊಂದು ಪಕ್ಷದ ಮುಖವಾಣಿಯಂತೆ ಕೆಲಸ ಮಾಡುತ್ತಿರುವ ಇಂದಿನ ದಿನಗಳಲ್ಲಿ ಯಾರನ್ನು ನಂಬುವುದು, ಯಾರನ್ನು ಬಿಡುವುದು ಬಹಳ ಕಷ್ಟ.

ಪ್ರೀತಿಯಿರಲಿ

ಶೆಟ್ಟರು

chanakya said...

ನನ್ನ ವೈಯಕ್ತಿಕ ಅಭಿಸ್ರಾಯವನ್ನಷ್ಟೇ ನಾನು ಮಂಡಿಸಿದ್ದೇನೆ ಅದನ್ನು ಓದುಗರು ಹೆಂಗೆ ಸ್ವೀಕಾರ ಮಾಡ್ತಾರೋ ನೋಡೋಣ ಬಿಡಿ. ಆದ್ರೆ ನನ್ನ ಅಭಿಪ್ರಾಯವನ್ನ ಸಮರ್ಥನೆ ಮಾಡ್ಲಿಕ್ಕೋ ಅಥವಾ ವಿರೋಧ ಮಾಡ್ಲಿಕ್ಕೋ ..ವಿಶ್ವೇಶ್ವರ ಭಟ್ರನ್ನೋ..ವಿನೋದ್‌ಮೆಹ್ತಾರನ್ನೋ ಕೋಟ್‌ ಮಾಡೋ ಅಗತ್ಯ ಇರಲಿಲ್ಲ ಅನ್ಸುತ್ತೆ. ಇದನ್ನೇ ನಾನು ಹೇಳೋದು ನಿಮಗೆ ಸ್ವಂತಿಕೆ ಇಲ್ಲಾಂತ. ನಿಮ್ದೇವಾದ ಒಪ್ಪೋದಾದ್ರೆ ವಾಜಪೇಯಿ ಈ ದೇಶದ ಪ್ರಧಾನಿ ಆಗ್ತಿರಲಿಲ್ಲ..ಹಳದಿ ಕಣ್ಣಿನೋರಿಗೆ ಹೇಗೆ ಹೇಳಿದ್ರೂ ಅದು ಹಾಗೇ ಕಾಣುತ್ತೆ..ನಿಮ್ಮ ಸ್ವಂತಪ್ರಜ್ಞೆ..ಹಾಗೂ ಸಮಾಜದ ಹಿತ ಕಾಯುವ ಕಾಯಕಕ್ಕೆ ಜೈ ಎನ್ನೋಣ.