Saturday, October 18, 2008

ಕೊಳೆತ ವಸ್ತು ನಾರದೇ ಇರುವುದೆ?

ಮೊನ್ನೆಯ ಒಂದು ಉದಾಹರಣೆ.
ಕನ್ನಡಿಗ ಅರವಿಂದ ಅಡಿಗ ಅವರಿಗೆ ಪ್ರತಿಷ್ಠಿತ ಬುಕರ್ ಪ್ರಶಸ್ತಿ ಪ್ರದಾನವಾಗಿತ್ತು. ಅದೇ ವೇಳೆಯಲ್ಲಿ ವಿಜಯಕರ್ನಾಟಕ ‘ಮತಾಂತರ- ಒಂದು ಸಂವಾದ’ ಎನ್ನುವ ಚರ್ಚೆ ಆರಂಭಿಸಿತು. ವಿಜಯ ಕರ್ನಾಟಕದ ಪಾಲಿಗೆ ಕನ್ನಡಿಗನೊಬ್ಬ ಬುಕರ್ ಪ್ರಶಸ್ತಿಗೆ ಭಾಜನವಾದದ್ದು ಮಹತ್ವ ಎನಿಸಲಿಲ್ಲ. ಆ ಸುದ್ದಿಯನ್ನು ಮುಖಪುಟದಲ್ಲಿ ಬಾಟಮ್‌ಗೆ ಹಾಕಿ ಕೈ ತೊಳೆದುಕೊಂಡಿತು. ಒಳಗಿನ ಪುಟಗಳಲ್ಲೂ ಅಷ್ಟೇನೂ ಮಹತ್ವ ನೀಡಿರಲಿಲ್ಲ. ಬದಲಿಗೆ ಮತಾಂತರ ಕುರಿತ ಎಸ್ಸೆಲ್ ಭೈರಪ್ಪ ಅವರ ಪ್ರತಿಕ್ರಿಯೆಯನ್ನು ಮುಖಪುಟದ ಮೇಲ್ಭಾಗದಲ್ಲಿ ಪ್ರಕಟಿಸಿ, ಅಲ್ಲದೇ ೯ನೇ ಪುಟವನ್ನು ಸಂಪೂರ್ಣವಾಗಿ ಅವರ ಲೇಖನಕ್ಕೆ ಮೀಸಲಿರಿಸಿತ್ತು.
ಇಂದು,
ಮೂರನೇ ದಿನಕ್ಕೇ ಸಂವಾದ ೧೫ ಪುಟಕ್ಕೆ ಎತ್ತಂಗಡಿಯಾಗಿದೆ. ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಮುಖಪುಟ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಸಚಿನ್ ಸಾಧನೆಗೆ ಅಷ್ಟು ಮಹತ್ವವಿದೆ. ಅದಕ್ಕೆ ತಕರಾರಿಲ್ಲ. ಆದರೆ ಅರವಿಂದ ಅಡಿಗರ ಸಾಧನೆಯನ್ನು ವಿಜಯ ಕರ್ನಾಟಕ ಕಡೆಗಣಿಸಿದ್ದು ಯಾಕೆ? ಸಂಪಾದಕ ವಿಶ್ವೇಶ್ವರ ಭಟ್ಟರು. ಈ ಪ್ರಶ್ನೆಗೆ ಉತ್ತರಿಸುವರಾ?
