ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ಸಿಕ್ಕಿದೆ. ನಿನ್ನೆ ರಾತ್ರಿ ಸುದ್ದಿವಾಹಿನಿಗಳಲ್ಲಿ, ಇಂದಿನ ಪತ್ರಿಕೆಗಳಲ್ಲಿ ಅದೇ ಸುದ್ದಿ. ಎಲ್ಲೆಲ್ಲೂ ಕನ್ನಡ ಡಿಂಡಿಮವಂತೆ! ಮುಗಿಲು ಮುಟ್ಟಿದ ಹರ್ಷೋದ್ಗಾರವಂತೆ!! "ಇಂದು ಕೇವಲ ರಾಜ್ಯೋತ್ಸವ ಅಲ್ಲ, ವಿಜಯೋತ್ಸವ" ಎಂದು ಯಡಿಯೂರಪ್ಪ ಫರ್ಮಾನು ಹೊರಡಿಸಿದ್ದಾರೆ. ಹಿರಿಯ ಸಾಹಿತಿ ಹಾಗೂ ಮಾಜಿ ಜಾತೀವಾದಿ-ಕುಲಪತಿ ದೇಜಗೌ ಸಿಕ್ಕಾಪಟ್ಟೆ ಖುಷಿಯಿಂದ ಕುಣಿದರಂತೆ. ಸುದ್ದಿ ವಾಹಿನಿಯೊಂದಕ್ಕೆ ಬೈಟ್ ಕೊಡುತ್ತಾ ಸನ್ಮಾನ್ಯರು ಹೇಳಿದ್ದು "ಹಳ್ಳಿಗಳಲ್ಲಿ ಕೂಡಾ ಶಾಸ್ತ್ರೀಯ ಸ್ಥಾನಮಾನದ ಬಗ್ಗೆ ಅರಿವು ಮೂಡಿತ್ತು. ನಾನು ಹಳ್ಳಿ ಕಡೆ ಹೋದಾಗೆಲ್ಲ ಅಲ್ಲಿಯ ಜನ ಶಾಸ್ತ್ರೀಯ ಸ್ಥಾನಮಾನ ಸಿಕ್ತಾ ಅಂತ ಪ್ರಶ್ನೆ ಮಾಡ್ತಾ ಇದ್ರು". ಕೆಲವು ಸುದ್ದಿವಾಹಿನಿಗಳಂತೂ ದಶಕಗಳ ಹೋರಾಟಕ್ಕೆ ಸಂದ ಜಯ ಎಂಬಂತೆ ಬಣ್ಣಿಸಿದ್ದಾರೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದಕ್ಕಿದ್ದಕ್ಕೆ ಇಷ್ಟೆಲ್ಲಾ ಸಂಭ್ರಮ ಪಡುತ್ತಿರುವುದನ್ನು ಕಂಡರೆ ನಗು ಬರುತ್ತಿದೆ. ಈ ಸ್ಥಾನದಿಂದ ಯಾರಿಗೆ ಲಾಭ ಎನ್ನುವುದನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ.
ಕನ್ನಡ ಭಾಷೆ ಮೂಲ ನೆಲೆ ಅಧ್ಯಯನಕ್ಕೆಂದು ಒಂದಿಷ್ಟು ಹಣ ಕೇಂದ್ರ ಸರಕಾರದಿಂದ ಬಿಡುಗಡೆಯಾಗುತ್ತದೆ. ಇಲ್ಲಿಯೇ ಒಂದು ಮಾತು ಸ್ಪಷ್ಟಪಡಿಸಬೇಕು - ಆಧುನಿಕ ಕನ್ನಡ ಭಾಷೆ ಬಳಕೆ, ಅದರ ಉಪಭಾಷೆಗಳು, ಸಾಹಿತ್ಯ ಅಧ್ಯಯನಕ್ಕೆ ಈ ಅನುದಾನದ ಅಡಿಯಲ್ಲಿ ಸಾಧ್ಯವಿಲ್ಲ. ಕನ್ನಡ ಭಾಷೆ ಅಧ್ಯಯನ ಕೇಂದ್ರಗಳು ಸ್ಥಾಪನೆಯಾಗುತ್ತವೆ. ಕನ್ನಡ ವಿದ್ವಾಂಸರಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಮನ್ನಣೆ ದೊರಕುತ್ತದೆ. ಕೆಲವು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಅಧ್ಯಯನ ಪೀಠಗಳು ಸ್ಥಾಪನೆಯಾಗುತ್ತವೆ.
ಈಗ ಹೇಳಿ ಹಳ್ಳಿ ರೈತ, ಕೂಲಿ ಕಾರ್ಮಿಕ, ಕನ್ನಡ ಪತ್ರಕರ್ತ ಸಂಭ್ರಮ ಪಡಲು, ಡಿಂಡಿಮ ಬಾರಿಸಲು ಇರುವ ಕಾರಣಗಳಾದರೂ ಏನು? ದೇಜಗೌ ಎದುರು ಪ್ರಶ್ನೆ ಕೇ

ಈ ಮೊದಲು ಯಡಿಯೂರಪ್ಪ ಯೋಜಿಸಿದಂತೆ, ದೆಹಲಿಗೆ 300 ಜನರ ನಿಯೋಗವನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದರೆ, ಕನಿಷ್ಠವೆಂದರೂ 3 ಕೋಟಿ ರೂ (ಒಬ್ಬರಿಗೆ ಕನಿಷ್ಠ ಒಂದು ಲಕ್ಷದಂತೆ) ಖರ್ಚಾಗುತ್ತಿತ್ತು. ಈ ಹಿಂದೆ ಕೆಲ ಸಾಹಿತಿಗಳ ನಿಯೋಗವನ್ನೂ ಕೊಂಡೊಯ್ದಿದ್ದರು. ಆ ಎಲ್ಲಾ ಖರ್ಚುಗಳನ್ನು ಗುಡ್ಡೆ ಹಾಕಿದರೆ, ಕೇಂದ್ರ ಸರಕಾರದಿಂದ ದೊರಕುವ ಅನುದಾನದ ಮೊತ್ತಕ್ಕೆ ಸರಿಸಮಾನಾಗುತ್ತಿತ್ತು!
