Monday, May 18, 2009

ಅಡ್ಡ-ವಾಣಿಯೇ ಅಡ್ಡವಾಯಿತು ಅಡ್ವಾನಿಗೆ...

ಸೋತು ಸುಣ್ಣವಾದ ಮೇಲೆ ಅಡ್ವಾನಿ ಸೋನಿಯಾ ಗಾಂಧಿ ಮತ್ತು ಮನಮೋಹನ ಸಿಂಗ್ ರಿಗೆ ಫೋನ್ ಹಚ್ಚಿದ್ದರಂತೆ. "ನೀವು ಗೆದ್ದದ್ದೀರಿ. ಶುಭಾಶಯಗಳು" ಎಂದು ಇಬ್ಬರಿಗೂ ಶುಭ ಕೋರಿದ್ದಾರೆ. ಪ್ರತಿಯಾಗಿ ಸೋನಿಯಾ ಮತ್ತು ಮನಮೋಹನ್ ಅಡ್ವಾನಿಗೆ 'ಧನ್ಯವಾದ' ಹೇಳಿದ್ದಾರೆ. ಅವರು ಥ್ಯಾಂಕ್ಸ್ ಹೇಳಿದ್ದು, ಕೇವಲ ಶುಭಾಶಯಕ್ಕೆ ಪ್ರತಿಯಾಗಿ ಅಲ್ಲ. ಕಾಂಗ್ರೆಸ್ ಗೆಲುವಿನಲ್ಲಿ, ಅಡ್ವಾನಿ ಮತ್ತು ಅವರ ಪಡೆಯ ಹುಡುಗರ ಪಾತ್ರ ಬಹುದೊಡ್ಡದಿತ್ತು, ಹಾಗಾಗಿ ಯುಪಿಎ ಅಧ್ಯಕ್ಷೆ ಅಡ್ವಾನಿಗೆ ವಿಶೇಷ ಧನ್ಯವಾದ ಹೇಳಿದ್ದಾರೆ.
ಮೊದಲು ಮನಮೋಹನ್ ಸಿಂಗ್ ದುರ್ಬಲ ಪ್ರಧಾನಿ ಎಂದು ಅಡ್ವಾನಿ ಅಡ್ಡ-ದನಿಯಲ್ಲಿ ಮಾತು ಆರಂಭಿಸಿದರು. ಪ್ರತಿ ನಿರ್ಧಾರಕ್ಕೂ ಪ್ರಧಾನಿ 10 ಜನಪಥ್ ದ ಒಪ್ಪಿಗೆ ಪಡೆಯಬೇಕು ಎಂದು ಟೀಕಿಸಿದರು. ನರೇಂದ್ರ ಮೋದಿ ಇದನ್ನೇ ಮುಂದುವರಿಸಿದರು. ರಾಜ್ಯ ಮಟ್ಟದ ಕಾಂಜಿ-ಪಿಂಜಿ ನಾಯಕರೆಲ್ಲ ಇದೇ ಮಂತ್ರ ಪಠಿಸಲು ಮುಂದಾದರು.
ಕಳೆದ ಬಾರಿ ಚುನಾವಣೆಯಿಂದ ಬಿಜೆಪಿ ಪಾಠ ಕಲಿಯಲಿಲ್ಲ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. 2004 ರಲ್ಲಿ ಸೋನಿಯಾ ವಿದೇಶಿ, ವಿದೇಶಿ ಮುಊಲದವಳು ಪ್ರಧಾನಿಯಾಗುವುದು ಸರಿಯೇ ಎಂದೆಲ್ಲಾ ಪ್ರಚಾರ ಮಾಡಿದರು. (ಕನ್ನಡದ ಪತ್ರಿಕೆಯೊಂದು, ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ ಸೋನಿಯಾ ಗಾಂಧಿ ಪ್ರಧಾನಿಯಾಗುತ್ತಾಳೆ, ಇದು ದೇಶಕ್ಕೆ 'ನಾಚಿಕಗೇಡಿನ' ಎಂದು ಮುಖಪುಟದಲ್ಲಿ ಸಂಪಾದಕೀಯ ಬರೆಯಿತು.) ಆದರೆ ಆ ಯಾವ ಆರೋಪಗಳೂ ಪಕ್ಷಕ್ಕೆ ನೆರವಾಗಲಿಲ್ಲ. ಈ ಬಾರಿಯುಊ ಇಂತಹದೇ ತಪ್ಪು ಮಾಡಿದರು. 'ದುರ್ಬಲ ಪ್ರಧಾನಿ' ಎಂದಷ್ಟೂ, ಸಿಂಗ್ ಸಬಲರಾಗುತ್ತಾ ಬೆಳೆದರು.
ವರುಣ್ ಗಾಂಧಿ ಕೂಡಾ ಕಾಂಗ್ರೆಸ್ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಫಿಲಿಬಿಟ್ ನಲ್ಲಿ ಮಾತನಾಡುತ್ತಾ, ಅದ್ಯಾವಾಗ ಅಲ್ಪಸಂಖ್ಯಾತರನ್ನು ಕತ್ತರಿಸುವ ಮಾತನಾಡಿದರೋ, ಆಗಲೇ ದೇಶದ ಮುಊಲೆ ಮುಊಲೆಗಳಲ್ಲಿ ಬಹುದೊಡ್ಡ ಮೊತ್ತದ ಮತಗಳು ಕಾಂಗ್ರೆಸ್ ಬುಟ್ಟಿಗೆ ಖಾತ್ರಿಯಾದವು.
ಮಂಗಳೂರಿನಲ್ಲಿ ಒಂದಿಷ್ಟು ಪುಂಡರು, ಚರ್ಚ್ ಮೇಲೆ, ಪಬ್ ಮೇಲೆ ದಾಳಿ ನಡೆಸಿದರಲ್ಲ, ಅವರಿಗೆಲ್ಲಾ ಕಾಂಗ್ರೆಸ್ ಒಂದು "thanks giving" ಸೆರೆಮನಿ ಇಟ್ಟುಕೊಂಡರೂ ತಪ್ಪಿಲ್ಲ. ಅವರು ಬಿಜೆಪಿ ಪಕ್ಷದ ಮುಖವಾಡವನ್ನು ಕಳಚಿ, ಅದರ ನಿಜ ಸ್ವರೂಪವನ್ನು ದೇಶಕ್ಕೆ ತೋರಿಸಿದ ನಿಜ ಮನುಜರು!
ಗಾಂಧಿನಗರದಲ್ಲಿ ಅಡ್ವಾನಿ, ಫಿಲಿಬಿಟ್ ನಲ್ಲಿ ವರುಣ್, ಮಂಗಳೂರಿನಲ್ಲಿ ಬಿಜೆಪಿ ಗೆದ್ದಿರಬಹುದು. ಆದರೆ ದೇಶದಲ್ಲಿ ಸೋಲುಣ್ಣಲು ಅವರ ಪಾತ್ರ ಕಡಿಮೆ ಏನಿಲ್ಲ.