ಒಳಗಿನ ಪುಟದಲ್ಲಿ ಪ್ರಕಟವಾಗಿರುವ ಸಂವಾದವೂ ವಿಜಯ ಕರ್ನಾಟಕ ಕೋಮುವಾದವನ್ನೇ ಧ್ವನಿಸುವ ಹಾಗಿದೆ. ಎಚ್. ಮೋಹನ್‌ದಾಸ್ ನಾಯಕ್, ಪ್ರೊ. ವೀರೇಂದ್ರ ಸಿಂಪಿ, ಸಚ್ಚಿದಾನಂದ ಹೆಗಡೆ, ಮತ್ತಿತರರ ಅಭಿಪ್ರಾಯಗಳು ವ್ಯಕ್ತವಾಗಿವೆ. ಅವಷ್ಟೂ ಅಭಿಪ್ರಾಯಗಳು ಕೋಮುವಾದವನ್ನು ನೇರವಾಗಿಯೇ ಕಾರಿಕೊಂಡಿವೆ. ಇವರುಗಳ ಮತ್ತು ಎಸ್.ಎಲ್. ಭೈರಪ್ಪನವರ ತೀಕ್ಷ್ಣ ದಾಳಿಗೆ ಪ್ರತಿಯಾಗಿ ತಣ್ಣಗೆ ಉತ್ತರಿಸಿರುವ ಡಾ. ಲೋಕೇಶ್ ಅಗಸನಕಟ್ಟೆ, ರೆವೆರೆಂಡ್ ಫಾದರ್ ಪಿ.ಕೆ. ಅಬ್ರಹಾಂ, ಸತೀಶ್ ಕುಲಕರ್ಣಿ ಮತ್ತು ಡಾ. ವಿ.ಬಿ. ರಡ್ಡೇರ ಅವರ ಪ್ರತಿಕ್ರಿಯೆಗಳೂ ಇವೆ.
ಸಂವಾದದ ಆರಂಭದಲ್ಲಿ ಸಂಪಾದಕರು "ಈ ಸಂವಾದಕ್ಕೆ ವಿಜಯಕರ್ನಾಟಕ ವೇದಿಕೆಯೇ ಹೊರತು, ವಕ್ತಾರ ಅಲ್ಲ" ಎಂದು ಸ್ಪಷ್ಟೀಕರಣ ನೀಡಿದ್ದರು. ಆಗತಾನೆ ಆರಂಭವಾದ ಸಂವಾದಕ್ಕೆ ಈ ಸ್ಪಷ್ಟೀಕರಣದ ಅಗತ್ಯವಾದರೂ ಏನಿತ್ತು? ಅವರನ್ನು ಈಗಾಗಲೇ ಕೋಮುವಾದಿಗಳು ಎಂದು ಯಾರೂ ಜರೆದಿರಲಿಲ್ಲ. ಆದರೆ ಅವರ ಆತ್ಮಸಾಕ್ಷಿಯೇ ಹಾಗೆ ಚುಚ್ಚಿರಬೇಕು. ಅವರೊಳಗಿನ ಕೋಮುವಾದದ ಕೊಳಕನ್ನು ತೋರಿಸಿರಬೇಕು. ಮುಚ್ಚಿಕೊಳ್ಳಲು ನಾವು ವೇದಿಕೆ ಹೊರತು, ವಕ್ತಾರರಲ್ಲ ಎಂಬ ಸೆಂಟು ಸಿಂಪಡಿಸಿಕೊಂಡಿದ್ದರು. ಆದರೂ ಕೊಳೆತ ವಸ್ತು ನಾರದೇ ಇರುವುದೆ?