ತಮಿಳಿಗೆ 2004ರ ಅಕ್ಟೋಬರ್ನಲ್ಲಿ ಕೇಂದ್ರ ಸರಕಾರ ಶಾಸ್ತ್ರೀಯ ಸ್ಥಾನಮಾನ ನೀಡಿತು. ಅಲ್ಲಿಂದಲೇ ಹೋರಾಟ ಶುರು. ತಮಿಳಿಗೆ ಕೊಟ್ಟಿದೀರಿ, ನಮಗೂ ಕೊಡಿ - ಇದು ಇದುವರೆಗಿನ ಹೋರಾಟದ ಕೇಂದ್ರ ಬಿಂದು. ತಮಿಳಿಗೆ ಕೊಡದೇ ಹೋಗಿದ್ದರೆ, ದೇಜಗೌ ಉಪವಾಸ ಕೂರುತ್ತಿರಲಿಲ್ಲ, ಅದ್ಯಾಕೆ ಯಡಿಯೂರಪ್ಪ ದೆಹಲಿಗೆ ನಿಯೋಗ ಕರೆದುಕೊಂಡು ಹೋಗೋ ಮಾತೂ ಆಡುತ್ತಿರಲಿಲ್ಲ. ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾದ ಒಂದು ಸಂಗತಿ ಎಂದರೆ, ಒಂದು ಭಾಷೆ ಶಾಸ್ತ್ರೀಯವಾದರೆ, ಅದು ಕೆಲವೇ ಕೆಲವು ವಿದ್ವಾಂಸರ ಭಾಷೆ ಆಗುತ್ತದೆ. ಅದು ಜನಪದವಾದಾಗ ಬಹಳ ಕಾಲ ಉಳಿಯುತ್ತದೆ.
ಸರಕಾರ, ಜನತೆ ಮುಂದಿರುವ ಸವಾಲು - ಕನ್ನಡವನ್ನು ಜನಪದವನ್ನಾಗಿ ಉಳಿಸುವುದು ಹೇಗೆ? ಕನ್ನಡ ಮಾತ್ರ ಗೊತ್ತಿರುವ ವ್ಯಕ್ತಿ ಬ್ಯಾಂಕ್ ಗೆ ಹೋದಾಗ ಹಣ ಹಿಂದಕ್ಕೆ ಪಡೆಯಲು ಸುಲಭವಾಗಿ ವ್ಯವಹರಿಸುವಂತಾಗಬೇಕು. ಯಾರದೋ ಹಿಕಮತ್ತಿಗೆ ಜಮೀನು ಕಳೆದುಕೊಂಡ ರೈತ ನ್ಯಾಯಾಲಯದಲ್ಲಿ ದಾವೆ ಹೂಡಿದರೆ, ಅಲ್ಲಿ ನಡೆಯುವ ವಾದ-ವಿವಾದ ಅವನಿಗೆ ಅರ್ಥವಾಗುವಂತಿರಬೇಕು. ರೋಗಿ ತನ್ನ ವೈದ್ಯ ಕೊಡುವ ಔಷಧಿ ಯಾವುದು ಎನ್ನುವುದನ್ನು ಓದುವಂತಿರಬೇಕು. ಕನ್ನಡ ಜನಪದವಾಗುವುದೆಂದರೆ ಹೀಗೆ. ಕನ್ನಡ ಜನಪದವಾಗಲೇ ಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ, ಕೆಲವೇ ದಿನಗಳಲ್ಲಿ ಭಾಷೆ ಸಾಯುತ್ತದೆ. ಇಂಗ್ಲಿಷ್ ಅನಿವಾರ್ಯ ಎಂಬ ಭಾವನೆ ಎಲ್ಲರಲ್ಲೂ ಹುಟ್ಟುತ್ತದೆ. ಆಗ ಕನ್ನಡ ವಿದ್ವಾಂಸರೆಲ್ಲ "ನಮ್ಮದು ಶಾಸ್ತ್ರೀಯ ಭಾಷೆ" ಎಂದು ಜಪಿಸುತ್ತಾ ವಿವಿಧೆಡೆಯಿಂದ ಬರುವ ಅನುದಾನಕ್ಕೆ ಬಾಯಿಬಿಟ್ಟುಕೊಂಡು ಕನ್ನಡದ ತಿಥಿಮಾಡಲಿ.
ಆಗ ಅದೇ ಹಳ್ಳಿಗ, ಇದೇ ದೇಜಗೌ ಅವರನ್ನು ಪ್ರಶ್ನಿಸುತ್ತಾನೆ - "ಶಾಸ್ತ್ರೀಯ ಭಾಷೆ ಅಂತ ನೀವು ಹೇಳಿದ್ದು, ಈಗ ಕನ್ನಡ ಮಾತಾಡೋರು ಯಾರೂ ಇಲ್ಲದಂಗೆ ಆಗೋಗದೆ ಅಲ್ವಾ ಗೌಡ್ರೆ?"