1 comment:

chanakya said...

ಪತ್ರಿಕೆಯೋ ಅಥವಾ ಚಾನಲ್ಲೊ ಅಥವಾ ನಿಮ್ಮಂಥಹ ಯಾವದೋ ಒಂದು ಬ್ಲಾಗೋ ಎಲ್ಲರಿಗೂ ಅವರದೇ ಆದ ಒಂದು ಮುಖ ಅಂಥಾ ಇರುತ್ತದೆ. ನಿಮ್‌ ಮುಖಾನೇ ಕಾಣ್ತಿಲ್ಲ..ಯಾಕಂದ್ರೆ ನೀವು ಯಾವ ಸಮಯದಲ್ಲಿ ಯಾರ ಪರವಾಗಿ ಇರ್ತಿರೋ ಅಥವಾ ವಿರುದ್ಧವಾಗಿರ್ತಿರೋ ಹೇಳೋಕೆ ಆಗಲ್ಲ.ಒಟ್ಟಾರೆ ನೀವು ಬಿಜೆಪಿ ವಿರೋಧಿಗಳು ಅನ್ನೋದಂತೂ ಸ್ಪಷ್ಟ..ಯಾಕಂದ್ರೆ ತತ್ವ ಸಿದ್ದಾಂತ..ಪಕ್ಷಗಳಿಗಷ್ಟೇ ಅಲ್ಲ ಮಾದ್ಯಮಕ್ಕೂ ಇರಬೇಕು ಅಂತ ವಾದ ಮಾಡೋನು ನಾನು..ನಿಮಗಂತೂ ಯಾವದೂ ಇಲ್ಲ ಬಿಡಿ..ನೀವು ಲೆಫ್ಟೂ ಅಲ್ಲ ಇತ್ತ ರೈಟೂ ಅಲ್ಲ..ಎಡಬಿಡಂಗಿ ಆದ್ರೆ ಭಾರೀ ಕಷ್ಟ ಸ್ವಾಮಿ..