2 comments:

sugandhi said...

ಇವತ್ತಿನ ವಿಜಯ ಕರ್ನಾಟಕದಲ್ಲಿ ಯೋಗೇಶ್ವರ ಶ್ರೀ ಕೃಷ್ಣ ಗುರೂಜಿ ಎಂಬುವವರ ಲೇಖನ ಗಮನಿಸಿ(ಪುಟ-೯).
ಲೇಖನದ ಕೆಲವು ಸಾಲುಗಳು ಹೀಗಿವೆ:
‘ಕಾಲಚಕ್ರ ಉರುಳಿದಂತೆ ಬ್ರಾಹ್ಮಣ ಸಮುದಾಯ ತಾನೇ ಬಿತ್ತಿದ ಜಾತಿಯ ವಿಷಬೀಜದ ಫಲವನ್ನು ಉಣ್ಣುತ್ತಿದೆ. ಸಾವಿರಾರು ವರ್ಷಗಳಿಂದಲೂ ತ್ರಿಮತಾಚಾರ್ಯರ ಮಠಗಳಲ್ಲಿ ಒಬ್ಬನೇ ಒಬ್ಬ ಅಬ್ರಾಹ್ಮಣ ಮಠಾಧೀಶರಾಗಿರುವ ಉದಾಹರಣೆಗಳಿವೆಯೇ?'
‘ಈಗಲೂ ಪುರೋಹಿತಶಾಹಿ ಮನಸ್ಸು ಮಾಡಿದಲ್ಲಿ ಹಿಂದೆ ಮಾಡಿದ ತಪ್ಪನ್ನು ತಿದ್ದಿಕೊಂಡು ಜಾತಿಮುಕ್ತ ಸಮಾಜದ ಹರಿಕಾರರಾಗಲು ಸಾಧ್ಯ. ಅಂತಹ ಹೃದಯ ವೈಶಾಲ್ಯ ಕೃತಿಯಲ್ಲಿ ಮೂಡಿಬರಬೇಕಷ್ಟೆ'
‘ಸುಳ್ಳು ಜಾತಿಭೇದಗಳನ್ನು ಸೃಷ್ಟಿಸಿ, ಹಿಂದೂ ಧರ್ಮದ ಅವನತಿಗೆ ಕಾರಣರಾಗಿರುವ ಪಟ್ಟಭದ್ರ ಹಿತಾಸಕ್ತಿಗಳು, ಚತುರ್ವೇದಗಳು ಹಾಗು ಗೀತೆಯು ಎಂದಿಗೂ ಸಮರ್ಥಿಸದ ಜಾತಿ ತಾರತಮ್ಯ, ವೈಷಮ್ಯಗಳನ್ನು ಇನ್ನೂ ಜೀವಂತವಾಗಿಡಲು ಪ್ರಯತ್ನಿಸುತ್ತಲೇ ಇದ್ದು ತನ್ಮೂಲಕ ತಮ್ಮ ಕ್ಷೇಮ-ಲಾಭಗಳನ್ನು ಮಾತ್ರ ಲೆಕ್ಕಿಸುತ್ತಿದೆ. ಸಮಾಜವನ್ನು ಪುರಾಣಗಳ ಅಡೂಗೂಲಜ್ಜಿ ಕಥೆಗಳ ಮೂಲಕ ಹೆದರಿಸಿ ವಂಚಿಸುತ್ತಿದೆ.'
‘ಸಾಮಾಜಿಕ ಪಾಪವಾಗಿರುವ ಜಾತಿವ್ಯವಸ್ಥೆಯನ್ನು ಇನ್ನಾದರೂ ಕೈಬಿಡದಿದ್ದಲ್ಲಿ ಹಿಂದೂ ಧರ್ಮವು ಅಲ್ಪಸಂಖ್ಯಾತ ಧರ್ಮವಾಗುವ ದಿನಗಳು ದೂರವಿಲ್ಲ. ಜಾತಿವ್ಯವಸ್ಥೆಯ ಪೋಷಕರಿಗೆ, ಸಮರ್ಥಕರಿಗೆ ಮತಾಂತರದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ.'
ಸುದ್ದಿಮಾತು ಈ ಲೇಖನವನ್ನು ಗಮನಿಸಿದಂತೆ ಕಾಣುತ್ತಿಲ್ಲ. ಇರಲಿ, ಈ ಲೇಖನ ವಿ.ಕದಲ್ಲಿ ಪ್ರಕಟಗೊಂಡಿದ್ದಾದರೂ ಹೇಗೆ ಎಂಬ ಅಚ್ಚರಿ ನನಗೆ. ಬಹುಶಃ ಕಣ್ತಪ್ಪಿನಿಂದಾದ ದೋಷವಿರಬೇಕು! ಏನೇ ಆದರೂ ‘ಜಾತಿವ್ಯವಸ್ಥೆಯ ಪೋಷಕರಿಗೆಮ ಸಮರ್ಥಕರಿಗೆ ಮತಾಂತರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂಬ ಸರಿಯಾದ ಹೇಳಿಕೆಯೊಂದಿಗೆ ಕೊನೆಗೊಳ್ಳುವ ಈ ಲೇಖನ ಪ್ರಕಟಿಸಿದ್ದಕ್ಕಾಗಿ ವಿಶ್ವೇಶ್ವರ ಭಟ್ಟರಿಗೆ ಅಭಿನಂದನೆಗಳು. ಈ ಮಾತು ಭೈರಪ್ಪನವರಿಗೂ ಅನ್ವಯಿಸುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ, ಅಲ್ಲವೆ?

Anonymous said...

Vijaya Karnataka ondu paperru alla vedikenu alla. Adu ondu kaadu. Alli 'simha'galu, chirategalu, kadu emmegalu, ghenda mrugagalu swachchandavai tirugadikondu iralu madiruva sthala. Bhyrappanavara Prakhanada vicharagalu publish agoke iruva 'Bharatada hemmeya No 1 Kannada Publishing House' antha helidru parava illa. Matantarada bagge Bhyrappanavare yake baribeku athava VK ne yake adanna ashtu mahatva kottu publish madbeku annodakke uttara hudukuvudu vyartha. Nannadondu prashne Bhyrappa mattu VK teamge: Matantarada bagge punkhanupunkhavagi mataduva tavugalu yavattadru matantaravaguvavara maneyalli ganji kudididdira? Omme kudidu nodi. Nimage avaru maduva ganjiyalli neeru saha iralla, bellada matu hagirali. Modalu avarige ooru baavigalalli neeru tumbalu bidi, amele avara matantarada bagge matadi please.


ustaad